ನಿನ್ನೆಗೆ ನನ್ನ ಮಾತು – ಭಾಗ ೬
– ಮು.ಅ ಶ್ರೀರಂಗ ಬೆಂಗಳೂರು
ನಿನ್ನೆಗೆ ನನ್ನ ಮಾತು – ಭಾಗ ೧
ನಿನ್ನೆಗೆ ನನ್ನ ಮಾತು – ಭಾಗ ೨
ನಿನ್ನೆಗೆ ನನ್ನ ಮಾತು – ಭಾಗ ೩
ನಿನ್ನೆಗೆ ನನ್ನ ಮಾತು – ಭಾಗ ೪
ಒಂದು ಪೀಠಿಕೆ :- ನಿನ್ನೆಗೆ ನನ್ನ ಮಾತು ಎಂಬ ಶೀರ್ಷಿಕೆಯಲ್ಲಿ ಈ ಹಿಂದೆ ನಿಲುಮೆಯಲ್ಲಿ ಐದು ಲೇಖನಗಳನ್ನು ಬರೆದಿದ್ದೆ. ಅದರ ಹೆಚ್ಚಿನ ಅಂಶ ನನ್ನ ಹವ್ಯಾಸಿ ಓದಿನ ಮತ್ತು ಆಗಾಗ ದಿನ ಪತ್ರಿಕೆಗಳ ಭಾನುವಾರದ ಸಂಚಿಕೆಗಳಲ್ಲಿ/ಸಾಹಿತ್ಯಿಕ ಪತ್ರಿಕೆಗಳಲ್ಲಿ ಬರೆದ ಲೇಖನಗಳ ಬಗ್ಗೆ ಮತ್ತು ಅದನ್ನು ಬರೆದ ನಂತರ ನಡೆದ ಕೆಲವು ವಿದ್ಯಮಾನಗಳ ಬಗ್ಗೆ ಮಾತ್ರ ಸೀಮಿತವಾಗಿತ್ತು ಎಂದು ನನ್ನ ನೆನಪು. ಈ ಸಲ ನಾನು ಇತ್ತೀಚೆಗೆ ಓದಿದ ಕಥಾಸಂಕಲನ/ಕಾದಂಬರಿ/ಅಂಕಣ ಬರಹಗಳು ಅಥವಾ ಯಾವುದಾದರು ಒಂದು ವಿಷಯಕ್ಕೆ ಸಂಬಂಧಿಸಿದ ಲೇಖನಗಳ ಗುಚ್ಛದ ಬಗ್ಗೆ ನನ್ನ ಅಭಿಪ್ರಾಯ, ಅನಿಸಿಕೆಗಳನ್ನು ಹೇಳುವ ಪ್ರಯತ್ನ ಮಾಡುತ್ತೇನೆ.ಕಥಾ ಸಂಕಲನ/ಕಾದಂಬರಿಗಳಾದರೆ ಅವುಗಳಲ್ಲಿನ ಯಾವುದಾದಾರೂ ಪಾತ್ರಗಳ ಛಾಯೆ ಅಥವಾ ಸನ್ನಿವೇಶಗಳ ಚಿತ್ರಣ ಈವರೆಗಿನ ನನ್ನ ಜೀವನದಲ್ಲಿ ಅಲ್ಪ ಸ್ವಲ್ಪವಾದರೂ ಕಂಡು ಬಂದಿದ್ದರೆ ಅಥವಾ ನನ್ನ ಸ್ನೇಹಿತರ, ಬಂಧು ಬಾಂಧವರಲ್ಲಿ ಕಂಡಿದ್ದರೆ,ಕೇಳಿದ್ದರೆ ಅವುಗಳ ಬಗ್ಗೆ ನನ್ನ ಸಹಸ್ಪಂದನಗಳನ್ನು ಓದುಗರೊಡನೆ ಹಂಚಿಕೊಳ್ಳುವ ಆಸೆಯಿದೆ. ನಾನು ಹೊಸಗನ್ನಡ ಸಾಹಿತ್ಯದ ಒಬ್ಬ ಹವ್ಯಾಸಿ ಓದುಗ. ಆದ್ದರಿಂದ ಇಲ್ಲಿನ ನನ್ನ ಅಭಿಪ್ರಾಯಗಳಲ್ಲಿ ವಿಮರ್ಶೆಯ ಪರಿಭಾಷೆಗಳು ಇರುವುದಿಲ್ಲ.ನಾನು ಈ ಅಂಕಣದಲ್ಲಿ ಪ್ರಸ್ತಾಪಿಸುವ ಕೃತಿಗಳ ಬಗ್ಗೆ ಈ ಹಿಂದೆ ವಿಮರ್ಶೆಗಳು ಬಂದಿರಬಹುದು. ಅದನ್ನು ನಾನು ಓದಿದ್ದರೆ ಅವುಗಳ ಬಗ್ಗೆಯೂ ನನ್ನ ಅನಿಸಿಕೆಗಳನ್ನು ಹೇಳುವ ಮನಸ್ಸಿದೆ.ನೋಡೋಣ ಇವೆಲ್ಲಾ ಎಷ್ಟರಮಟ್ಟಿಗೆ ನೆರವೇರುತ್ತದೋ! ನನ್ನ ಬರವಣಿಗೆ ನನಗೇ ತೃಪ್ತಿ ಕೊಡದ ದಿನ ಈ ಲೇಖನಮಾಲೆ ಮುಗಿಯುತ್ತದೆ.
ಇಲ್ಲಿಯ ಲೇಖನಗಳನ್ನು ಯಾವ ರೀತಿ ಬರೆಯಬೇಕು ಎಂದು ಒಂದೆರೆಡು ದಿನ ಯೋಚಿಸಿದೆ. ನನಗೆ ಪತ್ರ/ಇಮೇಲ್/ಫೋನ್/ವಾಟ್ಸ್ ಅಪ್ ಮೂಲಕ ಸಂಪರ್ಕ ಇರುವವವರ ಮತ್ತು ನಾನು ಒಂದು ಬಾರಿಯಾದರೂ ಮುಖತಃ ಭೇಟಿಯಾದವರ ಕೃತಿಗಳ ಬಗ್ಗೆ ಪತ್ರ ಬರೆಯುವ ಶೈಲಿಯಲ್ಲಿ ಬರೆಯುವುದು ಒಂದು ರೀತಿ ಆಪ್ತತೆ ತರುತ್ತದೆ.ಯಾವ ರೀತಿಯ ಸಂಪರ್ಕವಿಲ್ಲದ ಲೇಖಕರುಗಳ ಕೃತಿಗಳ ಬಗ್ಗೆ ಲೇಖನದ ರೂಪದಲ್ಲಿ ಬರೆಯುವುದು ಎಂದು ಅಂದುಕೊಂಡಿದ್ದೇನೆ. ಇದೇನೂ ಕಟ್ಟುನಿಟ್ಟಾದ ನಿಯಮವಿಲ್ಲ. ಬರೆಯುವ ವೇಳೆಗೆ ಯಾವುದು ಸೂಕ್ತವೆನಿಸುತ್ತದೋ ಆ ರೀತಿಯಲ್ಲಿ ಬರೆಯಬಹುದು. ಈ ಲೇಖನಮಾಲೆಗೆ ಅಕ್ಷರ ಅನುಸಂಧಾನ ಎಂದು ಹೆಸರಿಡುವ ಆಸೆಯಿತ್ತು. ಅಕ್ಷರವೇನೋ ಸರಿ; ಅನುಸಂಧಾನವೆಂದರೆ ಪರಿಶೀಲನೆ, ಧ್ಯಾನ ಎಂಬ ಅರ್ಥವಿದೆ. ಇನ್ನು ಪರಿಶೀಲನೆಗೆ ಸೂಕ್ಷ್ಮವಾದ ವಿಚಾರಣೆ ಎಂಬ ಅರ್ಥ ಬರುತ್ತದೆ. ಇವೆಲ್ಲಾ ಏಕೋ ಒಂದು ರೀತಿ ಜಂಭ,ನಾನೇನೋ ವಿಶೇಷವಾದದ್ದನ್ನು ಹೇಳುತ್ತಿದ್ದೇನೆ ಎಂಬ ಒಣ ಹೆಮ್ಮೆಯ ಲಾಂಛನಗಳಾಗುತ್ತವೆ ಎನಿಸಿತು. ಒಬ್ಬ ಹವ್ಯಾಸಿ ಓದುಗನಿಗೆ ಆ ರೀತಿಯ ಜಂಭ,ಒಣ ಹೆಮ್ಮೆಗಳು ತರವಲ್ಲ. ಆದ್ದರಿಂದ ಹಿಂದಿನ ನಿನ್ನೆಗೆ ನನ್ನ ಮಾತು ಎಂಬ ಹೆಸರೇ ಸೂಕ್ತವೆಂದು ಅದನ್ನೇ ಮುಂದುವರೆಸಿದ್ದೇನೆ. ಇದು ಸುಮಾರು ಆರೇಳು ತಿಂಗಳುಗಳ ನಂತರ ನಾನು ಬರೆಯುತ್ತಿರುವ ಲೇಖನವಾದ್ದರಿಂದ ಇಷ್ಟು ದೊಡ್ಡ ಪೀಠಿಕೆ ಬರೆದಿದ್ದೇನೆ. ಮುಂದಿನ ಲೇಖನಗಳಲ್ಲಿ ಪೀಠಿಕೆಗಳು ಇರುವುದಿಲ್ಲ. ಅವಶ್ಯವಿದ್ದರೆ ನಾಲ್ಕೈದು ಸಾಲಿನಷ್ಟೇ ಇರುತ್ತದೆ. ಈ ಸಲ ಹಿರಿಯ ಕಥೆಗಾರರಾದ ಕೆ ಸತ್ಯನಾರಾಯಣ ಅವರ ಕಾಲಜಿಂಕೆ (ಪ್ರಕಾಶಕರು- ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು–೪೦ ಪ್ರಥಮ ಮುದ್ರಣ ೨೦೦೫). ಕಾದಂಬರಿಯ ಬಗ್ಗೆ ಬರೆದಿದ್ದೇನೆ. ಈ ಕಾದಂಬರಿಯನ್ನು ನನಗೆ ಓದಲು ಕೊಟ್ಟ ಪ್ರಿಯ ಸ್ನೇಹಿತರಾದ ಶ್ರೀ ಗಿರೀಶ್ ವಾಘ್ ಬೆಂಗಳೂರು ಅವರಿಗೆ ನಾನು ಆಭಾರಿಯಾಗಿದ್ದೇನೆ.
———–
ಶ್ರೀ ಸತ್ಯನಾರಾಯಣ ಅವರಿಗೆ ವಂದನೆಗಳು
ಶ್ರೀ ಗಿರೀಶ್ ವಾಘ್ ಅವರು ತಮ್ಮ ಸಂಗ್ರಹದಲ್ಲಿದ್ದ ಕೆಲವು ಪುಸ್ತಕಗಳನ್ನು ನನಗೆ ಓದಲು ಕೊಟ್ಟಿದ್ದರು. ಅವುಗಳಲ್ಲಿ ತಮ್ಮ ಕಾದಂಬರಿ ‘ಕಾಲಜಿಂಕೆ’ಯೂ ಒಂದು. ತಮ್ಮ ಕಥೆಗಳು ಮತ್ತು ಕಾದಂಬರಿಗಳನ್ನು ಓದುತ್ತಿದ್ದರೆ ಅದರಲ್ಲಿ ಬರುವ ಪಾತ್ರಗಳಂತಹ ಚಹರೆಯಿರುವ ಕೆಲವರಾದರೂ ವ್ಯಕ್ತಿಗಳನ್ನು ನಾವು ಈ ಹಿಂದೆ ಎಲ್ಲಿಯೋ ನೋಡಿದಂತೆ ಅನಿಸುತ್ತದೆ.ಅಲ್ಲಿಯ ಕೆಲವು ಸನ್ನಿವೇಶಗಳು ಅಥವಾ ಅದರ ಛಾಯೆಗಳನ್ನು ಈ ಹಿಂದೆಂದೋ ಸ್ವತಃ ನಮ್ಮ ಬಾಳಿನಲ್ಲಿ ಅನುಭವಿಸಿರುವಂತೆ ತೋರುತ್ತದೆ. ತಮ್ಮ ‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾಸಂಕಲನದಲ್ಲಿನ ಕೆಲವು ಕಥೆಗಳಲ್ಲಿ ಈ ರೀತಿ ನನಗೆ ಆಗಿತ್ತು. ಅದನ್ನು ತಮಗೆ ತಿಳಿಸಿದಂತೆ ನೆನಪು.’ಕಾಲಜಿಂಕೆ’ ಓದಿದಾಗ ಸಹ ಅಲ್ಲಿಯ ಕೆಲವು ಪಾತ್ರಗಳ ಮತ್ತು ಸನ್ನಿವೇಶಗಳ ಜತೆ ನನ್ನ ಈವರೆಗಿನ ಕೆಲವೊಂದು ಅನುಭವಗಳು, ಆಲೋಚನೆಗಳು ಸ್ವಲ್ಪವಾದರೂ ಸಮೀಕರಿಸಿಕೊಂಡವು. ಇದು ತಮ್ಮ ಕಥಾಸಾಹಿತ್ಯದ ಪ್ಲಸ್ ಪಾಯಿಂಟ್.
‘ಕಾಲಜಿಂಕೆ’ಯ ಕಥಾ ನಿರೂಪಕ ರಂಗನಾಥನ ದಾಯಾದಿ ಸಂಬಂಧಿ ಸ್ವಾಮಿನಾಥನ ತಂದೆಯು ತನಗೆ ಮನಸ್ಸು ಬಂದಾಗ, ಬರೆಯುವ ವಿಷಯಗಳಿದೆ ಎಂದು ಅನಿಸಿದಾಗ ದಿನಚರಿ(ಡೈರಿ) ಬರೆಯುವ ಅಭ್ಯಾಸವಿದ್ದವನು. ವಾರಗಟ್ಟಲೆ, ತಿಂಗಳುಗಳಗಟ್ಟಲೆ ಗ್ಯಾಪ್ ಇರುವಂತಹ ಆ ದಿನಚರಿಯಲ್ಲಿ ಆತ ‘ಸಂಸ್ಕಾರ’ ಸಿನಿಮಾ ನೋಡಿದ ನಂತರ ‘…….. ಕತೆ ನಡೆದೇ ಇದ್ದರೆ ಈಗ ಆ ಆಚಾರ್ರು ಪಾಪ ಹೇಗೆ ಬದುಕುತ್ತಾ ಇರಬಹುದು. ಹೋಗಿ ನೋಡಕೊಂಡು ಬರಬೇಕು’ ಎಂಬ ಸಾಲು ನನ್ನನ್ನು ಸ್ವಲ್ಪ ಮಟ್ಟಿಗೆ ಅಲುಗಾಡಿಸಿತು. ಸುಮಾರು ಒಂದು ವರ್ಷದ ಹಿಂದೆ (ಕಾಲಜಿಂಕೆ’ ಓದುವುದಕ್ಕೂ ಮುಂಚೆ) ಎರಡು ಮೂರು ಲೇಖನಗಳನ್ನು ಬರೆಯುವ ಸಲುವಾಗಿ ನಾನು ಸಂಸ್ಕಾರ,ವಂಶವೃಕ್ಷ,ದಾಟು ಮತ್ತು
ಭಾರತೀಪುರ ಕಾದಂಬರಿಗಳನ್ನು (ಈ ನಾಲ್ಕು ಕಾದಂಬರಿಗಳ ಕಥೆ ಜ್ಞಾಪಕದಲ್ಲಿದ್ದರೂ ಸಹ) ಕೆಲವೊಂದು ವಿವರಗಳಿಗಾಗಿ ಮತ್ತೊಮ್ಮೆ ಓದಬೇಕಾಯಿತು.ಆಗ ‘ಸಂಸ್ಕಾರ’ದ ಪ್ರಾಣೇಶಾಚಾರ್ಯ, ‘ದಾಟು’ವಿನ ಸತ್ಯಭಾಮೆಯ ಜೀವನದ ಉತ್ತರಾರ್ಧವನ್ನು ಒಂದು ಕಥೆಯಾಗಿ ಬರೆಯಬಹುದಲ್ಲವೇ ಎಂಬ ಯೋಚನೆ ಬಂತು ಮತ್ತು ಒಂದು ಹಂತದಲ್ಲಿ ‘ವಂಶವೃಕ್ಷ’ದ ಶ್ರೀನಿವಾಸ ಶ್ರೋತ್ರಿಗಳ ಮೊಮ್ಮಗ ಚೀನಿಯ ಮುಖಾಂತರ ಪ್ರಾಣೇಶಾಚಾರ್ಯ ಮತ್ತು ಸತ್ಯಭಾಮೆಯ ಭೇಟಿಯನ್ನು ಸಹ ಮಾಡಿಸಬಹುದು ಎಂಬ ಕಥಾತಂತ್ರ ಸಹ ಹೊಳೆಯಿತು.ವೈಯಕ್ತಿಕವಾಗಿ ಆಚಾರ್ಯರು ಮತ್ತು ಸತ್ಯಭಾಮೆಯ ಸೋಲು ಗೆಲುವುಗಳೇನೇ ಇರಲಿ ಅವರಿಬ್ಬರೂ ಆಯಾ ಕಾದಂಬರಿಯ ಕಾಲದಲ್ಲಿದ್ದ ರೂಢಿಗತವಾದ ವಿಚಾರಗಳಿಂದ ಭಿನ್ನರಾಗಿದ್ದವರು. ಹಾಗೆಯೇ ಸಂಸ್ಕಾರ, ವಂಶವೃಕ್ಷ ಮತ್ತು ದಾಟು ಕಾದಂಬರಿಗಳ ಶಕ್ತಿ ದೌರ್ಬಲ್ಯಗಳು ಬೇರೆಯ ಪ್ರಶ್ನೆ. ಆದರೆ ಆ ಮೂರೂ ಕಾದಂಬರಿಗಳು ಸಾಕಷ್ಟು ವಿಮರ್ಶೆ,ಚರ್ಚೆಗಳನ್ನು ಹೊಸಗನ್ನಡ ಸಾಹಿತ್ಯದಲ್ಲಿ ಹುಟ್ಟುಹಾಕಿದ್ದನ್ನು ಮರೆಯುವಂತಿಲ್ಲ. ಸ್ವಾಮಿನಾಥನ ತಂದೆಗೆ ಪ್ರಾಣೇಶಾಚಾರ್ಯರನ್ನು ‘ನೋಡಕೊಂಡು ಬರಬೇಕು’ ಅನಿಸಿದಂತೆ ನನಗೇನೂ ಅನಿಸಲಿಲ್ಲ.ಆದರೆ ಆ ಅನಿಸಿಕೆಯ ಇನ್ನೊಂದು ರೂಪವಾದ ಪ್ರಾಣೇಶಾಚಾರ್ಯರ ಮುಂದಿನ ಜೀವನ ಕುರಿತ ಕುತೂಹಲ ನನ್ನಲಿ ಒಂದು ಕಥೆ ಬರೆದರೆ ಹೇಗೆ ಎಂದು ಪ್ರಚೋದಿಸಿದ್ದು ಮಾತ್ರ ಆಶ್ಚರ್ಯವಾಗಿದೆ. ಏಕೆಂದರೆ ನಿಮ್ಮ ಕಾದಂಬರಿ ಓದುವ ಮೊದಲೇ ಅದರಲ್ಲಿನ ಪಾತ್ರವೊಂದರ ಭಾವನೆ, wavelength ನನ್ನದೂ ಆಗಿತ್ತಲ್ಲ ಎಂದು. ನಾನು ಆ ಕಥೆ ಬರೆಯಲು ಪ್ರಾರಂಭಿಸಿದೆ. ಸುಮಾರು ಮೂವತ್ತು ಪುಟಗಳ ತನಕ ಸರಾಗವಾಗಿ ನಡೆದ ಕಥೆ ನಂತರ ಮುಂದುವರಿಯಲಿಲ್ಲ. ಅಲ್ಲಿಗೇ ನಿಲ್ಲಿಸಿದೆ. ಅದನ್ನು ಮರೆತೆ. ಬರೆದ ಆ ಹಾಳೆಗಳೂ ನನ್ನ ಬುಕ್ ಶೆಲ್ಫ್ ನಲ್ಲಿ ಎಲ್ಲೋ ಸೇರಿಹೋದವು.ಇದರ ಬಗ್ಗೆ ಗಿರೀಶ್ ವಾಘ್ ಅವರಿಗೆ ಹೇಳಿದ್ದೆ.
ಅಮೆರಿಕಾಕ್ಕೆ ಎಂ ಎಸ್ ಮಾಡಲು ಹೋಗಿ ನಂತರ ಅಲ್ಲೇ ಕೆಲಸಕ್ಕೂ ಸೇರಿದ್ದ ರಂಗನಾಥನ ಮಗ ವಿಕ್ರಂ(ಬ್ರಾಹ್ಮಣ ಜಾತಿ) ತನ್ನ ಅಂತರ್ಜಾತಿ ವಿವಾಹ settle ಮಾಡಿಕೊಂಡ ನಂತರ ಅಪ್ಪ ಅಮ್ಮನಿಗೆ ವಿಷಯ ತಿಳಿಸುವುದಕ್ಕೊಸ್ಕರ formalityಗೆಂದು ಇಮೇಲ್ ಕಳಿಸುತ್ತಾನೆ.ಅದರಲ್ಲಿ ಆತ ತನ್ನ ಅಪ್ಪ ಅಮ್ಮನ ಮೇಲೆ ಮಾಡುವ ಆರೋಪ,ತನ್ನ ಪಾಪ ನಿವೇದನೆ ಇವೆಲ್ಲಾ ಒಂದು ರೀತಿಯಲ್ಲಿ ಇಂದಿನ ವಿದ್ಯಾವಂತ ಯುವಕರ ಮನಸ್ಥಿತಿಯ ಪ್ರತಿಬಿಂಬ. ಅಂತರ್ಜಾತಿ ವಿವಾಹ ೨೦೦೫ ರಲ್ಲಾಗಲೀ ೨೦೧೫ರಲ್ಲಾಗಲೀ ಬ್ರಾಹ್ಮಣರಿಗೆ ವಿಶೇಷವಾದ್ದೇನಲ್ಲ. ಅಂತಹ ಎಷ್ಟೋ ಮದುವೆಗಳು ನನ್ನ ಸಂಬಂಧಿಕರಲ್ಲಿ,ಸ್ನೇಹಿತರ ವಲಯದಲ್ಲಿ ಆಗಿದೆ. ಮುಖ್ಯವಾದ ಮಾತೆಂದರೆ ವಿಕ್ರಂ ತನ್ನ ಸಂಗಾತಿ ಆಗಲಿರುವ ಸಂಗೀತಾಳ ಮನೆಯವರ ಬಗ್ಗೆ ಹೇಳುವ ‘ ….(ಅವರು) ಆಂಧ್ರದ ಕಡೆಯ ಗೋದಾವರಿ ಸೀಮೆಯ ದೊಡ್ಡ ಬಲಿಜ ಕುಟುಂಬದವರು…ತುಂಬಾ ಸಂಪ್ರದಾಯಸ್ಥರು. ದೇವರು,ದಿಂಡಿರು,ಜ್ಯೋತಿಷ್ಯ,ಹೋಮ ಹವನ, ಇದೆಲ್ಲಾ ತುಂಬಾ ಎನ್ನುವಷ್ಟು ಜಾಸ್ತಿ. ಅವರ ಮನೆತನದ ಪುರೋಹಿತರು,ಜ್ಯೋತಿಷಿಗಳು ಬೇರೆ ಯಾರಿಗೂ ಪೂಜೆ,ಪುನಸ್ಕಾರ ಮಾಡುವುದು ಜಾತಕ ನೋಡುವುದು ಕೂಡ ನಿಷಿದ್ಧ…ಸಂಗೀತಾಳ ಮನೆಯವರನ್ನು ನೋಡಿದ ಮೇಲೆ ನನಗೆ ಒಂದು ರೀತಿಯ ವಿಚಿತ್ರ ಒತ್ತಡ. ಬ್ರಾಹ್ಮಣನಾದ ನನಗೇ ಇದೆಲ್ಲ ತಿಳಿದಿಲ್ಲ’. ಹೀಗೆ ವಿಕ್ರಂ ನ ಇಮೇಲ್ ಮುಂದುವರಿಯುತ್ತದೆ.ತನ್ನ ಬ್ರಾಹ್ಮಣತ್ವದ ಆಚಾರ ವಿಚಾರಗಳ ಅಜ್ಞಾನಕ್ಕೆ ತಾನು ಚಿಕ್ಕವನಿದ್ದಾಗ ತನ್ನ ಮನೆಯಲ್ಲಿದ್ದ ವಾತಾವರಣ ಸಹ ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು ಎಂಬ ಸಂದೇಹ. ನಂತರ ಇವೆಲ್ಲಾ ಅರಿಯಲು ಅವನು ನಡೆಸುವ ಅಧ್ಯಯನ ಇತ್ಯಾದಿಗಳೆಲ್ಲಾ ಇದೆ. ಇಷ್ಟೆಲ್ಲಾ ಹೇಳಿ ತಂದೆ ತಾಯಿಯ ಅನುಕಂಪ ಪಡೆಯುವ ಪ್ರಯತ್ನ ಮಾಡಿ ಮತ್ತು ಇನ್ನೊಂದು ರೀತಿಯಿಂದ ನೋಡಿದರೆ emotional blackmail ತಂತ್ರ ಮಾಡಿದ ಮೇಲೆ ಕೊನೆಯ ಷರಾ ಎಂಬಂತೆ ‘Therefore our marriage is just an encounter,affair and relationship between two mere individuals’ ಎಂದು ತನ್ನ ಪ್ರವಚನ ಮುಗಿಸುತ್ತಾನೆ. ಈ ತೀರ್ಮಾನಕ್ಕೆ ಬರುವುದಕ್ಕೊಸ್ಕರ ಅಷ್ಟೊಂದು ಆತ್ಮ ಗ್ಲಾನಿ ಏಕೆ ಬೇಕಿತ್ತು? ಎಂದು ಅನಿಸುತ್ತದೆ.
ಇದು ಕೇವಲ ವಿಕ್ರಂ ಒಬ್ಬನದೇ ಸಮಸ್ಯೆ ಅಲ್ಲ. ಇಂದಿನ ವಿದ್ಯಾವಂತ,ಕೈ ತುಂಬಾ ಹಣ ಸಂಪಾದಿಸುವ ಯುವಕ ಯುವತಿಯರ ಸಾಮಾನ್ಯ ಸಮಸ್ಯೆ. ರೂಢಿಗತ ಆಚಾರ ವಿಚಾರಗಳಲ್ಲಿ ಏನೋ ಇರಬಹುದು. ಅದನ್ನು ಆಚರಿಸದೆ ಹೋದರೆ ಏನಾದೀತೋ ಎಂಬ ಆತಂಕ. ವಿಕ್ರಂ ತರಹದವರ ಮನಸ್ಥಿತಿಯ ಸಮಸ್ಯೆಯೆಂದರೆ ಹಿಂದಿನ ಜೀವನಕ್ಕೆ ಪೂರ್ತಿ ಹೊಂದಿಕೊಳ್ಳಲಾರರು.ಹಣದಿಂದ ಸಿಗುವ ಹೊಸ ಕಾಲದ ಎಲ್ಲ ಸುಖ ಸಂತೋಷಬೇಕು.ಅದರ ಜತೆಗೆ ಆಗಾಗ ‘ಹಿಂದಿನ ಸಂಪ್ರದಾಯ,ಆಚರಣೆಗಳು’ ಮತ್ತು ‘ಹುಸಿ ಭಕ್ತಿ,ಧ್ಯಾನ ಅಧ್ಯಾತ್ಮ’ವೂ ಬೇಕು.ಅದನ್ನು ವಿಕ್ರಂನಂತಹ ಹಣವಂತರಿಗೆ package courseಗಳ ಮೂಲಕ ಮಾರುವ ಹೈಫೈ ಗುರುಗಳು ಇಂದು ಸಾಕಷ್ಟು ಜನ ಇದ್ದಾರೆ.’ಆಕಾಶಕ್ಕೆ ದಾರಿ ಕಾಡಿನ ಮೂಲಕವೇ’ ಎಂಬ ಸತ್ಯಕಾಮರ ಹಾದಿಯನ್ನು ಅನುಸರಿಸುವವರು ಕೈ ಬೆರಳೆಣಿಕೆಯಷ್ಟು ಮಂದಿ ಮಾತ್ರ.ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಈ ಪದ್ಯ (ಹಿಂದೆ ಓದಿದ್ದು,ಒಂದೆರೆಡು ಪದಗಳು,ವಾಕ್ಯಗಳು ಮರೆತಿರಬಹುದು) ವಿಕ್ರಂ ತರಹದವರಿಗೆ ಸರಿಯಾಗಿ ಹೊಂದುತ್ತದೆ.
ನಂಬಿದನು ಪ್ರಹ್ಲಾದ
ನಂಬದಿರ್ದನು ತಂದೆ
ನಂಬಿಯೂ ನಂಬದಿಹ ಇಬ್ಬಂದಿ
ಸಿಂಬಳದಿ ನೊಣ ನೀನು ಮಂಕುತಿಮ್ಮ||
ನಿಮ್ಮವ
ಶ್ರೀರಂಗ
——————————————————————————————————————————————————————————
ಮುಂದಿನ ಭಾಗದಲ್ಲಿ : ಸಾಹಿತ್ಯದ ಹೊಸ ತಲೆಮಾರು ಮತ್ತು ವಿಮರ್ಶೆಯ ತಕರಾರು
ನಂಬದಿದ್ದನು ತಂದೆ, ನಂಬಿದನು ಪ್ರಹ್ಲಾದ
ನಂಬಿಯೂ ನಂಬದಿರುವಿಬ್ಬಂದಿ ನೀನು
ಕಂಬದಿನೊ ಬಿಂಬದಿನೊ ಮೋಕ್ಷ ಅವರಿಂಗಾಯ್ತು
ಸೀಮ್ಬಲದ ನೊಣ ನೀನು ಮಂಕುತಿಮ್ಮ ||