ವಿಷಯದ ವಿವರಗಳಿಗೆ ದಾಟಿರಿ

Archive for

9
ಜೂನ್

ಕಾಸರಗೋಡಿನ ಕಡುಗಲಿ ಕಯ್ಯಾರ ಕಿಞ್ಞಣ್ಣ ರೈ

– ಅನಿಲ್ ಕುಮಾರ್, ಕುಂದಾಪುರ

ಕಯ್ಯಾರ ಕಿಞ್ಞಣ್ಣ ರೈ“ದುಡಿತವೇ ನನ್ನ ದೇವರು, ಲೋಕ ದೇವಕುಲ,
ಬೆವರೆ ಹೂ ಹಣ್ಣು ಕಾಯ್, ಕಣ್ಣೀರೆ ತೀರ್ಥಂ;
ಎನ್ನೊಂದಿಗರ ಬಾಳ ಸಾವುನೋವಿನ ಗೋಳ
ಉಂಡಿಹೆನು ಸಮಪಾಲ – ನನಗದೆ ಪ್ರಸಾದಂ”.

– ಇದು ಗಡಿನಾಡ ಕವಿ ಎಂದೇ ಖ್ಯಾತಿವೆತ್ತ, ಇಂದಿಗೂ ಕಾಸರಗೋಡು ಹೆಸರಿನೊಂದಿಗೆ ಇಡೀ ಕನ್ನಡ ನಾಡೇ ನೆನೆಯುವ ಕಯ್ಯಾರ ಕಿಞ್ಞಣ್ಣ ರೈಗಳ ದೃಢವೃತ.

‘ಕಾಸರಗೋಡು ಕನ್ನಡನಾಡು’ – ಎಂಬ ಏಕೀಕರಣದ ಈ ಕೂಗಿಗೆ ಕನ್ನಡಿಗರ ಕಣ್ಣಿಗೆ ಕಟ್ಟುವ ಎರಡು ಅಕ್ಷರಗಳೆಂದರೆ ಪೈ ಮತ್ತು ರೈ. ಮೊದಲನೆಯದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು; ಎರಡನೆಯವರು ಕಯ್ಯಾರ ಕಿಞ್ಞಣ್ಣ ರೈ ಅವರು. 98 ವರ್ಷ ಪೂರೈಸಿ ಶತಮಾನದ ಸಂಭ್ರಮದಲ್ಲಿರುವ ಕಿಞ್ಞಣ್ಣ ರೈಗಳದ್ದು, ಗಟ್ಟಿ ಶರೀರ, ಶಾರೀರದ ವ್ಯಕ್ತಿತ್ವ. ಸದಾ ಕನ್ನಡಕ್ಕಾಗಿ ಮೀಡಿವ ಗಡಸು ಧ್ವನಿಯ, ‘ಕಾಸರಗೋಡು ಕನ್ನಡನಾಡಿನ ಅವಿಭಾಜ್ಯ ಅಂಗ’ ಎಂಬ ಕನವರಿಕೆಯ ಕನ್ನಡಪರ ಹೋರಾಟಗಾರರು. ಕಯ್ಯಾರ ಕಿಞ್ಞಣ್ಣ ರೈ ಅವರು ಕೇವಲ ಹೋರಾಟಗಾರಷ್ಟೆ ಅಲ್ಲ; ಕವಿ, ಕಲಿ, ಕೃಷಿಕ, ಶಿಕ್ಷಕ, ಪತ್ರಕರ್ತ ಕೂಡ.

ಕಯ್ಯಾರರ ಜೀವನ ಸಾಧನೆಯ ಅಡಿಯಲ್ಲಿ ಎದ್ದುಕಾಣುವಂಥದ್ದು ಅವರ ಕಾವ್ಯಪ್ರಪಂಚ. ಅವರ ಸಾಹಿತ್ಯನಿರ್ಮಿತಿ ವೈವಿಧ್ಯಮಯವಾಗಿದ್ದರೂ ಮುಖ್ಯವಾಗಿ ಕಯ್ಯಾರರು ಕವಿ – ಗಡಿನಾಡ ಕವಿ – ಎಂದೇ ಗುರುತಿಸಿಕೊಂಡವರು. ನವೋದಯದಿಂದ ನವ್ಯದವರೆಗೂ ನಾಡು ಪ್ರೀತಿಯ ಕಹಳೆ ಊದಿದ ಕಯ್ಯಾರರ ಕಾವ್ಯಗಳು ವಿಸ್ತಾರವಾದದ್ದು ಮತ್ತು ವೈವಿಧ್ಯಪೂರ್ಣವಾದದ್ದು. ಅವರನ್ನು ‘ಕರಾವಳಿಯ ಆಧುನಿಕ ಮಹಾಕವಿ’ ಎಂದವರೂ ಉಂಟು. ಕಯ್ಯಾರರ ಕವನಗಳಲ್ಲಿ ಮಿಡಿಯುವ ಪ್ರಾಸಾಧಿಕತೆ, ಪ್ರಾಮಾಣಿಕತೆ, ಓಜಸ್ಸು, ಆದರ್ಶ, ಜೀವನಮೌಲ್ಯಗಳು ಅವರ ಕೃತಿಗಳನ್ನು ಎತ್ತರದಲ್ಲಿ ನಿಲ್ಲಿಸಿವೆ. ಅವರÀ ಕವಿತೆಗಳಲ್ಲಿ ನಿಗೂಢತೆ, ಅನಗತ್ಯ ವ್ಯಂಗ್ಯ, ಕೀಳು ಅಭಿರುಚಿಗಳು ಕಾಣಸಿಗುವುದಿಲ್ಲ. ಅವರ ಕಾವ್ಯಸೃಷ್ಠಿಯ ನಿಲವು – ಕಾವ್ಯವು ಮನೋವಿಲಾಸಕ್ಕಿಂತ ಹೆಚ್ಚಾಗಿ ಮನೋವಿಕಾಸಕ್ಕೆ ದಾರಿ ಮಾಡಿಕೊಡಬೇಕು ಎಂಬುದೇ ಆಗಿತ್ತು. ಹೀಗಾಗಿಯೇ ಅವರ ಕಾವ್ಯಗಳಲ್ಲಿ ಬಹಳ ಮುಖ್ಯವಾಗಿ ಬಿಂಬಿತವಾಗುತ್ತಿದ್ದುದು ನಾಡಿನ ಸ್ಥಿತಿ(ದೀನಸ್ಥಿತಿ)ಯ ಚಿತ್ರಣವೇ, ಹೊರತು ಹಾಸ್ಯ ಅಥವಾ ಪ್ರಣಯ ರಸಗಳಲ್ಲ.

ಮತ್ತಷ್ಟು ಓದು »

9
ಜೂನ್

ಐಡಿಯಾಲಜಿಯ ಅಪಾಯಗಳು!

– ಡಾ. ಶ್ರೀಪಾದ ಭಟ್

ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ

SIಹದಿನಾರನೆಯ ಲೋಕಸಭಾ ಚುನಾವಣಾ ಫಲಿತಾಂಶ ಬಂದು ತಿಂಗಳಾಗುತ್ತ ಬಂತು. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಈ ಚುನಾವಣೆ ಕುರಿತ ಚರ್ಚೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಏಕೆಂದರೆ ಮಾಧ್ಯಮಗಳು, ಗದ್ದುಗೆಯ ಕನಸು ಕಾಣುತ್ತಿದ್ದ ಗೆದ್ದ-ಸೋತ ಪ್ರಮುಖ ಪಕ್ಷಗಳು, ಯಾರಿಗೂ ಬಹುಮತ ಬರದಿದ್ದರೆ ಆಟವಾಡಿಸುವ ಭ್ರಮೆಯಲ್ಲಿದ್ದ ಪ್ರಾದೇಶಿಕ ಪಕ್ಷಗಳು-ಪುಡಿ ಪಕ್ಷಗಳು, ಒಂದೆರಡು ಸ್ಥಾನಗಳ ಕೊರತೆ ಬಿದ್ದರೆ ಲಾಭ ಮಾಡಿಕೊಳ್ಳುವ ಹವಣಿಕೆಯಲ್ಲಿದ್ದ ಪಕ್ಷೇತರರು, ಇವರೆಲ್ಲರ ಬೆಂಬಲಿಗರು, ಕಾರ್ಯಕರ್ತರು ಹೀಗೆ ಇವರೆಲ್ಲರಿಗೂ ಅನಿರೀಕ್ಷಿತ ಆಘಾತ ನೀಡಿದ ದೇಶದ ಜನಸಾಮಾನ್ಯರು ಇದುವರೆಗಿನ ಚುನಾವಣೆಯಲ್ಲೇ ಸದ್ಯ ಅತ್ಯಂತ ಹೆಚ್ಚು ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಇಂಥ ಬೆಳವಣಿಗೆ ಅಗತ್ಯ. ಆದರೆ ಈ ಚರ್ಚೆಯ ಆಯಾಮಗಳನ್ನು ಗಮನಿಸುವುದು ಒಳಿತು.

ಉಳಿದ ಸಂಗತಿ ಹಾಗಿರಲಿ. ನಮ್ಮ ದೇಶದಲ್ಲಿ ಒಂದು ಎಂಬುದನ್ನು ಜನ ದೇವರಲ್ಲೂ ಇಟ್ಟುಕೊಂಡಿಲ್ಲ. ಅವು ಕೋಟಿ ಲೆಕ್ಕದಲ್ಲಿ ಇವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯವಂತೂ ಪ್ರತಿ ಹತ್ತಿಪ್ಪತ್ತು ಕಿ.ಮೀ.ಗೆ ಬದಲಾಗುತ್ತದೆ. ಏಕರೂಪತೆಯನ್ನು ಒಪ್ಪದ, ಆದರೆ ಭಾವನಾತ್ಮಕ ಏಕತೆಗೆ ಮಹತ್ವ ನೀಡುವ ಇಂಥ ದೇಶದಲ್ಲಿ ಯಾವುದೋ ಒಂದು ಐಡಿಯಾಲಜಿ ಸ್ಥಾಪನೆಯಾಗಬೇಕು ಎಂದು ಬಯಸುವುದು ಭ್ರಮೆಯಲ್ಲದೇ ಬೇರಲ್ಲ. ಜನತಂತ್ರ ವ್ಯವಸ್ಥೆ ಇಲ್ಲಿನ ವೈವಿಧ್ಯಕ್ಕೆ ಬೆನ್ನೆಲುಬಾಗಿದೆ. ಹೀಗಾಗಿಯೇ ಒಂದೇ ಐಡಿಯಾಲಜಿ ಹೇರುವ ಯಾರಿಗೇ ಆದರೂ ಜನ ಹೊರಹೋಗುವ ಬಾಗಿಲು ತೋರುತ್ತಾರೆ. ತ್ರಿಪುರಾ, ಪ.ಬಂಗಾಳದಲ್ಲಿ ಮಾರ್ಕ್ಸ್ ವಾದಿಗಳು ಜಾಗಖಾಲಿಮಾಡಿದ್ದು ಹೀಗೆ. ಸ್ವಾತಂತ್ರ್ಯ ಬಂದ ಹತ್ತಿಪ್ಪತ್ತು ವರ್ಷ ದೇಶಾದ್ಯಂತ ಸಾರಾಸಗಟು ಸ್ಥಾನ ಪಡೆಯುತ್ತಿದ್ದ ಕಾಂಗ್ರೆಸ್ ಬೆರಳೆಣಿಕೆ ಸ್ಥಾನ ಪಡೆಯಲೂ ಹೆಣಗಾಡುವ ಸ್ಥಿತಿ ಬಂದಿದ್ದೂ ಹೀಗೆಯೇ. ಹಿಂದೂ, ಮುಸ್ಲಿಂ, ಮಾರ್ಕ್ಸ್, ಮಾವೋ, ನೆಹರೂ ಹೀಗೆ ಒಂದನ್ನೇ ಸ್ಥಾಪಿಸಬಯಸುವ ಎಲ್ಲ ಬಗೆಯ ಮೂಲಭೂತವಾದಿಗಳನ್ನೂ ಜನ ತೂಗುವುದು ಒಂದೇ ತಕ್ಕಡಿಯಲ್ಲಿ.

ಈ ಫಲಿತಾಂಶದಿಂದ ಎಡ ಚಿಂತಕರು ಎಂದು ಗುರುತಿಸಿಕೊಂಡವರ ಸ್ಥಿತಿಯಂತೂ ಚಿಂತಾಜನಕವಾಗಿದೆ. ಪ್ರಚಾರದ ವೇಳೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಕೆಲವರಂತೂ ನಾಪತ್ತೆಯಾಗಿದ್ದಾರೆ. ಇನ್ನು ಕೆಲವರಿಗೆ ಜೀವನವೇ ಸಾಕಾಗಿದೆ. ಎಡಪಂಥೀಯ ಚಿಂತನೆಯಲ್ಲಿ ಗುರುತಿಸಿಕೊಂಡಿದ್ದವರೊಬ್ಬರು ಫಲಿತಾಂಶ ಬಂದ ನಾಲ್ಕು ದಿನಗಳ ನಂತರ ಭೇಟಿಯಾದರು. ಅವರ ಮುಖದಲ್ಲಿ ಯಾವ ಉತ್ಸಾಹವೂ ಇರಲಿಲ್ಲ. ಸೂತಕದ ಕಳೆ. ಏನಾಯ್ತು ಅಂದೆ. ಪ್ರಳಯವೇ ಆಗಿ ಇವರೊಬ್ಬರೇ ಬದುಕಿದ್ದಾಗ ಆಗುವ ಹತಾಶೆ, ಸಂಕಟ, ಆಘಾತಗಳೆಲ್ಲ ಅವರಲ್ಲಿ ಮೈವೆತ್ತಿದ್ದವು. ಯಾಕೆಂದು ಕೇಳಿದರೆ ಮೋದಿ ಪ್ರಧಾನಿಯಾಗ್ತಾರಲ್ಲ, ಬಿಜೆಪಿ ಈ ಪಾಟಿ ಸ್ಥಾನ ಗೆದ್ದುಬಿಟ್ತಲ್ಲ ಅಂತೆಲ್ಲ ಗೋಳು ತೋಡಿಕೊಳ್ಳತೊಡಗಿದರು. ಹೋಗ್ಲಿ ಬಿಡಿ ಸಾರ್, ಜನತಂತ್ರ ವ್ಯವಸ್ಥೆಯಲ್ಲಿ ಒಮ್ಮೆ ಅವರು ಮತ್ತೊಮ್ಮೆ ಮತ್ತೊಬ್ಬರು ಮೇಲೆ ಕೆಳಗೆ ಆಗುವುದು ಸಹಜವಲ್ಲವೇ? ಅದನ್ಯಾಕೆ ಇಷ್ಟು ಸೀರಿಯಸ್ಸಾಗಿ ತಗೋತೀರಿ ಅಂದೆ. ಹಂಗಲ್ಲ ಸಾರ್, ನಿಮಗೆ ಅರ್ಥವಾಗಲ್ಲ, ದೇಶದ ಕತೆ ಏನು ಅಂತೆಲ್ಲ ವರಾತ ಶುರು ಇಟ್ಟುಕೊಂಡರು.

ಮತ್ತಷ್ಟು ಓದು »