ವೈಜ್ಞಾನಿಕ ಮನೋಧರ್ಮ ಎಂದರೇನು?
– ರೋಹಿತ್ ಚಕ್ರತೀರ್ಥ
ನಮ್ಮ ಜಗತ್ತು ಎಷ್ಟು ವೈಜ್ಞಾನಿಕವಾಗಿ ಮುಂದೆ ಹೋಗುತ್ತಿದೆಯೋ ನಾವಷ್ಟೇ ಕಂದಾಚಾರಿಗಳಾಗಿ ಹಿಂದುಳಿಯಲು ಬಯಸುತ್ತಿದ್ದೇವೆ. ಕಂದಾಚಾರ ಎನ್ನುವ ಪದವನ್ನು ಕೇವಲ ಅರ್ಥಹೀನ ಆಚರಣೆ ಎಂಬುದಕ್ಕಷ್ಟೇ ಸೀಮಿತಗೊಳಿಸದೆ, ಮೌಢ್ಯ (ಅಜ್ಞಾನ), ಮೂಢನಂಬಿಕೆಗಳ ಮೇಲೆ ಅಚಲ ವಿಶ್ವಾಸ ಮತ್ತು ಕುರುಡುಭಕ್ತಿ, ತನ್ನದಲ್ಲದ ಯಾವ ಚಿಂತನೆಯನ್ನೂ ಒಪ್ಪದೆ ನಿರಾಕರಿಸುವುದು, ಹಾಗೆ ನಿರಾಕರಿಸಲು ವಿತಂಡವಾದ ಒಡ್ಡುತ್ತ ತನ್ನ ಮೂಗಿನ ನೇರಕ್ಕೆ ಕಾರಣಗಳನ್ನು ಕೊಡುವುದು, ವಿಜ್ಞಾನದ ಆಳಜ್ಞಾನ ಇಲ್ಲದಿರುವುದು, ವಿಜ್ಞಾನ ಗೊತ್ತಿದ್ದರೂ ಅರ್ಧಸತ್ಯಗಳನ್ನಷ್ಟೇ ಹೇಳುವುದು, ಒಂದೇ ವಿಷಯದ ಬಗ್ಗೆ ಎರಡುಮೂರು ಸಿದ್ಧಾಂತಗಳಿದ್ದಾಗ, ಅವುಗಳಲ್ಲಿ ಒಂದು ಮಾತ್ರ ನಿಜ ಎಂದು ಯಾವ ಪರೀಕ್ಷೆಗಳಿಲ್ಲದೆ ನಂಬುವುದು – ಇವೆಲ್ಲವೂ ಇರುವ ಒಂದು ಸಂಕೀರ್ಣ ಮನಸ್ಥಿತಿಗೆ ಸಮೀಕರಿಸಲು ಬಳಸಬಹುದಾದ ವಿಶಾಲಾರ್ಥದ ಪದವಾಗಿ ತೆಗೆದುಕೊಂಡಿದ್ದೇನೆ.
ಮೊದಲಿಗೆ “ವೈಜ್ಞಾನಿಕ” ಎಂದರೆ ಏನೆಂದು ನೋಡೋಣ. ವಿಜ್ಞಾನದ ತಳಹದಿ ಇರುವಂಥಾದ್ದು ವೈಜ್ಞಾನಿಕ. ವ್ಯಕ್ತಿಗೆ ಅಥವಾ ಸಮಾಜಕ್ಕೆ ಕೇವಲ ವೈಜ್ಞಾನಿಕ ದೃಷ್ಟಿಯೊಂದೇ ಇರಬೇಕು ಎನ್ನುವ ಯಾವ ನಿಬಂಧನೆಯೂ ಇಲ್ಲ. ವೈಜ್ಞಾನಿಕವಲ್ಲದ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತ ಮತ್ತು ಜೀವನದಲ್ಲಿ ಇರಬಹುದು. ಉದಾಹರಣೆಗೆ ಸಾಹಿತ್ಯ. ಒಂದು ಒಳ್ಳೆಯ ಸಾಹಿತ್ಯ (ಇದು ದ್ವಿರುಕ್ತಿ. “ಸಾಹಿತ್ಯ” ಅಂದರೇನೇ “ಹಿತವನ್ನುಂಟುಮಾಡುವಂಥದ್ದು”!) ನಮ್ಮ ಮನಸ್ಸಿಗೆ ನೆಮ್ಮದಿ ಕೊಡುತ್ತದೆ; ಕೆಟ್ಟಸಾಹಿತ್ಯ ವ್ಯಕ್ತಿತ್ವದ ಮೇಲೆ ಋಣಾತ್ಮಕ ಪರಿಣಾಮ ಮಾಡುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿ ಪ್ರಯೋಗಗಳ ಮೂಲಕ ಸಾಧಿಸಬಹುದೇನೋ. ಆದರೆ, ಅದೆಲ್ಲವನ್ನು ಆಳವಾಗಿ ಅಭ್ಯಾಸ ಮಾಡಿ ಯಾರೂ ಸಾಹಿತ್ಯ ಬರೆಯುವುದಿಲ್ಲ. ಲೇಖಕ ಮತ್ತು ಓದುಗ – ವಿಜ್ಞಾನದ ಯಾವ ತಲೆಬಿಸಿ ಇಲ್ಲದೆ ಬರೆಯುವ ಮತ್ತು ಓದುವ ಕ್ರಿಯೆಯನ್ನು ಮಾಡಬಹುದು. ಹಾಗಾಗಿ, ಸಾಹಿತ್ಯ ವೈಜ್ಞಾನಿಕತೆಯ ಛತ್ರಿಯಡಿ ಬರಬೇಕಾಗಿಲ್ಲ. ಇನ್ನು, ನಂಬಿಕೆಗಳು – ಇವೂ ಅಷ್ಟೆ, ವೈಜ್ಞಾನಿಕವಾಗಿರಬೇಕಾಗಿಲ್ಲ. ಉದಾಹರಣೆಗೆ ದೀಪಾವಳಿಗೆ ಪಟಾಕಿ ಹೊಡೆಯುತ್ತೇವೆ; ಯುಗಾದಿಗೆ ಬೇವುಬೆಲ್ಲ ತಿನ್ನುತ್ತೇವೆ; ರಂಜಾನ್ ತಿಂಗಳು ಉಪವಾಸವಿರುತ್ತೇವೆ, ಕ್ರಿಸ್‍ಮಸ್‍ಗೆ ಸಾಂತಾಕ್ಲಾಸ್‍ನ ಆಟ ಆಡುತ್ತೇವೆ. ಇವೆಲ್ಲ ಮನುಷ್ಯ ತನ್ನನ್ನು ಖುಷಿಯಾಗಿಟ್ಟುಕೊಳ್ಳಲು ಅಥವಾ ಹಬ್ಬಕ್ಕೆ ವಿಶೇಷತೆಯ ಮೆರುಗು ಕೊಡಲು ಅಳವಡಿಸಿಕೊಂಡಿರಬಹುದಾದ ಆಚರಣೆಗಳು. ಇವನ್ನು ವೈಜ್ಞಾನಿಕತೆಯ ನೆಲೆಯಲ್ಲಿ ನೋಡಬೇಕಾಗಿಲ್ಲ. ದೇವರು – ಎಂಬ ಕಲ್ಪನೆ – ಇದೂ ಅಷ್ಟೆ. ಮನುಷ್ಯನಿಗೆ ಹಲವು ಸಹಸ್ರವರ್ಷಗಳಿಂದ ಸದಾ ಕಾಡುವ ಸಂಗತಿಯಾಗಿ ನಿಂತಿರುವ “ದೇವರು” ಎಂಬ ಪರಿಕಲ್ಪನೆಯನ್ನು ಕೂಡ ವಿಜ್ಞಾನದಡಿ ತರಬೇಕಾಗಿಲ್ಲ. ದೇವರು ಇದ್ದಾನೆ ಅಥವಾ ಇಲ್ಲ ಎನ್ನುವುದನ್ನು ಪ್ರೂವ್ ಮಾಡುವುದು ವಿಜ್ಞಾನದ ಗುರಿ ಅಲ್ಲ. ಒಂದು ಸಂಗತಿ ವಿಜ್ಞಾನದ ಪರಿಧಿಗೆ ಬರುವುದಿಲ್ಲ; ವೈಜ್ಞಾನಿಕ ಅಲ್ಲ ಎನ್ನುವುದರಿಂದಲೇ ಅದರ ಮೌಲ್ಯನಿರ್ಣಯ ಆಗಿಹೋಗುವುದಿಲ್ಲ. ತುಂಬ ಸರಳವಾಗಿ ಹೇಳಬೇಕೆಂದರೆ ವೈಜ್ಞಾನಿಕ ಅಲ್ಲದ್ದು ಅವೈಜ್ಞಾನಿಕ ಸರಿ. ಆದರೆ ನಾವಿಂದು ಕೊಟ್ಟಿರುವ ಮೂಢ, ಬುದ್ಧಿಯಿಲ್ಲದ ಎಂಬರ್ಥದಲ್ಲಿ ಅಲ್ಲ. ಮ್ಯಾರಥಾನ್ ಓಡುವ ಹಿಂದಿನ ದಿನ ಏನೇನು ಆಹಾರ ತೆಗೆದುಕೊಳ್ಳಬೇಕೆಂಬ ವಿಷಯದಲ್ಲಿ ವೈಜ್ಞಾನಿಕನಾದ ನಾನು, ಹಬ್ಬಕ್ಕೆ ಒಬ್ಬಟ್ಟು ತಿನ್ನುವ ವಿಚಾರ ಬಂದಾಗ ವಿಜ್ಞಾನದ ಬಗ್ಗೆ ತಲೆಕೆಡಿಸಿಕೊಳ್ಳದ ಅವೈಜ್ಞಾನಿಕನಾಗುತ್ತೇನೆ. ಮತ್ತಷ್ಟು ಓದು