ರವಿ ಬೆಳಗೆರೆ ಎಂಬ ಕಿಲಾಡಿ ಮಾಂತ್ರಿಕನ ಮಾಯಾ ಬುಟ್ಟಿಯಿಂದ!
-ಕಾಲಂ ೯
ಶಾಲಿವಾಹನನೂ, ಬಬ್ರುವಾಹನನೂ ಒಂದಾದ ಪುರಾಣ ಪುಣ್ಯ ಕಥೆಯನ್ನು ಹಿಂದೆ ಸಂಪಾದಕೀಯದಲ್ಲಿ ಓದಿರಬಹುದು. ಇದೀಗ ಅದಕ್ಕೆ ಸಂಬಂಧವಿಲ್ಲದ ಒಂದಷ್ಟು ವಿಚಾರಗಳು:
ಪತ್ರಕರ್ತ ರವಿ ಬೆಳಗೆರೆ ಇತ್ತೀಚಿಗೆ SM ಕೃಷ್ಣರೊಂದಿಗೆ ಇಸ್ರೇಲ್ ಯಾತ್ರೆಗೆ ಹೋಗಿದ್ದರು. ಅವರೇ ಬರೆದುಕೊಂಡಂತೆ ಅದು ಕಾಡಿ, ಬೇಡಿ ಗಿಟ್ಟಿಸಿಕೊಂಡ ಬಿಟ್ಟಿ ಅವಕಾಶ. ಜೊತೆಯಲ್ಲಿಯೇ ವಿಶ್ವೇಶ್ವರ ಭಟ್ಟರೂ ಹೋಗಿದ್ದಿದ್ದು ಭಟ್ಟರ ಲೇಖನಗಳನ್ನು ಓದುವವರಿಗೆ ತಿಳಿದಿರಬಹುದು. ಇಸ್ರೇಲ್ ಜೊತೆಗೆ ಪಾಕ್, ಇಟೆಲಿ, ಮತ್ತು ಸ್ವಿಜಲ್ಯಾಂಡ್ ಪಕ್ಕದ ದೇಶವೊಂದರ ಪ್ರವಾಸದ ಅನುಭವವನ್ನೂ ಸೇರಿಸಿ ಮುಸಲ ಯುದ್ಧದಲ್ಲಿ ಹಿಮಾಗ್ನಿ ಎಂಬ ಕಾದಂಬರಿ ಬರೆದಿದ್ದಾರೆ. ಮೈನೋ ಗಾಂಧಿ ಎಂಬ ಪಾತ್ರದ ಸುತ್ತ ಭಯೋತ್ಪಾದನೆ ಮತ್ತು ಕಪ್ಪುಹಣಗಳ ಬಗ್ಗೆ ಕಥೆ ಸಾಗುತ್ತದೆ. ಹೆಚ್ಚು ವಿವಾದವದಲ್ಲಿರುವ ವಸ್ತುಗಳನ್ನು ಆರಿಸಿ ಬರೆಯುವುದರಲ್ಲಿ ನಿಸ್ಸೀಮರಾದ ಬೆಳಗೆರೆ, ಮುಖಪುಟದಲ್ಲಿ ಸೋನಿಯಾ ಚಿತ್ರವನ್ನೂ ಸೇರಿಸಿ ಕುತೂಹಲ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕದ ಸಲ್ಮಾನ್ ರಶ್ದಿ/ತಸ್ಲೀಮಾ ಆಗುವ ಪ್ರಯತ್ನ ಅವರಲ್ಲಿ ಕಾಣಬಹುದು.
“ಇಲ್ಲಿ ಬರುವ ಪಾತ್ರ ಹಾಗೂ ಘಟನೆಗಳು ಕಾಲ್ಪನಿಕ. ಯಾವುದೇ ಸಾಮ್ಯತೆ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ” ಎಂಬ ಎಚ್ಚರಿಕೆಯೂ ಆ ಪುಸ್ತಕದಲ್ಲಿದೆ!
ಇದರ ಜೊತೆ ಉಡುಗೊರೆ, ಅಮ್ಮ ಸಿಕ್ಕಿದ್ದು ಎಂಬ ಪುಸ್ತಕಗಳು ಮತ್ತೆರಡು ಸಿಡಿಗಳು ಭಾನುವಾರ ಬಿಡುಗಡೆಯಾದವು.
ಇವುಗಳ ಜೊತೆ ಗಾಂಧಿ ಬಜಾರಿನಲ್ಲಿ ಬೆಳೆಗೆರೆಯ ಪುಸ್ತಕದಂಗಡಿ ಬೆಳಗೆರೆ ಬುಕ್ಸ್ & ಕಾಫಿ – BBC ಕೂಡ ಆರಂಭವಾಯಿತು. ಕಳೆದ ಮೂರು ದಿನಗಳಲ್ಲಿ ಇಲ್ಲಿ ಭರ್ಜರಿ ವಹಿವಾಟು ನಡೆದಿದೆ ಎಂದು ತಿಳಿದು ಬಂದಿದೆ. ಗಣ್ಯರ ಶುಭಾಶಯಗಳ ವಿಡಿಯೋ, ಕಾಫಿಗಳ ನಡುವೆ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಲೇಖಕರ ಪುಸ್ತಕಗಳು ಮಾರಾಟಕ್ಕಿವೆ. ಪ್ರತಾಪರ ಮೈನಿಂಗ್ ಮಾಫಿಯಾ ಮಾತ್ರ ಅಲ್ಲಿ ಕಾಣಿಸಲಿಲ್ಲ. ಪ್ರತಿದಿನ ಇಲ್ಲ್ಲಿ ಬನ್ನಿ, ನನ್ನ ಜೊತೆ ಹರಟಿ ಎಂತ ಹೇಳಿದ ರವಿ ಮೊದಲ ದಿನ ಮಾತ್ರ ಅಲ್ಲಿ ಕಾಣಿಸಿದ್ದಾರೆ.
ಅದರ ಜೊತೆ ravibelagere.com ಮೂಲಕ ಅಂತರ್ಜಾಲಕ್ಕೂ ಬೆಳಗೆರೆ ಪಾದಾರ್ಪಣೆಯಾಗಿದೆ. ಹಲವು ವಿಷಯಗಳಲ್ಲಿ ಇದು vbhat.in ಹೋಲುತ್ತಾದರೂ ಇನ್ನು ಮುಂದೆ ಪ್ರತಿದಿನ ಸೈಟ್ ಅಪ್ಡೇಟ್ ಆಗಲಿದೆ, ಇನ್ನು ಯಾವಾಗಲೂ ಇಲ್ಲಿ ಸಿಗುತ್ತೇನೆ ಎಂಬ ಒಕ್ಕಣೆ ಕಾಣಿಸಲಿಲ್ಲ! ಪುಸ್ತಕದಂಗಡಿ ಆರಂಭವಾಗಲಿದೆ, ಪುಸ್ತಕ ಬಿಡುಗಡೆಯಾಗಲಿದೆ ಎಂಬಂತಹ ವಾಕ್ಯಗಳನ್ನು ಮಾತ್ರ ಕಾಣಬಹುದು. ನೀವೂ ಬನ್ನಿ ಎಂಬ ಆಹ್ವಾನವೂ ಇರುವ ಈ ತಾಣದ ಆರಂಭ ಅದೇ ಕಾರ್ಯಕ್ರಮದಲ್ಲಿ ಆಗಿದೆ. ತಾಣದ ಎಲ್ಲ ಪುಟಗಳೂ html ಹಾಳೆಗಳನ್ನು ಹೈಪರ್ಲಿಂಕುಗಳ ಮೂಲಕ ಜೋಡಿಸುವ ಹಳೆಯ ತಂತ್ರಜ್ಞಾನದಲ್ಲಿದೆ. ಇದನ್ನು ಪ್ರತಿದಿನ ಅಪ್ಡೇಟ್ ಮಾಡುವುದು ಬಹಳ ಕಷ್ಟ. ವಿಭಟ್.ಇನ್ ತಾಣದೊಳಗೆ wordpress ಎಂಬ ನಿರ್ವಹಣಾ ವ್ಯವಸ್ಥೆಯಿದ್ದು ಸುಲಭವಾಗಿ ಲೇಖನಗಳನ್ನು ಸೇರಿಸಬಹುದು. ಹಾಗಾಗಿ ಹೆಚ್ಚಿನ ನಿರೀಕ್ಷೆ ಸಧ್ಯಕ್ಕಂತೂ ಬೇಡ.
ಅಂದ ಹಾಗೆ ಈ ಬ್ಲಾಗ್ ಶೀರ್ಷಿಕೆ ಅವರ ತಾಣದಿಂದಲೇ ಕದ್ದೆ!
* * * * * * * *






ಈ ರವಿ ಬೆಳೆಗೆರೆ ಮತ್ತು ಆ ವಿ.ಭಟ್, ಇಬ್ಬರೂ ಸಧ್ಯಕ್ಕೆ ಕನ್ನಡ ಪತ್ರಿಕೋದ್ಯಮಕ್ಕೆ ಹಿಡಿದ ವ್ಯಾಧಿಗಳು!. ಮತ್ತೊಂದು ಹೋಲಿಕೆ ಬೇಕೆಂದರೆ ರಾಜಕೀಯದ ವ್ಯಾಧಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ .
ಬಸವಯ್ಯನವರ ಮಾತು ಸಂಪೂರ್ಣ ಸತ್ಯ. ಹಣ ಮತ್ತು ಜನಪ್ರಿಯತೆಯ ದಾಹಕ್ಕೆ ಪತ್ರಿಕೋದ್ಯಮವನ್ನೆ ಒತ್ತೆಯಿಟ್ಟುಬಿಟ್ಟಿದ್ದಾರೆ ಇವರೀರ್ವರು. ಹಣ ಎಂತಹವರನ್ನೂ ಶತ್ರುಗಳನ್ನಾಗಿಸುತ್ತೆ ಎನ್ನುವುದಕ್ಕೆ ಇವರಿಬ್ಬರೆ ಜೀವಂತ ಉದಾಹರಣೆ.
ಬಸವಯ್ಯ ಮತ್ತು ಗಿರೀಶ್ ಅವರಿಗೆ — ವಿಶ್ವೇಶ್ವರ ಭಟ್ ಅವರು ಜಡ್ಡು ಗಟ್ಟಿ ಹೋಗಿದ್ದ ಪತ್ರಿಕೋದ್ಯಮಕ್ಕೆ , ಅದರ ಭಾಷೆಗೆ, ವಿನ್ಯಾಸಕ್ಕೆ,ಅಂಕಣಗಳಿಗೆ ಹೊಸತನ ತಂದವರು . ಈಗ ತಾವು ಅವರು ಬಿಟ್ಟು ಬಂದ ಪತ್ರಿಕೆಯನ್ನು ಒಮ್ಮೆ ಗಮನಿಸಿ. ಅವರು ಆ ಪತ್ರಿಕೆಯಲ್ಲಿದ್ದಾಗ ಅದಕ್ಕೆ ಇದ್ದ ಜೀವಕಳೆ ಈಗಿಲ್ಲ. ಇನ್ನು ರವಿ ಬೆಳೆಗೆರೆ ಅವರ ಪತ್ರಿಕೆಯ ಕೆಲವು ನಿಲುವು ಮತ್ತು ವಿಚಾರಗಳ ಬಗ್ಗೆ ಸಹಮತ ಹೊಂದುವುದು ಸಾಧ್ಯವಿರದೇ ಇರಬಹುದು. ಆದರೆ ಅವರ ಪುಸ್ತಕಗಳನ್ನು ಅಷ್ಟು ಸುಲಭವಾಗಿ ನಿರಾಕರಿಸಲು ಸಾಧ್ಯವಿಲ್ಲ. ಅದರಲ್ಲಿ ಅವರು ಹೊಂದಿರುವ ಭಾಷೆಯ ಮೇಲಿನ ಹಿಡಿತ ,ಯಾವುದೇ ವಿಷಯವಿರಲಿ ಅದನ್ನು ಓದುಗನ ಮನಸ್ಸಿಗೆ ಮುಟ್ಟಿಸುವ ರೀತಿಯನ್ನು ಗಮನಿಸಬೇಕು. ಆ ಪುಸ್ತಕಗಳಲ್ಲಿನ ಅಭಿಪ್ರಾಯವನ್ನು ಒಪ್ಪುವುದು ಬಿಡುವುದು ನಂತರದ ಪ್ರಶ್ನೆ.