ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 20, 2015

1

ವಿಚಾರವ್ಯಾದಿ ಅಳಿದು ವಿಚಾರವಾದ ಬೆಳೆಯಲಿ

‍ನಿಲುಮೆ ಮೂಲಕ

– ಅಮೃತ್ ಜೋಶಿ

ಮಂಡೆ ಮೊಸರುಸಂಶೋಧಕ ಡಾ. ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಯ ದುರದುಷ್ಟಕರ ಪ್ರಕರಣ ಹಾಗೂ “ಭಗವಾನ ಉವಾಚ”ದಿಂದಾಗಿ ಇಡೀ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಿಚಾರವಾದ ಅಥವಾ ಪ್ರಗತಿಪರ ಚಿಂತನೆ- ಈ ಶಬ್ದಗಳ ಅರ್ಥ ಮತ್ತು ವ್ಯಾಪ್ತಿಯ ಬಗ್ಗೆ ಬಿಸಿಬಿಸಿಯಾದ ಮತ್ತೆ ಹಲವಡೆ ಹಸಿಹಸಿಯಾದ ಚರ್ಚೆ ನಡೆಯುತ್ತಿದೆ.

ಬಹಳಷ್ಟು ಚರ್ಚೆಗಳಲ್ಲಿ ಅಥವಾ ವಾದಗಳಲ್ಲಿ ಬೈಗಳ ಅಥವಾ ವಿತಂಡವಾದಗಳ ಮೂಲಕವೇ ತಮ್ಮ ಶ್ರೇಷ್ಟತೆಯನ್ನು ಸಾರಿ ಹೇಳಿಕೊಳ್ಳಬೇಕಾದ ಪರಿಸ್ಥಿತಿಯನ್ನು ನೋಡಿದರೆ ಅದು ಅವುಗಳ ಟೊಳ್ಳುತನವನ್ನು ಎತ್ತಿತೋರುತ್ತದೆ. ವಿಚಾರವಾದ ಅಥವಾ ಪ್ರಗತಿಪರ ಚಿಂತನೆ ತಮ್ಮಿಂದನೇ ಹುಟ್ಟಿಕೊಂಡಿದ್ದು, ಅದು ತಮ್ಮ ಸೈದಾಂತಿಕ ಗುತ್ತಿಗೆ ಎಂದೇ ಅನೇಕ ತಥಾಕಥಿತ ವಿಚಾರವಾದಿಗಳು ಭಾವಿಸಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ. ವ್ಯವಸ್ಥೆಯನ್ನು ದಿಕ್ಕರಿಸಿ, ಅದರ ವಿರುದ್ಧ ಬಂಡಾಯ ಸಾರುವವನೇ ವಿಚಾರವಾದಿ. ಅವನೇ ಸಮಾಜ ಸುಧಾರಕ, ಅವನೇ ಪ್ರಗತಿಪರ ಚಿಂತಕ ಎಂದು ಈವರೆಗೆ ನಮ್ಮೆಲ್ಲರಿಗೆ ನಮ್ಮ ಶಿಕ್ಷಣ ಪದ್ಧತಿ ಹೇಳಿಕೊಟ್ಟಿರುವ ಗಿಳಿಪಾಠವಾಗಿದೆ.

ಹಾಗಾದರೆ ತನ್ನ ಮನೆ ಸ್ವಚ್ಛವಾಗಿಲ್ಲ ಎಂದು ಮನೆಯಿಂದ ಹೊರಗೆ ನಿಂತು ತನ್ನ ಮನೆಯ ವ್ಯವಸ್ಥೆಯ ಬಗ್ಗೆ ದೋಷಿಸುತ್ತ, ಅವಹೇಳನ ಮಾಡುತ್ತ ಕಾಲ ಕಳೆಯುವವನು ಶ್ರೇಷ್ಟನೋ ಅಥವಾ ಅದೇ ವ್ಯವಸ್ಥೆಯಲ್ಲಿದ್ದು ಆ ಮನೆಯ ಸ್ವಚ್ಛತೆಯ ಬಗ್ಗೆ ಸದಾ ಕಾರ್ಯಮಗ್ನರಾಗಿರುವ ಮನೆಯ ಸದಸ್ಯ ಶ್ರೇಷ್ಟನೋ? ಈ ಹಿನ್ನೆಲೆಯಲ್ಲಿ ವಿಚಾರವಾದಿ, ಪ್ರಗತಿಪರ ಚಿಂತಕ, ಸಮಾಜ ಸುಧಾರಕರನ್ನು ಗುರುತಿಸುವುದೇ ನಿಜವಾದ ಮಾನದಂಡವಾಗಿದೆ.

ಭಾರತದ ಮಟ್ಟಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಿ ಪ್ರಗತಿಪರ ಚಿಂತನೆಯಾಗಲಿ ಹೊಸ ವಿಷಯವೇನಲ್ಲ. ಚಾರ್ವಾಕನನ್ನು ಕೂಡ ಋಷಿ ಸ್ಥಾನಕ್ಕೇರಿಸಿದ ಶ್ರೇಷ್ಟ ಸಂಸ್ಕಾರ ನಮ್ಮದಾಗಿದೆ. ಯುಗಾನುಕೂಲ ಜೀವನ ಪದ್ಧತಿ ನಡೆಸಿದವರು ಭಾರತೀಯರು. ಯಾವುದೇ ರೀತಿ ರಿವಾಜುಗಳು ಕಾಲಬಾಹೀರ ಎಂದು ಅನಿಸಿದಾಗಲೆಲ್ಲಾ ಅವುಗಳನ್ನು ಹಾವಿನ ಪೊರೆಯಂತೆ ಬಿಚ್ಚೆಸೆದು ಹೊಸತನಕ್ಕೆ ತೆರೆದುಕೊಂಡ ಸಮಾಜ ನಮ್ಮದು. ಈ ಪ್ರಕ್ರಿಯೆಯಲ್ಲಿ ವಿಳಂಬವಾಗಿರಬಹುದು. ಆದರೆ ಬದಲಾವಣೆಯನ್ನೇ ದಿಕ್ಕರಿಸಿದವರಲ್ಲ. ಅದಕ್ಕಾಗಿಯೇ ಒಂದು ಸಂಸ್ಕೃತಿಯಾಗಿ, ನಾಗರೀಕತೆಯಾಗಿ ಇನ್ನು ಬದುಕಿದ್ದೇವೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಒಂದು ಶ್ರೇಷ್ಟವಾದ ಬೌದ್ಧಿಕ ಕಸರತ್ತಾಗಿದೆ. ಸುಧೀರ್ಘವಾದ, ಆಳವಾದ ಅಧ್ಯಯನದಿಂದ ಕಂಡು ಕೊಂಡ ಸತ್ಯವನ್ನು ಅದನ್ನು ಅರ್ಥೈಸಿಕೊಳ್ಳಬಲ್ಲ ಸಮರ್ಥರ ಎದುರು ಮಂಡಿಸಿ, ವಾದ ಪ್ರತಿವಾದದ ಮೂಲಕ ಸಮಾಜಪೂರಕವಾದ ನೀತಿ ನಿಯಮಾವಳಿಗಳನ್ನು ರಚಿಸುವುದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲ ಆಶಯವಾಗಿದೆ. ಮನಸ್ಸಿಗೆ ಬಂದದನ್ನು ಬಾಯಿಗೆ ಬಂದಂತೆ ಹೇಳುವವರಿಗೆ, ಗೂಗಲ್ ಟ್ರಾನ್ಸಲೇಟರ್ಗಿಂತ ಕೆಟ್ಟದಾಗಿ ಅನುವಾದ ಕೃತಿಗಳನ್ನು ರಚಿಸಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವವರಿಗೆ ಅಥವಾ ಮನೆಗೆ ಗಣೇಶನ ದೇಣಿಗೆ ಕೇಳಲು ಬಂದ ಬಾಲಕರ ಎದುರು ತಮ್ಮ ಬೌದ್ಧಿಕ ಪರಾಕ್ರಮ ತೋರಿಸುವವರಿಗೆ ಇದು ಕಲ್ಪನೆಗೂ ನಿಲುಕದ ವಿಷಯವಾಗಿದೆ.

ರಾಜಕಾರಣಿಗಳು ಎಂದೊಡೆ ಒಂದು ಅಸಹ್ಯವಾದ ಚಿತ್ರಣ ಹೇಗೆ ಜನರ ಕಲ್ಪನೆಗೆ ಬರುತ್ತದೆಯೂ ಹಾಗೆಯೇ ಇಂದು ವಿಚಾರವಾದಿಗಳು ಅಥವಾ ಪ್ರಗತಿಪರರು ಎಂದಾಗ ಕೂಡ ಇದೇ ತರಹದ ಕಲ್ಪನೆ ಬರುವುದಕ್ಕೆ ಈ ವಿಚಾರವಿಹೀನ ವಿಚಾರವಾದಿಗಳೇ ಕಾರಣ. ವೈಚಾರಿಕ ಭಿನ್ನತೆಯ ಹೊರತಾಗಿಯೂ ಅದೇಕೆ ಎಚ್. ನರಸಿಂಹಯ್ಯನವರಿಗೆ, ಪೂರ್ಣಚಂದ್ರ ತೇಜಸ್ವಿಯವರಿಗೆ ಗೌರವದಿಂದ ಜನ ತಲೆಬಾಗುತ್ತಿದ್ದರು? ಏಕೆಂದರೆ ಅವರ ವಿಚಾರ ಮತ್ತು ಬದುಕಿನಲ್ಲಿ ಹೆಚ್ಚು ವ್ಯತ್ಯಾಸವಿರಲಿಲ್ಲ. ಆದರೆ ಇಂದು ಮನೆಯಲ್ಲಿನ ಹೆಣ್ಣು ಮಕ್ಕಳ ಜೀವನ ಹೈರಾಣಗಿಸಿರುವ ವ್ಯಕ್ತಿ, ಹೊರಗಡೆ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಜಡಿಯುತ್ತಾನೆ. ಶಾಸ್ತ್ರ, ಪದ್ಧತಿಗಳೆಲ್ಲಾ ಮೌಡ್ಯ, ಬೊಗಳೆ ಎಂದು ಹೇಳಿ ಚಪಾಳೆ ಗಿಟ್ಟಿಸಿಕೊಳ್ಳುವವ ತನ್ನ ಮಕ್ಕಳ ಮದುವೆಗೆ ಸೂಕ್ತ ಮುಹೂರ್ತ ಹುಡುಕಿ ಮಾಂಗಲ್ಯಧಾರಣೆ ಮಾಡಿಸುತ್ತಾನೆ. ಇಂತಹ ಪೊಳ್ಳುತನ ಹಾಗೂ ದ್ವಂದ್ವಗಳಿಂದ ಕೂಡಿದ ವ್ಯಕ್ತಿಗಳಿಂದಾಗಿ ಇಂದು ವೈಚಾರಿಕ ಕ್ಷೇತ್ರ ಬಡವಾಗಿದೆ.

ಸೈದಾಂತಿಕವಾಗಿ ಎಂದು ಒಟ್ಟಿಗೆ ಸೇರದ ರೈಲಿನ ಹಳಿಗಳಂತಿದ್ದ ಗಾಂಧಿವಾದಿ, ವಿಚಾರವಾದಿ ಎಚ್.ನರಸಿಂಹಯ್ಯನವರು ಹಾಗೂ ಆರೆಸ್ಸೆಸ್ ಹಿರಿಯ ಚಿಂತಕ ಹೊ.ವೆ.ಶೇಷಾದ್ರಿಯವರು ಸಮಷ್ಠಿ ಚಿಂತನಕ್ಕೆ ಉತ್ತಮ ಉದಾಹರಣೆ ಎನ್ನಬಹುದಾಗಿದೆ. ಇಬ್ಬರದ್ದು ಬೇರೆ ಬೇರೆ ಮಾರ್ಗಗಳಾಗಿದ್ದರೂ ಒಳ್ಳೇ ಸ್ನೇಹಿತರಾಗಿದ್ದ ಇವರು, ಸಮಾಜ ಎದುರಿಸುತ್ತಿದ್ದ ಅನೇಕ ಸಮಸ್ಯಗಳ ಬಗ್ಗೆ ಆಗಾಗ ಚರ್ಚಿಸಿ ಅವುಗಳಿಗೆ ತಮ್ಮದೇಯಾದ ರೀತಿಯಲ್ಲಿ ಪರಿಹಾರಕ್ಕೆ ಶ್ರಮಿಸುತ್ತಿದ್ದರು. ಸಮಾಜದಲ್ಲಿನ ದೋಷಗಳ ಬಗ್ಗೆ ಕೇವಲ ದೋಷಾರೋಪಣೆ ಮಾಡದೇ ಚಿಕಿತ್ಸಕ ದೃಷ್ಟಿಯಿಂದ ಅವುಗಳನ್ನು ವಿಶ್ಲೇಷಿಸಿ ಅವುಗಳ ಕುರಿತು ಜಾಗೃತಿ ಮೂಡಿಸುತಿದ್ದದ್ದು ಇಬ್ಬರ ವಿಶೇಷತೆಯಾಗಿತ್ತು. ಹೀಗಾಗಿ ಈ ಹಿನ್ನೆಲೆಯಲ್ಲಿ ಇಬ್ಬರು ವಿಚಾರವಾದಿಗಳೇ ಆಗಿದ್ದರು.

ಜೀವನಪೂರ್ತಿ ಹಿಂದು ಆಚಾರ ವಿಚಾರವನ್ನು ಸಿಕ್ಕ ಎಲ್ಲ ವೇದಿಕೆಗಳಲ್ಲಿ, ಬರಹಗಳಲ್ಲಿ ಹಿಯ್ಯಾಳಿಸುತ್ತಿದ್ದ ಧಿಕ್ಕರಿಸುತ್ತಿದ್ದ ಡಾ.ಯು.ಆರ್.ಅನಂತಮೂರ್ತಿಯವರ ಅಂತ್ಯ ಸಂಸ್ಕಾರ ಅಂತ್ಯಂತ ಶಾಸ್ತ್ರೋಕ್ತವಾಗಿ, ಸಾಂಪ್ರದಾಯಕಾವಗಿ ನೆರೆವೇರಿತು. ಆದರೂ ಕೂಡ ಡಾ.ಅನಂತಮೂರ್ತಿ “Rational”! ಆದರೆ ಜೀವನ ಪೂರ್ತಿ ಹಿಂದು ಜೀವನಶೈಲಿಯ ಜೇಷ್ಟ ರಾಯಭಾರಿಯಂತೆ ಋಷಿತುಲ್ಯ ಜೀವನ ನಡೆಸಿ ತನ್ನ ನಂತರ ತನ್ನ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಅತ್ಯಂತ ಪ್ರಗತಿಪರ ಚಿಂತನೆ ಮಾಡಿ ಅದನ್ನು ನೆರವೇರಿಸಿದ ಆರೆಸ್ಸೆಸ್ನ ಹಿರಿಯ ಪ್ರಚಾರಕರಾದ ನ.ಕೃಷ್ಣಪ್ಪ, ಈ ಮೆಕಾಲೆ ಪುತ್ರರ ದೃಷ್ಟಿಯಲ್ಲಿ “ಕಮ್ಯೂನಲ್”!

ವಿಚಾರವಾದ ಅಥವಾ ಪ್ರಗತಿಪರ ಚಿಂತನೆ ಎನ್ನುವುದು ಒಂದು ಸಿದ್ಧಾಂತವಲ್ಲ ಅದು ಯಾವುದೇ ಒಂದು “ಇಸಂ”ಗೆ ಅಂಟಿಕೊಂಡದಲ್ಲಾ. ಅದು ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ನೆಲೆಗಟ್ಟಿನಲ್ಲಿ ಅಳವಡಿಸಿಕೊಳಬೇಕಾದ ಒಂದು ಚಿಂತನಶೈಲಿ. ವಿಚಾರವಾದವು ಸಾತ್ವಿಕತೆಯಿಂದ ಕೂಡಿರಬೇಕೇ ವಿನಃ ಭಂಡತನದಿಂದಲ್ಲ. ವೈಚಾರಿಕ ಭಿನ್ನತೆ ಎಂಬುದು ಚಲನಶೀಲ ಸಮಾಜದ ಕುರುಹಾಗಿದೆ. ವೈಚಾರಿಕ ಭಿನ್ನತೆ ವೈಚಾರಿಕ ಸಮೃದ್ಧಿಗೆ ಕಾರಣವಾಗಬೇಕು.

ಇದು ಸಾಕಾರಗೊಳ್ಳಬೇಕಿದ್ದರೆ ವಿಕೃತ ವಿಚಾರವ್ಯಾದಿ ಅಳಿದು ಪ್ರಾಕೃತ ವಿಚಾರವಾದ ಅರಳಬೇಕು.

1 ಟಿಪ್ಪಣಿ Post a comment
  1. Goutham
    ಆಕ್ಟೋ 21 2015

    ಲೇಖಕರು ಬರೆದಿರುವಂತೆ ವಿಚಾರವಾದವು ಸಾತ್ವಿಕತೆಯಿಂದ ಕೂಡಿರಬೇಕೇ ವಿನಃ ಭಂಡತನದಿಂದಲ್ಲ ಮತ್ತು ವೈಚಾರಿಕ ಭಿನ್ನತೆ ವೈಚಾರಿಕ ಸಮೃದ್ಧಿಗೆ ಕಾರಣವಾಗಿರಬೇಕು. ಇದನ್ನು ಎಲ್ಲರೂ ಅಥ೯ ಮಾಡಿಕೊಳ್ಳಬೇಕು. ಹಾಗೆಯೇ, ವೈಚಾರಿಕ ಸಮೃದ್ಧಿಗೆ ಕಾರಣವಾಗುವ ವೈಚಾರಿಕ ಭಿನ್ನತೆ ವ್ಯಕ್ತವಾದಾಗ ಅದನ್ನು ಜರಿಯದೆ ಒಪ್ಪಿಕೊಳ್ಳುವ ಮನಸ್ಸು ಸಹ ಎಲ್ಲರಲ್ಲೂ ಇರಬೇಕು. ಎಲ್ಲ ವಿಚಾರವಾದಿಗಳೂ ವಿಚಾರಹೀನರಾಗಿರುವುದಿಲ್ಲ. ಎಲ್ಲ ವಿಚಾರವಾದಗಳೂ ವಿಚಾರವ್ಯಾಧಿಗಳಾಗಿರುವುದಿಲ್ಲ. ಡಾIIಹೆಚ್.ನರಸಿಂಹಯ್ಯ ಮತ್ತು ಪೂಣ೯ಚಂದ್ರ ತೇಜಸ್ವಿಯವರೂ ಸಹ ಆ ಕಾಲದಲ್ಲಿ ಟೀಕೆಗಳನ್ನು ಎದುರಿಸಿದ್ದಾರೆ. ಈ ಮಹನೀಯರು ಈಗ ಬದುಕಿದ್ದಿದ್ದರೆ, ಕೆಲವರ ಉಗ್ರ ಟೀಕೆಗಳಿಗೆ ಮತ್ತು ಬೆದರಿಕೆಗಳಿಗೆ ಗುರಿಯಾಗಿರುತ್ತಿದ್ದರು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments