ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 14, 2012

3

ಪ್ರೇಮಿಗಳ ದಿನಕ್ಕೆ ಎರಡು ಪತ್ರಗಳು

‍parupattedara ಮೂಲಕ

-ಮೋಹನ್ ಕೊಳ್ಳೇಗಾಲ

ಪ್ರೀತಿಯ ಮಗಳೇ…

ಯಾಕೋ ಮನಸ್ಸಿಗೆ ಕಿಂಚಿತ್ತೂ ಸಮಧಾನವಿಲ್ಲ. ನಿನ್ನೆಯಿಂದಲೂ ತುಂಬಾ ಜ್ವರ ಇದೆ. ದೇಹ ಒಂದೇ ಸಮನೆ ಕಂಪಿಸುತ್ತಿದೆ. ನಿನ್ನದೇ ನೆನಪು. ಈ ಮನೆಯ ಪ್ರತಿ ಆಟಿಕೆ ಸಾಮಾನುಗಳು ನಿನ್ನ ಮುಖ ತೋರುತ್ತಿವೆ. ಪ್ರತೀ ವಸ್ತುವಿನಲ್ಲೂ ನಿನ್ನ ಆಸೆ, ಕಾತುರ, ಜಿಪುಣತನವೆದ್ದು ಕಾಣುತ್ತಿದೆ. ‘ನಿನ್ನ ಭಾವಚಿತ್ರ ನೋಡಿದಾಗ ದುಖ ಉಮ್ಮಳಿಸಿ ಉಮ್ಮಳಿಸಿ ಬಂದು ಸಾಂತ್ವನದ ಶಕ್ತಿ ಇಲ್ಲದೇ, ಕಣ್ಣೀರ ಕಟ್ಟೆ ಒಡೆದು ಸುಮ್ಮನೇ ಅಳುತ್ತೇನೆ. ನಿನ್ನೆ ಅಪ್ಪ ನಿನ್ನ ಬಾಲ್ಯದ ತುಂಟು ಹಾವಭಾವಗಳ ಫೋಟೋಗಳನ್ನು ನೋಡಿಕೊಂಡು ಅಳುತ್ತಿದ್ದರು. ನೀನು ಕಿಸಕ್ಕೆಂದು ನಕ್ಕಿದ್ದ ಒಂದು ಫೋಟೋ ನೋಡಿಕೊಂಡು ನಕ್ಕು ನಕ್ಕು ಕಣ್ಣೀರು ಸುರಿಸುತ್ತಿದ್ದರು. ನನ್ನ ಮಗಳಷ್ಟು ಚಂದ ಯಾರೂ ಇಲ್ಲ, ಅವಳ ನಗುವಿಗೆ ಸಾಟಿಯೇ ಇಲ್ಲ, ಅವಳ ಮಧುರ ಒಡನಾಡದಲ್ಲಿಯೇ ನಾನು ಇಷ್ಟು ದಿನ ಬದುಕಿದ್ದೆ ಎಂದು ಪೇಚುತ್ತಿದ್ದರು. ಇತ್ತೀಚೆಗಂತೂ ಕುಡಿತ, ಸಿಗರೇಟ್ ಸೇವನೆ ಜಾಸ್ತಿಯಾಗಿದೆ. ಪ್ರಶ್ನೆ ಮಾಡಲು ನೀನೇನು ನನ್ನ ಮಗಳೇ ಎಂದು ನನ್ನ ಮೇಲೆಯೇ ರೇಗುತ್ತಾರೆ. ಒಮ್ಮೊಮ್ಮೆ ನನ್ನ ತೊಡೆಯ ಮೇಲೆ ಮಲಗಿಕೊಂಡು, ನಿನ್ನನ್ನು ಓದಿಸಲು ಅವರು ಪಟ್ಟ ಶ್ರಮ, ಬ್ಯಾಂಕ್ ಲೋನ್, ನಿನ್ನನ್ನು ದೂರದ ಕಾಲೇಜಿಗೆ ಸೇರಿಸುವಾಗ ಅನುಭವಿಸಿದ ಒಳನೋವು, ಜೊತೆಗೆ ಆ ಕಾಲೇಜಿನಲ್ಲಿ ನಿನಗಾಗಿದ್ದ ತೊಂದರೆಗೆ ಪ್ರಾಚಾರ್ಯರೊಡನೆ ರೇಗಿದ್ದು, ಕಾರ್ ಮಾಡಿಕೊಂಡು ಬಂಧುಬಳಗವನ್ನೆಲ್ಲ ಕೂಡಿಸಿಕೊಂಡು ನಿನ್ನನ್ನು ನೋಡಲು ಪರಿಸೆ ಕಟ್ಟಿಕೊಂಡು ಬಂದಿದ್ದು, ಎಲ್ಲವನ್ನೂ ಸಾವಧಾನವಾಗಿ ಹೇಳಿ ನಿರಾಳರಾಗಿ, ಒಮ್ಮೆ ಬದುಕಿನ ಬೇಜವಾಬ್ದಾರಿಯೆಡೆಗೆ ನಗುತ್ತಾರೆ.

ಅವರೂ ನಿನ್ನನ್ನು ಬೆಳೆಸಲು ತುಂಬಾ ಕಷ್ಟ ಪಟ್ಟಿದ್ದಾರೆ ಮಗಳೆ. ನಿನಗೂ ನಿನ್ನಕ್ಕನಿಗು ಪ್ರತಿದಿನ ಸ್ನಾನ ಮಾಡಿಸಿ, ಶೃಂಗಾರ ಮಾಡಿ, ಕೂದಲು ಬಾಚಿ ಜಡೆ ಎಣೆದು, ಬೊಟ್ಟಿಕ್ಕಿ, ತಿಂಡಿ ತಿನ್ನಿಸಿ ಅವಸರದಲ್ಲಿ ಅವರೂ ಸಿದ್ಧವಾಗಿ ನಿನ್ನನ್ನು, ಅಕ್ಕನನ್ನು ಶಾಲೆಗೆ ಬಿಟ್ಟ ನಂತರವೇ ತಮ್ಮ ಕಛೇರಿ ಕಾರ್ಯಕ್ಕೆ ಹೋಗುತ್ತಿದ್ದರು. ಶಂಕರಪ್ಪನ ಅಂಗಡಿಗೆ ದಿನಸಿ ತರಲು ಹೋದರಂತೂ ನಿನ್ನನ್ನು ಕೂಸುಮರಿ ಮಾಡಿ ಹೊತ್ತುಕೊಂಡು ಹೋಗುತ್ತಿದ್ದರು. ಬೀದಿಯ ಜನಗಳು ಇಷ್ಟು ದೊಡ್ಡ ಮಗಳನ್ನು ನಡೆಯಲು ಬಿಡವಾರದೇ ಎಂದರೆ ಮುಖಕ್ಕೆ ರಾಚುವಂತೆ ಬೈದುಬಿಡುತ್ತಿದ್ದರು. ನಿನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಸಹ ನಿನ್ನನ್ನು ಎದೆಗಪ್ಪಿಕೊಂಡು ಆಸ್ಪತ್ರೆಗೆ ಓಡುತ್ತಿದ್ದರು. ನೀನು ಓದಿನಲ್ಲಿ ಶಾಲೆಗೇ ಪ್ರಥಮ ಎಂದು ಒಮ್ಮೆ ತಿಳಿದಾಗ ಸಂತಸದ ಅಲೆಯಲ್ಲಿ ತೇಲಿ ಮಗುವಿನಂತೆ ಕುಣಿದಿದ್ದರು. ಅಪ್ಪನ ಜೊತೆ ನಾಚಿ ನಾನೂ ಕುಣಿದಿದ್ದೆ. ಸ್ಕೂಲ್ ಡೇ ನಲ್ಲಿ ನೀನು ಡ್ಯಾನ್ಸ್ ಮಾಡುವಾಗ ‘ನನ್ನ ಮಗಳು ಕಣೇ, ನನ್ನ ಮಗಳು’ ಎಂದು ಷರ್ಟಿನ ಕಾಲರ್ ಮೇಲಕ್ಕೆತ್ತಿಕೊಳ್ಳುತ್ತಿದ್ದರು. ಅಕ್ಕಪಕ್ಕದವರಿಗೆಲ್ಲ ‘ಅವಳು ನನ್ನ ಮಗಳು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಫೋಟೋ ತೆಗೆದವನ ಬಳಿ ಹೋಗಿ ಆ ರೀತಿ ತೆಗೆ ಈ ರೀತಿ ತೆಗೆ ಎಂದು ಸುಮ್ಮನೆ ಉಪದ್ರ ಕೊಡುತ್ತಿದ್ದರು.

ನಿನ್ನನ್ನು ಪ್ರತಿಹಂತದಲ್ಲೂ ಜೋಪಾನವಾಗಿ ನೋಡಿಕೊಂಡೆ ಮಗಳೆ. ಅದ್ಯಾವನೋ ಅವನ ಜೊತೆ ಓಡಿಹೋಗುವಾಗ ಈ ನಿನ್ನ ಹೆತ್ತವರು ಕಾಣಲಿಲ್ಲವೇ?? ನಿನ್ನನ್ನು ಹೆತ್ತ ತಪ್ಪಿಗೋ ಏನೋ, ನಿನ್ನನ್ನು ಮರೆಯಲಾಗದೆ, ನೆನಪಿಸಿಕೊಳ್ಳಲೂ ಆಗದೇ ಸತ್ತು ಬದುಕುತ್ತಿದ್ದೇವೆ. ನೀನು ಹೊಟ್ಟೆಯಲ್ಲಿದ್ದಾಗ, ಡಾಕ್ಟರ್ ಮಗು ಉಳಿಯುವುದು ಸಂದೇಶಹವಿದೆ, ಕೂಡಲೇ ಆಪರೇಷನ್ ಮಾಡಿಸಿ ಎಂದಾಗ, ನಿನಗಾಗಿ ನನ್ನ ಹೊಟ್ಟೆಯನ್ನು ಕುಯ್ಯಿಸಿಕೊಂಡು ತಪ್ಪು ಮಾಡಿಬಿಟ್ಟೆ. ನಿನ್ನನ್ನು ಹೆತ್ತು ನಿನ್ನ ಹೇಸಿಗೆ ತೊಳೆದು ಕಷ್ಟಪಟ್ಟು ಬೆಳೆಸಿದ್ದಕ್ಕೆ ನೀನು ಕೊಟ್ಟ ಉಡುಗೊರೆ ಮರೆಯಲು ಸಾಧ್ಯವಿಲ್ಲ. ನಿನ್ನನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ನೋಡಿಕೊಂಡ ನನ್ನ ಗಂಡನನ್ನು ನುಂಗುವ ಹಂತಕ್ಕೆ ಬಂದುಬಿಟ್ಟೆ. ಅರೆಗಳಿಗೆ ಬೀದಿಯಲ್ಲಿ ತಲೆಯೆತ್ತಿ ನಡೆಯಲಾಗುತ್ತಿಲ್ಲ, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಒಬ್ಬರೊಡನೆ ಮುಖಕೊಟ್ಟು ಮಾತನಾಡಲಾಗುವುದಿಲ್ಲ. ಕೆಲವರಂತು ನಿಮ್ಮ ಮಗಳು ಈಗ ಎಲ್ಲಿದ್ದಾಳೆ, ಏನು ಮಾಡುತ್ತಿದ್ದಾಳೆ ಎನ್ನುವಷ್ಟರಲ್ಲಿಯೇ ಮತ್ಯಾರೋ ಬಂದು ಅವಳು ಕಳೆದ ತಿಂಗಳು ಅದ್ಯಾವನೋ ಅವನ ಜೊತೆ ಓಡಿ ಹೋಗಿದ್ದಾಳೆ ಎಂದು ವ್ಯಂಗ್ಯ ಮಾಡುತ್ತಾರೆ. ಯಾರ ಹಂಗಿಗೂ ತಲೆ ಬಾಗದೇ ಹೆಮ್ಮೆಯ ಜೀವನ ನಡೆಸಿದ ನನ್ನ ಗಂಡನನ್ನು ಆಡಿಕೊಂಡು ನಗುವವರು ಬೀದಿಯಲ್ಲೆಲ್ಲಾ ಸಿಗುವಂತಾಯಿತು. ಆದರೂ ನಿನ್ನಪ್ಪ ನನ್ನ ಮಗಳು ರಾಣಿಯಂತೆ ಇರುತ್ತಾಳೆ ಹೋಗ್ರೋಲೋ ಎಂದು ರೇಗಿ ಬರುತ್ತಾರೆ. ನೀನೇನೋ ಯಾರದೋ ಅಪ್ಪುಗೆಯರಸಿ ಹೊರಟುಬಿಟ್ಟೆ. ಮುದಿ ಕಾಲದಲ್ಲಿ ನಮ್ಮನ್ನು ನೋಡಿಕೊಳ್ಳುವವರ್ಯಾರು? ಆಳೆತ್ತರದ ಕನ್ನಡಿಯಂತೆ ನಮ್ಮ ಮನಸ್ಸುಗಳು ಒಡೆದುಜಹೋದವು. ಸಾವೇ ಜೀವನದ ಗುರಿ ಎಂಬುದು ಕೊನೆಗೂ ಸತ್ಯವಾಗುತ್ತಾ ಬರುತ್ತಿದೆ. ನಿನ್ನಿಂದ ನಮಗೆ ಬಳುವಳಿಯಾಗಿ ಎಷ್ಟೇ ಕಷ್ಟ ಬಂದರೂ ನಿನ್ನ ಹೆತ್ತವರು ದೇವರಲ್ಲಿ ಬೇಡಿಕೊಳ್ಳುವುದಿಷ್ಟೆ. ‘ನೀನು ಎಲ್ಲೇ ಇರು ಮಗಳೆ, ಸಂತಸದಿಂದಿರು, ನಿನ್ನ ಗಂಡನ ಜೊತೆ ನಗು ನಗುತ್ತಾ ಬಾಳುವ ಕಾಲವು ಪ್ರತಿದಿನ ತುಂಬಿ ಬರಲಿ.’

ಪ್ರೀತಿಯ ಅಮ್ಮ…

ಮೊದಲಿಗೆ ನಿಮ್ಮಿಬ್ಬರ ಆಶೀರ್ವಾದವನ್ನು ಬೇಡುತ್ತೇನೆ. ನಿನ್ನ ದುಃಖ ನನ್ನ ಅವಗಾಹನೆಗೆ ಬಂದು ನಾನೂ ಕೂಡ ಅಳುತ್ತಿದ್ದೇನೆ. ಭಾವನೆಗಳ ಭಾವುಕ ಪ್ರಪಂಚದಲ್ಲಿ ನಾವೆಲ್ಲಾ ಬದುಕುತ್ತಿರುವುದೇ ಪಾಪವಾಗಿದೆ. ಒಂದಷ್ಟು ಗೋಡೆಗಳನ್ನು ನಾವೇ ಕಟ್ಟಿಕೊಂಡು, ಉರುಳಿಸಲಾಗದೇ ದಾಟಲೂ ಆಗದೇ ಎಡತಾಕುತ್ತಿರುವುದು ವಿಪರ್ಯಾಸವೇ ಸರಿ. ನಾಯಿಗಳಿಗೆ ಮಾಂಸಕ್ಕಿಂತ ಎಲುಬೇ ರುಚಿಯಾದಂತಾಗಿದೆ ಮನುಷ್ಯರ ಬದುಕು. ನಿಮ್ಮನ್ನು ಅರೆಕ್ಷಣ ಬಿಟ್ಟಿರುವ ಶಕ್ತಿ ನನಗೂ ಇಲ್ಲ. ಆದರೆ ಒಂದು ಮಾತು. ಮುದ್ದು ಗಿಳಿಯಂತೆ ನನ್ನನ್ನು ಸಾಕಿದ ನೀವು ಹದ್ದಿನ ಬಾಯಿಗೆ ಇಡಲು ಇಷ್ಟಪಟ್ಟಿದ್ದು ಎಷ್ಟು ಸರಿ?? ನನ್ನ ಮನಸ್ಸನ್ನು ಅರ್ಥೈಸಿಕೊಳ್ಳುವ ಮಟ್ಟ ನಿಮ್ಮಲ್ಲಿ ನಾನು ಕಾಣಲೇ ಇಲ್ಲ. ಕಾಲು ಹಿಡಿದು ಬೇಡಿಕೊಂಡರೂ ನನ್ನೊಳಿನ ಸುಪ್ತ ಭಾವನೆಯೊಂದನ್ನು ಅರಸುವ ತಾಳ್ಮೆ ನೀವು ಬೆಳೆಸಿಕೊಳ್ಳಲಿಲ್ಲ. ನಾನು ಪ್ರೀತಿ ಮಾಡಬಾರದಾಗಿತ್ತು ಎನಿಸಿದ್ದು ನೀವೆಲ್ಲ ನನ್ನನ್ನು ವಿರೋಧಿಸಿದಾಗ. ಕಾಲ ಮಿಂಚಿತ್ತು. ಹೆಚ್ಚಾಗಿ. ಮ್… ನನಗೆ ವಿವರಿಸಲು ಬರುವುದಿಲ್ಲ. ನಾನು ಅವರನ್ನು ಪ್ರೀತಿಸಲು ನನ್ನೊಳಗಿದ್ದ ಯಾವುದೋ ನವಿರು ಭಾವನೆ ಮತ್ತು ಆತನ ಒಳ್ಳೆಯತನ ಮತ್ತು ಮುಗ್ದತೆ ಕಾರಣವಷ್ಟೆ. ಆ ಸಮಯದಲ್ಲಿ ನನ್ನನ್ನು ನಾನು ತಡೆಯಲಾಗಲಿಲ್ಲ. ಅವನ ಸದ್ಗುಣಗಳನ್ನು ನಿಮಗೆ ಬಿಡಿಸಿ ಬಿಡಿಸಿ ಹೇಳಿದ್ದೆ. ನಿನ್ನನ್ನು ಮತ್ತು ನಿಮ್ಮ ಅಪ್ಪ ಅಮ್ಮನನ್ನು ಮಹಾರಾಜ, ರಾಣಿಯಂತೆ ನೋಡಿಕೊಳ್ಳುತ್ತೇನೆಂದು ನನ್ನ ಗಂಡ ಸಾವಿರ ಸಾವಿರ ಬಾರಿ ಹೇಳಿದ್ದ. ಈ ಯಾವತ್ತೂ ವಿಚಾರಗಳು ನಿಮ್ಮ ಮೆದುಳಿಗೆ ನಿಲುಕಲಿಲ್ಲ. ನಿಮಗೆ ನೆರೆಹೊರೆಯವರು ಮತ್ತು ಹಾಳಾದ ಜಾತಿ, ಅಂತಸ್ತೇ ಮುಖ್ಯವಾಗಿಹೋಯಿತು. ಅವರು ಆ ರೀತಿ ಅನ್ನಬಹುದು, ಇವರು ಹೀಗೆ ಎಂದು ನನ್ನನ್ನು ಯಾರೋ ಇಷ್ಟ ಇಲ್ಲದವನಿಗೆ ಧಾರೆ ಎರೆಯಲು ತುದಿಗಾಲಿನಲ್ಲಿ ನಿಂತುಬಿಟ್ಟಿರಿ. ಅದೂ ನನ್ನ ಸಾವನ್ನೂ ಲೆಕ್ಕಿಸದೆ! ಹೀಗೆ ಬಲವಂತಕ್ಕೆ ಮದುವೆಯ”ಾದವರು ಎಷ್ಟು ಜನ ಸುಖದಿಂದ್ದಾರೆ ಎಂದು ನೀವೇ ಹೇಳಿ. ಹೀಗೆ ಮಾಡಿ ಆ ರೀತಿ ಆಗಿಹೋಯಿತಲ್ಲ ಎಂದು ಕೊರಗುವುದು ಇದ್ದೇ ಇದೆ. ಅದಕ್ಕಿಂತ ಇದೇ ಎಷ್ಟೋ ವಾಸಿ ಎಂಬುದು ನನ್ನ ಭಾವನೆ. ಇಷ್ಟ ಇಲ್ಲದವರ ಜೊತೆ ನೂರು ವರ್ಷ ಬದುಕಿದರೂ, ಹಚ್ಚಿಕೊಂಡವರ ಜೊತೆಗಿನ ಮೂರು ದಿನದ ಒಡನಾಟಕ್ಕೆ ಸಮವಲ್ಲ. ಸಾಯುವ ಕ್ಷಣದಲ್ಲಿ ಮತ್ತೊಬ್ಬರ ಸಂತಸವೇ ನಮಗೆ ನೆಮ್ಮದಿ ತರುವುದು.

ನಾನೆಂದೂ ನಿಮ್ಮ ಮಗಳೆ. ನಿಮ್ಮಂತೆ ಸಮಾಜಕ್ಕೆ ಹೆದರಿ ಬಾಳುವ ಜಾಯಮಾನ ನನ್ನದಲ್ಲ. ಕೂಡಲೇ ನಿಮ್ಮನ್ನು ನನ್ನೆಡೆಗೆ ಕರೆದುಕೊಂಡುಬಂದು ಸುಖದ ಸಪ್ಪತ್ತಿಗೆಯಲ್ಲಿ ಇರಿಸಿಕೊಳ್ಳುತ್ತೇನೆ. ನಿಮ್ಮ ಮುದ್ದು ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡಿರುವುದಷ್ಟೇ ನಿಮ್ಮ ಕೆಲಸ! ಅವರೂ ಅದನ್ನೇ ಪೇಚುತ್ತಿರುತ್ತಾರೆ
ಪ್ಲೀಸ್ ಬನ್ನಿ….

* * * * * * * * * *

ಚಿತ್ರಕೃಪೆ : india-forums.com

 

3 ಟಿಪ್ಪಣಿಗಳು Post a comment
  1. ರಾಕೇಶ್ ಶೆಟ್ಟಿ's avatar
    ಫೆಬ್ರ 14 2012

    ತಂದೆ-ತಾಯಿ-ಮಕ್ಕಳು ಎಲ್ಲರು ಮುಕ್ತ ಮನಸ್ಸಿನಿಂದ ಯೋಚಿಸಬೇಕಾದ ವಿಷಯವಿದು…ಹಠಕ್ಕೆ ಬಿದ್ದರೇ ಬಾಳು ಹಾಳು… ಬಹಳ ಚೆನ್ನಾಗಿ ಬರೆದಿದ್ದೀರಿ ಮೋಹನ್ ಅಭಿನಂದನೆಗಳು:)

    ಉತ್ತರ
  2. satish d.r's avatar
    satish d.r
    ಫೆಬ್ರ 15 2012

    ಮೋಹನ್ ನಿಮ್ಮ ಮೊದಲ ಪತ್ರವನ್ನು ಓದುತಿದ್ದ ಹಾಗೆ ಕಣ್ಣು ತೇವವಾಯಿತು. ಮಕ್ಕಳುಗಳ ಅಭ್ಯುದಯಕ್ಕೆ ಪೋಷಕರು ಹೇಗೆ ಕೆಲವೊಮ್ಮೆ ತಮ್ಮ ಸುಖ ಸಂತೋಷಗಳನ್ನು ಮೂಟೆ ಕಟ್ಟಿ, ಮಕ್ಕಳ ಲಾಲನೆ ಪಾಲನೆಗಾಗಿಯೇ ತಮ್ಮ ಜೀವನವನ್ನು ತೇಯುತ್ತಾರೆ. ಬದುಕುತ್ತಾರೆ ಕೂಡ. ಕೆಲವೊಮ್ಮೆ ಪೋಷಕರ ಅತಿಯಾದ ಪ್ರೀತಿ ಸ್ವಾರ್ಥಕ್ಕೆ ಕಾರಣವಾಗುತ್ತದೆ. ಸಂಕುಚಿತತೆಗೆ ಎಡೆಮಾಡಿಕೊಡುತ್ತದೆ. ತಮ್ಮ ಮಾತುಗಳಿಗೆ ಮಾತ್ರ ಮನ್ನಣೆಯನ್ನು ಬಯಸುತ್ತಾರೆಯೇ ಹೊರತು, ಮಕ್ಕಳ ಭಾವನೆಯನ್ನು ಗೌರವಿಸುವುದಿರಲಿ, ವಿವೇಚಿಸುವುದಿಲ್ಲ. ಹಠಕ್ಕೆ ಬೀಳುತ್ತಾರೆ. ವಿವೇಚನೆ ಕಳೆದುಕೊಳ್ಳುತ್ತಾರೆ. ಹಾಗೆಯೆ ಮಕ್ಕಳು ಸಹ. ಪ್ರೀತಿ ಆಕರ್ಷಣೆಯ ಹೆಸರಲ್ಲಿ ಮುಂದಿನ ಭವಿಷ್ಯವನ್ನು ಮರೆತು ಮೋಹಕ್ಕೆ ಬೀಳುತ್ತಾರೆ. ಅದು ಪ್ರೇಮವಲ್ಲ ಕೇವಲ ಆಕರ್ಷಣೆ ಎಂದು ತಿಳಿಯುವಷ್ಟ ರಲ್ಲಿ ಕಾಲ ಮಿಂಚಿಹೋಗಿರುತ್ತದೆ. ಆದ್ದರಿಂದ ಆಯ್ಕೆಯಲ್ಲಿ ಎಚ್ಚರಿಕೆಯಿರಬೇಕು. ಯೋಗ್ಯತೆಯೂ ಇರಬೇಕು. ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಆಗ ಯಾರ ಭಾವನೆಗಳಿಗೂ ಧಕ್ಕೆಯಾಗುವುದಿಲ್ಲ. ಮೋಹನ್ ನಿಮ್ಮ ಸುಂದರ ಸರಳ ನಿರೂಪಣೆಯ ಕಥೆ ಇಷ್ಟವಾಯಿತು.

    ಉತ್ತರ
  3. Mohan V Kollegal's avatar
    Mohan V Kollegal
    ಫೆಬ್ರ 16 2012

    ಧನ್ಯವಾದಗಳು ರಾಕೇಶ್ ಶೆಟ್ಟಿ ಮತ್ತು ಸತೀಶ್ ರವರೆ….

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments