‘ಗುಹೆ’ ತೊರೆದ ‘ಸಿಂಹ’
– ರಾಘವೇಂದ್ರ ಅಡಿಗ ಎಚ್ಚೆನ್
ಹೌದು ಸ್ನೇಹಿತರೆ, ಕನ್ನಡ ನಾಟಕಲೋಕದ ಅದ್ಬುತ ಪ್ರತಿಭೆ, ನಟ, ನಿರ್ದೇಶಕ, ಅಂಕಣಾಕಾರರಾಗಿಯೂ ಖ್ಯಾತಿ ಗಳಿಸಿದ್ದ ಸಿ.ಆರ್. ಸಿಂಹ ನಮ್ಮನ್ನೆಲ್ಲಾ ಹೋಗಿದ್ದಾರೆ. ‘ನಟರಂಗ’ ದ ಮೂಲಕ ಖ್ಯಾತಿ ಗಳಿಸಿದ್ದ ರಂಗಕರ್ಮಿ, ಚಿತ್ರ ಕಲಾವಿದರೂ, ನಿರ್ದೇಶಕರೂ ಆಗಿ ಜನಮಾನಸದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿಂಹ ಇದೇ ಫೆಬ್ರವರಿ 28 ರಂದು ತಮ್ಮ 72 ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಪೂರೈಸಿದ್ದಾರೆ. ಅದೂ ಕೂಡ ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನವೇ ಎನ್ನುವುದು ವಿಧಿ ವಿಪರ್ಯಾಸ.
ಚಿಕ್ಕಂದಿನಿಂದಲೂ ರಂಗಭೂಮಿಯೊಂದಿಗೆ ನಂಟನ್ನು ಹೊಂದಿದ್ದ ಸಿ.ಆರ್. ಸಿಂಹರವರು ತಾವೇ ರಚಿಸಿದ ‘ನಟಾರಂಗ’ ಎನ್ನುವ ನಾಟಕ ತಂಡದ ಮೂಲಕ ‘ತುಘಲಕ್’, ‘ಸಂಕ್ರಾಂತಿ’, ಮೊದಲಾದ ನಾಟಕಗಳಾನ್ನು ರಂಗದ ಮೇಲೆ ತಂದು ಜನಪ್ರಿಯಗೊಳಿಸಿದ್ದರು. ಅದರಲ್ಲಿಯೂ ‘ತುಘಲಕ್’ ನಾಟಕದ ತುಘಲಕ್ ಪಾತ್ರವನ್ನು ತಾವೇ ನಟಿಸಿದ್ದ ಆ ಪಾತ್ರವೇ ಅವರಿಗೆ ಸಾಕಷ್ಟು ಜನಮನ್ನಣೆ ಗಳಿಸಿಕೊಟ್ಟಿತ್ತು. ಆ ಕಾಲದಲ್ಲಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ತುಘಲಕ್’ ಬರೋಬ್ಬರಿ 200 ಪ್ರದರ್ಶನಗಳನ್ನು ಕಂಡಿತ್ತು! ಗಿರೀಶ್ ಕಾರ್ನಾಡರ ಇನ್ನೊಂದು ಪ್ರಸಿದ್ದ ನಾಟಕ ’ತಲೆದಂಡ’ ದಲ್ಲಿನ ಬಿಜ್ಜಳನ ಪಾತ್ರದಲ್ಲಿಯೂ ಮಿಂಚಿದ್ದ ಸಿಂಹರವರಿಗೆ ತಾವು ನಟಿಸಿದ ಪಾತ್ರದೊಳಗೆ ಪ್ರವೇಶಿಸಿ ಅದನ್ನು ತನ್ನದಾಗಿಸಿಕೊಳ್ಳುವ ಕಎಲೆಯು ಸಿದ್ದಿಸಿತ್ತು. ಇವರ ನಿರ್ದೇಶನದಲ್ಲಿ ಮೂಡಿಬಂದ ಏಕವ್ಯಕ್ತಿ ನಾಟಕ ‘ಟಿಪಿಕಲ್ ಕೈಲಾಸಮ್’ ಕೈಲಾಸಂ ಬಗೆಗಿನ ಸಿಂಹರವರ ಅಭಿಮಾನಕ್ಕೊಂದು ಸಾಕ್ಷಿಯಾದರೆ ‘ ರಸಋಷಿ ಕುವೆಂಪು’ ಸಿಂಹರಿಗೆ ರಸಋಷಿಯ ಮೇಲಿದ್ದ ಪ್ರೀತಿಯನ್ನು ತೋರುವಂತಹುದು.