ಹೋರಾಟದ ಹಾದಿ : ಇದು ಪ್ರಾಮಾಣಿಕ ಬದುಕಿನ ಅನಾವರಣ
– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ಎಚ್.ನರಸಿಂಹಯ್ಯನವರದು ನಾನು ಅತ್ಯಂತ ಗಾಢವಾಗಿ ಪ್ರೀತಿಸುವ ವ್ಯಕ್ತಿತ್ವ. ನನ್ನ ಕೆಲವು ಲೇಖನಗಳಲ್ಲಿ ಅವರ ವ್ಯಕ್ತಿತ್ವದ ಒಂದಿಷ್ಟು ಮುಖಗಳನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದೇನೆ. ಬದುಕೆಂದರೆ ಅದು ಹೇಗಿರಬೇಕೆಂದು ಪ್ರಭಾವ ಬೀರುವಷ್ಟರ ಮಟ್ಟಿಗೆ ಎಚ್.ನರಸಿಂಹಯ್ಯನವರು ತಮ್ಮ ಬದುಕನ್ನು ಬದುಕಿದವರು. ಇಂಥ ನರಸಿಂಹಯ್ಯನವರ ಬದುಕನ್ನು ಇಡೀಯಾಗಿ ಓದಬೇಕೆನ್ನುವ ನನ್ನ ಹಲವು ವರ್ಷಗಳ ಮನೋಭಿಲಾಷೆ ಇತ್ತೀಚಿಗೆ ತಾನೆ ಈಡೇರಿತು. ಅವರ ಆತ್ಮಕಥೆ `ಹೋರಾಟದ ಹಾದಿ’ ಪುಸ್ತಕವನ್ನು ಹುಡುಕಿ ಸೋತಿದ್ದೆ. ಅವರ ಕುರಿತು ಒಂದೆರಡು ಸಾಲು ಪುಸ್ತಕದಲ್ಲೊ ಅಥವಾ ಪತ್ರಿಕೆಯಲ್ಲೊ ಕಾಣಿಸಿದರೆ ಎಚ್ಚೆನ್‍ರ ಸಮಗ್ರ ಬದುಕನ್ನು ಓದಬೇಕೆಂದು ಮನಸ್ಸು ಕಾತರಿಸುತ್ತಿತ್ತು. ಕೊನೆಗೊಂದು ದಿನ ನನ್ನ ಮನಸ್ಸಿನ ಕಾತರತೆಯನ್ನು ಅರ್ಥ ಮಾಡಿಕೊಂಡವರಂತೆ ಹಿತೈಷಿಯೂ ಮತ್ತು ಮಿತ್ರರೂ ಆದ ಶ್ರೀ ಪಿ.ಎನ್.ಸಿಂಪಿ ಅವರು ಓದಲು ಪುಸ್ತಕವೊಂದನ್ನು ಕೈಗಿತ್ತರು. ಬಿಳಿಯ ರಕ್ಷಾ ಕವಚವನ್ನು ಧರಿಸಿದ್ದ ಆ ಪುಸ್ತಕದ ಹೆಸರು ಏನಿರಬಹುದೆಂದು ಶೀರ್ಷಿಕೆ ಪುಟದ ಮೇಲೆ ಕಣ್ಣು ಹಾಯಿಸಿದೆ. ನಿಜ ಹೇಳುತ್ತಿದ್ದೇನೆ ಒಂದು ಕ್ಷಣ ಮೈಯಲ್ಲಿ ವಿದ್ಯುತ್ ಸಂಚಾರವಾದ ಅನುಭವ. ಪುಸ್ತಕವನ್ನು ಕೈಯಲ್ಲಿ ಹಿಡಿದ ಆ ಸಮಯ ಕೋಟಿ ರೂಪಾಯಿ ಕೊಟ್ಟರೂ ಆಗದ ಸಂತಸ. ಯಾವ ಪುಸ್ತಕವನ್ನು ಓದಬೇಕೆಂದು ಹಲವು ವರ್ಷಗಳಿಂದ ಕಾತರಿಸುತ್ತಿದ್ದೇನೊ ಅದು ಅನಿರೀಕ್ಷಿತವಾಗಿ ಮತ್ತು ಅನಾಯಾಸವಾಗಿ ನನ್ನ ಕೈ ಸೇರಿತ್ತು. ರೂಢಿಯಂತೆ ರಾತ್ರಿಯ ನಿಶ್ಯಬ್ಧ ಮೌನದಲ್ಲಿ ಪುಸ್ತಕವನ್ನು ಓದಿದ್ದಾಯಿತು.
ಪುಸ್ತಕವೇನೊ ಓದಿಯಾಯಿತು. ಆದರೆ ಮೊದಲಿಗಿಂತಲೂ ಒಂದಿಷ್ಟು ಹೆಚ್ಚೆ ಎನ್ನುವಷ್ಟು ಎಚ್.ನರಸಿಂಹಯ್ಯನವರು ಗಾಢವಾಗಿ ಕಾಡಲಾರಂಭಿಸಿದರು. ಮನಸ್ಸು ಅವರ ಬದುಕಿನ ಸುತ್ತಲೇ ಗಿರಿಕಿ ಹೊಡೆಯ ತೊಡಗಿತು. ಕುಳಿತಲ್ಲಿ, ನಿಂತಲ್ಲಿ ಅವರ ಬದುಕಿನ ಚಿತ್ರಗಳೇ ಕಣ್ಮುಂದೆ ಸುಳಿಯ ತೊಡಗಿದವು. ವ್ಯಕ್ತಿಯೊಬ್ಬ ಹೇಗೆಲ್ಲ ಬದುಕಬೇಕೆನ್ನುವುದಕ್ಕೆ ಎಚ್ಚೆನ್ ಹೊಸ ವ್ಯಾಖ್ಯಾನ ಬರೆದಿದ್ದರು. ಅವರ ಬದುಕಿನ ಗಾಢ ಪ್ರಭಾವಳಿಯನ್ನು ಕೆಲವು ಜನರೊಂದಿಗಾದರೂ ಹಂಚಿಕೊಳ್ಳಬೇಕೆನ್ನುವುದು ಪುಸ್ತಕವನ್ನು ಓದಿದ ನಂತರದ ನನ್ನ ಮನಸ್ಥಿತಿಗೆ ಅನಿವಾರ್ಯವಾಗಿತ್ತು. ಅವರ ಬದುಕಿನ ಸರಳತೆ, ಪ್ರಾಮಾಣಿಕತೆ, ಬದ್ಧತೆ ಎಲ್ಲವನ್ನೂ ಅನಾವರಣಗೊಳಿಸಿದ `ಹೋರಾಟದ ಹಾದಿ’ ಕೃತಿಯನ್ನು ಲೇಖನವನ್ನಾಗಿಸಿ ತೆಗೆದುಕೊಂಡು ಬಂದಿದ್ದೇನೆ. ಓದಿ ನೋಡಿ ನಿಮಗೂ ಮೆಚ್ಚುಗೆಯಾಗಬಹುದು.
ಹೋರಾಟದ ಹಾದಿ: ಆತ್ಮ ಕಥೆ