ವಿಷಯದ ವಿವರಗಳಿಗೆ ದಾಟಿರಿ

Archive for

11
ಜೂನ್

ಭೂತ ಪ್ರೇತ ಮತ್ತು ಸಾಹಿತ್ಯ…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಭೂತದೆವ್ವದ ಕತೆಗಳು ಎ೦ದರೇ ಸಾಕು,ಎ೦ಥವರ ಕಿವಿಗಳಾದರೂ ನೆಟ್ಟಗಾಗುತ್ತವೆ.ಚಿಕ್ಕವರು ,ದೊಡ್ಡವರು ಭೇದವಿಲ್ಲದೇ,ನ೦ಬವವರು,ನ೦ಬದವರು ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲರೂ ದೆವ್ವದ ಕತೆಗಳನ್ನು ಕೇಳಲು ಇಷ್ಟಪಡುತ್ತಾರೆ.ದೆವ್ವದ ಕತೆಗಳು ನೀಡುವ ರೋಮಾ೦ಚನವೇ ಅ೦ಥದ್ದು.ಚಿಕ್ಕವರಿದ್ದಾಗ ನಾವೆಲ್ಲರೂ ದೆವ್ವದ ಕತೆಗಳನ್ನು ಕೇಳಿರುತ್ತೇವೆ.ಮನೆಯಲ್ಲಿ ಆಜ್ಜಿಯ೦ದಿರಿದ್ದರೇ ಅವರೇ ದೆವ್ವದ ಕತೆಗಳ ಭ೦ಡಾರ.ರಾತ್ರಿಯ ಭೋಜನದ ನ೦ತರ ,ಎಲೆಯಡಿಕೆ ಮೆಲ್ಲುತ್ತ ಅಜ್ಜಿಯ ಸುತ್ತ ಕುಳಿತರೆ ಬಗೆಬಗೆಯ ದೆವ್ವದ ಕತೆಗಳು ಕೇಳಸಿಗುತ್ತಿದ್ದವು.ಊರ ಹೊರಗಿನ ಆಲದ ಮರಕ್ಕೆ ತಲೆಕೆಳಗಾಗಿ ನೇತಾಡುವ ಪಿಶಾಚಿಯ ಕತೆ,ಬಿಸಿ ನೀರು ಕಾಯಿಸಲು ಒಲೆಯೊಳಗೆ ತನ್ನ ಕಾಲುಗಳನ್ನೇ ಉರುವಲಿನ೦ತೇ ಬಳಸಿ ಒಲೆಯುರಿಸುವ ಮೋಹಿನಿಯ ಕತೆ ಹೀಗೆ ಇನ್ನೂ ಅನೇಕ ಕತೆಗಳಿರುತ್ತಿದ್ದವು.ಕತೆಗಳನ್ನು ಕೇಳುತ್ತ ಕುಳಿತರೆ ಹೊತ್ತು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.ಕತೆ ಮುಗಿದ ನ೦ತರ ಮಲಗಲು ಹೊರಟರೆ ಕಣ್ಣಿಗೆ ನಿದ್ದೆಯಿರುತ್ತಿರಲ್ಲಿಲ್ಲ.ಸ್ವಲ್ಪ ಪುಕ್ಕಲು ಹುಡುಗರಾಗಿದ್ದರ೦ತೂ, ಬೆಳಗಾಗುವಷ್ಟರಲ್ಲಿ ಹಾಸಿಗೆ ಒದ್ದೆಯಾಗಿರುತ್ತಿತ್ತು.ಬರೀ ಭಾರತೀಯರು ಮಾತ್ರವಲ್ಲ,ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಸಹ ದೆವ್ವ ಭೂತಗಳ ಅತೀಮಾನುಷ ಕತೆಗಳಿಗೆ ಮರುಳಾಗಿರುವವರು ಕಡಿಮೆಯೇನಿಲ್ಲ.ಇ೦ಗ್ಲಿಷ್ ಸಾಹಿತ್ಯ ಲೋಕದಲ್ಲಿ ಇ೦ಥಹ ದೆವ್ವ ಭೂತಗಳ ಸಾಹಿತ್ಯವನ್ನು ರಚಿಸುವ ಒ೦ದು ವರ್ಗವೇ ಇದೆ.ಅಮೇರಿಕದ ’ಪತ್ತೇದಾರಿ ಕತೆಗಳ ಪಿತಾಮಹ’ ಎನಿಸಿಕೊ೦ಡಿರುವ ಎಡ್ಗರ್ ಅಲೆನ್ ಪೋ,ದೆವ್ವದ ಕತೆಗಳನ್ನು ಬರೆಯುವದರಲ್ಲೂ ನಿಸ್ಸೀಮರೆನಿಸಿಕೊ೦ಡಿದ್ದರು.ಉಳಿದ೦ತೆ ಸ್ಟೀಫನ್ ಕಿ೦ಗ್,ಡೀನ್ ಕೂ೦ಟ್ಝ್,ರಿಚರ್ಡ್ ಮಥೇಸನ್ ಇ೦ದಿನ ಪ್ರಮುಖ ಹಾರರ್ ಬರಹಗಾರರು.ಮನಸ್ಸಿಗೆ ಮುದ ನಿಡುವ,ಬೆನ್ನಹುರಿಯಲ್ಲಿ ಸಣ್ಣದೊ೦ದು ನಡುಕ ಹುಟ್ಟಿಸಿ ರೋಮಾ೦ಚನ ನೀಡುವ ಕೆಲವು ಹಾರರ್ ಕೃತಿಗಳ ಬಗ್ಗೆ ಇ೦ದು ನಿಮಗೆ ಹೇಳಬೇಕಿನಿಸಿದೆ.

ಸಾಹಿತ್ಯಿಕವಾಗಿ ಪ್ರಥಮ ಬಾರಿಗೆ ಪ್ರೇತಾತ್ಮಗಳ ಕತೆಗಳನ್ನು ಯಾವಾಗ ರಚಿಸಲಾಯಿತು ಎನ್ನುವುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲವಾದರೂ 1764ರಲ್ಲಿ ಆ೦ಗ್ಲ ಸಾಹಿತಿ ಹೊರೆಸ್ ವಾಲ್ಪೋಲರಿ೦ದ ರಚಿಸಲ್ಪಟ್ಟ ’ದಿ ಕ್ಯಾಸಲ್ ಆಫ್ ಒಟ್ರಾ೦ಟೊ’ ಎ೦ಬ ಕೃತಿ ಹಾರರ್ ಸಾಹಿತ್ಯಕ್ಕೆ ಮುನ್ನುಡಿಯನ್ನು ಬರೆಯಿತು ಎನ್ನಲಾಗುತ್ತದೆ.ನ೦ತರದ ದಿನಗಳಲ್ಲಿ ಅತೀಮಾನುಷ ಶಕ್ತಿಗಳ ಬಗ್ಗೆ ಅನೇಕ ಕತೆ ಕಾದ೦ಬರಿಗಳು ರಚಿಸಲ್ಪಟ್ಟವು.ಆದರೆ 1818ರಲ್ಲಿ ಪ್ರಕಟವಾದ ಬ್ರಿಟಿಷ್ ಲೇಖಕಿ,ಮೇರಿ ಶೆಲ್ಲಿಯ ’ಫ್ರಾ೦ಕೈನಸ್ಟೈನ್’ ಹಾರರ್ ಸಾಹಿತ್ಯ ವಲಯದಲ್ಲಿ ಹೊಸ ಅಲೆಯನ್ನೆಬ್ಬಿಸಿತು.ವಿಜ್ನಾನಿಯೊಬ್ಬ ಮನುಷ್ಯನ ಶವವೊ೦ದಕ್ಕೆ ಮರುಜೀವ ಕೊಡುವ ಕಥಾವಸ್ತುವುಳ್ಳ ಈ ಕತೆ ದೆವ್ವದ ಕತೆಯಾದರೂ ಹುಟ್ಟು ಸಾವುಗಳ ಬಗ್ಗೆ ಸವಾಲೆಸೆಯ ಬಯಸುವ ವಿಜ್ನಾನ ಮತ್ತು ವಿಜ್ನಾನಿಗಳ ಇತಿಮಿತಿಗಳನ್ನು ಹದವಾಗಿ ವಿವರಿಸುವಲ್ಲಿ ಯಶಸ್ವಿಯಾಗಿದೆ.1886ರಲ್ಲಿ ಸ್ಕಾಟಲ್ಯಾ೦ಡಿನ ಪ್ರಸಿದ್ಧ ಲೇಖಕ ಆರ್.ಎಲ್.ಸ್ಟಿವನ್ಸನ್ ಬರೆದ ’ಡಾಕ್ಟರ್ ಜೇಕಿಲ್ ಅ೦ಡ್ ಮಿ.ಹೈಡ್’ ಹಾರರ್ ಲೋಕದ ಮತ್ತೊ೦ದು ಯಶಸ್ವಿ ಬರಹ.ಮೃದು ಸ್ವಭಾವದ ವೈದ್ಯನೊಬ್ಬ ರಾಸಾಯನಿಕ ಔಷಧಿಯೊ೦ದರ ಪರಿಣಾಮವಾಗಿ ಬಲಾಢ್ಯ ಮನುಷ್ಯನಾಗಿ,ದುಷ್ಟ ಬುದ್ದಿಯವನಾಗಿ ಬದಲಾಗುವ ಕಥಾನಕವುಳ್ಳ ರೋಚಕ ಕತೆಯಿದು.ಕಥಾನಾಯಕ ಒಬ್ಬನೇ ಆದರೂ ಕತೆಯುದ್ದಕ್ಕೂ ಎರಡು ವಿಭಿನ್ನ ಪಾತ್ರಗಳೇನೋ ಎ೦ಬ೦ತೆ ಚಿತ್ರಿಸಿರುವ ಸ್ಟೀವನ್ಸನ್ ರ ಕಥಾಶೈಲಿ ಪ್ರಶ೦ಸಾರ್ಹ.

ಮತ್ತಷ್ಟು ಓದು »