ಒಳ್ಳೆಯ ದಿನಗಳು ಉಚಿತವಾಗಿ ಬರುವುದಿಲ್ಲ!
– ಅನಿಲ್ ಚಳಗೇರಿ
2014ರ ಚುನಾವಣೆಯಲ್ಲಿ ಬಿಜೆಪಿಯ ಪಂಚ್ ಲೈನ್ ಎನ್ನಬಹುದಾದ “ಅಚ್ಛೆ ದಿನ್ ಅನೆ ವಾಲೆ ಹೈ’ (ಒಳ್ಳೆಯ ದಿನಗಳು ಬರಲಿವೆ) ಸುತ್ತಮುತ್ತಲೂ ಕಳೆದ ಒಂದು ತಿಂಗಳಿಂದ ವಿವಾದವೊಂದು ಸೃಷ್ಟಿಯಾಗಿದೆ. ಮೋದಿಯವರು ಆಡಳಿತ ರೀತಿಯನ್ನು ಬಿಗಿಗೊಳಿಸಿ ಇಡೀ ದೇಶದ ಪರಿಸ್ಥಿತಿಯನ್ನು ಹತೋಟಿಯಲ್ಲಿ ತರಬೇಕಾದಾರೆ ಕೆಲವು ಗಟ್ಟಿ ನಿರ್ಧಾರ(ಸದ್ಯಕ್ಕೆ ನಮಗೆ ಇಷ್ಟವಾಗದಿರುವ) ತೆಗೆದುಕೊಳ್ಳಲೇಬೇಕು. ಕಳೆದ ಒಂದು ದಶಕದಲ್ಲಿ ಯುಪಿಎ ಸರ್ಕಾರ ಮಾಡಿದ ಆವಾಂತರಗಳನ್ನು ಮೊದಲು ಸರಿಪಡಿಸಿ ಆಮೇಲೆ ಅಭಿವೃದ್ಧಿಯ ಕಡೆಗೆ ಹೋಗುವ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ. ಅಷ್ಟಕ್ಕೂ ಈ ಅಭಿವೃದ್ಧಿಯ ಹಾದಿ ಮೊದಲ ದಿನದಿಂದಲೇ ಪ್ರಾರಂಭವಾಗಿದೆ. ಇದನ್ನು ಅಚ್ಛೆ ದಿನ್ ಅಂದರೂ ತಪ್ಪಾಗದು. ಅಷ್ಟಕ್ಕೂ ಮೋದಿಯವರು ಉಚಿತ ದಿನ್ ಎಂದು ಹೇಳಿಲ್ಲ!
ದೆಹಲಿಯಲ್ಲಿನ ವಿದ್ಯುತ್ ಅಭಾವದಿಂದ ಹಿಡಿದು ರೈಲ್ವೆ ದರ ಏರಿಕೆಯವರೆಗಿನ ವಿಷಯವನ್ನು ಹಿಡಿದುಕೊಂಡು ಅಚ್ಛೇ ದಿನ್ ಅಂದರೆ ಇದೇನಾ ಅನ್ನುವಷ್ಟು ಕನ್‌ಫ್ಯೂಷನ್ ಹುಟ್ಟಿಬಿಟ್ಟಿದೆ. “ಒಮ್ಮಿಂದೊಮ್ಮೇಲೆ ಮಧ್ಯಮ ವರ್ಗದ ವಿರೋಧಿಯಾದರೆ ನರೇಂದ್ರ ಮೋದಿ?” ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ. ಯುಪಿಎ ನೀತಿಯಂತೆ ರಾಜಕೀಯ ಹಿತಾಸಕ್ತಿಗೆ ಸರ್ಕಾರದ ಬೊಕ್ಕಸವನ್ನು ಬರಿದಾಗಿಸುವುದು ಸರಿಯೇ? ಎಂದು ನಮ್ಮನ್ನು ನಾವು ಒಮ್ಮೆ ಕೇಳಿಕೊಂಡರೆ ಬಹುಶಃ ನಿಮಿಷಾರ್ಧದಲ್ಲೇ ನಮಗೆ ಉತ್ತರ ಸಿಕ್ಕು ಬಿಡಬಹುದು.
ನಮ್ಮ ಸರ್ಕಾರಗಳಿಗೆ ರೈಲ್ವೆ ಸ್ಟೇಷನ್ ಸ್ವಚ್ಛವಿಡಲು ಏನು ಸಮಸ್ಯೆ? ಸರಿಯಾದ ಸಮಯಕ್ಕೆ ತತ್ಕಾಲ್ ಟಿಕೆಟ್ ಬುಕ್ ಆಗುವದಿಲ್ಲ, ರೈಲ್ವೆ ಪ್ಲಾಟ್ ಫಾರಂ ಸ್ವಚ್ಛವಿರುವುದಿಲ್ಲವೆಂದು ದೂರುತ್ತಾ ಬೇರೆ ದೇಶದ ರೈಲ್ವೆ ವ್ಯವಸ್ಥೆಯನ್ನು ಹೊಗಳುತ್ತೇವೆ. ರೈಲ್ವೆ ಇಲಾಖೆ 26 ಸಾವಿರ ಕೋಟಿಗಳ ನಷ್ಟ ಅನುಭವಿಸುತ್ತಿದೆ, ಪ್ರತಿ ದಿನ 30 ಕೋಟಿಯಷ್ಟು ನಷ್ಟ ಭರಿಸಬೇಕಾಗುತ್ತಿದೆ, ಅದರಲ್ಲೂ ಸರಕು ಸಾಗಣಿಕೆಯಲ್ಲಿ ಸ್ವಲ್ಪ ಲಾಭ ಮಾಡುವದನ್ನು ಬಿಟ್ಟರೆ, ಪ್ರಯಾಣಿಕರ ರೈಲುಗಳಿಂದಲೇ ಅಧಿಕ ನಷ್ಟ ಎದುರಾಗುತ್ತಿದೆ ಎನ್ನುತ್ತದೆ ರೈಲ್ವೆ ಇಲಾಖೆಯ ಅಂಕಿ ಅಂಶಗಳು. ಇಷ್ಟೆಲ್ಲಾ ನಷ್ಟಗಳ ಮಧ್ಯೆ ಸರ್ಕಾರ ಒಳ್ಳೆಯ ರೈಲ್ವೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವದಾದರು ಹೇಗೆ? ಅದಕ್ಕಾಗಿಯೇ ಈ ರೈಲ್ವೆ ದರ ಏರಿಕೆ. ಮುಂಬರುವ ದಿನಗಳಲ್ಲಿ ರೈಲ್ವೆ ಇಲಾಖೆ ತನ್ನ ನಷ್ಟಗಳನ್ನೆಲ್ಲ ಸಂಪೂರ್ಣವಾಗಿ ಕಡಿಮೆ ಮಾಡಿ ಆಮೇಲೆ ನವೀಕರಣದ ಬಗ್ಗೆ ವಿಚಾರ ಮಾಡಬೇಕು, ಫ್ರೀ ಬೀ(ಉಚಿತ ಕೊಡುಗೆಗಳನ್ನು) ಸರ್ಕಾರಗಳು ಕೊಡಬಾರದೆನ್ನುವ ನಾವು ದಿನಕ್ಕೆ 30 ಕೋಟಿ ನಷ್ಟವಾದರೂ ಪರವಾಗಿಲ್ಲ, ನಮ್ಮ ಜೇಬಿಗೆ ಮಾತ್ರ ಕತ್ತರಿ ಬೀಳಬಾರದು ಎನ್ನುತ್ತಿದ್ದೇವೆ! ಅಷ್ಟಕ್ಕೂ, ಒಂದು ಉತ್ತಮ ರೈಲ್ ವ್ಯವಸ್ಥೆಯಿಂದ ಅತೀ ಹೆಚ್ಚು ಲಾಭ ಪಡೆಯುವವರು ಯಾರು? ನಾವೇ ಅಲ್ಲವೇ? ಇಲ್ಲವೆಂದರೆ, ರೈಲ್ವೆ ಇಲಾಖೆಯು ಮುಂದೊಂದು ದಿನ ಏರ್ ಇಂಡಿಯಾ ಥರ ದೊಡ್ಡ ನಷ್ಟಕ್ಕೆ ಒಳಗಾಗಬಹುದು. ಲಾಭಗಳಿಸುವ ರೈಲ್ವೆ ಇಲಾಖೆಯಿಂದ ಮಾತ್ರ ಜಪಾನ್ ಮತ್ತು ಯುರೋಪ್ ರಾಷ್ಟ್ರಗಳಂಥ ರೈಲ್ವೆ ಸಂಪರ್ಕ ಒದಗಿಸಲು ಸಾಧ್ಯ.