ಇಪ್ಪತ್ತನೇ ಶತಮಾನದ ಭಾರತದಲ್ಲಿ ಯೋಗದ ಪುನರುತ್ಥಾನ
– ಶರತ್ ಹರಿಹರಪುರ ಸತೀಶ್
ಪದ್ಮಾಸನದಲ್ಲಿ (ಸಾಧ್ಯವಾದರೆ) ಕುಳಿತು, ಕಣ್ಣು ಮುಚ್ಚಿ ‘ಯೋಗ’ ಎಂಬುದನ್ನು ಮನಸಿನಲ್ಲೇ ಕಲ್ಪಿಸಿಕೊಂಡರೆ ನಿಮ್ಮ ಕಣ್ಣು ಮುಂದೆ ಬರುವ ಚಿತ್ರ ಯಾವುದು? ಟಿವಿಯಲ್ಲಿ ಬರುವ ಒಬ್ಬ ಭಾರತದ ವ್ಯಕ್ತಿಯಾಗಿರಬಹುದು (ಬಾಬಾ ರಾಮದೇವ್, ಫಿಲಂ ತಾರೆ, ಇತ್ಯಾದಿ) ಅಥವಾ ಒಬ್ಬ ಪಾಶ್ಚಾತ್ಯ ದೇಶದ ವ್ಯಕ್ತಿಯೇ ಆಗಿರಬಹುದು ……. ಅಲ್ಲವೇ? ಭಾರತದ ಓರ್ವ ಮಹಾನ್ ವ್ಯಕ್ತಿಯ ಮುಖಚಿತ್ರ ಯಾರಿಗೂ ಕಾಣಿಸುವುದಿಲ್ಲ. ಏಕೆಂದರೆ ಅಂತಹ ಮನುಷ್ಯ ಇದ್ದರು ಎನ್ನುವುದು ಅನೇಕರಿಗೆ ಗೊತ್ತೆಇಲ್ಲ.
ಪತಂಜಲಿ ಮಹರ್ಶಿಗಳು ಯೋಗ ಸೂತ್ರಗಳನ್ನು ಬರೆದು ಸುಮಾರು 2400 ವರ್ಷಗಳೇ ಆಗಿರಬಹುದು. ಮೊದಲಿಗೆ ಮುಸ್ಲಿಮರು, ನಂತರ ಬ್ರಿಟಿಷರ ದಬ್ಬಾಳಿಕೆಯಲ್ಲಿ ನಮ್ಮ ಗುರುಕುಲ ಶಿಕ್ಷಣ ಪದ್ಧತಿ ನಾಶವಾಯಿತು. ಇದರ ಜೊತೆಗೆ ಯೋಗಾಸನದ ವಿದ್ಯೆಯು ಕ್ಷೀಣವಾಯಿತು. ಇಪ್ಪತ್ತನೇ ಶತಮಾದಲ್ಲಿ ಅದಕ್ಕೆ ಪುನರ್ಜೀವ ನೀಡಿದವರೇ ‘ಶ್ರೀ ತಿರುಮಲೈ ಕೃಷ್ಣಮಾಚಾರ್ಯ’. ಇಡೀ ವಿಶ್ವದಲ್ಲಿ ಕೋಟ್ಯಾಂತ ಜನರು ವಿವಿಧ ಶೈಲಿಗಳಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಅದಕ್ಕೆಲ್ಲ ಮೂಲ 125ಕ್ಕೂ ಹೆಚ್ಚು ವರುಷಗಳ ಹಿಂದೆ ಜನಿಸಿದ ಕೃಷ್ಣಮಾಚಾರ್ಯರು.
ಚಿತ್ರದುರ್ಗದಲ್ಲಿ ಜನಿಸಿದ ಕೃಷ್ಣಮಾಚಾರ್ಯರು (18 ನವೆಂಬರ್ 1888 – 28 ಫೆಬ್ರುವರೀ 1989) ಸಂಸ್ಕೃತ ಮತ್ತು ವೇದಗಳ ಜೊತೆಗೆ, ತಮ್ಮ ತಂದೆಯವರಾದ ‘ಶ್ರೀ ತಿರುಮಲೈ ಶ್ರೀನಿವಾಸ ತಾತಾಚಾರ್ಯ’ ಅವರಿಂದ ಯೋಗ ಹಾಗೂ ಪ್ರಾಣಾಯಾಮವನ್ನು ಕಲಿತರು. ಮೈಸೂರು, ಪಟ್ನಾ ಹಾಗೂ ಕಾಶಿಯಲ್ಲಿ ಶಡ್ದರ್ಶನಗಳಲ್ಲಿ ಪಾಂಡಿತ್ಯ ಪಡೆದರು. ಮಾನಸ ಸರೋವರದ ಬಳಿ ಒಂದು ಗುಹೆಯಲ್ಲಿ ವಾಸವಾಗಿದ್ದ ‘ರಾಮ ಮೋಹನ ಬ್ರಹ್ಮಚಾರಿ’ ಅವರಿಂದ ಕೂಡ ವಿದ್ಯೆ ಸ್ವೀಕರಿಸಿದರು.
ನಂತರ ಮೈಸೂರಿಗೆ ಹಿಂದುರಿಗಿ ಶ್ರೀಕೃಷ್ಣ ರಾಜ ಒಡೆಯರ್-೪ ಅವರ್ ಆಸ್ಥಾನ ವಿದ್ವಾಂಸರಾದರು. ಮಹಾರಾಜರ ಪ್ರೋತ್ಸಾಹದಲ್ಲಿ ಭಾರತದಾದ್ಯಂತ ಉಪನ್ಯಾಸಗಳನ್ನು ನೀಡುವುದರ ಜೊತೆಗೆ ಯೋಗಾಸವನ್ನೂ ಪ್ರದರ್ಶಿಸಿದರು. ಇದರ ಮಧ್ಯೆ ಆಚಾರ್ಯರು ಅನೇಕ ಪುಸ್ತಕಗಳನ್ನು ಬರೆದರು. ಅದರಲ್ಲಿ ಮುಖೈವಾದುದು ‘ಯೋಗ ಮಕರಂದ’, ‘ಯೊಗಾಸನಗಳು’, ‘ಯೋಗ ರಹಸ್ಯ’ ಮತ್ತು ‘ಯೋಗವಲ್ಲಿ’. 1933ರಲ್ಲಿ ಜಗನ್ಮೋಹನ ಅರಮನೆಯಲ್ಲಿ ಯೋಗಾಶಾಲೆಯೊಂದನ್ನೂ ಆರಂಭಿಸಿದರು. ದುರಾದ್ರುಷ್ಟವಶ ಈ ಯೋಗಾಶಾಲೆಯನ್ನು ಸ್ವಾತಂತ್ರ ಭಾರತದ ಮೈಸೂರಿನ ಮೊದಲ ಮುಖ್ಯ ಮಂತ್ರಿಯಾದ ಕೆ.ಸಿ.ರೆಡ್ಡಿಯವರು ಮುಚ್ಚಿಸಿದರು. ಅದರ ಕಾರಣ ಆಚಾರ್ಯರು ಮೈಸೂರಿನಿಂದ ಬೆಂಗಳೂರಿಗೆ ಅನಂತರ ಮದ್ರಾಸಿಗೆ ತೆರಳಿದರು. ಮದ್ರಾಸಿನಲ್ಲಿ ಕೆಲ ಕಾಲ ವಿವೇಕಾನಂದ ಕಾಲೆಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. 1989ರಲ್ಲಿ ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿದರು.