ವಿಷಯದ ವಿವರಗಳಿಗೆ ದಾಟಿರಿ

Archive for

12
ಫೆಬ್ರ

ಗೂಪಿ ಬಾಘ

ನಟರಾಜು ಎಸ್ ಎಂ

ಹಳ್ಳಿಯ ಉದಯೋನ್ಮುಖ ಗಾಯಕನೊಬ್ಬ ತನ್ನ ಕರ್ಕಷ ಕಂಠದಿಂದ ಹಾಡಲು ಶುರು ಮಾಡಿದರೆ ಅವನ ಊರಿನವರು ಅವನನ್ನು “ಮಹಾರಾಜರ ಅರಮನೆ ಮುಂದೆ ಹೋಗಿ ಹಾಡು ನಿನಗೆ ಬಹುಮಾನ ಕೊಡುತ್ತಾರೆ” ಅಂತ ಆ ಗಾಯಕನಿಗೆ ಹೇಳಿಕೊಟ್ಟು ಅವನ ಹಿಂದೆ ಮುಸಿಮುಸಿ ನಗುತ್ತಾರೆ. ಪಾಪ ಅವರ ಮಾತಿನ ಅರ್ಥ ತಿಳಿಯದ ಆ ಗಾಯಕ ಆ ಜನಗಳ ಮಾತನ್ನು ಹೊಗಳಿಕೆ ಎಂದು ತಿಳಿದು ಅತಿ ಖುಷಿಯಿಂದ ಒಂದು ಮುಂಜಾನೆ ಎದ್ದವನೇ ರಾಜರ ಅರಮನೆಯ ಅನತಿ ದೂರದಲಿ ಕುಳಿತು ತನ್ನ ಗಾಯನ ಶುರು ಮಾಡುತ್ತಾನೆ. ಆ ಗಾಯಕನ ಕರ್ಕಷ ದನಿಯಿಂದ ನಿದ್ರಾಭಂಗವಾದ ರಾಜ ತನ್ನ ಭಟರನ್ನು ಕರೆದು ಆ ಗಾಯಕನನ್ನು ಕತ್ತೆಯ ಮೇಲೆ ಕುಳ್ಳರಿಸಿ ಊರಿನಿಂದ ಬಹಿಸ್ಕಾರ ಮಾಡಿಸಿಬಿಡುತ್ತಾನೆ. ಹಾಗೆಯೆ ತನ್ನ ಸಂಗೀತದ ಹುಚ್ಚಿಗೆ ತನ್ನ ಊರಿನವರಿಂದ ಬಹಿಷ್ಕಾರಗೊಂಡ ಮತ್ತೊಬ್ಬ ಡೊಳ್ಳಿನವನು ಕತ್ತೆಯ ಮೇಲೆ ಸವಾರಿ ಮಾಡಿ ಬಂದ ಗಾಯಕನೊಡನೆ ಭೇಟಿಯಾಗುತ್ತಾನೆ. ಆ ಇಬ್ಬರು ಕಾಡಿನ ಒಂದು ಜಾಗದಲ್ಲಿ ಕುಳಿತು ಕಷ್ಟ ಸುಖ ಮಾತನಾಡ್ತ ಇರುವಾಗ ಅವರ ಮುಂದೆ ಹುಲಿಯೊಂದು ಪ್ರತ್ಯಕ್ಷವಾಗುತ್ತದೆ. ಭಯಗೊಂಡ ಇಬ್ಬರು ಕಲ್ಲುಗಂಭದಂತೆ ಅಲ್ಲಾಡದೆ ನಿಂತು ಆ ಹುಲಿಯಿಂದ ಹೇಗೋ ಪಾರಾದ ಮರು ಕ್ಷಣ ಭೂತಗಳ ರಾಜ ಒಂದು ವಿಚಿತ್ರ ಪ್ರಪಂಚವನ್ನೆ ಅವರ ಮುಂದೆ ಸೃಷ್ಠಿಸಿಬಿಡುತ್ತಾನೆ. ಭೂತಗಳೆಂದರೆ ಬಿಳಿ ಬಟ್ಟೆ ತೊಟ್ಟ, ಉದ್ದ ಜಡೆಯ, ಕಾಲುಗಳು ಉಲ್ಟಾ ಇರುವ ಆಕೃತಿಗಳು ಅನ್ನೋ ನಮ್ಮ ಭಾವನೆಗಳಿಗೆ ನಿಲುಕದಂತ ಭೂತಗಳನ್ನು ಬರಿ ನೆರಳು ಬೆಳಕಿನ ಆಟದಲ್ಲಿ, ವಿಚಿತ್ರ ವೇಷ ಭೂಷಣಗಳಲ್ಲಿ, ಬರೀ ಗೆರೆಗಳಲ್ಲಿ ಸೃಷ್ಠಿಸಿಬಿಡಬಲ್ಲ ಚಾಣುಕ್ಯತನ ಬಹುಶಃ ಶ್ರೇಷ್ಠ ಕಲಾವಿದರಿಗೆ ಮಾತ್ರ ಸಾಧ್ಯವೇನೋ!