ಸಂಜೆ ಏಳರ ಬಸ್ಸು…
-ಸೌಮ್ಯ ಭಾಗವತ್
ಕುಮಟಾದಿಂದ ಹತ್ತು ಕಿಲೋಮೀಟರುಗಳು ದೂರದಲ್ಲಿರುವ ನಮ್ಮೂರಿಗೆ, ದಿನಕ್ಕೆ ಹತ್ತು ಬಸ್ಸುಗಳಿವೆ. ಸುಮಾರಾಗಿ ಡಾಂಬರು ಇರುವ ರಸ್ತೆಯಲ್ಲಿ ಸುತ್ತಲಿನ ಹಸಿರು ಗದ್ದೆಗಳು, ಹಳ್ಳಗಳು, ಬೆಟ್ಟ ಗುಡ್ಡಗಳನ್ನು ನೋಡುತ್ತಾ ಬಸ್ಸಿನಲ್ಲಿ ಬರುವುದೇ ಒಂಥರದ ಖುಷಿ.
ಮಾಯಾನಗರಿ ಬೆಂಗಳೂರಿನ ಹಳೆಯ ಬಸ್ಸುಗಳೆಲ್ಲ (KA-01 registration) ನಮ್ಮಲ್ಲಿ ಹಳ್ಳಿಗಳಿಗೆ ಓಡಾಡುವ ಪುಷ್ಪಕ ವಿಮಾನಗಳು. ಹೆಚ್ಚಾಗಿ ಜನಸಾಮಾನ್ಯರ ಓಡಾಟ ಆ ಬಸ್ಸುಗಳ ಮೇಲೆ ಅವಲಂಬಿತ. ಇವಿಷ್ಟನ್ನು ನನ್ನ ಬರಹದ ವಿಷಯ ಎನ್ನಬಹುದಾದರೂ. ನನ್ನ ಜನ್ಮಸಿದ್ಧ ಹಕ್ಕನ್ನು ಚಲಾಯಿಸದೇ ಬಹಳ ದಿನಗಳೇ ಕಳೆದವು. (ತಲೆ ತಿನ್ನುವುದು ನನ್ನ ಆ ಜನ್ಮ ಸಿದ್ಧ ಹಕ್ಕು ಅದನ್ನು ನಾನು ಪಡೆದೆ ತೀರುತ್ತೇನೆ.! ಎಂದು ನಾನು ಈ ಭೂಮಿಗೆ ಬಂದಾಗಲೇ ನಿರ್ಧರಿಸಿ ಆಗಿತ್ತು). ವಿಷಯದ ರೈಲು ಅಲ್ಲಲ್ಲಿ ಹಳಿ ತಪ್ಪಿದರೂ ಸರಿಪಡಿಸಿ ಓಡಿಸಿದ್ದೇನೆ ನೀವು ಓದಿ.
ನಾನು ಬಸ್ಸಿನಲ್ಲಿ ಓಡಾಡುವುದನ್ನೇ ಇಷ್ಟ ಪಡುತ್ತೇನೆ.ಮಂಗಳೂರಿನಲ್ಲಿ ಗಾಜುಗಳಿಲ್ಲದ ಕಿಟಕಿಗಳ ಬಸ್ಸಿನಲ್ಲಿ ಕೂತು,ಒಂದುಕಾಲದಲ್ಲಿ ಬಾಬ್ ಇದ್ದ ಕೂದಲನ್ನು ಜುಟ್ಟಿಗೆ ಸಿಕ್ಕಿಸಲು ಹರಹರಿ ಸಾಹಸ ಮಾಡುತ್ತಾ.ಕೊನೆಗೆ ‘ಉಪೇಂದ್ರ’ನಿಗೆ ನೀನೇ ಸ್ಫೂರ್ತಿಯೋ ಎಂದೂ ಕೇಳಿಸಿಕೊಂಡಿದ್ದೇನೆ ಬಿಡಿ.
ಆದರೂ ಈ ಬಸ್ ಪಯಣದ ಮಜವೇ ಬೇರೆ. ಹಿಂದೆ ಚಿಕ್ಕವಳಿರುವಾಗ ಗಿಡ ಮರಗಳೇ ಓಡುತ್ತವೆ ಎಂದೂ,ರಸ್ತೆಗಳೆಲ್ಲಹಿಂದೆ ಗುಡ್ಡದಂತೆ ರಾಶಿ ಬೀಳುತ್ತವೆ ಎಂದೂ ಹೊಸ ಒಂದು ಪ್ರಮೇಯವನ್ನೂ ಹೊಸೆದಿದ್ದೆ. ಮೊನ್ನೆ ಮಂಗಳೂರಿನಿಂದ ಮತ್ಸ್ಯಗಂಧ ರೈಲಿಗೆ ಬಂದವಳು, ಸೀದಾ ಬಸ್ ನಿಲ್ದಾಣಕ್ಕೆ ಬಂದು ನಮ್ಮೂರಿಗೆ ಕೊನೆಯ ಬಸ್ಸಾದ ಸಂಜೆ ಏಳರ ಬಸ್ಸಿಗೆ ಹತ್ತಿದ್ದೆ. ಈ ಹಳ್ಳಿಗಳ ಬಸ್ಸಿನಲ್ಲಿ ಓಡಾಡುವ ಮಜವೇ ಬೇರೆ. ಅದರಲ್ಲೂ ಹೊತ್ತು ಮುಳುಗಿದ ಮೇಲಿನ ಬಸ್ಸಿನ ಗಮ್ಮತ್ತೆ ಬೇರೆ ಬಿಡಿ. ಮಂಗಳೂರಿನ ಗಾಜುಗಳೇ ಇಲ್ಲದ ಕಿಟಕಿಗಳ ಬಸ್ಸುಗಳಿಗಿಂತ ನಮ್ಮೂರಿನ ಬಸ್ಸುಗಳು ಶ್ರೇಷ್ಠವೆನಿಸುತ್ತವೆ. ‘ಹುಟ್ಟೂರು ಸ್ವರ್ಗಕ್ಕಿಂತ ಮಿಗಿಲಾದರೆ ಹುಟ್ಟೂರಿಗೆ ಓಡಾಡುವ ಬಸ್ಸುಗಳು king fisher ವಿಮಾನಗಳಿಗಿಂತಲೂ ಮಿಗಿಲು’.!
ಮೇಲೆ ಹೇಳಿದಂತೆ, ನಮ್ಮೂರಿಗೆ ಇದೇ ಕಡೆಯ ಬಸ್ಸು. ಮನೆಯ ಸೇರಬೇಕೆಂದವರೆಲ್ಲ, ರಾತ್ರಿ ಮನೆಯಲ್ಲೇ ಮಲಗಬೇಕೆಂದವರೆಲ್ಲ, ಇದರಲ್ಲಿ ಬರುತ್ತಾರೆ. ಯಾಕೆ ಹೀಗಂದೆ ಎಂದು ಗೊತ್ತಯ್ತಲ್ವಾ ? ಕೆಲವರಿಗೆ ರಸ್ತೆಯ ಪಕ್ಕದ ಗಟಾರಗಳು ಮನೆಯ ಮಲಗುವ ಕೋಣೆಯಂತೆ ಕಾಣುವಂತೆ ಮಾಡಿ ಅಲ್ಲಿ ಮಲಗಿಸಿ ಬಿಡುತ್ತಾನೆ ಆ ‘ಪರಮಾತ್ಮ’..!
ಕಲ್ಲು ಕ್ವಾರೆಯ ಕೆಲಸಕ್ಕೆ,ಟಿಪ್ಪರು, ಲಾರಿಗಳಿಗೆ ಕೆಲಸಕ್ಕೆ ಹೋಗಿ, ಮೈಕೈ ನೋವಿಗೆ ದಿವ್ಯ ಔಷಧವೆಂದು ‘ಪರಮಾತ್ಮ’ನನ್ನು ಹೊಟ್ಟೆಗೆ ಇಳಿಸಿಕೊಂಡು ನಶೆಯಲ್ಲಿದ್ದವರೂ, ದೂರದ ಗೋಕರ್ಣ, ಕಾರವಾರ, ಭಟ್ಕಳದಲ್ಲಿ ಕೆಲಸ ಮಾಡುವವರೂ, ಮಂಗಳೂರಿನಿಂದ ಸಂಜೆ ಮತ್ಸ್ಯಗಂಧ ಟ್ರೈನ್ ಗೆ ಬಂದು ಊರಿಗೆ ಬರಲು ಬಸ್ಸು ಹಿಡಿದ ನನ್ನಂಥವರೂ, ಟ್ಯೂಶನ್ ಮುಗಿಸಿ ಮನೆಗೆ ಮರಳುತ್ತಿದ್ದ ಮಕ್ಕಳೂ, ಖಾಲಿಯಾದ ಮೀನು ಬುಟ್ಟಿಯ ಹಿಡಿದು ಮನೆಗೆ ಹೊರಟಿದ್ದ ‘ಮತ್ಸ್ಯಗಂಧಿನಿ’ಯರು,’ಸಂಜೆ ಏಳರ ಬಸ್ಸಿನ ಖಾಯಂ ಪ್ರಯಾಣಿಕರು. ಕಂಡಕ್ಟರುಗಳೆಲ್ಲ ಆಚೀಚೆ ಮನೆಯವರಂತೆ ಪರಿಚಿತರು. (ನೆನಪಿಡಿ ಬೆಂಗಳೂರಿನ ಆಚೀಚೆ ಮನೆಯಲ್ಲ).
ಬಲಗಾಲನ್ನೋ, ಎಡಗಾಲನ್ನೋ ಮೊದಲಿಟ್ಟು ಬಸ್ಸೇರಿದ್ದೂ ಆಯಿತು ನಾನು. ಎಂದೂ ಮಾತನಾಡಿಸದ ‘ಗಾಳಿ ಮನೆ’ ಮಾಚ. “ತಂಗೀ ಈಗ ಬಂದ್ಯೇ?” ಅಂದಾಗಲೇ ನನಗೆ ಅವನಲ್ಲಿ ‘ಪರಮಾತ್ಮ’ನ ಇರುವಿಕೆ ಅರಿವಾದದ್ದು. ಕಿಟಕಿ ಪಕ್ಕದ ಸೀಟು ಹಿಡಿದು ಒಮ್ಮೆ ಆಗಸವ ದಿಟ್ಟಿಸಿದೆ.ಯಾರೋ ‘ಕಾಮತ’ರ ಅಂಗಡಿಯಿಂದ ತಂದಿದ್ದ ಚಟ್ಟ೦ಬೊಡೆಯ ಕಂಪು ನನಗೆ ಹಸಿವಾದದ್ದನ್ನು ಮತ್ತೊಮ್ಮೆ ನೆನಪಿಸಿತ್ತು. ಕಲ್ಲು ಕ್ವಾರಿಯವರ ಬೆವರಿನ ವಾಸನೆಯೊಂದಿಗೆ ಆ ಸಾರಾಯಿಯ ವಾಸನೆಯೂ ಸೇರಿ ಹಬ್ಬುವ ಅತಿ ವಿಶಿಷ್ಟವಾದ ಕಮರೊಂದು ಸಂಜೆ ಏಳರ ಬಸ್ಸಿನ ಅತೀ ಮುಖ್ಯವಾದ ಲಕ್ಷಣಗಳಲ್ಲೊಂದು.
ಬಸ್ಸು ಬಿಡಲು ಇನ್ನೂ ಹತ್ತು ನಿಮಿಷಗಳಿದ್ದವು. ಹಾಗೆ ಬಸ್ಸಿನ ಸುತ್ತಲೆಲ್ಲ ಕಣ್ಣು ಹಾಯಿಸಿದೆ.:ನಾಲ್ಕು ಗಾಲಿಗಳ ಮೇಲೆ ತಗಡಿನ ಹೊದಿಕೆ ಹಾಕಿದಂತಹ ಬಸ್ಸು. ನಿಲ್ದಾಣದಿಂದ ಬಸ್ಸು ಮುಂದೆ ಚಲಿಸಬೇಕಾದರೆ ನಾಲ್ಕು ಜನ ಪ್ರಯಾಣಿಕರು ಕೆಳಗಿಳಿದು ಬಸ್ಸನ್ನು ನೂಕಬೇಕು. ಬಸ್ ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸಬೇಕಾದರೆ ಗಾಲಿಗೆ ಕಲ್ಲನ್ನು ಕೊಟ್ಟು ನಿಲ್ಲಿಸಬೇಕು. ಇಲ್ಲದಿದ್ದರೆ ನಿಲ್ದಾಣದ ಮುಂದಿನ ಪಾಗಾರ (ಕಂಪೌಂಡ್)ಕ್ಕೆ ಹೋಗಿ ಬಸ್ಸು ಢಿಕ್ಕಿ ಹೊಡೆದುಕೊಳ್ಳುತ್ತದೆ.(ಹೀಗೆ ಹಲವಾರು ಸಲ ನಡೆದು ಕುಮಟೆಯ ಬಸ್ ನಿಲ್ದಾಣದ ಎದುರುಗಡೆ ಕಂಪೌ೦ಡೇ ಇಲ್ಲ .!)
ಬಸ್ಸಿನ ಒಳಗಡೆಯ ದೃಶ್ಯ ಅಪರೂಪವಾದದ್ದು :
ನಿನ್ನೆ ಸಂತೆಯ ತರಕಾರಿ ಚೀಲದಿಂದ ತಪ್ಪಿ ಬಿದ್ದ ಅರೆ ಬಾಡಿದ ಬೀನ್ಸ್. ಅದ್ಯಾರದೋ ತಲೆಯಿಂದ ಜಾರಿದ ಮುದುಡಿರುವ ಕೆಂಪು ಗುಲಾಬಿ. ಯಾರೋ ಮರೆತು ಹೋದ ಕರವಸ್ತ್ರ. ಪುಟ್ಟ ಪಾಪುವಿನ ಬಲಗಾಲಿನ ಚಪ್ಪಲಿ( ಗಡಿಬಿಡಿಯಲ್ಲಿ ಇಳಿಯುವಾಗ ಬಿದ್ದಿರಬೇಕು). ಒಲ್ಲದ ಮನಸ್ಸಿನಿಂದ ಮಾಸ್ತರರಿಗೆ ಜಾಗ ಬಿಟ್ಟು ಕೊಡುತ್ತಿದ್ದ, ಹುಡುಗಿಯ ಪಕ್ಕದ ಸೀಟಿನಲ್ಲಿ ಕುಳಿತ ಕಾಲೇಜು ಹುಡುಗ. SMS ಲೋಕದಲ್ಲೇ ಕಳೆದು ಹೋಗಿದ್ದ, ಮುಗುಳು ನಗುತ್ತಿದ್ದ ನೀಳ ಜಡೆಯ ಹುಡುಗಿ. ತೂಕಡಿಸುತ್ತಿದ್ದ ಒಂದೆರಡು ಜನರು. ಹೊಸ ಸಿನಿಮಾ ನೋಡಿ ಬಂದ ಹುಡುಗರಿಬ್ಬರು ಅದರ ಕ್ಲೈಮ್ಯಾಕ್ಸನ್ನು ತಮ್ಮದೇ ಆದ ರೀತಿಯಲ್ಲಿ ಕೊಡುತ್ತಿದ್ದರು. ಹಿಂದಿನ ಸೀಟಿನಲ್ಲಿ ತಮ್ಮದೇ ಲೋಕದಲ್ಲಿ ಮುಳುಗಿದ್ದ ಜೋಡಿ ಹಕ್ಕಿಗಳು.
ಬಸ್ಸಿನ ಸೀಟುಗಳ0ತೂ ಯಾವುದೋ ಎಕ್ಸಿಬಿಶನ್ ಗಿಂತ ಕಡಿಮ ಏನಿರಲಿಲ್ಲ :ಎಲೆ ಅಡಿಕೆ ಹಾಕುವಾಗ ಹೆಚ್ಚಾದ ಸುಣ್ಣವನ್ನು ಅಲ್ಲೇ ಸೀಟಿಗೆ ಒರೆಸಿರುವ ಯಾರದ್ದೋ ಬೆರಳ ಗುರುತು . ಒಂದಿಷ್ಟು ಜನರ ಪ್ರೇಮದ ಕುರುಹುಗಳಿಗೆ ಅಮಾಯಕವಾಗಿ ಬಲಿಯಾದ ಸೀಟಿನ ಹಿಂಭಾಗ. I love you ‘ಒಂದು ಹುಡುಗಿಯ ಹೆಸರು’. ಮತ್ತೆಲ್ಲೋ ಅದಕ್ಕೆ ಉತ್ತರ. ಸೀಟುಗಳ ಮೇಲೆ ಬರೆದ ಅದೆಷ್ಟೋ ಫೋನ್ ನಂಬರುಗಳು. ಹೃದಯ ಚಿನ್ಹೆಯ(heart shape) ಒಳಗೆ ‘ಗೋಪು weds ಪ್ರೀತಿ’ ( ಸಂಜು weds ಗೀತಾ ಫಿಲಂ ಪ್ರಭಾವ ಅಂದುಕೊಂಡೆ), ಒಟ್ಟಾರೆ ಹೇಳುವುದಾದರೆ ಸೀಟುಗಳಲ್ಲಿ ಅಕ್ಷರಗಳ ಜಾತ್ರೆ.!
ಕವಳದ ರಸವನ್ನು ಪಿಚಕಾಯಿಸಿ ಅರೆಗೆಂಪು ಬಣ್ಣಕ್ಕೆ ತಿರುಗಿದ ಕಿಟಕಿಯ ಸರಳುಗಳು. ಬಸ್ಸು ಓಡುವ ಸ್ಪೀಡಿಗೆ Tap dance ಮಾಡುವ ಜೊತೆಗಾರನನ್ನು ಕಳೆದುಕೊಂಡ ಕಿಟಕಿಯ ಗಾಜುಗಳು.
ಈ ಹಳ್ಳಿಯ ಬಸ್ಸಿನಲ್ಲಿಯ ಸಂಭಾಷಣೆಗಳಲ್ಲೂ ಸ್ವಾರಸ್ಯವಿರುತ್ತದೆ, ಜೀವನ ಪ್ರೀತಿ ಇರುತ್ತದೆ. “ಹಾಲು ಕರದು ಆಯ್ದಿಲ್ಯೇ, ದನ ಕೊಟ್ಗೆಗೆ ಬಂದಿಕಿದೋ ಏನೇನೋ” “ನಮ್ಮನೆ ದನ- ಕರ ಎಲ್ಲ ಕೊಟ್ಟಿಕಿದೋ ನೋಡು ಪುಕ್ಕಟ್ಟೆಯ. ಸಾಕುಲೇ ಆಗ್ತಿಲ್ಯೇ, ದಾಣಿ ತುಟ್ಟಿ ಆಗೊಯ್ದು, ಈಗ ಪೆಕೆಟು ಹಾಲೇಯ ಗತಿ .” “ನಂಗೋನು ಹೀಂಗೆ ಮಾಡಕಾತು ಈಗ, ಆದ್ರೆ ಪ್ರೀತಿಂದಾ ಸಾಕಂಡದ್ದಲೇ ಕೊಡೂಲೇ ಮನಸು ಬತ್ತಿಲ್ಲೆ” ಹೀಗೆ ಸಾಗಿತ್ತು ಊರಿನ ‘ಸುಬ್ಬತ್ತೆ’ ಹಾಗೂ ‘ಗಂಗಕ್ಕನ’ ಮಾತುಗಳು.
“ಓಪನ್ 08ರ, ಕ್ಲೋಜು(close) ಎಟ್ಟೆನ. ನಾನು ನೋಡ್ರಾ ಮೂರು ನಮನಿ ನಂಬರಿಗೆ ಹತ್ತತ್ತು ಇಟ್ಟು ಬಂದಾನೆ” ‘ಬೋಯಿ ರಾಮ’ ‘ಓಸೀ’ ನಂಬರುಗಳ ಬಗ್ಗೆ ತಲೆ ಕೆಡಿಸಿಕೊಂಡು ಹೇಳುತ್ತಿದ್ದರೆ. ಸುಬ್ರಾಯ ಹೆಗಡೇರು ಅಡಿಕೆ ಮಾರ್ಕೆಟ್ಟು ಚಿಗುರಿದ್ದರಿಂದಲೋ ಏನೋ ಬಾಯಲ್ಲಿದ್ದ ರಸಗವಳವನ್ನೆಲ್ಲ ಕಿಟಕಿಯಾಚೆ ಪಿಚಕಾಯಿಸಿ, ಇನ್ನೊಂದು ಎಲೆಯನ್ನು ತಮ್ಮ ಶತಮಾನಗಳಿಂದ ನೀರು ಕಾಣದಂತಿದ್ದ ‘ಬಿಳಿ’ ಲುಂಗಿಗೆ ಒರೆಸುತ್ತಾ,. “ಅಡಕಿಗೆ ಹನ್ನೊಂದು ಸಾವ್ರ ಆಗದ್ಯಂತೋ ರಾಮ, ನಿಂದು ಎಷ್ಟದೇ ?” ಎಂದು ಕೇಳುತ್ತಿದ್ದರು.
ಹಿಂದೆ ಅದ್ಯಾರದ್ದೋ ಮೂವರ cell phone ಗಳಲ್ಲಿ ಒಂದೊದ್ನು ಹಾಡು.ಒಂದರಲ್ಲಿ ‘ನಿನ್ನ ಪೂಜೆಗೆ ಬಂದೆ ಮಾದೇಶ್ವರ …. ‘ಎಂದು ರಘು ದೀಕ್ಷಿತ್ ಹಾಡುತ್ತಿದ್ದರೆ, ಇನ್ನೊಂದರಲ್ಲಿ “ನೂರು ಜನ್ಮಕೂ “ಎಂದು ರಾಜೇಶ್ ಹಾಡುತ್ತಿದ್ದ”. ಮತ್ತೊಂದರಲ್ಲಿ “twist “ಹಾಡು. ಎಲ್ಲ ಹಾಡುಗಳೂ ಗಿರ್ಮಿಟ್ ಆಗಿ, ಅದರ side effect ಎಂಬಂತೆ ನನಗೆ ಸಣ್ಣಗೆ ತಲೆ ನೋವು ಬಂದಿತ್ತು. !
ಕೊರಳಲ್ಲೆಲ್ಲ ಮಣಿ ಸರಗಳ ತುಂಬಿಕೊಂಡ ಹಾಲಕ್ಕಿ ಅಜ್ಜಿಯೊಬ್ಬಳು lady conductor ಜೊತೆ “ಎಂಟು ರುಪಾಯ್ರ? ಆಗಲ್ರಾ ಐದು ರುಪಾಯಿ ಮಾಡ್ಕಳ್ರ” ಎಂದು KSRTC ಬಸ್ಸಿನಲ್ಲಿ ಟಿಕೆಟ್ ದರಕ್ಕೆ ಚೌಕಾಶಿ ನಡೆಸಿದ್ದಳು.
ತರಕಾರಿ,ಮೀನು ಮಾರಾಟವನ್ನೆಲ್ಲ ಮುಗಿಸಿ ಮನೆ ಕಡೆಗೆ ಹೆಜ್ಜೆ ಹಾಕಿದ್ದ ಹೆಂಗಸರು,ಸಂಚಿಯೊಳಗಿನ ದುಡ್ಡನ್ನು ಎಣಿಸುತ್ತಿದ್ದರು.ನಾಳೆ ಬೆಳಗಾದರೆ ಮತ್ತದೇ ಜೀವನ ಅವರದ್ದು.
“ಎಲ್ಲಿಂದ ತಂದದ್ದು? ಎಷ್ಟು ಕೊಟ್ಟೆ ?” ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಹೊಸ ಚೂಡಿದಾರದ ಬಟ್ಟೆಯನ್ನು ತಂದ ಹುಡುಗಿ.
‘ಹಿರಿಯ ನಾಗರಿಕರಿಗಾಗಿ’ ಜಾಗದಲ್ಲಿ ಕೂತಿದ್ದ ದಪ್ಪ ಮೀಸೆಯವ. ಮಹಿಳೆಯರಿಗಾಗಿ ಎಂಬಲ್ಲೆಲ್ಲ ಕುಳಿತ ಗಂಡಸರು. (ಅಲ್ಲ, ಅದ್ಯಾಕೆ ಪುರುಷರಿಗಾಗಿ ಎಂಬ ಸೀಟುಗಲಿಲ್ಲ? ನೋಡಿ ಇದು ತಲೆ ಕೆಡಿಸಿಕೊಳ್ಳುವ ವಿಚಾರವೇ !)
ಒಳಗೆ ಛತ್ರಿಯನ್ನು ಬಿಡಿಸಿ ಕೂರುವಂತೆ ಮಾಡುವ ಈ ಬಸ್ಸಿನ ಮಳೆಗಾಲದ ದಿನಗಳನ್ನು ಮನಸ್ಸು ಮೆಲುಕು ಹಾಕುತ್ತಿದ್ದಂತೆ, ಕಂಡಕ್ಟರಿನ “ಪಿರ್ರ್” ಎಂಬ ಸೀಟಿಯ ಶಬ್ದ ಕೇಳಿಬಂತು. ಸೀಟಿಯೊಳಗಿನ ಮಣಿ ಕುಣಿದಾಡುವಂತೆ ಊದಿದುದನ್ನು ಕೇಳಿಯೇ ‘ಲೇಡಿ ಕಂಡಕ್ಟರ್’ ಎಂದು ಮನಸ್ಸು ನಿರ್ಧರಿಸಿ ಬಿಟ್ಟಿತ್ತು.
ನನ್ನ ವಿಚಾರ ಸರಣಿಗೆ ಕೊನೆ ಬಿದ್ದಿತು.!





KALEGU JIVANADA BUS PRAYANAVANNU NIMMA LEKANA NENAPISUTTIDE
lady conductor…. ಈ ಹೆಣ್ಣು ಮಗಳು ಒಂದು ಸಂಸಾರದ ಕಂಡಕ್ಟರ್ ಕೂಡ ಹೌದು. ಚೆನ್ನಾಗಿದೆ ಕತೆಯ ನಿರೂಪಣೆ.