ಹುಟ್ಟೋ ಮಕ್ಕಳು ಪ್ರಪಂಚವನ್ನು ನೋಡಲಿ..
ಆ ವಿಧಿಯಾಟವ ಬಲ್ಲವರಾರು ?
– ಪ್ರಸಾದ್.ಡಿ.ವಿ.
ನಾನು ಇಂತಹದ್ದೊಂದು ಲೇಖನ ಬರೆಯುತ್ತೇನೆಂದು ನನ್ನ ಕನಸ್ಸು ಮನಸ್ಸಿನಲ್ಲಿಯು ಎಣಿಸಿರಲಿಲ್ಲ. ನನ್ನ ನಂಬಿಕೆಗಳ ವಾಸ್ತವದ ನೆಲೆಗಟ್ಟನ್ನೆ ಆ ಸಂದರ್ಭ ಅಲ್ಲಾಡಿಸುತ್ತದೆಂದು ನಾನು ಎಂದೂ ಭಾವಿಸಿರಲಿಲ್ಲ. ನೆನ್ನೆ ನನ್ನ ಕಣ್ಣೆದುರೆ ಗತಿಸಿದ ಘಟನೆ ನನ್ನನ್ನು ಈ ಲೇಖನ ಬರೆಯುವವರೆಗೂ ಸರಿಯಾಗಿ ನಿದ್ರಿಸಲು ಬಿಡುತ್ತಿಲ್ಲ.
ನನ್ನ ತಾತನಿಗೆ ಆರೋಗ್ಯ ಕೈಕೊಟ್ಟು ಎರಡು ವರ್ಷವೇ ಸರಿದಿರಬಹುದು. ವಯಸ್ಸಾದ ದೇಹ ರೋಗಗಳ ಕಣಜವೆಂಬಂತೆ. ನನ್ನವ್ವ(ಅಜ್ಜಿ)ನಿಗೆ ಅವಳ ಗಂಡನೇ ದೈವ. ಆ ದೇವತೆಯ ಇಚ್ಛಾಶಕ್ತಿಯೆ ತನ್ನ ಗಂಡನ ಪ್ರಾಣವನ್ನು ಹಿಡಿದಿಟ್ಟಿದೆ ಎನಿಸುತ್ತದೆ. ನನ್ನ ಅಮ್ಮ, ಚಿಕ್ಕಮ್ಮಂದಿರು ಮತ್ತು ಮಾವನಿಗೆ ನನ್ನಜ್ಜನನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕೆಂಬ ಆಸೆ. ಆದ್ದರಿಂದ ಅಜ್ಜನನ್ನು ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ದಿನವೂ ಅವರನ್ನು ಕಾಯುತ್ತಿದ್ದಾರೆ. ನಾನು ಭಾವನೆಗಳನ್ನು ಅಪ್ಪಿ ಜೋತಾಡುವ ಮನೋಭಾವದವನಲ್ಲವೇ ಅಲ್ಲ. ವಾಸ್ತವಿಕ ಮತ್ತು ವೈಚಾರಿಕ ನೆಲೆಗಟ್ಟುಗಳೆ ನನ್ನ ಯೋಚನಾಧಾಟಿಯ ಅಡಿಪಾಯಗಳು, ಬಂಧನಗಳು ಮತ್ತು ಸಂಬಂಧಗಳೆಂದರೆ ತುಸು ತಟಸ್ಥನೆ. ಕೆಲವೊಮ್ಮೆ ತುಂಬಾ ಭಾವುಕನಾಗುವುದುಂಟು ಆದರೆ ಅದು ತೀರಾ ವಿರಳ. ನನ್ನ ಯೋಚನಾಧಾಟಿಯೋ ಇಲ್ಲವೆ ತಟಸ್ಥ ಭಾವದ ಉದ್ದಟತನವೋ, “ಅಜ್ಜನಿಗೆ ವಯಸ್ಸಾಯ್ತು, ಮಗನ ಮದುವೆಯನ್ನೂ ನೋಡಿದ್ದಾಯ್ತು ಮೊಮ್ಮಗನನ್ನು ಮುದ್ದಿಸಿದ್ದೂ ಆಯ್ತು, ಅವರು ಹೊರಡುವ ಕಾಲ ಸನ್ನಿಹಿತವಾಯಿತೆಂದರೆ ಹೋಗಲಿ ಬಿಡಿ. ಯಾಕಷ್ಟು ಭಾವುಕರಾಗುತ್ತೀರಿ?” ಎಂದುಬಿಟ್ಟೆ. ಎಲ್ಲರೂ ನನ್ನನ್ನು ಯಾವುದೇ ಭಾವನೆಗಳಿಲ್ಲದ ಬಂಡೆಯೆಂಬಂತೆ ನೋಡಿ, “ಬಾಯಿಗೆ ಬಂದಂತೆ ಹರಟಬೇಡ, ಕಾಲು ಮುರಿಯುತ್ತೇನೆ” ಎಂದು ಅಮ್ಮ ಗದರಿದರು. ನಾನು ನನ್ನಲ್ಲೆ ಇವರಿಗೆ ಬುದ್ಧಿಯಿಲ್ಲ, ಯಾರು ಪುಂಗಿ ಊದಿದರು ಸರಿಯಾಗದವರು ಇವರು ಎಂದು ಸುಮ್ಮನೆ ಹೊರಬಂದೆ. ಅವರ ಭಾವೋತ್ಕಟತೆಯ ಆಳವನ್ನು ವಿಮರ್ಶಿಸುವ ಗೋಜಿಗೂ ಹೊಗಲಿಲ್ಲ ನಾನು.