“ತಾಯ್ನುಡಿಯಲ್ಲಿ ಕಲಿಕೆ” ಯಾಕೆ ಮಹತ್ವದ್ದು?
– ಪ್ರಿಯಾಂಕ್
ತಾಯ್ನುಡಿಯಲ್ಲಿ ಕಲಿಕೆ ಮಾಡಿ ಉಪಯೋಗ ಏನು? ಚಿಕ್ಕ ಮಕ್ಕಳು ಯಾವ ಭಾಷೆ ಬೇಕಿದ್ರೂ ಬೇಗ ಕಲಿತಾರಲ್ಲ, ಹಾಗಾಗಿ ಚಿಕ್ಕಂದಿಂದಲೇ ಇಂಗ್ಲೀಷಿನಲ್ಲಿ ಕಲಿಸಿಬಿಟ್ರೆ ಎಲ್ರಿಗೂ ಒಳ್ಳೇದಲ್ವ? ಇಂತಹ ಪ್ರಶ್ನೆಗಳು ಬಹಳಷ್ಟು ಜನರಲ್ಲಿ ಇರೋದನ್ನ ಕಾಣಬಹುದು.
ಸ್ವಾಮಿನಾಮಿಕ್ಸ್ ಹೆಸರಿನಡಿ ಅಂಕಣ ಬರೆಯುವ “ಸ್ವಾಮಿನಾಥನ್ ಐಯ್ಯರ್” ಅವರು, ತಮ್ಮ ಈ ಅಂಕಣದಲ್ಲಿ, ಮಕ್ಕಳಿಗೆ ಮೊದಲು ತಾಯ್ನುಡಿಯಲ್ಲಿ ಕಲಿಕೆಯಾಗಬೇಕಾದ್ದು ಯಾಕೆ ಮುಖ್ಯ ಎಂಬುದನ್ನು ಅಧ್ಯಯನದ ಉದಾಹರಣೆಗಳ ಜೊತೆಗೆ ತೋರಿಸಿದ್ದಾರೆ. ಅವರ ಅಂಕಣದ ಆಯ್ದ ಕೆಲವು ಅಂಶಗಳನ್ನು ಇಲ್ಲಿ (ಕನ್ನಡದಲ್ಲಿ) ಹಾಕಲಾಗಿದೆ.
* ಎರಡನೇ ತರಗತಿಯಲ್ಲಿರುವ ಮಕ್ಕಳು ಸರಾಗವಾಗಿ ಓದಲು ಕಲಿಯದಿದ್ದರೆ, ಅವರು ಬಹುಶ ಮುಂದೆಂದೂ ಚೆನ್ನಾಗಿ ಓದಲಾರರು. ಅವರು ಓದಿನಲ್ಲಿ ಹಿಂದೆ ಉಳಿಯುವ ಸಾಧ್ಯತೆಯೇ ಹೆಚ್ಚು.
* ನಿಮಿಷಕ್ಕೆ ೪೫-೬೦ ಪದಗಳಷ್ಟು ವೇಗವಾಗಿ ಓದಲು ಬಾರದಿದ್ದರೆ, “ಏನು ಓದಿದೆ” ಎಂಬುದು ನೆನಪಿನಲ್ಲಿ ಉಳಿಯುವುದೇ ಇಲ್ಲವಂತೆ. ಅಂತಹ ಓದು “ಏನಕ್ಕೂ ಉಪಯೋಗವಿಲ್ಲ” ಎನ್ನುತ್ತಾರೆ ಕಲಿಕೆಯರಿಗರು. ನಿಧಾನವಾಗಿ ಓದುವಾಗ, ವಾಕ್ಯದ ಕೊನೆಗೆ ಬರೋ ಹೊತ್ತಿಗೆ ವಾಕ್ಯದ ಮೊದಲು ಓದಿದ್ದು ಮನಸ್ಸಿನಲ್ಲಿ ಉಳಿದಿರುವುದಿಲ್ಲವಂತೆ.
* ಓದಿನ ವೇಗ ಪಡೆಯದ ಮಕ್ಕಳು, ೮ ವರ್ಷ ಶಾಲೆಯಲ್ಲಿ ಕಳೆದರೂ, ಯಾವುದೇ ರೀತಿಯ ಕಲಿಕೆ ಪಡೆದುಕೊಂಡಿರುವುದಿಲ್ಲ ಎನ್ನುತ್ತಾರೆ ಕಲಿಕೆಯರಿಗರು.
* ವೇಗವಾಗಿ ಓದುವಂತೆ ಕಲಿಯಲು ತಾಯ್ನುಡಿಯೊಂದರಲ್ಲೇ ಸುಲಭ. ನಿಮಿಷಕ್ಕೆ ೪೫-೬೦ ಪದಗಳಷ್ಟು ವೇಗವಾಗಿ ಓದಲು ಬರುವವರೆಗೆ, ಮಕ್ಕಳಿಗೆ ಬೇರೆ ನುಡಿಯ ಪರಿಚಯ ಯಾವುದೇ ಉಪಯೋಗ ಮಾಡುವುದಿಲ್ಲ, ಬದಲಾಗಿ ಹೊರೆ ಎನ್ನುವುದನ್ನು ಕಂಡುಕೊಂಡಿದ್ದಾರೆ.
* ತಾಯ್ನುಡಿಯಲ್ಲಿ ವೇಗವಾಗಿ ಓದಲು ಕಲಿತ ಮಕ್ಕಳು, ಇನ್ನೊಂದು ನುಡಿ ಕಲಿಯಲು ತಯಾರಾಗಿರುತ್ತಾರಂತೆ.
ಆಗ, ಅವರಿಗೆ ಇನ್ನೊಂದು ನುಡಿಯ ಪರಿಚಯ ಮಾಡಿಸಿದರೆ, ಅದನ್ನೂ ಚೆನ್ನಾಗಿ ಕಲಿಯುತ್ತಾರೆ ಎಂಬುದನ್ನು ಜಾಂಬಿಯಾ ದೇಶದಲ್ಲಿ ನಡೆಸಿದ ಒಂದು ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ.
ಜಾಂಬಿಯಾ ದೇಶದಲ್ಲಿ, ಈ ಅಧ್ಯಯನದಿಂದ ಹೊರಬಂದ ವಿಷಯಗಳನ್ನು ತಮ್ಮ ಕಲಿಕೆ ಏರ್ಪಾಡಿನಲ್ಲಿ ಅಳವಡಿಸಿಕೊಂಡ ಮೇಲೆ, ಮಕ್ಕಳ ಇಂಗ್ಲೀಶ್ ಕಲಿಯುವಿಕೆಯೂ ಎದ್ದು ಕಾಣುವಷ್ಟು ಬದಲಾಗಿದೆಯಂತೆ.
* ನಮ್ಮಲ್ಲೂ ಈ ಅಧ್ಯಯನದಿಂದ ಕಲಿಯಬೇಕಾದ್ದು, ಅಳವಡಿಸಿಕೊಳ್ಳಬೇಕಾದ್ದು ಬಹಳಷ್ಟಿದೆ ಎನ್ನುತ್ತಾರೆ ಸ್ವಾಮಿನಾಥನ್ ಐಯ್ಯರ್.
ಒಂದು ನಾಡಿನ ಜನರ ಏಳಿಗೆಯಲ್ಲಿ, ಆ ಜನರ ನುಡಿಯ ಪಾತ್ರ ಎಷ್ಟು ದೊಡ್ಡದು ಎಂಬುದನ್ನು ಈ ಅಧ್ಯಯನ ತೋರಿಸಿಕೊಟ್ಟಿದೆ.
ನಮ್ಮ ಕನ್ನಡ ನುಡಿಯೇ, ಎಲ್ಲ ಕನ್ನಡಿಗರ ಏಳಿಗೆಯ ಏಣಿ ಎಂಬುದನ್ನು ನಾವೆಲ್ಲಾ ಅರಿಯಬೇಕು.





ಮೊದಲು ನಮ್ಮ ತಾಯ್ನುಡಿಯಲ್ಲಿ ಕಲಿಕೆ ಇದೆಯೇ? ನನ್ನ ತಾಯಿನುಡಿ ಮಂಡ್ಯದ ಕನ್ನಡ. ಅದು ಕೀಳು ಎಂದು ನಮ್ಮ ಮೇಸ್ಟರು, ನಾನು ನನ್ನ ಗೆಳೆಯನ್ನನ್ನು “ಅತ್ತ ವತ್ಕೊ, ನಿನ್ ತಾವ ಪೆನ್ ಆಯ್ತಾ” ಎಂದಾಗ ಹೊಡೆದು “ಅತ್ತ ಜರುಗಿಕೊ”, “ನಿನ್ನ ಹತ್ತಿರ ಲೇಖನಿ ಇದೆಯೇ” ಎಂದು ಮೂತಿ ತಿವಿದು ನನ್ ತಾಯಿನುಡಿಯನ್ನ ಕಲಿಕ್ಕೆ ಬಿಡಕ್ಕಿಲ್ಲ..
ಇದಕ್ಕಿಂತ ಇಂಗ್ಲೀಶ್ ಕಲಿತು ಪ್ಹಾರಿನ್ಗೆ ಹೋಗ್ತೀನಿ!
ಬರೀ ಹಳ್ಳಿ ಮಂದಿ, ಬಡವರು ಕನ್ನಡ ‘ಮಾಧ್ಯಮ’ದಲ್ಲಿ ಸಂಸ್ಕ್ರುತ ಕಲೀಬೇಕು.. ನಮ್ಮ ದೊಡ್ಡ ದೊಡ್ಡ ಲೇಕರು, ಚಿಂತಕರು, ರಾಜಕಾರಣಿಗಳೂ ಹಾಗು ದುಡ್ಡಿರೋರು ಇಂಗ್ಲೀಶ್ ಕಲಿತು ಇದೇಶಕ್ಕೆ ಹೋಗಬೇಕು. ಹಳ್ಳಿಮಂದಿ + ಬಡವರು ಅವರ ಹೊಲದಾಗೆ, ಪಕ್ಟರಿಯಾಗೆ ಕಡಮೆ ಸಂಬಳಕ್ಕೆ ದುಡೀಬೇಕು, ಅದರಿಂದ ಅವರು ‘ವಿದೇಶಿ ಬಂಡವಾಳ’, ‘ವಿದೇಶಿ ವಿನಿಮಯ’ ಪಡೀಬೇಕು..
ನಾನು ತಾಯಿನುಡಿ ಕನ್ನಡದಲ್ಲಿ ಈ ಕೆಲಕಂಡ ಸಂಗತಿಗಳು ಬರುವ ವರೆಗೂ ಕನ್ನಡ ಮೀಡಿಮಮ್ಮಲ್ಲಿ ಯಾರು ಓದಬೇಡಿ ಎಂದೇ ಸಲಹೇ ಕೊಡವೆನು.
೧. ಕನ್ನಡದಲ್ಲಿ B.Sc. B.E, M.Sc. M.E, PhD in Science. PUC in Science
೨. ಕನ್ನಡದಲ್ಲಿ technical ಮತ್ತು professional ಕೆಲಸಗಳು
೩. ಹೊರದೇಶದಲ್ಲಿ ಕನ್ನಡಕ್ಕೆ/ಕನ್ನಡಿಗರಿಗೆ ಬೇಕಾದ ನುಡಿಮಾರ್ಪು ಸವಲತ್ತು. ಇದು ಜಗತ್ತಿನ ಸುಮಾರು ನುಡಿಗಳಿವೆ. ಮಾದರಿ ಪ್ರೆಂಚು, ಚೀನೀ, ಜರ್ಮನ್…
ಈ ಮೂರು ಆಗೋ ವರೆಗೂ ಎಲ್ಲರೂ ತಮ್ಮ ಮಕ್ಕಳನ್ನು ಇಂಗ್ಲೀಶ್ ಮೀಡಿಯಮ್ಗೇ ಸೇರಿಸಿ, ಮೊದಲ ನುಡಿ ಸಂಸ್ಕೃತ ಕೊಡಿಸಿ. ಮಾರ್ಕು ಗಿಟ್ಟಿಸೋದು ಸುಲಬ. ಏಕೆಂದರೆ ಸಂಸ್ಕ್ರುತ ಪರೀಕ್ಷೆಗಳಿಗೆ ಇಂಗ್ಲೀಶಲ್ಲಿ ಉತ್ತರ ಬರೆಯಬಹುದು.
ಅಪ್ಪಟ ಮಾತು …ಈಗ ಆಗಬೇಕಾಗಿರೋದು ಅದೇ ಎಂದು ನನ್ನ ಅನಿಸಿಕೆ ಕೂಡ. ಆದರೆ ಇಂಗ್ಲಿಷ್ ಆ ಸ್ಥಾನವನ್ನ ಏರಲು ಏನು ಕಾರಣ? ಎಂದು ಸಂಶೋದಿಸುವುದು ಒಳ್ಳೆಯದು ಅಂತ ಅನಿಸಿಕೆ ……>>>>>ಏನಂತೀರಿ?
ಆಗಬೇಕು ಆಗಬೇಕು ಎಂದು ನಾವು ನೀವು ಹೇಳಿದರೆ ಆಗುತ್ತ? ಸೊತಂತ್ರ ಬಂದು ಅರವತ್ತು ವರುಶ ಈ ನಮ್ಮ ಆಳೋರು ಏನು ಪೆದ್ರಾ ಇಲ್ಲ ಉಡಾಪೆಯಾ?
ನಮ್ಮ ಸಮಾಜದಲ್ಲಿ ಈ ಸುದಾರನೆಗಳು ಆಗೋ ನಂಬಿಕೆಯಾದರೂ ಏಟು ಮಂದಿಗೆ ಅಯ್ತೆ?
ಇನ್ನು ಇಂಗ್ಲೀಶ್ ಕಲಿವನಿಗೆ ಸಿಗೋಶ್ಟು ಅವಕಾಶಗಳು ಜಗತ್ತಿನ ಯಾವ ಬಾಶೆ ಕಲಿತೋನಿಗೂ ಸಿಗೋಲ್ಲ.
ಈ ತಾಯಿನುಡಿ ಕಲಿಕೆ ಅನ್ನೋದು ಒಂದು ತರಹ “emotional blackmail”! ನಮ್ ಮಂದಿಗೆ ತಾಯಿ-ತಂದೆ ಅಂತ ಸೆಂಟಿಮೆಂಟು.
ಮಾಯ್ಸ ಅವರೇ,
ಇಂಗ್ಲೀಶ್ ಕಲಿತೊನಿಗೆ ಹೆಚ್ಚಿನ ಅವಕಾಶಗಳು ಎಂದು ನೀವು ಹೇಳಿದ್ದೀರ. ಹೌದು. ಒಪ್ಪಬಹುದಾದ ಮಾತು.
ಕನ್ನಡ ಮಾಧ್ಯಮದಲ್ಲಿ ಒಳ್ಳೆಯ ಕಲಿಕೆ ಪಡೆದೋರು, ಇಂಗ್ಲೀಶ್ ಭಾಷೆ ಕಲಿಯಬಲ್ಲರು. ಚೆನ್ನಾಗೆ ಕಲಿಯುತ್ತಾರೆ.
ಕಲಿತರೆ ಒಳಿತು ಕೂಡ.
ತಾಯ್ನುಡಿಯಲ್ಲಿ ಕಲಿಕೆ ಯಾಕೆ ಮಹತ್ವದ್ದು ಎಂದರೆ, ಅದರಿಂದ ಕಲಿಕೆ ಚೆನ್ನಾಗಿ ಆಗುತ್ತದೆ.
ಇಂಗ್ಲೀಷಿನಿಂದ, ಕರ್ನಾಟಕದ ಎಲ್ಲಾ ಮಕ್ಕಳ ಕಲಿಕೆ ಚೆನ್ನಾಗಿ ಆಗುವುದಿಲ್ಲ ಎಂಬುದು ನನ್ನ ನಿಲುವು.
“ತಾಯ್ನುಡಿಯಲ್ಲಿ ಕಲಿಕೆ ಯಾಕೆ ಮಹತ್ವದ್ದು ಎಂದರೆ, ಅದರಿಂದ ಕಲಿಕೆ ಚೆನ್ನಾಗಿ ಆಗುತ್ತದೆ.”
ಈ ಮಾತು ತುಸು ತಕ್ಕುದ್ದಲ್ಲ. ಈಗ ಒಂದು ತಮಿಳು ಮಗುವನ್ನು ಚಿಕ್ಕಂದಿನಲ್ಲೇ ಒಂದು ಬ್ರಿಟೀಶ್ ಕುಟುಂಬ ದತ್ತು ತೆಗೆದುಕೊಂಡು, ಆಗಿನಿಂದಲೇ ಇಂಗ್ಲೀಶಿನಲ್ಲೇ ಕಲಿಕೆ ಕೊಟ್ಟರೇ ಅದಕ್ಕೆ ಇಂಗ್ಲೀಶಿನಲ್ಲೇ ಎಲ್ಲಾ ಸುಲಬವಾಗೇ ತಿಳಿಯುವುದು.
ಅದಕ್ಕೆ ಮೊದಲ ಹಂತದ ಕಲಿಕೆಯಲ್ಲೇ ಇಂಗ್ಲೀಶ್ ಮೀಡಿಯಮ್ಮಿಂದ ಕಲಿಯೋದು ಒಳ್ಳೇದು. ಎಲ್.ಕೇ.ಜಿಯಿಂದಲೇ ಇಂಗ್ಲೀಶು ಮೊದಲು ಕಲಿಯಬೇಕು!
ಮಾಯ್ಸ,
ಇಂಗ್ಲೀಶಿನಿಂದ ಕೆಲವರು ಎಲ್ಲವನ್ನು ಪಡೆಯಬಹುದು ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ’ಎಲ್ಲರೂ’ ಇಂಗ್ಲಿಶಿನಿಂದ ’ಎಲ್ಲವನ್ನು’ ಪಡೆಯಬಲ್ಲರು ಎಂಬುದು ಒಪ್ಪತಕ್ಕ ಮಾತಲ್ಲ. ಯಾಕಂದರೆ ನಮ್ಮ(ಅಂದರೆ ಹೆಚ್ಚು ಕನ್ನಡಿಗರ) ಪರಿಸರ(ಸುತ್ತಮುತ್ತ)ದಲ್ಲಿ ಇಂಗ್ಲಿಶ್ ಇಲ್ಲ. ಹಾಗಾಗಿ ಸುತ್ತಮುತ್ತ ಕನ್ನಡ, ಆದರೆ ಕಲಿಕೆಯಲ್ಲಿ ಇಂಗ್ಲಿಶ್- ಇದೊಂತರ ‘ತನ್ನಿದಿರು'(contradiction)ಎನ್ನಬಹುದಾದ ಇರುವಿಕೆ(existence) ಅಲ್ಲವೆ? ಯಾಕಂದ್ರೆ ನುಡಿಯರಿಗರು ಮತ್ತು ಕಲಿಕೆಯರಿಗರು ಹೇಳುವುದು ಪರಿಸರದ ನುಡಿಯಲ್ಲಿ ಕಲಿಕೆಯಿದ್ದರೆ ತುಂಬ ಒಳ್ಳೆಯದು ಅಂತ.
ಅಶ್ಟಕ್ಕು ನಾವು ಇಂದು ಇಂಗ್ಲಿಶಿನಿಂದ ಸಾದಿಸಿರುವುದಾದರೂ ಏನು? ಹೆಚ್ಚಿನ ಮಟ್ಟದಲ್ಲಿ ಕಾಲ್ ಸೆಂಟರ್, ಸರ್ವಿಸ್ ಮೇಲೆ ನಿಂತಿರುವ ಕೆಲಸಗಳೇ ಹೊರತು ಹೆಚ್ಚಿನ ಮಟ್ಟದಲ್ಲಿ ಹೊಸ ಹೊಸ ಪ್ರಾಡಕ್ಟ್(ಉಂಟುಕ)ಗಳನ್ನು ಹೊರತರುವ ಕೆಲಸವನ್ನೇನು ನಾನು ಮಾಡುತ್ತಿಲ್ಲವಲ್ಲ. ಆದರೆ ತಾಯಿನುಡಿಯಲ್ಲಿ/ಪರಿಸರದ ನುಡಿಯಲ್ಲಿ ಕಲಿಕೆ ಮಾಡುತ್ತಿರುವ ಇತರೆ ನಾಡುಗಳು ಇದನ್ನ ಮಾಡುತ್ತಿವೆ.
ಆದರೆ ಕನ್ನಡ ಅದಕ್ಕೆಲ್ಲ ಈಗ ಅಣಿಯಾಗಿಲ್ಲ. ಅದಕ್ಕೆ ನುಡಿ,ಕಲಿಕೆಗಳಲ್ಲಿ ಮಾರ್ಪುಗಳು ಬೇಕಾಗಿವೆ. ಆದ್ದರಿಂದ ಮಾರ್ಪಾಟು ಯಾರೊ ಮಾಡುತ್ತಾರೆ ಆಗ ಬಂದು ನೋಡೋಣ, ಅಲ್ಲಿಯವರಿಗೆ ಕಾಯೋಣ ಅನ್ನುವುದು ಸರಿಯಲ್ಲ. ನೀವೇ ಆ ’ಮಾರ್ಪು’ ಆಗಿ (Dont wait for change to happen, be the change).
ಬರತ್
ನಾನು ಆ ಮಾರ್ಪಾಟಿನ ಕಳಕಳಿ ತೋರಿಸುತ್ತಾ ಬಂದಿದ್ದೀನಿ..
ನಾನು ಹೇಳಿಹ ಮೂರು ಸಂಗತಿಗಳು ಕನ್ನಡಕ್ಕಾದರೆ ಅದರಿಂದ ಕನ್ನಡದಲ್ಲಿ ಕಲಿಯಬೇಕು ಎಂದು ಹೇಳಬಹುದು..
ಇಂದಿನ ವಾಸ್ತವ ಹಾಗು ವಸ್ತುಸ್ತಿತಿ.. ಆ ಕನಸಿಂದು ಬಲು ದೂರದ ನುಣ್ಣಗಿನ ಬೆಟ್ಟವಾಗಿದೆ!
ಮಾಯ್ಸ,
<<"ನಾನು ಹೇಳಿಹ ಮೂರು ಸಂಗತಿಗಳು ಕನ್ನಡಕ್ಕಾದರೆ ಅದರಿಂದ ಕನ್ನಡದಲ್ಲಿ ಕಲಿಯಬೇಕು ಎಂದು ಹೇಳಬಹುದು"
ಅದೇ ಹಾಗೆ ಆಗಬೇಕಾದುದು ಯಾರಿಂದ? ಯಾರು ಮಾಡಬೇಕು ? ಯಾರು ಮಾಡುತ್ತಾರೆ?
ಅದನ್ನ ನಾವೇ ಅಂದರೆ ಆ ಮಾರ್ಪಾಟು ಮಾಡಿದರೆ ಏಳಿಗೆ ಅಗುತ್ತದೆ ಎಂದು ನಂಬಿರುವವರು ಮಾಡಬೇಕಲ್ಲವೆ?
ಬರತ್
ಎಲ್ಲ ಕನ್ನಡಂಗಳಿಗೂ ಆದಶ್ಟು ಹತ್ತಿರವಾದ ಬರಹದ ಒಳನುಡಿಯನ್ನೇ ಕಲಿಕೆಯಲ್ಲಿ ಬಳಸಬೇಕು, ಮತ್ತು ಯಾವುದೇ ಒಳನುಡಿಯನ್ನೂ ಕೀಳಾಗಿ ಕಾಣಕೂಡದು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ’ಎಲ್ಲರಕನ್ನಡ’ ಯೋಜನೆಯ ಬಗ್ಗೆ ತುಸು ಓದಿಕೊಳ್ಳಿ (www.ellarakannada.org), ಕೈ ಜೋಡಿಸಿ.
ಕನ್ನಡದಲ್ಲಿ ಉನ್ನತಶಿಕ್ಶಣವೇನು ಆಕಾಶದಿಂದ ಉದುರುವುದಿಲ್ಲ. ಸರಕಾರವೂ ಅದನ್ನು ಮಾಡುವುದಿಲ್ಲ (ಸರ್ಕಾರಗಳಿಗೆ ಅಂತಹ ಯೋಗ್ಯತೆ ಇರುವುದಿಲ್ಲ). ’ಎಲ್ಲರಕನ್ನಡ’ದಲ್ಲಿ ಒಳ್ಳೆಯ ಕಲಿಕೆಯೇರ್ಪಾಡು ಬರಬೇಕು ಎನ್ನುವ ’ತೆವಲು’ ಇರುವವರು ಅದಕ್ಕಾಗಿ ಮೈಬಗ್ಗಿಸಿ ದುಡಿಯಬೇಕು. ತಯಾರಿದ್ದರೆ ಮುಂದೆ ಬನ್ನಿ.
’ಈ ಮೂರು ಆಗುವ ವರೆಗೂ…ಇಂಗ್ಲೀಶ್ ಮೀಡಿಯಮ್ಗೇ…’ ಎಂದು ನೀವು ಹೇಳಿರುವುದನ್ನು ಹೊಸದಾಗಿ ಹೇಳುವ ಅವಶ್ಯಕತೆಯೇ ಇಲ್ಲ. ಅದನ್ನೇ ಎಲ್ಲರೂ ಮಾಡುತ್ತಿರುವುದು, ಮಾಡಲು ಮುಂದುವರೆಯುವುದು. ಜೀತದಾಳೊಬ್ಬನು ಜೀತದಲ್ಲಿ ಇರುವ ವರೆಗೂ ಜೀತದ ಅನ್ನವೇ ಮೇಲು ಎಂದು ಮೆರೆದಂತಾಯಿತು ಇದು. ಜೀತದಿಂದ ಹೊರಬರುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡಲು ಮುಂದೆಬರುವುದು ಮೇಲು.
ಮಿಕ್ಕಂತೆ ’ಪರಿಸರದ ನುಡಿ’ ಎನ್ನುವುದರ ಬಗ್ಗೆ ಇಲ್ಲಿ ಬರೆದಿದ್ದೇನೆ.
ಸನ್ಮಾನ್ಯ ಕಿರಣ ಬಾಟ್ನಿಯವರೆ,
ನಿಮ್ಮ ಎಲ್ಲರ-ಕನ್ನಡದ ಬಗ್ಗೆಯ ಕೆಲಸವು ಬಲು ಹೊಗಳತಕ್ಕದ್ದು. ಅಂತಹ ಒಳ್ಳೆಯ ಕೆಲಸಕ್ಕೆ ನಮ್ಮ ಕೈಯಲ್ಲಾದ ನೆರವೀಯ್ಯುವ ಅವಕಾಶವೇ ನಮ್ಮ ಬಾಗ್ಯ. ಇಂತಹ ಕೆಲಸಗಳೂ ನಡೆಯುತ್ತಿವೆ ಎಂಬುದು ಕಡುಮರಳುಗಾಡಿನಲ್ಲಿ ಕಂಡ ತಿಳಿನೀರಿನ ಬಗ್ಗೆಯಂತೆ, ಅತುಲ್ಯವೂ ಅಮೂಲ್ಯ ಹಾಗು ಅವಶ್ಯಕವೂ ಆಗಿದೆ.
ಆದರೆ ಎಲ್ಲರ-ಕನ್ನಡದಲ್ಲಿ ಕಲಿಕೆಗೆ ಬಲು ದೊಡ್ಡದಾಗಿ ಅಡ್ಡಿಗಳೂ ಇವೆ. ಈ ನಿಲುಮೆಯಲ್ಲೇ ಪ್ರಕಟಿತ ಪ್ರಾಜ್ಞ ‘ಅಜಕ್ಕಳ ಗಿರೀಶ ಬಟ್ಟರು’ ಅವರು ಹೇಳಿರುವ ಪಂಡಿತ ರಾ.ಗಣೇಶರು, ತಿರುಮಲೇಶರು ಮುಂತಾದರ ಪ್ರಖರ ಬರಹಗಳನ್ನು ಕಂಡು ನನ್ನಂತೋರಿಗೆ ‘ಎಲ್ಲರ-ಕನ್ನಡ’ವು ಗಗನಕುಸುಮವಾಗಿಬಿಡುವ ಹೆದರಿಕೆ ಆಳವಾಗುತ್ತಿದೆ.
ನಮ್ಮ ನಾಡನಲ್ಲಿರುವ ಪ್ರಬಲವಾದ ಸಂಸ್ಕ್ರುತದ ಸುತ್ತಣದ ಸಾಂಸ್ಕ್ರುತಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ವಲಯವು ಅತಿ ಸಧೃಡವಾಗಿಯೂ, ಅದರ ಪೋಷಣಹೇತೂ ಹುಟ್ಟಿಕೊಂಡಿರುವ ಬೌದ್ಧಿಕ ವಲಯದ ಕಬಂದಬಾಹುವಿನ ಹತೋಟಿಯಲ್ಲಿ ಸಮಾಜ ನಲುಗಿದೆ. ಇಂತಹ ಸನ್ನಿವೇಶವು ಐತಿಹಾಸಿಕವಾಗಿ ಹೇಳಿರುವಂತೆ ಎಲ್ಲರ-ಕನ್ನಡದೆಡೆಗೆ ಆಶಾದಾಯಕವಾದ ಸುಲಭಮಾರ್ಗವಲ್ಲ ಅದೊಂದು ಬಸವಣ್ಣನವರು ಸಮಾಜ ಸುದಾರಣೆಗೆ ಎದುರಿಸಿದ ಕ್ರಾಂತಿಬೇಕಿರುವ ಮಾರ್ಗ.
ಈ ಸಂಗತಿಯನ್ನು ತೋರಿಸಲೆಂದೇ ನಾನು ಬಾಶೆಯ ಬಗ್ಗೆಯ ‘ತಮಿಳು ಮಾದರಿ, ಅಕ್ಕರ ಕಡಿತ’ ಮುಂತಾದ ಬೃಹತ್ ವಾಗ್ಯುದಕ್ಕೆ ಹೊಕ್ಕಿದ್ದು. ಅಲ್ಲಿ ಬಂದ ಪ್ರತಿಕ್ರಿಯೆಗಳು, ‘ಸಂಸ್ಕೃತಪ್ರೇಮ’ವಾದಗಳು, ಹಾಗೂ ಅದಕ್ಕೆ ಇರುವ ಸಾಂಸ್ಥಾನಿಕ ಬೆಂಬಲವು ಈ ಎಲ್ಲರ-ಕನ್ನಡವೂ ಯಾವ ಕಾರಣ ಆಗಲು ಕಷ್ಟಸಾಧ್ಯವೆಂದು ಅಭಿವ್ಯಂಜಿಸಿದೆ. ಹಾಗು ‘ಎಲ್ಲರ-ಕನ್ನಡ’ದ ಪ್ರತಿಪಾದಕರನ್ನು ಜಾತಿವಾದಿಗಳು, ಸಂಸ್ಕೃತಿ ವಿರೋಧಿಗಳು, ತಮಿಳು-ಮಾದರಿಯವರು ಹಾಗು ಸಂಸ್ಕೃತದ್ವೇಷಿಗಳೆಂದು ರಾಮ-ರಾವಣರ ಉಪಮೆಯಲ್ಲಿ ರಾವಣಪಕ್ಷವೆಂದು ದೂಷಿಸಲಾಗಿ ಒಂದು ವ್ಯವಸ್ಥಿತ ದಾನವೀಕರಣವನ್ನೂ ಕಾಣುವೆವು.
ತತ್ಕಾರಣಗಳಿಂದಾಗೀ.. ಎಲ್ಲರ-ಕನ್ನಡದ ಮುಖೇನ ಬರುವ ಸುಲಭವಾದ ಶಿಕ್ಷಣ ದೂರದ ಮಾತು ಹಾಗು ಒಂದು ಸಮಯ ಬಂದರೂ ಅದಕ್ಕೆ ತಗಲುವ ಸಮಯ ಕಡಮೆ ಅಂದರೂ ೪೦-೫೦ ವರುಶ. ಅಲ್ಲಿಯ ತನಕ, ನಮ್ಮ ಮಂದಿ ಇಂಗ್ಲೀಶ್ ಕಲಿಯದೇ ಹೋದರೆ, ಬೆಂಗಳೂರು ಬೆಳಗಾವಿ ಮುಂತಾದೆಡೆಯಲ್ಲಿ ಹೊರರಾಜ್ಯದಲ್ಲಿ ಇಂಗ್ಲೀಶು ಕಲಿತು ಬರುವ ವಲಸೆಗರು ಹೆಚ್ಚಿನ ಸಂಬಳದ ಹುದ್ದೆಗಳನ್ನು ಹೆಚ್ಚಿನ ಪಾಲು ಆಕ್ರಮಿಸಿ, ಕನ್ನಡದ ಮಕ್ಕಳು ಕಡಮೆ ಸಂಬಳದ, ನೈಪುಣ್ಯತೆಯ ಅವಶ್ಯಕತೆ ಇಲ್ಲದ ಕೆಲಸಗಳಲ್ಲಿ ಇರಬೇಕಾಗುತ್ತವೆ. ಈ ಔದ್ಯೋಗಿಕ ವಸಹತ್ತುಶಾಹಿಯೂ ಹೊರರಾಜ್ಯದವರಿಂದ ಈಗಾಗಲೇ ನಡೆದಿದೆ. ಇಂದು ತಮಿಳುನಾಡು, ಆಂದ್ರ, ಮಹಾರಾಷ್ಟ್ರ, ಡೆಲ್ಲಿ ಹೀಗೆ ಹಲ ಭಾರತೀಯ ರಾಜ್ಯಗಳಲ್ಲಿ ಇಂಗ್ಲೀಶ್ ಶಿಕ್ಷಣ ಅಗಾಧವಾಗಿಯೂ ಸುಲಭವಾಗಿಯೂ ದೊರೆಯುತ್ತಿದ್ದೂ, ಆ ಕಡೆಯಿಂದಲೇ ನಮ್ಮ ನಾಡಿಗೆ ವಲಸೆ ಹೆಚ್ಚು. ಇವರ ಜತೆಗೆ ಸ್ಫರ್ಧಾಶೀಲರಾಗಿ ನಮ್ಮವರು ಬೆಳೆಯಬೇಡವೇ? ಈ ಕುರಿತು ನಮ್ಮ ಸರಕಾರವಾಗಿಲೀ ಇದರ ಪ್ರಬಲ ವಲಯಗಳಾಗಲೀ ಏನೂ ಯೋಚನೆಗೈದಂತೆ ಕಾಣುವುದೇ ಇಲ್ಲ. ನಮ್ಮಂತಹವರಾದರೂ ಬರೀ ಅಭಿಪ್ರಾಯ ಹೇಳಿಕೊಳ್ಳುಶ್ಟೂ ಪ್ರಜ್ಞೆ ಹಾಗು ಶಕ್ತಿಉಳ್ಳವರಶ್ಟೇ!
>>>>>”’ಈ ಮೂರು ಆಗುವ ವರೆಗೂ…ಇಂಗ್ಲೀಶ್ ಮೀಡಿಯಮ್ಗೇ…’ ಎಂದು ನೀವು ಹೇಳಿರುವುದನ್ನು ಹೊಸದಾಗಿ ಹೇಳುವ ಅವಶ್ಯಕತೆಯೇ ಇಲ್ಲ. ”
ಇದರ ಅವಶ್ಯಕತೆ ಇದೆ. ಏಕೆಂದರೆ ನಲ್ಮೆಯ ಪ್ರಿಯಾಂಕವರು ಪ್ರಸ್ತುತಪಡಿಸಿದಂತೆ ಇನ್ನೂ ೮೩% ಅಶ್ಟು ಕನ್ನಡಿಗರು ವಿವಶತೆಯಿಂದ ನ್ಯೂನತಾಭರಿತ ಕನ್ನಡ ಮಾಧ್ಯಮವೆಂಬ ಸಂಸ್ಕ್ರುತ-ಭರಿತ ಕಲಿಕೆಯಲ್ಲಿ ನಲುಗುತ್ತಿದ್ದಾರೆ ಎಂದು ತಾವಿಬ್ಬರು ಒಪ್ಪಿದ ಹಾಗೆ ಇರುವುದು. ಈ ೮೩% ಮಂದಿಯ ಏಳಿಗೆಗೆ ‘ಎಲ್ಲರ-ಕನ್ನಡ’ದಲ್ಲಿ ಶಿಕ್ಷಣ ಬರುವವ ವರೆಗೂ ಇರುವ ದಾರಿ ಇಂಗ್ಲೀಶ್ ಮೀಡಿಯಮ್ಮಲ್ಲಿ, ಇಂಗ್ಲೀಶಿಗೆ ಹೆಚ್ಚು ಒತ್ತುಕೊಟ್ಟು ಕಲಿಯುವುದು.
‘ಎಲ್ಲರ-ಕನ್ನಡ’ಕ್ಕೆ ಇರುವ ಸಾಂಸ್ಕೃತಿಕ ವಿರೋಧವನ್ನು ನೀಗಿಸಲು ಏನು ಉಪಾಯಗಳನ್ನು ಹವಣಿಸಿದ್ದೀರಿ ಎಂದು ನನಗೆ ತಿಳಿದಿಲ್ಲ. ಆ ಉಪಾಯಗಳಿಂದ ಎಲ್ಲರ-ಕನ್ನಡ ನನಸಾದರೇ ಆಗ ನಮ್ಮ ಕನ್ನಡನಾಡಿನಲ್ಲಿ ಕನ್ನಡಿಗರ ತಮ್ಮ ಕನ್ನಡ-ನುಡಿಯಲ್ಲೇ ಅರಿವಿನ ಮಹಲುಗಳನ್ನು ಕಟ್ಟಿಕೊಂಡು ಅದರಲ್ಲಿ ದೊರೆ-ದೊರೆಸಾನಿಗಳಂತೆ ವಿರಮಿಸುವರು. ಆ ಕಾಲ ಬರಲಿ ಎಂಬ ಸದಾಶಯ!
ಇಲ್ಲಿ ಇನ್ನೊಂದು ದಿಟವಿದೆ. ಕಲಿಕೆಯ ಕನ್ನಡವು ಸಂಸ್ಕ್ರುತದಿಂದ ತುಂಬಿದ್ದರೂ ಇಂಗ್ಲೀಶಿಗಿಂತ ಅದು ಒಟ್ಟಾಗಿ ಕನ್ನಡಿಗರಿಗೆ ಹತ್ತಿರವಾಗಿಯೇ ಇದೆ. ’ಎಲ್ಲರಕನ್ನಡ’ದ ಗುರಿ ಅದನ್ನು ಇನ್ನಶ್ಟು ಹತ್ತಿರವಾಗಿಸುವುದು.
ಈ ದಿಟವನ್ನು ಸರಿಯಾಗಿ ತಿಳಿದುಕೊಳ್ಳದೆ, ಮತ್ತು ಕನ್ನಡದ ಸ್ವರೂಪವನ್ನು ಸರಿಯಾಗಿ ತಿಳುದುಕೊಳ್ಳದೆ ’ಹಳೆ-ಶಾಲೆ’ಯವರು ’ಸಂಸ್ಕ್ರುತ ಮತ್ತು ಕನ್ನಡಗಳು ಬೇರೆಯಲ್ಲ’ ಎಂದು ನಂಬಿದ್ದಾರೆ. ಅಲ್ಲದೆ, ಇಂಗ್ಲೀಶಿನ ಹೋಲಿಕೆಯಲ್ಲಿ ಹಳಮೆಯ ಲಾಬವನ್ನು ಪಡೆದುಕೊಂಡು ಸಂಸ್ಕ್ರುತ ತುಂಬಿದ ಕನ್ನಡವೇ ವಾಸಿ ಎಂದು ಕೂಡ ನಂಬುತ್ತಾರೆ, ’ಹೊಸ-ಶಾಲೆ’ಯವರನ್ನು ಅದರ-ದ್ವೇಶಿಗಳು, ಇದರ-ದ್ವೇಶಿಗಳು ತಿಳಿಯದೆ ಎನ್ನುತ್ತಾರೆ.
ಅವರು ಆ ತಪ್ಪು ಮಾಡುತ್ತಾರೆ ಎಂದ ಮಾತ್ರಕ್ಕೆ ’ಇಂಗ್ಲೀಶೇ ಸಂಸ್ಕ್ರುತತುಂಬಿದ ಕನ್ನಡಕ್ಕಿಂತ ವಾಸಿ’ ಎನ್ನುವುದು ಇನ್ನೂ ದೊಡ್ಡ ತಪ್ಪಾಗುತ್ತದೆ – ಅದು ಇಂದು ಎಶ್ಟೇ ಲಾಬಗಳನ್ನು ’ಏರಲಾಗುವ ಕೆಲವರಿ’ಗೆ ಕೊಡುತ್ತಿರಲಿ.
ಮತ್ತೆ ’ಎಲ್ಲರಕನ್ನಡ ಅಳವಡುವ ವರೆಗೆ ಇಂಗ್ಲೀಶಿಗೆ ಹೋಗಲಿ’ ಎಂದು ನೀವು ಹೇಳುತ್ತಿರುವುದು ಎಲ್ಲರಿಗೂ ಗೊತ್ತಿರುವಂತದ್ದೇ. ನೀವು ಹೇಳದಿದ್ದರೂ ಅದೇ ನಡೆಯುವುದು. ಅನ್ನವನ್ನು ಅರಸುವುದು ಜೀವಿಗಳ ಗುಣ. ಆ ಅರಸುವಿಕೆಯಲ್ಲಿ ನೆತ್ತರ ಚೆಲ್ಲಾಟವನ್ನು ತಡೆಗಟ್ಟಬಹುದೇ ಎಂಬುದು ಪ್ರಶ್ನೆ.
ಕೋಟಿಗಟ್ಟಲೆ ಜನರು ಎಟುಕದ ಇಂಗ್ಲೀಶಿನ ಗೋಡೆಯನ್ನು ದಾಟಲು ನೂಕುನುಗ್ಗಲು ಮಾಡಿಕೊಳ್ಳುವುದನ್ನೂ, ಅದರಿಂದಾಗುವ ನೆತ್ತರ ಚೆಲ್ಲಾಟಾವನ್ನೂ ಜಗಳಗಳನ್ನೂ ಸಮಾಜದಲ್ಲಿ ಅಳಿಯದ ತಾರತಮ್ಯಗಳನ್ನೂ ತಡೆಗಟ್ಟಲು ಏನು ಮಾಡಬೇಕು ಎಂಬುದು ಪ್ರಶ್ನೆ.
ಅದಕ್ಕೆ ಉತ್ತರ ಇಶ್ಟೇ: ಆದಶ್ಟು ಬೇಗ ’ಎಲ್ಲರಕನ್ನಡ’ದ ಅಳವಡಿಕೆಯನ್ನು ಸರಿಯಾಗಿ ಮಾಡೋಣ ಎಂಬುದು. ಅಲ್ಲಿಯವರೆಗೆ ನೀವು ಹೇಳಿದ ’ಸೈಡುಲಾಬ’ಗಳನ್ನು ಇಂಗ್ಲೀಶಿನಿಂದ ಪಡೆದುಕೊಳ್ಳಬೇಕು ಎಂದು ನಾನು ಕಂಡಿತ ಒಪ್ಪುತ್ತೇನೆ. ಆದರೆ ಅದರ ಬಗೆಗಿನ ಕೆಲಸವೆಲ್ಲ ’ಸೈಡುಕೆಲಸ’ ಎಂದೇ ಈ ಚರ್ಚೆಯಲ್ಲಿ ಇಂಗ್ಲೀಶಿನ ಬಗೆಗಿನ ನಿಮ್ಮ ಸರಿಯಾದ ಮಾತನ್ನು ಎತ್ತಿ ಉಪಯೋಗವೇನು ಎಂದು ಕೇಳುತ್ತಿರುವುದು…
ಅಂದಹಾಗೆ ’ಎಲ್ಲರಕನ್ನಡ’ದ ಅಳವಡಿಕೆಗೆ ೪೦-೫೦ ವರ್ಶಗಳಶ್ಟೇ ಬೇಕಾದರೆ ಅದಕ್ಕಿಂತ ಒಳ್ಳೆಯ ಸುದ್ದಿ ಬೇಕೇ? ಅದ್ರುಶ್ಟವಿದ್ದರೆ ನಾವಿಬ್ಬರೂ ಬದುಕೇ ಇರುತ್ತೇವೆ! ನಾನೇನೋ ಎರಡು ಅಂಕಿಗಳಿಗೂ ಇನ್ನೊಂದು ಸೊನ್ನೆಯನ್ನು ಸೇರಿಸುತ್ತಿದ್ದೆ!
ಎಲ್ಲದಕ್ಕೂ ದಾರಿಯೆಂಬುದು ಇಂದೇ ತಿಳಿಯುವುದಿಲ್ಲ. ದಿಟವನ್ನು ಅದರ ಇಡಿತನದಲ್ಲಿ ಕಾಣಲು ನಮಗೆ ಕಂಗಳೇ ಇಲ್ಲ. ಕಂಡರೂ ಅದನ್ನು ಒಮ್ಮೆಗೇ ಬದಲಾಯಿಸುವುದೂ ಕಶ್ಟ.
ನಾವು ಆಯ್ದುಕೊಳ್ಳಬೇಕಾದ ಕವಲು ನಮ್ಮ ಮುಂದೆ ಈಗ ಕಾಣುತ್ತ ಇರುವಂತದ್ದು ಮಾತ್ರ. ಮುಂದಿನ ಕವಲುಗಳ ಬಗ್ಗೆಯೆಲ್ಲ ಹೆದರಿಕೆ ಹುಟ್ಟಿಸುವವರು ಇರುತ್ತಾರೆ. ಹೆದರಿ ಕುಳಿತುಕೊಂಡರೆ ಒಂದು ಹೆಜ್ಜೆಯನ್ನೂ ಇಡಲು ಆಗುವುದಿಲ್ಲ.
ವರುಶ ಐವತ್ತಾಗಲಿ ಐನೂರಾಗಲಿ ಇವತ್ತು ಕಂಡ ದಿಟ ಬದಲಾಗುವುದಿಲ್ಲ ತಾನೆ? ಹಾಗಿರುವಾಗ ನಮ್ಮ ಹಾದಿಯನ್ನು ಯಾವ ಕಡೆಗೆ ಬೆಳೆಸಬೇಕು ಎಂಬುದೂ ತಿಳಿಯೇ ತಾನೆ? ಅದಕ್ಕೇ ನಿಮ್ಮಂತೆ ಕನ್ನಡದ ಬಗ್ಗೆ ತಿಳಿದಿರುವವರನ್ನು ’ಎಲ್ಲರಕನ್ನಡ’ ಯೋಜನೆಗೆ ಬನ್ನಿ ಎಂದು ಕೈಮುಗಿದು ಕರೆಯುತ್ತಿರುವುದು…
ಧನ್ಯವಾದ..! ಶುಭವಾಗಲಿ!
ಮಾಯ್ಸ ಅವರೇ,
ಇಂಗ್ಲೀಶ್ ಕಲಿಕೆಯನ್ನ ಮೊದಲೇ ಶುರು ಮಾಡಿದರೆ, ಮಕ್ಕಳು ಓದಿನ ವೇಗ ಪಡೆದುಕೊಳ್ಳಲಾರರು ಎಂಬುದು ಅರಿಗರು ಕಂಡುಕೊಂಡಿದಾರೆ.
ಓದಿನ ವೇಗ ಪಡೆದ ಮಕ್ಕಳು, ಮುಂದಿನ ದಿನ ಇತರೆ ಭಾಷೆ ಕಲಿಯುವುದರಲ್ಲೂ ಮುಂದಿರುತ್ತಾರೆ ಎಂಬುದೂ ಕಂಡುಕೊಳ್ಳಲಾಗಿದೆ.
ಹಾಗಾಗಿ ತಾಯ್ನುಡಿಯಲ್ಲಿ ಕಲಿಕೆ ಮಹತ್ವದ್ದಾಗುತ್ತದೆ.
ನೀವು ಇಲ್ಲಿ ಎತ್ತಿರುವ ಸುಧಾರಣೆಗಳು, ಆಗಬೇಕಾದವೇ.
ಓದಿನ ವೇಗ ಪಡೆದ ಮಕ್ಕಳು, conceptಗಳನ್ನು ಸುಲಬವಾಗಿ ಅರಿಯುವಲ್ಲಿ ನೀವು ಹೇಳಿದ ಸುದಾರಣೆಗಳು ಸಹಾಯ ಮಾಡುತ್ತವೆ.
ಪ್ರಿಯಾಂಕ್
ಈ ಓದಿನ ವೇಗದ ಬಗ್ಗೆ.. ಮಕ್ಕಳಿಗೆ ಒಂದೇ ಒಂದು ನುಡಿಯನ್ನು ಕಲಿಸಿದರೆ, ಅವರು ತುಂಬಾ ಆ ನುಡಿಯನ್ನು ಕಲಿಯುವರು. ಅದೇ ಎರಡೆರಡು ನುಡಿಯನ್ನು ಕಲಿಸಿದರೆ ಅವರಿಗೆ ಆ ಎರಡೂ ನುಡಿಗಳ ಸೊಲ್ಲರಿಮೆ ಒಳಹು ಗೊಂದಲಗಳನ್ನೆಬ್ಬಿಸಿ ಎರಡರ ಕಲಿಕೆಯಲ್ಲೂ ತೊಡರಾಗುವುದು..
ಈಗ ಕನ್ನಡವನ್ನು ಕಲಿಸದೇ ಬರೀ ಇಂಗ್ಲೀಶ್ಗೆ ಒತ್ತು ಕಲಿಸುವುದರಿಂದ ( ಈಗಿನ ಹಲ ಶಾಲೆಗಳು ಮಾಡುವ ಹಾಗೆ ) ಕಲಿಕೆಯಲ್ಲಿ ಒಳ್ಳೆಯ ಪರಿಣಾಮಗಳು ಬರುವುದೇ? ಎಂದರೆ. ಬರುವುದು. ಅವರಿಗೆ ಇಂಗ್ಲೀಶಿನ ಮೇಲೆ ತುಂಬಾ ಒಳ್ಳೇಯ ಹಿಡಿತ ಬರುವುದು. ಹಾಗೂ ವಿಶಯಗಳ ಬಗ್ಗೆ ಒಳ್ಳೇ ಹಿಡಿತ ಹಾಗು ಹರವು/ವಿಸ್ತಾರ ಸಿಗುವುದು. ಹೆಚ್ಚು ಹೆಚ್ಚು ಓದಲು ಸರಕು ದೊರೆಯುವುದು. ಆದರೆ ಅವರಿಗೆ ಕನ್ನಡದ ಗಂದ-ಗಾಳಿ ಇರದೇ ಹೋಗುವುದು.
ಆದರೆ ಇಂದಿನ ನಮ್ಮ ಪಠ್ಯ ಕನ್ನಡವು ಕನ್ನಡವೇ ಅಲ್ಲವಲ್ಲ. ಹಾಗು ಅದನ್ನು ಕಲಿತವರು ಹೆಚ್ಚಿನ ಮುಂದೆ ಒಳ್ಳೆಯ ಹುದ್ದೆಗಳಿಗೆ ತಲುಪಿದರೆ ಅದೇ ಒಂದು ದೊಡ್ಡ ಸುದ್ದಿಯಾಗುವ ಸ್ತಿತಿ ಇದೆ.
ಆದುದರಿಂದ ಮೊದಲು ಸುದಾರಣೆಗಳು ಆಗಲಿ, ಆಮೇಲೆ ಕನ್ನಡದಲ್ಲಿ ಬಡವರು ಕಲಿಯಲಿ. ನಾನು ಮೊದಲೇ ಹೇಳಿದ ಮೂರು ಮಾರ್ಪಾಟುಗಳು ಆಗುವ ತನಕ ಬಡವರು ಆದಶ್ಟು ಇಂಗ್ಲೀಶ್ ಮೀಡಿಯಮ್ಮಲ್ಲೇ ಹೆಚ್ಚು ದುಡ್ಡು ತೆತ್ತರೂ ಕಲಿಸಿ ಎಂಬ ಸಲಹೆಯೇ ನನ್ನ ನಿಲುವು. ಏಕೆಂದರೆ ಅದೊಂದು ಗೆಲುವು-ತೋರಿಸಿದ-ದಾರಿ/proven way
ಸುದಾರಣೆಗಳು ಮೇಲಿಂದ ಮಳೆಗರೆಯುವುದಿಲ್ಲ, ಸರ್ಕಾರವೋ ಇನ್ನೊಂದು ಸಂಸ್ತೆಯೋ ಅದನ್ನು ಮಾಡುವುದಿಲ್ಲ. ಅವುಗಳನ್ನು ಮಾಡುವುದಕ್ಕೆ ನಿಮ್ಮ ಕೈಯಲ್ಲಿ ಆದರೆ ಮುಂದೆ ಬನ್ನಿ.
ಮತ್ತೊಮ್ಮೆ ’ಮೂರು ಮಾರ್ಪಾಟುಗಳು ಆಗುವ ತನಕ…ಇಂಗ್ಲೀಶ್ ಮೀಡಿಯಮ್ಮಲ್ಲೇ…’ ಎನ್ನುವುದಕ್ಕೆ ಮತ್ತದೇ ಉತ್ತರ: ಇದನ್ನೇನು ಹೊಸದಾಗಿ ಹೇಳುವುದು? ಇದು ಎಲ್ಲರರಿವಿನದೇ.
ತೊಂದರೆಯಿರುವುದು ಒಂದೇ: ಅದರಲ್ಲಿ ಗೆಲುವು ಸಾದಿಸುವುದು ಸುಲಬದ ಕೆಲಸವಲ್ಲ (ಮತ್ತೊಮ್ಮೆ ’ಪರಿಸರದ ನುಡಿ’ ಸಂಬಂದಿಸಿದ ನನ್ನ ಕಾಮೆಂಟನ್ನು ನೋಡಿ). ಸ್ವೀಡನ್ನಿನಲ್ಲಿ, ಜರ್ಮನಿಯಲ್ಲಿ, ಜಪಾನಿನಲ್ಲಿ, ಎಲ್ಲಾದರೂ ಇಂಗ್ಲೀಶಿನಲ್ಲಿ ಕಲಿಕೆಯೇರ್ಪಾಡು ಕಟ್ಟಲಿಕ್ಕೆ ಹೇಳಿ ನೋಡಿ, ಆಗುವುದಾದರೆ ಇಲ್ಲಿ ಇಂಗ್ಲೀಶಿನಲ್ಲಿ ಮಾಡೋಣ.
>>>”ಸ್ವೀಡನ್ನಿನಲ್ಲಿ, ಜರ್ಮನಿಯಲ್ಲಿ, ಜಪಾನಿನಲ್ಲಿ, ಎಲ್ಲಾದರೂ ಇಂಗ್ಲೀಶಿನಲ್ಲಿ ಕಲಿಕೆಯೇರ್ಪಾಡು ಕಟ್ಟಲಿಕ್ಕೆ ಹೇಳಿ ನೋಡಿ, ಆಗುವುದಾದರೆ ಇಲ್ಲಿ ಇಂಗ್ಲೀಶಿನಲ್ಲಿ ಮಾಡೋಣ.”
ನನಗೆ ಜಪಾನಿನ ಕತೆ ಗೊತ್ತಿಲ್ಲ.. ಆದರೆ ಸ್ವೀಡನ್ ಹಾಗು ಜರ್ಮನಿ ಎರಡೂ ದೇಶದಲ್ಲೂ ಇಂಗ್ಲೀಶಲ್ಲಿ ಎಲ್ಲ ಬಗೆಯ ಶಿಕ್ಷಣ ಲಭ್ಯವಿದ್ದೂ, ಮಕ್ಕಳಿಗೆ ಇಂಗ್ಲೀಶನ್ನು ಪ್ರಥಮ ಹಂತದಿಂದಲೇ ಕಲಿಸುವರು. ಅಷ್ಟೇ ಏಕೆ, ಅಲ್ಲಿ ಸಂಪೂರ್ಣ ಇಂಗ್ಲೀಶ್ ಮಾಧ್ಯಮದ ಶಾಲೆಗಳು ಆ ಜನಸಂಖ್ಯೆಗೆ ಹೇರಳವಾಗೇ ಇದೆ.
http://www.engelska.se/#
ಹೀಗೆ ಸುಮಾರು..
ಶೇಕಡವಾರು ಅಂಕಿ ಅಂಶ ಇದ್ದರೆ ದಯವಿಟ್ಟು ಪ್ರಕಟಿಸುವುದು.
http://www.scb.se/Pages/SubjectArea____3930.aspx
ಸ್ವೀಡನ್ ದೇಶಕ್ಕೆ ಸಂಬಂಧಿಸಿದ ಸಕಳ ಅಂಕಿ ಅಂಶಗಳ ಸಂಗ್ರಹ..
ನಿಮಗೆ ಬೇಕಾದುದು ಅಲ್ಲಿ ದೊರೆಯದಿದ್ದರೆ, ಅದು ಸ್ವೀಡಿಶ್ ಬಾಶೆಯಲ್ಲಿರಬಹುದು… ಇನ್ನು ತುಸು ಹೆಕ್ಕಿ ಇಲ್ಲವೇ ಕೇಳಿ ಕೊಡುವೆನು.
ಆದರೆ.. ಇಂಗ್ಲೀಶ್ ಹಾಗು ಸ್ವೀಡಿಶ್ ನುಡಿಗಳಲ್ಲಿ ಪ್ರಿಸ್ಕೂಲಿನಿಂದ ಹಿಡಿದು ಪಿಎಚ್.ಡಿ ತನಕ ಓದುವ ಅನುವು ಇದ್ದು, ಜನರ ಆಯ್ಕೆಗೆ ಬಿಡಲಾಗಿದೆ. ನಾನು ಅಲ್ಲಿ ವಾಸಿಸುತ್ತಾ ಇರುವವನು.
ಮಾಯ್ಸ ಅವರೇ,
ಇಡೀ ಕನ್ನಡನಾಡಿನಲ್ಲಿ ಎಲ್ಲೆಡೆ ಇಂಗ್ಲೀಶ್ ಮಾಧ್ಯಮ ಜಾರಿಗೊಳಿಸಲು ಆಗುವುದಿಲ್ಲವಲ್ಲ. ಪರಿಸರದ ಭಾಷೆ ಅಲ್ಲದ್ದನ್ನು ಕಲಿಸುವುದು ಕಷ್ಟದ ಕೆಲಸ.
ಪರಿಸರದ ಭಾಷೆಯಲ್ಲೇ ಮೊದಲು ಕಲಿಯುವುದು ಒಳಿತು. ಪರಿಸರದ ಭಾಷೆಯಲ್ಲೇ ಕಲಿಸುವುದು ಸುಲಬ ಕೂಡ.
ನಿಮಗೆ ಗೊತ್ತಿರಬಹುದು, ಯುನೆಸ್ಕೋ ಕೂಡ ಅದನ್ನೇ ಹೇಳುತ್ತೆ.
ಎಲ್ಲಾ ಕನ್ನಡಿಗರ ಏಳಿಗೆ ಗಮನದಲ್ಲಿ ಇಟ್ಕೊಂಡು ನೋಡಿದಾಗ, ಹಲವರಿಗೆ ಓದಲು/ಬರೆಯಲು ಸರಾಗವಾಗಿ ಬರುವಂತೆ ಮಾಡುವುದೇ ಮೊದಲ ಮೆಟ್ಟಿಲು ಎನಿಸುತ್ತದೆ.
ಆ ನೋಟದಲ್ಲಿ, ತಾಯ್ನುಡಿ ಕಲಿಕೆಯ ಮಹತ್ವ ಕಾಣ್ಸುತ್ತೆ.
ಓದಲು/ಬರೆಯಲು ಕಲಿತವರು concept ಅರಿಯಲು ಬಳಸುವ ಭಾಷೆ ಕನ್ನಡವೇ ಆಗಿದ್ದಷ್ಟೂ ಕನ್ನಡಿಗರಿಗೆ ಒಳಿತು.
ಆ ನಿಟ್ಟಿನಲ್ಲಿ ನೀವು ಹೇಳಿದ ಸುದಾರಣೆ ಆಗಬೇಕಿದೆ. ಬೇಗ ಆದಷ್ಟೂ ಜನರಿಗೆ ಒಳಿತು.
“ಇಡೀ ಕನ್ನಡನಾಡಿನಲ್ಲಿ ಎಲ್ಲೆಡೆ ಇಂಗ್ಲೀಶ್ ಮಾಧ್ಯಮ ಜಾರಿಗೊಳಿಸಲು ಆಗುವುದಿಲ್ಲವಲ್ಲ. ಪರಿಸರದ ಭಾಷೆ ಅಲ್ಲದ್ದನ್ನು ಕಲಿಸುವುದು ಕಷ್ಟದ ಕೆಲಸ.”
ನಮ್ಮ ಕರ್ನಾಟಕದಲ್ಲಿ ಎಶ್ಟು ಉರ್ದು, ತಮಿಳು, ತೆಲುಗು, ಮರಾಟಿ, ಕೊಂಕಣಿ, ಸಿಬಿಎಸ್ಇ ಹಾಗು ಕೇಂದ್ರೀಯ ವಿದ್ಯಾಲಯಗಳಿಲ್ಲ.!
ಇಂಗ್ಲೀಶ್ ಮೀಡಿಯಂ ಸರಕಾರ ಜಾರಿ ಮಾಡುವುದೇನು ಬೇಡ.. ನಮ್ಮ ಜನಕ್ಕೆ ಬೇಕಾದಶ್ಟು ಇಂಗ್ಲೀಶ್ ಶಾಲೆಗಳನ್ನು ತೆಗೆಯ ಅನುವು ಕೊಟ್ಟರೆ ಸಾಕು!
ಮಾಯ್ಸ ಅವರೇ,
ನೀವು ಹೆಸರಿಸಿದ ಮಾಧ್ಯಮ ಶಾಲೆಗಳು ಕರ್ನಾಟಕದಲ್ಲಿ ತುಂಬಾ ಇವೆ.
ಆದರೆ ಅಂಕಿ ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಇವತ್ತಿಗೂ ಶಾಲೆಗೇ ಸೇರುವವರಲ್ಲಿ ೮೩% ಮಕ್ಕಳು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರುತ್ತಾರೆ.
ಇದು ಇತ್ತೀಚೆಗೆ ಕಡಿಮೆಯಾಗುತ್ತಿದ್ದರೂ, ಇನ್ನೂ ಅತೀ ದೊಡ್ಡ ಪ್ರಮಾಣದಲ್ಲೇ ಇದೆ.
ಹೆಚ್ಚು ಇಂಗ್ಲೀಷು ಶಾಲೆಗಳು ಹುಟ್ಟಿಕೊಂಡರೆ ಹೆಚ್ಚು ಜನರಿಗೆ ಲಾಬ ಎಂಬ ಅಬಿಪ್ರಾಯ ನಿಮ್ಮದಾಗಿದೆ.
ಪರಿಸರದ್ದಲ್ಲದ ಭಾಷೆಯಲ್ಲಿ ಕಲಿಯುವವರು ಹೆಚ್ಚು ಕಲಿಕೆ ನಡೆಸಲಾರರು ಎಂಬ ಅಬಿಪ್ರಾಯ ನನ್ನದು.
ಕನ್ನಡ ಮಾಧ್ಯಮದಲ್ಲಿ ಸೇರಿಸಲಾದ ಸಂಸ್ಕೃತ ಪದಗಳನ್ನು ಅರಗಿಸಿಕೊಳ್ಳಲಾರದೇ ನಮ್ಮ ಜನರು ಕಷ್ಟ ಪಡುತ್ತಿರುವುದು ನಿಮಗೆ ಗೊತ್ತಿದೆ.
ಇನ್ನು, ಮಾಧ್ಯಮವನ್ನೇ ಇಂಗ್ಲೀಶ್ ಮಾಡಿಬಿಟ್ಟರೆ ಎಷ್ಟರ ಮಟ್ಟಿನ ಕಲಿಕೆ ನಡೆಯಬಹುದು? ಯೋಚಿಸಬೇಕಾದ ವಿಷಯ.
ಇನ್ನೊಂದು ವಿಷಯವೇನೆಂದರೆ, ಇಂಗ್ಲೀಶ್ ಮಾಧ್ಯಮಗಳನ್ನೇ ಮಾಡಿದರೆ, ಕಲಿಸುವವರು ಸಿಗಬೇಕು.
ಕಲಿಸುವವರು, ಇಂಗ್ಲೀಷು ಮತ್ತು ಕನ್ನಡ ಎರಡನ್ನೂ ಚೆನ್ನಾಗಿ ಬಲ್ಲವರಾಗಿರಬೇಕು. ಅಂತವರು ಎಷ್ಟು ಮಂದಿ ಸಿಕ್ಕಾರು?
ಕರ್ನಾಟಕದ ಎಲ್ಲಾ ಮಕ್ಕಳಿಗೆ ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಸಲು ಬೇಕಾದಷ್ಟು ಮಂದಿ ಕಲಿಸುವವರು ಸಿಕ್ಕಾರೇ?
ಇವೆಲ್ಲವನ್ನೂ ನೋಡಿದಾಗ, ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಕೆ ಮಾಡಿಸಿದರೆ ನಮ್ಮ ನಾಡಿನ ಏಳಿಗೆಯಾಗುತ್ತದೆ ಎಂಬ ಮಾತು ಹುಸಿಯೆನಿಸುತ್ತದೆ.
ಪ್ರಿಯಾಂಕ ಅವರೇ,
ನನಗೆ ಕನ್ನಡ ಮೀಡಿಯಮ್ಮಲ್ಲಿ ಕಲಿಸುವುದಕ್ಕೂ, ಕಲಿಯುವುದಕ್ಕೂ ಬೆಂಬಲವಿದೆ. ಆದರೆ ನೀವು ಹೇಳಿದ ೮೩% ಕನ್ನಡ ಶಾಲೆಗೆ ಮಕ್ಕಳು ಬೇರೆ ಆಯ್ಕೆ ಇಲ್ಲದೇ ಸೇರುತ್ತಾರೆ ಇಂದು. ಅಲ್ಲಿ ಸೇರುವ ಹೆಚ್ಚಿನವರು ಹಳ್ಳಿಗರು ಇಲ್ಲವೇ ಬಡವರು.
ಕನ್ನಡ ಮೀಡಿಮ್ಮಿನ ಗುಣಮಟ್ಟ ಹೆಚ್ಚಳದ ಬಗ್ಗೆ ನಮ್ಮ ಸರಕಾರಗಳು ಗಮನ ಹರಿಸೇ ಇಲ್ಲ. ಅವರಿಗೆ ಹೇಗಿದ್ದರೂ ಮಂದಿ ಬೇರೆ ಆಯ್ಕೆ ಇಲ್ಲದೇ ಕನ್ನಡ ಮೀಡಿಯಮ್ಮಿಗೆ ಹೋಗಲೇ ಬೇಕಾದ ಪಾಡು ಮಾಡಿಟ್ಟಿದ್ದಾರೆ.
ಕನ್ನಡ ಮೀಡಿಯಮ್ಮಲ್ಲಿ ನಾನು ಮುನ್ನವೇ ಹೇಳಿದ ಮೂರು ಸಂಗತಿಗಳನ್ನು ದೊರೆಕಿಸುವಲ್ಲಿ ನಮ್ಮ ಸರಕಾರ ಗಮನ ಹರಿಸಿ, ಕನ್ನಡ ಮೀಡಿಯಮ್ಮಿನ ಮಕ್ಕಳು ಬವಿಶ್ಯ ಬೆಳಗಿಸಲಿ.. ಆಗ ನನ್ನಂತವರು ಅಂತಹ ಸರಕಾರದ ಮುಂದಾಳಿನ ಪಟವನ್ನು ದೇವರ ಮನೆಯಲ್ಲಿ ಇಟ್ಟು ದಿನದಿನವೂ ತಪ್ಪುದ ದೀಪ ಹಚ್ಚುವೆವು..
ಆದರೆ ಅದಕ್ಕೆ ಬೋರಲಾಗಿ ಇವತ್ತಿನ ಪಾಡು.. ಇತ್ತ ಇಂಗ್ಲೀಶ್ ಮೀಡಿಯಮ್ಮಿನಲ್ಲಿ ಕಲಿತು ಹೆಚ್ಚು ಅವಕಾಶಗಳನ್ನು ಬಾಚಿಕೊಳ್ಳಬಹುದು ಎಂದು ತಿಳಿದ್ದದ್ದರೂ ಹಲವು ಮಂದಿಗೆ ಬಡತನ ಹಾಗು ಹಳ್ಳಿಗಳಲ್ಲಿ ನೆಲೆಸಿರುವುದರಿಂದ ಕನ್ನಡ ಮೀಡಿಯಮ್ಮಿಗೆ ಹೋಗಲೇ ಬೇಕಾಗಿ ಪಾಡು. ಇನ್ನು ನಮ್ಮ ಕನ್ನಡ ಮೀಡಿಮ್ಮಿನಲ್ಲಿ ಅವರು ಕಲಿಯು ಸಂಸ್ಕ್ರುತ-ತುಂಬಿಕ ನುಡಿಯ ವಿಜ್ನಾನ ಮುಂತಾದವು ಅವರ ಊಂಕು-ಬೆಳವಣಿಗೆಯನ್ನು ಕುಗ್ಗಿಸುತ್ತಿದೆ ಹೊರತು ಹಿಗ್ಗಿಸುತ್ತಿಲ್ಲ.
ಅದಕ್ಕೆ ಈಗಿರುವ ಪಾಡಿನಲ್ಲಿ ಬಡವರು ಹಾಗು ಈ ಸರಕಾರದಿಂದ ಆಗಬೇಕಾದುದನ್ನು ಮಾಡಿಸಲಾಗದವರಿಗೆ ಇರುವ ಒಂದೇ ಒಂದು ದಾರಿ ಹೆಚ್ಚು ದುಡ್ಡು ತೆತ್ತರೂ ಇಂಗ್ಲೀಶು ಮೀಡಿಯಮ್ಮಲ್ಲೇ ನಮ್ಮ ಮಕ್ಕಳನ್ನು ಓದಿಸುವುದು.!
“ಇನ್ನೊಂದು ವಿಷಯವೇನೆಂದರೆ, ಇಂಗ್ಲೀಶ್ ಮಾಧ್ಯಮಗಳನ್ನೇ ಮಾಡಿದರೆ, ಕಲಿಸುವವರು ಸಿಗಬೇಕು.”
ಇಂಗ್ಲೀಶು ಶಾಲೆಗಳು ಹೆಚ್ಚಾದಾಗ ತಾನೇ ತಾನೇ ಇದು ನೀಗುವುದು!
ಕರ್ನಾಟಕದ ಕಲಿಕೆಯೇರ್ಪಾಡು ಹೇಗಿದೆ ಎಂದು ಒಮ್ಮೆ ಒಳಹೊಕ್ಕು ನೋಡಿ. ಕನ್ನಡದಲ್ಲೇ ಅವರಿಗೆ ಸರಿಯಾಗಿ ಪಾಟ ಮಾಡಲು ಬರುವುದಿಲ್ಲ (ಇದಕ್ಕೆ ’ಎಲ್ಲರಕನ್ನಡ’ ಸರಿಯಾಗಿ ಅಳವಡದೆ ಇರುವುದೊಂದೇ ಕಾರಣವಲ್ಲ, ಅನೇಕ ಪೆಡಗಾಜಿಕ ಮತ್ತು ಸಾಮಾಜಿಕ ಕಾರಣಗಳೂ ಇವೆ). ಹೀಗಿರುವಾಗ ಇಂಗ್ಲೀಶಿನಲ್ಲಿ ಕಲಿಸುವವರು ಸಿಗುತ್ತಾರೆ ಎಂದು ನಂಬುವುದು ಹಗಲುಗನಸು.
ದುಡ್ಡು ಕೊಟ್ಟು ಜನರನ್ನು ಇಂಗ್ಲೇಂಡಿನಿಂದ ತರಿಸಬಹುದು (ಕ್ರಿಕೆಟ್ ಕೋಚಿನಂತೆ) ಎನ್ನುವುದಾದರೆ ಅದಕ್ಕೆ ನನ್ನಲ್ಲಿ ಒಂದೇ ಉತ್ತರ: ಕಲಿಕೆಯೇರ್ಪಾಡಿನಲ್ಲಿ ಕಲಿಸುಗರು ನಾವೇ ಆಗಿರಬೇಕು, ಮತ್ತು ನಾವುಗಳು ’ಮಾಡುಗ’ರಾಗಿರಬೇಕು, ’ಮಾಡಿಸಿಕೊಳ್ಳುಗ’ರಾಗಿದ್ದರೆ ನಡೆಯುವುದಿಲ್ಲ.
ಎಲ್ಲದಕ್ಕೂ ಬೇರೆಯವರೇ ’ಮಾಡುಗ’ರಾಗುವ ಏರ್ಪಾಡಿನಲ್ಲಿ ನಿದಾನವಾಗಿ ನಮ್ಮ ಉಸಿರಾಟವನ್ನೂ ಅವರೇ ’ಮಾಡು’ತ್ತಾರೆ. ಅದೇ ನಮ್ಮೊಡನೆ (ಎಂದರೆ ಕನ್ನಡಿಗರೊಡನೆ) ಪೈಪೋಟಿಗೆ ನಿಂತವರಿಗೆ ಬೇಕಾಗಿರುವುದು. ಅದೇ ನಮಗೆ ಬೇಡವಾಗಿರುವುದು.
ಈ ಪಾಡು ನಮ್ಮ ನಾಡಿಗೆ ಬಂದಿರುವುದು ತಲ್ಲಣಗೊಳಿಸುವಂತದ್ದು!
ಉರ್ದು, ತಮಿಳು ಮುಂತಾದ ಶಾಲೆಗಳಲ್ಲಿ ’ಪರಿಸರದ ನುಡಿ’ಯ ಕಟ್ಟಳೆಯೇನು ಮುರಿಯಲ್ಪಟ್ಟಿರುವುದಿಲ್ಲ. ’ಪರಿಸರ’ ಎಂದರೆ ಇಡೀ ಕರ್ನಾಟಕ ರಾಜ್ಯ ಎಂದೇ ಅರ್ತವಲ್ಲ. ನಾಲ್ಕು ಮನೆಗಳಿಗೇ ಅದು ಸೀಮಿತವಾಗಿರಬಹುದು.
ಜನಕ್ಕೆ ’ಬೇಕಾದಶ್ಟು’ ಇಂಗ್ಲೀಶ್ ಶಾಲೆಗಳು ಈಗಾಗಲೆ ಇವೆ. ಆದರೆ ಜನಕ್ಕೆ ’ಬೇಕಾಗಿಸಬಹುದಾದಶ್ಟು’ ಇಂಗ್ಲೀಶ್ ಶಾಲೆಗಳು ಇಲ್ಲ, ಅಶ್ಟೆ. ಬೇರೆಲ್ಲ ಮೈ-ಬಯಕೆಗಳ ಹಾಗೆಯೇ ಇದೂ ಕೂಡ. ಆ ಬಯಕೆಗಳನ್ನು ಇಲ್ಲದಿದ್ದರೂ ಹುಟ್ಟಿಸಬಹುದು. ಕಲಿಕೆಯಿಲ್ಲದ ಜನರು ಮುಗಿಬೀಳುವಂತೆ ಮಾಡಬಹುದು.
’ಜಾರಿಗೊಳಿಸಲು ಆಗುವುದಿಲ್ಲ’ ಎಂದಿರುವುದು ’ಸರ್ಕಾರ ಜಾರಿಗೊಳಿಸಲು ಆಗುವುದಿಲ್ಲ’ ಎಂಬ ಅರ್ತದಲ್ಲಿ ಅಲ್ಲ ಎಂದುಕೊಂಡಿದ್ದೇನೆ. ಯಾರಿಗೂ ಆಗುವುದಿಲ್ಲ ಎಂಬ ಅರ್ತದಲ್ಲಿ ಪ್ರಿಯಾಂಕ್ ಬಳಸಿದ್ದಾರೆ. ಇದಕ್ಕೆ ಕಾರಣವೂ ’ಪರಿಸರದ ನುಡಿ’ಯೇ ಕಲಿಕೆಗೆ ಸರಿ ಎಂಬುದೇ. ಆದ್ದರಿಂದ ಮೊದಲು ಇಡೀ ಕರ್ನಾಟಕದಲ್ಲಿ ಬೆಂಗಳೂರಿನ ಇಲ್ಲವೇ ದಿಲ್ಲಿಯ ಪರಿಸರವನ್ನು ಕಟ್ಟಿ, ಆಮೇಲೆ ನೀವು ಅಂದುಕೊಂಡಿರುವಂತೆ ಇಂಗ್ಲೀಶು ಮಾದ್ಯಮದ ಶಾಲೆಗಳನ್ನು ’ಜಾರಿಗೊಳಿಸುವುದು’ ಸುಲಬವಾಗುತ್ತದೆ.
ಹೌದು! ಪರಿಸರ ನುಡಿಯಲ್ಲಿ ಕಲಿಕೆ ಮಹತ್ವ ಉಳ್ಳದ್ದು!
ಮಕ್ಕಳಿಗೆ ’ಪರಿಸರದ ನುಡಿ’ಯಲ್ಲಿ ಕಲಿಕೆ ಸಿಗಬೇಕು ಎನ್ನುವುದು ಕಲಿಕೆಯರಿಮೆಯ ಮೊದಲ ಪಾಟ. ಹೀಗೇಕೆಂದರೆ ಆ ಪರಿಸರದ ನುಡಿಯಲ್ಲೇ ಮಕ್ಕಳು ’ಮಾಡುಗ’ರಾಗಿರಲು ಸಾದ್ಯ. ಪರಿಸರದ್ದಲ್ಲದ ನುಡಿಯಲ್ಲಿ ಮಕ್ಕಳು ’ಮಾಡಿಸಿಕೊಳ್ಳುಗ’ರಾಗಲು ಮಾತ್ರ ಸಾದ್ಯ. ’ಮಾಡುಗ’ರಾಗದ ಮಕ್ಕಳು ಕಲಿಕೆಯಲ್ಲಿ ಎಂದಿಗೂ ಮುಂದೆ ಬರಲಾರರು.
ಕನ್ನಡಿಗರಲ್ಲಿ ಉಳ್ಳವರ ’ಪರಿಸರದ ನುಡಿ’ ಇಂಗ್ಲೀಶು, ಮತ್ತು ಉಳ್ಳದವರ ’ಪರಿಸರದ ನುಡಿ’ ಕನ್ನಡ. ಉಳ್ಳವರು ಮತ್ತು ಉಳ್ಳದವರ ನಡುವೆ ಈ ರೀತಿಯ ಅಂತರವಿರುವಾಗ ಅವರವರ ಮಕ್ಕಳ ಕಲಿಕೆಯ ನುಡಿಗಳು ಬೇರೆಬೇರೆಯಾಗೇ ಇರಬೇಕು ಎನ್ನುವುದನ್ನು ಕಾಣುವುದು ಸುಲಬ.
ಪರಿಸರ ಬದಲಾಗದೆ ಉಳ್ಳವರನ್ನು ಕನ್ನಡದಲ್ಲಿ ಕಲಿಯಿರಿ ಎಂದು, ಮತ್ತು ಉಳ್ಳದವರನ್ನು ಇಂಗ್ಲೀಶಿನಲ್ಲಿ ಕಲಿಯಿರಿ ಎಂದು ಹುರಿದುಂಬಿಸುವುದು ಎರಡೂ ಕಲಿಕೆಯರಿಮೆಯ ದ್ರುಶ್ಟಿಯಿಂದ ಅರ್ತವಿಲ್ಲದ್ದು, ಮತ್ತು ಇಕ್ಕೆಲಗಳಲ್ಲೂ ಮಕ್ಕಳ ಬವಿಶ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವಂತದ್ದು. ಪರಿಸರವನ್ನು ಬದಲಾಯಿಸಿಕೊಳ್ಳುವುದೇ ಸರಿಯಾದ ವಿದಾನ.
ಉಳ್ಳವರ ಮತ್ತು ಉಳ್ಳದವರ ನಡುವಿನ ಈ ಕಂದರವು ಅಳಿಯಬೇಕಾದರೆ ಯಾರು ತಮ್ಮ ಪರಿಸರವನ್ನು ಬದಲಾಯಿಸಿಕೊಳ್ಳುವುದು ಸುಲಬ ಎನ್ನುವುದು ಪ್ರಶ್ನೆ. ಇಂಗ್ಲೀಶಿನ ಪರಿಸರದ ಉಳ್ಳವರಾದ ಕೆಲವರೋ, ಕನ್ನಡದ ಪರಿಸರದ ಉಳ್ಳದ ಹಲವರೋ? ಮೊನ್ನೆಮೊನ್ನೆ ಇಂಗ್ಲೀಶಿನಲ್ಲಿ ನುಡಿಯುವುದನ್ನು ಕಲಿತವರೋ, ಅದನ್ನು ಕಲಿಯದೆ ತಲೆತಲಾಂತರದಿಂದ ಕನ್ನಡವನ್ನೇ ಆಡುತ್ತಿರುವವರೋ? ಲೌಕಿಕ ಸಂಪತ್ತಿನ ರಾಶಿಯ ಮೇಲೆ ಕುಳಿತಿರುವವರೋ, ಬಡತನದಲ್ಲಿ ನರಳುತ್ತಿರುವವರೋ? ನಿಜಕ್ಕೂ ನೋಡಿದರೆ ಮೇಲಿನ ಎರಡು ಆಯ್ಕೆಗಳೂ ಆಗುಮಾಡಿಸಲು ಸುಲಬವಲ್ಲದವು. ಮೊದಲನೆಯವರಿಗೆ ತಮ್ಮ ಲೌಕಿಕ ಸುಕಗಳ ಹಿಡಿತ, ಎರಡನೆಯವರಿಗೆ ಲೌಕಿಕ ದುಕ್ಕಗಳ ಹಿಡಿತ.
ಇವೆಲ್ಲ ದಿಟಗಳ ನಡುವೆ, ಸಾವಿನ ಕೊನೆಯ ಗಳಿಗೆಯಲ್ಲಿ ಜೀವನವನ್ನು ಮೆಲುಕು ಹಾಕಿದಾಗ ’ನನ್ನ ಬಯಕೆಗಳ ಕಾರಣದಿಂದ ಪರಿಸರವನ್ನು ಸಾಕಶ್ಟು ಬದಲಾಯಿಸಿಕೊಳ್ಳಲು ಆಗಲಿಲ್ಲವಲ್ಲ, ಆ ಮೂಲಕ ಬಯಕೆಗಳ ಸರಪಳಿಗಳಿಂದ ಕಟ್ಟಲ್ಪಟ್ಟೆನಲ್ಲ!’ ಎಂದು ಗೋಳಿಡುವುದು ಬೇಡ ಎನಿಸುವವರು ಯಾರಿರುವರೋ ಅವರಿಂದಲೇ ಕರ್ನಾಟಕದ ಏಳಿಗೆ ಸಾದ್ಯ, ಬಾರತದ ಏಳಿಗೆ ಸಾದ್ಯ. ಅವರ ಆದಾರದ ಮೇಲೇ ಈ ಜಗತ್ತು ನಿಂತಿರುವುದು. ಅವರಲ್ಲಿ ಕೆಲವರು ತಮ್ಮ ಮಕ್ಕಳನ್ನು ಕನ್ನಡ ಮಾದ್ಯಮಕ್ಕೆ ಹಾಕಿದರೂ ಹಾಕಾರು – ಸಾಕಶ್ಟು ಬದಲಾವಣೆಗಳನ್ನು ತಮ್ಮ ಪರಿಸರದಲ್ಲಿ ಮಾಡಿಕೊಂಡ ಮೇಲೆ…
ಪರಿಸರದ ನುಡಿಯ ಮಹತ್ವದ ಕುರಿತು ಚನ್ನಾಗಿ ಬರೆದಿದ್ದೀರಿ..
ಧನ್ಯವಾದ!