ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ !!!!
ಶ್ರೀದೇವಿ ಅಂಬೆಕಲ್ಲು
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ….ಈ ಪ್ರೀತಿ ಒಂಥರಾ ಕಚಗುಳಿ.. ಅದೊಂದು ಮಧುರ ಅನುಭೂತಿ. ಕೆಲವರಿಗೆ ಕಲ್ಪನೆಗೆ ನಿಲುಕದ್ದು, ಅಕ್ಷರಗಳಲ್ಲಿ ಬಣ್ಣಿಸಲಾಗದ್ದು…
ಆದ್ರೆ ಪ್ರೀತಿ ಎಂದರೆ ಕೇವಲ ’ಮಾತಲ್ಲ’, ಪ್ರೀತಿ ಎಂದರೆ ’ಜವಾಬ್ದಾರಿ’, ’ಪ್ರೀತಿ ಎಂದರೆ ’ದುಡಿಮೆ’, ಪ್ರೀತಿ ಎಂದರೆ ’ಬದುಕು’. ಪ್ರೀತಿ ಅನ್ನೋ ಸಂಬಂಧದೊಳಗೆ ನಂಬಿಕೆ, ಕಳಕಳಿ, ಮನವಿ, ಕಾಳಜಿ, ಸ್ನೇಹ, ಸೆಳೆತ, ಹೊಂದಾಣಿಕೆ ಒಂದಷ್ಟು ಮುನಿಸು ಜತೆಗೆ ಒಪ್ಪಂದ ಈ ಎಲ್ಲ ಭಾವಗಳೂ ಸಮ್ಮಿಳಿತಗೊಂಡಿರಬೇಕು.
ಗಂಡು- ಹೆಣ್ಣಿನ ನಡುವಿನ ಪ್ರೀತಿಯ ಸಂಬಂಧ ಅದೊಂದು ವಿಸ್ಮಯ ಲೋಕ. ಅದರೊಳಗಿನ ಪಯಣ ಒಂದು ಅದ್ಭುತ ಯಾನ. ಅಲ್ಲಿ ಒಮ್ಮೊಮ್ಮೆ ಮಳೆಯೂ ಇರುತ್ತದೆ. ಕಾಮನಬಿಲ್ಲೂ ಮೂಡುತ್ತದೆ. ಗೊತ್ತಲ್ವಾ… ಕಾಮನಬಿಲ್ಲು ಕಾಣಬೇಕು ಅಂದ್ರೆ ಮಳೆ ಬರಬೇಕು, ಬಿಸಿಲು ಇರಬೇಕು. ಹಾಗೆನೇ ಪ್ರೀತಿ ಉಳಿಬೇಕು ಅಂದ್ರೆ ಸಂಬಂಧದೊಳಗೆ ನಂಬಿಕೆನೂ ಇರಬೇಕು, ತ್ಯಾಗನೂ ಇರಬೇಕು. ಹಾಗಾಗಿ ನಂಬಿಕೆಯಲ್ಲಿ ರೂಪುಗೊಂಡ ಪ್ರೀತಿ ಕಳೆದುಕೊಳ್ಳುವುದಕ್ಕೆ ಸಾಧ್ಯ ಇಲ್ಲ, ಕಳೆದುಕೊಂಡ ಪ್ರೀತಿನ ಮರೆಯೋದಕ್ಕೂ ಸಾಧ್ಯ ಇಲ್ಲ. ಬದುಕಿರುವವರೆಗೆ ಪ್ರೀತಿ ’ಪ್ರೀತಿ’ಯಾಗಿ ಉಳಿಯದೇ ಹೋದರೂ ನೆನಪಾಗಿ ಕಾಡುವುದು ಖಂಡಿತ.
ಪ್ರೀತಿಗಾಗಿ ಬದುಕು ನೀಡಬಾರದು, ಬದುಕಿಗಾಗಿ ಪ್ರೀತಿ ನೀಡಿ ಅದರಲ್ಲಿ ಸಂತೋಷ ಇದೆ. ಇನ್ನೊಬ್ಬರ ಪ್ರೀತಿಗಾಗಿ ಹಂಬಲಿಸಿ ಬದುಕು ಕಳೆದುಕೊಳ್ಳುವುದರಲ್ಲಿ ಅರ್ಥ ಇಲ್ಲ. ಯಾವುದೇ ಸಂಬಂಧಗಳು ಒಂದರೆಕ್ಷಣ ಬೆಸೆಯುವುದಿಲ್ಲ. ಒಂದು ಗಳಿಗೆಯಲ್ಲಿ ಮೂಡಿದ ಪ್ರೀತಿ ಅದು ಪ್ರೀತಿಯಲ್ಲ. ಒಂದು ರೀತಿಯ ಆಕರ್ಷಣೆ ಅಷ್ಟೇ. ಅದರ ಆಯಸ್ಸು ಕೆಲವು ದಿನಗಳು ಮಾತ್ರ.
ಪ್ರೀತಿಯನ್ನು ವ್ಯಾಖ್ಯಾನಿಸುವುದು ಸುಲಭದ ಮಾತಲ್ಲ. ಇಂದು ನಾವೆಲ್ಲರೂ ಪ್ರೀತಿಯ ವಿವಿಧ ಆಯಾಮಗಳನ್ನು ಮರೆತಿದ್ದೇವೆ. ಅಪ್ಪ-ಮಗಳು, ಅಮ್ಮ-ಮಗ, ಅಣ್ಣ-ತಂಗಿ, ಅಕ್ಕ-ತಮ್ಮ, ಗೆಳೆಯ-ಗೆಳತಿಯರ ನಡುವಿನ ಸ್ನೇಹದಲ್ಲಿಯೂ ಪ್ರೀತಿಯ ಪರಿಭಾಷೆಯಿದೆ. ಆದರೆ ಈ ಆಧುನಿಕ ಯುಗದಲ್ಲಿ ಅವೆಲ್ಲವೂ ಗೌಣವಾಗಿ ಪ್ರೀತಿ ಅಂದರೆ ಹುಡುಗ-ಹುಡುಗಿಯರ ನಡುವಿನ ಹುಚ್ಚು ಮನಸ್ಸಿನ ವರ್ತನೆಗಳು ಎಂಬಂಥಾಗಿದೆ. ಹೃದಯದ ಪಿಸು ಮಾತುಗಳ, ಭಾವನೆಗಳ ಹಂಚಿಕೆ ಮರೆಯಾಗಿಸಿ ಪ್ರೀತಿಯ ವಿಶಾಲ ಅರ್ಥವನ್ನು ಸಂಕುಚಿತಗೊಳಿಸಿಕೊಂಡು ಪ್ರೇಮಿಗಳ ದಿನವನ್ನು ಅಸಹ್ಯಕರ ರೀತಿಯಲ್ಲಿ ಆಚರಿಸಿಕೊಳ್ಳುವುದು ವಿಪರ್ಯಾಸ.
’ಪ್ರೀತಿ’ಯ ಆಚರಣೆಗೆ ಪ್ರೇಮಿಗಳಿಗಾಗಿ ಒಂದು ದಿನ ಬೇಕಾಗಿಲ್ಲ. ಪ್ರೇಮಿಗಳ ಪಾಲಿಗೆ ಪ್ರತಿದಿನವೂ ಹಬ್ಬ.’ಪ್ರೀತಿ ಇಲ್ಲದೆ ಹೂವು ಅರಳೀತು ಹೇಗೆ, ಮೋಡ ಕಟ್ಟೀತು ಹೇಗೆ …..?’ ಜಿ.ಎಸ್.ಶಿವರುದ್ರಪ್ಪ ಅವರ ಈ ಸಾಲುಗಳು ಪ್ರೀತಿಯ ಬಗೆಗಿನ ವಿಶಾಲ ಅರ್ಥವನ್ನು ಸಾರುತ್ತದೆ. ಸೂರ್ಯ ಮೂಡುವ ಹೊತ್ತು ಹೂವು ಅರಳುವುದರ ನಡುವೆ ಪ್ರೀತಿ ಇದೆ., ಮೋಡ ಮಳೆಯಾಗಿ ಸುರಿದು, ಭುವಿಗೆ ಬಿದ್ದು ಸಾಗರ ಸೇರಿ ಮತ್ತೆ ಮೋಡ ಕಟ್ಟುವ ಪ್ರಕ್ರಿಯೆಯಲ್ಲಿ ಪ್ರೀತಿ ಇದೆ. ಹೀಗೆ ಪ್ರೀತಿಸುವವರ ’ಪ್ರೀತಿ’ ಎಂಬ ಪದದ ಬಗೆಗಿನ ಸಂಕುಚಿತ ಮನೋಭಾವ ಕಳೆದುಕೊಂಡು ವಿಶಾಲ ಅರ್ಥವನ್ನು ಪಡೆಯುತ್ತದೋ…., ಯಾವಾಗ ನಮ್ಮ ಪ್ರೀತಿ ಇತರರನ್ನು ಶಕ್ತರನ್ನಾಗಿಸುತ್ತದೋ ಆಗ ಮಾತ್ರ ’ಪ್ರೀತಿ’ಯೆಂಬ ಸಂಬಂಧದಲ್ಲಿಯ ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರಾಡುವುದಕ್ಕೆ ಸಾಧ್ಯ., ಸ್ವತಂತ್ರ ಹಕ್ಕಿಯಂತೆ ಸ್ವ ಇಚ್ಛೆಯ ಬದುಕು ಸಾಗಿಸುವುದಕ್ಕೆ ಸಾಧ್ಯ.
ಪ್ರೀತಿಯೆ ನನ್ನುಸಿರು….
ಚಿತ್ರ ಕೃಪೆ : ಅವಧಿ





ಅರ್ಥಗರ್ಭಿತ, ಮನತಟ್ಟೋ ಲೇಖನ! 🙂
ನಮ್ಮ ಲೇಖನವನ್ನು ಪ್ರೇಮಿಗಳಲ್ಲ ಓದಲೇ ಬೇಕಾದುದ್ದು, ನಿಮ್ಮ ಯೋಚನೆಗಳು ಪ್ರಸ್ತುತ ಸ್ಥಿತಿಗತಿಗಳಿಗನುಗುಣವಾಗಿ ಮೂಡಿ ಬಂದಿದೆ. ನಿಮ್ಮೀಂದ ಮತ್ತಷ್ಟು ಲೇಖನವನ್ನು ನಿರೀಕ್ಷೆ ಮಾಡುತ್ತೇವೆ. ಧನ್ಯವಾದಗಳು
Tumba chenda helidiri dosth namma yuva piligege ondu olle sandesha Danyavadagalu