ಜಾತ್ಯಾತೀತರೆನಿಸಿಕೊಳ್ಳಲು ಮುಸಲ್ಮಾನರ ಟೋಪಿ ಧರಿಸಲೇಬೇಕೆ?
– ನರೇಂದ್ರ ಕುಮಾರ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದನ್ ನೀಲೇಕಣಿಯವರು ಸ್ಪರ್ಧಿಸುತ್ತಿರುವುದು ಅಧಿಕೃತವಾಗಿ ಪ್ರಕಟವಾಗಿದೆ. ಅವರು ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಣೆಯಾದ ಕೂಡಲೇ ಮುಸಲ್ಮಾನರ ಟೋಪಿ ಧರಿಸಿ ತಾವು ಕೂಡಾ “ಜಾತ್ಯಾತೀತ”ರೆಂದು ಲೋಕಕ್ಕೆಲ್ಲಾ ಸಾರಿದರು. ಈ ರೀತಿ ಮುಸಲ್ಮಾನ ಟೋಪಿ ಧರಿಸಿ “ಜಾತ್ಯಾತೀತ”ರಾಗುವುದು ಕಾಂಗ್ರೆಸ್ ಪರಂಪರೆಯೇ ಆದಂತಿದೆ. ಅದಕ್ಕಿಂತಲೂ ಮಿಗಿಲಾಗಿ, ಮುಸಲ್ಮಾನ ಟೋಪಿ ಧರಿಸದಿದ್ದವರನ್ನು “ಕೋಮುವಾದಿ” ಎಂದು ಖಂಡಿಸಲಾಗುತ್ತದೆ. ಒಂದೆರಡು ವರ್ಷದ ಹಿಂದೆ ಗುಜರಾತಿನಲ್ಲಿ ನಡೆದ ಸದ್ಭಾವನಾ ಸಭೆಯೊಂದರಲ್ಲಿ ನರೇಂದ್ರ ಮೋದಿಯವರಿಗೆ ಮುಸಲ್ಮಾನರೊಬ್ಬರು ಟೋಪಿ ನೀಡಿದರು. ಮೋದಿಯವರು ಆ ಟೋಪಿಯನ್ನು ಧರಿಸಲಿಲ್ಲ. ಆ ಕೂಡಲೇ ಅವರನ್ನು “ಕೋಮುವಾದಿ” ಎಂದು ಖಂಡಿಸಲಾಯಿತು.
ಇದು ಯಾವ ಸೀಮೆ ಜಾತ್ಯಾತೀತತೆ? ಒಂದು ಕೋಮಿನ ಟೋಪಿ ಧರಿಸಿದರೆ ಜಾತ್ಯಾತೀತ, ಧರಿಸದಿದ್ದರೆ ಕೋಮುವಾದಿ!? ಈ ದೇಶದಲ್ಲಿ ಬೇರೆ ಕೋಮುಗಳೇ ಇಲ್ಲವೆ? ಅವುಗಳಲ್ಲಿ ಅನೇಕ ಕೋಮುಗಳೂ ಅಲ್ಪಸಂಖ್ಯಾತವಲ್ಲವೇ? ಆ ಕೋಮುಗಳ ಲಾಂಚನವನ್ನೋ, ಟೋಪಿಯನ್ನೋ ಈ ರಾಜಕಾರಣಿಗಳು ಏಕೆ ಧರಿಸಿ ಪತ್ರಿಕೆಗಳಲ್ಲಿ ಚಿತ್ರ ಹಾಕಿಸಿಕೊಳ್ಳುವುದಿಲ್ಲ? ಮುಸಲ್ಮಾನ ಟೋಪಿ ಧರಿಸದಿದ್ದವರು ಕೋಮುವಾದಿಯಾಗುವುದಾದರೆ, ಆ ಉಳಿದ ಅಲ್ಪಸಂಖ್ಯಾತ ಕೋಮುಗಳ ಟೋಪಿ ಧರಿಸದಿದ್ದವರೂ ಕೋಮುವಾದಿ ಆಗಬೇಕಲ್ಲವೇ? ಮುಸಲ್ಮಾನರಿಗಿಂತ ಬಹಳ ಕಡಿಮೆ ಸಂಖ್ಯೆಯಲ್ಲಿರುವವರು ಜೈನರು. ಯಾವ ರಾಜಕಾರಣಿಯೂ ಜೈನರ ದಿರಿಸು ಧರಿಸಿ ತನ್ನ “ಜಾತ್ಯಾತೀತತೆ”ಯನ್ನು ಮೆರೆದದ್ದು ನನಗೆ ತಿಳಿದಿಲ್ಲ. ಅಥವಾ ಪಾರ್ಸಿ ಲಾಂಚನ ಧರಿಸಿಯೋ, ಇಲ್ಲವೇ ಬೌದ್ಧರ ದಿರಿಸು ಧರಿಸಿಯೋ, ಕ್ರೈಸ್ತರಂತೆ ವೇಷ ಹಾಕಿದ್ದೋ ಎಲ್ಲೂ ನೋಡಿಲ್ಲ.