ನಾಡು- ನುಡಿ:ಮರುಚಿಂತನೆ :– “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 5
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ಕುರುಬರ ಮೂಲವನ್ನು ಕುರಿತಾದ ವಿಶ್ಲೇಷಣೆಗಳನ್ನು ನೋಡವುದಾದರೆ ಪ್ರಸ್ತುತ ಲಭ್ಯವಿರುವ ಸಾಹಿತ್ಯವು ಕುರುಬರ ಮೂಲಕ್ಕೆ ಕೆಲವು ಕಥೆ ಮತ್ತು ಪುರಾಣಗಳನ್ನು ಆಧಾರವಾಗಿರಿಸಿರುವುದನ್ನು ಕಾಣಬಹುದಾಗಿದೆ. ಉದಾಹರಣೆಗೆ ಹಾಲುಮತ ಪುರಾಣ ಮತ್ತು ಉಂಡಾಡು ಪದ್ಮಣ್ಣನ ಕಥೆಗಳು ಕುರುಬರ ಮೂಲದ ಕುರಿತಾದ ವಿಶ್ಲೇಷಣೆಗಳನ್ನು ಬಹಳವಾಗಿ ಪ್ರಭಾವಿಸಿದೆ. ಇದನ್ನು ನಾವು ಕುರುಬರ ಕುರಿತಾಗಿ ಅಧ್ಯಯನ ನಡೆಸಿರುವ ಪಾಶ್ಚಾತ್ಯ ಚಿಂತಕರಾದ ಎಡ್ಗರ್ ಥಸ್ರ್ಟನ್ ರವರ ದಿ ಟ್ರೈಬ್ಸ್ ಅಂಡ್ ಕ್ಯಾಸ್ಟ್ ಆಫ್ ಸೌಥ ಇಂಡಿಯಾ (1987) ಮತ್ತು ಎಂಥೋವೆನ್ ರವರ ದಿ ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಬಾಂಬೆ, (1990) ಪುಸ್ತಕಗಳ ವಿವರಗಳಲ್ಲಿಯೇ ಗುರುತಿಸಬಹುದಾಗಿದೆ. ಕುರುಬರ ಮೂಲವನ್ನು ಕುರಿತಾಗಿ ಹಲವಾರು ಕಥೆಗಳು ಚಾಲಿಯಲ್ಲಿವೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕುರುಬರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾದಂತಹ ಕಥೆಗಳನ್ನು ಹೇಳುವುದು ಅಲ್ಲದೇ, ಈ ಎಲ್ಲಾ ಕಥೆಗಳು ಅಂದಿನ ಅಥವಾ ಆ ಪ್ರದೇಶದ ಜಾನಪದ ಹಿನ್ನೆಲೆಯಲ್ಲಿ ರೂಪ ಪಡೆದಿದ್ದು, ಮೌಖಿಕವಾಗಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬದಲಾವಣೆಗಳೊಂದಿಗೆ ಉಳಿದು ಬಂದಿವೆ ಎಂಬುದು ಸ್ಪಷ್ಟವಾಗುತ್ತದೆ. ಮತ್ತು ಈ ಎಲ್ಲಾ ಕಥೆಗಳು ಕುರುಬರ ಮೂಲವನ್ನೇ ವಿವರಿಸುತ್ತವೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅಲ್ಲದೇ ಬಹುಪಾಲು ಉಪಜಾತಿಗಳು (ಅವುಗಳನ್ನು ಉಪಜಾತಿಗಳು ಎಂದು ಹೇಗೆ ಗುರುತಿಸುವುದು ಎನ್ನುವುದು ಬೇರೆಯದೇ ಪ್ರಶ್ನೆ) ತಮ್ಮದೇ ಆದಂತಹ ಬೇರೆ ಬೇರೆ ಕಥೆಗಳನ್ನು ಹೇಳುವುದು ಕಂಡುಬರುತ್ತದೆ. ಕುರುಬ ಸಮುದಾಯದಲ್ಲಿನ ಆಚರಣೆ ಮತ್ತು ಉಪಜಾತಿಗಳ ಕುರಿತಾದ ವಿವರವನ್ನು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗಲಿದೆ.