ಮೂರ್ತಿಪೂಜೆಯ ಕುರಿತ ಆಧುನಿಕರ ಗೊಂದಲಗಳು
ಪ್ರೊ.ರಾಜಾರಾಮ ಹೆಗಡೆ, ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
“ನಾನು ದೇವರ ನಿರಾಕಾರ ರೂಪವನ್ನು ಒಪ್ಪುತ್ತೇನೆ, ಆದರೆ ಅವುಗಳಿಗೆ ಆಕಾರ ಕೊಡುವುದನ್ನು ವಿರೋಧಿಸುತ್ತೇನೆ.” “ಒಂದು ಶಕ್ತಿ ಈ ಪ್ರಪಂಚವನ್ನು ಆಳುತ್ತಿದೆ ಎಂದು ನಂಬುತ್ತೇನೆ ಆದರೆ ಈ ದೇವತೆಗಳು, ಪುರಾಣಗಳು ಎಲ್ಲ ಸುಳ್ಳು, ಅವನ್ನು ನಂಬಬಾರದು” ಎಂಬ ಧೋರಣೆ ಬಹಳಷ್ಟು ಆಧುನಿಕ ಚಿಂತಕರಲ್ಲಿ ಇದೆ. ಈ ಹೇಳಿಕೆಯನ್ನು ಮಾಡುವವರು ತಾವು ಭಾರತೀಯ ಅಧ್ಯಾತ್ಮ ಸಂಪ್ರದಾಯದ ಸತ್ಯವನ್ನೇ ಹೇಳುತ್ತಿದ್ದೇವೆ ಎಂದುಕೊಂಡಿದ್ದಾರೆ. ಏಕೆಂದರೆ ನಮ್ಮ ಅಧ್ಯಾತ್ಮ ಸಂಪ್ರದಾಯಗಳು ಪರಮಾತ್ಮನ ನಿಜಸ್ವರೂಪವು ನಿರಾಕಾರವೇ ಆಗಿದೆ ಎಂದು ಹೇಳುತ್ತವೆ. ಹಾಗೂ ಅವುಗಳಲ್ಲಿ ಕೆಲವಂತೂ ಮೂರ್ತಿಪೂಜೆಯ ನಿರರ್ಥಕತೆಯ ಕುರಿತು ಸಾಧಕರನ್ನು ಎಚ್ಚರಿಸುತ್ತವೆ. ಅಷ್ಟಾದರೂ ಕೂಡ ಅವನ ಸಾಕಾರೋಪಾಸನೆಯನ್ನು ಅವು ವಿರೋಧಿಸುವುದಿಲ್ಲ, ಸಾಕಾರೋಪಾಸನೆ ಅಧ್ಯಾತ್ಮ ಸಾಧನೆಯಲ್ಲಿ ದಾರಿತಪ್ಪಿಸುವ ಮೋಸ, ಅದನ್ನು ಮಾಡಲೇಬೇಡಿ ಎಂದು ಎಲ್ಲಿಯೂ ಹೇಳುವುದಿಲ್ಲ. ಸಾಕಾರೋಪಾಸನೆಯು ನಿರಾಕಾರ ತತ್ವವನ್ನು ತಿಳಿಯಲಿಕ್ಕೆ ದಾರಿಯಾಗಿದೆ. ಈ ಕಾರಣದಿಂದಲೇ ಸಾಕಾರೋಪಾಸನೆಯಲ್ಲೇ ತೃಪ್ತಿಪಟ್ಟುಕೊಂಡ ಸಾಧಕರನ್ನು ಟೀಕಿಸಿ ಎಚ್ಚರಿಸುವ ಸಂದರ್ಭದಲ್ಲಿ ಮೂರ್ತಿರೂಪಗಳ ಮಿತಿಯನ್ನು ತಿಳಿಸಿಕೊಡುವ ಕೆಲಸವನ್ನು ಅವು ಮಾಡುತ್ತವೆ. ಅಜ್ಞಾನದಲ್ಲಿ ಬಂಧಿತನಾದ ಮನುಷ್ಯನ ಬುದ್ಧಿಗೆ ಏಕಾಏಕಿಯಾಗಿ ನಿರಾಕಾರ ತತ್ವವನ್ನು ಅರಿಯಲು ಅಸಾಧ್ಯ. ಅಂಥವನಿಗೆ ಮೂರ್ತಿಪೂಜೆ ಒಂದು ಸಾಧನ. ಜನಸಾಮಾನ್ಯರ ಮನೋಸ್ಥಿತಿಯ ಹೀಗೇ ಇರುವುದರಿಂದ ನಮ್ಮಲ್ಲಿ ಎಲ್ಲಾ ಸಂಪ್ರದಾಯಗಳೂ ಮೂರ್ತಿಪೂಜೆಯ ಉಪಾಯವನ್ನು ಕಲ್ಪಿಸಿವೆ ಎನ್ನುತ್ತವೆ. ಹಾಗಾಗಿ ಈ ಮೇಲಿನ ಹೇಳಿಕೆಗಳನ್ನು ನೀಡುವವರು ಭಾರತೀಯ ಅಧ್ಯಾತ್ಮ ಸಂಪ್ರದಾಯದ ವಕ್ತಾರರಂತೂ ಅಲ್ಲ.
“ದೇವರೆಂಬವನೇ ಇಲ್ಲ, ಹಾಗಾಗಿ ಈ ಮೂರ್ತಿಪೂಜೆ ಒಂದು ಪುರೋಹಿತರ ಕಣ್ಕಟ್ಟು” ಎಂಬ ಮತ್ತೊಂದು ಥರದ ಹೇಳಿಕೆಗಳೂ ಇವೆ. ಈ ಹೇಳಿಕೆಯನ್ನು ಮಾಡುವವರು ತಾವು ನಾಸ್ತಿಕರು ಎಂದು ಕರೆದುಕೊಳ್ಳಲು ಹೆಮ್ಮೆ ಪಡುತ್ತಾರೆ ಹಾಗೂ ಮೂರ್ತಿಪೂಜೆಯನ್ನು ತೊಡೆಯುವುದೇ ನಮ್ಮ ಸಮಾಜದ ಉದ್ಧಾರಕ್ಕೆ ಮಾರ್ಗ ಎನ್ನುತ್ತಾರೆ. ಅಷ್ಟೇ ಅಲ್ಲ ಅವರನ್ನು ವಿರೋಧಿಸುವವರೂ ಕೂಡ ಅವರನ್ನು ನಾಸ್ತಿಕರೆಂದು ಪದೇ ಪದೇ ಜರಿಯುವುದು ಕೂಡ ಕಂಡುಬರುತ್ತದೆ. ಆದರೆ ಹಾಗೆ ಅವರನ್ನು ಕರೆಯುವು ತಪ್ಪು. ನಮ್ಮಲ್ಲಿ ನಾಸ್ತಿಕರಾದ ಬೌದ್ಧರು ಹಾಗೂ ಜೈನರು ಕೂಡಾ ಮೂರ್ತಿಪೂಜೆಯನ್ನು ಅಳವಡಿಸಿಕೊಂಡಿದ್ದಾರೆ. ಜೈನ ಬೌದ್ಧರು ಪರಮಾತ್ಮ ತತ್ವವನ್ನು ಒಪ್ಪುವುದಿಲ್ಲ. ಹಾಗಾಗೇ ಅವರನ್ನು ನಾಸ್ತಿಕರೆಂದು ಹೇಳಲಾಗುತ್ತದೆ. (ಅಸ್ತಿ=ಇದೆ; ನಾಸ್ತಿ=ಇಲ್ಲ. ಆಸ್ತಿಕ ನೆಂದರೆ ಆ ತತ್ವ ಇದೆ ಎಂದು ಒಪ್ಪುವವನು, ನಾಸ್ತಿಕನು ಅದು ಇಲ್ಲ ಎನ್ನುವವನು. ಈ ಪರಿಭಾಷೆಗಳಿಗೆ ಅಧ್ಯಾತ್ಮದ ಸಂದರ್ಭದ ಹಿನ್ನೆಲೆಯಿದೆ). ಆದರೆ ನಾಸ್ತಿಕರಾದವರು ಮೂರ್ತಿಪೂಜೆಯನ್ನು ನಿರಾಕರಿಸಬೇಕೆಂದಿಲ್ಲ. ನಾಸ್ತಿಕರ ಪರಮ ಜ್ಞಾನವನ್ನು ಹೊಂದಲು ಕೂಡ ಮೂರ್ತಿ ಪೂಜೆ ಸಹಕರಿಸಿದೆ. ಅದಿಲ್ಲದಿದ್ದರೆ ಅವೇಕೆ ಸಾವಿರಾರು ವರ್ಷ ಮೂರ್ತಿಪೂಜೆಯನ್ನು ಆಚರಿಸಿಕೊಂಡು ಬರುತ್ತಿದ್ದವು? ಆಸ್ತಿಕ ಹಾಗೂ ನಾಸ್ತಿಕ ಸಂಪ್ರದಾಯಗಳೆರಡೂ ಕೂಡ ತಂತಮ್ಮ ಗುರಿ ಸಾಧನೆಗೆ ಮೂರ್ತಿಪೂಜೆ ಸಾಧನವಾಗಿದೆ ಎಂದು ಒಪ್ಪಿಕೊಂಡಿದ್ದವು. ಹಾಗಾಗಿ ದೇವರಿಲ್ಲವೆಂದು ನಂಬಿದಾಕ್ಷಣ ಮೂರ್ತಿಪೂಜೆ ನಿಲ್ಲಬೇಕೆಂಬ ವಾದವು ನಾಸ್ತಿಕ ದೃಷ್ಟಿಯೂ ಅಲ್ಲ. ಮತ್ತಷ್ಟು ಓದು
ಕಲ್ಬುರ್ಗಿ,ಕಲ್ಲು ಮತ್ತು Colonial Consciousness
– ರಾಕೇಶ್ ಶೆಟ್ಟಿ
ಬೆಂಗಳೂರಿನ ವಿಜ್ಞಾನ ಭವನದಲ್ಲಿ ಜೂನ್ ೯ರ ಸೋಮವಾರ ನಡೆದ ಮೌಢ್ಯಮುಕ್ತ ಸಮಾಜ, ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ವಯಸ್ಸಿನಲ್ಲಿ ಹಿರಿಯರಾದ (ಕೇವಲ ವಯಸ್ಸಿನಲ್ಲಷ್ಟೇ) ಪ್ರೊ.ಎಂ.ಎಂ. ಕಲ್ಬುರ್ಗಿಯವರು, ” ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದು. ಅವುಗಳಿಗೆ ಕಾಯುವ ಶಕ್ತಿಯೂ ಇಲ್ಲ, ಕಾಡುವ ಶಕ್ತಿಯೂ ಇಲ್ಲ. ದೇವತೆ, ದೇವಾಲಯಗಳ ವಿರುದ್ಧ ಚಳವಳಿ ನಡೆಯಬೇಕು.” ಅಂತೆಲ್ಲ ಬಡಬಡಿಸಿ ಎಲ್ಲರಿಂದ ತಪರಾಕಿ ಹಾಕಿಸಿಕೊಂಡ ಮೇಲೆ “ನಾ ಹಂಗೇ ಹೇಳೇ ಇಲ್ಲಾರೀ, ನಾನು ಹಿಂದೂ ಇದ್ದೀನಿ, ನಾನ್ಯಾಕೇ ಮೂತ್ರ ಮಾಡಿ ಅಂತ ಹೇಳ್ತೀರ್ರೀ… ಅನಂತಮೂರ್ತಿ ಹಿಂಗ್ ಬರ್ದಾರಾ ಅಂತ ನಾನ್ ಸಭಿಯೋಳಗ ಹೇಳಿನ್ರೀ… ತಪ್ಪ್ ತಿಳಿ ಬ್ಯಾಡರ್ರೀ…” ಅಂತೆಲ್ಲ ಸೃಷ್ಟೀಕರಣ ಕೊಟ್ಟರು.
ನಿಜವಾಗಿ ಕಲ್ಬುರ್ಗಿಯವರ ಮನಸ್ಸಿನಲ್ಲಿದ್ದಿದ್ದು “ಮೂರ್ತಿ”ಗಳ ಮೇಲೆ ಮೂತ್ರ ಮಾಡಿದ ಹೊರೆ ಹೊರಿಸಿ ಅದರ ಜೊತೆಗೆ ಮೂರ್ತಿ ಪೂಜೆ ಮಾಡುವ ಜನರ “ಮೌಢ್ಯ” (ಅವರ ಮಂದ ಬುದ್ದಿಯ ಪ್ರಕಾರ) ನಿವಾರಿಸುವುದಾಗಿತ್ತು ಅನ್ನಿಸುತ್ತದೆ.ಕಲ್ಬುರ್ಗಿಯವರು ಹೀಗೆ ಹೇಳಿಕೆ ಕೊಡುವುದರಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ (“ಮೂರ್ತಿ” ಮತ್ತು “ಮೌಢ್ಯ”) ಹೊಡೆಯುವ ಆಲೋಚನೆಯಲ್ಲಿದ್ದರೇನೋ.ಪಾಪ!
“ಮೂರ್ತಿ”ಗಳ ಮೇಲೆ ಕಲ್ಬುರ್ಗಿಯವರಿಗೆ ಈ ವಿಶೇಷ ಮಮತೆ ಯಾಕೆ? ಪ್ರಜಾವಾಣಿಯಲ್ಲಿ “ಮೂರ್ತಿ”ಗಳಿಗೆ ೧೦ ಲಕ್ಷ ಸರ್ಕಾರಿ ಕಾಣಿಕೆ ಕೊಟ್ಟದ್ದನ್ನು ವಿರೋಧಿಸಿ ಸೋತುಹೋಗಿದ್ದ ಕಲ್ಬುರ್ಗಿಗಳು,”ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ” ಅನ್ನುವ ಮೂಲಕ ಸೇಡು ತೀರಿಸಿಕೊಂಡರು, ಅನ್ನುವಲ್ಲಿಗೆ ಅವರ ಹೇಳಿಕೆಯ ಮೊದಲನೇ “ಹಕ್ಕಿ” ಯಾವುದೆಂದು ಹೊಳೆಯುತ್ತದೆ.
ಅಸಲಿಗೆ ತಪ್ಪೆಲ್ಲ ಆಯ್ಕೆ ಸಮಿತಿಯದ್ದು!
“ಪರಾವಲಂಬಿ ಜೀವಿ”ಗಳ ನಡುವೆ “ಪ್ರಶಸ್ತಿ/ಹಣ”ವನ್ನು ಸಮನಾಗಿ ಹಂಚಿದ್ದರೆ ಮೂತ್ರ,ಮೂರ್ತಿ ಇತ್ಯಾದಿ ವಿವಾದಗಳೇ ಆಗ್ತಿರ್ಲಿಲ್ಲ ಮಾರ್ರೆ. ಎಲ್ಲವನ್ನೂ ಒಬ್ಬರಿಗೆ ಕೊಟ್ಟರೆ.ಇನ್ನೊಬ್ಬರಿಗೆ (ತಮಗಾದ) ಅನ್ಯಾಯವನ್ನು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ(!) ಇದ್ದೇ ಇರುತ್ತದಪ್ಪ… (ಸೂ : “ಪರಾವಲಂಬಿ ಜೀವಿ”ಗಳನ್ನು ಕೆಲವರು “ಬುದ್ಧಿಜೀವಿ”ಗಳು ಅನ್ನುತ್ತಾರೆ.ನಾನು ಇನ್ಮುಂದೆ ಪ್ರೀತಿಯಿಂದ “ಪರಾವಲಂಬಿ ಜೀವಿ” ಎನ್ನುತ್ತೇನೆ)