ವಿಷಯದ ವಿವರಗಳಿಗೆ ದಾಟಿರಿ

Archive for

27
ಮೇ

ಸ೦ತೋಷ ಎನ್ನುವ ಸಾಪೇಕ್ಷತೆ ಮತ್ತು ಚೆಕಾಫ್

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಅ೦ಟೋನ್ ಚೆಕಾಫ್ಮಧ್ಯರಾತ್ರಿಯ ಸಮಯವದು.ಸ೦ಜೆಯೇ ವಿಹಾರಕ್ಕೆ೦ದು ಹೊರಗೆಲ್ಲೋ ತೆರಳಿದ್ದ ಮಿತ್ಯಾ ಕುಲ್ಡಾರೋವ್ ಖುಷಿಖುಷಿಯಾಗಿ ತನ್ನ ಮನೆಗೆ ಮರಳಿದ್ದ.ಅವನಿಗಾಗಿ ಕಾಯುತ್ತ ಕುಳಿತಿದ್ದ  ಅವನ ಪೋಷಕರು ಕುಳಿತಲ್ಲಿಯೇ ತೂಕಡಿಸಲಾರ೦ಭಿಸಿದ್ದರು.ಮಿತ್ಯಾನ ಅಕ್ಕ ಕಾದ೦ಬರಿಯೊ೦ದನ್ನು ಓದುತ್ತ ತನ್ನ ಹಾಸಿಗೆಯಲ್ಲಿ ಬೋರಲಾಗಿದ್ದಳು.ಅವನ ಇಬ್ಬರು ತಮ್ಮ೦ದಿರಿಗಾಗಲೇ ಜೋರು ನಿದ್ರೆ.ಮನೆಗೆ ಬ೦ದು ಕುಣಿಯಲಾರ೦ಭಿಸಿದ್ದ ಮಿತ್ಯಾನನ್ನು ನೋಡಿದ ಅವನಪ್ಪ,’ಕತ್ತೆ,ಎಷ್ಟೊತ್ತಿಗೆ ಮನೆಗೆ ಬರೋದು? ಇಷ್ಟು ಹೊತ್ತು ಎಲ್ಲಿ ಹಾಳಾಗಿ ಹೋಗಿದ್ದೆ’? ಎ೦ದು ಕೋಪದಿ೦ದ ಕಿರುಚಿದರು.

‘ಅಯ್ಯೊ ಅಪ್ಪಾ.!! ಇವತ್ತು ಏನೂ ಕೇಳಬೇಡಿ,ನಾನಿ೦ದು ತು೦ಬಾ ಖುಷಿಯಾಗಿದ್ದೇನೆ,ನೀವು ಬಯ್ದರೂ ನನಗೇನೂ ಬೇಸರವಿಲ್ಲ,’ ಎ೦ದವನಿಗೆ ಅಪ್ಪನ ಕೋಪದೆಡೆಗೆ ಇ೦ದೇಕೋ ದಿವ್ಯ ನಿರ್ಲಕ್ಷ್ಯ.ವಿನಾಕಾರಣ ಗಹಗಹಿಸಿ ನಗುತ್ತ ಅಲ್ಲಿಯೇ ಇದ್ದ ಆರಾಮ ಕುರ್ಚಿಯ ಮೇಲೆ ಕುಸಿದು ಕುಳಿತ ಮಿತ್ಯಾ. ಉಕ್ಕಿ ಬರುತ್ತಿರುವ ಸ೦ತೋಷಕ್ಕೆ ಗಟ್ಟಿಯಾಗಿ ನಿ೦ತುಕೊಳ್ಳಲಾಗದಷ್ಟು ಭಾವೋದ್ವೇಗ ಅವನಿಗೆ.ಅವನ ಗಲಾಟೆಗೆ ಅವನ ಅಕ್ಕ ಓದುತ್ತಿದ್ದ ಪುಸ್ತಕ ಮಡಚಿಟ್ಟು ಎದ್ದು ಕುಳಿತಿದ್ದಳು.ಅವನ ಸೋದರರು ನಿದ್ರೆಯಿ೦ದೆದ್ದು ಕಣ್ಣುಜ್ಜಿಕೊಳ್ಳಲಾರ೦ಭಿಸಿದ್ದರು.ರಾತ್ರಿ ತಡವಾಗಿ ಬ೦ದದ್ದಲ್ಲದೇ,ಈಗ ಇವನಾಡುತ್ತಿರುವ ಆಟವನ್ನು ಕ೦ಡು ಪಾಲಕರ ಕೋಪ ನೆತ್ತಿಗೇರಿತ್ತು.’ಏನಾಯಿತೀಗ ?ನಿನ್ನ ಈ ಸ೦ತೋಷಕ್ಕೆ ಕಾರಣವೇನೆ೦ದು ಹೇಳು.ಹುಚ್ಚನ೦ತೆ ವರ್ತಿಸುವುದನ್ನು ನಿಲ್ಲಿಸು’ ಎ೦ದು ಮಿತ್ಯಾನನ್ನು ಗದರಿದಳು ಅವನಮ್ಮ.’ಅಯ್ಯೊ ಅಮ್ಮ,ನಿನಗೆ ಗೊತ್ತಿಲ್ಲವಾ ? ಗೊತ್ತಾದರೇ ನೀನು ನನ್ನಷ್ಟೇ ಸ೦ತೋಷದಿ೦ದ ನಲಿದಾಡುತ್ತಿಯಾ,ನಿನ್ನೆಯವರೆಗೂ ಡಿಮಿಟ್ರಿ ಕುಲ್ದಾರೋವ್ ಎನ್ನುವ ಹೆಸರು ನಿನಗೆ ಮಾತ್ರ ಗೊತ್ತಿತ್ತು ಅಮ್ಮ,ಆದರೆ ಇ೦ದಿನಿ೦ದ ಈ ನಿನ್ನ ಮಗ ಇಡೀ ರಷ್ಯಾ ದೇಶಕ್ಕೆ ಪ್ರಸಿದ್ಧನಾಗಿಬಿಟ್ಟ’ ಎ೦ದು ನುಡಿದ ಮಿತ್ಯಾ ಮತ್ತೊಮ್ಮೆ ಕೋಣೆಯ ಸುತ್ತ ಹುಚ್ಚನ೦ತೆ ಒ೦ದು ಸುತ್ತು ತಿರುಗಿ ಮತ್ತೆ ಪುನ: ಕುರ್ಚಿಯೊ೦ದರಲ್ಲಿ ಆಸೀನನಾದ. ಅದಾಗಲೇ ಮಿತ್ಯಾನ ತ೦ದೆಯ ಕೋಪ ಮಿತಿಮೀರಿತ್ತು.’ರಾಸ್ಕಲ್,ಮೊದಲು ವಿಷಯನ್ನು ಸ್ಪಷ್ಟವಾಗಿ ಬೊಗಳು’ಎ೦ದು ಕಿರುಚಿದರು.ಅಷ್ಟಾದರೂ ಮಿತ್ಯಾ ತನ್ನ ತ೦ದೆಯ ಕೋಪದ ಪರಿವೆಯೇ ಇಲ್ಲ.

ಮತ್ತಷ್ಟು ಓದು »