ಕೃತಘ್ನ ಜಸ್ವಂತ್ ಸಿಂಗ್?
– ನರೇಂದ್ರ ಕುಮಾರ್
ಚುನಾವಣೆ ಘೋಷಣೆಯಾದಂತೆ ರಾಜಕಾರಣಿಗಳ ಬಣ್ಣ ಬಯಲಾಗಲು ಆರಂಭಿಸುತ್ತದೆ. ಚುನಾವಣೆಗೆ ಮುನ್ನ ಸಿದ್ಧಾಂತದ ಕುರಿತು ಮಾತನಾಡುವ ರಾಜಕಾರಣಿಗಳಿಗೆ, ಸಿದ್ಧಾಂತವೆನ್ನುವುದು ಕೇವಲ ರಾಜಕೀಯ ಪಕ್ಷದಲ್ಲುಳಿಯಲು ಇರುವ ಸಾಧನವಷ್ಟೇ ಎನ್ನುವುದು ಚುನಾವಣೆಯ ಸಮಯದಲ್ಲಿ ಸಾಬೀತಾಗುತ್ತದೆ. ಪ್ರತಿ ಚುನಾವಣೆಯ ಸಮಯದಲ್ಲೂ ಬಹಿರಂಗಗೊಳ್ಳುವ ಸಂಗತಿಯಿದು. ಇದೀಗ ಈ ರೀತಿ ಮುಖವಾಡ ಕಳಚಿ ನೈಜತೆ ಗೋಚರಿಸಿರುವುದು ಜಸ್ವಂತ್ ಸಿಂಗ್ ಅವರ ವಿಷಯದಲ್ಲಿ!
ಜಸ್ವಂತ್ ಸಿಂಗ್ ಕಳೆದ ಹಲವು ದಶಕಗಳಿಂದ ಭಾಜಪದೊಂದಿಗೆ ಜೋಡಿಸಿಕೊಂಡಿದ್ದಾರೆ. ಅವರು ತಮ್ಮನ್ನು ಭಾಜಪದೊಂದಿಗೆ ಜೋಡಿಸಿಕೊಂಡಿದ್ದಾರೆ ಎನ್ನುವುದಕ್ಕಿಂತ, ಭಾಜಪ ಪಕ್ಷವೇ ಅವರನ್ನು ತನ್ನೊಡನೆ ಸೇರಿಸಿಕೊಂಡಿದೆ ಎಂದು ಹೇಳಿದರೆ ಸರಿಯಾದೀತು. ಜಸ್ವಂತ್ ಸಿಂಗ್ ಎಂದೂ ಜನನಾಯಕರಾಗಿರಲಿಲ್ಲ. ಹೀಗಿದ್ದಾಗ್ಯೂ ಭಾಜಪ ಅವರಿಗೆ ತನ್ನ ಪಕ್ಷದಲ್ಲಿ ಸ್ಥಾನ ನೀಡಿತ್ತು. ವಾಜಪೇಯಿ ಸರಕಾರದಲ್ಲಿ ಅವರು ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನೂ ಪಡೆದರು. ಮುಂದೆ ಅವರ ಮಗನಿಗೂ ಭಾಜಪದಲ್ಲಿ ಸ್ಥಾನ ಸಿಕ್ಕಿತು ಮತ್ತು ವಿಧಾನಸಭೆಯಲ್ಲಿ ಶಾಸಕರಾದರು.
ಜಸ್ವಂತ್ ಸಿಂಗ್ ಅವರಿಗೆ ಒಂಬತ್ತು ಬಾರಿ ಸಂಸದರಾಗಲು ಭಾಜಪ ಅವಕಾಶ ನೀಡಿತು. 1989ರಲ್ಲಿ ಜೋಧಪುರ್ ಮತ್ತು 1991 ಹಾಗೂ 1996ರಲ್ಲಿ ಚಿತ್ತೋರಘರ್ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದರು. ಆದರೆ ಮುಂದಿನ ಚುನಾವಣೆಯಲ್ಲಿ, ಅಂದರೆ 1998ರಲ್ಲಿ ಅವರು ಚುನಾವಣೆಯಲ್ಲಿ ಸೋಲಬೇಕಾಯಿತು. ಹೀಗಿದ್ದಾಗ್ಯೂ ಅವರನ್ನು ರಾಜ್ಯಸಭೆಯ ಮೂಲಕ ಪ್ರವೇಶ ಮಾಡಿಸಿ, ಅವರನ್ನು ವಾಜಪೇಯೀ ಮಂತ್ರಿಮಂಡಲದಲ್ಲಿ ವಿದೇಶಾಂಗ ಮಂತ್ರಿಯನ್ನಾಗಿ ಮಾಡಲಾಯಿತು. ಮುಂದೆ 2002ರಲ್ಲಿ ಅವರು ವಿತ್ತಸಚಿವರಾಗಿ ಎರಡು ಬಾರಿ ಬಜೆಟ್ ಮಂಡಿಸುವ ಅವಕಾಶವನ್ನೂ ಪಡೆದರು. 2004ರಲ್ಲಿ ರಾಜ್ಯಸಭೆಗೆ ಪುನರ್ನಾಮಕರಣಗೊಂಡ ಜಸ್ವಂತ್ ಸಿಂಗ್ ಅವರು, 2009ರಲ್ಲಿ ಲೋಕಸಭಾ ಚುನಾವಣೆಗೆ ಡಾರ್ಜಿಲಿಂಗ್ ಇಂದ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಭಾಜಪಾವು ಗೋರ್ಖಾ ಜನಮುಕ್ತಿ ಮೋರ್ಚಾದೊಡನೆ ಹೊಂದಾಣಿಕೆ ಮಾಡಿಕೊಂಡದ್ದರಿಂದಾಗಿ ಜಸ್ವಂತ್ ಸಿಂಗ್ ಚುನಾವಣೆಯಲ್ಲಿ ಗೆದ್ದರು. 2012ರಲ್ಲಿ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಭಾಜಪಾವು ಚುನಾವಣೆಯಲ್ಲಿ ನಿಲ್ಲಿಸಿತ್ತು. ಆದರೆ, ಭಾಜಪಕ್ಕೆ ಆವಶ್ಯಕ ಬಹುಮತ ಇಲ್ಲದ್ದರಿಂದ ಜಸ್ವಂತ್ ಸಿಂಗ್ ಆ ಚುನಾವಣೆಯಲ್ಲಿ ಗೆಲ್ಲಲಿಲ್ಲ; ಹಮೀದ್ ಅನ್ಸಾರಿಯವರು ಉಪರಾಷ್ಟ್ರಪತಿಯಾದರು.