ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 4, 2012

4

ಮರಳಿ ಬಂದವಳು….!!!!

‍ನಿಲುಮೆ ಮೂಲಕ

-ಸಂತೋಷ್ ಎನ್ ಆಚಾರ್ಯ

ನಾನು ನೋಡುತ್ತಿರುವುದು ನಿಜವಾಗಿಯೂ ಅವಳನ್ನಾ! ಕಣ್ಣುಗಳನ್ನು ಮತ್ತೆ ಮತ್ತೆ ಉಜ್ಜಿ ನೋಡಿದೆ. ನಿಜಕ್ಕೂ ಅವಳೇ, ಸಂದೇಹವೇ ಇಲ್ಲ. ಸ್ವಲ್ಪ ದಪ್ಪವಾಗಿದ್ದಾಳೆ. ಮುಖದ ಕಾಂತಿ ಈಗಲೂ ಹಾಗೆಯೇ ಇದೆ.

‘ಏನೋ ಹಾಗೆ ನೋಡ್ತಾ ಇದ್ದೀಯಾ?’ ಎಂದಳು.

‘ನೀನು… ಇಲ್ಲಿ…?’ ಮಾತುಗಳ ಪ್ರಶ್ನೆಗಳಿಗಿಂತ ಮುಖದ ಪ್ರಶ್ನೆಗಳೇ ಎದ್ದು ತೋರುತ್ತಿದ್ದವು.

‘ಯಾಕೆ ಬರಬಾರದಾ?’ ಎಂದಳು . ನನಗೆ ಏನು ಉತ್ತರಿಸಬೇಕೆಂದೇ ಗೊತ್ತಾಗಲಿಲ್ಲ.

‘ಏನಾಯ್ತೋ ನಿಂಗೆ, ಓಕೆ, ಕಣ್ತುಂಬಾ ನೋಡೋ ಆಸೆ ನಾ! ನೋಡು ನೋಡು! ಮುಗಿದ ನಂತರ ಹೇಳು ‘ ಎಂದು ಪುನಃ ನಕ್ಕಳು. ಎಷ್ಟೆಂದರೂ ನಗಲೆಂದೇ ಹುಟ್ಟಿದವಳಲ್ಲವೇ? ಆದರೆ ಇವಳೇಕೆ ಇಲ್ಲಿಗೆ ಬಂದಳು? ಮುಗಿದೇ ಹೋದಂತಿದ್ದ ಕಥೆಯನ್ನು ಪುನಃ ಬರೆಯಲು.

‘ಇಲ್ಲ ಹಾಗೇನಿಲ್ಲ ಅವತ್ತು ಹೇಳಿದೆಯಲ್ಲ, ಬರುವುದಾದರೆ ಮತ್ತೆ ಬರುತ್ತೇನೆ ನಿನ್ನ ಬದುಕಿಗೆ ಗೆಳತಿಯಾಗಿ. ಸತ್ಯವಾಗುತ್ತದೆ ಎಂದೆನಿಸಲಿಲ್ಲ’ ಎಂದೆ. ಅವಳ ಸುಂದರ ಮೊಗವನ್ನು ನೋಡುತ್ತಿರುವಾಗ ಎಂದಿನಂತೆ ಹೊಡೆದಿತ್ತು ಮಿಂಚು !

ಅವಳು ಮುಗುಳ್ನಕ್ಕು ,’ಅವತ್ತು ತುಂಬಾ ನೊಂದಿದ್ದೆ ನೋಡು! ಯಾರೂ ಬೇಕೆನಿಸಲಿಲ್ಲ. ಮತ್ತೆ ಯಾಕೋ ಗೊತ್ತಿಲ್ಲ, ನೀನು ಬೇಕು ಅನಿಸತೊಡಗಿತು. ನಿನ್ನ ಜೊತೆ ಕಳೆದ ಕ್ಷಣಗಳು ಎಲ್ಲಾ ನೆನಪಾಗತೊಡಗಿದವು’ ನಾನು ಸುಮ್ಮನಿದ್ದೆ, ‘ನಿನ್ನ ಜೊತೆ ಯಾವುದೇ ಹಂಗು ಇರಲಿಲ್ಲ ನೋಡು. ಯಾವತ್ತೂ ಹೀಗೆ ಮಾಡು ಹಾಗೆ ಮಾಡು ಎಂದು ಆರ್ಡರ್ ಮಾಡಿದವನೇ ಅಲ್ಲ! ನಿನ್ನೊಂದಿಗೆ ಇರೋವಾಗ ನಾನು ನಾನಾಗಿದ್ದೆ’

‘ಆದ್ರೆ ನಾನಂದ್ಕೊಂಡಿದ್ದೆ ಹುಡುಗಿಯರಿಗೆ ಆರ್ಡರ್ ಮಾಡುವವರು ಇಷ್ಟ, ಅವರ ಹಿಂದೂ ಮುಂದೂ ತಿರುಗೋರು ಇಷ್ಟ ಅಂತ’

‘ಆರ್ಡರ್ ಮಾಡುವವರು ಇಷ್ಟ ಆಗಲ್ಲ ಗೂಬೆ, ಹಿಂದೆ ತಿರುಗುವವರು ಇಷ್ಟ ಆಗ್ತಾರೆ. ಅದಕ್ಕೂ ಅವರು ಯಾವ ರೀತಿ ಅಪ್ರೋಚ್ ಮಾಡ್ತಾರೆ ಅದರ ಮೇಲೆ ನಾವು ಬೀಳ್ತೀವಿ’

‘ನನ್ನ ಅಪ್ರೋಚ್ ಸರಿ ಇರ್ಲಿಲ್ವಾ?’

‘ಸುಮ್ನಿರೋ… ಹಳೆ ಕಥೆಯೆಲ್ಲಾ ನೆನಪಿಸಬೇಡ. ಈಗ ಎಲ್ಲಾ ಮರೀಬೇಕು’

‘ಮರಿ ಬೇಕಾ?’ ಎಂದೆ. ನಕ್ಕಳು. ಅವಳನ್ನು ನಗಿಸುವುದು ಅಷ್ಟೇನೂ ಕಷ್ಟದ ಕೆಲಸವಾಗಿರಲಿಲ್ಲ ನನಗೆ, ಏಕೆಂದರೆ ನಗಲು ಅವಳಿಗೆ ಕಾರಣ ಬೇಕಿರಲಿಲ್ಲ.

‘ಯಾಕೆ ಗೊತ್ತಾ ನಾ ಬಂದಿದ್ದು. ನೀನು ನನ್ನ ಚೆನ್ನಾಗಿ ನೋಡ್ಕೊತೀಯ, ಮನಸ್ಸಲ್ಲಿ ಏನೇ ಇರ್ಲಿ, ನಗಿಸ್ತೀಯಾ. ಇಷ್ಟು ವರ್ಷದ ನಂತರ ಬಂದ್ರೂ ಇನ್ನೂ ನಿಂಗೆ ಗೊತ್ತಿದೆ ನನ್ನ ಹೇಗೆ ನಗಿಸ್ಬೇಕು ಅಂತ. ನಿನ್ನ ನೋಡಿದ್ರೆ ಮನಸ್ಸು ಖುಷಿಯಾಗತ್ತೆ ಕಣೋ’

‘ನಾನ್ಯಾವತ್ತೂ ನಿನ್ನಿಂದ ದೂರ ಆಗಿದ್ದೆ ಅಂತ ಅನಿಸಲೇ ಇಲ್ಲ ನೋಡು, ನೀನು ಬರ್ತಿ ಅಂತ ಮನಸು ಹೇಳ್ತಾ ಇತ್ತು’, ಹೇಳ್ಬಾರದಿತ್ತೇನೋ..

‘ಆದ್ರೆ ನಿನ್ನ ಗೆಳತಿಯಾಗಿ ಮೊದಲಿನಂತೆ ಹೊಡೆದಾಟ ಬಡಿದಾಟ ಮಾಡ್ಬೇಕು ಅಂತ ಆಸೆ, ಪ್ರೀತಿ ಅಂತ ನಿನ್ನ ದೂರ ಮಾಡಿದ್ದು ಅದರ ನಂತರ ನೀ ನನ್ನ ಪ್ರೀತಿಸುತ್ತಾ ಇದ್ದಿ ಎಂದು ಗೊತ್ತಾಗಿ ದೂರಾಗಿದ್ದು ಯಾಕಾಗಿ ಬೇಕಿತ್ತು ಹೇಳು, ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದ ನಮ್ಮ ಮಧ್ಯೆ ಇಲ್ಲದ ಸಲ್ಲದ ಗೋಡೆಗಳನ್ನು ಬೆಳೆಸಿಕೊಂಡದ್ದು.. ಆಲ್ವಾ?’ ಎಂದು ಕಣ್ಣು ಮಿಟುಕಿಸಿದಳು.

ನಾನು ಉತ್ತರಿಸಲಿಲ್ಲ. ‘ಪುನಃ ಅದೇ ಮನೆಗೆ ಬಂದ್ಯಾ?’ ಎಂದು ಕೇಳಿದೆ.

‘ಹೌದು ರಾಜ, ಅದನ್ನು ತೆಗೊಂಡೆ’ ಎಂದು. ನನ್ನ ಬಳಿ ಹೆಚ್ಚು ಮಾತುಗಳು ಇರಲಿಲ್ಲ. ಒಂದರ್ಧ ಘಂಟೆ ಬೇಕು ಈ ಶಾಕಿನಿಂದ ಹೊರ ಬರಲು

‘ಎಷ್ಟು ಸಮಯವಾಯಿತು ನೋಡು ಹರ್ಷ ಫ್ಯಾನ್ಸಿಗೆ ಹೋಗಿ, ಇಲ್ಲಿನ ಬಸ್ಸುಗಳಲ್ಲಿ ತಿರುಗಿ. ನನಗೆಲ್ಲಾ ಪುನಃ ಅದು ಬೇಕು. ಅದೇ ನೆನಪುಗಳನ್ನ ಕೊಡ್ತೀಯಲಾ?’ ಎಂದು ಕಣ್ಣುಗಳನ್ನು ಪಿಳಿಪಿಳಿ ಬಿಟ್ಟು ಕೇಳಿದಳು.

‘ನಿಂಗೆ ಯಾವತ್ತಾದ್ರೂ ಇಲ್ಲ ಹೇಳಿದ್ದೀನಾ ಹೇಳು!’ ಎಂದೆ.

‘ಸರಿ ನಾ ಬರ್ಲಾ’ ಎಂದವಳು ಏನನ್ನೋ ಯೋಚಿಸುತ್ತಾ ಅಂದಳು ‘ಹೃದಯದಲ್ಲಿ ನೀನು ಟಾಟಾ ನಾನು ಬಿರ್ಲಾ, ಸದ್ಯಕ್ಕೆ ಲೇಟಾಯ್ತು ಗೆಳೆಯ ನಾ ಬರ್ಲಾ’

ನಾ ನಕ್ಕೆ. ‘ಸಡಿಲಾಗಿದೆ ನಿನ್ನ ಸ್ಕ್ರೂ’ ಎಂದೆ. ‘ಈಗ ಬಂದಿ ನೋಡು ಸರಿಯಾಗಿ ಟ್ರ್ಯಾಕಿಗೆ’ ಎಂದಳು.

‘ಇನ್ನೊಮ್ಮೆ ಸಿಗುತ್ತೇನೆ, ಇನ್ನು ಭೇಟಿ ಇದ್ದಿದ್ದೇ’ ಎಂದು ತಿರುಗಿ ಹೊರಟಳು. ಎಂಜಿನ್ ಸ್ಟಾರ್ಟ್ ಆದ ಶಬ್ದ ಕೇಳಿತು. ಬಹುಶಃ ದೂರದಲ್ಲೆಲ್ಲೋ ಕಾರನ್ನು ನಿಲ್ಲಿಸಿರಬೇಕು

ಮನೆ ಮೇಲೆ ಪ್ರಾರಂಭವಾದ ಡ್ರಿಲ್ಲಿಂಗ್ ಶಬ್ದ ಬಂದದ್ದರಿಂದ ಧಿಗ್ಗನೆ ಎಚ್ಚರಿಕೆಯಾಯಿತು. ಮತ್ತೇನಾಯಿತು ಎಂಬ ಕುತೂಹಲ ಇನ್ನೂ ಆರಿರಲಿಲ್ಲ, ಅಷ್ಟು ಬೇಗ ಕನಸು ಮುರಿಯುವುದೂ ಇಷ್ಟವಿರಲಿಲ್ಲ. ಅವಳು ಎಂದಿಗೂ ಮರಳಿ ಬರಲಾರಳು ಎಂದು ಗೊತ್ತಿತ್ತು ಆದರೆ ಕನಸುಗಳಿಗೆ ಅಸಾಧ್ಯವಾದುದು ಏನೂ ಇಲ್ಲ ಅಲ್ಲವೇ? ಕಿವಿಗಳನ್ನು ದಿಂಬಿನ ಒಳಗೆ ನುಸುಳಿಸಿ ಪುನಃ ನಿದ್ದೆಗೆ ಮೊರೆ ಹೋದೆ. ಕನಸಿನ ಎರಡನೇ ಭಾಗ ಆರಂಭವಾಯಿತು.

* * * * * * * *

ಚಿತ್ರಕೃಪೆ : feedagg.com

4 ಟಿಪ್ಪಣಿಗಳು Post a comment
  1. ಮೌನರಾಗ's avatar
    ಫೆಬ್ರ 4 2012

    ಕನಸಿನ ಲೋಕದ ಪಯಣ ಚೆನ್ನಾಗಿದೆ…
    ಸಂಭಾಷಣೆಗಳು ಹಾಗೆ ಮನ ತಾಕುತ್ತದೆ…ಕನಸಿನ ಲೋಕಕ್ಕೆ ಒಯ್ಯುತ್ತದೆ….
    ಚೆನ್ನಾಗಿದೆ ಸಂತೋಷ್…

    ಉತ್ತರ
  2. satish d.r's avatar
    satish d.r
    ಫೆಬ್ರ 4 2012

    ಆಗಾಗ ಕಾಡುವ ಕನಸುಗಳು ಬೆನ್ನಟ್ಟಿ ಬರುತ್ತವೆ. ಕನಸಿನಲ್ಲಿ ನಡೆದ ಸಂಭಾಷಣೆಯಾದರು ವಾಸ್ತವದ ಸ್ಪರ್ಶ ಕಥೆಗಿದೆ. ಪ್ರೀತಿ ಉದಯಿಸುವ ಮನಗಳಲ್ಲಿ ಈ ರೀತಿಯ ಕನಸುಗಳ ಬೇಟೆ ಆಗುತ್ತಿರುತ್ತದೆ. ಆ ಕನಸುಗಳಿಗೆ ಗಡಿ ವಿಸ್ತೀರ್ಣಗಳ ಎಲ್ಲೇ ಇರುವುದಿಲ್ಲ. ಭಾವನೆಗಳೇ ಎಲ್ಲೇ. ಸರಳವಾಗಿ ಓದಿಸಿಕೊಂಡು ಹೋಗುವ ನಿಮ್ಮ ಕಥೆ ನಿಜಕ್ಕೂ, ಪರಿಸ್ಥಿತಿಗೆ ಸಿಲುಕಿ ಮರೆತು ಮರೆಯಾದ ಭಾವನೆಗಳನ್ನು ಪುನಃ ಕೆದಕಿ ಕಣ್ಣ ಮುಂದೆ ತರುತ್ತದೆ. ಚನ್ನಾಗಿದೆ. .

    ಉತ್ತರ
  3. pavan's avatar
    pavan
    ಫೆಬ್ರ 7 2012

    ಲೇಖನ ಮನ ಮುಟ್ಟುವಂತಿದೆ. ಧನ್ಯವಾದಗಳು

    ಉತ್ತರ
  4. mansoor's avatar
    mansoor
    ಫೆಬ್ರ 10 2012

    dreams r dreams only

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments