ಸಂಸ್ಕೃತಿ ಸಂಕಥನ – 24 – ಗತ ಕಥೆಯ ಚರಿತ್ರೆ
-ರಮಾನಂದ ಐನಕೈ
ನಾವು ದಿನನಿತ್ಯ ಒಂದಲ್ಲೊಂದು ಸಂದರ್ಭ ದಲ್ಲಿ ಉಲ್ಲೇಖಿಸುವ ಚರಿತ್ರೆ ಅಥವಾ ಹಿಸ್ಟರಿ ಅಂದರೆ ಏನು? ನಾವು ಪಠ್ಯಗಳ ಮೂಲಕ ಚರಿತ್ರೆಯ ಅಭ್ಯಾಸ ಮಾಡುವಾಗ ಹಲವು ವ್ಯಾಖ್ಯೆಗಳನ್ನು ಕಂಠಪಾಠ ಮಾಡಿದ್ದೇವೆ. ಚರಿತ್ರೆ ಅಂದರೆ ಒಂದು ವಿಜ್ಞಾನ. ಏಕೆಂದರೆ ಗತಕಾಲದ ಬಗ್ಗೆ ವೈಜ್ಞಾನಿಕ ವಾಗಿ ಅಧ್ಯಯನ ನಡೆಸಿ ಸೆರೆಹಿಡಿದ ವಾಸ್ತವವೇ ಹಿಸ್ಟರಿ. ಚರಿತ್ರೆ ಅಂದರೆ ಗತಕಾಲದ ರಾಜಕೀಯ. ಚರಿತ್ರೆ ಅಂದರೆ ಗತಕಾಲದ ಸಮಾಜವಿಜ್ಞಾನ. ಹೀಗೆ ಚರಿತ್ರೆಯನ್ನು ಒಂದು ವಸ್ತುನಿಷ್ಠ ವಿಷಯ ಎಂಬಂತೆ ಬಿಂಬಿಸಿಕೊಂಡು ಬಂದಿದ್ದೇವೆ.
ಈಗ ಆಧುನಿಕ ಯುಗದ ನಮ್ಮ ಮನಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಎಲ್ಲ ಗತಕಾಲಕ್ಕೂ ಚರಿತ್ರೆ ಯನ್ನು ಕಟ್ಟಲಾಗುತ್ತಿದೆ. ಚರಿತ್ರೆಗೆ ಸಿಲುಕದ ಗತಕಾಲವನ್ನು ಅವಾಸ್ತವಿಕ ಅಥವಾ ಮೌಢ್ಯ ಎಂದು ಗೇಲಿ ಮಾಡುತ್ತೇವೆ. ಎಲ್ಲ ಗತಕಾಲವೂ ಏಕೆ ಚರಿತ್ರೆ ಯಾಗಲೇಬೇಕು ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಚರಿತ್ರೆ ಅಂದರೆ ಏನು? ಇದು ಯಾವಾಗ ಹುಟ್ಟಿತು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.