ಅಮರು ಶತಕದೊಳಗೊಂದು ಇಣುಕುನೋಟ
– ಹಂಸಾನಂದಿ
ಅಮರುಕ ಎಂಟನೇ ಶತಮಾನದಲ್ಲಿದ್ದ ಒಬ್ಬ ಸಂಸ್ಕೃತ ಕವಿ. ಈಗ ಕಾಶ್ಮೀರದ ರಾಜನೆಂದೂ, ಮಾಹಿಷ್ಮತಿಯ ರಾಜನೆಂದೂ ಪ್ರತೀತಿಯಿದೆ. ಇವನು ಅಮರುಶತಕ ವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವ ಒಂದು ನೂರು ಪದ್ಯಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾನೆ. ಈ ಪದ್ಯಗಳ ವಿಷಯವೆಂದರೆ ಗಂಡು ಹೆಣ್ಣಿನ ನಡುವಿನ ಪ್ರೇಮ. ಅಮರುಕನ ಒಂದೊಂದು ಬಿಡಿಪದ್ಯವೇ ಒಂದೊಂದು ಕಾವ್ಯದಷ್ಟು ರಸವತ್ತಾಗಿರುತ್ತದೆಂದು ನಂತರದ ಕವಿಗಳು, ವಿಮರ್ಶಕರು ಹೊಗಳಿದ್ದಾರೆ. ಗಂಡು ಹೆಣ್ಣಿನ ನಡುವಿನ ನವಿರಾದ ಪ್ರೇಮ ವಿರಹ ದುಗುಡ ಮೊದಲಾದ ಎಲ್ಲ ಭಾವನೆಗಳನ್ನು ಚಿತ್ರಿಸುವುದರಲ್ಲಿ ಅಮರುಕನಿಗೆ ಅವನೇ ಸಾಟಿ. ಇವನ ಕಾವ್ಯದ ಹಲವು ಹಸ್ತಪ್ರತಿಗಳು ದೊರತಿದ್ದು ಮುಖ್ಯವಾಗಿ ಮೂರು ಪಾಠಾಂತರಗಳಿವೆ – ಇವುಗಳಲ್ಲಿ ಇರುವ ಪದ್ಯಗಳೆಲ್ಲ ಎಲ್ಲವೂ ಒಂದೇ ಆಗಿಲ್ಲ. ಅಲ್ಲದೆ, ನಂತರದ ಕೆಲವು ಕವಿಗಳೂ ಅಮರುಕನದ್ದೆಂದು ಕೆಲವು ಪದ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಉದಾಹರಿಸಿಯೂ ಇದ್ದಾರೆ. ಇವೆಲ್ಲಾ ಸೇರಿಸಿ, ಅಮರುಕನದ್ದೆಂದು ಹೇಳಲಾಗುವ ಸುಮಾರು ೧೬೦ ಪದ್ಯಗಳಿವೆ.
ಇವನ ಬಗ್ಗೆ ಇನ್ನೊಂದು ಕಥೆಯೂ ಇದೆ. ಮಂಡನಮಿಶ್ರರ ಹೆಂಡತಿ ಉಭಯಭಾರತಿಯ ಜೊತೆ ಆದಿಶಂಕರರ ವಾದ ನಡೆಯುತ್ತಿದ್ದಾಗ ಆಕೆ ಸಾಂಸಾರಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲು, ಬಾಲ ಸನ್ಯಾಸಿಯಾಗಿದ್ದ ಶಂಕರರು ತಮ್ಮ ಅನುಭವದಿಂದಲೇ ಆ ಪ್ರಶ್ನೆಗೆ ಉತ್ತರಿಸಲು ಅಕಾಲದಲ್ಲಿ ಸತ್ತು ಹೋಗಿದ್ದ ಅಮರುಕನ ದೇಹದಲ್ಲಿ ಪರಕಾಯ ಪ್ರವೇಶಮಾಡಿದ್ದರೆಂದೂ, ಆ ಸಮಯದಲ್ಲಿ ಅವರು ಬರೆದ ಪದ್ಯಗಳೇ ಈ ಅಮರುಶತಕವೆಂದೂ ಕೆಲವು ಶಂಕರ ವಿಜಯ ಕಾವ್ಯಗಳು ಹೇಳುತ್ತವೆ. ಇವುಗಳ ಸತ್ಯಾಸತ್ಯತೆ ಹೇಗೇ ಇರಲಿ – ಅಮರು ಬರೆದ ಪದ್ಯಗಳು ಸಾವಿರದಿನ್ನೂರು ವರ್ಷಗಳ ನಂತರವೂ ರಸಿಕರ ಮನ ಸೆಳೆಯುತ್ತಿವೆ. ಅಂದ ಹಾಗೆ , ಎಸ್ ಎಲ್ ಭೈರಪ್ಪ ಅವರ ’ಸಾರ್ಥ’ ಕಾದಂಬರಿಯನ್ನು ಓದಿದ್ದವರಿಗೆ ಅದರಲ್ಲಿ ಬರುವ ಅಮರುಕನ ಪಾತ್ರ ನೆನಪಾದರೂ ಆಗಬಹುದೇನೋ.
ಅಮರುಕನ ಪದ್ಯಗಳು ಅವುಗಳ ಲಾಲಿತ್ಯಕ್ಕೆ ಹೆಸರುವಾಸಿ. ಹಾಗಾಗಿ ಅವುಗಳ ಅನುವಾದ ಸ್ವಲ್ಪ ಕಷ್ಟವೇ ಆದರೂ, ಮನಸ್ಸಿಗೆ ಬಹಳ ತೃಪ್ತಿ ಕೊಡುವಂತಹವು. ನಾನು ಮಾಡಿರುವ ಅನುವಾದಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ.
****
ಯಾವಾಗಲೋ ಒಮ್ಮೆ ನಾಯಕಿ ತನ್ನ ನಲ್ಲನಲ್ಲಿ ಹುಸಿಮುನಿಸು ತೋರಿದಳು. ಆದರೆ ಅದು ಸುಳ್ಳು ಎಂದರಿಯದ ಅವನು ದೂರವಾಗಿಬಿಟ್ಟ. ಈಗ ಇವಳಿಗೆ ಉಳಿದಿದ್ದೇನು? ಬರೀ ಒಂಟಿತನ. ತನ್ನ ಕೊರಗನ್ನು ಹೇಳಿಕೊಳ್ಳುವುದಕ್ಕೆ ಒಬ್ಬ ಗೆಳತಿಯಿದ್ದಾಳಲ್ಲ, ಸದ್ಯ! ಇಲ್ಲದಿದ್ದರೆ ಇವಳ ಪಾಡು ಏನಾಗುತ್ತಿತ್ತೋ! (ಅಮರುಶತಕ: ೧೫)
ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು
ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ
ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ
ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?