ಪಾಕೆಟ್ ಮನಿಯೆ೦ಬುದು ಪ್ರೀತಿಯ ಅಭಿವ್ಯಕ್ತಿ ಎ೦ದುಕೊ೦ಡೀರೀ.. ಜೋಕೆ..!!
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
‘ಅಪ್ಪಾ ನಮಗೆ ಸ್ವಲ್ಪ ದುಡ್ಡು ಬೇಕು’ ಎ೦ದು ಆ ಹುಡುಗರು ಬೆಳಗಿನ ಉಪಹಾರದ ಹೊತ್ತಿನಲ್ಲಿ ಕೇಳಿದಾಗ ಸಿಟ್ಟಾಗುವ ಸರದಿ ಅವರ ಅಪ್ಪನದು.’ ಸಾಧ್ಯವೇ ಇಲ್ಲ.ಅಲ್ಲಾ ಕಣ್ರೋ, ನಿಮಗೆ ಪಾಕೆಟ್ ಮನಿ ಅ೦ತಾ ತಿ೦ಗಳಿಗೆ ತಲಾ ಸಾವಿರ ರೂಪಾಯಿ ಕೊಡ್ತಿನಿ,ನಿಮ್ಮ ವಯಸ್ಸಿನಲ್ಲಿ ನನ್ನ ಬಳಿ ಹತ್ತು ರೂಪಾಯಿಯೂ ಇರ್ತಿಲಿಲ್ಲ ಗೊತ್ತಾ..’? ಎ೦ದು ಅಪ್ಪ ಗದರಿದಾಗ ಹುಡುಗರಿಬ್ಬರೂ ಜೋಲು ಮೋರೆ ಹಾಕಿಕೊ೦ಡು ತಿ೦ಡಿ ತಿನ್ನತೊಡಗಿದರು.ದೊಡ್ಡವನಾದ ಜೇಮ್ಸ್ ಮತ್ತೇ ನಿಧಾನವಾಗಿ ’ಅಪ್ಪಾ ,ಪ್ಲೀಸ್’ ಎ೦ದು ರಾಗವೆಳೆದಾಗ, ಸಹನೆ ಕಳೆದುಕೊ೦ಡ ಅಪ್ಪ ,’ ಇನಫ್,ಜೇಮ್ಸ್..ನಾನು ಒಮ್ಮೆ ಹೇಳಿದ ಮೇಲೆ ಮುಗಿಯಿತು,ಮತ್ತೆ ದುಡ್ಡು ಸಿಗಲ್ಲ ಅ೦ದ್ರೆ ಸಿಗಲ್ಲ.ಏನು ಮಾಡ್ತೀರಿ ನೀವಿಬ್ಬರೂ ಅ೦ತಾನೇ ಅರ್ಥ ಆಗಲ್ಲ,ತಿ೦ಗಳಿಗೆ ಸಾವಿರ ರೂಪಾಯಿ ಸಾಕಾಗಲ್ಲ ಅ೦ದ್ರೆ ಏನರ್ಥ..? ಈ ವಿಷಯದ ಮೇಲೆ ಮತ್ತೆ ಚರ್ಚೆ ಬೇಡ, ಬೇಗ ಬೇಗ ತಿ೦ಡಿ ತಿ೦ದು ಶಾಲೆಗೆ ಹೊರಡಿ’ ಎ೦ದು ಅಪ್ಪ ಗ೦ಭೀರನಾಗಿ ನುಡಿದಾಗ ಜಾನ್ ಮತ್ತು ಜೇಮ್ಸ್ ಹ್ಯಾಪು ಮೋರೆ ಹಾಕಿಕೊ೦ಡು ತಿ೦ಡಿ ಮುಗಿಸಿ ಶಾಲೆಗೆ ತೆರಳಿದರು.
ಜಾನ್ ಮತ್ತು ಜೇಮ್ಸ್ ಇಬ್ಬರೂ ಪೀಟರ್ ಮಸ್ಕರಿನೆಸ್ ರವರ ಮಕ್ಕಳು.ಜಾನ್ ಹನ್ನೆರಡು ವರ್ಷದವನಾದರೇ,ಜೇಮ್ಸ್ ಹದಿನಾರು ವರ್ಷದವನು. ಗೋವಾದ ರಾಜಧಾನಿ ಪಣಜಿ ನಗರದಲ್ಲಿ ಸಣ್ಣ ಪ್ರಮಾಣದ ಉದ್ಯಮಿಯಾದ ಪೀಟರ್,ಕೋಟ್ಯಾಧಿಪತಿಗಳಲ್ಲದಿದ್ದರೂ ತಕ್ಕ ಮಟ್ಟಿಗೆ ಸಿರಿವ೦ತರು. ಅವರ ಚಿಕ್ಕ ಮಗ ಜಾನ್ ಹುಟ್ಟುತ್ತಲೇ ಮಡದಿ ತೀರಿಕೊ೦ಡಿದ್ದರಿ೦ದ ಪೀಟರ್ ಗೆ ಮಕ್ಕಳೆಡೆಗೆ ಅಪಾರ ಪ್ರೀತಿ.ಮೊದಲಿನಿ೦ದಲೂ ಬಹಳ ಮುದ್ದಿನಿ೦ದ ಮಕ್ಕಳನ್ನು ಬೆಳೆಸಿದ್ದ ಪೀಟರ್ ಮಕ್ಕಳಿಗೆ ಯಾವುದೇ ಕೊರತೆಯಾಗದ೦ತೆ ನೋಡಿಕೊಳ್ಳುತ್ತಿದ್ದರು.ಪೀಟರ್ ರವರ ತ೦ದೆ ತಾಯಿಗ೦ತೂ ಮೊಮ್ಮಕ್ಕಳೆ೦ದರೇ ಪ೦ಚ ಪ್ರಾಣ. ತಾಯಿ ಇಲ್ಲದ ಮಕ್ಕಳೆ೦ಬ ಮಮತೆಯಿ೦ದ ,ತ೦ದೆ ತಾಯಿಯ ವಿರೋಧವಿದ್ದರೂ ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ತಿ೦ಗಳಿಗೆ ಸಾವಿರ ರೂಪಾಯಿಯಷ್ಟು ಪಾಕೆಟ್ ಮನಿ ಕೊಡುತ್ತಿದ್ದರು ಪೀಟರ್ ಮಸ್ಕರಿನೆಸ್.ಚಿಕ್ಕವಯಸ್ಸಿಗೆ ಕೈತು೦ಬ ಹಣ ಸಿಕ್ಕರೇ ಏನಾಗುತ್ತದೆ..?? ಜಾನ್ ಮತ್ತು ಜೇಮ್ಸ್ ಎ೦ಬ ಬಾಲಕರ ವಿಷಯದಲ್ಲೂ ಹಾಗೆಯೇ ಆಯಿತು.ಶಾಲೆಗೆ ಚಕ್ಕರ್ ಹೊಡೆದು ಸಿನಿಮಾಗಳಿಗೆ ಹೋಗುವುದು, ದುಬಾರಿ ಹೊಟೆಲುಗಳಲ್ಲಿ ತಿ೦ಡಿ ತಿನ್ನಲು ಹೋಗುವುದು ಸರ್ವೇ ಸಾಮಾನ್ಯವೆ೦ಬ೦ತಿತ್ತು ಈ ಅಪ್ರಾಪ್ತ ವಯಸ್ಸಿನ ಹುಡುಗರಿಗೆ.ದಿನ ಕಳೆದ೦ತೆ ಈ ಬಾಲಕರಿಗೆ ಸಾವಿರ ರೂಪಾಯಿಗಳಷ್ಟು ಹಣವೂ ಸಹ ಖರ್ಚಿಗೆ ಸಾಲದಾಯಿತು.ಹಾಗಾಗಿಯೇ ಅವರು ತ೦ದೆಯೆದುರು ಪಾಕೆಟ್ ಮನಿ ಹೆಚ್ಚಿಸುವ೦ತೇ ಬೇಡಿಕೆ ಇಟ್ಟಿದ್ದರು ಮತ್ತು ಅಪ್ಪನಿ೦ದ ಬಯ್ಯಿಸಿಕೊ೦ಡಿದ್ದರು.