ಆ ಪುಸ್ತಕದ ಕೊನೆಯ ಪುಟದಲ್ಲಿ ನಿಂತು…
-ಕಾಲಂ ೯
ಮಂಗಳೂರಿನಲ್ಲಿ ಅಶೋಕವರ್ಧನ್ ತಮ್ಮ ಅತ್ರಿ ಬುಕ್ ಸೆಂಟರ್ ನಿಲ್ಲಿಸ್ತಾರೆ ಎಂಬ ಸುದ್ದಿ ನೀವೂ ಓದಿರಬಹುದು. ಸ್ವತಃ ಅವರೇ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ. ಅವಧಿ, ದಟ್ಸ್ ಕನ್ನಡ….. ಈ ಬಗ್ಗೆ ಗಮನಸೆಳೆದಿವೆ. ಜೋಗಿ, ನಾಗತಿಹಳ್ಳಿ ಅತ್ರಿ ನಿರ್ಗಮನದ ಬಗ್ಗೆ ಪ್ರಸ್ತಾಪಿಸಿದ್ದಾರೆ.
೨೦೦೨ನೇ ಇಸವಿ ಇರಬೇಕು. ಕನ್ನಡ ಸಾಹಿತ್ಯದ ದಿಗ್ಗಜ ಹಾಮಾನಾ ತೀರಿಕೊಂಡಿದ್ದರು. ತಮ್ಮ ಮೈಸೂರಿನ ಮನೆ ’ಗೋಧೂಳಿ’ಯ ಪಡಸಾಲೆ, ರೂಮುಗಳನ್ನು ದಾಟಿ ಅಡುಗೆಮನೆಗೂ ನುಗ್ಗಿಬಿಡಬಹುದಾದಷ್ಟು ಪುಸ್ತಕ ಸಂಗ್ರಹಿಸಿಕೊಂಡವರು ಹಾಮಾನಾ. ತಮ್ಮ ವಿಲ್‌ನಲ್ಲಿ ಪುಸ್ತಕ ಸಂಗ್ರಹ ಧರ್ಮಸ್ಥಳದ ಹೆಗ್ಗಡೆಯವರಿಗೆ ಸಲ್ಲಬೇಕೆಂದು ಬರದಿಟ್ಟಿದ್ದರು. ಹಾಗೆ ಲಾರಿಗಟ್ಟಲೆ ಪುಸ್ತಕ ಮೈಸೂರಿನಿಂದ ಹೊರಟು ಉಜಿರೆಯ SDM ಕಾಲೇಜಿನ ಗ್ರಂಥಾಲಯದ ಅಟ್ಟ ತಲುಪಿಕೊಂಡಿತು.
ಹಾಮಾನಾರಲ್ಲಿ ಇಷ್ಟೊಂದು ಪುಸ್ತಕ ಸಂಗ್ರಹವಾಗಿದ್ದು ಹೇಗೆ? ಇದಕ್ಕೆ ಉತ್ತರ ಎಂಬಂತೆ ಅಶೋಕವರ್ಧನ್ ಖಾಸಗಿಯಾಗಿ ಪ್ರತಿಕ್ರಿಯಿಸಿದ್ದರು.
`ಪುಸ್ತಕ ಮಾರಾಟ-ಹೋರಾಟ’ ಅಶೋಕವರ್ಧನ್‌ರವರೇ ಬರೆದು ಪ್ರಕಟಿಸಿದ ವಿಶಿಷ್ಟ ಪುಸ್ತಕ. ಈ ಪುಸ್ತಕದ ವಿವರಕೊಟ್ಟು ಅಶೋಕವರ್ಧನ್ ನೂರಾರು ಸಾಹಿತಿ-ಲೇಖಕರಿಗೆ ಅಂಚೆಕಾರ್ಡ್ ಹಾಕಿದ್ದರು. ಹಾಮಾನಾರ ಮರು ಟಪಾಲು ಬಂತು. `ಹಿಂದೆಲ್ಲ ನೀವು ನೇರ ಪುಸ್ತಕವನ್ನೇ ಕಳುಹಿಸುತ್ತಿದ್ದಿರಿ, ಇದೇನು ಹೊಸ ಪರಿಪಾಠ? ಎಂದಿನಂತೆ(ಎಲ್ಲರಂತೆ?) ಪುಸ್ತಕವನ್ನೇ ಕಳುಹಿಸಿಕೊಡಬಹುದಿತ್ತಲ್ಲ?’
ಆ ಪತ್ರ ನೆನಪಿಸಿಕೊಳ್ಳುವ ಅಶೋಕವರ್ಧನ್ ‘ಹಾಮಾನಾ ಹಿಂದಿನಂತೆ’ ಗೌರವಪ್ರತಿ’ಯನ್ನೇ ನಿರೀಕ್ಷಿಸಿದ್ದರು. ‘ಪುಸ್ತಕ ಮಾರಾಟ-ಹೋರಾಟ’ ಅಂತ ಪುಸ್ತಕ ಬರೆದು ಅದನ್ನು ಗೌರವಪ್ರತಿಯಾಗಿ ಹಂಚುವುದು ಹೇಗೆ ಅನ್ನುವುದಷ್ಟೆ ಅವರ ಪ್ರಶ್ನೆಯಾಗಿರಲಿಲ್ಲ. ‘ಹೀಗೆ ಬಂದು ಸೇರಿಕೊಂಡ ಪುಸ್ತಕಗಳ ರಾಶಿಯದು’ ಎನ್ನುವ ಉತ್ತರವೂ ಅವರ ವಾದದಲ್ಲಿತ್ತು.
೩೬ ವರ್ಷಗಳ ಕಾಲ ಅಶೋಕವರ್ಧನ್ ‘ಅತ್ರಿ’ ಮೂಲಕ ಪುಸ್ತಕ ವ್ಯಾಪಾರ ನಡೆಸಿದ್ದಾರೆ. ಮೂಲ ಮೈಸೂರಿನ ಅವರ ಮನೆಯ ಹೆಸರೂ `ಅತ್ರಿ’ ಆ ಹೆಸರನ್ನೇ ಅವರು ಮಂಗಳೂರಿನ ಪುಸ್ತಕ ಮಳಿಗೆಗೂ ತಂದುಕೊಂಡರು. ಮೈಸೂರಿನ ಚಿರಪರಿಚಿತ ಗಣಿತ ಮೇಷ್ಟ್ರು GTM ತಮ್ಮ ಮೂವರು ಮಕ್ಕಳಿಗೆ ಆನಂದ, ಅಶೋಕ, ಅನಂತ ಎಂದು ಹೆಸರಿಟ್ಟರು. ಆ A3 (ATHREE)ನೇ ಅತ್ರಿ ಆದದ್ದು!
ಮಾರ್ಚ್ ೩೧ ಅತ್ರಿ ಮಳಿಗೆಯ ಕೊನೆಯ ದಿನ ಎಂದು ವರ್ಧನ್ ಘೋಷಿಸಿದ್ದಾರೆ. ೬೦ವರ್ಷಕ್ಕೆ ಕಾಲಟ್ಟಿರುವ ಅವರು ಆಮೇಲಿನ ಜೀವನ wildlifeಗಾಗಿ ಎಂದಿದ್ದಾರೆ. ವನ್ಯಜೀವಿ ಕುರಿತಾದ ವರ್ಧನರ ಪ್ರೀತಿ ಅಸದೃಶವಾದದ್ದು.
ಸುಬ್ರಹ್ಮಣ್ಯ-ಸಕಲೇಶಪುರ ನಡುವಿನ ಬಿಸಲೇಘಾಟಿಯಲ್ಲಿ ಖಾಸಗಿ ಜಾಗ ಹಿಡಿದು ರೆಸಾರ್ಟ್ ಕಾಲೂರಲು ಬಂದಿತ್ತು. ಅದು ಆನೆಗಳ ಸಂಚಾರದ ಪ್ರದೇಶ. ರೆಸಾರ್ಟ್ ಕಾಲಿಟ್ಟರೆ ಏನೆಲ್ಲ ಅನಾಹುತ ಆದೀತೆಂದು ಮನಗಂಡು, ಸ್ನೇಹಿತರ ಜೊತೆ ಸೇರಿ ಆ ೧೫ ಎಕರೆ ಜಾಗವನ್ನು ತಾವೇ ಖರೀದಿಸಿದರು. ಅದನ್ನು ಹಾಗೆಯೇ ಕಾಡಾಗಿ ಬಿಟ್ಟು ಬಂದವರು ವರ್ಧನ್.
ಅವರ ಈಗಿನ ಉತ್ತರಾರ್ಧ wildlifeಗೆ ಜೀವತುಂಬುವುದು ನಿಶ್ಚಿತ.
ಮಾರ್ಚ್ ೩೧ರ ನಂತರ ಮಂಗಳೂರಿನ ಜ್ಯೋತಿ ಸರ್ಕಲ್ ಸಮೀಪದಲ್ಲಿ ಅತ್ರಿ ಪುಸ್ತಕ ಮಳಿಗೆ ಇರುವುದಿಲ್ಲ. ನವಕರ್ನಾಟಕದವರು ವ್ಯಾಪಾರ ಮುಂದುವರಿಸುವ ಸಾಧ್ಯತೆಗಳಿವೆ.
ನೇಗಿಲಯೋಗಿಯಂತಿದ್ದ ಅತ್ರಿ ನಿರ್ಗಮಿಸುವ ಹೊತ್ತಿಗೆ, ಮಂಗಳೂರಿಗೆ ಬುಲ್ಡೋಜರ್‌ನಂತಹ ‘ಸಪ್ನಾ ಬುಕ್‌ಹೌಸ್’ ಕಾಲಿಟ್ಟಿರುವುದು just ಕಾಕತಾಳೀಯವಷ್ಟೆ!?
ಸಾಹಿತಿ ಸುಜನಾ ಹೇಳುತ್ತಿದ್ದರಂತೆ- ‘ನೀವು ಮೈಸೂರಿನಲ್ಲೂ “ಅತ್ರಿ’, ಮಂಗಳೂರಿನಲ್ಲೂ ‘ಅತ್ರಿ’!
* * * * * * *
ಚಿತ್ರಕೃಪೆ : ಕಾಲಂ ೯





