ಬಿಜೆಪಿ ಆಡಳಿತದಡಿ ಶಿಕ್ಷಣ ಕ್ಶೇತ್ರ
-ಪ್ರಿಯಾಂಕ್ ಭಾರ್ಗವ್
ಕರ್ನಾಟಕ ರಾಜ್ಯಸರ್ಕಾರವು ಬಿಜೆಪಿ ಪಕ್ಷದ ತೆಕ್ಕೆಗೆ ಸಿಕ್ಕಾಗಲಿಂದ, ಕಲಿಕೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ, ಮಾಡಲಾಗುತ್ತಿದೆ ಕೂಡಾ. ಕಳೆದ ನಾಲ್ಕು ವರ್ಷಗಳಲ್ಲಿ ಮಾಡಲಾದ ಬದಲಾವಣೆಗಳು ಮತ್ತು ಅವುಗಳಿಂದಾಗಬಹುದಾದ ಪರಿಣಾಮಗಳ ಬಗ್ಗೆ ಇಲ್ಲಿ ಮಾತನಾಡಲಾಗಿದೆ.
ಶಿಕ್ಷಣದಲ್ಲಿ ತಾನು ಪಾಲಿಸುತ್ತಿರುವ ಭಾಷಾನೀತಿಯನ್ನು ಸಮರ್ಥಿಸಿಕೊಳ್ಳುವಲ್ಲಿ ಎಡವಿದ್ದು
ಕನ್ನಡ ಮಾಧ್ಯಮ ನಡೆಸುವುದಾಗಿ ಹೇಳುತ್ತಾ, ಇಂಗ್ಲೀಶ್ ಮಾಧ್ಯಮಗಳನ್ನು ನಡೆಸುತ್ತಿದ್ದ ಶಾಲೆಗಳನ್ನು ಮುಚ್ಚಲು ಸರಕಾರ ಮುಂದಾಗಿತ್ತು. ಶಾಲೆಗಳು ಕೋರ್ಟು ಮೆಟ್ಟಿಲೇರಿ, ಸುಪ್ರೀಮ್ ಕೋರ್ಟಿನಲ್ಲಿ ಈ ಬಗ್ಗೆ ವಿಚಾರಣೆ ಕೂಡಾ ನಡೆಯುತ್ತಿದೆ. ಸರ್ಕಾರದ ಕಡೆಯಿಂದ ಯಾವ ವಾದ ಮಂಡನೆಯಾಗುತ್ತಿದೆಯೋ ಗೊತ್ತಿಲ್ಲ, ಆದರೆ ಪತ್ರಿಕಗಳಲ್ಲಂತೂ “ಸರ್ಕಾರಕ್ಕೆ ಹಿನ್ನಡೆ, ಇಂಗ್ಲೀಶ್ ಶಾಲೆಗಳ ಗೆಲುವು” ಎಂಬಂತಹ ಸುದ್ದಿ ಆಗಾಗ ಬರುತ್ತಲೇ ಇದೆ. ಶಾಲೆಗಳು ಮಾಡಿದ ತಪ್ಪನ್ನು ತೋರಿಸುತ್ತಾ, “ತಾಯ್ನುಡಿಯಲ್ಲೇ ಕಲಿಕೆ ಒಳಿತು” ಎಂಬ ನೀತಿಯನ್ನು ಕರ್ನಾಟಕ ಸರ್ಕಾರ ಪಾಲಿಸಿಕೊಂಡು ಬಂದಿರುವುದನ್ನು ಹೇಳಿದ್ದರೂ, ತನ್ನ ನಡೆಯನ್ನು ಸಮರ್ಥಿಸಿಕೊಳ್ಳಬಹುದಿತ್ತು. ಆದರೆ, ಕೋರ್ಟಿನಲ್ಲಿ ಸರ್ಕಾರಕ್ಕೆ ಹಿನ್ನಡೆ ಎಂಬ ಸುದ್ದಿ ನೋಡಿದರೆ, ಸರ್ಕಾರವು ತನ್ನ ಭಾಷಾನೀತಿಯನ್ನು ಸಮರ್ಥಿಸಿಕೊಳ್ಳುವಲ್ಲಿ ಎಡವಿದಂತೆ ಕಾಣುತ್ತದೆ. ಬಿಜೆಪಿ ಸರ್ಕಾರದ ಇನ್ನೂ ಕೆಲವು ನಡೆಗಳ ಜೊತೆಗೆ ಹೋಲಿಸಿ ಈ ವಿಷಯವನ್ನು ನೋಡಿದಾಗ, ತಾಯ್ನುಡಿಯಲ್ಲಿ ಶಿಕ್ಷಣದ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇಲ್ಲವೇನೋ ಎಂದನಿಸುತ್ತದೆ.
ಶಾಲೆಗಳ ಮುಚ್ಚುವಿಕೆ ಮತ್ತು ಕಡೆಗಣನೆ
ಸುಮಾರು 3000 ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದು, ಗಡಿನಾಡ ಕನ್ನಡ ಶಾಲೆಗಳ ಕಡೆಗಣನೆ ಇವೆಲ್ಲವೂ ನೇರವಾಗಿ ಮುಂದಿನ ಒಂದು ಪೀಳಿಗೆಯನ್ನೇ ತಟ್ಟುತ್ತದೆ. ಸಾಕಷ್ಟು ವಿರೋಧದ ನಡುವೆಯೂ, ಎಗ್ಗಿಲ್ಲದೇ ಸಾಗಿರುವ ’ಶಾಲೆ ಮುಚ್ಚುವಿಕೆ’ ಸುಮಾರು 10,000 ಮಕ್ಕಳನ್ನು ಶಾಲೆಯಿಂದ ಹೊರಗಿಟ್ಟಿದೆ ಎಂಬುದು ಬಲ್ಲವರ ಅನಿಸಿಕೆ. ಹೀಗೆ ಶಾಲೆಯಿಂದ ಹೊರಗುಳಿದವರು ಇನ್ಯಾವತ್ತೂ ಶಾಲೆಗೆ ವಾಪಸ್ ಬರಲಾರರು, ಶಿಕ್ಷಣ ಪಡೆಯಲಾರರು. ಕಲಿಕೆಯಿಂದ ದೂರಾದವರು ತಮ್ಮ ಬದುಕಿನುದ್ದಕ್ಕೂ ಸಾಕಷ್ಟು ಸವಲತ್ತುಗಳಿಂದ ದೂರವೇ ಉಳಿಯುತ್ತಾರೆ.
ರಾಜ್ಯದ ಎಲ್ಲೆಡೆ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿದ್ದು
“ಶಿಕ್ಷಣವೆಂದರೆ ಇಂಗ್ಲೀಶ್ ಮಾಧ್ಯಮ” ಎಂಬಂತಹ ಮನಸ್ಥಿತಿ ಜನರಲ್ಲಿ ಮನೆ ಮಾಡುತ್ತಿರುವುದು ಗೊತ್ತಾದ ಕೂಡಲೇ, ಸರ್ಕಾರವೇ ಮುಂದು ನಿಂತು ಅಲ್ಲಲ್ಲಿ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯಿತು.
ಬಿಬಿಎಂಪಿ ಅಡಿಯಿದ್ದ ಶಾಲೆಯನ್ನು, “ಉತ್ತಮ ಆಡಳಿತಕ್ಕಾಗಿ ಖಾಸಗಿಯವರಿಗೆ ವಹಿಸಿಕೊಡುವದಾಗಿ” ಹೇಳುತ್ತಾ, ’ಭಾರತೀಯ ವಿದ್ಯಾ ಭವನ’ಕ್ಕೆ ವಹಿಸಿಕೊಡಲಾಯಿತು. ಬಿಬಿಎಂಪಿ ಅಡಿಯಲ್ಲಿ ಕನ್ನಡ ಮಾಧ್ಯಮ ಶಾಲೆಯಾಗಿದ್ದದ್ದು, ’ಭಾರತೀಯ ವಿದ್ಯಾ ಭವನ’ದಡಿಯಲ್ಲಿ ಇಂಗ್ಲೀಶ್ ಮಾಧ್ಯಮ ಶಾಲೆಯಾಯಿತು. ಅಲ್ಲದೇ, ರಾಜ್ಯ ಶಿಕ್ಷಣ ಇಲಾಖೆಯ ಅಡಿಯಿದ್ದ ಈ ಶಾಲೆಯನ್ನು, ಕೇಂದ್ರ ಶಿಕ್ಷಣ ಇಲಾಖೆಗೆ (ಸಿಬಿಎಸ್‍ಇ) ಒಪ್ಪಿಸಲಾಯಿತು. ಹಾಗೆ ಮಾಡಲು ಪಾಲಿಸಬೇಕಾಗಿದ್ದ ನಿಯಮಗಳನ್ನು ಕಡೆಗಣಿಸಲಾಯಿತು.
“ತಾಯ್ನುಡಿಯಲ್ಲಿ ಕಲಿಕೆಯೇ ಒಳಿತು” ಎಂಬುದನ್ನು ಜಗತ್ತಿನ ಎಲ್ಲಾ ವಿಗ್ನಾನಿಗಳೂ ಸಾರಿ ಹೇಳುತ್ತಿದ್ದರೂ, ಸರ್ಕಾರ ಮಾತ್ರ ತನ್ನೊಲವು ಇಂಗ್ಲೀಶ್ ಮಾಧ್ಯಮದೆಡೆ ಎಂಬುದನ್ನು ತೋರಿಸಿತು.
ಈ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಕಲಿಕೆಯು ಕಬ್ಬಿಣದ ಕಡಲೆಯಂತೆನಿಸಿ, ಮಕ್ಕಳು ಶಾಲೆ ತೊರೆಯುವ ಸಾಧ್ಯತೆಯೇ ಹೆಚ್ಚು.
ಪಟ್ಯಪುಸ್ತಕ ಮರುರಚನೆ
ಸರ್ಕಾರವನ್ನು ವಹಿಸಿಕೊಂಡ ಕೂಡಲೇ ಪಟ್ಯಪುಸ್ತಕ ಮರುರಚನೆಗೆ ಕೆಲಸ ಶುರುಮಾಡಲಾಯಿತು. ಪಟ್ಯಪುಸ್ತಕಗಳ ಕರಡುಪ್ರತಿ ಓದಿದ ಹಲವರು, ಅದರಲ್ಲಿ ಬರೆಯಲಾಗಿರುವ ವಿಚಾರಗಳ ಬಗ್ಗೆ ಮಾತೆತ್ತಿದ್ದಾರೆ. “ಅದರಲ್ಲಿ ವೈದಿಕ ಸಂಸ್ಕ್ರುತಿಯ ಬಗ್ಗೆ ಮಾತ್ರ ಪರಿಚಯವಿದೆ, ಮಣ್ಣಿನ ಸಂಸ್ಕ್ರುತಿಯ ಬಗ್ಗೆ ಮಾತೇ ಇಲ್ಲ” ಎಂಬ ಆರೋಪಗಳೂ ಕೇಳಿಬಂದಿವೆ. ಶಿಕ್ಷಣವು ಮಕ್ಕಳ ಮುಂದಿನ ದಿನಗಳನ್ನು ಕಟ್ಟಲು ಗಟ್ಟಿ ಬುನಾದಿಯಾದ್ದರಿಂದ, ಅದರಲ್ಲಿ ಯಾವುದನ್ನೂ ಕಡೆಗಣಿಸಿರಬಾರದು. ಮಕ್ಕಳಿಗೆ ತಮ್ಮ ಸುತ್ತಲಿನ ಮಂದಿಯಲ್ಲಿರುವ ಸಂಸ್ಕ್ರುತಿಯ ಬಗ್ಗೆ ಪರಿಚಯಿಸುತ್ತಲೇ, ಬೇರ ಬೇರೆ ನಾಡುಗಳಲ್ಲಿರುವ ಸಂಸ್ಕ್ರುತಿಗಳ ಪರಿಚಯವನ್ನೂ ಮಾಡಿಸಬೇಕು. ಮಕ್ಕಳಲ್ಲಿ, ಸಂಸ್ಕ್ರುತಿಗಳಲ್ಲಿರುವ ವೈವಿಧ್ಯತೆಯನ್ನು ಗೌರವಿಸುವ ಮನಸ್ಥಿತಿ ಮೂಡಿಸಬಲ್ಲ ಪಟ್ಯವೇ ಇವತ್ತು ಬೇಕಿರೋದು.
ಇತಿಹಾಸದ ವಿಷಯಗಳಲ್ಲಿ, ಮಕ್ಕಳಿಗೆ ಕನ್ನಡ ನಾಡಿನಲ್ಲಿ ಆಗಿಹೋದ ಇತಿಹಾಸವನ್ನು ಸುದೀರ್ಗವಾಗಿ ಪರಿಚಯಿಸುವಂತಿರಬೇಕು. ಜೊತೆಗೇ, ಹೊರನಾಡಿನಲ್ಲಿ ನಡೆದುಹೋದ ಇತಿಹಾಸದ ಮುಖ್ಯ ಗಟನೆಗಳನ್ನು ಪರಿಚಯಿಸಿದರೆ ಸಾಕು. ಕನ್ನಡ ನಾಡಿನ ಇತಿಹಾಸವನ್ನು ಚಿಕ್ಕದಾಗಿ ತೋರಿಸಿ, ಹೊರನಾಡ ಇತಿಹಾಸವನ್ನೇ ಸುದೀರ್ಗವಾಗಿ ಪರಿಚಯಿಸುವ ಇತಿಹಾಸದ ಪಟ್ಯ ಬೇಡ.
ಇನ್ನು ಮಂದಿಯಾಳ್ವಿಕೆಯ (ಡೆಮಾಕ್ರಸಿಯ) ಬಗ್ಗೆ ತಪ್ಪು ಅನಿಸಿಕೆ ಮೂಡುವಂತಹ ಪಟ್ಯವಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಮಂದಿಯಾಳ್ವಿಕೆಯ ಸರಿಯಾದ ಪರಿಚಯ ಮಾಡಿಸಿಕೊಡಬೇಕೇ ಹೊರತು, ಯಾವುದೋ ಒಂದು ಪಕ್ಷದ ಆಸೆಗಳಿಗೆ ಅನುಕೂಲವಾಗುವಂತೆ ಬಿಂಬಿಸಬಾರದು. ಮಂದಿಯಾಳ್ವಿಕೆಯ ಬಗ್ಗೆ ತಪ್ಪರಿವು ಹೊಂದಿರುವ ಮಕ್ಕಳು, ಮುಂದಿನ ದಿನಗಳಲ್ಲಿ ಮಂದಿಯಾಳ್ವಿಕೆಯನ್ನು ಹೇಗೆ ತಾನೇ ಬಲಪಡಿಸಿಯಾರು?
ಶಿಕ್ಷಣದ ಮೂಲಕ ಸಂಸ್ಕ್ರುತ ಸ್ಥಾಪನೆಗೆ ಪ್ರಯತ್ನ
ಸಂಸ್ಕ್ರುತ ಕಲಿಕೆಯನ್ನು ಆಯ್ಕೆಯಾಗಿ ಕೊಡಬೇಕೇ ಹೊರತು, ಅದನ್ನು ಕಡ್ಡಾಯವಾಗಿಸಿದರೆ ಮಕ್ಕಳಿಗೆ ಅದು ಇನ್ನೊಂದು ಹೊರೆಯೇ. ಆದರೆ, “ಸಂಸ್ಕ್ರುತ ಕಲಿಕೆ ಕಡ್ಡಾಯವಾಗಲಿ” ಎಂದು ಹಿರಿಯ ಕಾದಂಬರಿಕಾರರು ಮತ್ತೆ ಮತ್ತೆ ಹೇಳುತ್ತಿರುವುದು ನೋಡಿದರೆ, ಜನತೆಯ ಒತ್ತಾಯವೆಂಬಂತೆ ಬಿಂಬಿಸಿ ಶಿಕ್ಷಣದಲ್ಲಿ ಸಂಸ್ಕ್ರುತ ಕಡ್ಡಾಯ ಮಾಡುವ ಹುನ್ನಾರವೇ ಇದ್ದಂತಿದೆ.
ಇದಕ್ಕೆ ಪೂರಕವೆಂಬಂತೆ, ಸರ್ಕಾರೀ ಶಾಲೆಗಳಲ್ಲಿ ಭಗವದ್ಗೀತೆ ಅಭಿಯಾನ ಕೂಡಾ ನಡೆಸಲಾಯಿತು. ಪಟ್ಯಗಳಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿತು.
“ಕನ್ನಡದ ಮಕ್ಕಳು, ಸಂಸ್ಕ್ರುತ ಶ್ಲೋಕಗಳನ್ನು ಬಾಯಿಪಾಟ ಮಾಡುವ ಮೂಲಕ ಏನನ್ನು ಗಳಿಸಿಯಾರು?” ಎಂಬ ಪ್ರಶ್ನೆಗೆ ತಕ್ಕ ಉತ್ತರ ಸರ್ಕಾರದ ಕಡೆಯಿಂದ ಬರಲಿಲ್ಲ.
ನಮ್ಮ ಸಂವಿಧಾನವು ಹೇಳಿರುವಂತೆ, ಸರಕಾರದ ಹಣದಲ್ಲಿ ನಡೆಯುವ ಶಾಲೆಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಬೋಧನೆ ಮಾಡದೇ, ಮಕ್ಕಳಿಗೆ ಮುಂದಿನ ಬದುಕು ಕಟ್ಟಿಕೊಳ್ಳಲು ಬೇಕಾದ ಶಿಕ್ಷಣ ಚೆನ್ನಾಗಿ ದೊರಕಿಸಿಕೊಟ್ಟರೆ, ಅದಕ್ಕಿಂತಾ ದೊಡ್ಡ ಕೆಲಸ ಇನ್ನೊಂದಿಲ್ಲ ಎಂಬುದನ್ನು ಸರ್ಕಾರ ಕಂಡುಕೊಳ್ಳಲಿ. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಕೆಲವು ನಡೆಗಳು ತುಂಬಾ ಜವಾಬ್ದಾರಿತನದಿಂದ ಕೂಡಿದ್ದಾಗಿರಬೇಕು. ನಾಡಿನ ಲಕ್ಷಗಟ್ಟಲೆ ಮಕ್ಕಳ ನಾಳೆಗಳು ಇದರ ಮೇಲೆ ನಿಂತಿರುವುದರಿಂದ, ಸರ್ಕಾರವು ದೂರದ ಪರಿಣಾಮಗಳನ್ನು ಅರಿತು ಹೆಜ್ಜೆ ಇಡಲಿ.
* * * * * * * *
ಚಿತ್ರಕೃಪೆ : http://www.megamedianews.in





‘ಆಡಳಿತಾರೂಢ ವರ್ಗ’ ತನ್ನ ಪಟ್ಟಭದ್ರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಉಪಯೋಗಿಸುವ ಹತಾರಗಳ ಪೈಕಿ ಪ್ರಮುಖವಾದದ್ದು ‘ಶಿಕ್ಷಣ’
“ನಮ್ಮ ಸಂವಿಧಾನವು ಹೇಳಿರುವಂತೆ, ಸರಕಾರದ ಹಣದಲ್ಲಿ ನಡೆಯುವ ಶಾಲೆಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಬೋಧನೆ ಮಾಡದೇ, ಮಕ್ಕಳಿಗೆ ಮುಂದಿನ ಬದುಕು ಕಟ್ಟಿಕೊಳ್ಳಲು ಬೇಕಾದ ಶಿಕ್ಷಣ ಚೆನ್ನಾಗಿ ದೊರಕಿಸಿಕೊಟ್ಟರೆ, ಅದಕ್ಕಿಂತಾ ದೊಡ್ಡ ಕೆಲಸ ಇನ್ನೊಂದಿಲ್ಲ ಎಂಬುದನ್ನು ಸರ್ಕಾರ ಕಂಡುಕೊಳ್ಳಲಿ. ”
ಇದು ಉತ್ತಮ ಆಶಯ ಆಗಿದಲ್ಲಿ, ಮಾನ್ಯ ಬ್ಲಾಗಿಗರು, ಕ್ರೈಸ್ತ ಶಾಲೆಗಳಲ್ಲಿ ಕನ್ನಡದ ಮಕ್ಕಳು ಕುಂಕುಮ, ಬಳೆ ನಿಷೇಧದ ಬಗ್ಗೆ, ಎಲ್ಲೂ ಸದ್ದೆ ಮಾಡಿಲ್ಲ? ಉರ್ದು ಶಾಲೆಗಳಲ್ಲಿ ಯಾವ ಮಟ್ಟದ ಬೋಧನೆ ಆಗುತ್ತಿದೆ ಅನ್ನುವುದರ ಬಗ್ಗೆ ಚಕಾರ ಎತ್ತಿಲ್ಲ? ಅವುಗಳನ್ನು ಸಹಾ ಕನ್ನಡ ಶಾಲೆಗಳಾಗಿ ಯಾಕೆ ಬದಲಿಸಬಾರಾದು ಅನ್ನುವುದರ ಬಗ್ಗೆ ಎಲ್ಲಿ ಹೊರಾಟ ನಡೆಸಿದ್ದಾರೆ?
ಬ್ಲಾಗಿಸಿದ್ದಾರೆ?
ಈ ರೀತಿ ಬರೆಯುವ ಬದಲು, ಸ್ವತಃ ಯಾಕೆ ಚುನಾವಣೆಗೆ ನಿಲ್ಲುವುದಿಲ್ಲ ನಿಮ್ಮ ಗುಂಪು?
ಮಾನ್ಯರೇ,
ಖಾಸಗಿಯವರು ನಡೆಸುವ ಶಾಲೆಗಳಿಗೂ, ಸರ್ಕಾರವು ನಡೆಸುವ ಶಾಲೆಗಳಿಗೂ ವ್ಯತ್ಯಾಸವಿದೆ. ಖಾಸಗಿಯಾಗಿ ನಡೆಸಲ್ಪಡುವ ಶಾಲೆಗಳಲ್ಲಿ, ನೀವು ಹೆಸರಿಸಿರುವಂತಹ ಆಚರಣೆಗಳನ್ನು ನಡೆಸಲು ಅವಕಾಶವನ್ನು ಸಂವಿಧಾನ ಕೊಡಮಾಡಿದೆ. ಹಾಗಾಗಿಯೇ, ಸಂಘ ಸಂಸ್ಥೆಗಳು ನಡೆಸುವ ಖಾಸಗಿ ಶಾಲೆಗಳಲ್ಲಿ ಸರಸ್ವತಿ ದೇವಸ್ಥಾನವನ್ನು ಕಾಣಬಹುದು, ಅಥವಾ ಶಿಲುಬೆ ನೋಡಬಹುದು, ಅಥವಾ ನಮಾಜು ಕೊಟಡಿ ಕಾಣಬಹುದು.
ಸರ್ಕಾರ ನಡೆಸುವ ಶಾಲೆಗಳಲ್ಲಿ, ಇದು ಯಾವುದಕ್ಕೂ ಅವಕಾಶವನ್ನು ನಮ್ಮ ಸಂವಿಧಾನ ಕೊಡಮಾಡಿಲ್ಲ. ಇಲ್ಲಿ ನಾನು ಎತ್ತಿರುವ ಪ್ರಶ್ನೆ ಸರ್ಕಾರೀ ಶಾಲೆಗಳ ಬಗ್ಗೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ತಾವೊಮ್ಮೆ, ಸಂವಿಧಾನವು ಶಿಕ್ಷಣದ ಬಗ್ಗೆ ಏನು ಹೇಳುತ್ತದೆ ಎಂಬುದರ ಬಗ್ಗೆ ಕಣ್ಣಾಡಿಸಿದರೆ, ತಮಗೆ ಈ ವಿಷಯ ತಿಳಿಯುತ್ತದೆ.
ಇನ್ನು, “ಉರ್ದು ಶಾಲೆಗಳನ್ನು ಯಾಕೆ ಕನ್ನಡ ಶಾಲೆಗಳನ್ನಾಗಿ ಮಾಡಬಾರದು?” ಎಂಬುದು ತಮ್ಮ ಪ್ರಶ್ನೆ. ಭಾಷಿಕ ಮೈನಾರಿಟಿಗಳಿಗೆ, ತಮ್ಮ ನುಡಿಯಲ್ಲೇ ಮೊದಲ ಹಂತದ ಶಿಕ್ಷಣ ಪಡೆಯುವ ಹಕ್ಕನ್ನು ಸಂವಿಧಾನ ಕೊಡಮಾಡಿದೆ. ಹಾಗಾಗಿಯೇ, ಕರ್ನಾಟಕದಲ್ಲಿ ತಮಿಳು, ತೆಲುಗು, ಉರ್ದು, ಮರಾಟಿ ಮಾಧ್ಯಮ ಶಾಲೆಗಳನ್ನು ಕಾಣಬಹುದು. ಇವನ್ನು ಕರ್ನಾಟಕ ಸರ್ಕಾರವೇ ನಡೆಸುತ್ತದೆ.
ಇದೇ ರೀತಿ ತಮಿಳು ನಾಡಿನಲ್ಲಿ, ಕೇರಳದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನೂ ಕಾಣಬಹುದು.
ನಿಮ್ಮ ಜೊತೆ ಧನಿಗೂಡಿಸ್ತೀನಿ Priyank
> ಸರಕಾರದ ಹಣದಲ್ಲಿ ನಡೆಯುವ ಶಾಲೆಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಬೋಧನೆ ಮಾಡದೇ……
ಸಂವಿಧಾನದ ಯಾವ ಭಾಗದಲ್ಲಿಯೂ ಶಾಲೆಗಳಲ್ಲಿ ಧಾರ್ಮಿಕ ಬೋಧನೆ ಮಾಡಬಾರದೆಂದು ತಿಳಿಸಿಲ್ಲ.
ಧಾರ್ಮಿಕ ಮತ್ತು ಮತೀಯ ಎರಡಕ್ಕೂ ಭಿನ್ನವಾದವುಗಳು – ನೀವು ಪ್ರಾಯಶಃ ಮತೀಯ ಎಂದು ಹೇಳಲು ಧಾರ್ಮಿಕ ಎಂದು ಹೇಳಿರಬೇಕೆನಿಸುತ್ತಿದೆ.
ಎರಡನೆಯದಾಗಿ, ಭಗವದ್ಗೀತೆ ಮತೀಯ ಬೋಧನೆಯಲ್ಲ. ಇದು ಒಂದು ಮತಕ್ಕೋ, ಜಾತಿಗೋ ಅಥವಾ ಯಾವುದೋ ಒಂದು ದೇವರಿಗೋ ಸಂಬಂಧಪಟ್ಟದ್ದಲ್ಲ.
ಭಗವದ್ಗೀತೆಯಲ್ಲಿ ಇಂತದ್ದೇ ದೇವರನ್ನು ಪೂಜಿಸಬೇಕೆಂದೋ ಅಥವಾ ಪೂಜಾಪದ್ಧತಿಯ ವಿಷಯವಾಗಿಯೋ ಎಲ್ಲಿಯೂ ತಿಳಿಸಿಲ್ಲ.
ಹೀಗಾಗಿ ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವುದರಿಂದ ಅನ್ಯ ಮತಸ್ಥರಿಗೆ ಬೇಜಾರಾಗುತ್ತದೆ ಎನ್ನುವ ವಾದದಲ್ಲಿ ಹುರುಳಿಲ್ಲ.
ನಮ್ಮ ಸಂವಿಧಾನದಲ್ಲಿಯೇ ಗೀತಾಬೋಧನೆಯ ಚಿತ್ರವನ್ನು ಮುದ್ರಿಸಲಾಗಿದೆ. ಭಗವದ್ಗೀತೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಒಳ್ಳೆಯದು.
ಇದನ್ನು ತಿಳಿದುಕೊಳ್ಳುವುದರಿಂದ, ಪಾಲಿಸುವುದರಿಂದ, ಇಂದು ಕಾಣುತ್ತಿರುವ ಅನಾಚಾರ, ಅತ್ಯಾಚಾರ, ಭ್ರಷ್ಟಾಚಾರ ಇತ್ಯಾದಿಗಳೆಲ್ಲವನ್ನೂ ಕಾಲಕ್ರಮೇಣ ತೊಡೆದು ಹಾಕಬಹುದು.
ಶಿಕ್ಷಣ ಸಚಿವರಂತೆಯೇ ನೀವೂ ಕೂಡ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳಿಸುತ್ತೀರೆಂದು ಭಾವಿಸಿದ್ದೇನೆ. ಯಾಕೆಂದರೆ ಅನೇಕ ಕನ್ನಡ ಹೋರಾಟಗಾರರು ಹಾಗೆ ಮಾಡುವುದಿಲ್ಲ.
ಮುಚ್ಚಿರುವುದು ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳನ್ನು ಮಾತ್ರ. ವಿದ್ಯಾರ್ಥಿಗಳಿಲ್ಲದಿದ್ದರೂ ಶಾಲೆ ನಡೆಸಬೇಕೆಂಬುದು ವಿತಂಡ ವಾದ.
>”ಅದರಲ್ಲಿ ವೈದಿಕ ಸಂಸ್ಕ್ರುತಿಯ ಬಗ್ಗೆ ಮಾತ್ರ ಪರಿಚಯವಿದೆ, ಮಣ್ಣಿನ ಸಂಸ್ಕ್ರುತಿಯ ಬಗ್ಗೆ ಮಾತೇ ಇಲ್ಲ”..
ಮಣ್ಣಿನ ಸಂಸ್ಕೃತಿಗೇ, ಅದರಲ್ಲೂ ಪ್ರಾದೇಶಿಕ ಚರಿತ್ರೆಗೆ ಮೊದಲಿಗಿಂತಲೂ ಜಾಸ್ತಿ ಒತ್ತು ನೀಡಲಾಗಿದೆ. ಅದರ ಜೊತೆಗೆ ವೈದಿಕ ಸಂಸ್ಕೃತಿಯ ಪರಿಚಯವೂ ಇದೆ. ನಮ್ಮಲ್ಲಿ ವೈದಿಕ ಸಂಸ್ಕೃತಿ ಆಚರಿಸುವವರು ಅನೇಕರಿರುವಾಗ ಅದು ತಪ್ಪೆಂದು ಹೇಳಲಾಗುವುದಿಲ್ಲ. ಇದರ ಬಗ್ಗೆ ಯಾವುದೇ ಭಯ ಬೇಡ.
ಮಾನ್ಯರೇ,
ವಿದ್ಯಾರ್ಥಿಗಳು ಯಾಕೆ ಕಮ್ಮಿ ಎಂದೂ, ಶಾಲೆ ಮುಚ್ಚುವುದರಿಂದ ಆಗಬಹುದಾದ ಪರಿಣಾಮಗಳು ಏನು ಎಂದೂ, ಒಂದು ಅಧ್ಯಯನ ನಡೆಸಿ, ಅದನ್ನು ಸರಿಪಡಿಸಲು ಬೇರೆ ಏನು ಮಾಡಬಹುದು ಎಂಬ ಬಗ್ಗೆ ಚಿಂತನೆ ನಡೆಯಬೇಕಿತ್ತು.
ಹೆಚ್ಚಿನ ಸರ್ಕಾರೀ ಶಾಲೆಗಳಲ್ಲಿ ಮೂಲಬೂತ ಸೌಕರ್ಯಗಳ ಕೊರತೆಯಿರುವುದು ಗೊತ್ತಿರುವ ವಿಷಯವೇ. ಅದನ್ನು ಸರಿಪಡಿಸುವ ಕಡೆ ಗಮನ ಹರಿಸದೇ ಇದ್ದಿದ್ದಕ್ಕೆ, ಹೈ ಕೋರ್ಟಿನಿಂದ ನಮ್ಮ ಸರ್ಕಾರ ಗದರಿಸಿಕೊಂಡಿತ್ತು. ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಹೆಚ್ಚಿನ ಮಕ್ಕಳನ್ನು ಶಾಲೆಗೆ ಸೆಳೆಯಬಹುದು.
ಮಣ್ಣಿನ ಸಂಸ್ಕ್ರುತಿಗೆ ಒತ್ತು ನೀಡಲಾಗಿದೆ ಎಂದು ತಾವು ಹೇಳಿದ್ದೀರಿ. ತಮಗೆ ಪಟ್ಯಪುಸ್ತಕದ ಕರಡುಪ್ರತಿ ಸಿಕ್ಕಿತ್ತೇ? ಅತವಾ, ತಾವು ಪಟ್ಯಪುಸ್ತಕ ಕಟ್ಟುವ ಕಮಿಟಿಯಲ್ಲಿ ಇದ್ದಿರಾ? ತಿಳಿಸಿ.
“ವೈದಿಕ ಸಂಸ್ಕ್ರುತಿಯ ಆಚರಣೆಯೂ ನಮ್ಮಲ್ಲಿರುವಾಗ, ಅದರ ಬಗ್ಗೆ ಬರೆಯೋದು ತಪ್ಪಲ್ಲ” ಎಂದು ನೀವು ಹೇಳಿದ್ದೀರಿ. ಎಲ್ಲಾ ಬಗೆಯ ಸಂಸ್ಕ್ರುತಿಗಳ ಪರಿಚಯ ಇರಲಿ ಎಂದೇ ಹೇಳಿದ್ದೇನೆ. ಬ್ಲಾಗಿನಲ್ಲಿರುವ ಈ ಕೆಳಗಿನ ಸಾಲುಗಳನ್ನು ತಾವು ಸರಿಯಾಗಿ ನೋಡಿಲ್ಲ ಎನಿಸುತ್ತದೆ.
ಶಿಕ್ಷಣವು ಮಕ್ಕಳ ಮುಂದಿನ ದಿನಗಳನ್ನು ಕಟ್ಟಲು ಗಟ್ಟಿ ಬುನಾದಿಯಾದ್ದರಿಂದ, ಅದರಲ್ಲಿ ಯಾವುದನ್ನೂ ಕಡೆಗಣಿಸಿರಬಾರದು. ಮಕ್ಕಳಿಗೆ ತಮ್ಮ ಸುತ್ತಲಿನ ಮಂದಿಯಲ್ಲಿರುವ ಸಂಸ್ಕ್ರುತಿಯ ಬಗ್ಗೆ ಪರಿಚಯಿಸುತ್ತಲೇ, ಬೇರ ಬೇರೆ ನಾಡುಗಳಲ್ಲಿರುವ ಸಂಸ್ಕ್ರುತಿಗಳ ಪರಿಚಯವನ್ನೂ ಮಾಡಿಸಬೇಕು. ಮಕ್ಕಳಲ್ಲಿ, ಸಂಸ್ಕ್ರುತಿಗಳಲ್ಲಿರುವ ವೈವಿಧ್ಯತೆಯನ್ನು ಗೌರವಿಸುವ ಮನಸ್ಥಿತಿ ಮೂಡಿಸಬಲ್ಲ ಪಟ್ಯವೇ ಇವತ್ತು ಬೇಕಿರೋದು.
ಸರ್ಕಾರ ಯಾವ ರೀತಿ ಮತೀಯ ಭಾವನೆ ಬಿತ್ತುತ್ತಿದೆ? ಸಂವಿಧಾನದ ಬಗ್ಗೆ ಮಾತನಾಡುವುದಾದರೆ, ಅದರಲ್ಲಿ ಭಗವದ್ಗೀತೆ ಕಲಿಸಬಾರದು ಅಂದೇನು ಇಲ್ಲವಲ್ಲ? ಭಗವದ್ಗೀತೆಯಿಂದ ಯಾವ ರೀತಿ ಮತೀಯ ಭಾವನೆ ಕೆರಳುತ್ತೆ ಸ್ವಾಮಿ? ಅದು ನಮ್ಮ ಪುರಾತನ ತತ್ವಗಳಲ್ಲಿ ಒಂದು ಮತ್ತು ಅದರಿಂದ ಯಾವುದೆ ವಿಷ ಬಿತ್ತುವ ಕಾರ್ಯಕ್ರಮ ಇಲ್ಲ ಬಿಡೀ. ಬಹುಶಃ ನಿಮ್ಮ ತಾತ ಮುತ್ತಾತ ಎಲ್ಲ ಭವದ್ಗೀತೆ ಹೇಳುತ್ತಲೆ ಇದ್ದವರಲ್ಲವೆ? ಅವರು ನಿಮಲ್ಲಿ ಮತೀಯ ಭವನೆ ಬಿತ್ತಿದ್ದಾರ? ಸರ್ಕಾರ ಹೇಗೆ ಉರ್ದು ಕಲಿಸುತ್ತದೆಯೋ, ಹಾಗ್ಯೆ ಮಕ್ಕಳ ಬೆಳವಣಿಗೆಗೆ ಅವಶ್ಯ ಎಂದು ಪರಿಗಣಿಸಿ ಆಂಗ್ಲ ಶಾಲೆ ತೆರೆದಿರಬಹುದಲ್ಲವೆ? ಆಸಕ್ತಿ ಇದ್ದವರು ಕನ್ನಡ ಶಾಲೆಗೆ ಕಳಿಸಲಿ ಬಿಡಿ.
“ಇನ್ನು ಮಂದಿಯಾಳ್ವಿಕೆಯ (ಡೆಮಾಕ್ರಸಿಯ) ಬಗ್ಗೆ ತಪ್ಪು ಅನಿಸಿಕೆ ಮೂಡುವಂತಹ ಪಟ್ಯವಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ”
ಅದೇನು ಕೇಳಿ ಬಂದಿದೆ ಸ್ವಲ್ಪ ತಿಳಿಸಿ. ಯಾರೊ ಎಲ್ಲೋ ಹೆಳಿದರು ಎಂದು , ಅದು ಅವರ ತಪ್ಪು ಗ್ರಹಿಕೆಯಿಂದ ಆದ ಪ್ರಮಾದವೆ ಇರಬಹುದಲ್ಲವೆ? ತಾವು ಆ ಪುಸ್ತಕ ವಿಮರ್ಶೆ ಮಾಡಿದ್ದೀರ?
“ಅದರಲ್ಲಿ ವೈದಿಕ ಸಂಸ್ಕ್ರುತಿಯ ಬಗ್ಗೆ ಮಾತ್ರ ಪರಿಚಯವಿದೆ, ಮಣ್ಣಿನ ಸಂಸ್ಕ್ರುತಿಯ ಬಗ್ಗೆ ಮಾತೇ ಇಲ್ಲ” ”
ಈ ಮಾತು ಎಶ್ಹ್ಟು ನಿಜ ಎಂದು ಪಠ್ಯ ಓದಿ ಅರ್ಥ ಮಾಡಿಕೊಂಡಿದ್ದೀರ? ವೈದಿಕ ಸಂಸ್ಕೃತಿ ಅಂದರೇನು ಅನ್ನುವುದರ ಬಗ್ಗೆ ತಮ್ಮ ಅನುಭವೇನು? ಯಾರೊ ಎಲ್ಲೊ ಏನೋ ಹೇಳಿದರು ಎಂದು ಇಲ್ಲಿ ಬರೆದರೆ ಏನು ಸುಖ? ಪುರಾವೆ ಒದಗಿಸಿ, ಅಷ್ಟು ಧಾಲೆಗು ಇದ್ದಲ್ಲಿ ನ್ಯಾಯಲಯಕ್ಕೆ ಹೋಗಿ, ಇದು ನಿಮ್ ಕನ್ನಡಪರ ಕಾಳಜಿ ತೋರುತ್ತದೆ, ಸುಮ್ಮನೆ ಕೂತು ಯಾರೊ ಹೇಳಿದರು ಎಂಬುದನ್ನು ಆಧರವಾಗಿಟ್ಟುಕೊಂಡು ಬ್ಲಾಗ್ ಬರೆದರೆ ಏನು ಸುಖ? ೧೦೦ ಜನ ಕ್ಕೆ ುಟ್ಟಲ್ಲ ಇದು. ಅದರ ಬದಲು ನೈಜ ರೀತಿಯಲ್ಲಿ ಕನ್ನಡ ಕೆಲ್ಸ ಮಾಡಿ.
ಮಾನ್ಯರೇ,
ಭಗವದ್ಗೀತೆ ಕಲಿಯುವುದರಿಂದ ಮತೀಯ ಭಾವನೆ ಬೆಳೆಯುತ್ತದೆ ಎನ್ನುವುದೂ, ಭಗವದ್ಗೀತೆ ಕಲಿಯುವುದರಿಂದ ಅನ್ಯಾಯ ಅನಾಚಾರಗಳು ಕಡಿಮೆ ಆಗುತ್ತದೆ ಎನ್ನುವುದೂ, ಎರಡೂ ಊಹೆಗಳೇ.
ಈ ಊಹೆಗಳ ಬಗ್ಗೆ ಪ್ರಶ್ನೆ ನನ್ನದಲ್ಲ.
ನಾನೆತ್ತಿರುವ ಪ್ರಶ್ನೆ ತಮಗೆ ಗೊತ್ತಾದಂತಿಲ್ಲ.
“ಸಂಸ್ಕ್ರುತ ಶ್ಲೋಕಗಳನ್ನು ಬಾಯಿಪಾಟ ಮಾಡುವುದರಿಂದ ಕನ್ನಡ ಮಕ್ಕಳಿಗೆ ಏನು ದಕ್ಕೀತು?” ಎಂಬುದು ಪ್ರಶ್ನೆ. ಇದರ ಬಗ್ಗೆ ಸರ್ಕಾರವು ಯಾವುದೇ ಉತ್ತರ ನೀಡಿಲ್ಲ. ಇಂತಿಂತ ಒಳಿತುಗಳಿವೆ ಎಂಬುದನ್ನು ಸರ್ಕಾರವು ಜನರ ಮುಂದಿಟ್ಟರೆ, ಆಗ ಅದನ್ನು ವಿಮರ್ಶೆಗೊಳಪಡಿಸಬಹುದು.
“ಮಂದಿಯಾಳ್ವಿಕೆಯ ಬಗ್ಗೆ ಏನು ತಪ್ಪು ಮೂಡಿದೆ?” ಎಂದು ಕೇಳಿದ್ದೀರ.
“ದ್ವಿಪಕ್ಷ ಏರ್ಪಾಡು ಹೇಗೆ ಒಳಿತು? ಚರ್ಚಿಸಿ” ಎಂಬ ಪ್ರಶ್ನೆ ಪಟ್ಯಗಳಲ್ಲಿದೆಯೆಂದು ಆಪಾದನೆಗಳು ಪತ್ರಿಕೆಗಳಲ್ಲಿ ಕೇಳಿಬಂದಿತ್ತು.
ಆ ಪ್ರಶ್ನೆಯನ್ನು ತೆಗೆದು ಹಾಕಲಾಗಿದೆ ಎಂದು ಮಾನ್ಯ ಶಿಕ್ಷಣ ಸಚಿವರು, ಪತ್ರಿಕೆಗಳಿಗೆ ತಿಳಿಸಿದ್ದರು. ಇವೆರಡೂ ತಮ್ಮ ಗಮನಕ್ಕೆ ಬಂದಂತಿಲ್ಲ. ಮಂದಿಯಾಳ್ವಿಕೆಯ ಬಗ್ಗೆ ಸರಿಯಾದ ಅರಿವು ಮೂಡಿಸುವ ಪಟ್ಯ ಇರಬೇಕು ಎಂಬುದೇ ಆಶಯ.
ವೈದಿಕ ಸಂಸ್ಕ್ರುತಿಯ ಬಗ್ಗೆ ಕೇಳಿ ಬಂದ ಆರೋಪಗಳು ನಿಜವಾಗಿದ್ದರೆ, ಪಟ್ಯಪುಸ್ತಕಗಳಲ್ಲಿ ಎಂತಹ ವಿಷಯಗಳ ಮಂಡನೆಯಾಗಬೇಕು ಎಂಬ ಬಗ್ಗೆ ಬ್ಲಾಗಿನಲ್ಲೇ ತಿಳಿಸಿದ್ದೇನೆ. ಆ ಆರೋಪಗಳು ನಿಜವಲ್ಲದಿದ್ದರೆ, ತೊಂದರೆಯಿಲ್ಲ.
ಪಟ್ಯಗಳಲ್ಲಿ “ಬೇರೆ ಬೇರೆ ಸಂಸ್ಕ್ರುತಿಗಳೆಲ್ಲದರ ಪರಿಚಯವಿರಬೇಕು” ಎಂಬ ನಿಲುವು ಬ್ಲಾಗಿನಲ್ಲಿ ತೋರ್ಪಡಿಸಲಾಗಿದೆ. ಇದರ ಬಗ್ಗೆ, ತಮ್ಮ ವಿರೋಧವಿದ್ದರೆ ತಿಳಿಸಿ. ಇಲ್ಲದಿದ್ದರೆ, ಚರ್ಚಿಸುವ ಅಗತ್ಯವೇ ಕಾಣುತ್ತಿಲ್ಲ.
Super priyank,
Everytime, balaga team members reply is very diplomatic. I like it!
“ಸಂಸ್ಕ್ರುತ ಶ್ಲೋಕಗಳನ್ನು ಬಾಯಿಪಾಟ ಮಾಡುವುದರಿಂದ ಕನ್ನಡ ಮಕ್ಕಳಿಗೆ ಏನು ದಕ್ಕೀತು?” ಎಂಬುದು ಪ್ರಶ್ನೆ. ”
ಇದೆ ಮಾತನ್ನ ನಿಮ್ಮ ಮನೆಯಲ್ಲಿ ಯಾವುದಾದರು ಧರ್ಮಿಕ ಕಾರ್ಯಕ್ರಮ ಆದಾಗ ಪ್ರಶ್ನೆ ಮಾಡಿ. ಬದಲಾವಣೆ ಮನೆಯಿಂದಲೆ ಆದರೆ ಒಳ್ಲೆಯದಲ್ಲವೆ? ನಿಮ್ಮ ಮಿತ್ರರು ಎಷ್ಟು ಜನ ಮಂತ್ರಗಳನ್ನು ಉಚ್ಚರಿಸುತ್ತಾರೆ,, ಅವರನ್ನು ಕನ್ನಡದಲ್ಲೆ ಉಚ್ಚರಿಸಲು ಹೇಳಿ. ಬದಲಾವಣೆ ನಿಮ್ಮ ಮನೆ ಬಳಗದಲ್ಲಿ ಸಾಗಲಿ.
“ದ್ವಿಪಕ್ಷ ಏರ್ಪಾಡು ಹೇಗೆ ಒಳಿತು? ಚರ್ಚಿಸಿ” ಎಂಬ ಪ್ರಶ್ನೆ ಪಟ್ಯಗಳಲ್ಲಿದೆಯೆಂದು ಆಪಾದನೆಗಳು ಪತ್ರಿಕೆಗಳಲ್ಲಿ ಕೇಳಿಬಂದಿತ್ತು.”
ಇದು ಚರ್ಚೆಯ ವಿಶ್ಹಯ ಅಲ್ಲವೆ? ಇದರ ಒಳಿತು ಕೆಡಕು ಚರ್ಚಿಸಿದರೆ ತಪ್ಪೇನು? ಅಲ್ಲೇನು ದ್ವಿಪಕ್ಶ ಆಳ್ವಿೆಯೆ ಬೇಕು ಎಂದು ದಬ್ಬಆಳಿಕೆ ನಡೆಸಿ ಎಂದು ಹೇಳಿಕೊಡುತ್ತಿಲ್ಲ ಅಲ್ಲವೆ?
ಹಾಗೆ ನೋಡಿದಲ್ಲಿ ಇತಿಹಾಸದಲ್ಲೆ ಎಷ್ಟು ಭಾಗವನ್ನು ಸತ್ಯ ರೂಪದಲ್ಲಿ ತೋರಿಸ್ತ್ತೆವೆ? ಕನ್ನಡನಾಡನ್ನು ಆಳಿದ ರಾಜರು ಪರಕೀಯ ಭಾಷಾ ಪದಗಳನ್ನು ಇಂದಿಗೂ ಆಡಳಿತದಲ್ಲೇ ಇರುವಂತೆ ಮಾಡೀಲ್ಲವೆ.? ಅದರ ಬಗ್ಗೆ ಯಾಕೆ ಎಲ್ಲೂ ಮಾತನಾಡುವುದಿಲ್ಲ? ಖಾತೆ, ಪಹಣಿ , ಜಹಗೀರು, ಬಗರ್ ಹುಕುಂ, ಇದೆಲ್ಲ ಕನ್ನಡ ಪದಗಳೆ? ಇದು ಆಮದಾಗಿದ್ದು ಎಲ್ಲಿಂದ? ಯಾರ ಕೊಡುಗೆ?
ಮಾನ್ಯರೇ,
ಜನರು ತಮ್ಮ ಸ್ವಂತವಾಗಿ ನಡೆಸುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮಗೆ ಇಷ್ಟ ಬಂದ ನುಡಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ, ಇದನ್ನು ಯಾರಾದರೂ ವಿರೋಧಿಸುವ ಅವಶ್ಯಕತೆಯೇ ನನಗೆ ಕಾಣುತ್ತಿಲ್ಲ.
“ಸಂಸ್ಕ್ರುತದಲ್ಲಿ ಮಂತ್ರಗಳನ್ನು ಜನರು ಹೇಳಬಾರದು” ಎನ್ನುವ ನಿಲುವು ನಿಮಗ್ಯಾಕೆ ಬಂತೋ ತಿಳಿಯುತ್ತಿಲ್ಲ.
ಬಲವಂತವಾಗಿ, ಯಾವುದೇ ಜನರ ಮೇಲೆ ಒಂದು ನುಡಿಯನ್ನು ಹೇರುವುದು ತಪ್ಪು. ಜನರಿಗೆ ನುಡಿಯ ಬಳಕೆಯ ಆಯ್ಕೆ ಕೊಡುವುದು ಒಳಿತು.
“ದ್ವಿಪಕ್ಷ ಏರ್ಪಾಡು ಹೇಗೆ ಒಳಿತು? ಚರ್ಚಿಸಿ” ಎಂಬ ಮಾತು ಸರಿಯಲ್ಲ ಎಂದು ಮಾನ್ಯ ಶಿಕ್ಷಣ ಸಚಿವರಿಗೂ ಕಂಡಿದೆ. ಅದಕ್ಕಾಗಿಯೇ, ಆ ಮಾತನ್ನು ತೆಗೆದು ಹಾಕಲು ತೀರ್ಮಾನ ಕೈಗೊಂಡಿದ್ದಾರೆ. ತಮಗೆ ಅಂತಹ ಚರ್ಚೆ ನಡೆಯುವುದು ಸರಿಯೆಂದು ಕಾಣುತ್ತಿದ್ದರೆ, ಇರಲಿ. ಅದು ನಿಮ್ಮ ನಿಲುವು.
ಇತಿಹಾಸದಲ್ಲಿ ಸತ್ಯರೂಪವನ್ನು ತೋರಿಸುತ್ತಿಲ್ಲ ಎಂದು ಹೇಳಿದ್ದೀರಿ. ತೋರಿಸದೇ ಇರಬಹುದು, ನನಗೆ ಹೆಚ್ಚು ಗೊತ್ತಿಲ್ಲ. “ಇತಿಹಾಸದ ಸತ್ಯರೂಪವನ್ನು ತೋರಿಸಬೇಕು” ಎಂಬುದೇ ನನ್ನ ನಿಲುವಾಗಿದೆ. ನಿಮ್ಮದೂ ಬಹುಶ ಇದೇ ನಿಲುವು ಎಂದುಕೊಂಡಿದೀನಿ.
ಕನ್ನಡ ಬೇರಿನವಲ್ಲದ ಪದಗಳು ಎಲ್ಲಿಂದ ಬಂತು, ಯಾರ ಕೊಡುಗೆ ಎಂಬ ಪ್ರಶ್ನೆಗಳನ್ನು ಕೇಳುತ್ತಾ, ಆ ಪದಗಳು ಬೇಕು ಎನ್ನುವ ಅನಿಸಿಕೆ ಹೇಳುತ್ತಿದ್ದಿರೋ? ಬೇಡ ಎಂಬ ಅನಿಸಿಕೆ ಹೇಳುತ್ತಿದ್ದೀರೋ? ಗೊತ್ತಾಗಲಿಲ್ಲ, ತಿಳಿಸಿ.
> ಜನರು ತಮ್ಮ ಸ್ವಂತವಾಗಿ ನಡೆಸುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮಗೆ ಇಷ್ಟ ಬಂದ ನುಡಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ,
> ಇದನ್ನು ಯಾರಾದರೂ ವಿರೋಧಿಸುವ ಅವಶ್ಯಕತೆಯೇ ನನಗೆ ಕಾಣುತ್ತಿಲ್ಲ.
ಇಲ್ಲಿ ಪ್ರಾರ್ಥನೆಯ ವಿಷಯ ಎಲ್ಲಿಂದ ಬಂತೆಂದು ತಿಳಿಯುತ್ತಿಲ್ಲ.
ಧರ್ಮವೆಂಬುದು ಯಾವುದೋ ಒಂದು ದೇವರ ಕುರಿತಾಗಿ ಹೇಳುವುದಿಲ್ಲ. ಹೀಗಾಗಿ “ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಾರ್ಥನೆ” ಎನ್ನುವುದು ಸರಿಹೊಂದುವುದಿಲ್ಲ.
ಬದಲಾಗಿ “ಮತೀಯ ಕಾರ್ಯಕ್ರಮದಲ್ಲಿ ಪ್ರಾರ್ಥನೆ” ಎನ್ನುವುದು ಸರಿಯಾದೀತು.
> “ಸಂಸ್ಕ್ರುತದಲ್ಲಿ ಮಂತ್ರಗಳನ್ನು ಜನರು ಹೇಳಬಾರದು” ಎನ್ನುವ ನಿಲುವು ನಿಮಗ್ಯಾಕೆ ಬಂತೋ ತಿಳಿಯುತ್ತಿಲ್ಲ.
ಯಾವ ಪ್ರತಿಕ್ರಿಯೆಯ ಕುರಿತಾಗಿ ನೀವು ಹೀಗೆ ನುಡಿಯುತ್ತಿದ್ದೀರೆಂದು ತಿಳಿಯಲಿಲ್ಲ.
> ಬಲವಂತವಾಗಿ, ಯಾವುದೇ ಜನರ ಮೇಲೆ ಒಂದು ನುಡಿಯನ್ನು ಹೇರುವುದು ತಪ್ಪು. ಜನರಿಗೆ ನುಡಿಯ ಬಳಕೆಯ ಆಯ್ಕೆ ಕೊಡುವುದು ಒಳಿತು.
ಖಂಡಿತವಾಗಿ. ಜನರಿಗೆ ಸಂಸ್ಕೃತವಾಗಲೀ ಅಥವಾ ಇನ್ಯಾವುದೇ ಭಾಷೆಯಾಗಲೀ ಬೇಡವೆಂದು ತಿಳಿಯುವುದೂ ಒಂದು ರೀತಿಯ ಹೇರುವಿಕೆಯೇ.
“- ಖಂಡಿತವಾಗಿ. ಜನರಿಗೆ ಸಂಸ್ಕೃತವಾಗಲೀ ಅಥವಾ ಇನ್ಯಾವುದೇ ಭಾಷೆಯಾಗಲೀ ಬೇಡವೆಂದು ತಿಳಿಯುವುದೂ ಒಂದು ರೀತಿಯ ಹೇರುವಿಕೆಯೇ.”
ಯಾವುದೇ ಭಾಷೆ ಕಲಿಯುವ ಆಸಕ್ತಿ ಇದ್ದವರು, ಕಲಿಯುತ್ತಾರೆ.
ಆಸಕ್ತಿಯಿಲ್ಲದವರು ಕಲಿಯುವುದಿಲ್ಲ. ಹೇರಿಕೆ ಬೇಕಾಗಿಲ್ಲ.
“ಯಾವುದೇ ಭಾಷೆ ಕಲಿಯುವ ಆಸಕ್ತಿ ಇದ್ದವರು, ಕಲಿಯುತ್ತಾರೆ. ಆಸಕ್ತಿಯಿಲ್ಲದವರು ಕಲಿಯುವುದಿಲ್ಲ. ಹೇರಿಕೆ ಬೇಕಾಗಿಲ್ಲ.”
dont force kids to goto school ..if they are interested they’ll learn !
> “ಸಂಸ್ಕ್ರುತ ಶ್ಲೋಕಗಳನ್ನು ಬಾಯಿಪಾಟ ಮಾಡುವುದರಿಂದ ಕನ್ನಡ ಮಕ್ಕಳಿಗೆ ಏನು ದಕ್ಕೀತು?” ಎಂಬುದು ಪ್ರಶ್ನೆ.
ಅದೇ ರೀತಿ ಮುಂದುವರೆದು “ಬಸವಣ್ಣನವರ/ಸರ್ವಜ್ಞನವರ ವಚನಗಳನ್ನು ಕಲಿಯುವುದರಿಂದ ಏನು ಪ್ರಯೋಜನ” ಎಂದು ಪ್ರಶ್ನಿಸಿ. ಅದಕ್ಕೂ ಸರಕಾರವು ಉತ್ತರಿಸುವುದಿಲ್ಲ.
“ಕಾಲೇಜಿನಲ್ಲಿ ಕಲಾ ವಿಭಾಗದ ವಿಷಯ ತೆಗೆದುಕೊಳ್ಳುವವನಿಗೆ ಶಾಲೆಯಲ್ಲಿ ಬೀಜಗಣಿತ ಏಕೆ ಕಲಿಸಬೇಕು” ಎಂದು ಪ್ರಶ್ನಿಸಿ. ಅದಕ್ಕೂ ಉತ್ತರ ಸಿಗುವುದಿಲ್ಲ.
ಉತ್ತರ ಸಿಗಲಿಲ್ಲ ಎಂದ ಮಾತ್ರಕ್ಕೆ ಅದರಿಂದ ಉಪಯೋಗವಿಲ್ಲವೆಂದು ತಿಳಿಯುವುದು ವಿವೇಕವೇ?
ಸರಕಾರ ಮಾತ್ರ ಉತ್ತರ ಕೊಡಬೇಕೆಂದು ಏಕೆ ಅಪೇಕ್ಷಿಸುವಿರಿ? ನೀವೇ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು ಅಲ್ಲವೇ?
ಆದರೆ, ಆ ರೀತಿ ಉತ್ತರ ಹುಡುಕುವಾಗ ಯಾವುದೇ ಪೂರ್ವಾಗ್ರಹವಿಲ್ಲದೆ ಹುಡುಕಬೇಕು ಮತ್ತು ನಿಮ್ಮ ಸಿದ್ಧಾಂತಕ್ಕೆ ಸರಿಹೊಂದುವ ಉತ್ತರವೇ ದೊರೆಯಬೇಕು; ಆಗ ಮಾತ್ರ ಅದನ್ನು ಒಪ್ಪುವೆ, ಎಂಬುದಾಗಿ ಇಟ್ಟುಕೊಂಡಿರಬಾರದು.
ಇಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಬಾಯಿಪಾಠ ಮಾಡುವುದರಿಂದ ಏನು ದೊರೆಯುತ್ತದೆ ಎನ್ನುವುದಕ್ಕಿಂತ, ಅದರಲ್ಲಿರುವ ಸಾರವನ್ನು ಹೀರಿಕೊಂಡರೆ ಏನು ಲಾಭವಾಗುತ್ತದೆ ಎಂದು ಅರಿತರೆ ಉತ್ತಮವಾದೀತು. ಉದಾಹರಣೆಗೆ “ಸ್ಥಿತಪ್ರಜ್ಞ” ಎಂಬ ವಿಷಯದ ಕುರಿತಾಗಿ ಭಗವದ್ಗೀತೆಯಲ್ಲಿ ತಿಳಿಸಿರುವಷ್ಟು ವಿವರವಾಗಿ ಮತ್ತು ಸರಳವಾಗಿ ಬೇರೆಲ್ಲಿಯೂ ಹೇಳಿರುವುದು ನನ್ನ ಗಮನಕ್ಕೆ ಬಂದಿಲ್ಲ.
ಶ್ಲೋಕಗಳನ್ನು ಬಾಯಿಪಾಠ ಮಾಡುವುದರಿಂದ ಅದರದ್ದೇ ಆದ ಲಾಭಗಳಿವೆ. ಆ ಲಾಭವು ಶ್ಲೋಕಕ್ಕಾಗಲೀ ಅಥವಾ ಸಂಸ್ಕೃತಕ್ಕಾಗಲೀ ಅಲ್ಲ; ಅದನ್ನು ಬಾಯಿಪಾಠ ಮಾಡಿದವನಿಗೇ ಲಾಭ. ಮೊದಲನೆಯದಾಗಿ ಬಾಯಿಪಾಠ ಮಾಡುವ ಅಭ್ಯಾಸವಾಗುತ್ತದೆ. ಎರಡೆನೆಯದಾಗಿ ನಾಲಗೆಯು ಚೆನ್ನಾಗಿ ಹೊರಳಿ ಅದಕ್ಕೆ ಒಳ್ಳೆಯ ಸಂಸ್ಕಾರ ಸಿಗುತ್ತದೆ. ಮೂರನೆಯದಾಗಿ, ನಮ್ಮ ದೇಶದ ಪ್ರತಿಯೊಂದು ಭಾಷೆಯಲ್ಲಿಯೂ ಸಂಸ್ಕೃತದ ಪದಗಳಿವೆ – ಹೀಗಾಗಿ ವಿವಿಧ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ, ಕಲಿತುಕೊಳ್ಳುವಲ್ಲಿ ಅದು ಸಹಕಾರಿಯಾಗುತ್ತದೆ. ಅನೇಕ ಹಿತೋಪದೇಶಗಳು ಶ್ಲೋಕದ ರೂಪದಲ್ಲಿವೆ – ಅವು ಮನಸ್ಸಿನಲ್ಲಿ ಕೂರುತ್ತವೆ.
ಈ ರೀತಿಯ ಅನೇಕ ಲಾಭಗಳು ಇರುವಾಗ, ಬೇಡ ಎಂದು ನೀವು ಸುಲಭವಾಗಿ ಹೇಳುತ್ತಿರುವುದು ಕಂಡು ಆಶ್ಚರ್ಯವೆನಿಸುತ್ತಿದೆ.
ಕುಮಾರರೇ,
ನೀವು ಎತ್ತಿದ ಪ್ರಶ್ನೆಗಳು ಸರಿಯಾದವೇ.
ಸರ್ವಗ್ನನವರ/ಬಸವಣ್ಣನವರ ವಚನಗಳು ಕನ್ನಡದಲ್ಲಿದ್ದು, ಅವು ಕನ್ನಡಿಗರಿಗೆ ಸುಲಬವಾಗಿ ಅರಿವಾಗುತ್ತವೆ.
ಸನ್ನಡತೆ ಬಗ್ಗೆ ಮಕ್ಕಳಿಗೆ ಪರಿಚಯಿಸುವುದು, ಅವರ ಮುಂದಿನ ಜೀವನಗಳಿಗೆ ಒಳಿತು ಮಾಡಬಲ್ಲುದು ಎಂಬ ಆಶಯವೊಂದರಿಂದಲೇ, ಇವು ಪಟ್ಯಗಳಲ್ಲಿ ಬಂದಿವೆ.
ಭಗವದ್ಗೀತೆಯನ್ನು ಕನ್ನಡದಲ್ಲಿ ಪರಿಚಯಿಸಿದರೆ, ಕನ್ನಡಿಗರಿಗೆ ಅದರ ಸಾರ ಹೀರುವುದು ಸಾದ್ಯವಾಗಬಹುದು. ಆದರೆ, ಸಂವಿಧಾನವು ಧಾರ್ಮಿಕ ಗ್ರಂಥಗಳನ್ನು ಪರಿಚಯಿಸಲು ಅವಕಾಶ ಕೊಟ್ಟಿಲ್ಲ. ನೀವು ಮುಂಚೆಯೇ ಹೇಳಿದಂತೆ, ಭಗವದ್ಗೀತೆಯು ಯಾವುದೇ ಒಂದು ಧರ್ಮದ ಗ್ರಂಥವಲ್ಲ ಎಂಬ ವಾದವೂ ಇದೆ.
ಇನ್ನು, ನಾನು ಮೊದಲೇ ಹೇಳಿದಂತೆ, “ಭಗವದ್ಗೀತೆಯನ್ನು ಓದುವುದರಿಂದ ಮತೀಯ ಭಾವನೆ ಬೆಳೆಯುತ್ತದೆ” ಎನ್ನುವುದೂ, “ಭಗವದ್ಗೀತೆಯನ್ನು ಓದುವುದರಿಂದ ಅನ್ಯಾನ ಅನಾಚಾರ ದೂರಾಗುತ್ತದೆ” ಎನ್ನುವುದು, ಎರಡೂ ಊಹೆಗಳೇ.
ಕನ್ನಡಿಗರು ಭಗವದ್ಗೀತೆಯನ್ನು ಬಾಯಿಪಾಟ ಮಾಡುವುದರಿಂದ, ಅವರ ನಾಲಿಗೆಗೆ ಒಳ್ಳೆಯ ಸಂಸ್ಕಾರ ಸಿಗುತ್ತದೆ ಎಂಬಂತಹ ಮಾತುಗಳನ್ನಾಡಿದ್ದೀರ. “ಕನ್ನಡಿಗರು, ಕನ್ನಡವೊಂದನ್ನೇ ಮಾತನಾಡಿದರೆ, ಅವರ ನಾಲಗೆಗೆ ಒಳ್ಳೆಯ ಸಂಸ್ಕಾರ ಸಿಗುವುದಿಲ್ಲ” ಎಂಬ ನಂಬಿಕೆ ನಿಮ್ಮದಾಗಿದ್ದರೆ, ನಿಮ್ಮ ಜೊತೆ ಚರ್ಚೆಯಲ್ಲಿ ಪಾಲ್ಗೊಳ್ಳುವುದು ನನಗೆ ಸರಿ ಕಾಣುತ್ತಿಲ್ಲ.
ಸಿಗಣ.
> “ಕನ್ನಡಿಗರು, ಕನ್ನಡವೊಂದನ್ನೇ ಮಾತನಾಡಿದರೆ, ಅವರ ನಾಲಗೆಗೆ ಒಳ್ಳೆಯ ಸಂಸ್ಕಾರ ಸಿಗುವುದಿಲ್ಲ” ಎಂಬ ನಂಬಿಕೆ ನಿಮ್ಮದಾಗಿದ್ದರೆ,
> ನಿಮ್ಮ ಜೊತೆ ಚರ್ಚೆಯಲ್ಲಿ ಪಾಲ್ಗೊಳ್ಳುವುದು ನನಗೆ ಸರಿ ಕಾಣುತ್ತಿಲ್ಲ.
ಆ ರೀತಿ ನೀವೇ ಅಂದುಕೊಂಡು ಚರ್ಚೆಯನ್ನು ನಿಲ್ಲಿಸಿದರೆ ಅದು ನಿಮ್ಮಿಷ್ಟ.
ನಾನೆಲ್ಲೂ ಆ ರೀತಿಯ ಅರ್ಥ ಬರುವಂತೆ ಹೇಳಿಲ್ಲ. ಸಂಸ್ಕೃತದ ರಚನೆ ವೈಜ್ಞಾನಿಕವಾಗಿದೆ (ಹಾಗೆಂದು ಕನ್ನಡದ ರಚನೆ ವೈಜ್ಞಾನಿಕವಲ್ಲವೇ ಎಂದು ಕೇಳಬೇಡಿ).
ಶಬ್ದೋತ್ಪತ್ಥಿಯ ಸ್ಥಾನಗಳನ್ನು ಗುರುತಿಸಿ ಭಾಷೆಯ ರಚನೆ ಮಾಡಲಾಗಿದೆ. ಅದನ್ನು ಕಲಿಯುವುದರಿಂದ ನಮ್ಮ ಉಚ್ಚಾರಣೆಗೆ ಹೆಚ್ಚು ಲಾಭವಾಗಬಹುದೇ ಹೊರತು, ನಷ್ಟವಂತೂ ಇಲ್ಲ. ಸಾಧ್ಯವಿದ್ದರೆ ಜಗತ್ತಿನ ಎಲ್ಲ ಭಾಷೆಗಳನ್ನೂ ಕಲಿಯಿರಿ. ಅದರಿಂದ ಲಾಭವಾಗುವುದು ಕಲಿಯುವವನಿಗೆ.
ಯಾವ್ಯಾವುದೋ ಕಾರಣ ಹೇಳಿ, ಎಲ್ಲ ಭಾಷೆಗಳನ್ನೂ ಪಕ್ಕಕ್ಕೆ ಸರಿಸುತ್ತಾ, ನಮಗದು ಬೇಡವೆಂದು ಹೇಳುತ್ತಿದ್ದರೆ, ಕಡೆಗೆ ಕನ್ನಡವೇ ಪರಕೀಯವಾಗಿಬಿಡಬಹುದು.
ಕುಮಾರರೇ,
“ಸಂಸ್ಕ್ರುತ ಕಲಿತರೆ, ಕಲಿತವರ ನಾಲಗೆಗೆ ಸಂಸ್ಕಾರ ಬರುವುದು” ಎಂಬ ಮಾತಿನ ಅರ್ಥ ಬೇರೇನಿದೆ ನೀವೇ ಹೇಳಿ.
ಸಂಸ್ಕಾರವೆನ್ನುವುದನ್ನು ನೀವು ಹೇಗೆ ತೀರ್ಮಾನಿಸಿದಿರಿ? ತಿಳಿಸಿ.
ನನ್ನ ನಿಲುವನ್ನು ತಾವು ತಪ್ಪಾಗಿ ಅರಿತುಕೊಂಡಂತಿರುವುದರಿಂದ, ಈ ಮಾತನ್ನು ಹೇಳಬೇಕಾಗಿದೆ.
ಯಾವುದೇ ನುಡಿಯ ಕಲಿಕೆ, ಅವರವರ ಆಸಕ್ತಿ ಮತ್ತು ಆಯ್ಕೆಯಾಗಿರಲಿ.
ಆಸಕ್ತಿ ಇರುವವರು ಕಲಿಯಲಿ, ಅವರನ್ನು ಕಲಿಯದಂತೆ ತಡೆಯುವ ಯಾವ ಕೆಲಸವೂ ಸಲ್ಲದು.
ಯಾವುದೇ ನುಡಿಯ ಕಲಿಕೆ ಹೇರಿಕೆಯಾಗದಿರಲಿ. ಹೇರಿಕೆ ಮಾಡಹೊರಟರೆ, ತೊಂದರೆಗಳು ಸಾವಿರಾರು.
ಮಾನ್ಯ Pungidaasa ಅವರೇ,,
ಸ್ಥಳೀಯ ಜನರ ಮಾತೃಬಾಶೆಯಲ್ಲಿ ಶಿಕ್ಷಣ ಕೊಡುವುದು ಸರಕಾರದ ಆದ್ಯ ಕರ್ತವ್ಯವಾಗಬೇಕು. ಅದೇ ಕಾರಣಕ್ಕೆ ಕನ್ನಡ, ಮರಾಠಿ, ಉರ್ದು, ತಮಿಳು ಶಾಲೆಗಳು ರಾಜ್ಯದಲ್ಲಿವೆ. ಮಾತೃಬಾಶೆಯಲ್ಲೇ ಶಿಕ್ಷಣ ನೀಡುವುದು ಒಂದು ನಾಡಿನ ಏಳಿಗೆಗೆ ಪ್ರಮುಖ ಆಧಾರಸ್ಥಂಬವಾಗುತ್ತದೆ ಎಂಬುದನ್ನು ನಾವು ಮುಂದುವರೆದ ದೇಶದಿಂದ ನೋಡುತ್ತಲೇ ಇದ್ದೇವೆ. ಮಾತೃಬಾಶೆಯಲ್ಲಿ ಶಿಕ್ಷಣ ಪಡೆದು ಸಿ.ಎ, ಸಿವಿಲ್ ಸರ್ವಿಸಸ್ ಸಂಬಂದಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ದೊಡ್ಡ ಉದಾಹರಣೆಗಳು ನಮ್ಮ ಮುಂದೆ ಇವೆ. ಇಷ್ಟೆಲ್ಲ, ಇದ್ದರೂ ನಾಡಿನ ಶಿಕ್ಷಣವನ್ನು ಸರಿದಾರಿಗೆ ಕರೆದುಕೊಂಡು ಹೋಗಬೇಕಾದ ಸರಕಾರ ಮಕ್ಕಳ ಕೊರತೆ ಕಾರಣವೊಡ್ಡಿ ಶಾಲೆ ಮುಚ್ಚುತ್ತಿರುವುದು ಸರಿಯೇ.? ಎಂಥ ಬೇಜವಾಬ್ದಾರಿ ನಡೆ ಸರಕಾರದ್ದು ಎಂದು ಸ್ಪಷ್ತವಾಗಿ ಗೋಚರಿಸುತ್ತದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆ, ಅಲ್ಲಿನ ಮೂಲ ಸೌಕರ್ಯ ಸರಿಯಾಗಿದೆಯೇ ಎಂಬುದರ ಬಗ್ಗೆ ಕಿಂಚಿತ್ತು ಯೋಚಿಸದೇ, ಶಿಕ್ಷಣ ಎಂದರೇ ಇಂಗ್ಲೀಷ್ ಮಾದ್ಯಮ ಎಂಬ ಕುರುಡು ನಂಬಿಕೆಯನ್ನು ಜನರಿಂದ ಹೋಗಲಾಡಿಸದೇ ರಾತ್ರಿ ಕಂಡ ಬಾವಿಯಲ್ಲಿ ಹಗಲಿನಲ್ಲಿ ಹೋಗಿ ಬೀಳುವುದು ಸರಿಯೇ.?
> ಸ್ಥಳೀಯ ಜನರ ಮಾತೃಬಾಶೆಯಲ್ಲಿ ಶಿಕ್ಷಣ ಕೊಡುವುದು ಸರಕಾರದ ಆದ್ಯ ಕರ್ತವ್ಯವಾಗಬೇಕು.
> ಅದೇ ಕಾರಣಕ್ಕೆ ಕನ್ನಡ, ಮರಾಠಿ, ಉರ್ದು, ತಮಿಳು ಶಾಲೆಗಳು ರಾಜ್ಯದಲ್ಲಿವೆ.
ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವುದು ಒಪ್ಪುವ ಮಾತು; ಅದರ ಕುರಿತಾಗಿ ಯಾರದೂ ಅಭ್ಯಂತರವಿಲ್ಲ ಎನಿಸುತ್ತದೆ.
ಆದರೆ, ಎಲ್ಲರಿಗೂ ಅವರವರ ಮಾತೃಭಾಷೆಯಲ್ಲೇ ಶಿಕ್ಷಣ ಕೊಡುವುದು ಸಾಧ್ಯವೇ ಎನ್ನುವುದು ಪ್ರಶ್ನೆ.
ಉದಾಹರಣೆಗೆ, ಕರ್ನಾಟಕದಲ್ಲಿ ನೆಲೆಸಿರುವ ಬಂಗಾಳಿ ಕುಟುಂಬಕ್ಕೆ ಬಂಗಾಳಿ ಶಾಲೆ ತೆರೆಯಬೇಕು ಎನ್ನುವುದು ನಿಮ್ಮ ಸಲಹೆಯೇ?
ಆ ರೀತಿ ಮಾಡುತ್ತಾ ಹೋದರೆ, ಎಷ್ಟು ಭಾಷೆಯ ಶಾಲೆಗಳನ್ನು ತೆರೆಯುವುದು ಮತ್ತು ಆಯಾ ಭಾಷೆಗಳ ಶಿಕ್ಷಕರನ್ನು ಎಲ್ಲಿಂದ ಪೂರೈಸುವುದು?
ಕರ್ನಾಟಕದ ಸ್ಥಳೀಯ ಭಾಷೆ ಕನ್ನಡ ಮತ್ತು ಇಲ್ಲಿರುವ ಎಲ್ಲರೂ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎನ್ನುವುದು ನನ್ನ ಆಗ್ರಹ.
ಅದಕ್ಕೆ ಸರಕಾರವೂ ಆದ್ಯತೆ ನೀಡಬೇಕು. ಕರ್ನಾಟಕದಲ್ಲಿಯೇ ಕನ್ನಡ ಕಡ್ಡಾಯವಾಗದಿದ್ದರೆ ಬೇರೆಲ್ಲಿ ತಾನೇ ಸಾಧ್ಯ?
> ಮಾತೃಬಾಶೆಯಲ್ಲೇ ಶಿಕ್ಷಣ ನೀಡುವುದು ಒಂದು ನಾಡಿನ ಏಳಿಗೆಗೆ ಪ್ರಮುಖ ಆಧಾರಸ್ಥಂಬವಾಗುತ್ತದೆ
> ಎಂಬುದನ್ನು ನಾವು ಮುಂದುವರೆದ ದೇಶದಿಂದ ನೋಡುತ್ತಲೇ ಇದ್ದೇವೆ.
ಇಲ್ಲಿ ನೀವು ಆಯಾ ದೇಶದ ಮಾತೃಭಾಷೆಯ ಕುರಿತಾಗಿ ಮಾತ್ರ ಹೇಳುತ್ತಿರುವಿರೆಂದು ಭಾವಿಸುವೆ.
ಮೇಲೆ ಹೇಳಿದಂತೆ “ಕನ್ನಡ, ಮರಾಠಿ, ಉರ್ದು, ತಮಿಳು ಶಾಲೆಗಳು” ಅಲ್ಲಿದೆ ಎನ್ನುವ ಅರ್ಥದಲ್ಲಿ ಹೇಳುತ್ತಿಲ್ಲವೆಂದು ಭಾವಿಸುವೆ. 😉
ಮಾನ್ಯ ಮಹೇಶ್,
ಸರ್ಕಾರ ಎಲ್ಲಿ ಇದ್ದ ಬದ್ದ ಕನ್ನಡ ಶಾಲೆಗಳನ್ನ ಮುಚ್ಚಿದೆ? ಅಥವಾ ಎಲ್ಲ ಕನ್ನಡ ಶಾಲೆಗಳಲ್ಲಿ ಆಂಗ್ಲವೆ ನಡೆಯಬೇಕೆಂದು ಕಡ್ಡಾಯ ಮಾಡಿದೆ? ಮಕ್ಕಳ ಕೊರತೆ ಇಲ್ಲ ಎನ್ನುವುದಾದರೆ ಪೂರಕ ದಾಖಲೆ ಒದಗಿಸಿ ನ್ಯಾಯಲಯಕ್ಕೆ ಕೊಡಿ. ಸಿವಿಲ್ ಸರ್ವೀಸ್ ನಲ್ಲಿ ಪಸಗಿದ್ದಾರೆ ನಿಜ. ಆದರೆ ಅದರ ಪ್ರಮಾಣ ? ಕಳೆದ ೧೦ ವರ್ಷದಲ್ಲಿ ಅನುಪಾತ ಪ್ರಕಟಿಸಿ.
ಎಲ್ಲ ಕಡೆ ಕನ್ನಡವೆ ಬೆಕುನ್ನವ ಜನರು ತಮ್ಮ ಮಕ್ಕಳನ್ನು ಕಳಿಸುವುದೆ ಆಂಗ್ಲ ಮಾಧ್ಯ್ಮಕ್ಕೆ.:)
pungidaasarE, vaadakkaagi vaada maaDo mondutana biDi.
ವಾದಕ್ಕಾಗಿ ಬಾದ ಯಾರು ಮಾಡುತ್ತಾ ಇದ್ದಾರೆ ಅನ್ನ್ನೋದು ಚೆನ್ನಾಗಿ ಗೊತ್ತು ಬಿಡಿ. ಅಲ್ಲದೆ ಈ ರೀತಿಯ ರಾಜಕೀಯ ದುರುದ್ದೇಶ ಲೇಖ್ಹನಗಳು ಯಾಕೆ ಬರುತ್ತಿವೆ ಅನ್ನುವುದು ಗೊತ್ತು…. ಯಾರನ್ನು ಓಲೈಸಲು ಅಥವಾ ಪುಸಲಾಯಿಸಲು RSS ಮತ್ತು BJP ವಿರೋಧಿ ಲೇಖ್ಹನಗಳು ಪುಂಖನುಪುಂಖವಾಗಿ ಹರಿದು ಬರುತ್ತಿದೆ ಎನ್ನುವುದು ಚೆನ್ನಗಿ ಗೊತ್ತಾಗಿದೆ.