ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 29, 2011

23

ಸಂಪಾದಕೀಯ ಅನ್ನೋ ಮೊಟ್ಟೆಯ ಮೇಲೆ ಒಂದು ಪ್ರೀತಿಯ ಕುಟುಕು…

‍ನಿಲುಮೆ ಮೂಲಕ

– ಮಹೇಶ್ ಪ್ರಸಾದ್ ನೀರ್ಕಜೆ

ಸಂಪಾದಕೀಯದಲ್ಲಿ ಪ್ರಕಟವಾದ ಬ್ಲಾಗ್ ಬರಹಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ ಇದು.

ಸಾಯಿ ಬಾಬಾರ ಸುತ್ತ ಇರುವ ಪವಾಡಗಳ ಬಗೆಗಿನ ವಿವಾದಗಳ ಬಗ್ಗೆ ಸಂಪಾದಕೀಯ ಈ ಹಿಂದೆ ಒಂದೆರಡು ಲೇಖನಗಳಲ್ಲಿ ಬರೆದಿತ್ತು (ಅದರಲ್ಲಿ ಒಂದು ಸನ್ಮಾರ್ಗ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯ ಬರಹ). ಅವುಗಳಲ್ಲೊಂದು ಲೇಖನಕ್ಕೆ ಬಂದ ಪ್ರತಿಕ್ರಿಯೆಯೊಂದಕ್ಕೆ  ಪ್ರತಿಯಾಗಿ ಸಂಪಾದಕೀಯ ಬರೆದ ಸ್ಪಷ್ಟೀಕರಣ ರೂಪದ ಬರಹವೇ ನಾನು ಮೇಲೆ ನೀಡಿದ ಬ್ಲಾಗ್ ಬರಹ. ಈ ಬ್ಲಾಗ್ ಬರಹದ ಸಾರಾಂಶ ಏನೆಂದರೆ ಸಾಯಿ ಬಾಬಾ ಮಾಡಿದ ಸಮಾಜ ಮುಖೀ ಕೆಲಸಗಳ ಬಗ್ಗೆ ಮೆಚ್ಚುಗೆಯಿದ್ದರೂ ಮೂಲತಹ ಬಾಬಾ ನಡೆದ ದಾರಿ ಪವಾಡಗಳನ್ನೊಳಗೊಂಡ ದಾರಿಯಾಗಿದ್ದು ಅದು ಜನರನ್ನು ದಿಕ್ಕುತಪ್ಪಿಸುವ, ಮೌಢ್ಯತೆಗೆ ನೂಕುವ ಮೋಸದ, ಸುಳ್ಳಿನ ದಾರಿಯಾಗಿದೆ, ಆದ್ದರಿಂದ ನಮಗೆ ಅಂತಹ ಸುಳ್ಳಿನ ದಾರಿ ಬೇಕೋ ಅಥವಾ ಬುಧ್ಧ ಹಾಕಿಕೊಟ್ಟ ಸತ್ಯದ ದಾರಿ ಬೇಕೋ ಎಂಬ ಜಿಜ್ಞಾಸೆ. ಕೊನೆಯಲ್ಲಿ ಸಂಪಾದಕೀಯ ಹೀಗೆ ಹೇಳುತ್ತದೆ – “ಬುದ್ಧನ ಸತ್ಯ ಮಾರ್ಗವೇ ನಿಜವಾದ ಬದುಕಿನ ತಳಪಾಯ. ಅದರ ಮೇಲೇ ನಮ್ಮ ಬದುಕು ಕಟ್ಟಿಕೊಳ್ಳುವಂತಾಗಬೇಕು” ಮತ್ತು “ನಾವು ಸತ್ಯದ ಮಾರ್ಗದಲ್ಲಿ ಊರ್ಧ್ವಮುಖಿಗಳಾಗಬೇಕೇ ಹೊರತು ಸುಳ್ಳಿನ ಮಾರ್ಗದಲ್ಲಿ ಅಧೋಮುಖಿಗಳಾಗಬಾರದು ಅಲ್ಲವೇ?”. ಇದರ ಬಗ್ಗೆ ಒಂದು ಚಿಂತನೆ ನಡೆಸುವ ಉದ್ದೇಶ ಈ ಲೇಖನದ್ದು.

ನಾನು ಮೊದಲೇ ಹೇಳಿಬಿಡುತ್ತೇನೆ – ಈ ಬ್ಲಾಗ್ ಬರಹದಲ್ಲಿರುವ ವಿಷಯಗಳಿಗೆ ನನ್ನ ಪೂರ್ಣ ಸಮ್ಮತಿಯಿದೆ. ನನ್ನ ಸಮ್ಮತಿಯಿರುವುದು ಏನೋ ಒಂದು ದೊಡ್ಡ ವಿಷಯ ಅಂತ ಹೇಳುತ್ತಿಲ್ಲ, ಅದಕ್ಕಿಂತ ಮೇಲಾಗಿ, ಈ ಬರಹದಲ್ಲಿ ಸಾಮಾಜಿಕ ಕಾಳಜಿ ಎದ್ದು ಕಾಣುತ್ತದೆ. ಆಧ್ಯಾತ್ಮ ಮಾರಾಟದ ಸರಕಲ್ಲ ಎನ್ನುವ ಖಡಾಖಂಡಿತ ಹೇಳಿಕೆಯಿದೆ. ಪವಾಡ ನಡೆಯುವುದಿದ್ದರೆ ದುರ್ಬಲ ಮನಸ್ಸುಗಳಲ್ಲಿ ನಡೆದು ಅವರ ಅಂತ:ಶಕ್ತಿಯನ್ನು ಜಾಗೃತಗೊಳಿಸಬೇಕಾಗುತ್ತದೆ ಎನ್ನುವ ಆಶಯವಿದೆ. ಆ ಮಟ್ಟಿಗೆ ನಿಜಕ್ಕೂ ಮೆಚ್ಚಲೇಬೇಕಾದ ಲೇಖನ. ಅದಕ್ಕಾಗಿ  ಸಂಪಾದಕೀಯಕ್ಕೆ. ನನ್ನ ಅಭಿನಂದನೆಗಳು. ಇದಲ್ಲದೇ ಈ ಮೊದಲು ನರೇಂದ್ರ ಶರ್ಮರಂಥಾ ಧೂರ್ತರಿಗೆ ಚಾಟಿಯೇಟು ಬೀಸಿದವರಲ್ಲಿ ಮುಂಚೂಣಿಯಲ್ಲಿದ್ದಿದ್ದು ಸಂಪಾದಕೀಯ. ಇದೂ ಕೂಡ ಅಭಿನಂದನೀಯವೇ ಸರಿ.

ಇನ್ನು ವಿಷಯಕ್ಕೆ ಬಂದುಬಿಡುತ್ತೇನೆ. ನನಗೆ ಲೇಖನದ ವಿಷಯದಲ್ಲಿರುವ ಸಹಮತ ಲೇಖನದ ಕೊನೆಯಲ್ಲಿ ಅದು ಕೊಡುವ ಸಂದೇಶದ ಮೇಲೆ ಇಲ್ಲ. ನನ್ನ ಸಮಸ್ಯೆಯಿರುವುದು ಸಾಯಿ ಬಾಬಾ ಪವಾಡ ಮಾಡಿದ್ದರು ಅನ್ನೋ ಒಂದೇ ಕಾರಣಕ್ಕಾಗಿ ಅವರ ದಾರಿ ಸತ್ಯದ ದಾರಿಯೇ ಅಲ್ಲ ಎಂದಿರುವುದು. ಕಾರಣ ಇಷ್ಟೆ. ಯಾವ ಮಹಾನುಭಾವನೂ ಪರಿಪೂರ್ಣ ಅಲ್ಲ. ಪರಿಪೂರ್ಣ ಅಲ್ಲದೇ ಇರುವುದೇ ಪ್ರಕೃತಿ ನಿಯಮವೋ ಎಂಬಂತೆ ನೀವು ಯಾವುದೇ ಮಹಾ ಪುರುಷರನ್ನು ತೆಗೆದುಕೊಳ್ಳಿ. ಅವರ ಮೇಲೆ ಒಂದಲ್ಲಾ ಒಂದು ಆರೋಪ ಇದ್ದೇ ಇರುತ್ತದೆ. ಕೃಷ್ಣನೇ‌ ಗೋಪಿಕೆಯರ ಬಟ್ಟೆ ಕದ್ದ, ಹದಿನಾರು ಸಾವಿರ ಲಲನೆಯರೊಡನೆ ಸರಸವಾಡಿದ, ಶ್ಯಮಂತಕಮಣಿಯನು ಕದ್ದ ಆರೋಪಕ್ಕೆ ಒಳಗಾಗಿದ್ದನು. ಭಗವಂತನಾದವನು ಮಾಡುವ ಕೆಲಸವೇ‌ ಇದು? ಸಾಲದ್ದಕ್ಕೆ ಭಗವದ್ಗೀತೆಯಲ್ಲಿ ತಾನೇ ಭಗವಂತ ಎಂಬಂತೆ ಹೇಳಿದ್ದಾನೆ. ಅಂದರೆ ತಾನೇ ಭಗವಂತ ಎಂದು ಹೇಳಿಕೊಳ್ಳುವ ಕೃಷ್ಣನಿಗೆ ಅಹಂಕಾರ ಎಷ್ಟಿರಬೇಡ! ಇಂಥಾ ಅಹಂಕಾರವಂತನಾದವನು ದೇವರಾಗಬಲ್ಲನೇ?‌ಕೃಷ್ಣನಿಗೂ ಸಾಯಿ ಬಾಬನಿಗೂ ಎಲ್ಲಿಯ ಹೋಲಿಕೆ ಎಂದು ಕೇಳಬೇಡಿ. ಕೃಷ್ಣನಂಥಾ ದೇವರೇ ಆರೋಪಕ್ಕೊಳಗಾಗಿದ್ದರೆ ಸಾಯಿಬಾಬಾರಂಥವರ ಕಥೆ ಏನು ಅಂತ ನಾನು ಕೇಳುತ್ತೇನೆ. ಈ ಎಲ್ಲ ಆರೋಪಗಳನ್ನು ನಿರಾಕರಿಸದೆಯೇ, ನಾವು ಕೃಷ್ಣನನ್ನು ಮಹಾಪುರುಷ ಎಂದು ಗೌರವಿಸುವುದಿಲ್ಲವೇ? ಕೃಷ್ಣ ಸುಳ್ಳಿನ ದಾರಿಯಲ್ಲಿದ್ದನು ಎಂದು ನಮಗೆಂದಾದರೂ ಅನಿಸಿದೆಯೇ? ಕೃಷ್ಣ ಮಾತ್ರ ಏಕೆ, ರಾಮನನ್ನು ತೆಗೆದುಕೊಂಡರೂ ಆರೋಪ ಆತನನ್ನೂ ಬಿಟ್ಟಿಲ್ಲ. ಸೀತೆಯನ್ನು ಅಗ್ನಿಪರೀಕ್ಷೆಗೊಳಪಡಿಸಿದ ರಾಮನ ನಿರ್ಧಾರವನ್ನು ಕಟುವಾಗಿ ಟೀಕಿಸಿದವರೂ ಆತನನ್ನು ಸುಳ್ಳಿನ ದಾರಿಯಲ್ಲಿ ನಡೆದವರೆಂದು ಹೇಳಿಲ್ಲ.

ದೇವರುಗಳು, ಪುರಾಣಗಳ ಬೇಡವಾದರೆ ಸಂಪಾದಕೀಯ ಉಧ್ಧರಿಸಿದ ಬುಧ್ಧನ ವಿಚಾರಕ್ಕೆ ಬರೋಣ. “ಬುಧ್ಧನ ಸತ್ಯ ಮಾರ್ಗವೇ ನಿಜವಾದ ಬದುಕಿನ ತಳಪಾಯ” ಅಂದಿದೆ ಸಂಪಾದಕೀಯ. ಹಾಗಿದ್ದರೆ ಬುಧ್ಧ ತಪ್ಪೇ ಮಾಡಿಲ್ಲವೇ? ಹಾಗೇನಿಲ್ಲ. ಬುಧ್ಧನ ಮೇಲೂ ಭಾರತದ ಸೈನಿಕ ಶಕ್ತಿಯನ್ನು ದುರ್ಬಲಗೊಳಿಸಿದ ಆರೋಪಗಳಿವೆ. ಸಂಪಾದಕೀಯ ಯಾವಾಗಲೂ ಕೋಟ್ ಮಾಡುವ ಸ್ವಾಮಿ ವಿವೇಕಾನಂದರೇ ಸ್ವತ: ಬುಧ್ಧನ ಬಗ್ಗೆ, ಬೌಧ್ಧ ಧರ್ಮದ ಬಗ್ಗೆ ಏನು ಹೇಳಿದ್ದಾರೆ ಅಂತ ನೋಡಿ :

ಇಂದು ವಿಶೇಷವಾಗಿ ದಕ್ಷಿಣ ದೇಶದಲ್ಲಿ ಬೌಧ್ಧಧರ್ಮ ಮತ್ತು ಬೌಧ್ಧರ ಅಜ್ಞಾತವಾದ ಇವುಗಳ ವಿಷಯ ಮಾತನಾಡುವುದು ಒಂದು ಫ್ಯಾಷನ್ ಆಗಿದೆ. ಇಂದು ನಮ್ಮಲ್ಲಿರುವ ಅವನತಿಗೆ ಮುಕ್ಕಾಲು ಪಾಲು ಬೌಧ್ಧರೇ ಕಾರಣವೆಂದು ಅವರಿಗೆ ಗೊತ್ತೇ ಇಲ್ಲ. ಬೌಧ್ಧ ಧರ್ಮ ನಮ್ಮ ಪಾಲಿಗೆ ಬಿಟ್ಟ ಆಸ್ತಿ ಇದು. ಚಾರಿತ್ರಿಕ ಜ್ಞಾನವಿಲ್ಲದವರು ಬೌಧ್ಧರ ಉನ್ನತಿ-ಅವನತಿಗಳ ವಿಷಯವಾಗಿ ಬರೆದ ಪುಸ್ತಕಗಳಲ್ಲಿ ಬೌಧ್ಧಧರ್ಮ ಪ್ರಸಾರಕ್ಕೆ ಮುಖ್ಯ ಕಾರಣ ಅದರ ಅದ್ಭುತ ನೀತಿ ಮತ್ತು ಗೌತಮ ಬುಧ್ಧನ ಅದ್ಭುತ ಜೀವನ ಎನ್ನುವರು. ಭಗವಾನ್ ಬುಧ್ಧನ ಮೇಲೆ ಭಕ್ತಿ ಗೌರವ ನನಗೆ ಇದೆ. ಆದರೆ ಇದನ್ನು ಗಮನಿಸಿ: ಬೌಧ್ಧಧರ್ಮ ಹರಡುವುದಕ್ಕೆ ಕಾರಣ ಅದರ ಸಿಧ್ಧಾಂತವೂ ಅಲ್ಲ, ಆ ಪ್ರಖ್ಯಾತ ಪ್ರಚಾರಕನ ಶೀಲವೂ ಅಲ್ಲ. ಅದಕ್ಕೆ ಮುಖ್ಯ ಕಾರಣ ಕಟ್ಟಿದ ವಿಹಾರಗಳು, ಕೆತ್ತಿದ ವಿಗ್ರಹಗಳು, ಜನರ ಮನವನ್ನು ಸೆಳೆಯುವ ಹಲವು ಬಾಹ್ಯಾಚಾರಗಳು. ಬೌಧ್ಧಧರ್ಮ ಹರಡಿದ್ದು ಹೀಗೆ. ಹಿಂದೂಗಳ ಮನೆಯಲ್ಲಿ ಆಹುತಿ ಕೊಡುವುದಕ್ಕೆ ಮಾಡಿದ್ದ ಸಣ್ಣ ಸಣ್ಣ ಯಜ್ಞ ವೇದಿಕೆಗಳಿಗೆ, ಬೌಧ್ಧರ ಅದ್ಭುತ ದೇಗುಲಗಳನ್ನು, ಆಕರ್ಷಣೀಯ ಬಾಹ್ಯಾಚಾರವನ್ನು ಎದುರಿಸಲು ಸಾಧ್ಯವಾಗಲಿಲ್ಲ. ಕಾಲಕ್ರಮೇಣ ಎಲ್ಲಾ‌  ಅಧೋಗತಿಗೆ ಇಳಿಯಿತು, ಹೊಲಸಾಯಿತು. ಆ ವಿಷಯವನ್ನು ಬಹಿರಂಗದಲ್ಲಿ ಹೇಳಲಾಗುವುದಿಲ್ಲ. ಯಾರು ಈ ವಿಷಯವನ್ನು ತಿಳಿದುಕೊಳ್ಳಬೇಕೆಂದು ಬಯಸುವರೋ ಅವರು ದಕ್ಷಿಣ ಭಾರತದ ದೇವಸ್ಥಾನಗಳಲ್ಲಿರುವ ವಿಗ್ರಹಗಳಲ್ಲಿ ನೋಡಬಹುದು, ಇದೆಲ್ಲ ನಮಗೆ ಬಂದದ್ದು ಬೌಧ್ಧಧರ್ಮದಿಂದ.
” ಆಧಾರ : ಶ್ರೀ ರಾಮಕೃಷ್ಣ ಮಠ ಪ್ರಕಾಶಿತ “ಸ್ವಾಮಿ ವಿವೇಕಾನಂದರ ಕೃತಿಸಂಗ್ರಹ”, ಅಧ್ಯಾಯ ೨೦, ಪುಟ ಸಂಖ್ಯೆ ೩೧೨

ಈ ರೀತಿ ಇಂದು ಪ್ರಸ್ತುತ ಹಿಂದು ಧರ್ಮದಲ್ಲಿ ಕಾಣಸಿಗುವ ಬಹಳಷ್ಟು ಮೌಢ್ಯಗಳಿಗೆ ಬೌಧ್ಧ ಧರ್ಮವೇ ಮೂಲ ಅಂತ ಹೇಳಿದ್ದಾರೆ ಸ್ವಾಮಿ ವಿವೇಕಾನಂದರು. ವಿಚಾರವಾದಿಗಳಾಗಿದ್ದವರನ್ನು ಮೂರ್ತಿಪೂಜೆಯ ಕೂಪಕ್ಕೆ ತಳ್ಳಿದವರೇ ಬೌಧ್ಧರು. ಬಾಹ್ಯಾಚಾರಗಳ ಮೂಲಕ ಜನರ ಆಸ್ಥೆಯನ್ನು ಅಧ್ಯಾತ್ಮದಿಂದ ಕಂದಾಚಾರಗಳೆಡೆಗೆ ನೂಕಿದವರೇ ಬೌಧ್ಧರು ಎಂದಾಯಿತು. ವೈದಿಕರ ಯಜ್ಞಾ ಯಾಗಾದಿಗಳ ರೂಪದಲ್ಲಿದ್ದ ಮೌಢ್ಯವನ್ನು ಹೋಗಲಾಡಿಸಬೇಕೆಂದು ಹೊರಟಿದ್ದ ಬೌಧ್ಧಧರ್ಮ ಮೂರ್ತಿ ಪೂಜೆಯಂಥಾ ಇನ್ನೊಂದು ಮೌಢ್ಯವನ್ನು, ಅದರ ಮೂಲಕ ವ್ಯಕ್ತಿ ಪೂಜೆಯನ್ನೂ ಹುಟ್ಟುಹಾಕಿದ್ದು ಸರಿಯೇ? ಖಂಡಿತಾ ಸರಿ ಆಗಲಾರದು. ಆದರೆ ಈ ಆರೋಪಗಳೆನ್ನೆಲ್ಲ ಬುಧ್ಧನ ಮೇಲೆ ಹೊರಿಸಿದ ವಿವೇಕಾನಂದರು ಬುಧ್ಧನನ್ನು ಸುಳ್ಳಿನ ದಾರಿಯಲ್ಲಿ ನಡೆದವರು ಎಂದಿಲ್ಲ. ಇದು ವಿವೇಕಾನಂದರಿಗೂ ಸಂಪಾದಕೀಯಕ್ಕೂ ಇರುವ ವ್ಯತ್ಯಾಸ. ವಿವೇಕಾನಂದರಿಗಿದ್ದ ವಿವೇಕ, ಅರಿವು ಸಂಪಾದಕೀಯಕ್ಕೂ ಇರಬೇಕು ಎನ್ನುವ ಆಸೆ ದುರಾಸೆಯಾಗಬಹುದೇನೋ, ಆದರೆ ಅಂಥಾ ಆಶಾಭಾವನೆಯನ್ನು ಹೊಂದುವುದು ತಪ್ಪಲ್ಲ ತಾನೆ. ಇನ್ನು ಇದೆಲ್ಲ ಬುಧ್ಧನ ಅನುಯಾಯಿಗಳ ಕೆಲಸ, ಬುಧ್ಧನದಲ್ಲ ಎನ್ನಬಹುದೇನೋ, ಹಾಗಿದ್ದಲ್ಲಿ ಸಾಯಿ ಬಾಬಾ ಮಾಡಿದ ಪವಾಡಗಳಿಗೆ ಪರೋಕ್ಷವಾಗಿ ಅವರ ಭಕ್ತರೇ ಕಾರಣರಲ್ಲವೇ? ಭಕ್ತರಿಗಾಗಿಯೇ ಬಾಬಾ ಪವಾಡ ಮಾಡಿದ್ದಲ್ಲವೇ? ಇದಕ್ಕಾಗಿ ಬಾಬಾ ರನ್ನು ಯಾಕೆ ದೂಷಿಸಬೇಕು?

ಸತ್ಯದ ದಾರಿಯಲ್ಲಿರುವವರು ಎಂದಿಗೂ ತಪ್ಪು ಮಾಡಬಾರದೆಂದಿಲ್ಲ. ತಪ್ಪು ಮಾಡದೇ ಇರುವವರು ಸತ್ಯದ ಮಾರ್ಗದಲ್ಲಿ ಇರುವುದಿಲ್ಲ, ಯಾಕೆಂದರೆ ಅವರು ಸತ್ಯವೇ ಆಗಿರುತ್ತಾರೆ. ಅವರಿಗೆ ಈ ಭೂಮಿ ಮೇಲೆ ಬರುವ ಯಾವ ಉದ್ದೇಶವೂ ಇರಲಾರದು. ಇರಲಿ, ಹಾಗೆ ನೋಡಿದರೆ ಗಾಂಧೀಜಿ ಕೂಡ ಸಾಕಷ್ಟು ತಪ್ಪು ಮಾಡಿದ್ದಾರೆ. ತಪ್ಪು ಮಾಡದವರು ಈವರೆಗೂ ಬಂದಿಲ್ಲ. ಮುಂದೆ ಬರುತ್ತಾರೋ ಗೊತ್ತಿಲ್ಲ, ಹಾಗಾಗಿ ಬಾಬಾ ಅದೇ ರೀತಿ ತಪ್ಪು ಮಾಡಿದ್ದಾರೆಂದರೆ ಯಾರಿಗೂ ನೋವಾಗುವುದಿಲ್ಲ. ಬದಲಾಗಿ ಪವಾಡ ಎಂಬ ಒಂದೇ ಕಾರಣಕ್ಕೆ ಸಾಯಿ ಬಾಬಾರು ನಡೆದ ದಾರಿಯೇ ಸುಳ್ಳು ಎಂದು ಹೇಳುವುದು ಸತ್ಯಕ್ಕೆ ಮತ್ತು ನ್ಯಾಯಕ್ಕೆ ಮಾಡಿದ ಅಪಚಾರ. ಬಹಳ ಜನ ಸಾಯಿ ಬಾಬಾರನ್ನು ಪ್ರಶಂಸಿಸುವವರಿಗೆ ಪವಾಡಗಳು ಗುಲಾಬಿ ಹೂವಿನ ಕೆಳಗಿರುವ ಮುಳ್ಳಿನಂತೆ. ಆ ಮುಳ್ಳನ್ನು ಮುಟ್ಟದೆಯೇ ಹೂವಿನ ಪರಿಮಳವನ್ನು ಆನಂದಿಸುವ ಒಳ್ಳೆಯ ಮನಸ್ಸು ಅವರಿಗಿದೆ. ನೀವು ಪೂರ್ತಿ ಹೂವೇ ಮುಳ್ಳು ಎಂದರೆ ಅವರಿಗೆ ಹೇಗಾಗಬೇಡ? ಅದೂ ಕೂಡ ಅವರ ಸಾವಿನ ಸಮಯದಲ್ಲಿ? ಇದು ಒಂದು ಸಂವೇದನೆಯ ವಿಷಯಯವೂ ಹೌದು ಅಲ್ಲವೇ?

ಹೀಗೆ ನ್ಯಾಯಸಮ್ಮತವಲ್ಲದ ಸಂವೇದನಾರಹಿತ “ಷರಾ” ಬರೆದಿದ್ದು ಒಂದು ಬಿಟ್ಟರೆ ನಿಮ್ಮ ನಿಲುವುಗಳು ಬಹಳ ಚೆನ್ನಾಗಿವೆ. ಬಾಬಾರ ದಾರಿಯೇ ಸುಳ್ಳಿನ ದಾರಿ ಎನ್ನುವ “sweeping statement” ಕೂಡ ಒಂದು ರೀತಿ ಗುಲಾಬಿ ಹೂವಿನ ಬುಡದಲ್ಲಿರುವ ಮುಳ್ಳಿನಂತೆ ಎಂದು ತಿಳಿದು ಈ ಹೂ ಬರಹವನ್ನು ಆಸ್ವಾದಿಸಿದ್ದೇನೆ. ಅದರ ಜೊತೆಗೇ ಸಕಲ ಆಧ್ಯಾತ್ಮವೆಲ್ಲವನ್ನೂ ಅರೆದು ಕುಡಿದಿದ್ದೇನೆನ್ನುವ ಧೋರಣೆಯೊಂದಿದೆಯಲ್ಲ, ಅದನ್ನು ಮೆಲ್ಲಗೆ ಕುಟುಕುವ ಮನಸ್ಸಾಯಿತು. ಇದರ ಹೊರತಾಗಿ ಈ ಬರಹಕ್ಕೆ ಬೇರೆ ಯಾವುದೇ ದುರುದ್ದೇಶ ಇಲ್ಲ. ಎಲ್ಲರಿಗೂ ಒಳ್ಳೆಯದಾಗಲಿ, ಧನ್ಯವಾದ.

23 ಟಿಪ್ಪಣಿಗಳು Post a comment
  1. ರವಿ's avatar
    Ravi
    ಏಪ್ರಿಲ್ 29 2011

    ಚೆನ್ನಾಗಿದೆ ಬರಹ ಮಹೇಶರೆ. ಸಂಪಾದಕೀಯಕ್ಕೆ “ಸಕಲ ಆಧ್ಯಾತ್ಮವೆಲ್ಲವನ್ನೂ ಅರೆದು ಕುಡಿದಿದ್ದೇನೆನ್ನುವ ಧೋರಣೆ”ಯಿಲ್ಲ ಆದ್ರೆ ವಿವೇಕಾನಂದರು, ಬುದ್ಧ ಹೇಳಿದ್ದು ಪರಮ ಸತ್ಯ ಎಂಬ ಭಾವನೆಯಿದ್ದಂತೆ ಕಾಣುತ್ತಿದೆ.. ಅವರು ವಿವೇಕಾನಂದರು, ಬುದ್ಧರನ್ನು ಅನುಸರಿಸುತ್ತಿರುವ ಹಾಗೆಯೇ ಬಾಬಾರ ಅನುಯಾಯಿಗಳು ಎನ್ನುವುದನ್ನು ಅರ್ಥ ಮಾಡಿಕೊಂಡರೆ ಸಾಕು. ನನ್ನ ಪ್ರತಿಕ್ರಿಯೆಗೆ ಉತ್ತರವಾಗಿ ಬರೆದ “ಮೌಢ್ಯವನ್ನು ಗೆಲ್ಲಲು ಸತ್ಯದ ಮಾರ್ಗವೇ ಅನಿವಾರ್ಯವಲ್ಲವೇ?” ಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದೇನೆ. ಪ್ರಕಟವಾಗಬೇಕಷ್ಟೇ.

    ಉತ್ತರ
    • ಮಹೇಶ ಪ್ರಸಾದ ನೀರ್ಕಜೆ's avatar
      ಮಹೇಶ ಪ್ರಸಾದ ನೀರ್ಕಜೆ
      ಏಪ್ರಿಲ್ 29 2011

      ಧನ್ಯವಾದ ರವಿ, “ಸಂಪಾದಕೀಯಕ್ಕೆ ವಿವೇಕಾನಂದರು, ಬುದ್ಧ ಹೇಳಿದ್ದು ಪರಮ ಸತ್ಯ ಎಂಬ ಭಾವನೆಯಿದ್ದಂತೆ ಕಾಣುತ್ತಿದೆ” ಎಂಬುದು ನಿಜ ಅನಿಸುತ್ತದೆ. “ಅವರು ವಿವೇಕಾನಂದರು, ಬುದ್ಧರನ್ನು ಅನುಸರಿಸುತ್ತಿರುವ ಹಾಗೆಯೇ ಬಾಬಾರ ಅನುಯಾಯಿಗಳು ಎನ್ನುವುದನ್ನು ಅರ್ಥ ಮಾಡಿಕೊಂಡರೆ ಸಾಕು” – ಈ ಮಾತಂತೂ ಖುಷಿಯಾಯಿತು.

      ಉತ್ತರ
      • ರವಿ's avatar
        Ravi
        ಏಪ್ರಿಲ್ 29 2011

        ಸಂಪಾದಕೀಯ ಮತ್ತು ನಿಲುಮೆಯ ಬಗ್ಗೆ ಒಂದು ಅಭಿಪ್ರಾಯ: ನಿಷ್ಪಕ್ಷಪಾತಿ ಬ್ಲಾಗ್-ಗಳು. ನಿಲುಮೆ ಕನ್ನಡ ಪರ ವಹಿಸಿದರೆ (ಇತರ ಅಭಿಪ್ರಾಯಗಳಿಗೂ ಗೌರವ ಕೊಟ್ಟು), ಸಂಪಾದಕೀಯಕ್ಕೆ ಯಾರ ಹಂಗೂ ಇಲ್ಲ. ಈ ಬ್ಲಾಗ್-ಗಳು “ತಾವು ನಿಷ್ಪಕ್ಷಪಾತಿ” ಎಂದು ಗೊತ್ತಿರದೇ ಕೆಲಸ ಮಾಡಲಿ.

        ಉತ್ತರ
        • ಮಹೇಶ ಪ್ರಸಾದ ನೀರ್ಕಜೆ's avatar
          ಮಹೇಶ ಪ್ರಸಾದ ನೀರ್ಕಜೆ
          ಏಪ್ರಿಲ್ 29 2011

          ನಿಜ. ಸಂಪಾದಕೀಯದ ಸಮಸ್ಯೆ ಏನೆಂದರೆ ಅಲ್ಲಿ ನಿಲುಮೆಯಂತೆ ಭಿನ್ನ ನಿಲುವುಗಳು ಸಿಗುವುದಿಲ್ಲ. ಒಂದೇ ವ್ಯಕ್ತಿ ಬರೆದಂತೆ ಇರುತ್ತದೆ.

          ಉತ್ತರ
          • ಕಮಲ್'s avatar
            ಕಮಲ್
            ಏಪ್ರಿಲ್ 30 2011

            ಅಷ್ಟೇ ಅಲ್ಲ, ಓದುಗರ ಅನಿಸಿಕೆಗಳನ್ನು ಮಾಡರೇಟ್ ಮಾಡುವ ಬಹುತೇಕ ಬ್ಲಾಗ್ ಗಳು ಅವರ ಮೂಗಿನ ನೇರಕ್ಕೆ ಬರೆಯುವವರನ್ನು ಮಾತ್ರ ಹತ್ತಿರ ಸೇರಿಸುತ್ತವೆ ಮತ್ತು ಮನ್ನಣೆ ಕೊಡುತ್ತವೆ. ಅವುಗಳಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ತಪ್ಪು.

            ಉತ್ತರ
  2. ಆಸು ಹೆಗ್ಡೆ's avatar
    ಏಪ್ರಿಲ್ 29 2011

    ಸಂಪಾದಕೀಯದಲ್ಲಿನ ಕೆಲವೊಂದು ವಿಚಾರಗಳಿಗೆ ನನ್ನ ಸಹಮವಿದೆಯಾದರೂ, ತಮ್ಮ ಪರಿಚಯವನ್ನು ಗುಪ್ತವಾಗಿಸಿಕೊಂಡು, ಸಂಪಾದಕೀಯವೆಂಬ ಮುಖವಾಡ ಹೊತ್ತುಕೊಂಡು, ಅದ್ಯಾವ ಆಂದೋಲನ ನಡೆಸಿದರೂ, ಅದು ನೂರಕ್ಕೆ ನೂರು ಅಭಿನಂದನಾರ್ಹವಲ್ಲ ಎನ್ನುವುದು ನನ್ನ ಅನಿಸಿಕೆ.
    ನಾಯಕರು ಯಾರೆಂದು ಅರಿತು ಹಿಂಬಾಲಿಸಿಯೇ ಮೋಸಹೋಗುತ್ತಿರುವ ಈ ಕಾಲದಲ್ಲಿ, ಯಾರೆಂದೇ ಅರಿಯದೇ ಮುಖವಾಡ ಹೊತ್ತಿರುವ ಇಂತಹವರನ್ನು ಹಿಂಬಾಲಿಸಿದರೆ ನಮ್ಮ ಗತಿ ಏನೋ..?
    🙂 🙂

    ಉತ್ತರ
    • ಮಹೇಶ ನೀರ್ಕಜೆ's avatar
      ಮಹೇಶ ನೀರ್ಕಜೆ
      ಮೇ 1 2011

      🙂 ಸಂಪಾದಕೀಯ ಯಾರೆಂದು ತಿಳಿದರೆ ಅದರ ಮೇಲಿನ ನಂಬಿಕೆ ಹೊರಟು ಹೋಗಬಹುದೆನ್ನುವ ಅಳುಕು ಅವರಿಗಿದ್ದಂತಿದೆ. ಅಲ್ಲವೇ?

      ಉತ್ತರ
      • VITHALRAO KULKARNI's avatar
        VITHALRAO KULKARNI
        ಜೂನ್ 27 2011

        ಸಂಪಾದಕೀಯ ಹಿಂದೆ ಯಾರಿದ್ದಾರೆ ?ಹೆಸರು ತಿಳಿಯುವ ಕುತುಹಲ್ ಅಸ್ಟೇ…

        vithalrao kulkarni malkhed

        ಉತ್ತರ
  3. ಮಹೇಶ್ ರುದ್ರಣ್ಣ's avatar
    ಮಹೇಶ್ ರುದ್ರಣ್ಣ
    ಏಪ್ರಿಲ್ 29 2011
  4. maruthi's avatar
    ಏಪ್ರಿಲ್ 29 2011

    ನಾನು ಸಾಯಿ ಬಾಬಾ ರವರ ಅಭಿಮಾನಿ ಅಲ್ಲ, ಆದ್ರೆ ನನ್ನ ಗುರು ವಿಷ್ಣುವರ್ದನ್ ರವರು ಸಾಯಿಬಾಬಾ ಅಲ್ಲದೆ ಮತ್ತಶ್ಟು ಬಾಬಾಗಳ ಅಭಿಮಾನಿ ಆಗಿದ್ದರು, ಹಾಗಾಗಿಯೆ ಅವರಿ ಪ್ಯಾಂಟ್ ಶರ್ಟ್ ಬಿಟ್ಟು ತಲೆಗೆ ಬಾಬಾನ ಬಟ್ಟೆ ಕಟ್ಟತೊಡಗಿದ್ದರು, ನನಗಂತೂ.. ಇದು ನುಂಗಲಾಗದ ತುತ್ತಾತಿತ್ತು, ಯಾಕೆಂದರೆ ನಾನು ವಿ. ವನ್ನು ಸಿಂಹ ವಾಗಿ ಇಸ್ಟಪಟ್ಟಿದ್ದೆನೆ ಹೊರತು ದೇವರಾಗಿ ಅಲ್ಲ, ಹಾಗೆಯೆ ನನ್ನ ಮತ್ತೋಬ್ಬ ಪೆವರಿಟ್ ಸಚಿನ್ ಕೂಡಾ ಬಾಬಾ ಭಕ್ತ ಆಗಿರುವುದೊ.. ಕಾಕಾತಾಳಿಯ ವೇನೊ, ಅದೆಲ್ಲ ವಿಶಯ ಇರಲಿ ಒಬ್ಬ ವ್ಯಕ್ತಿ ಮಾನವನು ಅಥವಾ ದೆವರೋ ಅನ್ನುವುದಕ್ಕಿಂತ ಅವನು ಒಳ್ಳೆಯದು ಮಾಡಿದ್ದಾನೊ ಕೆಟ್ಟದ್ದು ಮಾಡಿದ್ದಾನೊ ಎನ್ನುವುದು ಬಹಳ ಮುಖ್ಯ, ನಿಮ್ಮ ಒನ್ದು ವರ್ತನೆಯನ್ನು ನಾನು ಅಬ್ಸವ್ರ್ ಮಾಡಿದ್ದೆನೆ ಅದೆನೆಂದರೆ ನೀವು ಮಾಡಿದ್ದನ್ನೆ ಬೇರೆ ಯಾರದದು ಮಾಡಿದ್ದರೆ ಅದನ್ನು ಹೈಲೆಟ್ ಮಾಡಿ ತೊರಿಸುತ್ತೀರ..(ವಿವರ ನಾಳೇ) , ಹಾಗು ಇಲ್ಲಿಗೆ ವಿವೇಕಾನಂದ , ಬುದ್ದರ ಪ್ರಸವ ತರುವ ಅವಸ್ಯಕತೆ ಇರಲಿಅಲ್ಲ, ಒಬ್ಬ ವ್ಯಕ್ತಿ ಶ್ರೇಶ್ಟನೇ ಆಗಿದ್ದರೆ.., ಅಗಿದ್ದರೆ ಅವನಿಂದ ಸಹಾಯ ಪದೆದ ಜನರು ಅವನನ್ನು ಪೂಜಿಸಿಕೊಳ್ಳಲಿ ತಪ್ಪೆಣು, ನರೇಂದ್ರ ಶಮ್ರ ನ ಬಗ್ಗೆ ನೀವು ಬರೆದಿದ್ದು ನುರು ಪರ್ಸೆಂತ್ ಸರಿಯಾಗಿದೆ. ಕೊನೆಗೆ ವಿಶ್ಣು ಬಗ್ಗೆ …, ಕೊನೆಯ ದಿನಗಳಲ್ಲಿ ಮುಸ್ಲಿಮರಂತೆ ಗಡ್ಡ, ಸಿಖ್ಖರಂತೆ ತಲೆಗೆ ಬಟ್ಟೆ, ವ್ಯಾಮೋಹಿಯಂತೆ ಚಿನ್ನದ ಸರಗಳು, ಉಂಗುರಗಳು, ಹಿಂದು ಪ್ರವಾದಿಯಂಥಹ ವೇಷಬೂಷಣ…, ಲೇಟೆಸ್ಟ್ ಅಮೇರಿಕನ ಕ್ರಿಶ್ಚಿಯನ್ ನಂತೆ ನವೀನ ಶೈಲಿಯ ಕಪ್ಪು ಕನ್ನಡಕ ಹಾಕುತ್ತಿದ್ದ.., ಬುದ್ದನ ಮುಖಕಳೆ ಹೊಂದಿದ್ದ ವಿಷ್ಣುವರ್ದನ್ ಸಿನಿಮಾ ಹೀರೋನೆ…, ಅಥವಾ ಮುಸ್ಲಿಮ್ ಪ್ರವಾದಿಯೇ…, ಅಥವಾ ಸಿಂಹವೇ .., ಅವರನ್ನು ಬೇಟಿ ಮಾಡಿ ಇವೆಲ್ಲವನ್ನು ಬಿಟ್ಟು ಲಕ್ಶಣವಾಗಿ ಸೂಟ್ ಹಾಕಿಕೊಳ್ಳಿ ಪ್ಲೀಸ್… ಎಂದು ಗೋಗೆರೆದು ಬೇಡಿಕೊಳ್ಲಬೆಕು ಅಂದುಕೊಂಡಿದ್ದೆ.., ಅಶ್ಟರಲ್ಲಿ ನನ್ನನ್ನು ಒಂಟಿಯಾಗಿ ಬಿಟ್ಟು ಹೊರಟು ಹೋದರು.

    ಉತ್ತರ
    • ಮಹೇಶ ನೀರ್ಕಜೆ's avatar
      ಮಹೇಶ ನೀರ್ಕಜೆ
      ಮೇ 1 2011

      “ಇಲ್ಲಿಗೆ ವಿವೇಕಾನಂದ , ಬುದ್ದರ ಪ್ರಸವ ತರುವ ಅವಸ್ಯಕತೆ ಇರಲಿಅಲ್ಲ, ಒಬ್ಬ ವ್ಯಕ್ತಿ ಶ್ರೇಶ್ಟನೇ ಆಗಿದ್ದರೆ.., ಅಗಿದ್ದರೆ ಅವನಿಂದ ಸಹಾಯ ಪದೆದ ಜನರು ಅವನನ್ನು ಪೂಜಿಸಿಕೊಳ್ಳಲಿ ತಪ್ಪೆಣು, ನರೇಂದ್ರ ಶಮ್ರ ನ ಬಗ್ಗೆ ನೀವು ಬರೆದಿದ್ದು ನುರು ಪರ್ಸೆಂತ್ ಸರಿಯಾಗಿದೆ.” – ಇದು ಇಷ್ಟವಾಯಿತು ನನಗೆ. ಪ್ರತಿಕ್ರಿಯೆಗಾಗಿ ಧನ್ಯವಾದ.

      ಉತ್ತರ
  5. ಮಾ ಸು ಮಂಜುನಾಥ's avatar
    ಮಾ ಸು ಮಂಜುನಾಥ
    ಏಪ್ರಿಲ್ 30 2011

    ವ್ಯಕ್ತಿಯಾರು ಎಂಬುದಿಕ್ಕಿಂತ ಅವರು ಮಂಡಿಸುವ ವಿಚಾರಗಳು ಮುಖ್ಯವಲ್ಲವೆ ಸಾರ್,ವ್ಯಕ್ತಿ ಯಾರೆಂದು ತಿಳಿದಾಕ್ಷಣ ನಮ್ಮ ನಿಲುವುಗಳು ಬದಲಾಗುವ ಸಾಧ್ಯತೆಯಿರುತ್ತದೆಯಲ್ಲವೆ,ಬುದ್ಧ,ವಿವೇಕಾನಂದ,ಬಾಬಾ ಹೀಗೆ ಹೆಸರುಗಳಿಗನುಗುಣವಾಗಿ ಸತ್ಯ ಬದಲಾಗುತ್ತಿದೆಯಲ್ಲ ಹಾಗೆ.ಯಾರನ್ನೇ ಅಥವಾ ಯಾವುದನ್ನೇ ಆಗಲಿ ಹಿಂಬಾಲಿಸುವ ಅವಶ್ಯಕತೆಯಾದರು ಇದೆಯಾ?

    ಉತ್ತರ
    • ಮಹೇಶ ನೀರ್ಕಜೆ's avatar
      ಮಹೇಶ ನೀರ್ಕಜೆ
      ಮೇ 1 2011

      ನಿಜ. ಬಾಬಾ ರನ್ನು “ಹಿಂಬಾಲಿಸುವ” ಅಗತ್ಯ ಇಲ್ಲ ಎಂದು ಒಪ್ಪೋಣ. ಅದನ್ನೇ‌ ಬುಧ್ಧ ವಿವೇಕಾನಂದರಿಗೂ‌ ಅನ್ವಯಿಸಬಹುದಲ್ಲವೇ? ಅವರನ್ನಾದರೂ ಯಾಕೆ ಹಿಂಬಾಲಿಸಬೇಕು? ಒಬ್ಬೊಬ್ಬರ ಸ್ಟ್ರಾಂಗ್ ಪಾಯಿಂಟುಗಳನ್ನು ಮತ್ತು ಸಾಧನೆಗಳನ್ನು ಗುರುತಿಸಿ ಅಳವಡಿಸಿಕೊಂಡರೆ ಅದೇ‌ ದೊಡ್ಡ ಸಾಧನೆ. ಹುಳುಹು ಗಳನ್ನು ಹುಡುಕಿದರೆ ಪ್ರತಿಯೊಬ್ಬರಲ್ಲೂ ಸಿಗುತ್ತವೆ. ಕೊನೆಗೆ ಎಲ್ಲಕ್ಕಿಂತ ಮುಖ್ಯವಾಗುವುದು ನಮ್ಮ ನಮ್ಮ ಕಾಮನ್ ಸೆನ್ಸ್. ಯಾವುದನ್ನು ಅನುಸರಿಸಬೇಕು ಯಾವುದನ್ನು ಅನುಸರಿಸಬಾರದೆನ್ನುವ ಕಾಮನ್ ಸೆನ್ಸ್ ಇರುವ ವ್ಯಕ್ತಿಗೆ ಯಾವ ವ್ಯಕ್ತಿಯೂ ದೇವರಾಗುವುದಿಲ್ಲ, ಯಾರೂ ಮೋಸಗಾರನಾಗುವುದಿಲ್ಲ. ಬದಲಾಗಿ ತತ್ವಗಳು ದೇವರಾಗುತ್ತವೆ, ಮೋಸಗಳು ಪಾಠಗಳಾಗುತ್ತವೆ.

      ಉತ್ತರ
  6. Sundar's avatar
    Sundar
    ಏಪ್ರಿಲ್ 30 2011

    ಇವರು ಅವರನ್ನು ಹಿಂಬಾಲಿಸದಿದ್ದರೂ ಸಂಪಾದಕೀಯದವರು ಇವರನ್ನು ಹಿಂಬಾಲಿಸುತಿದ್ದಾರೆ. ಅವರ ನಿಲುವನ್ನು ಒಪ್ಪದ ಇವರು, ಮತ್ತೆ ಹಿಂಬಾಲಿಸಲು ಒಪ್ಪಿಗೆ ಹೇಗೆ ಕೊಟ್ಟರು? ಎಲ್ಲಾ ಪ್ರಚಾರದ ಹಪಾಹಪಿ. ಗೋಸುಂಬೆ ಜಾತಿ ಜನ. ಕೇವಲ ಜಾತಿವಾದಿಗಳಿಗೆ ಜೈ ಎನ್ನುವ ಇವರಿಂದ ಏನು ಕಳಕಳಿಯೋ?

    ಉತ್ತರ
    • ಮಹೇಶ ನೀರ್ಕಜೆ's avatar
      ಮಹೇಶ ನೀರ್ಕಜೆ
      ಮೇ 1 2011

      ಸ್ವಾಮಿ ಸುಂದರ್ ಅವರೇ, ನಿಮ್ಮ ಪ್ರತಿಕ್ರಿಯೆಯಲ್ಲಿ “ಇವರು” ಯಾರು, “ಅವರು” ಯಾರು, ಜಾತಿವಾದಿ ಯಾರು ಅಂತ ತಿಳೀಲಿಲ್ಲ. ಸ್ವಲ್ಪ ವಿವರಿಸೋ ಪ್ರಯತ್ನ ಮಾಡಿ ಗುರುವೆ..

      ಉತ್ತರ
  7. ಷಣ್ಮುಖ's avatar
    ಷಣ್ಮುಖ
    ಏಪ್ರಿಲ್ 30 2011

    ಮಹೇಶ್,
    ಪ್ರಾಜ್ಞರೆನಿಸಿಕೊಂಡವರ(!?) “ವೈಚಾರಿಕ ವಿವರಣೆ/ವಿಡಂಬನೆಗಳು” ಕೋಟ್ಯಾಂತರ ಜನರನ್ನು (ಮೂಡ/ಮೌಡ್ಯರೆಂಬ) ಮೂರ್ಖರನ್ನಾಗಿಯೂ ಮುಠ್ಠಾಳರನ್ನಾಗಿಯೂ ಚಿತ್ರಿಸುತ್ತಿದೆ ಎಂಬ ಕನಿಷ್ಠ ಜ್ಞಾನ/ಕಾಳಜಿಯೂ ಇರುವುದಿಲ್ಲವಲ್ಲ ಏಕೆ?
    ನಿಮ್ಮ ಲೇಖನದ ತರ್ಕ ಚೆನ್ನಾಗಿದೆ.

    ಉತ್ತರ
  8. P.Ramachandra, Ras Laffan- Qatar's avatar
    P.Ramachandra, Ras Laffan- Qatar
    ಮೇ 1 2011

    ಉತ್ತಮ ವೈಚಾರಿಕ ಲೇಖನ.

    -ಪ.ರಾಮಚಂದ್ರ,
    ರಾಸ್ ಲಫಾನ್, ಕತಾರ್

    ಉತ್ತರ
  9. ಜೈನ ತೀರ್ತಂಕರರು, ಗೌತಮ ಬುದ್ದ, ಆದಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮದ್ವಾಚಾರ್ಯರು, ಬಸವಣ್ಣನವರು, ಮೊಹಮ್ಮದ್, ಯೇಸು ಕ್ರಿಸ್ತ – ಇವರದೆಲ್ಲ ವಿಶೇಶವಾದ ತತ್ವಶಾಸ್ತ್ರಗಳಿವೆ, ಮತ್ತು ತಾವು ಕಂಡ ಸಮಾಜದ ಅರಿವಾಗಸದಲ್ಲಿ ಇಂತದ್ದೆಂಬ ದೋಶವನ್ನು ಇವರೆಲ್ಲರೂ ಕಂಡು ಅದನ್ನು ದೂರಮಾಡಲು ಯತ್ನಿಸಿದ್ದಾರೆ.

    ನನಗೆ ಸಾಯಿ ಬಾಬಾ ಅವರ ಬಗ್ಗೆ ಏನೂ ಗೊತ್ತಿಲ್ಲ. ಇದಕ್ಕೆ ಕಾರಣ ಪ್ರಾಯಶಹ ನಾನು ಈ ಮೇಲ್ಕಾಣಿಸಿದ ಗುರುಗಳು ಕಂಡ ಮತ್ತು ಕಲಿಸಿದ ಸತ್ಯದ ಕಡಲಿನಲ್ಲೇ ತೇಲುತ್ತಿರುವುದು ಕಾರಣವಿರಬಹುದು.

    ಆದುದರಿಂದ ಕೇಳುತ್ತಿದ್ದೇನೆ – ಸಾಯಿ ಬಾಬಾ ಅವರ ತತ್ವಶಾಸ್ತ್ರ ಎಂತಹುದು? ಅದನ್ನು ಮೇಲಿನ ಬೇರೆಲ್ಲ ಗುರುಗಳ ತತ್ವಶಾಸ್ತ್ರಗಳಿಗಿಂತ ಬೇರೆಯೆಂದು ತೋರಿಸುವ ಯಾವ ಹೊಸ ’ಪದ’ವೊಂದು ಹುಟ್ಟಿಕೊಂಡಿದೆ? ಮೇಲ್ಕಾಣಿಸಿದ ಗುರುಗಳ ಬೇರೆಬೇರೆ ತತ್ವಶಾಸ್ತ್ರಗಳು ತೋರಿಸದ ಸತ್ಯವೆಂಬುದರ ಯಾವ ಮುಕವನ್ನು ಸಾಯಿ ಬಾಬಾ ಅವರ ತತ್ವಶಾಸ್ತ್ರವು ತೋರಿಸುತ್ತದೆ? ಅವರ ತತ್ವಶಾಸ್ತ್ರವನ್ನು ಯಾವ ಒಂದು ಇಲ್ಲವೇ ಹಲವು ಹೊತ್ತಗೆಗಳಿಂದ ನಾನು ಅರಿತುಕೊಳ್ಳಬಹುದು?

    ಹೋಗಲಿ, ಎಲ್ಲರೂ ಬರವಣಿಗೆಯ ಇಲ್ಲವೇ ತತ್ವಶಾಸ್ತ್ರದ ಪಟುಗಳೇನಾಗಬೇಕಾಗಿಲ್ಲ, ಆದುದರಿಂದ ಸಾಯಿ ಬಾಬಾ ಅವರ ಜೀವನದ ಯಾವ ಕತೆಗಳನ್ನು ಕೇಳಿ ನಾನು ಈ ಸಂಸಾರದಿಂದ ಬಿಡುಗಡೆಗೆ ಒಂದು ಹೆಜ್ಜೆ ಹತ್ತಿರವಾಗಬಹುದು? ಅಂತಹ ಕತೆಗಳನ್ನುಳ್ಳ ಯಾವ ಹೊತ್ತಗೆಗಳು ಎಲ್ಲಿ ಸಿಗುತ್ತವೆ?

    ಉತ್ತರ
    • Maaysa's avatar
      Maaysa
      ಮೇ 1 2011

      Raghavendra swamygala ತತ್ವಶಾಸ್ತ್ರ Enu?

      innu kate bEkaadare “Sri Sai satcherite”
      http://www.saibaba.org/saisatc.html Odi.

      Raghavendra swamy-gaLigoo Sai baba avarigoo nanage yaava vytaasa kaNisalla. ibbaroo pavaaDa-puruSharu.

      ಉತ್ತರ
    • ಮಹೇಶ ನೀರ್ಕಜೆ's avatar
      ಮಹೇಶ ನೀರ್ಕಜೆ
      ಮೇ 1 2011

      ಸಾಯಿ ಬಾಬ ರದ್ದು ಅಷ್ಟೆಲ್ಲಾ ತತ್ತ್ವಶಾಸ್ತ್ರ ಇದ್ದಂಗಿಲ್ಲ ಗುರುವೆ.. ಬಾಬಾ ನೀವು ಹೇಳಿದ ಮಂದಿಗಿಂತ ಸ್ವಲ್ಪ ಬೇರೆಯಾಗಿ ಭಜನೆ, ಕೀರ್ತನೆ, ಭಕ್ತಿ ಮಾರ್ಗ ಹೀಗೆಲ್ಲ ಹೋದವರು. ಮೇಲಾಗಿ ಸಮಾಜ ಸೇವೆಯನ್ನು ಮುಖ್ಯವಾಗಿ ತೆಗೆದುಕೊಂಡವರು. “ಪ್ರಾರ್ಥನೆ ಮಾಡೋ ತುಟಿಗಳಿಗಿಂತ ಸೇವೆ ಮಾಡೋ ಕೈಗಳು ಮೇಲು” ಅಂತ ಯಾವುದೋ ಸಾಯಿ ಬಾಬಾ ಪೋಸ್ಟರ್ ನಲ್ಲಿ ನೋಡಿದ ನೆನಪು. ಆ ಮಟ್ಟಿಗೆ ನನಗೆ ಅವರು ಇಷ್ಟ. ಪಾವಡಗಳನ್ನೆಲ್ಲ ನಾನು ಮೆಚ್ಚಿಲ್ಲ. ತಿಳುವಳಿಕೆ ಇಳಿರೋ ಜನರಲ್ಲಿ ಸ್ವಲ್ಪ ಶಿಸ್ತು ನಂಬಿಕೆ ಆಶಾಭಾವನೆ ಮೂಡಿಸಲು ಇದೆಲ್ಲ ಪವಾಡಗಳನ್ನು “ಟೂಲ್” ಆಗಿ ಬಳಸಿದ್ದರೋ ಎನ್ನುವ ಅನುಮಾನ ನನಗೆ.

      ಉತ್ತರ
      • Maaysa's avatar
        Maaysa
        ಮೇ 1 2011

        Yaake illa? Avara theology bagge bekaaDaStu books ive.

        “Letters to students”( heege ondu ), naanu Odida oLLe bookku. adalli avaru students-ge motivational aagi letters barediddaare.. chennagi ive.

        ಉತ್ತರ
        • ಮಹೇಶ ನೀರ್ಕಜೆ's avatar
          ಮಹೇಶ ನೀರ್ಕಜೆ
          ಮೇ 2 2011

          ಹೌದೇ, ಗೊತ್ತಿರಲಿಲ್ಲ. ಕ್ಷಮಿಸಿ..

          ಉತ್ತರ
  10. Mohammad Hafeez's avatar
    Mohammad Hafeez
    ಮೇ 5 2011

    ಏ.ಕೆ, ಕುಕ್ಕಿಲರವರ ಲೇಖನ “ಸಾವಿಲ್ಲದ ದೇವ ಮತ್ತು ಸಾಯುವ ಬಾಬಾ” ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಲೇಖಕರು ಅತ್ಯಂತ ಸ್ಪಷ್ಟವಾದ ನುಡಿಗಳನ್ನು ಬಾಬಾರವರ ಬಗ್ಗೆ ನಮ್ಮ ಮುಂದಿಟ್ಟಿದ್ದಾರೆ.
    ಒಂದು ಜವಾಬ್ದಾರಿಯುತ ಸರಕಾರವು ನೀಡಬೇಕಾದಂತಹ ಕೆಲವು ಕೆಲಸಗಳನ್ನು ಬಾಬಾರವರು ಸ್ವತಃ ಮಾಡಿ ತೋರಿಸಿದ್ದಾರೆ. ಅವರ ಈ ಸೇವೆಯನ್ನು ನಾವು ಮೆಚ್ಚಲೇಬೇಕು. ಸಂಕಷ್ಟದಲ್ಲಿರುವ ಸಮಯದಲ್ಲಿ ಯಾರಾದರೂ ಭಾಗಿಯಾದರೆ, ಖಂಡಿತವಾಗಿಯೂ ಜನರಿಗೆ ಆ ಮನುಷ್ಯನ ಬಗ್ಗೆ ಅಪಾರವಾದ ಅಭಿಮಾನವಿರುತ್ತದೆ. ಬರೇ ಈ ಅಭಿಮಾನವನ್ನು ಮುಂದಿಟ್ಟು ಆ ವ್ಯಕ್ತಿಗೆ ಪವಾಡ ಪುರುಷ ಅಥವಾ ದೇವ ಮಾನವ ಎಂದು ಕರೆಯುವುದು ಇದನ್ನು ಮೌಢ್ಯ ಎಂದು ಹೇಳದೇ ಉಪಾಯವಿಲ್ಲ.
    ವಿಜ್ನಾನ ಲೋಕದಲ್ಲಿರುವ ನಾವು ಬಾಬಾರವರ ಕೆಲವು ಚಮತ್ಕಾರಗಳನ್ನು ನೋಡಿ, ದೈವತ್ವದ ಪಟ್ಟವನ್ನು ನೀಡಿದ ರೀತಿ ನೋಡಿದರೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಒಟ್ಟಲ್ಲಿ ಬಾಬಾರವರು ತನ್ನ ಪವಾಡಕ್ಕಿಂತ, ಸೇವೆಯಿಂದಾಗಿ ಅನುಯಾಯಿಗಳ ದೊಡ್ಡ ಸಮೂಹವನ್ನೇ ಕಟ್ಟಿಕೊಂಡಿದ್ದರು. ಇಂದು ಸಮಾಜದಲ್ಲಿ ಸೇವೆಯನ್ನು ನೀಡುವಂತಹ ಬಾಬಾಗಳ ಅಗತ್ಯವಿದೆ.
    ಒಟ್ಟಲ್ಲಿ ಕುಕ್ಕಿಲರವರು ಅತ್ಯಂತ ನೇರವಾದ ಮಾತುಗಳ ಮೂಲಕ ಬಾಬಾರವರ ದೈವತ್ವವನ್ನು ನಿರಾಕರಿಸಿ ಅವರ ಸಮಾಜ ಸೇವೆಯನ್ನು ಎತ್ತಿ ಹಿಡಿದಿದ್ದಾರೆ. ಆದರೆ ಕೆಲವರು ಲೇಖನವನ್ನು ತಪ್ಪಾಗಿ ಅರ್ಥೈಸಿಕೊಂಡಿರಬಹುದು. ಆದ್ದರಿಂದ sampadakeeya.blogspot.com ನಲ್ಲಿಕೆಲವು ಆವೇಶಭರಿತ ಪ್ರತಿಕ್ರಿಯೆಗಳು ಬಂದಿವೆ. ಸೂಕ್ಷವಾಗಿ ಪುನಃ ಒಮ್ಮೆ ಲೇಖನವನ್ನು ಓದಿದಲ್ಲಿ ಉತ್ತಮ ಅಭಿಪ್ರಾಯಗಳೇ ವ್ಯಕ್ತವಾಗಬಹುದು.
    ಇನ್ನು ಮುಂದಕ್ಕೂ ಇಂತಹ ಉತ್ತಮ ಲೇಖನಗಳು ತಮ್ಮಿಂದ ಹೊರಬರಲಿ.
    ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿ ಕುವೈತ್.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments