ಸಾಹಿತ್ಯಕ್ಷೇತ್ರದ ಒಳಹೊರಗು – 4
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಡಿವಿಜಿ ಹೇಳಿದರು: ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಗಸು! ಎಂಥಾ ಮಾತು! ಇದನ್ನು ಸಮಾಜ-ಕುಟುಂಬ ಸೇರಿದಂತೆ ಯಾವ ಕ್ಷೇತ್ರಕ್ಕೂ ಅನ್ವಯಿಸಬಹುದು. ಹಾಗೆಯೇ ಸಂಗೀತ, ಸಾಹಿತ್ಯಕ್ಕೂ ಅನ್ವಯಿಸಿ ನೋಡಬಹುದು. ಇದರಿಂದ ನಿರಾಸೆ ಕಾದಿದ್ದರೂ ಅಚ್ಚರಿ ಇಲ್ಲ.
ಮೈಸೂರಿನಲ್ಲಿ ವರ್ಷಗಳ ಹಿಂದೆ ಒಂದು ಕಾರ್ಯಕ್ರಮ. ಖ್ಯಾತ ನೃತ್ಯಗುರು, ಹಿರಿಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿ ಅವರಿಗೆ ಶಿಷ್ಯವೃಂದದಿಂದ ಅಭಿನಂದನೆ. ಆಮೇಲೆ ಅವರು ಮಾತನಾಡುತ್ತ, ನನ್ನ ಬಳಿ ಭರತ ನಾಟ್ಯ ಕಲಿಯಲು ಉತ್ಸಾಹದಿಂದಲೇ ಹೊಸಬರು ಬರುತ್ತಾರೆ. ನಾಲ್ಕಾರು ಹೆಜ್ಜೆಗಳನ್ನು, ಒಂದಿಷ್ಟು ಅಂಗಾಭಿನಯ ಕಲಿತು ವಿದೇಶಕ್ಕೆ ಹೋಗಿಬಿಡುತ್ತಾರೆ. ಹಣ ಮಾಡುವ ಹುಮ್ಮಸ್ಸು. ನಾಟ್ಯ, ನಟುವಾಂಗಗಳ ಬಗ್ಗೆ ಸಮಗ್ರ ಪರಿಜ್ಞಾನ ಪಡೆಯುವ ವ್ಯವಧಾನವೇ ಇಂದಿನ ತಲೆಮಾರಿನಲ್ಲಿ ಇಲ್ಲ ಎಂದು ಹೇಳಿದರು. ಅಸಾಧಾರಣ ಕಲಾವಿದೆಯಾದ ಅವರು ವಿಷಾದದಿಂದಲೇ ಈ ಮಾತು ಹೇಳಿದ್ದರು. ಕಲಿಕೆಯಲ್ಲಿನ ಶ್ರದ್ಧೆ ಕುರಿತ ಇದೇ ಮಾತು ಸಾಹಿತ್ಯಕ್ಕೂ ಸಲ್ಲುತ್ತದೆ. ಸಾಹಿತ್ಯ ಕ್ಷೇತ್ರ ಪ್ರವೇಶಿಸುವವರೆಲ್ಲ ವಿದೇಶಕ್ಕೆ ಹೋಗಿಬಿಡುವುದಿಲ್ಲ. ಕನ್ನಡ ಸಾಹಿತ್ಯ ಓದುದವವರ ಕಾರ್ಯವ್ಯಾಪ್ತಿಯೂ ದೇಶ, ಭಾಷೆಗಳ ಕಾರಣದಿಂದ ಸೀಮಿತವಾಗಿಹೋಗಿದೆ; ಅಥವಾ ಹಾಗೆ ಭಾವಿಸಲಾಗಿದೆ; ಅಥವಾ ತಮಗೆ ತಾವೇ ಮಿತಿಯನ್ನು ಇವರೇ ವಿಧಿಸಿಕೊಂಡುಬಿಡುತ್ತಾರೆ. ಸ್ನಾತಕೋತ್ತರ ಪದವಿ ಅಥವಾ ಪಿಎಚ್.ಡಿ ಪದವಿಯಲ್ಲಿ ಭಾಷಾ ಪ್ರಯೋಗವನ್ನು ಅರ್ಧಂಬರ್ಧ ಕಲಿತು ತಾವು ಚಿಂತಕರೆಂದೋ ಸಾಹಿತಿಗಳೆಂದೋ ಇಲ್ಲವಾದಲ್ಲಿ ಕೊನೆಗೆ ಲೇಖಕರೆಂದೋ ಬೋರ್ಡು ಹಾಕಿಕೊಂಡೇಬಿಡುತ್ತಾರೆ. ಜೊತೆಗೆ ಪತ್ರಿಕೆ, ಟಿವಿ ಕಾರ್ಯಕ್ರಮ ಇತ್ಯಾದಿಗಳ ಲಾಬಿ ಶುರು ಮಾಡಿ ಪ್ರಚಾರದ ಹಿಂದೆ ಹೋಗುತ್ತಾರೆ. ಅಲ್ಲಿಗೆ ಅವರ ಕಲಿಕೆ ಮುಗಿದಂತೆ. ಹಳೆಯದನ್ನು ತಿರುಗಿಯೂ ನೋಡದೇ ಹೊಸದನ್ನು ಅರಗಿಸಿಕೊಳ್ಳದೇ ಕಲಿತಷ್ಟೇ ವಿದ್ಯೆಯನ್ನು ತಿರುಚುತ್ತ ಚಾಲ್ತಿಯಲ್ಲಿ ಇರಲು ಬಯಸುತ್ತಾರೆ. ಇದು ಯುವ ಸಾಹಿತ್ಯಾಸಕ್ತರ ಒಂದು ಮುಖ.