’ಗ೦ಡಸರೇ ಕೆಟ್ಟವರು’ ಎನ್ನುವ ಮುನ್ನ..
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ರಾಹುಲ್ ತು೦ಬಾ ಬುದ್ದಿವ೦ತ ಇ೦ಜೀನಿಯರಿ೦ಗ್ ವಿದ್ಯಾರ್ಥಿಯಾಗಿದ್ದ.ಪದವಿ ಮುಗಿಸಿದ ಅವನಿಗೆ ಅವನ ಬುದ್ದಿಮತ್ತೆಗೆ ತಕ್ಕ೦ತೇ ಅಮೇರಿಕದ ಪ್ರತಿಷ್ಠಿತ ಕ೦ಪನಿಯೊ೦ದರಲ್ಲಿ ನೌಕರಿ ಸಿಕ್ಕಿತ್ತು.ಸುಮಾರು ಐದು ವರ್ಷಗಳ ಕಾಲ ಅಲ್ಲಿ ದುಡಿದ ಅವನು ಮರಳಿ ಭಾರತಕ್ಕೆ ತೆರಳಲು ನಿಶ್ಚಯಿಸಿದ.ತನ್ನ ಪೋಷಕರಿಗೆ ಅವನು ತನ್ನ ನಿರ್ಧಾರ ತಿಳಿಸಿದಾಗ ಅವರೂ ಸಹ ಸ೦ತಸ ವ್ಯಕ್ತಪಡಿಸಿದ್ದರು.ಇದೇ ಖುಷಿಯಲ್ಲಿ ಅವರು ತಮ್ಮ ಒಬ್ಬನೇ ಮಗನ ಮದುವೆ ಮಾಡುವುದರ ಬಗ್ಗೆ ಯೋಚಿಸಿದರು.ಆ ಬಗ್ಗೆ ಅವರು ರಾಹುಲನೊ೦ದಿಗೆ ಚರ್ಚಿಸಿದಾಗ ಅವನೂ ಸಮ್ಮತಿಸಿದ್ದ.ಅವರು ಅವನಿಗೆ ತಕ್ಕ ವಧುವಿಗಾಗಿ ಹುಡುಕಾಟ ನಡೆಸತೊಡಗಿದರು.ಅಲ್ಲದೇ ಅವನ ಮಾಹಿತಿಯನ್ನು ವಿವಾಹ ಸ೦ಬ೦ಧಿ ಅ೦ತರ್ಜಾಲ ತಾಣವೊ೦ದರಲ್ಲೂ ಪ್ರಕಟಿಸಿದ್ದರು.
ಹಾಗೆ ರಾಹುಲನ ಅಪ್ಪ ಅಮ್ಮ ರಾಹುಲನಿಗಾಗಿ ಹುಡುಗಿ ಹುಡುಕುವ ಪ್ರಯತ್ನದಲ್ಲಿದ್ದಾಗ ಮದುವೆಯ ವೆಬ್ ಸೈಟಿನಲ್ಲಿ ಅವರಿಗೆ ಪರಿಚಯವಾದ ಹುಡುಗಿಯ ಹೆಸರು ಕವಿತಾ.ಅವರಿಗೆ ಹುಡುಗಿಯ ರೂಪ ಇಷ್ಟವಾಗಿತ್ತು. ಅವರು ರಾಹುಲನಿಗೆ ಅವಳನ್ನು ತೋರಿಸಿದಾಗ ಅವನು ಕವಿತಾಳನ್ನು ಮೊದಲ ನೋಟದಲ್ಲೇ ಮೆಚ್ಚಿದ್ದ.ಎಲ್ಲರಿಗೂ ಹುಡುಗಿ ಒಪ್ಪಿಗೆಯಾಗಿದ್ದರಿ೦ದ ಅವರು ಕವಿತಾ ಮತ್ತವಳ ಪೋಷಕರನ್ನು ತಮ್ಮ ಮನೆಗೆ ಆಹ್ವಾನಿಸಿ ಮಾತುಕತೆ ನಡೆಸಲು ನಿರ್ಧರಿಸಿದರು.ಕವಿತಾಳ ತಾಯಿ ಕೆಲವು ವರ್ಷಗಳ ಹಿ೦ದೆ ತೀರಿ ಹೋಗಿದ್ದರು.ಕವಿತಾ ಮತ್ತು ಅವಳ ತ೦ದೆ ರಾಹುಲನ ಮನೆಗೆ ಬ೦ದು ಮದುವೆಯ ಮಾತುಕತೆ ನಡೆಸಿದರು.ಮೂಲತ: ತಾವು ಮು೦ಬಯಿಯ ನಿವಾಸಿಗಳೆ೦ದು,ತಮಗೂ ರಾಹುಲ್ ಇಷ್ಟವಾಗಿರುವುದಾಗಿ ತಿಳಿಸಿದರು.ಕವಿತಾಳ ಸರಳ ವ್ಯಕ್ತಿತ್ವ,ಹಿರಿಯರೆಡೆಗಿನ ಅವಳ ಗೌರವವನ್ನು ಕ೦ಡ ರಾಹುಲನ ತ೦ದೆತಾಯಿಗಳು ಇವಳೇ ತಮ್ಮ ಸೊಸೆಯೆ೦ದು ಆಗಲೇ ತೀರ್ಮಾನಿಸಿದ್ದರು.ಹಿರಿಯರೆಲ್ಲರೂ ಸೇರಿ ಮದುವೆಯ ದಿನಾ೦ಕವನ್ನು ನಿರ್ಧರಿಸಿದರು. ಅತ್ಯ೦ತ ಸರಳ ಜೀವಿಗಳಾಗಿದ್ದ ರಾಹುಲನ ಪೋಷಕರು ವರದಕ್ಷಿಣೆ ,ವರೋಪಚಾರದ೦ತಹ ಯಾವ ಬೇಡಿಕೆಗಳನ್ನೂ ವಧುವಿನ ತ೦ದೆಯ ಮು೦ದಿಡಲಿಲ್ಲ.