ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 10, 2011

1

ಅತ್ಮಹತ್ಯೆಯಲ್ಲಿ ಹತ್ಯೆಯಾಗುವುದು ದೇಹ ಮಾತ್ರ…!

‍ನಿಲುಮೆ ಮೂಲಕ

ಪವನ್ ಎಂ ಟಿ

ಇಂಡಿಯಾ ಟುಡೇ  ಇತ್ತೀಚೆಗಷ್ಟೇ ರಾಷ್ಟ್ರವ್ಯಾಪ್ತಿಯಾಗಿ ಸಮೀಕ್ಷೆಯನ್ನು ನಡೆಸಿತು. ಆ ಸಮೀಕ್ಷೆಯ ಪ್ರಕಾರ ಈ ದೇಶದಲ್ಲಿ ನಡೆಯುವ ಆತ್ಮಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ಫಲಿತಗಳನ್ನು ತಿಳಿಸುತ್ತಾರೆ.

೧.      ಕಳೆದ ಐದು ವರ್ಷಗಳಿಂದ ಈಚೆಗೆ ಆತ್ಮಹತ್ಯೆ ಮಾಡಿ ಕೊಳ್ಳುವವರ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಎಂಟು ಶೇಕಡ ವೃದ್ಧಿಯಾಗುತ್ತಿದೆ.

೨.      ಆತ್ಮಹತ್ಯೆ ಮಾಡಿ ಕೊಳ್ಳುವವರ ಪ್ರಮಾಣವನ್ನು ಗಮನಿಸಿದರೆ ಹಳ್ಳಿಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ನಗರ ಪ್ರದೇಶದಲ್ಲಿ ಆತ್ಮಹತ್ಯೆ ಪ್ರಮಾಣದಲ್ಲಿ ಹೆಚ್ಚಿದೆ.

೩.      ಆತ್ಮಹತ್ಯೆ ಮಾಡಿಕೊಂಡವರ ಪ್ರಮಾಣವನ್ನು ಒಟ್ಟು ಗಮನಿಸಿದರೆ ೮೮% ದಷ್ಟು ಆತ್ಮಹತ್ಯೆಗಳಾಗುತ್ತಿರುವುದು ೧೬ ರಿಂದ ೨೪ ವರ್ಷ ಪ್ರಾಯದ ವಯಸ್ಸಿನವರ ಮಧ್ಯೆ.

೪.      ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಒಟ್ಟು ಸಂಖ್ಯೆಯಲ್ಲಿ ೬೫% ಹುಡುಗರಿದ್ದಾರೆ. ೩೫%ದಷ್ಟು ಹುಡುಗಿಯರಿದ್ದಾರೆ ಎಂದು. ಈ ಫಲಿತಗಳನ್ನು ಇಟ್ಟುಕೊಂಡು ಅಥವ ಈ ಮಾದರಿಯ ಆಂಕಿ ಅಂಶಗಳನ್ನು ಇಟ್ಟುಕೊಂಡು ಹದಿಹರೆಯದವರು ಯಾಕೆ ಇಷ್ಟು ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸಂಶೋಧಿಸಲಾಯಿತು.

ಸಾಮಾನ್ಯವಾಗಿ ಆತ್ಮಹತ್ಯೆಗೂ ಯೌವ್ವನಕ್ಕೂ ಆತ್ಯಂತ ನಿಕಟ ಸಂಬಂಧವಿದೆ. ನೆನಪಿಟ್ಟು ಕೊಳ್ಳಬೇಕಾದ ಅಂಶವೆಂದರೆ ಆತ್ಮಹತ್ಯೆ ಎನ್ನುವುದು ಹೊಸ ಬೆಳವಣಿಗೆಯೇನಲ್ಲ. ಅದೆಷ್ಟೋ ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಎಷ್ಟೋ ಬಾರಿ ಆತ್ಮಹತ್ಯೆಗೆ ಕಾರಣ ಮಾಧ್ಯಮಗಳ ಪ್ರಭಾವ. ವಿಶೇಷವೆಂದರೆ ನಮ್ಮಲ್ಲಿ ಜನ ಸಂಖ್ಯೆ ಯಾವ ರೀತಿಯಲ್ಲಿ ವೃದ್ಧಿಯಾಗುತ್ತಿದೆಯೋ ಅಷ್ಟೇ ಪ್ರಮಾಣದಲ್ಲಿ ಆತ್ಮಹತ್ಯೆಯೂ ವೃದ್ಧಿಯಾಗುತ್ತಿದೆ.

ನಾವು ಇತ್ತೀಚೆಗೆ ಆತ್ಮದ ಕುರಿತಂತೆ ಬೇರೆ ಬೇರೆ ಸಂಗತಿಗಳನ್ನು ಗಮನಿಸುತ್ತಾ ಬರುತ್ತಿದ್ದೇವೆ.  ಆತ್ಮಪ್ರಜ್ಞೆ ಎಂದು ಹೇಳುತ್ತೇವೆ, ಆತ್ಮಸಾಕ್ಷಿ ಎಂದು ಹೇಳುತ್ತೇವೆ, ನಿನ್ನ ಆತ್ಮಸಾಕ್ಷಿಗೆ ಸರಿಯಾಗಿ ನೀನು ನಡೆದುಕೊ ಎಂದು ಹೇಳುತ್ತೇವೆ. ಆತ್ಮವಿಮರ್ಶೆ ಎಂದು ಇನ್ನೊಂದು ಪದವಿದೆ, ನಿನ್ನನ್ನು ನೀನು ಮೊದಲು ವಿಮರ್ಶೆ ಮಾಡಿಕೊ ಎಂದು ಹೇಳುತ್ತೇವೆ. ಇದೇ ಮಾದರಿಯ ಪರಿಭಾಷೆಗಳೆನಿವೆ ಅದರ ಸಾಲಿನಲ್ಲಿ ಕಂಡು ಬರುವ ಇನ್ನೊಂದು ಪದ ಆತ್ಮಹತ್ಯೆ. ಹಾಗಾಗಿ ಅದೆಲ್ಲಿಯೂ ಕೂಡ ದೇಹದ ಹತ್ಯೆಯಾಗುವುದಿಲ್ಲ. ಮನಸ್ಸಿನ ಹತ್ಯೆಯಾಗುವುದಿಲ್ಲ ಬದಲಾಗಿ ಆತ್ಮದ ಹತ್ಯೆಯಾಗುತ್ತದೆ. ಇಲ್ಲಿ ನಿಜವಾಗಿ ಹತ್ಯೆಯಾಗುವುದು ದೇಹ ಆತ್ಮವಲ್ಲ, ದೇಹ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಆದರೆ ನಾವು ಎಲ್ಲಿಯೂ ಕೂಡ ದೇಹದ ಹತ್ಯೆ ಎನ್ನುವ ಪದವನ್ನು ಬಳಸುದಿಲ್ಲ. ಆತ್ಮದ ಹತ್ಯೆ ಎಂಬ ಪದವನ್ನೇ ಬಳಸುತ್ತೇವೆ. ಆ ಪದದ ಪ್ರಯೋಗ ಯಾಕೆ ಉದ್ಭವವಾಗುತ್ತದೆಂದರೆ ಮೂಲಭೂತವಾಗಿ ಒಬ್ಬ ವ್ಯಕ್ತಿಗೆ ಬದುಕು ಬೇಡವೆಂದು ಅನ್ನಿಸುವುದು, ನನಗೆ ಬದುಕು ಇಷ್ಟು ಸಾಕು ಎಂದು ಅನ್ನಿಸುವುದು. ಇಲ್ಲಿಗೆ ನನ್ನ ಬದುಕು ಮುಕ್ತಾಯಗೊಳ್ಳಬೇಕೆಂದು ನಮ್ಮಲ್ಲಿಯೇ ನಾವು ನಿರ್ಧಾರಕ್ಕೆ ಬರುವುದು. ಹಾಗಾಗಿ ಬದುಕು ಬೇಡವೆಂದು ನಿರ್ಧಾರ ತೆಗೆದುಕೊಂಡು ನಾವೇ ಆತ್ಮಹತ್ಯೆಗೆ ಮಾಡಿಕೊಳ್ಳುವ ಕಾರಣದಿಂದಾಗಿ ಅದು ಆತ್ಮದ ಹತ್ಯೆಯಾಗುತ್ತದೆ.

ನಮ್ಮಲ್ಲಿ ಆತ್ಮ ಎಂದರೇನು ಎಂಬುದು ಮೂಲಭೂತವಾಗಿರುವಂತಹ ಪ್ರಶ್ನೆ? ಆತ್ಮ ಎಂಬುದಿದೆಯೇ? ಇದೆ ಎಂದಾದರೆ ಅದು ಎಲ್ಲಿದೆ? ಅದನ್ನು ನಿಮಗೆ ತೋರಿಸಲು ಸಾಧ್ಯವೇ ಎನ್ನುವ  ವೈಜ್ಞಾನಿಕ ಪ್ರಶ್ನೆಗೆ ನೇರವಾದ ಉತ್ತರ ಇಲ್ಲವೇ ಇಲ್ಲ. ಇದರ ಕುರಿತಂತೆ ಯಾವ ವಿಜ್ಞಾನಕ್ಕೂ ನೇರವಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆದರೂ ಕೂಡ ವಿಜ್ಞಾನವು ಸೇರಿದ ಹಾಗೆ ನಾವೆಲ್ಲರೂ ಕೂಡ ನಮಗೆಲ್ಲರಿಗೂ ಒಂದು ಆತ್ಮವಿದೆ ಎಂಬುದನ್ನು ಒಪ್ಪಿಕೊಂಡಿದ್ದೇವೆ.

ಆತ್ಮ ಎಂಬುದು ನಾನು ಏನು? ಎಂಬುದನ್ನು ಸೂಚಿಸುತ್ತಾ ಹೋಗುವಂತಹದ್ದು. ಹಾಗಾಗಿ ನಾವಾಡುವ ಎಲ್ಲಾ ಮಾತುಗಳು, ನಾವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು, ನಾವು ಮಾಡುವ ಎಲ್ಲಾ ಕೆಲಸಗಳು ನಮ್ಮ ಆತ್ಮವಿವೇಚನೆಯ ಭಾಗವಾಗಿಯೇ ಬರುವಂತಹದು. ಹಾಗಾಗಿ ಬದುಕು ಬೇಡವೆಂದು ಅನ್ನಿಸುವುದು ನಮ್ಮ ಮನಸ್ಸಿಗಲ್ಲ, ದೇಹಕಲ್ಲ, ಅದು ನಮ್ಮ ಆತ್ಮಕ್ಕೆ. ಆತ್ಮಕ್ಕೆ ಬದುಕು ಬೇಡವೆಂದು ಅನ್ನಿಸುವಾಗಲೇ ಅದು ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಇದರಲ್ಲಿ ಬಹಳ ಸ್ಪಷ್ಟವಾದದುದೇನೆಂದರೆ  ಈ ಮೊದಲು ಹೇಳಿದ ಹಾಗೆ ಬದುಕು ಬೇಡವೆಂದು ಅನ್ನಿಸಿದಾಗ ನಾವು ಆತ್ಮಹತ್ಯೆಗೆ ಒಳಗಾಗುತ್ತೇವೆ ಎಂದು. ಅದಕ್ಕೆ ನಮಗೆ ಇಲ್ಲೇ ಉತ್ತರವು ಸಿಗುತ್ತದೆ ಯಾವಾಗ ನಮಗೆ ಬದುಕು ಬೇಡವೆಂದೆನಿಸುತ್ತದೆಯೋ ಆವಾಗ ನಾವು ಆತ್ಮಹತ್ಯೆಗೆ ಒಳಗಾಗುತ್ತೇವೆ ಎಂದು.

ಒಂದು ಸಂಗತಿ ನಮಗೆಲ್ಲ ಗೊತ್ತಿದ್ದದೇ ನಾವು ಇಂಗ್ಲೀಷಿನಲ್ಲಿ ಯಾವುದನ್ನು ಟೀನೇಜ್ ಎಂದು ಕರೆಯುತ್ತೇವೆಯೋ ಅದೊಂದು ಸಾಂಕೇತಿಕ ಪರಿಭಾಷೆಯಷ್ಟೆ. ಇಲ್ಲಿ ಟೀನೇಜಿನಲ್ಲಿ ಮನಸ್ಸು, ದೇಹ ಬದಲಾಗುತ್ತದೆಯೆಂದಲ್ಲ. ಟೀನ್ ಎನ್ನುವ ಪದ ಬರುವುದರಿಂದ ನಾವು ಅದನ್ನು ಹಾಗೆ ಬಳಸುತ್ತಿದ್ದೇವಷ್ಟೆ. ಇಲ್ಲಿ ನಾವು ಗಮನಿಸ ಬೇಕಾದುದ್ದು ನಾವು ಯೌವನಾವಸ್ಥೆ ಎಂದು ಯಾವುದನ್ನು ಗುರುತ್ತಿಸುತ್ತೇವೆಯೋ ಅಲ್ಲಿ ದೈಹಿಕವಾದ ಬದಲಾವಣೆಗಳಾಗುತ್ತವೆ. ನಮ್ಮ ಧ್ವನಿಯಲ್ಲಿ ಬದಲಾವಣೆಗಳಾಗಬಹುದು, ಅಥವ ದೇಹದ ಅಂಗಾಂಗಗಳಲ್ಲಿ ವ್ಯತ್ಯಯವಾಗುವಂತಹದ್ದು. ಇವೆಲ್ಲ ಪ್ರಕಟವಾಗುತ್ತಾ ಹೋಗುತ್ತವೆ. ಆ ದೇಹದಲ್ಲಿ ಹಾಗುವ ಬದಲಾವಣೆಗಳಿವೆಯಲ್ಲಾ ಅದು ನಮ್ಮೊಳಗೆ ಸಣ್ಣ ಪುಟ್ಟ ಆತಂಕಗಳಿಗೋ ಅಥವ  ಪುಟ್ಟ ಕುತೂಹಲಗಳಿಗೋ ಎಡೆ ಮಾಡಿ ಕೊಡುತ್ತದೆ. ಅವು ನೇರವಾಗಿ ಆತ್ಮದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಈ ಹದಿಹರೆಯ ಎಂದು ಹೇಳುವುದೇ ಮೂಲ ಭೂತವಾಗಿ ದೇಹದಲ್ಲಿ ಆಗುವ ಬದಲಾವಣೆ, ದೇಹದಲ್ಲಾದ ಬದಲಾವಣೆಯಿಂದ ಮನಸ್ಸು ಕೂಡ ಬದಲಾವಣೆಯ ಪ್ರಕ್ರಿಯೆಗೆ ಒಳಗಾಗುತ್ತದೆ. ಮತ್ತು ಯವ್ವನದ ಅವಧಿ ಒಂದಷ್ಟು ಆಕರ್ಷಣೆಯನ್ನು ಬಯಸುವ ಆವಧಿ. ಅದು ದೇಹದ ಬಗ್ಗೆ ಆಕರ್ಷಣೆ, ದೇಹದ ಸುಖದ ಬಗ್ಗೆ ಆಕರ್ಷಣೆ, ಸೌಂದರ್ಯದ ಬಗ್ಗೆ ಆಕರ್ಷಣೆ, ಉದ್ಯೋಗದ ಬಗ್ಗೆ ಆಕರ್ಷಣೆ, ದುಡ್ದಿನ ಬಗ್ಗೆ ಆಕರ್ಷಣೆ, ವಿರುದ್ಧ ಲಿಂಗದ ಬಗ್ಗೆ ಆಕರ್ಷಣೆ, ಅಧಿಕಾರದ ಆಕರ್ಷಣೆ, ಈ ರೀತಿಯ ಹತ್ತು ಹಲವು ಆಕರ್ಷಣೆಗಳು ಯೌವನದ ಸಮಯದಲ್ಲಿ ಒಬ್ಬ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತವೆ. ನಾವು ಅದಕ್ಕೆ ಪ್ರೀತಿ, ಪ್ರೇಮ, ಬದುಕಿನ ಬಹಳ ಉಜ್ವಲವಾದ ಗುರಿ, ದೊಡ್ಡ ಧ್ಯೇಯ ಎನ್ನುವ ಪದ ಕೊಡುತ್ತೇವೆ.  ಆದರೆ ಇದು ಯಾವುದು ಆಗಿರುವುದಿಲ್ಲ. ಆ ಸಮಯದಲ್ಲಿ ನಮ್ಮಲ್ಲಿ ಒಂದು ಉತ್ಸಾಹವಿರುತ್ತದೆ, ಪಡೆದುಕೊಳ್ಳಬೇಕೆಂಬ ವಿಪರೀತವಾದ ಹಂಬಲವಿರುತ್ತದೆ. ಇಲ್ಲಿ ಆತ್ಮಹತ್ಯೆ ಎಲ್ಲಿಯಾಗುತ್ತದೆಂದರೆ ನನ್ನ ಮಿತಿಯೇನು ಮತ್ತು ನನ್ನ ಸಾಮರ್ಥ್ಯವೇನು ಎಂಬುದನ್ನು ಹದಿಹರೆಯದ ವ್ಯಕ್ತಿ ಯಾವಾಗ ಅರ್ಥ ಮಾಡಿಕೊಳ್ಳುವುದಿಲ್ಲವೋ ಅದು ಆತ್ಮಹತ್ಯೆಗೆ ಎಡೆ ಮಾಡಿಕೊಡುತ್ತದೆ.

ಆತ್ಮಹತ್ಯೆ ಎಂಬುದು ತನ್ನ ಮಿತಿ ಮತ್ತು ಸಾಮ್ಯತೆಯನ್ನು ತಿಳಿದುಕೊಳ್ಳದೆ ಒಬ್ಬ ವ್ಯಕ್ತಿ ತಾನು ಏನನ್ನು ಸಾಧಿಸಬೇಕೆಂದು ಹೊರಟಿರುತ್ತಾನೆಯೋ, ಆ ಸಾಧನೆಯ ಗುರಿಯನ್ನು ಸಣ್ಣ ಪ್ರಮಾಣದಲ್ಲಿ ಪೂರೈಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಬದುಕು ಇಷ್ಟೇ ಎಂದು ಅನ್ನಿಸಿ ಬಿಡುತ್ತದೆ. ಇಲ್ಲಿ ಬಹಳ ಮುಖ್ಯವಾಗಿ ಆತ್ಮಹತ್ಯೆಗೆ ಮೂಲಭೂತವಾಗಿ ಕಾರಣವಾಗುವುದು ಹದಿಹರೆದ ವಯೋಮಾನದಲ್ಲೇ ಮೂಲಭೂತವಾಗಿ ಅನುಭವದ ಕೊರತೆಯಿರುತ್ತದೆ. ಇಲ್ಲಿ ಜೀವನಾನುಭವ ಏನು ಎಂಬುದು ಗೊತ್ತಿರುವುದಿಲ್ಲ. ಇಲ್ಲಿ ಅನುಭವ, ಅರಿವು, ಓದು, ಪ್ರಾಪಂಚಿಕ ಜ್ಞಾನ ಇವುಗಳ ಕೊರತೆಯಿದೆ. ಅದಲ್ಲದೆ ಆ ಸಮಯದಲ್ಲಿ ಸಾಮಾಜಿಕ ಸಂಬಂಧಗಳ ಬಗ್ಗೆ ಅರಿವಿರುವುದಿಲ್ಲ. ಮತ್ತು ಬದುಕನ್ನು ಬಂದ ಹಾಗೆ ಸ್ವೀಕರಿಸಬೇಕೆಂಬ ಮನೋಭಾವದ ಕೊರತೆ. ಬದುಕನ್ನು ನಾವೇ ನಿಯಂತ್ರಿಸಬೇಕೆಂಬ ಹಠ. ಈ ಹಠ ಮಿತಿಮೀರಿದಾಗ ಅತ್ಮಹತ್ಯೆಯ ಪ್ರಕ್ರಿಯೆಗಳಾಗುತ್ತವೆ. ಹಾಗಾಗಿಯೇ ಉದ್ಯೋಗದ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು, ಪ್ರೀತಿ ಭಗ್ನರಾದಾಗ ಆತ್ಮಹತ್ಯೆ ಮಾಡಿ ಕೊಳ್ಳುವುದು ಈ ರೀತಿಯ ಬೇರೆ ಬೇರೆ ಕಾರಣಗಳನ್ನು ಮೇಲ್ ನೋಟಕ್ಕೆ ನಾವು ಮುಂದಿಟ್ಟರೂ ಅದೆಲ್ಲವುಗಳ ಹಿಂದೆ ಅನುಭವ, ಅರಿವು, ಪ್ರಪಂಚಜ್ಞಾನ ಇವುಗಳೆಲ್ಲದರ ಕೊರತೆಯಿರುತ್ತದೆ. ಅದರೊಂದಿಗೆ ಈ ಮೊದಲು  ಹೇಳಿದಂತೆ ಒಂದು ವಿಪರೀತವಾದ ಆಕರ್ಷಣೆಯ ಬಯಕೆಯಿರುತ್ತದೆ. ಇವೆಲ್ಲ ಹದಿಹರೆಯದವಲ್ಲಿ ಆತ್ಮಹತ್ಯೆಗೆ ಕಾರಣವಾಗುತ್ತದೆ.

ಚಿತ್ರಕೃಪೆ:http://www.karensblog.com

Read more from ಲೇಖನಗಳು
1 ಟಿಪ್ಪಣಿ Post a comment
  1. krishnaveni g.s's avatar
    krishnaveni g.s
    ಮಾರ್ಚ್ 10 2011

    ಆತ್ಮಹತ್ಯೆಯಲ್ಲಿ ಹತ್ಯೆಯಾಗುವುದು ದೇಹ ಮಾತ್ರ…. ನಿಮ್ಮ ಅಭಿಪ್ರಾಯ ಸರಿಯಾಗಿದೆ ಪವನ್,ನಮ್ಮ ಆಸೆ ಆಕಾಂಕ್ಷೆಗಳು ಈಡೇರದಿದ್ದಾಗ ತಕ್ಷಣವೆ ಈ ಪ್ರಪಂಚ ಬೇಡ ಅನ್ನಿಸಿಬಿಡಬಹುದು . ಆದರೆ ಅಸೆ ಈಡೇರಲಿಲ್ಲ ಎಂದು ದೇಹವನ್ನು ಕೊಲ್ಲುವುದು ಎಷ್ಟು ಸರಿ? ನಮ್ಮ ಯುವ ಜನರಲ್ಲಿ ಆತ್ಮ ಹತ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದಾದರೆ ಅವರಿಗೆ ಅನುಭವ ಇಲ್ಲ ಎಂದಷ್ಟೆ ಹೇಳಲು ಸಾಧ್ಯವಾಗಲಾರದು ಮಾರ್ಗದರ್ಶನದ ಕೊರತೆಯು ಇದೆ ಅನ್ನಿಸುತ್ತಿಲ್ಲವೆ. ಏಕೆಂದರೆ ವಿಧ್ಯಾರ್ಥಿಗಳು ಇಂದು ಅನುತ್ತೀರ್ಣನಾದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಲಹೆ ಸೂಚನೆಗಳೊಂದಿಗೆ ಕರ್ತವ್ಯ ಪ್ರಜ್ನೆಯನ್ನು ಬೆಳೆಸಬೇಕಾಗುತ್ತದೆ. ಯೌವನದ ಆಸೆ ಆಕಾಂಕ್ಷೆಗಳನ್ನು ಹಿಡಿದಿಡುವ ಮನೋಸ್ಥೈರ್ಯ ಅವರಲ್ಲಿ ಬೆಳಸಬೇಕು ಅದು ಸಮಾಜದಿಂದ, ಪೊಷಕರಿಂದ ನಡೆಯ ಬೇಕು .ಮುಖ್ಯವಾಗಿ ನಿಮ್ಮಂತೆ ಆ ಕುರಿತು ಲೇಖನಗಳನ್ನು ಬರೆಯಲು ಮನಸುಮಾಡಬೇಕು, ದೂರದರ್ಶನಗಳಲ್ಲಿಯು ಇದರ ಬಗ್ಗೆ ಒಂದು ಎಚ್ಚರಿಕೆಯ ಗಂಟೆ ಭಾರಿಸಬೇಕು. ಒಂದು ಆತ್ಮ ಹತ್ಯೆ ಆದ ನಂತರ ಹುಟ್ಟುವ ಊಹಾಪೋಹಗಳು,ಸಾಯಲು ಇರುವ ಕಾರಣಕ್ಕಿಂತ ದೊಡ್ಡದಾಗುತ್ತವೆ ಎಂದು ನಮ್ಮ ಯುವ ಜನರಿಗೆ ತಿಳಿಯುವಂತಾಗಬೇಕು ಅಲ್ಲವೇ?

    ಉತ್ತರ

Leave a reply to krishnaveni g.s ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments