ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-2
– ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ
ಸಾರ್ವಭೌಮ ಪ್ರಭುತ್ವ(State) ಮತ್ತು ಸಾರ್ವಜನಿಕ ವಲಯ
ಇಂದಿನ ಭಾರತೀಯ ಪ್ರಭುತ್ವ ಎನ್ನುವ ಕಲ್ಪನೆಯು ಪಶ್ಚಿಮದ ರಾಜಕೀಯ ವ್ಯವಸ್ಥೆಯಿಂದಲೇ ಎರವಲಾಗಿ ಬಂದಿದೆ. ಈ ವಿಷಯವು ನಿಸ್ಸಂಶಯವಾಗಿ ಇಂದು ರಾಜ್ಯಶಾಸ್ತ್ರದ ವಲಯದಲ್ಲಿ ಒಂದು ಸಾಮಾನ್ಯ ತಿಳುವಳಿಕೆಯೇ ಆಗಿದೆ. ಅದನ್ನು ಒಂದು ರೀತಿಯಲ್ಲಿ ಸಕಾರಾತ್ಮಕವಾಗಿಯೇ ವಿವರಿಸಿಕೊಳ್ಳಲಾಗಿದೆ. ಪಶ್ಚಿಮದ ವಿವಿಧ ರಾಷ್ಟ್ರಗಳಲ್ಲಿ ನೂರಾರು ವರ್ಷಗಳಿಂದ ಪ್ರಾಯೋಗಿಕವಾಗಿ ದೃಢಪಡಿಸಿಕೊಂಡು, ಅಳವಡಿಸಿಕೊಂಡು ಬರಲಾದ ರಾಜಕೀಯ ರಚನೆಗಳಿಂದ ಅತ್ಯುತ್ತಮವಾದ ಅಂಶಗಳನ್ನು ಭಾರತದ ಸಂವಿಧಾನ ಕರ್ತೃಗಳು ಪಡೆದು ಭಾರತಕ್ಕೆ ಅಳವಡಿಸಿದ್ದಾರೆ ಎನ್ನುವುದೇ ಆ ಹೆಗ್ಗಳಿಕೆಯಾಗಿದೆ. ಆದರೆ ಈ ಹೆಗ್ಗಳಿಕೆಯ ಮೇಲೆ ಅಳವಡಿಸಿಕೊಂಡಿರುವ ರಾಜಕೀಯ ರಚನೆಗಳು, ಇಲ್ಲಿಯ ಸಾಮಾಜಿಕ ಸಂದರ್ಭದಲ್ಲಿ ಇಲ್ಲಿಯ ಸಾಂಸ್ಕೃತಿಕ ಹಿನ್ನೆಲೆಯ ಜನರು ಇವುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅವುಗಳಿಗೆ ಪೂರಕವಾಗಿ ನಡೆದುಕೊಳ್ಳದೇ ಇರುವುದರಿಂದ, ಅವು ಇಲ್ಲಿ ಅಪಭ್ರಂಶ (distortion) ಕ್ಕೆ ಒಳಗಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆಯೇ ಎನ್ನುವಂತಹ ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪಶ್ಚಿಮದಲ್ಲಿ ಪ್ರಭುತ್ವ ಪರಿಕಲ್ಪನೆ ಬೆಳವಣಿಗೆಯ ಸ್ವರೂಪಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
ನಮಗೆ ಗೊತ್ತಿರುವ ಹಾಗೆ ಸ್ಟೇಟ್ ಎನ್ನುವುದು ಒಂದು ಸಾರ್ವಭೌಮ ಸಂಸ್ಥೆ. ಯಾರೂ ಪ್ರಶ್ನಿಸಲಾರದ ಅಧಿಕಾರ ಅದಕ್ಕಿದೆ. ಜನರ ಜೀವನವು ಈ ಸ್ಟೇಟ್ನ ಸಾರ್ವಭೌಮ ಕಾನೂನುಗಳ ನಿಯಂತ್ರಣ ಮತ್ತು ನಿರ್ದೇಶನಕ್ಕೆ ಒಳಪಟ್ಟು ನಡೆಯಬೇಕು. ಈ ಸ್ವರೂಪದ ಸ್ಟೇಟ್ ಎಂದೆಂದಿಗೂ ಸಾರ್ವತ್ರಿಕವಾಗಿಯೇ ಇತ್ತೇ? ಖಂಡಿತವಾಗಿಯೂ ಇಲ್ಲ. ಈ ರೀತಿಯ ಸ್ಟೇಟ್ ಬೆಳೆದು ಬಂದಿದ್ದು ಪಶ್ಚಿಮ/ಯೂರೋಪಿನಲ್ಲಿ ಮತ್ತು ಈ ರೀತಿಯ ಸಾರ್ವಭೌಮ ನಿಯಂತ್ರಕ ಮತ್ತು ನಿರ್ದೇಶಕನ ಸ್ವರೂಪವನ್ನು ಪಡೆದುಕೊಂಡಿದ್ದು ಹೆಚ್ಚುಕಡಿಮೆ 17-18ನೇ ಶತಮಾನದ ನಂತರ ಎಂದೇ ಹೇಳಬಹುದು (Mukherji, Partha Nath, 2010). ಮತ್ತಷ್ಟು ಓದು