ತೆಗಳಬೇಕಾದುದು ಯಾರನ್ನು?
– ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಕನ್ನಡ ಮಾಧ್ಯಮ ಕುರಿತ ಚರ್ಚೆ ನಿಲ್ಲುವಂತೆಯೂ ಕನ್ನಡ ಉಳಿಸುವ ಪರ್ಯಾಯ ಮಾರ್ಗ ಶುರುಮಾಡುವ ಪ್ರಯತ್ನ ಆರಂಭವಾಗುವಂತೆಯೂ ಕಾಣುತ್ತಿಲ್ಲ. ಕನ್ನಡವೂ ಸೇರಿ ಯಾವ ಮಾಧ್ಯಮವನ್ನೂ ಹೇರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಕನ್ನಡ ಮಾತ್ರ ಮಾಧ್ಯಮವಾಗಬಾರದು, ಆದರೆ ಇಂಗಿಷ್ ಮಾತ್ರ ಆಗಬಹುದು ಎನ್ನಲಾಗಿದೆ ಎಂದು ಓದಿಕೊಂಡ ಪ್ರಭೃತಿಗಳಿಗೆ ಕೊರತೆ ಇಲ್ಲ. ಇದೇ ದಾಟಿಯಲ್ಲಿ ಮಾತನಾಡುವ ಹೋರಾಟಗಾರರಿಗೆ, ಅವರಿಂದ ತಪ್ಪಿಸಿಕೊಳ್ಳಬಯಸುವ ಸಾಹಿತಿಗಳಿಗೆ ಕನ್ನಡ ಉಳಿಸುವ ಬೇರೆ ಮಾರ್ಗಗಳೇ ಕಾಣದಿರುವುದು ಆಶ್ಚರ್ಯಕರ. ಈಗ ಇವರೇ ಪ್ರತಿಪಾದಿಸುವಂತೆ ನಾಲ್ಕನೆಯತ್ತೆವರೆಗೆ ಕಡ್ಡಾಯ ಮಾಧ್ಯಮವಾದರೆ ಕನ್ನಡ ಉಳಿದುಬಿಡುತ್ತದೆಯೇ? ಪರಿಸ್ಥಿತಿ ನೋಡೋಣ:
ಮೊನ್ನೆ ತಾನೆ ಹಿರಿಯರೊಬ್ಬರು ಭೇಟಿಯಾಗಿದ್ದರು. ಕನ್ನಡ ಮಾಧ್ಯಮದ ಬಗ್ಗೆ ಮಾತು ಬಂತು. ಅವರ ಮನೆಯಲ್ಲಿ ಇದೀಗ ಡಿಗ್ರಿ ಓದುತ್ತಿರುವ ಹುಡುಗನಿದ್ದಾನಂತೆ. ಆತ ಪಿಯುಸಿವರೆಗೆ ಕನ್ನಡದಲ್ಲೇ ಓದಿದ್ದು. ಡಿಗ್ರಿಗೆ ಸೇರಿದ ಮೇಲೆ ಕನ್ನಡದ ಕಡೆ ಕಣ್ಣೆತ್ತಿ ನೋಡುವುದಿಲ್ಲವಂತೆ, ಕನ್ನಡ ಪತ್ರಿಕೆಗಳತ್ತ ಮುಖವನ್ನೂ ಹಾಕುವುದಿಲ್ಲವಂತೆ. ಕನ್ನಡ ಮಾತಾಡುವುದೇ ಅಲರ್ಜಿ ಎಂಬಂತೆ ವರ್ತಿಸುತ್ತಾನಂತೆ. ಸರ್ಕಾರದವರೇನೋ ನಾಲ್ಕನೆಯ ತರಗತಿವರೆಗೆ ಕನ್ನಡವನ್ನು ಕಲಿಕಾ ಮಾಧ್ಯಮ ಮಾಡಿಬಿಟ್ಟರೆ ಕನ್ನಡಕ್ಕೆ ಭವಿಷ್ಯವಿದೆ ಅಂತಾರಲ್ಲ, ನಮ್ಮ ಹುಡುಗ ನಾಲ್ಕನೆಯತ್ತೆಯಲ್ಲ, ಪಿಯುಸಿವರೆಗೂ ಕನ್ನಡದಲ್ಲೇ ಓದಿದ್ದಾನೆ. ಈಗ ಅವನ ವರ್ತನೆ ನೋಡಿ. ಇವನಿಂದ ಕನ್ನಡ ಮುಂದೆ ಹೇಗೆ ಉಳಿಯುತ್ತದೆ ಸ್ವಲ್ಪ ಹೇಳ್ತೀರಾ ಅಂದರು. ನಾಲ್ಕನೆಯ ತರಗತಿವರೆಗೆ ಮಾಧ್ಯಮವಾಗಿ ಕಡ್ಡಾಯ ಮಾಡುವುದರಿಂದ ಕನ್ನಡ ಉಳಿಯುತ್ತದೆ ಎಂಬ ಭ್ರಮೆ ನನಗೆ ಇಲ್ಲ. ಕನ್ನಡ ನಮ್ಮ ನಡೆ ನುಡಿಗೆ, ಬದುಕಿಗೆ ಅನಿವಾರ್ಯ ಎಂದು ಅವನಿಗೆ ಅರ್ಥವಾಗುವಂತೆ ನೀವು ಮನೆಯಲ್ಲಿ ನಡೆದುಕೊಂಡಿದ್ದೀರಾ ಎಂದು ಕೇಳಿದೆ. ಅಂದರೆ? ಎಂದು ಕೇಳಿದರು.
ಇಲ್ಲೇ ಇರುವುದು ಕನ್ನಡದ ಅಳಿವು-ಉಳಿವು. ಸರ್ಕಾರದ ನೀತಿಗಳು, ಸರ್ವೋಚ್ಚ ತೀರ್ಪು ಇವೆಲ್ಲ ಏನೇ ಇರಲಿ. ನಮ್ಮನ್ನು ಅಂದರೆ ಕನ್ನಡತನವನ್ನು ಉಳಿಸಿಕೊಳ್ಳಬೇಕಾದವರು ನಾವು. ನಾವು ಅಂದರೆ ಕನ್ನಡ ಪರಿಸರದಲ್ಲಿರುವ ಮನೆ-ಮನೆಯವರು. ಒಂದೆರಡು ದಶಕಗಳ ಈಚೆಗೆ ಇಂಗ್ಲಿಷ್ ಬಲ್ಲ, ಮೀಸೆಯೂ ಸರಿಯಾಗಿ ಮೂಡದವರಿಗೆ ಕಾರ್ಪೊರೆಟ್ ವಲಯದಲ್ಲಿ ಕೈ ತುಂಬ ಹಣದೊರೆಯಲಾರಂಭಿಸಿತು. ವೈದ್ಯಕೀಯ, ಕಂಪ್ಯೂಟರ್ ಕ್ಷೇತ್ರಕ್ಕೆ ಸೇರದ ಉಳಿದ ವೃತ್ತಿಯವರು ನಿಕೃಷ್ಟವಾದರು. 2008ರಲ್ಲಿ ಆರ್ಥಿಕ ಹಿಂಜರಿತ ಉಂಟಾಗಿ ಅವರ ಭ್ರಮೆ ಸ್ವಲ್ಪ ಕಳಚುವವರೆಗೂ ಅವರ ಠಾಕುಠೀಕಿಗೆ ಮೇರೆಯೇ ಇರಲಿಲ್ಲ. ಬೆರಳೆಣಿಕೆಯಲ್ಲಿದ್ದ ಆದರೆ ಪ್ರಭಾವಶಾಲಿ ಎನಿಸುವ ಅವರ ಅಳ್ಳಕ ಶ್ರೀಮಂತಿಕೆಯ ಪೊಗರು ಬಹುತೇಕ ಮಧ್ಯಮವರ್ಗದ ತಂದೆ ತಾಯಂದಿರ ಮನಸ್ಸನ್ನು ಕಲಕಿ, ತಮ್ಮ ತಮ್ಮ ಮಕ್ಕಳೂ ಹೀಗೇ ಆದರೆ ಎಂಬಂತೆ ಮಾಡಿತು. ಕೂಸು ಹುಟ್ಟುವ ಮೊದಲೇ ತಯಾರಿ ಆರಂಭಿಸಿದರು. ಮಾತೇ ಬಾರದ ಶಿಶುಗಳಿಗೂ ಆಂಗ್ಲ ಕಿಡ್ಸ್ ಕೇರ್‍ಗಳು ಹುಟ್ಟಿಕೊಂಡವು. ಆರು ತಿಂಗಳ ಗರ್ಭಿಣಿ ಮುಂದೆ ಹುಟ್ಟಲಿರುವ ತನ್ನ ಮಗುವಿಗೆ ಇಂಥ ಕೇರುಗಳಲ್ಲಿ ಸೀಟಿನ ಅರ್ಜಿ ಪಡೆಯಲು ಈಗಿಂದಲೇ ರಾತ್ರಿ ಕ್ಯೂ ನಿಲ್ಲತೊಡಗಿದಳು! ಪಾಲಕರ ಇಂಥ ವರ್ತನೆ ವಹಿವಾಟುದಾರರನ್ನು ಸೆಳೆಯದೇ ಬಿಟ್ಟೀತೇ? ಅವರೂ ಇಂಥ ಕಿಡ್ಸ್ ಕೇರ್‍ಗಳನ್ನು ತೆರೆದರು, ಅದನ್ನೇ ಮುಂದುವರೆಸಿ ಎಲ್‍ಕೆಜಿ-ಯುಕೆಜಿ, ಒಂದರಿಂದ ಐದು, ಏಳರಿಂದ ಹತ್ತು…ಪಿಯುಸಿ ಹೀಗೆಲ್ಲ ಶಾಲೆ ತೆರೆಯುತ್ತ ಹೋದರು. ಒಮ್ಮೆ ತಮ್ಮ ಕಿಡ್ಸ್ ಕೇರಿಗೆ ಸೇರಿದರೆ ಕನಿಷ್ಠ ಹತ್ತನೇ ತರಗತಿ ಮುಗಿಸಿಯೇ ನಿಮ್ಮ ಮಗು ಹೊರಬರುವುದು.ಅದೂ ಆಂಗ್ಲ ಮಾಧ್ಯಮದಲ್ಲಿ, ಕಂಪ್ಯೂಟರ್ ತರಬೇತಿಯೂ ಅದಕ್ಕೆ ಲಭ್ಯ ಎನ್ನುತ್ತ ಮಧ್ಯಮವರ್ಗದವರ ಸಣ್ಣ ಆಸೆಗೆ ಗೊಬ್ಬರ ನೀರು ಹಾಕತೊಡಗಿದರು. ಸರ್ಕಾರವೂ ಇಷ್ಟೊಂದು ಜನಕ್ಕೆ ತಾನೇ ಶಾಲೆ ತೆರೆಯುವುದು ಸಾಧ್ಯವೇ ಇಲ್ಲ ಎಂದು ಖಾಸಗಿ ಸಹಕಾರ ಅಗತ್ಯ ಎಂದು ಭಾವಿಸಿ ಅನುಮತಿ ಕೊಟ್ಟೇ ಕೊಟ್ಟಿತು.
ಸರ್ಕಾರಿ ಶಾಲೆಯ ಅಕ್ಕ ಪಕ್ಕ ಖಾಸಗಿ ಶಾಲೆ ಏನಾದರೂ ಇದ್ದರೆ ಪಾಲಕರ ಮೊದಲ ಆದ್ಯತೆ ಖಾಸಗಿ ಶಾಲೆಗೇ ದೊರೆಯುವಂತಾಯಿತು. ಅಲ್ಲಿ ಕನ್ನಡವನ್ನೂ ಇಂಗ್ಲಿಷಲ್ಲೇ ಕಲಿಸುತ್ತಾರೆ! ವ್ರೈಟ್ ಹಾರಿಜಾಂಟಲ್ ನ್ಯೂಮರಿಕಲ್ ತ್ರೀ ಆಂಡ್ ವ್ರೈಟ್ ಇನ್‍ವರ್‍ಟೆಡ್ ಹಾರಿಜಾಂಟಲ್ ನ್ಯೂಮರಿಕಲ್ ತ್ರೀ ಆನ್ ಇಟ್! ಎಂದು ಕನ್ನಡದ ಐ ಅಕ್ಷರವನ್ನು ಇಂಗ್ಲಿಷಲ್ಲಿ ಟೀಚರ್ ಒಬ್ಬರು ಕಲಿಸುವ ಪರಿಯನ್ನು ಕಂಡಿದ್ದೇನೆ. ಇದನ್ನು ಕಂಡ ಪಾಲಕರಿಗೆ ತಮ್ಮ ಮಗು ಹತ್ತನೇ ಕ್ಲಾಸ್ ಮುಗಿಸುವಷ್ಟರಲ್ಲೇ ಲಕ್ಷಾಂತರ ಸಂಪಾದನೆ ಮಾಡಿಬಿಡುತ್ತದೆ ಎಂಬ ಸಂಭ್ರಮ! ಆದರೆ ಆಗುವುದೇನು? ಮಗು ಬೆಳೆಯುತ್ತ ಬೆಳೆಯುತ್ತ ಪಾಲಕರನ್ನು ದೂರಮಾಡಿಕೊಳ್ಳುತ್ತ ಹೋಗುತ್ತದೆ. ಸಂಪಾದನೆ ಆರಂಭಿಸಿದಾಗ ಅವರನ್ನು ಮನೆಯಿಂದ ಹೊರಹಾಕುತ್ತದೆ. ಅಯ್ಯೋ! ಇಷ್ಟೆಲ್ಲ ಕಷ್ಟಕಟ್ಟು ಬೆಳೆಸಿ, ಓದಿಸಿದ್ದು ಸಾರ್ಥಕವಾಯಿತು ಎನ್ನುತ್ತ ಅವರು ವೃದ್ಧಾಶ್ರಮದ ದಾರಿ ಹಿಡಿಯುತ್ತಾರೆ. ಇಂಥವರೇ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ಪಾಲಕರನ್ನು ಪೋಷಿಸುವುದು ಮಕ್ಕಳ ಹೊಣೆ ಎಂದು ತೀರ್ಪು ತಂದವರು!
ಇಂಥ ಪರಿಸ್ಥಿತಿ ಮನೆಮನೆಯಲ್ಲೂ ಇದೆ. ಪೊಲೀಸು ಠಾಣೆ, ಆಸ್ಪತ್ರೆ, ಶಿಶುವಿಹಾರ, ವೃದ್ಧಾಶ್ರಮ ಇವೆಲ್ಲ ಹೆಚ್ಚುವುದು ಸಮಾಜದ ಅನಾರೋಗ್ಯದ ಲಕ್ಷಣ. ಆದರೆ ನಮ್ಮ ಸುತ್ತ ಇವೇ ಹೆಚ್ಚಾಗುತ್ತಿವೆ. ಇದರಲ್ಲಿ ಸಮಕಾಲೀನ ಪಾಲಕ-ಪೋಷಕರ ಪಾತ್ರ ಇಲ್ಲವೇ? ಭಾಷಾ ಮಾಧ್ಯಮಕ್ಕೂ ಇಂಥ ಸ್ಥಿತಿಗೂ ಏನು ಸಂಬಂಧ? ಸಂಬಂಧ ಇದೆ.
ಜೀನ್ ಪಿಯಾಜೆ (1896-1980) ಎಂಬ ಸ್ವಿಜರ್‍ಲೆಂಡಿನ ಪ್ರಸಿದ್ಧ ಚಿಂತಕ ಮಕ್ಕಳ ವರ್ತನೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಸಿದ್ಧಾಂತಗಳನ್ನು ಮಂಡಿಸಿದ್ದಾನೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇವನ ಸಿದ್ಧಾಂತದ ಪರಿಚಯ ಅಷ್ಟಿಷ್ಟಾದರೂ ಇದ್ದೇ ಇರುತ್ತದೆ. ಮಗುವಿನ ವಿಕಸನದ ಹಂತಗಳನ್ನು ಆತ ಗುರುತಿಸಿ ಪರಿಸರದ ಕಾರಣದಿಂದ ಈ ಹಂತಗಳು ಮಕ್ಕಳ ಮನಸ್ಸಿನಲ್ಲಿ ಮೂಡಿ ಜೀವಮಾನ ಪರ್ಯಂತ ಅವು ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ವಿಶ್ಲೇಷಿಸುತ್ತಾನೆ. ನಾಲ್ಕರಿಂದ ಹದಿನೇಳು ವರ್ಷದವರೆಗೆ ತನ್ನ ಕ್ರಿಯೆ ಹಾಗೂ ಅದಕ್ಕೆ ಪರಿಸರ ತೋರುವ ಪ್ರತಿಕ್ರಿಯೆಗಳನ್ನು ಗಮನಿಸಿ ಮಗು ಕಲಿಯುತ್ತ, ವ್ಯಕ್ತಿತ್ವ ಬೆಳೆಸಿಕೊಳ್ಳುತ್ತ ಹೋಗುತ್ತದೆ. ಅನಂತರದ್ದು ಏನಿದ್ದರೂ ಅದರ ವಿಸ್ತರಣೆ ಎಂದು ಆತ ಹೇಳುತ್ತಾನೆ. ಈ ಹಂತದಲ್ಲೇ ತನ್ನ ಪರಿಸರ ಸಮರ್ಥಿಸುವ, ಸರಿ ಎನ್ನುವ, ಅಗತ್ಯ ಎನ್ನುವ, ಸೂಕ್ತ ಎನ್ನುವ ತೀರ್ಮಾನಗಳನ್ನು ಅದು ಕೈಗೊಳ್ಳುತ್ತದೆ. ಅದನ್ನೇ ಅಳವಡಿಸಿಕೊಳ್ಳುತ್ತದೆ ಕೂಡ.
ನಮ್ಮ ಕೌಟುಂಬಿಕ ಪರಿಸರ ಈಗ ಹೇಗಿದೆ ನೋಡಿ. ಭಾಷೆ, ಬಟ್ಟೆ, ಕಲಿಕೆ, ಆಹಾರ, ವೈದ್ಯ ಹೀಗೆ ಎಲ್ಲ ಅಗತ್ಯಗಳಲ್ಲೂ ನಮ್ಮದೊಂದನ್ನು ಬಿಟ್ಟು ವಿದೇಶೀ ವ್ಯಾಮೋಹ ಹುಟ್ಟುವಂತೆ ಮಕ್ಕಳನ್ನು ಬೆಳೆಸುತ್ತಿದ್ದೇವೆ. ಕನ್ನಡ ಶಾಲೆ ಬೇಡ, ಇಂಗ್ಲಿಷ್ ಶಾಲೆಗೆ ಹೋಗು; ಮನೆ ಮದ್ದು ಬೇಡ, ಡಾಕ್ಟರ್ ಬಳಿ ಹೋಗು; ರಾಗಿ ಮುದ್ದೆ ಬೇಡ, ಪಿಜ್ಜಾ ತಿನ್ನು; ಪಂಚೆ ಬೇಡ, ಸ್ಯೂಟ್ ಧರಿಸು… ಇತ್ಯಾದಿ, ಇತ್ಯಾದಿ. ಒಟ್ಟಿನಲ್ಲಿ ನಮ್ಮದೆನ್ನುವುದರ ಬಗ್ಗೆ ಮಕ್ಕಳಿಗೆ ರೇಜಿಗೆ ಹುಟ್ಟಬೇಕು, ಹಾಗೆ ಸಾಕುತ್ತಿದ್ದೇವೆ. ಯಾವುದನ್ನು ಬೇಡ ಎನ್ನುತ್ತಿದ್ದಾರೆ, ಯಾವುದು ಬೇಕು ಅನ್ನುತ್ತಿದ್ದಾರೆ ಎಂಬುದನ್ನು ಗಮನಿಸಿ ಕಲಿತು ರೂಢಿಸಿಕೊಂಡು ದೊಡ್ಡವರಾಗಿ ಸಂಪಾದನೆಗೆ ಶುರುಮಾಡಿದಾಗ ಬಿಡ್ತಾವಾ ಮಕ್ಕಳು? ನಮ್ಮ ಪಾಲಕರೂ ಸರಿ ಇಲ್ಲ ಅನ್ನುತ್ತವೆ! ತಮ್ಮ ಭಾಷೆ ಉಳಿಸಿಕೊಳ್ಳಲಾಗದ ಪಾಲಕರು ತಮ್ಮ ಮಕ್ಕಳನ್ನೂ ಉಳಿಸಿಕೊಳ್ಳಲಾರರು. ಇದು ಸಹಜ. ಪಿಯಾಜೆ ಸೂತ್ರ ಗಮನಿಸಿ.
ಹೀಗಾಗಿಯೇ ನಗರ ವಾತಾವರಣದಲ್ಲಿ ಎಷ್ಟೆಲ್ಲ ಕಲಿತರೂ ಅಕಸ್ಮಾತ್ ಉದ್ಯೋಗ ಸಿಗದಿದ್ದಲ್ಲಿ ಹತ್ತಾರು ಎಕರೆ ಜಮೀನು ಇದ್ದವರ, ಜೀವನಕ್ಕೆ ಅನ್ಯ ಗೌರವಾನ್ವಿತ ಕುಲ ಕಸುಬಿನ ಮಾರ್ಗ ಇದ್ದವರ ಮಕ್ಕಳೂ ನಗರದಲ್ಲಿ ಬೀಡಾಡಿ ದನಗಳಂತೆ ಇರಬಲ್ಲರೇ ವಿನಾ ತಮ್ಮ ಮೂಲ ಕುಟುಂಬದ ಪರಿಸರಕ್ಕೆ ಮರಳಲಾರರು. ಏಕೆಂದರೆ ಭಾಷೆಯೂ ಸೇರಿದಂತೆ ನಮ್ಮದು ಯಾವುದೂ ಸರಿ ಇಲ್ಲ ಎಂದು ಆ ಮಗು ಎಂದೋ ತೀರ್ಮಾನಕ್ಕೆ ಬಂದಾಗಿದೆ! ಪಿಯುಸಿ ತನಕ ಕನ್ನಡದಲ್ಲೇ ಓದಿದ ಮಗುವಿಗೆ ಈಗ ಅರ್ಥವಾಗಿದೆ ಅಷ್ಟೇ. ಭಾಷೆ ಎಂದರೆ ವ್ಯವಹಾರವಲ್ಲ, ಅದು ನಮ್ಮ ಇಡೀ ಸಂಸ್ಕøತಿಯನ್ನು ಹೊತ್ತು ತರುತ್ತದೆ. ಇದನ್ನು ಬಿಟ್ಟು ಅನ್ಯ ಆಕರ್ಷಣೆಗೆ ಒಳಗಾಗಿ ನಮ್ಮ ಬುಡವನ್ನು ನಾವೇ ಕಡಿದುಕೊಳ್ಳುತ್ತಿದ್ದೇವೆ.
ಇಂಥ ಪರಿಸ್ಥಿತಿಗೆ ನಾವು ಬಂದಾಗಿದೆ. ಇದಕ್ಕೆ ಯಾರನ್ನು, ಯಾಕೆ, ಹೇಗೆ ತೆಗಳೋಣ? ನೀವೇ ಹೇಳಿ.




