ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 22, 2013

5

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಲೇಬೇಕು,ಆದರೆ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವುದೇಕೆ?

‍ನಿಲುಮೆ ಮೂಲಕ

– ಗೋಪಾಲ ಕೃಷ್ಣ

Justice for Kumari Soujanyaಧರ್ಮಸ್ಥಳವೆಂದರೆ ಪ್ರತಿನಿತ್ಯ ಸಾವಿರಾರು ಜನರು, ದೇಶದ ಖ್ಯಾತನಾಮರು, ಅಧಿಕಾರದ ಚುಕ್ಕಾಣಿ ಹಿಡಿದ ಮಂತ್ರಿ, ಮುಖ್ಯಮಂತ್ರಿಗಳು ಭೇಟಿ ನೀಡುವ ಧಾರ್ಮಿಕ ಸ್ಥಳ.  ಇಲ್ಲಿನ ಪೂಜೆಯಿಂದ ಹಿಡಿದು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ತಾರೆಯರ ಭೇಟಿಯವರೆಗಿನ ಪ್ರತಿ ಬೆಳವಣಿಗೆಯೂ ರಾಜ್ಯ/ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿರುತ್ತದೆ.  ತೀರಾ ಇತ್ತೀಚೆಗೆ ಅಂದರೆ ಜೂನ್ 27, 2011ರಂದು ಇಡೀ ರಾಜ್ಯವೇ ಧರ್ಮಸ್ಥಳದತ್ತ ಮುಖ ಮಾಡಿ ಕುಳಿತಿತ್ತು.  ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆಣೆ-ಪ್ರಮಾಣದ ಸಮರಕ್ಕೆ ಧರ್ಮಸ್ಥಳ ಸಾಕ್ಷಿಯಾಗುವುದಿತ್ತು.  ಅಂದು ರಾಜ್ಯದ ಎಲ್ಲಾ ಸುದ್ದಿ ಮಾಧ್ಯಮಗಳು ಧರ್ಮಸ್ಥಳದಲ್ಲೇ ಠಿಕಾಣಿ ಹೂಡಿದ್ದವು; ಧರ್ಮಸ್ಥಳದ ವಿಚಾರದ ವಿನಹ ಮತ್ತೇನೂ ಸುದ್ದಿಯೇ ಅಲ್ಲ.  ‘ಮಾತಿಗೆ ಹೆಣಗಿದವನು ಮಂಜುನಾಥ, ದುಡ್ಡಿಗೆ ಹೆಣಗಿದವನು ವೆಂಕಟರಮಣ’ ಎಂಬ ನಂಬಿಕೆ ಇರುವುದರಿಂದಲೇ ಜನರ ದೃಷ್ಟಿ ಧರ್ಮಸ್ಥಳದತ್ತ ನೆಟ್ಟಿತ್ತು.

ಅಂತಹ ಸಂದರ್ಭದಲ್ಲೂ ಧರ್ಮಸ್ಥಳದ ವಿರುದ್ಧ ಆರೋಪ ಮಾಡದಿದ್ದವರು, ಇಂದು ದಿಗ್ಗನೆದ್ದು ಕುಳಿತಿರುವುದೇಕೆ?  ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಲೇಬೇಕು.  ಧರ್ಮಸ್ಥಳವೇ ಆಗಲಿ, ದೇಶದ ಬೇರೆ ಎಲ್ಲಿಯೇ ಆಗಲಿ ಸಾಮಾನ್ಯನಿಂದ ರಾಷ್ಟ್ರಪತಿಯವರೆಗೂ ಹತ್ಯಾಚಾರದಂತಹ ಪ್ರಕರಣದಲ್ಲಿ ಸಿಲುಕಿಕೊಂಡವರು ಯಾರೇ ಆದರೂ ಸರಿಯೇ ಅವರಿಗೆ ಮರಣದಂಡನೆ ವಿಧಿಸುವುದೇ ಸೂಕ್ತ ಶಿಕ್ಷೆ.  ಆಗಲೇ ಸಹೋದರಿ ಸೌಜನ್ಯ ಆತ್ಮಕ್ಕೂ, ಅವರ ಕುಟುಂಬಕ್ಕೂ ನ್ಯಾಯ ಒದಗಿಸಿದಂತಾಗುವುದು.

ಆದರೆ ಧರ್ಮಸ್ಥಳದಲ್ಲಿ ಭಯದ ವಾತಾವರಣವಿದೆಯೆಂದೂ, ಡಾ|| ವೀರೇಂದ್ರ ಹೆಗ್ಡೆಯವರನ್ನು ಖಳನಾಯಕರಂತೆಯೂ ಬಿಂಬಿಸ ಹೊರಟಿರುವುದೇ ಆಶ್ಚರ್ಯಕರ ಸಂಗತಿ.  ಆಶ್ವಾಸನೆಗಳನ್ನು ನೀಡುತ್ತಲೇ ಕಾಲದೂಡುವ ರಾಜಕಾರಣಿಗಳ ನಡುವೆ, ಉಪನ್ಯಾಸ-ಉಪದೇಶಗಳಿಗಷ್ಟೇ ಸೀಮಿತವಾದ ಆಧ್ಯಾತ್ಮ, ಧಾರ್ಮಿಕ ಗುರುಗಳ ನಡುವೆ, ಜನರ ಧಾರ್ಮಿಕ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು ತಮ್ಮ ವ್ಯವಹಾರ ಸಾಧಿಸಿಕೊಳ್ಳುವವರ ನಡುವೆ ನಾಲ್ಕು ದಶಕಗಳಿಂದಲೂ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಡಾ|| ವೀರೇಂದ್ರ ಹೆಗ್ಡೆಯವರು ಪ್ರತ್ಯೇಕವಾಗಿ ನಿಲ್ಲುತ್ತಾರೆ.  ಇಂದು ಧರ್ಮಸ್ಥಳ ಧಾರ್ಮಿಕ ಸ್ಥಳವಾಗಿಯಷ್ಟೇ ಉಳಿದಿಲ್ಲ.  ಒಂದು ಜವಾಬ್ದಾರಿಯುತ ಸರ್ಕಾರ ಮಾಡಬಹುದಾದ ಕಾರ್ಯಗಳನ್ನು ಧರ್ಮಸ್ಥಳದ ಮಂಜುನಾಥನ ಹೆಸರಿನಲ್ಲಿ ಡಾ|| ವೀರೇಂದ್ರ ಹೆಗ್ಡೆಯವರು ಮಾಡುತ್ತಿದ್ದಾರೆ.

ಇದರ ಕೆಲವೊಂದು ನಿದರ್ಶನಗಳು ಇಲ್ಲಿವೆ ನೋಡಿ.ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗದ ಆಸರೆ ನೀಡುವ ಸಲುವಾಗಿ ರುಡ್‍ಸೆಟ್ ಸಂಸ್ಥೆ ಸ್ಥಾಪಿಸಿದ್ದಾರೆ.  ನಿರುದ್ಯೋಗಿಗಳಿಗೆ ತರಬೇತಿ ನೀಡಿ, ಸ್ವ-ಉದ್ಯೋಗ ಸ್ಥಾಪಿಸಲು ಅನುವು ಮಾಡಿಕೊಡುವ ಈ ಯೋಜನೆ ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್‍ನ ಸಹಭಾಗಿತ್ವದಲ್ಲಿ 1982ರಿಂದಲೇ ಕಾರ್ಯನಿರ್ವಹಿಸುತ್ತಿದೆ.  ಸರ್ಕಾರಿ-ಖಾಸಗಿ ಸಹಭಾಗಿತ್ವದ ಈ ಯೋಜನೆಯ ಜನಪರ ಉದ್ದೇಶಗಳನ್ನು ಮನಗಂಡ ಕೇಂದ್ರ ಸರ್ಕಾರ ರಾಷ್ಟ್ರೀಯ ಕಾರ್ಯಕ್ರಮವೆಂದು ಪರಿಗಣಿಸಿ, ಪ್ರತಿ ಜಿಲ್ಲೆಯಲ್ಲೂ ರುಡ್‍ಸೆಟ್ ಆರಂಭಿಸಲು ದೇಶದ ಎಲ್ಲಾ ಬ್ಯಾಂಕ್‍ಗಳಿಗೂ ಸೂಚನೆ ನೀಡಿತು.  ಜೊತೆಗೆ ರಾಷ್ಟ್ರೀಯ ರುಡ್‍ಸೆಟ್ ಅಕಾಡೆಮಿ ಆರಂಭಿಸಿ, ಡಾ|| ವೀರೇಂದ್ರ ಹೆಗ್ಡೆಯವರನ್ನೇ ಮುಖ್ಯಸ್ಥರನ್ನಾಗಿ ನೇಮಿಸಿತು.  ಇಂದು 13 ರಾಜ್ಯಗಳಲ್ಲಿ ಹರಡಿರುವ ರುಡ್ ಸೆಟ್ ಸುಮಾರು 2 ಲಕ್ಷ ನಿರುದ್ಯೋಗಿ ಯುವಕ/ಯುವತಿಯರಿಗೆ ಸ್ವ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಸಣ್ಣ ಉಳಿತಾಯ, ಸ್ವ ಉದ್ಯೋಗ ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ.  ಬಡ, ಕೆಳ ಮಧ್ಯಮ ಹಾಗೂ ಮಧ್ಯಮ ವರ್ಗದ ಹೊಲಗದ್ದೆಗಳಲ್ಲಿ ಕೆಲಸ ಮಾಡುವ, ಕಾರ್ಮಿಕ, ದಿನಗೂಲಿ ಕೆಲಸಗಾರರಾಗಿರುವ ಮಹಿಳೆಯರಿಗೆ ‘ಧರ್ಮಸ್ಥಳ ಸಂಘ’ವೆಂತಲೇ ಹೆಸರು ಪಡೆದ ಸ್ವಸಹಾಯ ಸಂಘಗಳು ಸಹಕಾರಿಯಾಗಿವೆ.  1982ರಲ್ಲಿ ಆರಂಭವಾದ ಈ ಯೋಜನೆ ಇಂದು ಸುಮಾರು 1.70 ಲಕ್ಷ ಸ್ವ ಸಹಾಯ ಸಂಘಗಳ ಮೂಲಕ ಸುಮಾರು 18 ಲಕ್ಷ ಕುಟುಂಬಗಳನ್ನು ತಲುಪಿದೆ.  ಸುಮಾರು 4500 ಕೋಟಿ ರೂಪಾಯಿ ವಹಿವಾಟಿನ ಈ ಯೋಜನೆ ಮನೆ ಬಾಗಿಲಲ್ಲಿಯೇ ಆರ್ಥಿಕ ಕ್ರಾಂತಿಯೊಂದಕ್ಕೆ ನಾಂದಿ ಹಾಡಿದೆ.

ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ನಿಶ್ಚಯಿಸಿ ಸೌರವಿದ್ಯುತ್ ಯೋಜನೆಯನ್ನು ಆರಂಭಿಸಿದ್ದಾರೆ.  ಇದರ ಪರಿಣಾಮ ಧರ್ಮಸ್ಥಳದಲ್ಲಿನ ಅತಿಥಿ ಗೃಹಗಳಲ್ಲಿ ಪ್ರತಿ ದಿನ ಸುಮಾರು 1 ಲಕ್ಷ ಲೀಟರ್‍ನಷ್ಟು ಬಿಸಿ ನೀರು ಲಭ್ಯವಿರುತ್ತದೆ.  ಬೀದಿ ದೀಪಗಳು ಸೌರವಿದ್ಯುತ್‍ನಿಂದ ಜಗಮಗಿಸುತ್ತವೆ.  ಪ್ರತಿನಿತ್ಯ ಸಾವಿರಾರು ಜನರಿಗೆ ಅನ್ನದಾನ ಮಾಡುವ ಧರ್ಮಸ್ಥಳದ ಅಡುಗೆ ಮನೆಗೆ ಜೈವಿಕ ಅನಿಲವೇ ಆಧಾರ ಎನ್ನುವಂತೆ ಬದಲಾಗಿದೆ.  ಇದು ಧರ್ಮಸ್ಥಳಕ್ಕಷ್ಟೇ ಸೀಮಿತವಾಗಿಲ್ಲ.  ಸಂಘದ ಮೂಲಕ ಸುಮಾರು 20,000ಕ್ಕೂ ಹೆಚ್ಚಿನ ಕುಟುಂಬಗಳನ್ನು ತಲುಪಿದೆ.

ಇನ್ನು ಶಿಕ್ಷಣ ಕ್ಷೇತ್ರದಲ್ಲಿಯೂ ಅಗಾಧ ಸಾಧನೆ ಮಾಡಿದ್ದಾರೆ.  ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಕಟ್ಟುವ ಮೂಲಕ ಮೂರು ಆಯುರ್ವೇದ ಕಾಲೇಜುಗಳು, ಪ್ರಕೃತಿ ಚಿಕಿತ್ಸೆ, ದಂತ, ವೈದ್ಯಕೀಯ, ಕಾನೂನು, ಇಂಜಿನಿಯರಿಂಗ್, ವ್ಯವಹಾರ ನಿರ್ವಹಣೆ ಹೀಗೆ ವಿವಿಧ ಕ್ಷೇತ್ರಗಳ ಸುಮಾರು 40 ಶಿಕ್ಷಣ ಸಂಸ್ಥೆಗಳಿವೆ.  ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ.

ತಮ್ಮ ಮಗ-ಮಗಳನ್ನು ಮದುವೆ ಮಾಡಲೂ ಅಸಹಾಯಕರಾದವರನ್ನು ಗಮನಿಸಿ 1971ರಿಂದಲೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದಾರೆ.  ಈಗಂತೂ ಸಾಮೂಹಿಕ ವಿವಾಹ ಎನ್ನುವುದು ‘ರಾಜಕಾರಣದ ಸಮಾಜಸೇವೆ’ಯಂತಾಗಿದೆ.  ಆದರೆ ನಾಲ್ಕು ದಶಕಗಳಿಂದಲೂ ಜಾತಿ, ಧರ್ಮಗಳನ್ನು ನೋಡದೆ ಉಚಿತ ವಿವಾಹ ನಡೆಸಿಕೊಂಡು ಬಂದಿರುವ ಡಾ|| ವೀರೇಂದ್ರ ಹೆಗ್ಡೆಯವರು ಸಾವಿರಾರು ಜನರ ಬಾಳಿಗೆ ದಾರಿದೀಪವಾಗಿದ್ದಾರೆ.  ಸಾಮಾಜಿಕ ಸಮಸ್ಯೆಯಾದ ಮದ್ಯಪಾನದ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ.  ಶಿಬಿರಗಳ ಮೂಲಕ ಮದ್ಯವ್ಯಸನಿಗಳನ್ನು ಕುಡಿತದಿಂದ ದೂರವಿಡುವ ಸಾಮಾಜಿಕ ಕಾರ್ಯವನ್ನು ಕೈಗೊಂಡಿದ್ದಾರೆ.  ಕನ್ನಡ, ತುಳು ಸಾಹಿತ್ಯ ಸಮ್ಮೇಳನಗಳು,  ರೈತರಿಗಾಗಿ ಕಿಸಾನ್ ಮೇಳ… ಹೀಗೆ ಒಂದಿಲ್ಲೊಂದು ಸಾರ್ವಜನಿಕ ಚಟುವಟಿಕೆಗಳನ್ನು ನೆರವೇರಿಸಿಕೊಂಡು ಬಂದಿದ್ದಾರೆ.

ಡಾ|| ವೀರೇಂದ್ರ ಹೆಗ್ಡೆಯವರ ಸುಸ್ಥಿರ ಸ್ವಾವಲಂಬಿ ಸಮಾಜ ಕಟ್ಟುವ ಕೈಂಕರ್ಯ, ಅವರ ಅವಿರತ ಶ್ರಮ, ಜಾತಿ-ಧರ್ಮಗಳ ಗಡಿಯಿಲ್ಲದೆ ಎಲ್ಲರನ್ನೂ ಸ್ವೀಕರಿಸುವ ಅವರ ಮನೋಭಾವ ಇಂದು ಕರ್ನಾಟಕದ ಭೂಪಟದಲ್ಲಿ ಧರ್ಮಸ್ಥಳಕ್ಕೊಂದು ಮಹತ್ವದ ಸ್ಥಾನ ನೀಡಿದೆ.  ನೀತಿ ನಿರೂಪಕರು, ಜನಪ್ರತಿನಿಧಿಗಳು, ಅಕಾಡೆಮಿಗಳು, ಆಡಳಿತಗಾರರು ಹೆಗ್ಡೆಯವರಿಂದ ಕಲಿಯಬೆಕಾದ್ದು ಸಾಕಷ್ಟಿದೆ.

1968ರಲ್ಲಿ ಧರ್ಮಾಧಿಕಾರಿಯಾದ ನಂತರದಿಂದಲೂ ಧರ್ಮಸ್ಥಳಕ್ಕೆ ದಿನೆದಿನೇ ಆಧುನಿಕ ರೂಪ ನೀಡುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ಜನರು ಬಂದು-ಹೋದರು ಧರ್ಮಸ್ಥಳದ ಸ್ವಚ್ಛತೆ, ಅಲ್ಲಿನ ಶಿಸ್ತು ಎಂತಹವರನ್ನೂ ನಿಬ್ಬೆರಗಾಗಿಸುತ್ತದೆ.  ಶ್ರೀ ಮಂಜುನಾಥ ಸ್ವಾಮಿಯೇ ಅಲ್ಲಿನ ಕೇಂದ್ರಬಿಂದುವಾದರೂ 39 ಅಡಿ ಎತ್ತರದ ಬಾಹುಬಲಿ ಮೂರ್ತಿ ನಿರ್ಮಿಸಿ ಭಕ್ತರನ್ನು ಧರ್ಮದ ಹಂಗಿಲ್ಲದೆ ಸೆಳೆಯುತ್ತಿದ್ದಾರೆ.  ಪ್ರತಿದಿನ 20,000ಕ್ಕೂ ಹೆಚ್ಚಿನ ಭಕ್ತರು ವಾಸ್ತವ್ಯ ಹೂಡಲು ಅನುಕೂಲವಾಗುವಂತಹ ಅತಿಥಿ ಗೃಹಗಳು; 5000 ಮಂದಿ ಒಟ್ಟಿಗೆ ಕುಳಿತು ಊಟ ಮಾಡಬಹುದಾದ ಅನ್ನಪೂರ್ಣ ಭವನ; ಒಂದು ದಿನಕ್ಕೆ ಸುಮಾರು 60,000 ಜನರಿಗೆ ಅನ್ನದಾನ ಮಾಡುವ ಸಾಮಥ್ರ್ಯ ಇವೆಲ್ಲವುಗಳ ಹಿಂದೆ ಡಾ|| ವೀರೇಂದ್ರ ಹೆಗ್ಡೆಯವರ ಶ್ರಮವಿದೆ.  ಹಿಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಶ್ರದ್ಧೆಯಿದೆ.  ಧರ್ಮೋತ್ಥಾನ ಟ್ರಸ್ಟ್ ಮೂಲಕ ಸುಮಾರು 200ಕ್ಕೂ ಹೆಚ್ಚಿನ ಐತಿಹಾಸಿಕ ದೇವಾಲಯಗಳನ್ನು ನವೀಕರಣಗೊಳಿಸಿದ್ದಾರೆ.

ಇವರ ಸಾಧನೆಗೆ ಪದ್ಮಭೂಷಣ, ಕರ್ನಾಟಕ ರತ್ನ, ರಾಜರ್ಶಿ ಸೇರಿದಂತೆ ಮಂಗಳೂರು, ಧಾರವಾಡ, ರಾಜೀವ್ ಗಾಂಧಿ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.  ಬಾಹುಬಲಿ ಮೂರ್ತಿ ನಿರ್ಮಾಣದ ನಂತರ ‘ಅಭಿನವ ಚಾವುಂಡರಾಯ’ ಎಂತಲೂ ಬಿರುದು ಪಡೆದಿದ್ದಾರೆ.

ಉತ್ತಮ ಕಾರ್ಯಗಳಿಗಾಗಿಯೇ ಸದಾ ಸುದ್ದಿಯಲ್ಲಿರುವ, ಜನಜಂಗುಳಿಯಿಂದಲೇ ತುಂಬಿರುವ ಧರ್ಮಸ್ಥಳದ ವಿರುದ್ಧ ಈವರೆಗೂ ಇಲ್ಲದಿದ್ದ ಆರೋಪಗಳನ್ನು ಇದೀಗ ಹತ್ಯಾಚಾರ ಪ್ರಕರಣದ ಜೊತೆ ಜೊತೆಯಲ್ಲೇ ಹೊರಿಸಲಾಗುತ್ತಿದೆ.  ಸೌಜನ್ಯರನ್ನು ಹತ್ಯಾಚಾರ ಮಾಡಿದ ಕ್ರೂರಿಗಳನ್ನು ಮೊದಲು ಗಲ್ಲಿಗೇರಿಸಬೇಕು.  ನಿರ್ಭಯಾ ಹತ್ಯಾಚಾರಿಗಳಿಗಾದ ಗತಿಯೇ ಇಲ್ಲಿನ ಅಪರಾಧಿಗಳಿಗೂ ಆಗಬೇಕು.  ಆದರೆ ಸೌಜನ್ಯ ಪರ ಹೋರಾಟವನ್ನು ಧರ್ಮಸ್ಥಳದ ವಿರುದ್ಧ ಹೋರಾಟವಾಗಿ ಮಾರ್ಪಡಿಸ ಹೊರಟಿರುವುದು ಪ್ರಕರಣ ಹಾದಿ ತಪ್ಪುತ್ತದೆಯೇನೋ ಎಂಬ ಪ್ರಶ್ನೆ ಮೂಡಿಸುತ್ತದೆ.

ಹೀಗೆ ಸುಖಾಸುಮ್ಮನೆ ಆರೋಪ ಮಾಡುತ್ತಿರುವುದಕ್ಕಿಂತಲೂ ನ್ಯಾಯಾಲಯದ ಮೆಟ್ಟಿಲೇರಬಹುದಲ್ಲವೇ?  ಈ ನಾಲ್ಕು ದಶಕಗಳಲ್ಲಿ ಹಲವಾರು ಮುಖ್ಯಮಂತ್ರಿಗಳು ಭೇಟಿ ನೀಡಿದಾಗಲೂ ಸುಮ್ಮನಿದ್ದವರು ಇದೀಗ ಸೌಜನ್ಯ ಪ್ರಕರಣದೊಂದಿಗೆ ತಳುಕು ಹಾಕುತ್ತಿರುವುದೇಕೆ?  ಜನರ ಧಾರ್ಮಿಕ ನಂಬಿಕೆಗಳೊಂದಿಗೆ ಆಟವಾಡದೆ, ಒಂದು ಜಾತಿಗೆ, ಒಂದು ಧರ್ಮಕ್ಕೆ, ಒಂದು ಸ್ಥಳಕ್ಕೆ ಸೀಮಿತವಾಗದೆ ಎಲ್ಲರನ್ನೂ ಸಮಾನವಾಗಿ ಕಾಣುವ ಧರ್ಮಸ್ಥಳ ಹಾಗೂ ಧರ್ಮಸ್ಥಳಕ್ಕೆ ಆಧುನಿಕ ರೂಪ ನೀಡಿದ ಡಾ|| ವೀರೇಂದ್ರ ಹೆಗ್ಡೆಯವರ ಸಾಧನೆಗಳೇ ಹಲವರಿಗೆ ಮಾದರಿಯಾಗಬೇಕಿದೆ.  ಆದರೆ  ಅವರೊಬ್ಬರನ್ನೇ ಗುರಿಯಾಗಿಸಿಕೊಂಡು ಕೆಲವರು ಆರೋಪಗಳಲ್ಲಿ ತೊಡಗಿದ್ದಾರೆ.  ಇಲ್ಲಿನ ಹಣ, ಸಂಪತ್ತನ್ನೆಲ್ಲಾ ಸ್ವಿಸ್ ಬ್ಯಾಂಕ್‍ನಂತಹ ತೆರಿಗೆ ಸ್ವರ್ಗಗಳಲ್ಲಿಟ್ಟು ಐಷರಾಮಿ ಜೀವನ ನಡೆಸುವವರ ವಿರುದ್ಧ ಸೊಲ್ಲೆತ್ತದವರು ಗ್ರಾಮೀಣ ಭಾಗದ, ಸಾಮಾನ್ಯ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಪಣತೊಟ್ಟ ಡಾ|| ವಿರೇಂದ್ರ ಹೆಗ್ಡೆಯವರ ವಿರುದ್ಧ ಆರೋಪ ಮಾಡಲು ನಿಂತಿದ್ದಾರೆ.  ಜನಪರವಾಗಿ ತಾವೂ ಏನನ್ನು ಮಾಡುವುದಿಲ್ಲ, ಮಾಡುವಂತಹವರಿಗೂ ಬಿಡುವುದಿಲ್ಲ ಎಂಬ ಮನಸ್ಥಿತಿಯರಿಗೆ ಏನನ್ನಬೇಕೋ?

ನಾಗರೀಕ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕುಗಳಿವೆ.  ಹಾಗೆಯೇ ಪ್ರತಿಯೊಬ್ಬರೂ ಸಮಾಜಕ್ಕೆ ಏನನ್ನಾದರೂ ನೀಡುವಂತಾಗಬೇಕು ಎಂಬ ಧ್ಯೇಯದೊಂದಿಗೆ ಕಾರ್ಯನಿರತರಾಗಿರುವ ಡಾ|| ವೀರೇಂದ್ರ ಹೆಗ್ಡೆಯವರ ಅಷ್ಟೂ ಸಾಧನೆಗೆ ಕುಂಟು ನೆಪಗಳ ಮೂಲಕ ಮಸಿ ಬಳಿಯುತ್ತಿರುವ ಕೆಲಸ ಮೊದಲು ನಿಲ್ಲಬೇಕಿದೆ.

5 ಟಿಪ್ಪಣಿಗಳು Post a comment
  1. ವಿಜಯ್ ಪೈ
    ಆಕ್ಟೋ 25 2013

    ನಾನು ಟಿ.ವಿ ೯ ನ ಎಲ್ಲ ವಿಡಿಯೋಗಳನ್ನು ಗಮನವಿಟ್ಟು ನೋಡಿದೆ..ಸೌಜನ್ಯ ಅಪ್ಪ,ಅಮ್ಮ ಗೊಂದಲದಲ್ಲಿದ್ದಂತಿದ್ದರು. ನನ್ನ ಗಮನಕ್ಕೆ ಬಂದಂತೆ, ನನಗೆ ಮಹೇಶ ಶೆಟ್ಟಿ ತಿಮರೋಡಿ ಅಜೆಂಡಾಗಳು ಕೊಂಚ ಸಂಶಯಾಸ್ಪದ ಎನಿಸುತ್ತಿವೆ..ಎರಡನೆಯದಾಗಿ ಈಗಾಗಲೇ ಮರಣಶಯ್ಯೆಯಲ್ಲಿರುವ ಪಾರ್ಟಿಯ ಕಾಮ್ರೇಡ್ ಗಳು ಈ ಘಟನೆಯನ್ನು ಊರುಗೋಲಾಗಿ ಬಳಸಲು ನೋಡುತ್ತಿವೆ. ಏನೇ ಇರಲಿ, ನಿಜವಾದ ಅಪರಾಧಿಗಳು ಯಾರೇ ಆಗಿರಲಿ..ಅವರಿಗೆ ಶಿಕ್ಷೆಯಾಗಲೇ ಬೇಕು. ಹೆಗ್ಗಡೆ ಕುಟುಂಬದವರು ತನಿಖೆಗೆ ಪೂರ್ತಿ ಸಹಕಾರ ಕೊಡಬೇಕು.
    —-
    ಕೊನೆಯಲ್ಲಿ : ಈ ಹತ್ಯಾಚಾರ (ಅತ್ಯಾಚಾರ+ಹತ್ಯೆ) ಹೊಸ ಶಬ್ದವೆ? ಅಥವಾ ಹಾಸನವೆ? 🙂

    ಉತ್ತರ
    • ರವಿ
      ಆಕ್ಟೋ 26 2013

      ಒಂದು ಹೋರಾಟದ ದಿಕ್ಕು ತಪ್ಪಿಸುವುದು ಹೇಗೆ ಎನ್ನುವುದರ ಮೇಲೆ ಪಿ.ಎಚ್.ಡಿ. ಮಾಡಲು ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ. ಉದಾ: ಅಣ್ಣಾ ಹಜಾರೆ ಹೋರಾಟ, ಅವರೊಂದಿಗೆ ಸೇರಿದ ನೂರೆಂಟು ಮಾಧ್ಯಮಗಳು, ಸಾವಿರಾರು ಹಿತಾಸಕ್ತಿಗಳು, ಅಲ್ಲಿ ನಡೆದ ಕಿತ್ತಾಟಗಳು, ಬಹುಶ ಅಣ್ಣಾ ಹಜಾರೆಗೆ ಹೋರಾಟದ ಮೂಲ ಉದ್ದೇಶವೇ ಮರೆತು ಹೋಗುವಂತೆ ಮಾಡಿದವು. ಎಲ್ಲಿದೆ ಈಗ ಭೃಷ್ಟಾಚಾರದ ವಿರುದ್ಧ ಹೋರಾಟ?
      ಸೌಜನ್ಯ ವಿಷಯದಲ್ಲೂ ಬಹುಶ ಇದೇ ಆಗುತ್ತಿದೆ. ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರಿಗೆ ಸೌಜನ್ಯ ನ್ಯಾಯಕ್ಕಿಂತ ತಮ್ಮ ವೈಯುಕ್ತಿಕ ಹಿತಾಸಕ್ತಿಗಳೇ ಮುಖ್ಯವಾದಂತೆ ಕಾಣುತ್ತಿದೆ.

      ಉತ್ತರ
  2. Nagshetty Shetkar
    ಆಕ್ಟೋ 26 2013

    ಮಾಡಿದ್ದುಣ್ಣೋ ಮಾರಾಯ! ಅತ್ಯಾಚಾರದಂತಹ ಹೇಯ ಕೆಲಸ ಮಾಡಿ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವುದೇಕೆ ಅಂತ ಅಂದರೆ ಹೇಗೆ?

    ಅಂದ ಹಾಗೆ ಧರ್ಮಸ್ಥಳವು ವೈದಿಕ ಶಾಹಿಯನ್ನು ಧಿಕ್ಕರಿಸಿ ನೆಲದ ಮಕ್ಕಳ ಉಸಿರಾಗುವುದು ಯಾವಾಗ?

    ಉತ್ತರ
    • ವಿಜಯ್ ಪೈ
      ಆಕ್ಟೋ 26 2013

      ಸಂಬಂಧವಿಲ್ಲದ ದೇವರ ಬಗ್ಗೆ ಕಾಯಕಯೋಗಿ ಶರಣರ ಚಿಂತೆ!..ಅಲ್ಲೂ ಹೋಗಿ..ಕಾಯಕಯೋಗ ಮುಂದುವರಿಸುವ ಯೋಚನೆಯೆ??

      ಉತ್ತರ
      • Nagshetty Shetkar
        ಆಕ್ಟೋ 26 2013

        Mr. Vijay, why are you brushing aside the fact that a girl was murdered in Dharmasthala in most horrible circumstances and circumstantial evidences point at involvement of influential people? Because you people unconditionally support religious leaders, these kind of events keep happening.

        ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments