ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-3
– ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ
ಭ್ರಷ್ಟಾಚಾರ ಮತ್ತು ನೈತಿಕತೆಯ ಚೌಕಟ್ಟು
ಪ್ರಭುತ್ವದ ಚೌಕಟ್ಟಿನಲ್ಲಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸುವುದನ್ನು ಸಾಮಾನ್ಯವಾಗಿ ಭ್ರಷ್ಟಾಚಾರ ಎಂದು ಕರೆಯುತ್ತಾರೆ, ಮತ್ತು ಅದು ಈ ಚೌಕಟ್ಟಿನೊಳಗೆ ಅನೈತಿಕವೆಂದೂ ಸಹ ಗುರುತಿಸಲ್ಪಡುತ್ತದೆ. ಆದರೆ ಸಾಮಾಜಿಕ ನೆಲೆಯಲ್ಲಿ ಹೀಗೆ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಳ್ಳದಿರುವುದಕ್ಕೂ ಅನೈತಿಕತೆಗೂ ಸಂಬಂಧವನ್ನು ಇಲ್ಲಿಯ ಜನರು ಭಾವಿಸಿಕೊಳ್ಳದಿರುವುದನ್ನು ಮೇಲಿನ ಉದಾಹರಣೆಗಳಲ್ಲಿ ಉಲ್ಲೇಖಿಸಿದ್ದೆ. ಪ್ರಭುತ್ವದ ಚೌಕಟ್ಟಿನ ಸಾರ್ವಜನಿಕ ಜೀವನದ ನೆಲೆಯಲ್ಲಿ ಈ ರೀತಿಯ ನಡವಳಿಕೆಯು ಅನೈತಿಕ ಮತ್ತು ಅದರಿಂದಲೇ ಅದು ಭ್ರಷ್ಟಾಚಾರ ಎಂದು ಸಾಮಾನ್ಯವಾಗಿ ಸಮಾಜಶಾಸ್ತ್ರೀಯವಾಗಿ ಮತ್ತು ಮಾದ್ಯಮ ವಲಯದಲ್ಲಿ ಗುರುತಿಸಲ್ಪಡುತ್ತಿದ್ದರೂ ಜನರು ಹಾಗೆ ಪರಿಭಾವಿಸುವುದು ಕಂಡುಬರುವುದಿಲ್ಲ. ಏಕೆ ಹೀಗೆ? ಇದನ್ನೂ ನಾನು ಒಂದು ಸಾಂಸ್ಕೃತಿ ಭಿನ್ನತೆಯ ಪ್ರಶ್ನೆಯಾಗಿಯೇ ನೋಡುವ ಪ್ರಯತ್ನ ಮಾಡಿದ್ದೇನೆ.
ಯಾವುದೇ ವ್ಯಕ್ತಿ ಅಥವಾ ಸಮೂಹದ ಯಾವುದೇ ಒಂದು ನಡವಳಿಕೆ ಭ್ರಷ್ಟನಡವಳಿಕೆ ಎಂದು ಗುರುತಿಸುವುದು ಹೇಗೆ ಆರಂಭವಾಯಿತು? ಈ ಪ್ರಶ್ನೆ ಇಟ್ಟುಕೊಂಡು ಹುಡುಕಿದರೆ ಸಿಗುವ ಉತ್ತರ ವಿಶೇಷವಾದದ್ದು. ಭಾರತದಲ್ಲಿ ಈ ರೀತಿಯ ವಿವರಣೆಗಳು ಬ್ರಿಟೀಷರಿಂದ ಆರಂಭವಾಗುತ್ತದೆ. ಬ್ರಿಟೀಷರು ಸುಳ್ಳು ಆಚರಣೆಗಳನ್ನೇ ಭ್ರಷ್ಟ ಆಚರಣೆಗಳೆಂದು ಗುರುತಿಸುತ್ತಾರೆ. ಇದಕ್ಕೂ ನಿಜ ರಿಲಿಜನ್ ಮತ್ತು ಸುಳ್ಳು ರಿಲಿಜನ್ ಎನ್ನುವ ಪಶ್ಚಿಮದ ಕ್ರಿಶ್ಚಿಯನ್ ಥಿಯಾಲಜಿಯ ಚೌಕಟ್ಟಿಗೂ ಸಂಬಂಧವಿದೆ. ನಿಜವಾದ ರಿಲಿಜನ್ (ಗಾಡ್ನ)ನೈತಿಕ ನಿಯಮಗಳ ಆಧಾರದಲ್ಲಿದ್ದು ಅದನ್ನು ಪಾಲಿಸುವವರು ನೈತಿಕರು ಎಂದಾದರೆ ಸುಳ್ಳು ರಿಲಿಜನ್ ಅನ್ನು ಅನುಸರಿಸುವವರು ನಿಜ ರಿಲಿಜನ್ನ ನೈತಿಕ ನಿಯಮಗಳಿಗೆ ವಿರುದ್ಧವಾದ ಅನೈತಿಕ ಆಚರಣೆಗಳನ್ನು ಮಾಡುವವರು ಎಂದು ಗುರುತಿಸಲಾಗುತ್ತದೆ. ಭ್ರಷ್ಟತೆಯ ಇಂಗ್ಲೀಷ್ ರೂಪವಾದ ಕರಪ್ಟ್ (Corrupt) ಅಂದರೆ ಸತ್ಯವು ಭ್ರಷ್ಟಗೊಳ್ಳುವುದು ಅಥವಾ ವಿರೂಪಗೊಳ್ಳುವುದು ಎಂದರ್ಥ. ಭಾರತೀಯ ಸಮಾಜ ಮತ್ತು ಇಲ್ಲಿಯ ಆಚರಣೆಗಳನ್ನು ವಿವರಿಸಬೇಕಾದರೆ ಅವರು ಬಳಸಿದ ಭ್ರಷ್ಟ ರಿಲಿಜನ್(Corrupt Religion), ಭ್ರಷ್ಟ ಸಮಾಜ(Corrupt Society), ಮತ್ತು ಭ್ರಷ್ಟ ಆಚರಣೆಗಳು(Corrupt Practices) ಎಂಬ ವಿವರಣೆಗಳು ಈ ಹಿನ್ನೆಲೆಯಿಂದಲೇ ಬರುತ್ತವೆ. ಹಾಗಾಗಿ, ಪಾಶ್ಚಿಮಾತ್ಯರ ರಿಲಿಜನ್ ಸಂಸ್ಕೃತಿಯ ಹಿನ್ನೆಲೆಯಲ್ಲಿ ಭ್ರಷ್ಟ ಆಚರಣೆ ಅಥವಾ ನಡವಳಿಕೆ ಎಂದರೇನೆ ಅದು ಅನೈತಿಕ ಆಚರಣೆ ಅಥವಾ ಅನೈತಿಕ ನಡವಳಿಕೆ ಎಂದರ್ಥವಾಗುತ್ತದೆ. ಹಾಗಾಗಿ, ಈ ಸಾಂಸ್ಕೃತಿಕ ಹಿನ್ನೆಲೆಯ ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರೇನೆ ಈ ಚೌಕಟ್ಟಿನ ಪ್ರಕಾರ ಅನೈತಿಕತೆಯಲ್ಲಿ ತೊಡಗಿದ್ದಾರೆ ಎಂದಾಗುತ್ತದೆ. ಆದರೆ ಭಾರತೀಯ ಸಂದರ್ಭದಲ್ಲಿ ಈ ರಿಲಿಜಸ್ ಸಂಸ್ಕೃತಿಯ ಹಿನ್ನೆಲೆ ಇಲ್ಲದಿರುವುದರಿಂದ ಭ್ರಷ್ಟಾಚಾರದಲ್ಲಿ ತೊಡಗಿದ್ದವರು ಅನೈತಿಕ ವ್ಯವಹಾರದಲ್ಲಿ ತೊಡಗಿದ್ದಾರೆ ಎಂಬ ಮನೋಭಾವನೆ ಜನರಲ್ಲಿ ಬರುವುದಿಲ್ಲ. ಬದಲಾಗಿ ಹೆಚ್ಚೆಂದರೆ ಅವರು ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡು ತಪ್ಪುಮಾಡಿದ್ದಾರೆ ಎಂದುಕೊಳ್ಳುತ್ತಾರೆ ಅಷ್ಟೇ. ಮತ್ತಷ್ಟು ಓದು
ಹೀಗೊಂದು ಊರಿನ ಕತೆ:
– ಬಾಲಚಂದ್ರ ಭಟ್
ಅದೊಂದು ಊರು. ಬಡವ-ಬಲ್ಲಿದ, ಬುದ್ದಿವಂತ, ದಡ್ಡ ಎಲ್ಲರೂ ಇದ್ದ ಊರು. ಆ ಊರಿಗೆ ದರೋಡೆಕೋರರ ಕಾಟ. ಹಿಂಸೆ, ಬಲಾತ್ಕಾರ, ದೋಚುವದು ಇವೆಲ್ಲವನ್ನೂ ಮಾಡುತ್ತಿದ್ದರು.ದರೋಡೆಕೊರರನ್ನು ಎದುರಿಸುವದಕ್ಕೆ ಭಯಪಟ್ಟ ಕೆಲವು ಚಿಂತಕರು ದರೋಡೆಕೋರರ ಜೊತೆ ಸಂಧಾನಕ್ಕಿಳಿಯುವ ದಾರಿಯನ್ನು ಯೋಚಿಸಿದರು. ಕೆಲವು ಸಾಹಸಿಗಳು ದಾಳಿಕೋರರಿಗೆ ಅವರದೇ ರೀತಿಯಲ್ಲಿ ಉತ್ತರಿಸುವ ಯೋಜನೆ ಹಾಕಿಕೊಂಡರು.ಒಮ್ಮೆ ದರೋಡೆಕೋರರು ಹಳ್ಳಿಗೆ ಧಾಳಿಯಿಟ್ಟರು. ಚಿಂತಕರು ವಿದ್ಯಾವಂತರೇನೊ ಹೌದು. ಆದರೆ ದರೋಡೆಕೋರರನ್ನು ಎದುರಿಸುವ ಧೈರ್ಯ ಇರಲಿಲ್ಲ. ಹೆದರಿ ಬಾಗಿಲು ಹಾಕಿಕೊಂಡರು.ದರೋಡೆಕೋರರು ಬಗ್ಗದಿದ್ದಾಗ ಚಿಂತಕರು ಊರಿನ ಸಂಪತ್ತನಲ್ಲಿ ಕೆಲವು ಭಾಗವನ್ನು ಹಂಚಿಕೊಳ್ಳುವ ಒಪ್ಪಂದದೊಂದಿಗೆ ಪ್ರಾಣವನ್ನು ಉಳಿಸಿಕೊಂಡರು. ಆದರೆ ಊರಿನ ಕೆಲ ಸಾಹಸಿಗಳು ದರೋಡೆಕೋರರ ಜೊತೆ ಹೋರಾಡಿದರು. ಎರಡೂ ಕಡೆ ಪ್ರಾಣ ಹಾನಿ ಸಂಭವಿಸಿತು.ಇದೆಲ್ಲದಕ್ಕೂ ಚಿಂತಕರ ಮನೆಯ ಮುಚ್ಚಿದ ಬಾಗಿಲುಗಳೆ ಪ್ರೇಕ್ಷಕರಾದವು. ಹಾಗೂ ಹೀಗೂ ಊರಿನ ಹೋರಾಟಗಾರರು ದರೋಡೆಕೋರರನ್ನು ಬಗ್ಗು ಬಡಿದರು. ಕೆಲವು ದರೋಡೆಕೋರರು ಓಡಿ ಹೋದರು. ಸೆರೆಸಿಕ್ಕ ದರೋಡೆಕೋರರನ್ನು ತಳಿಸಲಾಯಿತು. ಊರು ದರೋಡೆಕೋರರಿಂದ ಮುಕ್ತಿ ಹೊಂದಿ ಉಸಿರಾಡುವಂತಾಯಿತು. ಊರಿನ ವಾತಾವರಣ ತಿಳಿಯಾಯಿತು.ಈಗ ಚಿಂತಕರು ಮನೆಯ ಬಾಗಿಲನ್ನು ತೆರೆದು ಹೊರಬಂದರು. ಊರಿನ ಜನರಿಂದ ತಳಿಸಲ್ಪಡುತ್ತಿದ್ದ ದರೋಡೆಕೋರರನ್ನು ನೋಡಿದರು. ಕೂಡಲೇ ದರೋಡೆಕೋರರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ವಿರೋಧಿಸಿದರು. ಈ ಊರಿನಲ್ಲಿ ಮಾನವೀಯ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದು ಆಪಾದಿಸಿದರು. ಮಾನವೀಯತೆಯ ಪಾಠ ಹೇಳಿದರು.ಅವರನ್ನು ಬಲಿಪಶುಗಳೆಂದು ಸಂತೈಸಲಾಯಿತು. ಕ್ರಮೇಣ ದರೋಡೆಕೋರರನ್ನು ಸಾಮಜಿಕ ವಲಯದಲ್ಲಿ ಸಂತೈಸುವದು, ಅವರ ಹಕ್ಕು, ಅಭಿವೃದ್ಧಿ, ಕಲ್ಯಾಣಗಳ ಕುರಿತ ಆಂದೋಲನಗಳು ಆ ಊರಿನ ಸಮಾಜಮುಖಿ ಬೆಳವಣಿಗೆಯಾಗಿ ಮಾರ್ಪಾಟಾಯಿತು. ಆ ಊರಿನ ಕೆಲವು ಭಾಗಗಳನ್ನು ದರೋಡೆಕೋರರಿಗೆ ಸ್ವತಂತ್ರವಾಗಿ ಬಿಟ್ಟುಕೊಡುವಂತೆ ಒತ್ತಡ ಹೇರಿದರು. ದರೋಡೆಕೋರರಿಗಾಗಿಯೇ ಅವರಿಗೆ ಒಪ್ಪಿತವಾದ ನ್ಯಾಯಾಂಗಕ್ಕೆ ಅವಕಾಶ ಒದಗಿಸಬೇಕೆಂದು ಒತ್ತಾಯಿಸಲಾಯಿತು. ದರೋಡೆಕೋರರನ್ನು ವಿರೋಧಿಸುವವರನ್ನು ಮನುಷ್ಯ ವಿರೋಧಿ ಎಂದು ಕರೆಯಲಾಯಿತು. ಆ ಊರಿನ ರಾಜಕೀಯ ಹಿತಾಸಕ್ತಿ ಹಾಗೂ ಪೈಪೋಟಿಯೆ ಇವೆಲ್ಲಕ್ಕೂ ಕಾರಣ ಎನ್ನುವದು ನಿರ್ವಿವಾದವಾಗಿತ್ತು.