ವಿಷಯದ ವಿವರಗಳಿಗೆ ದಾಟಿರಿ

Archive for

25
ಮಾರ್ಚ್

ಕಥೆಯಾದರು ಚಿತ್ತಾಲ

– ರಾಘವೇಂದ್ರ ಅಡಿಗ ಎಚ್ಚೆನ್

ಯಶವಂತ ಚಿತ್ತಾಲಕನ್ನಡ ಸಾಹಿತ್ಯ ದಿಗಂತದ ಇನ್ನೊಂದು ತಾರೆ ಅಸ್ತಂಗತವಾಗಿದೆ. ಕವಿ, ಕಥೆಗಾರ, ಶ್ರೀ ಯಶವಂತ ಚಿತ್ತಾಲರು (86) ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹುಷಃ ತಾವೊಬ್ಬರೇ ಚಿರಶಾಂತಿಯ `ಶಿಕಾರಿ’ ಗಾಗಿ ಹೊರಟಿರುವರೇನೊ? “ನಾನು ಬರೆಯುತ್ತಿರುವುದು ನಾನು ನಾನೇ ಆಗಲು, ಉಳಿದವರನ್ನು ತಿದ್ದುವುದಕ್ಕಲ್ಲ, ಆ ಯೋಗ್ಯತೆಯಾಗಲೀ, ಅಧಿಕಾರವಾಗಲೀ ನನಗಿಲ್ಲ.” ಎಂದಿದ್ದ ಚಿತ್ತಾಲರಿಲ್ಲದ ಈ ಸಮಯದಲ್ಲಿ ಅವರ ಪುಸ್ತಕಗಳ ಅಪಾರ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿ ಅವರ ಬದುಕಿನ ಕುರಿತು ನಿಮ್ಮೊಡನೆ ನಾಲ್ಕು ಮಾತುಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ

ಯಶವಂತ ಚಿತ್ತಾಲರು ಕನ್ನಡ ಸಾಹಿತ್ಯ ಲೋಕ ಕಂಡ ಅಪರೂಪದ ಬರಹಗಾರರಲ್ಲಿ ಒಬ್ಬರು. ಕನ್ನಡ ಸಾಹಿತ್ಯದಲ್ಲಿ ನವ್ಯ ಯುಗ ಪ್ರಾರಂಭಾವಾಗಿದ್ದ ಕಾಲಘಟ್ಟದಲ್ಲಿ ತಮ್ಮನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡ ಚಿತ್ತಾಲರು ನವ್ಯ ಮಾರ್ಗದಲ್ಲಿನ ಕಥೆಗಳು, ಕಾದಂಬರಿಗಳು ಅಂದು ಸಾಕಷ್ಟು ಪ್ರಸಿದ್ದವಾಗಿದ್ದವು. ‘ಪುರುಷೋತ್ತಮ’, ‘ಛೇದ’, ‘ಶಿಕಾರಿ’ ಗಳಂತಹ ಪ್ರಸಿದ್ದ ಹಾಗೂ ಮಹತ್ವದ ಕಾದಂಬರಿಗಳನ್ನು ರಚಿಸಿದ್ದ ಚಿತ್ತಾಲರ ‘ಕಥೆಯಾದಳು ಹುಡುಗಿ’ ಕನ್ನಡದ ಅತ್ಯಂತ ಜನಪ್ರಿಯ ಕಥಾ ಸಂಕಲನಗಳಲ್ಲಿ ಒಂದು.

ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಕುಮಟಾದ ಹನೇಹಳ್ಳಿಯವರಾದ ಚಿತ್ತಾಲರು ತಮ್ಮ ಜೀವನದ ಅರ್ಧಕ್ಕೂ ಹೆಚ್ಚಿನ ಸಮಯವನ್ನು ಮುಂಬೈನಲ್ಲಿ ಕಳೆದಿದ್ದರು. ಹನೇಹಳ್ಳಿಯ ವಿಠೋಬಾ, ರುಕ್ಮಿಣಿ ದಂಪತಿಗಳ ಏಳು ಮಕ್ಕಳುಗಳ ಪೈಕಿ ಐದನೆಯವರಾಗಿದ್ದ ಯಶವಂತ ಚಿತ್ತಾಲರು 1928 ರಲ್ಲಿ ಜನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪೂರೈಸಿದ ಚಿತ್ತಾಲರು ಕುಮಟಾ, ಧಾರವಾಡ್, ಮುಂಬೈ ಹಾಗೂ ನ್ಯೂ ಜರ್ಸಿಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದ್ದರು. ಇವರು ವಿಜ್ಞಾನ ಪದವೀಧರರಾಗಿದ್ದು ರಸಾಯನ ಶಾಸ್ತ್ರದಲ್ಲಿ ಉನ್ನತ ಮಟ್ಟದ ಪ್ರೌಢಿಮೆಯನ್ನು ಹೊಂದಿದ್ದರು. ಅದರಲ್ಲಿಯೂ ಪಾಲಿಮರ್ ತಂತ್ರಜ್ಞಾನದಲ್ಲಿ ವಿಶೇಷ ಅನುಭವ ಹೊಂದಿದ್ದ ಚಿತ್ತಾಲರು . ಮುಂಬೈ ವಿವಿಯ ಪ್ಲಾಸ್ಟಿಕ್ ತಂತ್ರವಿಜ್ಞಾನದ ಬಿಎಸ್‌ಸಿಯಲ್ಲಿ ಪ್ರಥಮ ಸ್ಥಾನ ಸುವರ್ಣ ಪದಕ ಪಡೆದಿರು. ನಲ್ವತ್ತ ನಾಲ್ಕನೇ ವಯಸ್ಸಿನಲ್ಲಿ ಅಮೆರಿಕದ ಸ್ಟೂವನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಎ ಪದವಿ ಪಡೆದಿದ್ದ. ಚಿತ್ತಾಲರು ಬೆಕಾಲೈಟ್ ಹೈಲಮ್ ಲಿ. ಕಂಪನಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ದುಡಿದಿದ್ದಾರೆ. ಇಲ್ಲಿ ಹಲವು ವರ್ಷಗಳ ಕಾಲ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ಮುಂಬೈನಲ್ಲಿ ಅದೇ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಡೈರಕ್ಟರ್ ಆಗಿ 1985ರಲ್ಲಿ ನಿವೃತ್ತಿ ಹೊಂದಿದ್ದರು.

ಕವಿ ಗಂಗಾಧರ ಚಿತ್ತಾಲರ ಸಹೋದರರಾಗಿದ್ದ ಯಶವಂತ ಚಿತ್ತಾಲರಿಗೆ ಬಾಲ್ಯದಿಂದಲೂ ಸಾಹಿತ್ಯದ ಕಡೆಗೆ ಒಲವಿದ್ದಿತು. ಪಾಶ್ಚಾತ್ಯ ದೇಶಗಳನ್ನೆಲ್ಲಾ ಸುತ್ತಿ ಅಲ್ಲಿನ ಸಾಹಿತ್ಯದ ಮೌಲ್ಯಗಳ ತೌಲನಿಕ ಚಿಂತನೆಯನ್ನು ನಡೆಸಿ ಕನ್ನಡದಲ್ಲಿ ಕೃತಿಗಳನ್ನು ರಚಿಸಿದ ಯಶವಂತ ಚಿತ್ತಾಲರಿಗೆ ಮನಃಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರಗಳಲ್ಲಿ ಬಹಳ ಆಸಕ್ತಿ ಇದ್ದಿತು. ಇವರು ತಮ್ಮ ವಿಶಿಷ್ಟ ಬಗೆಯ ಸಾಹಿತ್ಯದಿಂದ ಜನರನ್ನು ಸಮ್ಮೋಹಗೊಳಿಸಿದ್ದಲ್ಲದೆ ತಮ್ಮ ಸಜ್ಜನಿಕೆಯ ಜೀವನ ಶೈಲಿ, ಜೀವನ ಪ್ರೀತಿಯಿಂದಲೂ ಅಪಾರ ಜನ ಮೆಚ್ಚುಗೆಗೆ ಭಾಜನರಾಗಿದ್ದವರು.

ಮತ್ತಷ್ಟು ಓದು »