ಸಿದ್ಲಿಂಗು – ಚಿತ್ರ ವಿಮರ್ಶೆ
-ಹೇಮಾ ಪವಾರ್
ತನ್ನ ಪೋಲಿ ಹುಡುಗಾಟಿಕೆಯ ಪ್ರೋಮೋಗಳಿಂದಲೇ ಜನಪ್ರಿಯತೆ ಗಳಿಸಿದ್ದ ತೀವ್ರ ನಿರೀಕ್ಷೆಯ ಚಿತ್ರ ಸಿದ್ಲಿಂಗು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. Stereotype ಸಿನಿಮಾಗಳಿಂದ ಬೇಸತ್ತ ಜನರಿಗೆ ಒಂದು ಸಾಧಾರಣ ಕತೆಯನ್ನು ವಿಭಿನ್ನವಾಗಿ ಹೇಳಲಾಗಿರುವ ಕನ್ನಡದ ಚಿತ್ರಗಳಲ್ಲೊಂದು. ಕತೆಯ ಮಾದರಿಯಿಂದ ಹಿಡಿದು, ನಿರೂಪಣೆ, ಸಂಭಾಷಣೆ ಹಾಗು ನಟನೆಯಲ್ಲೂ ಕೂಡ ಹೊಸತನ್ನು ಹೊತ್ತು ತಂದಿರುವಂತಹ ಚಿತ್ರವೂ ಹೌದು.
ಚಿತ್ರದ ಕತೆಯನ್ನು ನಾಯಕ narrate ಮಾಡುತ್ತ ಹೋಗುತ್ತಾನೆ, ಆತ ಹುಟ್ಟಿದ್ದು, ಆತನ ಅಪ್ಪ ಚಿಕ್ಕಮ್ಮ, ಸ್ಕೂಲು, ಸ್ಕೂಲಿನ ಗೆಳತಿ, ಕಾರಿನ ಬಗ್ಗೆ ಆತನಿಗೆ ವ್ಯಾಮೋಹ ಬೆಳೆದು ಬಂದ ರೀತಿ. ಕಾರಿದ್ದದ್ದಕ್ಕೆ ಹತ್ತಿರವಾದ ಲೆಕ್ಚರರ್, ಸಲೀಸಾಗಿ ಎಂಬಂತೆ ಆಕೆಯೊಂದಿಗೆ ಕಾರಿನಲ್ಲೇ ನಡೆದು ಹೋಗುವ ದೈಹಿಕ ಸಂಪರ್ಕ, ಹಠಾತ್ತನೆ ಸತ್ತು ಹೋಗುವ ಅಪ್ಪ ಅಮ್ಮ, ಒಂಟಿಯಾಗಿ ಬೆಳೆಯುವ ಆತ, ಕಾರು ಕೊಳ್ಳಬೇಕೆಂಬ ಆತನ ಕನಸು, ಕಾರ್ ಮಾಲೀಕನ ಒಂದಷ್ಟು ಎಮೋಷನ್ಸು, ಬಡ್ಡಿಗೆ ದುಡ್ಡು ಕೊಡುವ ವ್ಯಾಪಾರಿ, ಅದರಿಂದ ಪರಿಚಯವಾಗುವ ನಾಯಕಿ, ಆಕೆಯೊಂದಿಗಿರುವ ಆಯಾ, ಧಿಡೀರ್ ಎಂದು ಮತ್ತೆ ಕಾಣಿಸಿಕೊಳ್ಳುವ ಲೆಕ್ಚರರ್ ’ತುರುವೇಕೆರೆ ಆಂಡಾಳಮ್ಮ’, ಆಕೆಯನ್ನು ನೋಡಿ ಕಾರಿನ ದಾಖಲೆಗಳನ್ನು ಕಳೆದುಕೊಳ್ಳುವ ನಾಯಕ, ಕಾರ್ ಮಾಲೀಕನ ಮಗನ ವಿಲನ್ ರೂಪದ ಎಂಟ್ರಿ, ಆತನಿಗೊಬ್ಬ ಇನ್ಸ್ ಪೆಕ್ಟರ್ ಶತ್ರು, ಇನ್ಸ್ ಪೆಕ್ಟರ್ ಗೆ ಹತ್ತಿರವಾಗುವ ಸಿದ್ಲಿಂಗು ಮತ್ತು ನಾಯಕಿ, ಕ್ಲೈಮ್ಯಾಕ್ಸ್ ನಲ್ಲಿ ವೈರಿ ನಾಶಕ್ಕಾಗಿ ಇನ್ಸ್ ಪೆಕ್ಟರ್ ಹಾಗು ಸಿದ್ಲಿಂಗು ಹೊಡೆದಾಡಬೇಕಾದರೆ, ಅಚಾತುರ್ಯದಿಂದ ಸತ್ತು ಹೋಗುವ ನಾಯಕಿ. ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರನ್ನು ದಿಗ್ಬ್ರಮಿಸಲೆಂದೇ ಮೂಡಿಸಿರುವುದು ತಿಳಿದರು ಇಡೀ ಕತೆ ಹಾಗು ಅದರ ರೀತಿ ಕ್ಲೈಮ್ಯಾಕ್ಸನ್ನು ಜಸ್ಟಿಫೈ ಮಾಡುವುದಿಲ್ಲ. ಹಾಗಾಗಿ ಅದು ಅಲ್ಟಿಮೇಟ್ ಶಾಕ್ ಎನಿಸದೆ ಅತೀ ಭಾವುಕವೂ ಎನಿಸದೆ ಪ್ರೇಕ್ಷಕರ ಮನಸ್ಸಿನಲ್ಲಿ ನಿಲ್ಲಲು ಸೋಲುತ್ತದೆ.
ಚಿತ್ರದಲ್ಲಿ ಒಂದೊಂದು ಪಾತ್ರವನ್ನು ಮೂಡಿಸಿರುವ ರೀತಿ ವಿಶಿಷ್ಟವಾಗಿದೆ. ಪಾತ್ರಗಳು ಒಂದಕ್ಕೊಂದು ಪರಿಚಯವಾಗುವುದು ಇನ್ಸಿಡೆಂಟಲ್ ಎನಿಸುತ್ತ ಸಹಜತೆಗೆ ಹತ್ತಿರವಾಗಿದೆ.ಎಲ್ಲ ಪಾತ್ರಗಳೂ ಇನ್ನೊಂದು ಪಾತ್ರಕ್ಕೆ ಸಹಾಯ ಮಾಡುತ್ತಲೇ ಹತ್ತಿರವಾಗುತ್ತವೆ, ಯಾರಿಗೆ ಯಾರೂ ಅನಿವಾರ್ಯವಲ್ಲ. ಇತ್ತೀಚಿನವರೆಗೂ ತೀರ ಭಾವುಕವೆನಿಸುತ್ತಿದ್ದ ಎಂದುಕೊಳ್ಳುತ್ತಿದ್ದ ಅಪ್ಪ ಅಮ್ಮ ಪ್ರೇಯಸಿ ಎಂಬಂತಹ ಪಾತ್ರಗಳು ಇಲ್ಲಿ ಅಷ್ಟು ಆಳವೆನಿಸದೇ ತೀರ ಹಗುರವಾಗಿ ಮೂಡಿಸಿದಂತಿದೆ. ಅಚಾನಕ್ಕಾಗಿ ಹುಟ್ಟುವ ಪಾತ್ರಗಳು ಅವು ಕಳೆದು ಹೋಗುವ ರೀತಿಯನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಸಾಕಷ್ಟು ಶ್ರಮಿಸದಿರುವುದು ತಿಳಿಯುತ್ತದೆ. ಲೆಕ್ಚರರ್ ಒಬ್ಬಳು ಕಾರಣವೇ ಇಲ್ಲದಂತೆ ತನ್ನ ವಿದ್ಯಾರ್ಥಿಯತ್ತ ಆಕರ್ಷಿತಳಾಗಿ ಮೈ ಒಪ್ಪಿಸಿಬಿಡುವ ದೃಶ್ಯ ತೀರ ಸಹಜವೆಂಬಂತೆ ಹೇಳಲಾಗಿದೆ. ಇಡೀ ಕತೆಯಲ್ಲಿ ಗಂಭೀರ ಎನಿಸುವುದು, ಭಾವನಾತ್ಮಕವಾಗಿ ತಟ್ಟುವುದು ಬಾಲಕ ಸಿದ್ಲಿಂಗುವಿನ ಪ್ರೇಮ ಪ್ರಸಂಗ. ಕಡಿಮೆ ದೃಶ್ಯಗಳಲ್ಲೇ ಆ ಪಾತ್ರಕ್ಕಿರುವ ಪ್ರಾಮುಖ್ಯತೆ ಆಳ, ಇಡೀ ಸಿನಿಮಾದ ತುಂಬಾ ಇರುವ ಯುವಕ ಸಿದ್ಲಿಂಗುವಿಗೆ ಸಿಗದಿರುವುದು ವಿಪರ್ಯಾಸ. ಪ್ರತಿ ಪಾತ್ರವನ್ನು ಹಗುರವಾಗಿ ಮೂಡಿಸಿ ಸೀರಿಯಸ್ ನೆಸ್ ನತ್ತ ತಳ್ಳುವುದು, ಮುಂಗಾರು ಮಳೆಯಿಂದಲೂ ನಡೆದು ಕೊಂಡು ಬಂದಿರುವ ಪದ್ದತಿಯೇ, ಆದರೆ ಈ ಸಿನಿಮಾದಲ್ಲಿ ಗಂಭೀರತೆಯೂ ಎಲ್ಲೂ ಪ್ರಮುಖವಾಗಿಲ್ಲ ಹಾಗಾಗಿ ಕಡೆಯಲ್ಲಿ ನಾಯಕಿ ಸತ್ತರೂ ಅದು ಕತೆ ಹೇಳುತ್ತಿರುವ ರೀತಿಗೆ, ನಡೆದಷ್ಟೇ accidental ಎನಿಸಿ ಮರೆತು ಹೋಗುತ್ತದೆ.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಗ್ರಾಮೀಣತೆಯ ಹಿನ್ನೆಲೆಯಲ್ಲಿ ಕತೆಯನ್ನು ಬಿಡಿಸುತ್ತಾ ಮುಂದುವರೆಯುವ ಚಿತ್ರ, ಕತೆಗೆ ಅನಿವಾರ್ಯವೆನಿಸುವಂತೆ ನಾಯಕನಿಗೆ ಕಾರಿನ ಬಗ್ಗೆ ಇರುವ ಗೀಳನ್ನು ತೋರಿಸುತ್ತದೆ. ಸಿದ್ಲಿಂಗುವಿನ ಜೀವನದ ಜೊತೆ ಕಾರು, ಕಾರಿನ ಬಗ್ಗೆ ಆತನ ಕನಸನ್ನು ವಿಸ್ತರಿಸುತ್ತಾ ಸಾಗುತ್ತದೆ. ಇಡೀ ಕತೆಯಲ್ಲಿ ಬಂದು ಮರೆಯಾಗುವ ಪಾತ್ರಗಳಲ್ಲಿ ಇಲ್ಲದ ಗಟ್ಟಿತನವನ್ನು ಕಾರಿಗೆ ನೀಡಲಾಗಿದೆ. ಪಾತ್ರಗಳನ್ನು ಬೇಕೆಂದಲ್ಲಿ ಸೃಷ್ಟಿಸಿ ಬೇಡವೆಂದಲ್ಲಿ ಸಾಯಿಸಿಬಿಟ್ಟಿರುವ ನಿರ್ದೇಶಕರು ಕಾರಿಗೊಂದು ಕೊನೆಯೇ ಕೊಡುವುದಿಲ್ಲ. ಯಾವ ಪಾತ್ರಕ್ಕೂ ಸ್ಪಷ್ಟನೆ ಯಾಗಲೀ ಫ್ಲಾಶ್ ಬ್ಯಾಕ್ ಆಗಲೀ ಇಲ್ಲವೇ ಇಲ್ಲ. ಎಲ್ಲರೂ ಸಿದ್ಲಿಂಗುವಿಗೆ ಪರಿಚಯವಾಗಲೆಂದೇ ಕಾಯುತ್ತಿರುವ ಪಾತ್ರಗಳು, ಸಿದ್ಲಿಂಗುವಿನೊಂದಿಗಲ್ಲದೆ ಅವಕ್ಕೆ ಬೇರೆಲ್ಲೂ ಇರವೇ ಇಲ್ಲ. ಹೀಗೆ ಅಸ್ಪಷ್ಟವಾದ ಒಂದು ಕತೆಯನ್ನು ಹೇಳಲು ಹೊರಟು, ಹೇಳುವಾಗಲೂ ಸ್ಪಷ್ಟತೆ ಕಂಡುಕೊಳ್ಳದೆ, ಕೊನೆಯನ್ನು ಪರಿಣಾಮಕಾರಿಗೊಳಿಸುವತ್ತ ಕೆಂದ್ರೀಕೃತಗೊಂಡು ಅಬ್ರಪ್ಟ್ ಆಗಿ ಮುಗಿದು ಹೋಗುತ್ತದೆ.
* * * * * * *
ಚಿತ್ರಕೃಪೆ : ವೆಬ್ ದುನಿಯಾ





ಹೇಮಾರವರೆ,
ಎಷ್ಟೊಂದು ಇಂಗ್ಲೀಷ್ ಪದಗಳಿಂದ ತುಂಬಿರುವ ನಿಮ್ಮ ಬರಹದಲ್ಲಿ ಬರೀ ಕನ್ನಡದ ಪದಗಳೇ ಇದ್ದಿದ್ದರೆ ನಿಮ್ಮ ವಿಮರ್ಶೆಗೊಂದು ಮೆರುಗು ಬರುತ್ತಿತ್ತು.. ಒಂದು ಚಿತ್ರವನ್ನು ವಿಮರ್ಶಿಸುವಾಗ ಆ ಚಿತ್ರದ ಕತೆಯನ್ನಷ್ಟೇ ಅಲ್ಲ ಆ ಚಿತ್ರದ ಮುಖ್ಯ ಕಲಾವಿದರ ನಟನೆ, ಚಿತ್ರದ ಸಂಗೀತ, ಛಾಯಾಗ್ರಹಣ, ಇತ್ಯಾದಿಗಳನ್ನು ಕುರಿತು ಬರೆಯುತ್ತಾ ಆ ಚಿತ್ರಕ್ಕಾಗಿ ಮುಖ್ಯವಾಗಿ ಶ್ರಮಿಸಿದವರ ಹೆಸರನ್ನು ತಿಳಿಸುವುದು ವಿಮರ್ಶಕನ ಧರ್ಮ..
ಬರಹಗಳಲ್ಲಿ ಇಂಗ್ಲಿಷ್ ಪದಬಳಕೆ ಚಟವಾಗಿಬಿಟ್ಟಿದೆ ಸರ್, ಕಡಿಮೆ ಮಾಡಿಕೊಳ್ಳಬೇಕಿದೆ.
ಚಿತ್ರದಲ್ಲಿ ವಿಮರ್ಶೆಗೆ ಅರ್ಹವಾದ ಅಂಶಗಳನ್ನು ಆದಷ್ಟು ವಸ್ತು ನಿಷ್ಠವಾಗಿ ವಿವರಿಸಲು ಯತ್ನಿಸಿರುವೆ. ಮುಂದಿನ ಪ್ರಯತ್ನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬರೆಯಲು ಸಾಧ್ಯವೇನೋ, ನಿಮ್ಮ ಅನಿಸಿಕೆಗೆ ಧನ್ಯವಾದಗಳು.
ನೀವೇ ಪೂರ್ತಿ ಕಥೆ ಹೇಳಿಬಿಟ್ಟರೆ ನಾವು ಹೇಗೆ ತಾನೇ ಚಿತ್ರ ವೀಕ್ಷಿಸಲು ಸಾಧ್ಯ? ಯಾವುದೇ ಕಥೆ ಪುಸ್ತಕ ಅಥವಾ ಚಲನ ಚಿತ್ರದ ವಿಮರ್ಷೆ ಬರೆದಾಗ ಪ್ರಮುಖ ಘಟನೆಗಳು ಬಹಿರಂಗ ಗೊಳಿಸಬಾರದು.
ಬಿಂದು, ಈ ಬಗ್ಗೆ ನನ್ನ ಬ್ಲಾಗಿನಲ್ಲೂ ಮಹನೀಯರೊಬ್ಬರಿಗೆ ಉತ್ತರಿಸಿದ್ದೆ. ಸಿದ್ಲಿಂಗು ಚಿತ್ರ ಕೇವಲ ಕತೆಗಾಗಿ ಕ್ಲೈಮ್ಯಾಕ್ಸ್ ಗಾಗಿ ನೋಡುವಂತಹದಲ್ಲ, ಇದೆಲ್ಲವನ್ನೂ ಮೀರಿಯೂ ಚಿತ್ರ ವಿಭಿನ್ನವಾಗಿ ಮೂಡಿಬಂದಿದೆ ಅದನ್ನು ಗಮನಿಸಿ ಎಂದು ತಿಳಿಸಬೇಕಾದರೆ ಇಡೀ ಕತೆಯನ್ನೂ ಹೇಳಲೆ ಬೇಕಾಯಿತು.
ಸಿದ್ಲಿಂಗು ಸಿನಿಮಾ ನೋಡಿದೆ. ಪ್ರೊಮೊ ನೋಡಿದ್ದೆ. ಏನೋ ಡಿಫ಼ರೆಂಟ್ ಆಗಿದೆ ಅನಿಸಿತ್ತು. ನೋಡಿದ್ಮೇಲೆ ನೋಡಿದ್ದು ಬರೀ ಸಿನಿಮಾ….ನಾ… ಅನಿಸ್ತಿದೆ. ಯೋಗೇಶ್ ಒಬ್ಬ ಆಕಸ್ಮಿಕ ಕಲಾವಿದ ಅಲ್ಲ. ವಿಜಯಪ್ರಕಾಶ್ ನಿರ್ದೇಶನದ ಬಗ್ಗೆ ಹೇಳೋದೇನು… ಕನ್ನಡದವರು ಇಂತಹ ನಿರ್ದೇಶಕರನ್ನು ಪ್ರೊತ್ಸಾಹಿಸದಿದ್ದರೆ ಅದು ನಮ್ಮ ನಾಡು ನುಡಿಗೆ ಆಗುವ ನಷ್ಟ. by the way your review is very good!!