ಸಾಹಿತ್ಯ ಕ್ಷೇತ್ರದ ಒಳಹೊರಗು
-ಡಾ.ಶ್ರೀಪಾದ ಭಟ್, ತುಮಕೂರು
ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ವರ್ಷಗಟ್ಟಲೆ ಸೂತ್ರಧಾರರಿರಲಿಲ್ಲ. ಇದೀಗ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರನ್ನು ಸರ್ಕಾರ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪತ್ರಕರ್ತನೊಬ್ಬ ಅವರನ್ನು ಸಂದರ್ಶನ ಮಾಡಿದ. ಚಾನೆಲ್ಲೊಂದರಲ್ಲಿ ಅದು ಪ್ರಸಾರವಾಯಿತು. ಆತ ಅವರ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಿದ. ಯುವ ಜನತೆಯನ್ನು, ಹೊಸಬರನ್ನು ಕನ್ನಡ ಭಾಷೆ, ಸಾಹಿತ್ಯದತ್ತ ಸೆಳೆಯುವ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ಪ್ರೊ. ಮಾಲತಿಯವರು ಹೇಳಿದರು. ನೀವು ಸಾಹಿತ್ಯದಲ್ಲಿ ಎಡಪಂಥದ ಸಾಹಿತಿಗಳಿಗೆ ಮನ್ನಣೆ ನೀಡುವಿರೋ ಬಲಪಂಥದವರಿಗೋ ಎಂದು ಆತ ಕೇಳಿದ. ನನಗೆ ಕನ್ನಡಕ್ಕೆ ಯಾರು ಏನು ಕೊಡುಗೆ ನೀಡಿದ್ದಾರೆ ಎಂಬುದು ಮುಖ್ಯವೇ ವಿನಾ ಎಡ, ಬಲ ಪಂಥಗಳಲ್ಲ ಎಂದು ಒಬ್ಬ ನಿಜವಾದ ಸಾಹಿತ್ಯಪ್ರೇಮಿ ಹೇಳುವ ಮಾತನ್ನು ಮಾಲತಿಯವರು ಉತ್ತರವಾಗಿ ನೀಡಿದರು. ಇಂಥ ಸಮ ದೃಷ್ಟಿಕೋನ ಎಷ್ಟು ಜನರಿಗೆ ಇರಬಹುದು? ಹೇಳುವುದು ಕಷ್ಟ.
ಕನ್ನಡ ಸಾಹಿತ್ಯದ ಇಂದಿನ ಪರಿಸ್ಥಿತಿಯನ್ನು ಪತ್ರಕರ್ತನ ಪ್ರಶ್ನೆ ಪ್ರತಿನಿಧಿಸುತ್ತದೆ. ಇದು ನಿಜಕ್ಕೂ ಸಾಹಿತ್ಯಕ ದುರಂತ. ಸಾಹಿತ್ಯ ರಚಿಸುವವರು, ಸಾಹಿತ್ಯ ಓದುವವರು ಇಬ್ಬರೂ ತಾವು ಎಡಪಂಥದವರೋ, ಬಲಪಂಥದವರೋ ಎಂದು ಮೊದಲೇ ನಿರ್ಧರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈಗಾಗಲೇ ಆಯಾ ಪಂಥೀಯರು ಅಥವಾ ಮಾಧ್ಯಮದವರು ಅಥವಾ ಕೊನೆಗೆ ವಿಮರ್ಶಕರು ನಿಮಗೆ ಹಣೆಪಟ್ಟಿ ಹಚ್ಚಿಯೇಬಿಡುತ್ತಾರೆ! ಹೀಗೆ ಹಣೆಪಟ್ಟಿ ಅಂಟಿಸಿಕೊಳ್ಳದವ ಸಾಹಿತಿಯೂ ಆಗಲಾರ ಓದುಗನೂ ಆಗಲಾರ!
ಸುಮ್ಮನೆ ಓದುವ, ಬರೆಯುವ ಪ್ರೀತಿಗಾಗಿ ಸಾಹಿತ್ಯ ಲಭ್ಯವಿಲ್ಲವೇ? ಒಬ್ಬ ನಿಜವಾದ ಸಾಹಿತ್ಯಪ್ರೇಮಿಗೆ ಯಾವ ಪಂಥಗಳೂ ಮುಖ್ಯವಾಗದು. ಆತ ಆ ವಿಷಯ, ಈ ವಿಷಯ, ಆ ಸಿದ್ಧಾಂತ, ಈ ಸಿದ್ಧಾಂತ ಎಂದೆಲ್ಲ ನೋಡಲಾರ. ತನಗೆ ಯಾವುದು ಇಷ್ಟವೋ, ಆಸಕ್ತಿಯೋ ಅದನ್ನೆಲ್ಲ ಆತ ಓದಿ ಅರಗಿಸಿಕೊಳ್ಳುತ್ತಾನೆ, ತನ್ನದೇ ಒಂದು ನಿಲುವಿಗೆ ಆತ ಬರಬಹುದು, ಬರದೆಯೂ ಇರಬಹುದು. ಹೀಗೆ ಯಾವ ಪಂಥ, ಸಿದ್ಧಾಂತಕ್ಕೂ ತನ್ನನ್ನು ಅಡವಿಟ್ಟುಕೊಳ್ಳದ ಸಾಹಿತಿ ಅಥವಾ ಓದುಗನೇ ನಿಜವಾದ ಸಾಹಿತಿ ಅಥವಾ ಓದುಗನಾಗಬಲ್ಲ. ಜನಪ್ರೀತಿಯ ಕವಿ ಜಿಎಸ್‍ಎಸ್ ಅವರ ಕಾವ್ಯವನ್ನು ನವೋದಯ, ನವ್ಯ, ದಲಿತ-ಬಂಡಾಯ ಹೀಗೆ ಯಾವುದಕ್ಕಾದರೂ ತಗುಲಿಸಲೇಬೇಕು ಎಂಬ ವಿಮರ್ಶಕರ, ಮಾಧ್ಯಮದವರ ಹಠ ಕೊನೆಗೂ ಈಡೇರಲೇ ಇಲ್ಲ. ಯಾವುದೂ ದಾರಿ ಕಾಣದೇ ಅವರಿಗೆ ಕೊನೆಗೆ ಸಮನ್ವಯ ಕವಿ ಎಂಬ ಹಣೆಪಟ್ಟಿ ಕಟ್ಟಿದರು. ಜಿಎಸ್‍ಎಸ್ ಅವರಿಗೇ ಸ್ವತಃ ಇದು ಇರಿಸುಮುರಿಸು ತಂದರೂ ನಾವು ಅವರನ್ನು ಹಾಗೆ ಕರೆಯುವುದನ್ನು ಬಿಡಲಿಲ್ಲ! ಜನರನ್ನು ಪ್ರೀತಿಯಿಂದ ಆವರಿಸಿದ ಕೆಎಸ್‍ನ ಅವರನ್ನು, ಅವರದು ಪುಷ್ಪಕಾವ್ಯ, ಅವರು ಕವಿಯೇ ಅಲ್ಲ, ಅವರು ಪುಷ್ಪಕವಿ ಎಂದೆಲ್ಲ ಗೇಲಿ ಮಾಡಲಾಯಿತು. ಕನ್ನಡ ಪ್ರಾಧ್ಯಾಪಕರಾಗಿರದೇ, ಯಾವ ಸಿದ್ಧಾಂತಕ್ಕೂ ಕಟ್ಟುಬೀಳದೇ ಒಬ್ಬ ಸಾಹಿತ್ಯ ಪ್ರೀತಿಯ ಸರ್ಕಾರಿ ನೌಕಕರಾಗಿ ಅವರು ರಚಿಸಿದ ಕಾವ್ಯ ಪಡೆದ ಜನಮನ್ನಣೆ ಸಾಹಿತ್ಯದ ಅಧಿಕೃತ ಗುತ್ತಿಗೆ ಪಡೆದವರ ಹೊಟ್ಟೆಯುರಿಗೆ ಕಾರಣವಾಯಿತೋ ಅಥವಾ ಯಾವುದೇ ಪಂಥಗಳ ಲಕ್ಷಣ ಕಾಣಿಸದೇ ಎರಡೂ ಪಂಥದವರು ಅವರನ್ನು ವ್ಯವಸ್ಥಿತವಾಗಿ ನಿರಾಕರಿಸಲು ಹವಣಿಸಿದರೋ-ಎರಡೂ ಇರಬಹುದು. ಆದರೆ ಇಂದಿಗೂ ಜನ ಮಾತ್ರ ಅವರ ಪುಷ್ಪಕಾವ್ಯ ಪ್ರೀತಿಸುವಷ್ಟು ಸಿಡಿಲ ಕಾವ್ಯವನ್ನು ಪ್ರೀತಿಸುತ್ತಿಲ್ಲ. ಇವೆಲ್ಲ ಸಾಹಿತ್ಯದಲ್ಲಿ ರಾಜಕೀಯ, ಸಾಮಾಜಿಕ ಸಿದ್ಧಾಂತಗಳು ಸೇರಿ ಸಾಹಿತ್ಯವನ್ನು ಕೇವಲ ಸಾಹಿತ್ಯವಾಗಿ ಇರಲು ಬಿಡದಂತೆ ಮಾಡಿದುದರ ಲಕ್ಷಣಗಳು.