ಕಾಮನ ಹಬ್ಬ
– ಹಂಸಾನಂದಿ
ಇವತ್ತು ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತರ ಅಲ್ಲೇ ಸುಳಿಯುತ್ತಿದ್ದ ಪಾರ್ವತಿಯನ್ನು ಕಂಡು, ಅವಳನ್ನು ಮೆಚ್ಚಿ ಮದುವೆಯಾಗಿದ್ದು; ವಿರಕ್ತರಲ್ಲಿ ವಿರಕ್ತನಾಗಿದ್ದ ಶಿವನು ಪ್ರೇಮಿಗಳಲ್ಲಿ ಪ್ರೇಮಿಯಾಗಿ ಕಂಗೊಳಿಸಿದ್ದು, ನಂತರ ಷಣ್ಮುಖ ಹುಟ್ಟಿದ್ದು ಇದೇ ಕಾಳಿದಾಸನ ಕುಮಾರ ಸಂಭವ ಕಾವ್ಯದ ಮುಖ್ಯ ಹೂರಣ.
ಅದಕ್ಕೇ ಶಿವನನ್ನು ಭರ್ತೃಹರಿ ತನ್ನ ಶೃಂಗಾರ ಶತಕದಲ್ಲಿ ಹೀಗೆ ಕೊಂಡಾಡುತ್ತಾನೆ: (ಪದ್ಯ -೯೭)
ಏಕೋ ರಾಗಿಷು ರಾಜತೇ ಪ್ರಿಯತಮಾದೇಹಾರ್ಧಧಾರೀ ಹರೋ
ನೀರಾಗಿಷ್ವಾಪಿ ಯೋ ವಿಮುಕ್ತ ಲಲನಾಸಂಗೋ ನ ಯಸ್ಮಾತ್ಪರಃ |
ದುರ್ವಾರ ಸ್ಮರಬಾಣಪನ್ನಗವಿಷಜ್ವಾಲಾವಲೀಢೋ ಜನಃ
ಶೇಷಃ ಕಾಮವಿಡಂಬಿತೋ ಹಿ ವಿಷಯಾನ್ ಭೋಕ್ತುಂ ನ ಮೋಕ್ತುಂ ಸಮಃ ||
(ಸಾರಾಂಶ: ಪ್ರೇಮಿಗಳಲ್ಲಿ ಅಗ್ರೇಸರನಾದವನು ತನ್ನ ದೇಹದ ಅರ್ಧಭಾಗದಲ್ಲೇ ತನ್ನ ಪ್ರಿಯೆ ಪಾರ್ವತಿಯನ್ನು ಧರಿಸಿ ಅರ್ಧನಾರೀಶ್ವರನಾದಂತಹ ಶಿವ. ಅದೇ ರೀತಿ ಅವನೇ ಹೆಣ್ಣಿನ ಸಂಗವನ್ನು ತೊರೆದ ವಿರಾಗಿಗಳಲ್ಲೂ ಅವನೇ ಅಗ್ರಗಣ್ಯ! ಅದಕ್ಕೇ ಅಲ್ಲವೇ ನಿವಾರಿಸಲಾರದ ಹಾವಿನ ವಿಷ ಜ್ವಾಲೆಯಂತಹ ಕಾಮಬಾಣಗಳನ್ನು ಅವನು ತಡೆಯಲು ಸಾಧ್ಯವಾಗಿದ್ದು? ಸಾಮಾನ್ಯ ಜನರಿಂದ ಆಗುವುದೇನು? ಪಾಪ, ಕಾಮಬಾಣಗಳಿಗೆ ಸಿಲುಕಿದರೆ ಅವರು, ಅನುಭವಿಸಲೂ, ಬಿಡಲೂ, ಒಂದೂ ಅರಿಯದೇ ಹೋಗುವರು!)
ಮತ್ತಷ್ಟು ಓದು
ಧರ್ಮ ಅನಿವಾರ್ಯವೇ?
– ಪ್ರಸನ್ನ ಬೆಂಗಳೂರು
ಅಯ್ಯೋ! ನಮ್ಮ ದೇಶದಲ್ಲಿ ಕಾನೂನಿಗೆ ಬೆಲೆ ಇಲ್ಲ ಕಣ್ರೀ ಎಂದು ನಿರಾಶದಾಯಕ ಮಾತುಗಳನ್ನು ನಾವು ಕೇಳಿರುತ್ತೇವೆ.
ಅದಕ್ಕೆ ಕಾರಣವೇನು ಎಂಬುದನ್ನು ನಾವು ಎಂದಾದರೂ ಮನಗಾಣಲು ಪ್ರಯತ್ನಿಸಿದ್ದೇವೆಯೆ?
ಕಾನೂನು (ಧರ್ಮ) ಎನ್ನುವುದು ನಿರ್ಬಂಧ, (ಇಲ್ಲಿ ನಾನು ಧರ್ಮ ಎನ್ನುವುದನ್ನು ಕಾನೂನು ಎಂದೆ ಕರೆಯುತ್ತಿದ್ದೇನೆ ಕಾರಣ ಬಹುತೇಕರಿಗೆ ನಮ್ಮಲ್ಲಿ ಧರ್ಮವೆಂದಾಕ್ಷಣ ಒಂದು ತೆರನಾದ ಅಸಡ್ಡೆ ಅಥವ ಯಾವುದಕ್ಕೂ ಬೇಡದ ಅಥವ ನಾನು ಅದರಿಂದ ದೂರವಿದ್ದು ಎಲ್ಲ ಧರ್ಮೀಯರಿಗೂ ಒಳ್ಳೆಯವನು ಸಮಾನ ಎನಿಸಿಕೊಳ್ಳಬೇಕೆನ್ನುವ ಚಟವಿರುತ್ತದೆ ಹಾಗಾಗಿ ಧರ್ಮ ಎಂಬುದನ್ನು ಕಾನೂನೆಂದೆ ನಾನು ಸಂಬೋಧಿಸುತ್ತೇನೆ.ಅದು ಹೌದೂ ಕೂಡ) ಸಂಕೋಲೆ ಅದನ್ನು ಮುರಿಯುವುದು ಧಿಕ್ಕರಿಸುವುದು ಹದಿಹರೆಯದಲ್ಲಿ ಸಾಹಸದ ಕೆಲಸ ಎನಿಸಿಕೊಳ್ಳುತ್ತದೆ. ಅಂತಹ ಕಾರ್ಯವನ್ನು ಕೆಲವರು ಆಸ್ವಾದಿಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲೇಬೇಕೆಂಬ ನಿಯಮವಿಲ್ಲ. ಆದ್ದರಿಂದಲೇ ಇಲ್ಲಿ ಕಾನೂನು ಮುರಿಯುವುದು ತಪ್ಪಿನ ಕೆಲಸ ಎನಿಸಿಕೊಳ್ಳುವುದೇ ಇಲ್ಲ. ಎಲ್ಲವೂ ಸ್ವಯಂ ನಿಯಂತ್ರಣದ ನೈತಿಕತೆಯ ಮೇಲೆ ನಿಂತಿರುತ್ತದೆ. ಉದಾಹರಣೆಗೆ ರಾತ್ರಿ ಹನ್ನೆರಡು ಗಂಟೆಯಲ್ಲಿ ನಿರ್ಜನ ಪರಿಸ್ಥಿತಿಯಲ್ಲಿ ಹಸಿರು ದೀಪಕ್ಕಾಗಿ ಕಾಯುವುದಿಲ್ಲ. ಕಾರಣ ನನ್ನಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂಬ ನೈತಿಕತೆಯಷ್ಟೇ ಇಲ್ಲಿ ಕೆಲಸ ಮಾಡುತ್ತದೆ.