೨೦೧೪ರ ಚುನಾವಣ ಕಣದ ಸುತ್ತ
– ಡಾ.ಕಿರಣ್ ಎಂ ಗಾಜನೂರು
ಭಾರತದಲ್ಲಿ ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದೆ.ಹಾಗೆ ನೋಡುವುದಾದರೆ ಭಾರತದಲ್ಲಿ ಇದುವರೆಗೆ ನಡೆದ ಲೋಕಸಭಾ ಚುನಾವಣೆಗಳಿಗಿಂತ ೨೦೧೪ರ ಈ ಲೋಕಸಭಾ ಚುನಾವಣೆ ಹೆಚ್ಚು ಚರ್ಚೆಯಲ್ಲಿದೆ ಮತ್ತು ಜನ ಸಮಾನ್ಯರಲ್ಲಿಯು ಒಂದು ಸಹಜ ಕುತೂಹಲವನ್ನು ಈ ಚುನಾವಣೆ ಹುಟ್ಟುಹಾಕಿದೆ.ಭಾರತದಲ್ಲಿನ ಪ್ರಮುಖ ರಾಜಕೀಯ ಚಿಂತಕರು,ಮಾಧ್ಯಮಗಳು ಈ ವಿದ್ಯಮಾನಕ್ಕೆ ಹಲವಾರು ಕಾರಣಗಳನ್ನು ಗುರುತಿಸಿದ್ದಾರೆ ಅದರಲ್ಲಿ ಬಹಳ ಮುಖ್ಯವಾದದ್ದು
೧) ಆಡಳಿತಾತ್ಮಕ ಮತ್ತು ಭ್ರಷ್ಟಾಚಾರದ ಕಾರಣಕ್ಕಾಗಿ (ಮುಖ್ಯವಾಗಿ ಬೆಲೆ ಎರಿಕೆ) ರೂಪಿತಗೊಂಡ ಕಾಂಗ್ರೆಸ್ಸ್ ವಿರೋಧಿ ನಿಲುವು
೨) ಬಿ.ಜೆ.ಪಿ ತನ್ನ ಪ್ರಧಾನಿ ಆಭ್ಯರ್ಥಿ ನರೆಂದ್ರ ಮೋದಿಯವರ ಹಿನ್ನಲೆಯಲ್ಲಿ ರೂಪಿಸಿಕೊಂಡ ಜನಪ್ರಿಯತೆ.
ಹಾಗಾದರೆ, ೨೦೧೪ ರ ಚುನಾವಣೆ ಈ ಎರಡು ನಿಲುಗಳ ಆಧಾರದಲ್ಲಿಯೆ ನಡೆಯುತ್ತದಾ? ದೇಶದ ಎಲ್ಲಾ ಭಾಗದ ಮತದಾರ ಈ ನಿಲುವುಗಳ ಆಧಾರದಲ್ಲಿಯೆ ಮತ ಚಲಾಯಿಸುತ್ತಾನಾ? ಎಂಬ ಪ್ರಶ್ನೆಯನ್ನು ಭಾರತದಲ್ಲಿ ಇದುವರೆಗೆ ನಡೆದ ಲೋಕಸಭಾ ಚುನಾವಣೆಗಳ ಹಿನ್ನಲೆಯಲ್ಲಿ ವಿಶ್ಲೇಷಿಸಿ ಕೇಳಿಕೊಂಡರೆ, ’ಖಂಡಿತಾ ಇಲ್ಲಾ’ ಎಂಬ ಉತ್ತರವನ್ನೂ ಯಾರಾದರೂ ನೀರಿಕ್ಷಿಸಬಹುದಾಗಿದೆ…! ಏಕೆಂದರೆ ಕಳೆದ ಹತ್ತು ವರ್ಷಗಳ ಕಾಲ ಈ ದೇಶವನ್ನು ಆಳಿದ ಯುಪಿಎ ಸರ್ಕಾರ ಹಲವಾರು ಹಗರಣಗಳನ್ನು ತನ್ನ ಮೇಲೆ ಎಳೆದುಕೊಂಡಿದ್ದರೂ ಆದರ ಜೊತೆ ಜೊತೆಗೆ ’ಆರ್.ಟಿ.ಐ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನ”ಯಂತಹ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಮೂಲಕ ಸಮಾಜದ ಹಲವು ವರ್ಗಗಳ ಜನರ ಬೆಂಬಲವನ್ನು ಗಳಿಸಿಕೊಂಡಿದೆ .ಅದೂ ಅಲ್ಲದೆ, ಈ ದೇಶವನ್ನು ಹೆಚ್ಚು ಕಾಲ ಆಳಿದ ಕಾಂಗ್ರೆಸ್ಸ್ ಪಕ್ಷ ಅದರದ್ದೆ ಆದಂತಹ ಒಂದು ಮತದಾರರ ವರ್ಗ ಮತ್ತು ಬುದ್ದಿಜೀವಿಗಳ ಗುಂಪನ್ನು ಸೃಷ್ಟಿಸಿಕೊಂಡಿದೆ ಅವರು ಎಂದಿಗೂ ಕಾಂಗ್ರೆಸ್ಸ್ ಅನ್ನು ಬೆಂಬಲಿಸುತ್ತಾರೆ ಮತ್ತು ಚುನಾವಣೆಯಲ್ಲಿ ಈ ಅಂಶ ಖಂಡಿತವಾಗಿ ಪ್ರಭಾವ ಬೀರಲಿದೆ.ಇದರ ಜೊತೆಗೆ ದೇಶದ ಭವಿಷ್ಯದ ಪ್ರಧಾನಿ ಎಂದು ಕಾಂಗ್ರೆಸ್ಸ್ ವಲಯದಲ್ಲಿ ಗುರುತಿಸಿಕೊಂಡಿರುವ ರಾಹುಲ್ ಗಾಂಧಿಯವರು ಇತ್ತಿಚೆಗೆ “ಭಾರತಕ್ಕೆ ಬೇಕಿರುವುದು ಇಲ್ಲಿನ ವಿವಿಧತೆಯನ್ನು ಅವುಗಳ ನೆಲೆಯಲ್ಲಿಯೆ ಗುರುತಿಸಿ ಬೆಳೆಸಬೇಕಾದ ರಾಜಕೀಯ ಪಕ್ಷವೆ ಹೊರತು ವ್ಯಕ್ತಿ ಕೇಂದ್ರಿತ ಪಕ್ಷವಲ್ಲ” ಎಂಬ ಮಾದರಿಯ ಪ್ರಜಾಸತ್ತಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಕಾಂಗ್ರೆಸ್ಸಿನಲ್ಲಿ ತಮ್ಮ ಈ ನಿಲುವನ್ನು ಜಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಇದಕ್ಕೆ ಉದಾಹರಣೆ ಇತ್ತೀಚೆಗೆ ಕಾಂಗ್ರೆಸ್ಸ್ ಪಕ್ಷದೊಳಗೆ ನಡೆದ ಆಂತರಿಕ ಚುನಾವಣೆ.ಈ ಅಂಶವು ದೇಶದ ಮಧ್ಯಮ ವರ್ಗದ ಮತದಾರರನ್ನು ಖಂಡಿತಾ ಸೆಳೆಯುತ್ತದೆ.