ಜಗತ್ತಿನ ಪ್ರಶ್ನೆಗಳಿಗೆ ನಿರುತ್ತರ ಕೊರಿಯ
– ರೋಹಿತ್ ಚಕ್ರತೀರ್ಥ
ಫೆಬ್ರವರಿ 12, 2013. ಮಂಗಳವಾರ. ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಒಬಾಮ ಟಿವಿಗಳಲ್ಲಿ ಕಾಣಿಸಿಕೊಂಡು, “ಈ ಪ್ರಯತ್ನ ಕೂಡಲೇ ನಿಲ್ಲಬೇಕು. ಇಲ್ಲವಾದರೆ ತಕ್ಕ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ” ಅಂತ ಘೋಷಿಸಿದ್ದೇ ತಡ, ಒಂದರ ಹಿಂದೊಂದರಂತೆ ಘೋಷಣೆ, ಬೆದರಿಕೆಗಳ ಸುರಿಮಳೆ. ಜಪಾನ್, ದಕ್ಷಿಣ ಕೊರಿಯ, ರಷ್ಯ, ಇಂಗ್ಲೆಂಡ್, ಫ್ರಾನ್ಸ್, ಸಿಂಗಪುರ, ಮಲೇಷಿಯಾದಂತಹ ಹತ್ತುಹಲವಾರು ದೇಶಗಳ ಅಧ್ಯಕ್ಷರುಗಳು ತಮ್ಮ ಹೇಳಿಕೆಗಳನ್ನು ತಾರಕಸ್ವರದಲ್ಲಿ ಕೂಗಿ ಹೇಳಲು ಕ್ಯೂ ನಿಂತುಬಿಟ್ಟರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾ ಕಿ ಮೂನ್ ಕೂಡ, “ನಿಮ್ಮ ಪ್ರಯೋಗಗಳನ್ನು ಕೂಡಲೇ ಸ್ಥಗಿತಗೊಳಿಸಿ. ಇಲ್ಲವಾದರೆ ಪ್ರತಿರೋಧ ಎದುರಿಸಿ” ಅಂತ ಘಂಟಾಘೋಷವಾಗಿ ಹೇಳಿದರು. ಹೆಗಲಿಗೆ ಕೈಹಾಕಿ ಕುಶಲ ಕೇಳುವ ಗೆಳೆಯ ಚೀನಾ ಕೂಡ (ಒಳಗೊಳಗೆ ಬೆಂಬಲಿಸಿದರೂ), ಈ ಪರೀಕ್ಷೆಗಳನ್ನೆಲ್ಲ ಕೈಬಿಟ್ಟು ಸುಮ್ಮನಿದ್ದರೆ ಏನು ನಷ್ಟ? ಅಂತ ಆಪ್ತಸಲಹೆ ಕೊಟ್ಟು ಕೈತೊಳೆದುಕೊಂಡಿತು.
ಇಷ್ಟೆಲ್ಲ ಅಧ್ವಾನಕ್ಕೆ ಕಾರಣವಾಗಿದ್ದು ಉತ್ತರ ಕೊರಿಯ ಎಂಬ ದೇಶ, ತಾನೇ ಹೇಳಿಕೊಂಡಂತೆ – ಬಹಳ ಸಣ್ಣಪ್ರಮಾಣದಲ್ಲಿ ನಡೆಸಿದ, ಮಾಪಕಗಳಲ್ಲಿ 4.9ರಷ್ಟು ದಾಖಲಾದ ನ್ಯೂಕ್ಲಿಯರ್ ಪರೀಕ್ಷೆ. 2006ರ ಪರೀಕ್ಷೆಯ ಹತ್ತುಪಟ್ಟು, 2009ರ ಪರೀಕ್ಷೆಯ ಎರಡು ಪಟ್ಟು ಶಕ್ತಿಶಾಲಿಯಾಗಿದ್ದ ಈ ಪರೀಕ್ಷೆಯಿಂದ ಉತ್ತರ ಕೊರಿಯ ಅಮೆರಿಕೆಗೆ ತನ್ನ ತಾಕತ್ತು ತೋರಿಸಲು ಹೊರಟಿತ್ತು. ಗಾಯದ ಮೇಲೆ ಗೀರೆಳೆದಂತೆ, ಪರೀಕ್ಷೆ ನಡೆಸಿದ ಮೇಲೆ, “ನಮ್ಮ ವ್ಯವಹಾರಗಳಲ್ಲಿ ಪದೇಪದೇ ಮೂಗು ತೂರಿಸುವ ಅಮೆರಿಕಕ್ಕೆ ನಾವು ಕೊಡುತ್ತಿರುವ ಎಚ್ಚರಿಕೆ ಇದು. ಅದರ ಹಸ್ತಕ್ಷೇಪ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರೀಕ್ಷೆಗಳನ್ನು ನಡೆಸುತ್ತ ಹೋಗುತ್ತೇವೆ” ಅಂತ ಹೇಳಿಕೆ ಕೂಡ ಬಿಡುಗಡೆ ಮಾಡಿತು. ಅಚ್ಚರಿಯ ಮಾತೆಂದರೆ “ಜಗತ್ತಿನ ಸೂಪರ್ ಪವರ್ ನಾಯಕನಾಗಿ ಹೊರಹೊಮ್ಮುತ್ತಿರುವ ನಮ್ಮ ದೇಶದ ಯುದ್ಧ ಸಿದ್ಧತೆಗೆ ಹೆದರಿ ಬಾಲಮುದುರಿ ಕುಂಯ್‍ಗುಡುತ್ತಿರುವ ಅಮೆರಿಕ” ಅಂತ ರಾಷ್ಟ್ರೀಯ ಚಾನೆಲ್‍ನಲ್ಲಿ ಬಂದ ಸುದ್ದಿಯನ್ನು ನೋಡಿ ಪ್ಯೊಂಗ್‍ಯಾಂಗಿನ ಬೀದಿಗಳಲ್ಲಿ ಜನ ಸಂಭ್ರಮಿಸಿ ಕುಣಿದರು! ದೇಶಪ್ರೇಮ ಎನ್ನುತ್ತೀರೋ, ಹಿಸ್ಟೀರಿಯ ಎನ್ನುತ್ತೀರೋ!
ಈ ಎಲ್ಲ ರಾಜಕೀಯ ಪ್ರೇರಿತ ರಾದ್ಧಾಂತ, ಗೊಂದಲಗಳನ್ನು ಬದಿಗಿಟ್ಟು ಈ ಕತೆಯ ಸುತ್ತ ಹಬ್ಬಿಬೆಳೆದ ಹುತ್ತವನ್ನು ತಡವುತ್ತ ಹೋದರೆ, ಕೊನೆಗೆ ನಮಗೆ ಹಾವು ಗೋಚರಿಸಬಹುದೋ ಏನೋ! ಹಾಗಾಗಿ, ಉತ್ತರ ಕೊರಿಯದ ಸುತ್ತ ಸುಮ್ಮನೆ ನಿಷ್ಪಕ್ಷಪಾತವಾಗಿ ಒಂದು ಸುತ್ತು ಹಾಕ್ಕೊಂಡು ಬರೋಣ, ಬನ್ನಿ. ಮತ್ತಷ್ಟು ಓದು