ಸುದ್ದಿ ‘ಮೋಹ’ದ ಪತ್ರಿಕೆಗಳ ಬಗ್ಗೆ…..
ಅರೆಹೊಳೆ ಸದಾಶಿವರಾಯರು
ಕಟೀಲು ದೇವಳಕ್ಕೆ ಶಿಲ್ಪಾ ಶೆಟ್ಟಿ ಬಂದರು!. ಇದು ನಮ್ಮ ಪತ್ರಿಕೆಗಳ ಮಟ್ಟಿಗೆ ಬಹು ಮುಖ್ಯ ಸುದ್ದಿಯಾಯಿತು! ಆಶ್ಚರ್ಯವೆಂದರೆ, ನಮ್ಮ ಪತ್ರಿಕೆಗಳು ಇದನ್ನು ಮುಖ ಪುಟದಲ್ಲಿ ಪ್ರಕಟಿಸಿ ಕೃತಾರ್ಥವಾದುವು. ಆಕೆ ತನ್ನದೇ ಹುಟ್ಟೂರಿಗೆ ಬಂದದ್ದು, ತನ್ನ ಅಜ್ಜಿಮನೆಯಲ್ಲಿ ಓಡಾಡಿದ್ದು, ಕೋಳಿ ಸುಕ್ಕಾ ತಿಂದದ್ದು…..ಎಲ್ಲವು ಸುದ್ದಿಯಾಯಿತು. ಮತ್ತೂ ಒಂದು ವಿಶೇಷ ಸುದ್ದಿ ಎಂದರೆ ಕಟೀಲು ಕ್ಷೇತ್ರವೇ ಈಕೆಯ ಭೇಟಿಯಿಂದ ಪವಿತ್ರವಾಯಿತೇನೋ ಎಂಬಷ್ಟೂ ಸುದ್ದಿಯನ್ನು ಆಕೆ ವಿಮಾನದಲ್ಲಿ ಬಂದಿಳಿದಿದ್ದರಿಂದ, ಮರಳಿ ವಿಮಾನವೇರುವ ತನಕ ಬರೆಯಲಾಯಿತು. ಎಲ್ಲಾ ಪತ್ರಿಕೆಗಳ ಒಬ್ಬೊಬ್ಬ ಪತ್ರಕರ್ತನೂ ಅಷ್ಟು ಹೊತ್ತಿನ ಮಟ್ಟಿಗೆ ಆಕೆಯ ಸಂಸಾರದ ಹಿಂದಿದ್ದ.!
ಈ ಕ್ಷಣದಲ್ಲಿ ನನಗೊಂದು ವಿಷಯ ನೆನಪಿಗೆ ಬರುತ್ತದೆ. ಇತ್ತೀಚೆಗೆ ನಾವು ಒಂದು ಸಮ್ಮೇಳನವನ್ನು ಆಯೋಜಿಸಿದ್ದೆವು. ಅದರ ಉದ್ಘಾಟನಾ ಸಮಾರಂಭದ ವರದಿ ಸವಿಸ್ತಾರವಾಗಿ ಪ್ರಕಟವಾಯಿತು. ಉದ್ಘಾಟನೆ ಮುಗಿಯುತ್ತಲೇ, ಒಂದು ಮಗು ವಾಮಾಚಾರಕ್ಕೆ ಬಲಿಯಾದ ಘಟನೆ ಬಹಿರಂಗ ಗೊಂಡಿತು. ಅದೇ ಸಂಜೆ ನಮ್ಮ ಸಮ್ಮೇಳನದ ಸಮಾರೋಪವೂ ನಡೆಯುತ್ತಿತ್ತು. ಆದರೆ ಸಂಜೆ ಒಬ್ಬನೇ ಒಬ್ಬ ಪತ್ರಕರ್ತನೂ ಅಲ್ಲಿರಲಿಲ್ಲ. ಅಲ್ಲಿನ ಯಾವ ವರದಿಯೂ ದಾಖಲಾಗಲಿಲ್ಲ. ಸಮ್ಮೇಳನದಲ್ಲಿಯೇ ತಲ್ಲೀನರಾಗಿದ್ದ ನಮಗೆ ಇದೇಕೆ ಎಂದು ಆಶ್ಚರ್ಯವಾಯಿತು. ನಂತರ, ನಮಗೆ ಆ ವಾಮಾಚಾರದ ಘಟನೆಯಿಂದ ಸಂಭ್ರಮದ ಘಟನೆಯನ್ನೂ ಮರೆಯುವಷ್ಟು ಘಾಸಿಯಾಯಿತು-ಖೇದವಾಯಿತು.
ಅದಾದ ಕೆಲವು ದಿನಗಳ ನಂತರ ಒಬ್ಬ ಪತ್ರಕರ್ತ ಸಿಕ್ಕಿದರು. ಅವರಲ್ಲಿ ಅದೂ ಇದೂ ಮಾತಾಡುತ್ತಾ, ನಮ್ಮ ಸಮಾರೋಪದ ವೇಳೆಗೆ ವಿಶೇಷ ಅತಿಥಿಯೋರ್ವರು ಹೇಳಿದ ಮಾತುಗಳು ಜನರಿಗೆ ತಲುಪಲೇ ಇಲ್ಲ;ಯಾವ ಪತ್ರಿಕೆಯಲ್ಲೂ ಅದು ಪ್ರಕಟಗೊಳ್ಳಲೇ ಇಲ್ಲ ಎಂದೆ. ಅದಕ್ಕವರು, ವಾಮಾಚಾರದ ಪ್ರಕರಣವನ್ನು ಉಲ್ಲೇಖಿಸುತ್ತಾ ಅಷ್ಟೊಂದು ಉತ್ತಮ ಸುದ್ದಿ ಅಲ್ಲಿರುವಾಗ, ನಮಗೆ ಇದರ ಹಿಂದೆ ಬರಲಾಗುತ್ತಿರಲಿಲ್ಲವಾಗಿತ್ತು ಮತ್ತು ಎಲ್ಲರೂ ಅಲ್ಲಿಯೇ ಹೋಗಿದ್ದರು ಅಂದರು!. ನೀವೂ ಗಮನಿಸಿರಬಹುದು, ವಾಮಾಚಾರ ಪ್ರಕರಣದ ವಿವಿಧ ಮಗ್ಗುಲುಗಳು, ಕಥೆಯಂತೆ ಪತ್ರಿಕೆಗಳಲ್ಲಿ ಮೂಡಿಬಂದುವು. (ಮಗುವಿನ ಶವದ ಫೋಟೋ ಅಂತೂ ಮನ ಕಲುಕುತ್ತಿತ್ತು) ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಆ ದುರ್ಘಟನೆಯನ್ನು ಮಾಧ್ಯಮದ ಯಾವುದೋ ‘ಒಂದು ವರ್ಗ’, ‘ಅಷ್ಟು’ಒಳ್ಳೆಯ ಸುದ್ದಿ ಎಂಬಂತೆ ವರ್ಗೀಕರಿಸಿ, ಘಟನೆಯೊಳಗಿನ ಅಮಾನವೀಯತೆಯನ್ನು ಸಂಪೂರ್ಣ ಮರೆತಿದ್ದು!
ನೀವೂ ಗಮನಿಸಿ. ಇಂದು ದಿನಕ್ಕೊಂದರಂತೆ ಅಪಾರ್ಟ್‌ಮೆಂಟುಗಳು ಉದ್ಘಾಟನೆಗೊಳ್ಳುವುದೋ, ಶಿಲಾನ್ಯಾಸಗೊಳ್ಳುವುದೋ ನಡೆಯುತ್ತದೆ. ಅದೆಲ್ಲಾ ಪತ್ರಿಕೆಗಳಲ್ಲಿ ಬಣ್ಣದ ಪುಟಗಳಲ್ಲಿ ಪ್ರಕಟಗೊಳ್ಳುತ್ತವೆ! ಅದೆಲ್ಲಾ…!? ಇಲ್ಲ, ಯಾವ ವಿಷಯಗಳಿಗೆ ಪತ್ರಿಕಗಳಲ್ಲಿ ಜಾಹೀರಾತು ನೀಡಿರುತ್ತೇವೆಯೋ ಅದೆಲ್ಲಾ!. ಅಂದರೆ ಇಂದು ಸುದ್ದಿಗಳೂ, ಪತ್ರಿಕೋದ್ಯಮವೂ ಅದೆಷ್ಟು ವಾಣಿಜ್ಯೀಕರಣ ಗೊಂಡಿವೆ ಎಂಬುದಕ್ಕೆ ಇದು ಸಾಕ್ಷಿ. ಅದೇ ನೈಜವಾಗಿ ನಡೆಯುವ ಅದೆಷ್ಟೋ ಸುದ್ದಿಗಳು, ಸಾಮಾಜಿಕ ಕಾಳಜಿಯ ಮಾತುಗಳು ಇಲ್ಲಿ ಜಾಗ ಕಂಡುಕೊಳ್ಳುವುದು ಕಡಿಮೆ.
ಮತ್ತೂ ಒಂದು ನಿದರ್ಶವನ್ನು ಇಲ್ಲಿ ನೀಡಬೇಕೆನಿಸುತ್ತದೆ. ಇದು ಕೆಲವು ಪತ್ರಿಕೆಗಳು ತಮ್ಮ ಗಿಮಿಕ್‌ಗಳನ್ನು ಹೆಚ್ಚಿಸಿಕೊಳ್ಳಲು ಮಾಡುವ ಕರಾಮತ್ತು!.ಇತ್ತೀಚೆಗೆ ಕೆಲವೆಡೆಯಲ್ಲಿ ರಸ್ತೆಗಳಿಗೆ ವೇಗ ತಡೆ ನಿರ್ಮಿಸಲಾಗುತ್ತಿತ್ತು. ಅದಿನ್ನೂ ಪ್ರಗತಿಯ ಹಂತದಲ್ಲಿತ್ತು. ಅಂದರೆ ರಸ್ತೆಯ ಮಧ್ಯೆ, ನಿಗದಿತ ಸ್ಥಳಗಳಲ್ಲಿ ವೇಗ ತಡೆ ನಿರ್ಮಾಣ ನಡೆಯುತ್ತಿದ್ದರೂ, ಅಲ್ಲಿ ಬಣ್ಣ ಬಳಿಯುವ ಕೆಲಸ ಇನ್ನೂ ಆಗಬೇಕಿತ್ತು. ಆಗ ಒಂದು ಪತ್ರಿಕೆ, ಈ ವೇಗ ತಡೆಗಳ ಬಗ್ಗೆ ಬರೆಯುತ್ತಾ, ಇನ್ನೂ ಬಣ್ಣಬಳಿಯದೇ ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಬರೆಯಿತು. ಮತ್ತೆರಡು ಮೂರು ದಿನಗಳಲ್ಲಿ, ನಿಗದಿಯಂತೆ ವೇಗ ತಡೆ ಸೂಚಕವಾಗಿ ಬಣ್ಣ ಬಳಿಯಲಾಯಿತು. ಮರುದಿನ ಅದೇ ಪತ್ರಿಕ ಇದನ್ನು ತನ್ನ ವರದಿಯ ಫಲಶ್ರುತಿ ಎಂಬಂತೆ ಬರೆದುಕೊಂಡಿತು!
ಮತ್ತೆ ಇತ್ತೀಚಿನ ಕ್ರಿಕೆಟ್ ಜ್ವರದ ಬಗ್ಗೆ. ಎಲ್ಲಾ ಪತ್ರಿಕೆಗಳು ಇದನ್ನು ಮುಖಪುಟದಲ್ಲಿಯೇ ಪ್ರಕಟಿಸುತ್ತಿವೆ. ಇರಬಹುದು-ಜನರ ನಾಡಿಮಿಡಿತದಲ್ಲಿ ಇಂದು ಕ್ರಿಕೆಟ್ ವಿಶೇಷ ಸ್ಥಾನ ಪಡೆದಿರಬಹುದು. ಬೇರೆಲ್ಲಾ ಕ್ರೀಡೆಗಳಿಗಿಂತ ಕ್ರಿಕೆಟ್‌ಹೆಚ್ಚು ಜನರನ್ನು ಆಕರ್ಷಿಸಿರಬಹುದು. ಆದರೂ ಅದನ್ನು ಕ್ರೀಡೆಗಳಿಗೆಂದೇ ಮೀಸಲಿರುವ ಪುಟಗಳಲ್ಲಿ ಪ್ರಕಟಿಸುವ ಅನಿವಾರ್ಯತೆ ಯಾವ ಪತ್ರಿಕೆಯೂ ಹಾಕಿಕೊಳ್ಳಲಿಲ್ಲ. ಮೊನ್ನೆ ಕಾರ್ಕಳದಲ್ಲಿ ಒಂದು ಮಗುವನ್ನು ನಾಯಿಯೊಂದು ಕಚ್ಚಿಕೊಂಡು ಓಡಾಡುತ್ತಿತ್ತು. ಅದು ಪತ್ರಿಕೆಯ ಪುಟವೊಂದರ ಯಾವುದೋ ಮೂಲೆಯಲ್ಲಿ ಸಾಧಾರಣ ಸುದ್ದಿ ಯೆಂಬಂತೆ ಪ್ರಕಟವಾಯ್ತು!. ಅದರ ಹಿನ್ನೆಲೆಯನ್ನು ಕೆದಕುವ ಯಾವ ಪ್ರಯತ್ನಕ್ಕೂ ಪತ್ರಿಕೆ ಹೋಗಲಿಲ್ಲ. ಇಂತಹಾ ಅಮಾನವೀಯ ಘಟನೆ ನಡೆದ ದಿನವೇ ಶಿಲ್ಪಾ ಶೆಟ್ಟಿ ಕಟೀಲಿಗೆ ಬಂದದ್ದು ಮತ್ತು ಆಕೆಯ ಸಕುಟುಂಬ ಫೋಟೋ ಮತ್ತು ವರದಿಯನ್ನು ಮುಖಪುಟದಲ್ಲಿ ಪ್ರಕಟಿಸಿ ಪತ್ರಿಕೆಗಳು ಕೃತಾರ್ಥವಾಗಿದ್ದು!
ಬಹುಶ: ಪ್ರಜಾಪ್ರಭುತ್ವ ಭಾರತದಲ್ಲಿ ಪತ್ರಿಕೆಗಳಿಗಿರುವ ಸಾಮಾಜಿಕ ಜವಾಬ್ದಾರಿ ಬಹು ದೊಡ್ಡದು. ಇಲ್ಲಿ, ಲೋಕೋ ಭಿನ್ನರುಚಿ ಎಂಬ ಹಿನ್ನೆಲೆಯಲ್ಲಿ ಎಲ್ಲರನ್ನೂ ಓಲೈಸಲು ಸಾಧ್ಯವೇ ಇಲ್ಲ. ಆದರೆ ತಮ್ಮ ಜವಾಬ್ದಾರಿಯನ್ನರಿತು, ಕೆಲವೊಮ್ಮೆಯಾದರೂ ಕೆಲವು ಬಾಲಿಶ ವರ್ತನೆಯಿಂದ ಪತ್ರಿಕೆಗಳು ಹೊರಗಿರಬೇಕು. ತನ್ನ ಸುತ್ತ ಮುತ್ತಲೂ ಅನೇಕಾನೇಕ ಅನುಚಿತ ಘಟನೆಗಳು, ಅನ್ಯಾಯಗಳು ನಡೆಯುತ್ತಿರುತ್ತವೆ. ನಾನು ಮೇಲೆ ಹೇಳಿದ ಘಟನೆಗಳಲ್ಲಿ, ವಾಮಾಚಾರದಿಂದ ಬಲಿಯಾದ ಮುಗ್ಧ ಮಗುವಿನ ಸಂದರ್ಭದಲ್ಲಿ ಸಮ್ಮಳನದ ಸುದ್ದಿ ಅಮುಖ್ಯವಾಗುತ್ತದೆ ಮತ್ತು ಅದು ಅನಿವಾರ್ಯ. ಆದರೆ, ಮಗುವಿನ ಬಲಿ, ಮಾಧ್ಯಮದ ಪಾಲಿಗೆ ಅಷ್ಟು ಒಳ್ಳೆಯ ಸುದ್ದಿಯಾಗಬಾರದು-ಅದೊಂದು ದುರವಸ್ಥೆಯ ವಿರುದ್ದದ ದನಿಗೆ ಕಾರಣವಾಗಬೇಕು. ಇನ್ನು ಶಿಲ್ಪಾ ಶೆಟ್ಟಿ ಸೆಲೆಬ್ರಿಟಿಯೇ ಇರಬಹುದು. ಆಕೆ ಕಟೀಲಿಗೆ ಬಂದು ಹೊರಡುವ ಮುನ್ನ ಎಂಡೋಸಲ್ಫಾನ್ ದುರಂತ ಪ್ರದೇಶಕ್ಕೆ ಭೇಟಿ ನೀಡಿಯೋ ಅಥವಾ ಯಾವುದಾದರೂಸಮಾಜದ ಅವ್ಯವಸ್ಥೆಯ ವಿರೋಧಕ್ಕಾಗಿ ಸಾಂಕೇತಿಕವಾಗಿಯಾದರೂ ದನಿ ಗೂಡಿಸಿದ್ದರೆ, ಅದು ಮಾನವೀಯ ಕಾಳಜಿಯ ಸುದ್ದಿಯಾಗಬಹುದಿತ್ತು. ಅದು ಬಿಟ್ಟು, ಆಕೆ ದೇಗುಲಕ್ಕೆ ಬಂದುದು, ಅಲ್ಲಿ ದೇವಿಯೇ ಆಕೆ ಎಂಬಂತೆ ಬಿಂಬಿಸಿದ್ದು, ಆಕೆ ಚಿಕನ್ ಸುಕ್ಕಾ ತಿಂದದ್ದು, (ಕಟೀಲಿನಂತ ದೇಗುಲದಿಂದ ಹೊರಬರುತ್ತಲೇ ಆಕೆಗೆ ನೆಪಾದದ್ದು ಸುಕ್ಕ)… ಇದನ್ನೆಲ್ಲಾ ಪತ್ರಿಕೆಗಳು ನಮ್ಮ ಸೌಭಾಗ್ಯವೆಂಬಂತೆ ಪ್ರಕಟಿಸುವ ಅನಿವಾರ್ಯತೆ ಏನಿತ್ತೋ!!. ಬೇರೆಲ್ಲಾ ವಿಐಪಿಗಳು ಬಂದು ಹೋದ ನಂತರ, ಒಂದು ಫೋಟೋದೊಂದಿಗೆ ಮುಗಿಸಿಬಿಡಬಹುದಾದ ತೀರಾ ಬಾಲಿಶ ಸುದ್ದಿ ಇದು ಎಂಬುದು ನನ್ನ ಖಚಿತ ಅಭಿಪ್ರಾಯ.
ಇನ್ನು ನಮಗೂ ಅರ್ಥವಾಗುತ್ತದೆ. ಕೆಲವರ ಪಬ್ಲಿಸಿಟಿ ಮೋಹ, ಪತ್ರಿಕೆಗಳಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಹೀಗೇ ಒಂದು ಪತ್ರಿಕಾಗೋಷ್ಠಿಯಲ್ಲಿ ನಾನೂ ಕುಳಿತಿದ್ದೆ. ಅಲ್ಲಿ ಒಂದು ಸಾಧಾರಣ ವಿಷಯದ ಬಗ್ಗೆ ಗೋಷ್ಠಿ ನಡೆಯಿತು. ಅದು ಹೆಚ್ಚೆಂದರೆ, ಯಾವುದಾದರೂ ಒಳಪುಟದಲ್ಲಿ ಒಂದು ಮೂಲೆಯಲ್ಲಿ ಪ್ರಕಟಿಸಬಹುದಾದ ಸುದ್ದಿ. ಸುದ್ದಿಗೋಷ್ಠಿ ಮುಗಿಯುತ್ತಲೇ ಮಾತಾಡಿದವರು ಎದ್ದು ನಿಂತು ಎಲ್ಲರಿಗೂ ಕೈ ಮುಗಿದು, ದಯವಿಟ್ಟು ನೀವು ಈ ಸುದ್ದಿಯನ್ನು ನಿಮ್ಮ ಪತ್ರಿಕೆಯ ಮುಖಪುಟದಲ್ಲಿಯೇ ಪ್ರಕಟಿಸಬೇಕೆಂಬ ವಿನಂತಿ ಮಾಡಿದರು. ಆ ವಿನಂತಿಯಲ್ಲಿ ಒಂದು ರೀತಿಯ ಆಜ್ಞೆಯೂ ಇತ್ತೆಂಬುದು ಬೇರೆ ಮಾತು!. ಇಂತಲ್ಲಿ ಪತ್ರಿಕೆಯವರು ಏನೂ ಮಾಡಲಾಗದು. ಹಾಗೆ ಅವರು ಪತ್ರಿಕೆಯವರನ್ನು ಬೈದರೆ ಪತ್ರಕರ್ತರ ಬಗ್ಗೆ ಅನುಕಂಪ ಮೂಡಲೇ ಬೇಕಾಗುತ್ತದೆ. ಯಾಕೆಂದರೆ, ಪತ್ರಿಕೆಗಳಿಗೂ ಕೆಲವು ಚೌಕಟ್ಟಿರುತ್ತವೆ. ಅದನ್ನು ಮೀರಿ ಹೊರ ಬರಲಾಗದು!. ಆ ಮಟ್ಟಿಗೆ ನಮ್ಮ ಸಹಾನುಭೂತಿ ಇರುತ್ತದಾದರೂ, ಕೆಲವು ಮೇಲೆ ಹೇಳಿದಂತ ಸಂದರ್ಭದಲ್ಲಿ ಅವರೇ ಆ ಚೌಕಟ್ಟನ್ನು ಮೀರಿದಾಗ ಹೀಗೆ ಬರೆಯಲೇ ಬೇಕಾಗುತ್ತದೆ.
ಏನೇ ಇರಲಿ. ಇಂದು ಪತ್ರಿಕೋದ್ಯಮ ಹಿಂದೆಂದಿಗಿಂತಲೂ ಸ್ಪರ್ಧಾತ್ಮಕವಾಗಿದೆ. ಆ ಹಿನ್ನೆಲೆಯಲ್ಲಿ ನಾವು ಗುಣಾತ್ಮಕತೆಯಲ್ಲಿ ಪೈಪೋಟಿಯನ್ನು ಕಾಣುತ್ತಿದ್ದೇವೆ. ಓದುವ ಸರಕನ್ನು ತರುವಲ್ಲಿ ಪತ್ರಿಕೆಗಳು ಪೈಪೋಟಿ ನಡೆಸುತ್ತಿವೆ. ಆ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆ. ಏಕೆಂದರೆ ಇಂದು ಪತ್ರಿಕೋದ್ಯಮ ಕೇವಲ ಬೈಯಲ್ಪಡುವ ಮಾಧ್ಯಮವಾಗಿ ಉಳಿದಿಲ್ಲ. ಎಷ್ಟೋ ಪತ್ರಿಕೆಗಳು ಸಮಾಜದ ಮುಖವಾಣಿಯಾಗಿ ಬೆಳೆದು ಬಂದು ಸಮಾಜ ಮುಖಿಯಾಗಿವೆ ಎಂಬ ಸಮಾಧಾನದ ಮಧ್ಯೆಯೂ, ಒಮ್ಮೊಮ್ಮೆ ಮುಜುಗುರ ಸೃಷ್ಟಿಗೆ ಕಾರಣವಾಗುವುದು ಖೇದನೀಯ.! ಇದು ಎಲ್ಲಾ ಭಾಷೆಯ ಪತ್ರಿಕೆಗಳಿಗೂ ಅನ್ವಯ.
ಕೊನೆ ಮಾತು:-ಪತ್ರಿಕಾ ಧರ್ಮ ‘ಧರ್ಮ’ಕ್ಕೆ ಹಾಳಾಗದಿರಲಿ!!
*******
(ಚಿತ್ರಕೃಪೆ: google image)





good one… Somewhere The Hindu is still maintaining its standard, but it is not ahead in readership.. thats the problem. I cant even turn all the pages of TOI in front of my kid, but that has more readership!!!
TOI is called ‘Toi’let paper
ಬಿಂದು ಅವರೇ,
ಕನ್ನಡದ ಬ್ಲಾಗಿಗೆ ಕನ್ನಡದಲ್ಲೇ ಪ್ರತಿಕ್ರಿಯಿಸಿದರೆ ಚಂದ 🙂
ರಾಕೇಶ್ ಶೆಟ್ಟಿ ಅವರೇ, ನನಗೂ ಕನ್ನಡದಲ್ಲೇ ಪ್ರತಿಕ್ರಿಯಿಸಲು ಇಷ್ಟ ಆದರೆ ಏನು ಮಾಡಲಿ ಎಲ್ಲಾ ಯಂತ್ರಗಳಲ್ಲೂ ಬರಹ ಇರುವುದಿಲ್ಲ, ಹಾಗಾಗಿ ಆಂಗ್ಲಭಾಷೆಯಲ್ಲಿ ಉತ್ತರಿಸ ಬೇಕಾಗುತ್ತದೆ!
ಅರೆಹೊಳೆ ಸದಾಶಿವ ರಾಯರು ಸರಿಯಾಗಿಯೇ ಹೇಳಿದ್ದಾರೆ. ವಾರ್ತಾ ಪತ್ರಿಕೆಗಳು ಕಾಸಿನ ಬೆನ್ನು ಹತ್ತಿ ಹೋಗುವುದಂತೂ ನಿಜ. ಈಗಿನ ಜನರಿಗೂ ರಂಜನೀಯ ಸುದ್ದಿಗಳು ಬೇಕು. ಸಿನೆಮಾ, ಕ್ರಿಕೆಟ್ಟು, ರಾಜಕೀಯಗಳ ಎದುರು ಬಾಕಿ ಎಲ್ಲವೂ ನಗಣ್ಯ ಎಂಬಂತಾಗಿದೆ.