ವಿಷಯದ ವಿವರಗಳಿಗೆ ದಾಟಿರಿ

Archive for

4
ಜೂನ್

ಕೋಟ್ಯಧೀಶರ ಪ್ರಮಾಣ ಪತ್ರ ಎಲ್ಲಿ?

– ತುರುವೇಕೆರೆ ಪ್ರಸಾದ್

EC    ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು  ರೂಲ್ 4ಎ ಪ್ರಕಾರ ನಮೂನೆ 26ರಲ್ಲಿ  ತಮ್ಮ ಚರ, ಸ್ಥಿರ ಆಸ್ತಿ ಘೋಷಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅದರಂತೆ 16ನೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದೇಶದ ಎಲ್ಲಾ ಅಭ್ಯರ್ಥಿಗಳೂ ತಮ್ಮ ಆಸ್ತಿಗಳನ್ನು ನಮೂನೆ-26ರಲ್ಲಿ ಘೋಷಿಸಿಕೊಂಡಿದ್ದರು. ಈ ನಮೂನೆಗಳನ್ನು ರಾಜ್ಯ ಚುನಾವಣಾಧಿಕಾರಿಗಳು ನೀಡುವ ಮಾಹಿತಿಯ ಆಧಾರದ ಮೇಲೆ  ಭಾರತೀಯ ಚುನಾವಣಾ ಆಯೋಗ ತನ್ನ ವೈಬ್‍ಸೈಟಿನಲ್ಲಿ ಪ್ರಕಟಿಸಿದೆ.ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೇರಿದಂತೆ ಎಲ್ಲರ ಆಸ್ತಿ ವಿವರಗಳು ಮತ್ತು ಇತರೆ ಮಾಹಿತಿಗಳು ಈ ವೆಬ್‍ಸೈಟ್‍ನಲ್ಲಿ ಈಗಲೂ ಲಭ್ಯವಿವೆ.( ಆಸಕ್ತರು ಎಲೆಕ್ಷನ್ ಕಮಿಶನ್ ಆಫ್ ಇಂಡಿಯಾದ ಅಫಿಡವಿಟ್ ವಿಬಾಗದಲ್ಲಿ ಈ ದಾಖಲೆಗಳನ್ನು ಪರಿಶೀಲಿಸಿ ಡೌನ್‍ಲೋಡ್ ಮಾಡಿಕೊಳ್ಳಬಹುದು) ಅಚ್ಛರಿಯೆಂದರೆ ಕರ್ನಾಟಕದಲ್ಲಿ ಅತ್ಯಂತ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದೆನಿಸಿದ  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ವಿವರಗಳು ಈ ವೆಬ್‍ಸೈಟಲ್ಲಿ ಲಭ್ಯವಿಲ್ಲ. ಈ ಕ್ಷೇತ್ರದಲ್ಲಿ ಖ್ಯಾತನಾಮರಾದ ನಂದನ್ ನಿಲೇಖಣಿ,ಅನಂತ್ ಕುಮಾರ್, ರೂತ್ ಮನೋರಮಾ ಇತರೆ 23 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ನಂದನ್ ನಿಲೇಖಣಿ ಸಾವಿರಾರು ಕೋಟಿ ರೂಗಳ ಸಂಪತ್ತಿನ ಒಡೆಯರು ಎಂದು ಪತ್ರಿಕೆಗಳು ವರದಿ ಮಾಡಿದ್ದವು.

ಚುನಾವಣೆ ನಡೆಯುವುದಕ್ಕೆ ಮುಂಚೆಯೂ ಈ ವೆಬ್‍ಸೈಟ್‍ನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಯಾವೊಬ್ಬ ಅಭ್ಯರ್ಥಿಯ ಮಾಹಿತಿ ಕೇಳಿದರೂ ದಾಖಲೆ ಲಭ್ಯವಿಲ್ಲ ಎಂದು ಬರುತ್ತಿತ್ತು. ತಾಂತ್ರಿಕ ದೋಷವಿರಬಹುದು, ಒಂದೆರಡು ದಿನಗಳಲ್ಲಿ ಸರಿಯಾಗುತ್ತದೆ ಎಂದುಕೊಂಡರೆ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿ, ನರೇಂದ್ರ ಮೋದಿ ಪ್ರಧಾನಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿ ವಾರವಾದರೂ ಅದೇ ಕತೆ. ಅನಂತಕುಮಾರ್ ಅವರ ಪ್ರಮಾಣ ಪತ್ರದ ಒಂದು ಪುಟ ಬಿಟ್ಟರೆ ಮತ್ಯಾವ ದಾಖಲೆಗಳೂ ಲಭ್ಯವಿಲ್ಲ. ಬಹುಶಃ ಕೋಟಿ ಕೋಟಿ ಸಂಪತ್ತಿನ ಭಾರಕ್ಕೆ ದಾಖಲೆಗಳು ಅಪ್‍ಲೋಡ್ ಆಗುತ್ತಿರುವುದು ನಿಧಾನವಾ? ಇಲ್ಲ ದಕ್ಷಿಣದ ದಾಖಲೆಗಳ ಮೇಲೆಯೇ ಏನಾದರೂ ದಾಕ್ಷಿಣ್ಯದ ಭಾರ ಬಿದ್ದಿದೆಯಾ? ಎಂಬ ಅನುಮಾನ ಮೂಡಿಸಿದೆ. ವಿಪರ್ಯಾಸವೆಂದರೆ ಇಂತಹ ಒಂದು ಮಾಹಿತಿ ಕೊರತೆಯ ವಿಷಯ ಯಾವೊಂದು ಪ್ರಮುಖ ಪತ್ರಿಕೆಗೂ ಮಹತ್ವದ ವಿಷಯವೇ ಅಲ್ಲ. ಗಮನಕ್ಕೆ ತಂದರೂ ಪ್ರಮುಖ ಪತ್ರಿಕೆಗಳಾವುವೂ ಈ ಬಗ್ಗೆ ಒಂದು ಸಾಲು ಸಹ ಪ್ರಕಟಿಸದಿರುವುದು ಅಚ್ಛರಿಯ ಸಂಗತಿ. ಚುನಾವಣಾ ಆಯೋಗ ಈ ನ್ಯೂನತೆಯನ್ನು ಸರಿಪಡಿಸೀತೇ?