ವಿಷಯದ ವಿವರಗಳಿಗೆ ದಾಟಿರಿ

Archive for

17
ಜೂನ್

ಹದಿಮೂರರ ಪೋರಿಯೂ ನಮಗೆ ಬದುಕು ಕಲಿಸಬಲ್ಲಳು!

– ಸಹನಾ ವಿಜಯಕುಮಾರ್.  ಬೆಂಗಳೂರು

ಆನ್ ಫ್ರ್ಯಾಂಕ್ಹದಿಮೂರು ವರ್ಷದ ಚುರುಕು ಹುಡುಗಿಯೊಬ್ಬಳು ಸತತವಾಗಿ ಎರಡು ವರ್ಷಗಳ ಕಾಲ ಹೊರಪ್ರಪಂಚದ ಸಂಪರ್ಕ ಕಡಿದುಕೊಂಡು ತನ್ನ ಕುಟುಂಬದೊಂದಿಗೆ ಅಜ್ಞಾತವಾಸದಲ್ಲಿರಬೇಕಾಗಿ ಬಂದರೆ ಏನಾಗಬಹುದು? ಹಣೆಬರಹವನ್ನು ಹಳಿಯುತ್ತ ದಿನದೂಡಬಹುದು. ತನಗೆ ಈ ದುರ್ಗತಿಯನ್ನು ತಂದಿತ್ತ ದೇವರನ್ನು ಶಪಿಸುತ್ತ ಕಣ್ಣೀರಿಡಬಹುದು ಅಥವಾ ಸುಮ್ಮನೆ ಕೊರಗಿ ಖಿನ್ನತೆಗೊಳಗಾಗಬಹುದು. ಅದೆಲ್ಲ ಬಿಟ್ಟು ತನ್ನ ನೋವು ಸಂಕಟ ತೊಳಲಾಟಗಳನ್ನು, ಆ ದಿನಗಳ ಚಿತ್ರಣವನ್ನು ತನ್ನ ಡೈರಿಯಲ್ಲಿ ಯಥಾವತ್ತಾಗಿ ದಾಖಲಿಸಿಟ್ಟು ಸಾವಿನ ನಂತರವೂ ಸ್ಮರಣೀಯಳಾಗಬಹುದೇ? ವ್ಯತಿರಿಕ್ತ ಪರಿಸ್ಥಿತಿಯನ್ನು ಎಳೆ‍ಎಳೆ‍ಯಾಗಿ ಬಿಡಿಸಿಟ್ಟು, ಸಣ್ಣ-ಪುಟ್ಟದ್ದಕ್ಕೆಲ್ಲ ಧೃತಿಗೆಡುವವರಿಗೆ ಸ್ಫೂರ್ತಿಯಾಗಿ ವಿಶ್ವಕ್ಕೇ ಮಾನವೀಯತೆಯ ಪಾಠ ಕಲಿಸುವ ಗುರುವಾಗಬಹುದೇ? ಹೌದು ಎನ್ನುತ್ತದೆ ಇತಿಹಾಸ. ತನ್ನ ಪುಟ್ಟ ಬದುಕನ್ನು ಡೈರಿಯ ಪುಟಗಳಲ್ಲಿ ಸ್ಫುಟವಾಗಿ ಬರೆದಿಟ್ಟು, ಸತ್ತ ಮೇಲೂ ತನ್ನ ಬರಹದಿಂದಲೇ ಬದುಕಿರುವ ಈ ಬಾಲೆಯ ಹೆಸರು ‘ಆನ್ ಫ್ರ್ಯಾಂಕ್’.

ಆನ್ ಹುಟ್ಟಿದ್ದು 1929ನೇ ಇಸವಿಯ ಜೂನ್ 12ರಂದು, ಜರ್ಮನಿಯ ಫ್ರಾಂಕ್‍ಫರ್ಟ್ ಎಂಬಲ್ಲಿ. ಅಪ್ಪ ಓಟ್ಟೊ ಫ್ರ್ಯಾಂಕ್, ಅಮ್ಮ ಎಡಿತ್ ಹಾಗೂ ಅಕ್ಕ ಮಾರ್ಗೋಟ್‍ರನ್ನೊಳಗೊಂಡ ಸಣ್ಣ ಯಹೂದಿ ಕುಟುಂಬ ಇವರದ್ದು. ಅಪ್ಪ ಪುಸ್ತಕ ಪ್ರಿಯನಾದ್ದರಿಂದ ಮನೆಯಲ್ಲೇ ದೊಡ್ಡ ಗ್ರಂಥಾಲಯವಿತ್ತು. ಮಕ್ಕಳಿಗೂ ಪುಸ್ತಕಗಳನ್ನು ಓದಲು ಬಹಳ ಉತ್ತೇಜನವಿತ್ತು. ‘ಆನ್‍’ಗೆ  ನಾಲ್ಕು ವರ್ಷಗಳಾಗುವವರೆಗೂ ಎಲ್ಲ ಮಾಮೂಲಾಗಿಯೇ ಇತ್ತು. ಆದರೆ 1933ರ ಮಾರ್ಚ್ 13ರಂದು ನಡೆದ ಚುನಾವಣೆಯಲ್ಲಿ ಹಿಟ್ಲರ್‍ನ ನಾಜಿ ಪಕ್ಷ ಗೆದ್ದೊಡನೆ ಯಹೂದಿಗಳಲ್ಲಿ ಸಣ್ಣ ಸಂಚಲನ ಶುರುವಾಯಿತು. ಚಾನ್ಸೆಲರ್ ಆಗಿ ನಿಯುಕ್ತನಾದ ಹಿಟ್ಲರ್ ನಿರೀಕ್ಷಿಸಿದ್ದಂತೆಯೇ ದೌರ್ಜನ್ಯಕ್ಕಿಳಿದ. ಅವನು ಮಾಡಿದ ಮೊತ್ತ ಮೊದಲ ಕೆಲಸ Concentration Camp ಎಂದು ಕರೆಯಲ್ಪಡುತ್ತಿದ್ದ ಸಮರ ಶಿಬಿರ(ಯುದ್ಧದ ಸೆರೆಯಾಳುಗಳನ್ನು ಕೂಡಿಡುವ ಶಿಬಿರ)ಗಳನ್ನು ಶುರುಮಾಡಿ ಒಂದು ವರ್ಷದಲ್ಲೇ ಸುಮಾರು 45 ಸಾವಿರ ಜನರನ್ನು ಅಲ್ಲಿಗೆ ದೂಡಿದ್ದು. ಆಗ ಜರ್ಮನಿಯನ್ನು ತೊರೆದ ಸುಮಾರು 3 ಲಕ್ಷ ಯಹೂದಿ ಕುಟುಂಬಗಳಲ್ಲಿ ‘ಆನ್‍’ಳ ಕುಟುಂಬವೂ ಸೇರಿತ್ತು.

ಹೀಗೆ ಜರ್ಮನಿ ಬಿಟ್ಟು ಆಶ್ರಯ ಹುಡುಕಿಕೊಂಡು ಹೊರಟ ಈ ಕುಟುಂಬ ನೆಲೆ ಕಂಡುಕೊಂಡದ್ದು ಹಾಲೆಂಡ್‍ನಲ್ಲಿ. ಐದಾರು ವರ್ಷಗಳು ನೆಮ್ಮದಿಯಾಗಿ ಉರುಳಿದ್ದವೇನೋ, 1940ರ ಮೇ ತಿಂಗಳಿನಲ್ಲಿ ಹಾಲೆಂಡ್‍ನ ಮೇಲೆ ದಾಳಿ ನಡೆಸಿದ ಹಿಟ್ಲರ್‍ನ ಸೈನ್ಯ ಅದನ್ನು ಸುಲಭವಾಗಿ ವಶಪಡಿಸಿಕೊಂಡಿತು. ದುರುಳ ಹಿಟ್ಲರ್‍ನ ಯಹೂದಿ ವಿರೋಧಿ ಚಟುವಟಿಕೆಗಳು ಇಲ್ಲಿಯೂ ಗರಿಗೆದರಿದವು. ಯಹೂದಿಗಳೆಲ್ಲ ಹೆಸರು ನೋಂದಣಿ ಮಾಡಿಸುವುದು ಕಡ್ಡಾಯವಾಯಿತು. ಅಪ್ಪ ಓಟ್ಟೊ ತನ್ನ ಉದ್ಯಮವನ್ನು ಗೆಳೆಯರ ಹೆಸರಿಗೆ ಹಸ್ತಾಂತರಿಸಿದರೆ, ಓದಿನಲ್ಲಿ ಮುಂದಿದ್ದ ಅಕ್ಕ-ತಂಗಿಯರು ತಾವು ಹೋಗುತ್ತಿದ್ದ ಪ್ರತಿಷ್ಠಿತ ಶಾಲೆಗಳನ್ನು ಬಿಟ್ಟು ಯಹೂದಿಯರಿಗೆ ಮೀಸಲಿದ್ದ ಶಾಲೆ ಸೇರಬೇಕಾಯಿತು. ಅಕ್ಕ ಮಾರ್ಗೋಟ್ ತುಂಬಾ ಮೆದು ಸ್ವಭಾವದ ಅಂತರ್ಮುಖಿಯಾಗಿದ್ದರೆ ತಂಗಿ ಆನ್ ವಾಚಾಳಿ ಹಾಗೂ ನಿರ್ಭೀತ ವ್ಯಕ್ತಿತ್ವದವಳಾಗಿದ್ದಳು. ಹಿಟ್ಲರ್‍ನ ಸೇನೆ ಹೇರಿದ್ದ ನೂರೆಂಟು ನಿರ್ಬಂಧಗಳ ನಡುವೆಯೂ ಬದುಕು ಹೇಗೋ ಸಾಗುತ್ತಿತ್ತು. 1943ನೇ ಇಸವಿಯ ಜೂನ್ 12 ‘ಆನ್‍’ಳ 13ನೆಯ ಹುಟ್ಟುಹಬ್ಬ. ಅಂದು ತಾನು ಬಹಳ ದಿನಗಳಿಂದ ಬಯಸಿದ್ದ ಕೆಂಪು-ಬಿಳಿ ಚೌಕಗಳಿದ್ದ ಆಟೋಗ್ರಾಫ್ ಪುಸ್ತಕವೊಂದನ್ನು ಉಡುಗೊರೆಯಾಗಿ ಪಡೆದಳು. ಅದನ್ನು ಡೈರಿಯಂತೆ ಬಳಸುವ ನಿಶ್ಚಯ ಮಾಡಿ ಪ್ರತಿದಿನ ನಡೆಯುತ್ತಿದ್ದ ಘಟನೆಗಳನ್ನು ದಾಖಲಿಸತೊಡಗಿದಳು.

ಮತ್ತಷ್ಟು ಓದು »