ವಿಷಯದ ವಿವರಗಳಿಗೆ ದಾಟಿರಿ

Archive for

6
ಜೂನ್

ಬುದ್ಧಿಜೀವಿಗಳೇ, ಕಾದು ನೋಡುವುದಲ್ಲದೆ ನಿಮಗೆ ಅನ್ಯ ಮಾರ್ಗವಿಲ್ಲ!

– ಸಹನಾ ವಿಜಯ್ ಕುಮಾರ್

ಪ್ರಗತಿಪರರು ಹಾಗೂ ಬುದ್ಧಿಜೀವಿಗಳುAction and reaction are equal and opposite. ಕ್ರಿಯೆ ಮತ್ತು ಪ್ರತಿಕ್ರಿಯೆಗಳು ವಿರುದ್ಧ ದಿಕ್ಕಿನಲ್ಲಿದ್ದರೂ ಸಮಬಲದಿಂದಿರುತ್ತವೆ. ಇದು ನ್ಯೂಟನ್ನ ಮೂರನೆಯ ನಿಯಮ. ಸುಮಾರು ಮೂರು ಶತಕಗಳಿಗೂ ಹಿಂದೆ, ಅಂದರೆ ಕ್ರಿ.ಶ. 1687ರಲ್ಲಿ ನ್ಯೂಟನ್ ಜಗತ್ತಿಗೆ ಸಾಬೀತುಪಡಿಸಿದ್ದು. ಈಗ 2014ರಲ್ಲಿ ನಾವು ಭಾರತೀಯರು ಈ ನಿಯಮದ ಸತ್ಯಾಸತ್ಯತೆಯನ್ನು ಮತ್ತೆ ಸಾಬೀತುಪಡಿಸಿದ್ದೇವೆ! ಇಲ್ಲಿ ಕ್ರಿಯೆ – ಚುನಾವಣಾ ಪೂರ್ವದಲ್ಲಿ ಇಡೀ ದೇಶದಲ್ಲಿ ಒಂದು ವ್ಯವಸ್ಥಿತ ಜಾಲವು ಮೋದಿಯವರ ಕುರಿತ ಭಯವನ್ನು ಹುಟ್ಟುಹಾಕಿದ್ದು. ಪ್ರತಿಕ್ರಿಯೆ – ಜನಸಾಮಾನ್ಯರು ಆ ಭಯದ ಹುಟ್ಟಡಗಿಸಿ ಮೋದಿಯವರಿಗೆ ಐತಿಹಾಸಿಕ ವಿಜಯ ದೊರಕಿಸಿಕೊಟ್ಟಿದ್ದು. ಒಂದು ವಿಶೇಷವೆಂದರೆ ಪ್ರತಿಕ್ರಿಯೆಯು ಕ್ರಿಯೆಗಿಂತ ಬಹಳ ಪಟ್ಟು ಹೆಚ್ಚಿದೆ, ತೀಕ್ಷ್ಣವಾಗಿದೆ ಹಾಗೂ ಮುಟ್ಟಿ ನೋಡಿಕೊಳ್ಳುವ ಹಾಗಿದೆ! ಈಗ ನ್ಯೂಟನ್ ಬದುಕಿದ್ದರೆ ಬಹಳ ಖುಷಿಪಡುತ್ತಿದ್ದ!

ಹೀಗೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿತ್ತು. ಏಕೆಂದರೆ ಈ ಕ್ರಿಯೆಯನ್ನು ಹುಟ್ಟುಹಾಕಿದವರು ಅಂತಿಂಥವರಲ್ಲ, ಮೂರು ವರ್ಗಗಳಾಗಿ ವಿಂಗಡಿಸಬಹುದಾದ ಘಟಾನುಘಟಿಗಳು. ಒಂದು ವರ್ಗ ರಾಜಕಾರಣಿಗಳದ್ದಾದರೆ ಮತ್ತೊಂದು ಸುದ್ದಿ ಮಾಧ್ಯಮಗಳದ್ದು. ಮೂರನೆಯ ಹಾಗೂ ಅತ್ಯಂತ ಕುಲೀನ(?) ವರ್ಗ ಪ್ರಗತಿಪರರು ಹಾಗೂ ಬುದ್ಧಿಜೀವಿಗಳದ್ದು. ರಾಜಕಾರಣಿಗಳು ಸಿದ್ಧಾಂತ ಭೇದ ಮರೆತು ಒಂದಾದರು. ಮೋದಿಯವರನ್ನು ರಾಕ್ಷಸನೆಂದು ಬಿಂಬಿಸಿ ತಮ್ಮ ಕ್ರಿಯೆಗೆ ಮೊದಲಿಟ್ಟುಕೊಂಡರು. ಇನ್ನು ಸುದ್ದಿ ಮಾಧ್ಯಮದವರು ಹಿಂದೆ ಬೀಳುತ್ತಾರೆಯೇ? ಅಪಸ್ಮಾರ ಇರುವವರಿಗಿಂತ ಹೆಚ್ಚಾಗಿ ದೇಹ ಮನಸಿನ ಸ್ಥಿಮಿತ ಕಳೆದುಕೊಂಡು ಆ ಕ್ರಿಯೆಗೆ ಶಕ್ತಿ ಹಾಗೂ ವೇಗ ತುಂಬಿದರು. ಯಾವ ರಾಷ್ಟ್ರೀಯ ಚಾನೆಲ್ ನೋಡಿದರೂ ಮೋದಿ ಎಂಬ ನರಹಂತಕನ ಗೋಧ್ರಾ ಕಥೆಯೇ. ಇನ್ನುಳಿದವರು ಪ್ರಗತಿಪರರು ಹಾಗೂ ಬುದ್ಧಿಜೀವಿಗಳು. ಇದೊಂಥರಾ ವಿಚಿತ್ರ ತಳಿ. ತಮಗೆ ತಲೆಯಿಂದ ಕಾಲಿನವರೆಗೂ ರಕ್ತ ಮಾಂಸಗಳ ಬದಲು ಬುದ್ಧಿಯೇ ತುಂಬಿಕೊಂಡಿದೆಯೆಂಬ ಭ್ರಾಂತಿಯ ಜನ. ಉಳಿದವರು ಕೇವಲವೆಂಬ ಉದ್ಧಟತನ. ಜೊತೆಗೆ ಇವರ ಆವುಟವನ್ನು ಎಲ್ಲರೂ ಸಹಿಸ ಲೇಬೇಕೆಂಬ ತಿಕ್ಕಲುತನ. ಇವರೂ ಗುಂಪುಕಟ್ಟಿಕೊಂಡು ತಮ್ಮ ಕೈಲಾದಷ್ಟು ‘ಭಯೋತ್ಪಾದನೆ'(ಭಯ+ಉತ್ಪಾದನೆ) ಮಾಡಿದರು.

ಈಗ ಇವರೆಲ್ಲರಿಗೂ ತಕ್ಕ ಪ್ರತಿಕ್ರಿಯೆ ನೀಡಿದ್ದೇವೆ ನೋಡಿ, ಬಾಲ ಮುದುರಿಕೊಂಡು ಸುಮ್ಮನಾಗಿದ್ದಾರೆ. ರಾಜಕಾರಣಿಗಳು ಪರಸ್ಪರ ದೋಷಾರೋಪಣೆಯ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ರಾಜ್‍ದೀಪ್ ಸರ್‍ದೇಸಾಯಿ, ಬರ್ಖಾ ದತ್ ಹಾಗೂ ಅರ್ಣಬ್ ಗೋಸ್ವಾಮಿಯರು ಇಂಗು ತಿಂದ ಮಂಗನ ಮುಖ ಮಾಡಿಕೊಂಡು ವಿಧಿಯಿಲ್ಲದೆ ಮೋದಿ ಸರ್ಕಾರದ ಮೊದಲ ದಿಟ್ಟ ಹೆಜ್ಜೆಗಳ ಸಮಾಚಾರ ಬಿತ್ತರಿಸುತ್ತಿದ್ದಾರೆ. ಕಡೇಪಕ್ಷ ಇವರು ಜನರಿಂದ ಓಡಿಹೋಗುತ್ತಿಲ್ಲ. ತಮ್ಮ ಲೆಕ್ಕಾಚಾರ ತಪ್ಪಾದುದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಈ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ದಂಡಿದೆಯಲ್ಲ, ಇವರ ಪಾಡು ಯಾರಿಗೂ ಬೇಡ. ಅತ್ತ ತಪ್ಪನ್ನು ಒಪ್ಪಿಕೊಳ್ಳಲಾಗದೆ, ಇತ್ತ ಸತ್ಯವನ್ನು ಅಲ್ಲಗಳೆಯಲೂ ಆಗದೆ ಕಾದ ಹೆಂಚಿನ ಮೇಲೆ ಕುಳಿತಂತೆ ಚಡಪಡಿಸುತ್ತಿದ್ದಾರೆ.

ಮತ್ತಷ್ಟು ಓದು »