ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 18, 2012

3

ಹಾಳು ರಾಜಕೀಯ ಸಾಕು… ದಕ್ಷ ಲೋಕಾಯುಕ್ತರು ಬೇಕು…

‍ನಿಲುಮೆ ಮೂಲಕ

-ನಿಲುಮೆ

ಆ ತಾಯಿ ಅಂದು ತನ್ನ ಮಗುವನ್ನು ಬದುಕಿಸಿಕೊಡು ಅಂದಾಗ, ‘ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ನಿನ್ನ ಮಗನನ್ನು ಬದುಕಿಸುತ್ತೇನೆ’ ಅಂದಿದ್ದ ಬುದ್ಧ. ಬಹುಷಃ ಇಂದಿಗೆ ಆ ತಾಯಿ ಬಂದು ಕೇಳಿದ್ದರೆ ’ಭ್ರಷ್ಟಾಚಾರವಿಲ್ಲದ ಭಾರತದ ಪಕ್ಷವೊಂದರ ಹೆಸರು ಹೇಳಿಬಿಡು ಬದುಕಿಸಿಬಿಡುತ್ತೇನೆ’ ಅನ್ನುತಿದ್ದನೋ ಏನೋ…? ಇಂಥ ಪಕ್ಷಗಳನ್ನು, ಕರ್ನಾಟಕಕ್ಕೊಬ್ಬ ‘ದಕ್ಷ ಲೋಕಾಯುಕ್ತರ’ ನೇಮಕ ಮಾಡಿ ಅಂತ ಕೇಳಬೇಕಾಗಿದೆ…!

ಕಳೆದ ಆಗಸ್ಟಿನವರೆಗೂ ಕರ್ನಾಟಕ ಲೋಕಾಯುಕ್ತದ ಬಗ್ಗೆ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತಿತ್ತು. ಈಗಲೂ ಆಗುತ್ತಿದೆ.ಆದರೆ ಸುದ್ದಿಯಾಗುತ್ತಿರುವ ವಿಷಯ,ಕಾಲ,ಕಾರಣಗಳು ಬದಲಾಗಿದೆ…!

ಲೋಕಾಯುಕ್ತ ಅನ್ನುವ ಸಂಸ್ಥೆಯೊಂದಿದೆ ಅನ್ನುವುದು ಕರ್ನಾಟಕದ ಜನತೆಗೆ ತಿಳಿದಿದ್ದೆ ನ್ಯಾ.ವೆಂಕಟಾಚಲ ಅವರು ಕ್ಯಾಮೆರಾ ಸಮೇತ ಭ್ರಷ್ಟರ ಹಿಡಿದು, ಅದೇ ಕ್ಯಾಮೆರಾ ಮುಂದೆ ಅವರಿಗೆ ಹಿಗ್ಗಾ-ಮುಗ್ಗಾ ಬೈಯ್ಯುವಾಗಲೇ. ಅವರು ಬೈಯ್ಯುವುದನ್ನೂ ಆ ಪುಡಿ ಕಳ್ಳರು ಅವರಿಂದ ಉಗಿಸಿಕೊಳ್ಳುವುದನ್ನು ನೋಡುವುದೇ ಒಂಥರ ಧಾರಾವಾಹಿಯಾಗಿತ್ತು ಆಗ. ಕಡೆಗೆ ವೆಂಕಟಾಚಲರ ಅವಧಿ ಮುಗಿಯಿತು. ಇನ್ಯಾರು ಬರುತ್ತಾರೋ ಅನ್ನುವ ಕುತೂಹಲದ ನಡುವೆ ಬಂದವರು ನ್ಯಾ.ಸಂತೋಷ್ ಹೆಗ್ಡೆ.

ಲೋಕಾಯುಕ್ತರು ಏನು ಮಾಡಬಲ್ಲರು ಅಂತ ದೇಶದ ಜನತೆಗೆ ಗೊತ್ತಾಗಿದ್ದು ನ್ಯಾ.ಸಂತೋಷ್ ಹೆಗ್ಡೆಯವರು ಬಂದ ನಂತರವೇ. ಇಬ್ಬರ ವರ್ಕಿಂಗ್ ಶೈಲಿಯೂ ಬೇರೆ ಬೇರೆ ತರಹ. ಬರುತ್ತಲೇ ನನ್ನ ವರ್ಕಿಂಗ್ ಶೈಲಿ ಬೇರೆ ಅಂದವರು ಮೊದಲಿಗೆ ತಮ್ಮ ಆಸ್ತಿ ವಿವರ ಘೋಷಿಸಿಕೊಂಡರು. ವೆಂಕಟಾಚಲರ ಕಾಲದಲ್ಲಿ ಸರ್ಕಾರಿ ಅಧಿಕಾರಿಗಳು ಅವರ ಮೇಲೆ ಗರಂ ಆಗಿದ್ದರು. ಆದರೆ,ಹೆಗ್ಡೆಯವರ ಕಾಲದಲ್ಲಿ ರಾಜಕಾರಣಿಗಳು ಮೈ ಪರಚಿಕೊಳ್ಳುತಿದ್ದರು. ಶಾಸಕರ ಭವನದಲ್ಲಿ ಸಂಪಂಗಿಯನ್ನ ಹಿಡಿದಾಗ ಜನ ಬಹಳ ಖುಷಿ ಪಟ್ಟಿದ್ದರು. ಆಮೇಲೆ ಗಣಿ ಹಗರಣವೆದ್ದು ಕಡೆಗೆ ಹೆಗ್ಡೆಯವರು ರೋಸಿ ಹೋಗಿ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.  ಅಡ್ವಾಣಿಯವರ ಮಧ್ಯಸ್ಥಿಕೆ ಫಲವಾಗಿ ರಾಜಿನಾಮೆ ಹಿಂಪಡೆದರು. ಆ ನಂತರ ಗಣಿ ಹಗರಣದ ವರದಿ ಸಲ್ಲಿಸಿ ಯಡ್ಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಿದ್ದೆಲ್ಲ ಈಗ ಇತಿಹಾಸ. ಕರ್ನಾಟಕ ಲೋಕಾಯುಕ್ತದ ಸಂತೋಷದ ದಿನಗಳು ಹೆಗ್ಡೆಯವರ ಹಿಂದೆಯೇ ಹೋಗಿಬಿಟ್ಟಿತಾ?

ಹೆಗ್ಡೆಯವರ ನಂತರ ಶಿವರಾಜ್ ಪಾಟೀಲರು ಬಂದು ಹೋದರು.ಆನಂತರ ಶುರುವಾಗಿರುವುದೇ ಸರ್ಕಾರ-ರಾಜ್ಯಪಾಲರ ಹಗ್ಗ ಜಗ್ಗಾಟ.ಕಡೆಗೆ ಬನ್ನೂರುಮಠರೇ ಖುದ್ದು ಹಿಂದೆ ಸರಿಯುವವರೆಗೂ ಆ ಕಡೆ ವಿಧಾನಸೌಧವು ಬಗ್ಗಲಿಲ್ಲ ಈ ಕಡೆ ರಾಜಭವನವೂ ಕುಗ್ಗಲಿಲ್ಲ. ಈ ಹಾಳು ರಾಜಕೀಯದ ಹಗ್ಗ-ಜಗ್ಗಾಟಕ್ಕೆ ಕುಗ್ಗಿ ಹೋಗಿರುವುದು ನಾವು ಕರ್ನಾಟಕದ ಜನ. ಯಾವನಿಗ್ ಬೇಕ್ರಿ ಈ ಮೂರು(ಬಿಟ್ಟ!?) ರಾಜಕೀಯ ಪಕ್ಷಗಳ ಹಾಳು ಜಾತಿ ರಾಜಕೀಯ ಲೆಕ್ಕಾಚಾರಗಳು?

ನಮಗೆ ಬೇಕಿರುವುದು ಮಾನವ ಜಾತಿಯ ದಕ್ಷ ಲೋಕಾಯುಕ್ತರಷ್ಟೆ.

ಆರು ಕೋಟಿ ಜನರ ಈ ರಾಜ್ಯದಲ್ಲಿ ಒಬ್ಬನೇ ಒಬ್ಬ ಸರ್ವಸಮ್ಮತನಾಗಬಲ್ಲ ವ್ಯಕ್ತಿ ಇಲ್ಲ ಅಂತ ಹೇಳಬೇಡಿ ಮತ್ತೆ. ಈಗಾಗಲೇ ಬಟ್ಟೆ ಹರಿದುಕೊಂಡು, ಬಟ್ಟೆ ಬಿಚ್ಚಿದ್ದನ್ನು ನೋಡಿಕೊಂಡು ನಮ್ಮ ರಾಜ್ಯ ದೇಶದಲ್ಲೆಲ್ಲ (ಕೆಟ್ಟ) ಹೆಸರು ಮಾಡಿದೆ ಮತ್ತೆ ಆ ಲಿಸ್ಟಿಗೆ ಕರ್ನಾಟಕದಲ್ಲಿ ಸಜ್ಜನರಿಲ್ಲವಂತೆ ಅಂತ ದೇಶಕ್ಕೆ ದೇಶವೇ ಮಾತಾಡಿಕೊಂಡೀತು…

ನಿಮ್ಮ ಹಾಳು ಜಾತಿ ರಾಜಕೀಯಕ್ಕೆ ಬೆಂಕಿ ಬೀಳಲಿ…

ಗೆಳೆಯರೇ,
ಕರ್ನಾಟಕದ ನೆಮ್ಮದಿಯ ನಾಳೆಗಾಗಿ ನಮಗೊಬ್ಬ ದಕ್ಷ ಲೋಕಾಯುಕ್ತರು ಬೇಕೇ ಬೇಕು ಅನ್ನುವುದು ನಿಲುಮೆಯ ನಿಲುವು. ಹಾಳು ರಾಜಕೀಯ ಸಾಕು… ದಕ್ಷ ಲೋಕಾಯುಕ್ತರು ಬೇಕು… ಇದು ನಮ್ಮ ಘೋಷ ವಾಕ್ಯ.ಬನ್ನಿ ನಿಲುಮೆಯ ಈ ದನಿಗೆ ನೀವೂ ಜೊತೆಯಾಗಿ… ನಮ್ಮ ಕೂಗು ವಿಧಾನಸೌಧ-ರಾಜಭವನಕ್ಕೂ ತಲುಪಲಿ…

ನಮ್ಮ ಫೇಸ್ಬುಕ್ ಗುಂಫು:  ಹಾಳು ರಾಜಕೀಯ ಸಾಕು… ದಕ್ಷ ಲೋಕಾಯುಕ್ತರು ಬೇಕು…

**********

ಚಿತ್ರವಿನ್ಯಾಸ: ವಿಜಯ ಪೈ

Read more from ಲೇಖನಗಳು
3 ಟಿಪ್ಪಣಿಗಳು Post a comment
  1. Ananda Prasad's avatar
    Ananda Prasad
    ಫೆಬ್ರ 18 2012

    ಲೋಕಾಯುಕ್ತಕ್ಕೆ ದಕ್ಷ, ಪ್ರಾಮಾಣಿಕ, ನಿಷ್ಪಕ್ಷಪಾತ, ದೃಢ ನಿಲುವಿನ ವ್ಯಕ್ತಿ ನೇಮಕ ಆಗಬೇಕು. ಇಲ್ಲದೆ ಹೋದರೆ ಲೋಕಾಯುಕ್ತ ಸಂಸ್ಥೆ ದುರ್ಬಲವಾಗುತ್ತದೆ. ಆದರೆ ಇಂದು ನ್ಯಾಯಾಧೀಶರಲ್ಲೂ ಭ್ರಷ್ಟರಿದ್ದಾರೆ. ಹೀಗಾಗಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವಾಗ ಸರ್ಕಾರದ ಜೊತೆಗೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ, ವಿರೋಧ ಪಕ್ಷದ ನಾಯಕರಿಗೂ ಸಮ್ಮತವಾಗುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಆಯ್ಕೆಯಾಗುವ ವ್ಯಕ್ತಿಯ ಮೇಲೆ ಯಾವುದಾದರೂ ದೂರು, ಆರೋಪ ಇದ್ದರೆ ಅಂಥವರನ್ನು ಆಯ್ಕೆ ಮಾಡಲೇ ಬಾರದು. ರಾಜ್ಯ ಸರ್ಕಾರವು ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಇಬ್ಬರ ನೇಮಕದಲ್ಲೂ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಈ ಬಗ್ಗೆ ಮಾಧ್ಯಮಗಳು ದ್ವನಿ ಎತ್ತುತ್ತಾ ಇಲ್ಲ. ಬೇರೆ ಮಹತ್ವವಿಲ್ಲದ ವಿಷಯಗಳನ್ನು ಮಾಧ್ಯಮಗಳು ಹಿಡಿದುಕೊಂಡು ಇಡೀ ದಿನ ಎಳೆಯುತ್ತಿರುತ್ತವೆ. ಯಾವ ವಿಷಯಕ್ಕೆ ಪ್ರಾಧಾನ್ಯ ಕೊಡಬೇಕೋ ಅದಕ್ಕೆ ಕೊಡುತ್ತಾ ಇಲ್ಲ.

    ಉತ್ತರ
  2. padmanabha's avatar
    padmanabha
    ಫೆಬ್ರ 18 2012

    ಎರಡನೇ ಉಪಲಕಾಯುಕ್ತರ ಹುದ್ದೆ ಸೃಸ್ತಿಯಾದದ್ದೇ ಜಾತಿ ಲೆಕ್ಕಾಚಾರದಲ್ಲಿ.ಲೋಕಾಯುಕ್ತಕ್ಕೆ ಬೇಕಾಗಿರುವುದು ಒಬ್ಬ ಒಳ್ಳೆಯ ಕೋಕಾಯುಕ್ತ ಮತ್ತು ದೇಶಭಕ್ತ ಪ್ರಾಮಾಣಿಕ ಅಧಿಕಾರಿಗಳ ತಂಡ.

    ಉತ್ತರ
  3. nanjunda Raju's avatar
    ಫೆಬ್ರ 19 2012

    ಮಾನ್ಯರೇ, ಒಟ್ಟಿನಲ್ಲಿ ಎಲ್ಲಾ ರಂಗಗಳಲ್ಲೂ, ಅಂದರೆ, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಎಲ್ಲಾ ಕಡೆಯೂ ಬ್ರಷ್ಟರಿದ್ದಾರೆ. ಪ್ರಮಾಣಿಕರು ಎಲ್ಲಿದ್ದಾರೆ. ಹಾಗೂ ಹೀಗೂ ಶ್ರೀ ಸಂತೋಷ್ ಹೆಗಡೆ ಎಲ್ಲರಿಗೂ (ಸಾರ್ವಜನಿಕರಿಗೆ) ಅಚ್ಚುಮೆಚ್ಚಾಗಿದ್ದರು. ಸಾರ್ವಜನಿಕರಾದ ನಮಗೆ ಕೇವಲ ಓಟು ಮಾಡಿ ಶಾಸಕರನ್ನು ಗೆಲ್ಲಿಸಬಹುದಷ್ಟೆ. ಲೋಕಾಯುಕ್ತರನ್ನು ಹಾರಿಸುವ ಅಧಿಕಾರ ಮತ್ತು ಹಕ್ಕು ನಮಗಿಲ್ಲ. ಗೆಲ್ಲುವವರೆಗೆ ಸೀತಾಮಾತೆಯಂತಿರುವವರು ಗೆದ್ದ ನಂತರ, ರಾವಣ, ದುರ್ಯೋಧನ, ದುಶ್ಯಾಸನ, ಶಕುನಿಗಳಾಗುತ್ತಾರೆ. ಕೆಲವು ಬುದ್ದಿ ಜೀವಿಗಳೇಳುತ್ತಾರೆ, ಒಳ್ಳೆಯವರನ್ನು ಹಾರಿಸಿ ಎಂದು ಹೇಗೆ ಸಾಧ್ಯ. ಅನ್ನತಿನ್ನುವವರು ಮಣ್ಣು ತಿಂದರೆ, ಕಾನೂನೆಂಬ ಚಾಪೆಯನ್ನು ನಾವು ಹಾಸಿದರೆ. ಅವರು ಬ್ರಷ್ಟಾಚಾರವೆಂಬ ರಂಗೋಲಿಯ ಕೆಳಗೆ ನುಗ್ಗುತ್ತಾರೆ. ಒಟ್ಟಿನಲ್ಲಿ ವ್ಯವಸ್ಠೆ ಹಾಳಾಗಿದೆ. ಸರಿ ಮಾಡಲು ಸಾಧ್ಯವಿಲ್ಲ ಅಲ್ಲವೇ? ಸರಿಮಾಡಲು ನಮಗೆ ಅಧಿಕಾರವಿಲ್ಲ ಅಲ್ಲವೇ? ವಂದನೆಗಳೊಡನೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments