ನಾಡು-ನುಡಿ : ಮರುಚಿಂತನೆ – ಮೂಲಭೂತವಾದದ ಒಂದು ಸೆಕ್ಯುಲರ್ ಅವತಾರ
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಪ್ರಗತಿಪರರು ಕ್ರೈಸ್ತ ಹಾಗೂ ಮುಸ್ಲಿಂ ಸಮಾಜಗಳನ್ನು ಟೀಕಿಸುವ ಕ್ರಮಕ್ಕೂ ಹಿಂದೂ ಸಮಾಜವನ್ನು ಟೀಕಿಸುವ ಕ್ರಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಆ ಸಮಾಜಗಳಲ್ಲಿ ಯಾವುದಾದರೂ ತಪ್ಪು ಆಚರಣೆಯ ಕುರಿತು ಚರ್ಚೆ ಎದ್ದರೆ ಅವನ್ನು ಅವರ ಪವಿತ್ರಗ್ರಂಥಗಳು ಸಮರ್ಥಿಸಲು ಸಾಧ್ಯವೇ ಇಲ್ಲ ಎಂಬುದು ಇವರ ಧೃಡ ನಂಬಿಕೆ. ಅವು ಏನಿದ್ದರೂ ಇಂದಿನ ಅನುಯಾಯಿಗಳ ಅಜ್ಞಾನಕ್ಕೆ ಸಂಬಂಧಿಸಿದ್ದು ಅಷ್ಟೆ. ಉದಾಹರಣೆಗೆ, ಇಂದು ಭಯೋತ್ಪಾದನೆಯ ಕುರಿತು ನಡೆಯುವ ಚರ್ಚೆಗಳನ್ನು ಗಮನಿಸಿ. ಪ್ರತಿಯೊಬ್ಬರೂ ಕೂಡ ಅವು ಇಸ್ಲಾಂನ ಪವಿತ್ರಗ್ರಂಥಗಳಿಗೆ ವಿರುದ್ಧವಾಗಿವೆ ಎಂಬ ತರ್ಕವನ್ನಿಟ್ಟೇ ಅವುಗಳನ್ನು ಖಂಡಿಸುತ್ತಾರೆ. ಅಂದರೆ ಅವರ ಕೃತ್ಯಗಳನ್ನು ಇಸ್ಲಾಂನ ನಿರ್ದೇಶನಗಳಲ್ಲ ಎಂಬುದಾಗಿ ನೋಡುವುದು ಅತ್ಯಂತ ನಿರ್ಣಾಯಕವಾಗಿದೆ. ಜಿಹಾದಿಗೆ ಸಂಬಂಧಿಸಿದಂತೆ, ಬುರ್ಖಾಕ್ಕೆ ಸಂಬಂಧಿಸಿದಂತೆ, ತಲಾಖ್‍ಗೆ ಸಂಬಂಧಿಸಿದಂತೆ, ಹೀಗೆ ಇದುವರೆಗೆ ಎಷ್ಟು ಚರ್ಚೆಗಳು ಎದ್ದಿವೆಯೋ ಅವುಗಳಲ್ಲೆಲ್ಲ ಎಲ್ಲೂ ಕೂಡ ಪವಿತ್ರ ಗ್ರಂಥದ ನಿಂದನೆ ಆಗದಂತೇ ಎಚ್ಚರವಹಿಸಿ ವಾದಗಳನ್ನು ಬೆಳೆಸಲಾಗುತ್ತದೆ. ಅಂದರೆ ಇಸ್ಲಾಂ ರಿಲಿಜನ್ನು ಮೂಲತಃ ಒಳ್ಳೆಯದು, ಇಂದಿನ ದುಷ್ಪರಿಣಾಮಕ್ಕೆ ಅದು ಹೊಣೆಯಲ್ಲ ಎಂಬುದು ಇವರ ವಾದ.
ಇದರಲ್ಲೇನು ಸ್ವಾರಸ್ಯ? ಎಂದು ನೀವು ಹುಬ್ಬೇರಿಸಬಹುದು. ಪ್ರತಿಯೊಂದು ಮತಾನುಯಾಯಿಗಳಿಗೂ ತಮ್ಮ ಮತದ ಕುರಿತು ನಂಬಿಕೆ ಇರುವುದು ಸ್ವಾಭಾವಿಕ. ಆದರೆ ನಾನು ಹೇಳುತ್ತಿರುವುದು ಶ್ರದ್ಧಾವಂತ ಮುಸ್ಲಿಮರ ಕಥೆಯಲ್ಲ, ಬದಲಾಗಿ ತಾವು ಪ್ರಗತಿಪರರೆಂದು, ಸೆಕ್ಯುಲರ್‍ವಾದಿಗಳು ಅಥವಾ ಬುದ್ಧಿಜೀವಿಗಳೆಂದು ಕರೆದುಕೊಂಡ ಮುಸ್ಲಿಮರ ಕಥೆ. ಇದು ಮುಸ್ಲಿಂ ಬುದ್ಧಿಜೀವಿಗಳದೊಂದೇ ಕಥೆಯಲ್ಲ, ಸೆಕ್ಯುಲರ್ ಎಂದು ಕರೆದುಕೊಂಡ ಹಿಂದೂ ಬುದ್ಧಿಜೀವಿಗಳ ಕಥೆ ಕೂಡಾ ಹೌದು. ಅಂದರೆ ಯಾವ ರಿಲಿಜನ್ನುಗಳಿಗೂ ಸೇರದೇ ತಟಸ್ಥವಾಗಿ ಚಿಂತನೆ ನಡೆಸಬೇಕೆಂದು ಪ್ರತಿಪಾದಿಸುವವರು. ಇದುವರೆಗೆ ಮುಸ್ಲಿಮರ ಪವಿತ್ರಗ್ರಂಥವೇ ಸರಿಯಿಲ್ಲ ಎಂದು ಯಾವ ಮುಸ್ಲಿಂ ಅಥವಾ ಹಿಂದೂ ಸೆಕ್ಯುಲರ್ ಬುದ್ಧಿಜೀವಿ ಕೂಡ ಹೇಳಿದ್ದು ನಾನು ಕೇಳಿಲ್ಲ. ಹಾಗಂತ ಅವರು ಹಾಗೆ ಹೇಳಬೇಕಿತ್ತು ಅಂತಾಗಲೀ, ಯಾರದಾದರೂ ಪವಿತ್ರಗ್ರಂಥವನ್ನು ನಿಂದಿಸುವುದು ಸರಿಯೆಂದಾಗಲೀ ನಾನಿಲ್ಲಿ ಸೂಚಿಸುತ್ತಿಲ್ಲ ಎಂಬುದನ್ನು ಸ್ಪಷ್ಟೀಕರಿಸುತ್ತೇನೆ. ನಾನು ನಿಮ್ಮ ಗಮನ ಸೆಳೆಯಲೆತ್ನಿಸುವುದು ನಮ್ಮ ಬುದ್ಧಿಜೀವಿಗಳ ಈ ಧೋರಣೆಯ ಕುರಿತು. ಅವರು ಅಪ್ರಾಮಾಣಿಕರು ಅಂತ ನನ್ನ ಹೇಳಿಕೆಯಲ್ಲ. ಅವರಿಗೆ ನಿಜವಾಗಿಯೂ ಹಾಗೇ ಅನಿಸುತ್ತದೆ ಅಂತಲೇ ಇಟ್ಟುಕೊಳ್ಳೋಣ.
ಮತ್ತಷ್ಟು ಓದು