ವಿಷಯದ ವಿವರಗಳಿಗೆ ದಾಟಿರಿ

ಮೇ 12, 2015

6

ಹೋರಾಟದ ಹಾದಿ : ಇದು ಪ್ರಾಮಾಣಿಕ ಬದುಕಿನ ಅನಾವರಣ

‍ನಿಲುಮೆ ಮೂಲಕ

– ರಾಜಕುಮಾರ.ವ್ಹಿ.ಕುಲಕರ್ಣಿ
 ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ಎಚ್.ನರಸಿಂಹಯ್ಯಎಚ್.ನರಸಿಂಹಯ್ಯನವರದು ನಾನು ಅತ್ಯಂತ ಗಾಢವಾಗಿ ಪ್ರೀತಿಸುವ ವ್ಯಕ್ತಿತ್ವ. ನನ್ನ ಕೆಲವು ಲೇಖನಗಳಲ್ಲಿ ಅವರ ವ್ಯಕ್ತಿತ್ವದ ಒಂದಿಷ್ಟು ಮುಖಗಳನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದೇನೆ. ಬದುಕೆಂದರೆ ಅದು ಹೇಗಿರಬೇಕೆಂದು ಪ್ರಭಾವ ಬೀರುವಷ್ಟರ ಮಟ್ಟಿಗೆ ಎಚ್.ನರಸಿಂಹಯ್ಯನವರು ತಮ್ಮ ಬದುಕನ್ನು ಬದುಕಿದವರು. ಇಂಥ ನರಸಿಂಹಯ್ಯನವರ ಬದುಕನ್ನು ಇಡೀಯಾಗಿ ಓದಬೇಕೆನ್ನುವ ನನ್ನ ಹಲವು ವರ್ಷಗಳ ಮನೋಭಿಲಾಷೆ ಇತ್ತೀಚಿಗೆ ತಾನೆ ಈಡೇರಿತು. ಅವರ ಆತ್ಮಕಥೆ `ಹೋರಾಟದ ಹಾದಿ’ ಪುಸ್ತಕವನ್ನು ಹುಡುಕಿ ಸೋತಿದ್ದೆ. ಅವರ ಕುರಿತು ಒಂದೆರಡು ಸಾಲು ಪುಸ್ತಕದಲ್ಲೊ ಅಥವಾ ಪತ್ರಿಕೆಯಲ್ಲೊ ಕಾಣಿಸಿದರೆ ಎಚ್ಚೆನ್‍ರ ಸಮಗ್ರ ಬದುಕನ್ನು ಓದಬೇಕೆಂದು ಮನಸ್ಸು ಕಾತರಿಸುತ್ತಿತ್ತು. ಕೊನೆಗೊಂದು ದಿನ ನನ್ನ ಮನಸ್ಸಿನ ಕಾತರತೆಯನ್ನು ಅರ್ಥ ಮಾಡಿಕೊಂಡವರಂತೆ ಹಿತೈಷಿಯೂ ಮತ್ತು ಮಿತ್ರರೂ ಆದ ಶ್ರೀ ಪಿ.ಎನ್.ಸಿಂಪಿ ಅವರು ಓದಲು ಪುಸ್ತಕವೊಂದನ್ನು ಕೈಗಿತ್ತರು. ಬಿಳಿಯ ರಕ್ಷಾ ಕವಚವನ್ನು ಧರಿಸಿದ್ದ ಆ ಪುಸ್ತಕದ ಹೆಸರು ಏನಿರಬಹುದೆಂದು ಶೀರ್ಷಿಕೆ ಪುಟದ ಮೇಲೆ ಕಣ್ಣು ಹಾಯಿಸಿದೆ. ನಿಜ ಹೇಳುತ್ತಿದ್ದೇನೆ ಒಂದು ಕ್ಷಣ ಮೈಯಲ್ಲಿ ವಿದ್ಯುತ್ ಸಂಚಾರವಾದ ಅನುಭವ. ಪುಸ್ತಕವನ್ನು ಕೈಯಲ್ಲಿ ಹಿಡಿದ ಆ ಸಮಯ ಕೋಟಿ ರೂಪಾಯಿ ಕೊಟ್ಟರೂ ಆಗದ ಸಂತಸ. ಯಾವ ಪುಸ್ತಕವನ್ನು ಓದಬೇಕೆಂದು ಹಲವು ವರ್ಷಗಳಿಂದ ಕಾತರಿಸುತ್ತಿದ್ದೇನೊ ಅದು ಅನಿರೀಕ್ಷಿತವಾಗಿ ಮತ್ತು ಅನಾಯಾಸವಾಗಿ ನನ್ನ ಕೈ ಸೇರಿತ್ತು. ರೂಢಿಯಂತೆ ರಾತ್ರಿಯ ನಿಶ್ಯಬ್ಧ ಮೌನದಲ್ಲಿ  ಪುಸ್ತಕವನ್ನು ಓದಿದ್ದಾಯಿತು.

ಪುಸ್ತಕವೇನೊ ಓದಿಯಾಯಿತು. ಆದರೆ ಮೊದಲಿಗಿಂತಲೂ ಒಂದಿಷ್ಟು ಹೆಚ್ಚೆ ಎನ್ನುವಷ್ಟು ಎಚ್.ನರಸಿಂಹಯ್ಯನವರು ಗಾಢವಾಗಿ ಕಾಡಲಾರಂಭಿಸಿದರು. ಮನಸ್ಸು ಅವರ ಬದುಕಿನ ಸುತ್ತಲೇ ಗಿರಿಕಿ ಹೊಡೆಯ ತೊಡಗಿತು. ಕುಳಿತಲ್ಲಿ, ನಿಂತಲ್ಲಿ ಅವರ ಬದುಕಿನ ಚಿತ್ರಗಳೇ ಕಣ್ಮುಂದೆ ಸುಳಿಯ ತೊಡಗಿದವು. ವ್ಯಕ್ತಿಯೊಬ್ಬ ಹೇಗೆಲ್ಲ ಬದುಕಬೇಕೆನ್ನುವುದಕ್ಕೆ ಎಚ್ಚೆನ್ ಹೊಸ ವ್ಯಾಖ್ಯಾನ ಬರೆದಿದ್ದರು. ಅವರ ಬದುಕಿನ ಗಾಢ ಪ್ರಭಾವಳಿಯನ್ನು ಕೆಲವು ಜನರೊಂದಿಗಾದರೂ ಹಂಚಿಕೊಳ್ಳಬೇಕೆನ್ನುವುದು ಪುಸ್ತಕವನ್ನು ಓದಿದ ನಂತರದ ನನ್ನ ಮನಸ್ಥಿತಿಗೆ ಅನಿವಾರ್ಯವಾಗಿತ್ತು. ಅವರ ಬದುಕಿನ ಸರಳತೆ, ಪ್ರಾಮಾಣಿಕತೆ, ಬದ್ಧತೆ ಎಲ್ಲವನ್ನೂ ಅನಾವರಣಗೊಳಿಸಿದ `ಹೋರಾಟದ ಹಾದಿ’ ಕೃತಿಯನ್ನು ಲೇಖನವನ್ನಾಗಿಸಿ ತೆಗೆದುಕೊಂಡು ಬಂದಿದ್ದೇನೆ. ಓದಿ ನೋಡಿ ನಿಮಗೂ ಮೆಚ್ಚುಗೆಯಾಗಬಹುದು.

ಹೋರಾಟದ ಹಾದಿ: ಆತ್ಮ ಕಥೆ

`ತನ್ನ ಬದುಕಿನ ಒಂದು ಹಂತದಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನವನ್ನು ತಾನೇ ಅವಲೋಕಿಸಿಕೊಂಡು, ನೇರವಾಗಿ ಬರೆದುಕೊಳ್ಳುವ ಆತ್ಮ ಕಥನ ಎಂಬ ಈ ಪ್ರಕಾರ ಕನ್ನಡಕ್ಕೆ ಹೊಸತು. ಆತ್ಮ ಕಥನವನ್ನು ಬರೆಯುವುದು ತೀರಾ ಕಷ್ಟದ ಕೆಲಸ. ಆತ್ಮ ಕಥೆಯನ್ನು ಬರೆಯಲು ಮುಖ್ಯವಾಗಿ ನೈತಿಕ ಧೈರ್ಯ ಬೇಕು. ತನ್ನ ಬದುಕನ್ನು ತಾನೇ ಪರೀಕ್ಷಿಸಿಕೊಳ್ಳುವ ಧೈರ್ಯ ಬೇಕು. ತನ್ನ ಇತಿ ಮಿತಿಗಳನ್ನು ಕುರಿತ ವಿವೇಚನೆ ಬೇಕು. ಮುಚ್ಚು ಮರೆಯ ಮನಸ್ಸು ನಿಜವಾದ ಆತ್ಮಕಥೆಯನ್ನು ಬರೆದುಕೊಳ್ಳಲಾರದು. ಎಚ್.ನರಸಿಂಹಯ್ಯನವರು ಬರೆದುಕೊಂಡಿರುವ ಈ ಆತ್ಮಕಥನದ ಪುಟ ಪುಟಗಳಲ್ಲಿ ಯಾವ ಮುಚ್ಚು ಮರೆಯೂ ಇಲ್ಲದೆ ತನ್ನನ್ನು ತಾನು ಬಿಚ್ಚಿಟ್ಟುಕೊಂಡ ದಿಟ್ಟತನದ ಪರಿಣಿತ ಜೀವನ ಕ್ರಮವೊಂದು ಸ್ಫುಟವಾಗಿದೆ’ ಹೀಗೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಮುನ್ನುಡಿಯೊಂದಿಗೆ ಪ್ರಾರಂಭವಾಗುವ `ಹೋರಾಟದ ಹಾದಿ’ ಪುಸ್ತಕ ಪ್ರಕಟವಾದದ್ದು 1995 ರಲ್ಲಿ. ಲೇಖಕರೇ ಹೇಳಿಕೊಂಡಂತೆ ಇದು ಅವರ ಬದುಕಿನ ಕತೆ. ಹಾಗೆಂದ ಮಾತ್ರಕ್ಕೆ ಇದು ಕೇವಲ ವ್ಯಕ್ತಿ ಕೇಂದ್ರಿತ ಕಥೆಯೂ ಅಲ್ಲ. ಜಿ.ಎಸ್.ಶಿವರುದ್ರಪ್ಪನವರು ತಮ್ಮ ಮುನ್ನುಡಿಯಲ್ಲಿ ಹೇಳಿರುವಂತೆ `ಹಾಗೆ ನೋಡಿದರೆ ಇದು ಒಂದು ವ್ಯಕ್ತಿತ್ವದ ಜೀವನ ಚರಿತ್ರೆಯಲ್ಲ.ನರಸಿಂಹಯ್ಯನವರ ಆತ್ಮಕಥೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಚರಿತ್ರೆಯ ಒಂದಷ್ಟು ಭಾಗ, ಕ್ವಿಟ್ ಇಂಡಿಯಾ ಸ್ವಾತಂತ್ರ್ಯ ಚಳುವಳಿಯ ಇನ್ನೊಂದಷ್ಟು ಭಾಗ, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಬಹಳಷ್ಟು ಭಾಗ ಅವರ ವ್ಯಕ್ತಿತ್ವದಲ್ಲಿ ಅವಿನಾಭಾವದಿಂದ ಬೆಸೆದು ಕೊಂಡಿವೆ’. ಹೀಗಾಗಿ ಹೋರಾಟದ ಹಾದಿ ಕೃತಿ ನರಸಿಂಹಯ್ಯನವರ ಬದುಕನ್ನಲ್ಲದೆ ಅವರ ಬದುಕಿನ ಹೊರತಾಗಿಯೂ ಅನೇಕ ಸಂಗತಿಗಳನ್ನು ಅನಾವರಣಗೊಳಿಸುತ್ತದೆ.

ಮೊದಲಿಗೆ ಕೃತಿ ಆಪ್ತವಾಗುವುದು ಅದರಲ್ಲಿನ ಬರವಣಿಗೆಯ ಶೈಲಿಯಿಂದ. ಓದುಗನಿಗೆ ಎಲ್ಲೂ ಬೋರಾಗದಂತೆ ಪುಸ್ತಕ ಮೊದಲಿನಿಂದ ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ. ವಿಜ್ಞಾನದ ಶಿಕ್ಷಕನೋರ್ವ ಹೇಗೆ ಬರೆದಿರಬಹುದೆನ್ನುವ ಕುತೂಹಲವೇ ಆ ಪುಸ್ತಕವನ್ನು ಓದುಗರಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ. ಪುಸ್ತಕದ ಪ್ರತಿ ಪುಟದಲ್ಲೂ ಎಚ್.ನರಸಿಂಹಯ್ಯನವರು ಭಾಷೆಯನ್ನು ಅತ್ಯಂತ ಸರಳವಾಗಿ ಮತ್ತು ಅಷ್ಟೇ ಹಿತಮಿತವಾಗಿ ಬಳಸಿಕೊಂಡಿದ್ದಾರೆ. ಎಲ್ಲೂ ಕೂಡಾ ಆಡಂಬರವಾಗಲಿ ಇಲ್ಲವೆ ಔಪಚಾರಿಕತೆಯಾಗಲಿ ಕಂಡು ಬರುವುದಿಲ್ಲ. ತಾವು ಬದುಕಿನಲ್ಲಿ ಅನುಭವಿಸಿದ ನೋವಿನ ಸಂಗತಿಗಳಿಗೂ ನವಿರಾದ ಹಾಸ್ಯವನ್ನು ಲೇಪಿಸಿ ಹೇಳಿರುವ ಲೇಖಕರ ವಿಭಿನ್ನ ಶೈಲಿ ಮೆಚ್ಚುಗೆಯಾಗುತ್ತದೆ. ಪುಸ್ತಕ ಓದುತ್ತ ಹೋದಂತೆ ಓದುಗ ಆ ಆತ್ಮಕಥೆಯ ಭಾಗ ತಾನಾಗುತ್ತಾನೆ. ಅದು ತನ್ನದೇ ಬದುಕಿನ ಕಥೆಯೇನೊ ಎಂದು ಓದುಗ ಭಾವಿಸುವ ಮಟ್ಟಿಗೆ ಎಚ್ಚೆನ್ ತಮ್ಮ ಬದುಕಿನ ದಟ್ಟ ಅನುಭವಗಳನ್ನು ಅತ್ಯಂತ ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕದ ಯಾವ ಭಾಗದಲ್ಲೂ ಆತ್ಮ ಪ್ರಶಂಸೆಗಿಳಿಯದೆ ಒಬ್ಬ ಸಾಮಾನ್ಯನ ಬದುಕಿನಂತೆ ತಮ್ಮ ಬದುಕನ್ನು ಅಕ್ಷರಗಳಲ್ಲಿ ಸೆರೆಹಿಡಿದಿರುವ ಲೇಖಕರ ಬದುಕಿನ ಸರಳತೆ ಪುಸ್ತಕದ ಪ್ರತಿ ಪುಟದಲ್ಲೂ ತನ್ನ ಛಾಪು ಮೂಡಿಸಿದೆ.

ಜಿ.ಎಸ್.ಶಿವರುದ್ರಪ್ಪನವರು ತಮ್ಮ ಮುನ್ನುಡಿಯಲ್ಲಿ ಹೇಳಿರುವಂತೆ ಇದು ಕೇವಲ ಎಚ್ಚೆನ್ ಅವರ ಜೀವನ ಕಥೆ ಮಾತ್ರವಲ್ಲ. ಅವರ ಬದುಕಿನೊಂದಿಗೆ ಅನೇಕ ಸಂಗತಿಗಳು ತಳುಕು ಹಾಕಿಕೊಂಡಿರುವುದರಿಂದ ಆಯಾ ವಿಷಯಗಳನ್ನು ಸಂದರ್ಭನುಸಾರ ಬಳಸಿಕೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಗತಿ, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಬೆಳವಣಿಗೆ, ಭಾರತದ ಸ್ವಾತಂತ್ರ್ಯ ಚಳುವಳಿ, ಮೈಸೂರು ರಾಜ್ಯದ ಸ್ಥಾಪನೆಗಾಗಿ ಹೋರಾಟ ಹೀಗೆ ಅನೇಕ ವಿಷಯಗಳು ಓದಲು ಸಿಗುತ್ತವೆ. ಪುಸ್ತಕದ ಪ್ರಾರಂಭದ ಕೆಲವು ಅಧ್ಯಾಯಗಳು ಎಚ್.ನರಸಿಂಹಯ್ಯನವರ ಬಾಲ್ಯ ಮತ್ತು ಶೈಕ್ಷಣಿಕ ಅಭ್ಯಾಸಗಳಿಗೆ ಮೀಸಲಾಗಿವೆ. ಬದುಕಿನಲ್ಲಿ ಅವರು ಕಂಡ ನೋವು, ಸಂಕಟ, ಅನುಭವಿಸಿದ ಬಡತನ, ತಂದೆಯ ಸಾವು, ಓದಿಗಾಗಿ ಊರೂರು ಅಲೆದದ್ದು, ಬರಿಗಾಲಿನಲ್ಲಿ ನಡೆದುಕೊಂಡೆ ಬೆಂಗಳೂರು ತಲುಪಿದ್ದು, ಬದುಕಿಗೊಂದು ಹೊಸ ತಿರುವು ನೀಡಿದ ನ್ಯಾಷನಲ್ ಹೈಸ್ಕೂಲು, ಉಚಿತ ಪ್ರಸಾದ ನಿಲಯದಲ್ಲಿ ಪ್ರವೇಶ ಪಡೆಯಲು ಮಾಡಿದ ಹೋರಾಟ, ಬರೀ ನೀರು ಕುಡಿದೇ ದಿನಗಳನ್ನು ನೂಕಿದ್ದು, ಫೇಲಾದರೆ ಮತ್ತೆ ಮರಳಿ ಊರಿಗೆ ಹೋಗಬೇಕಲ್ಲ ಎನ್ನುವ ಭೀತಿಯಿಂದ ಓದಿದ್ದು, ಪ್ರತಿ ತರಗತಿಯಲ್ಲೂ ಪಟ್ಟಣದ ಹುಡುಗರಿಗೆ ಸ್ಪರ್ಧೆ ಒಡಿದ್ದು ಹೀಗೆ ಹತ್ತು ಹಲವು ಸಂಗತಿಗಳು ಪುಟದಿಂದ ಪುಟಕ್ಕೆ ಅನಾವರಣಗೊಳ್ಳುತ್ತ ಹೋಗುತ್ತವೆ. ಅವರು ಬಾಲ್ಯದಲ್ಲಿ ಅನುಭವಿಸಿದ ಕಡು ಬಡತನ ಮತ್ತು ವಿದ್ಯಾಭ್ಯಾಸಕ್ಕಾಗಿ ಮಾಡಿದ ಹೋರಾಟ ನಂತರದ ಪ್ರಾಮಾಣಿಕ ಬದುಕಿಗೆ ಗಟ್ಟಿ ಅಡಿಪಾಯ ಒದಗಿಸಿತು ಎನ್ನುವುದು ಪುಸ್ತಕದ ಪ್ರಾರಂಭದಲ್ಲೇ ಓದುಗನಿಗೆ ಮನವರಿಕೆಯಾಗುತ್ತದೆ.

ನಂತರದ ಭಾಗ ಶಿಕ್ಷಕರಾಗಿ ಎಚ್.ನರಸಿಂಹಯ್ಯನವರು ಮಾಡಿದ ಸಾಧನೆಗಳನ್ನು ಓದುಗರೆದುರು ತೆರೆದಿಡುತ್ತದೆ. ತಮ್ಮ ಇಡೀ ಬದುಕನ್ನು ಶಿಕ್ಷಕ ವೃತ್ತಿಗಾಗಿ ಮುಡಿಪಾಗಿಟ್ಟ ನರಸಿಂಹಯ್ಯನವರ ಬದುಕು ಓದುಗರಿಗೆ ಪ್ರೇರಣೆ ನೀಡುತ್ತದೆ. ಅಮೇರಿಕಾದಂಥ ಆಕರ್ಷಕ ರಾಷ್ಟ್ರದಲ್ಲಿ ಅಧ್ಯಯನ ಮಾಡಿಯೂ ತಾಯ್ನಾಡಿನಲ್ಲಿ ಸೇವೆ ಸಲ್ಲಿಸಬೇಕೆನ್ನುವ ಅವರ ಹಂಬಲ, ವಿದ್ಯೆ ಕೊಟ್ಟು ಬದುಕು ರೂಪಿಸಿದ ನ್ಯಾಷನಲ್ ಶಿಕ್ಷಣ ಸಂಸ್ಥೆಯಲ್ಲೆ ಕೆಲಸ ಮಾಡಬೇಕೆನ್ನುವ ಅವರ ತುಡಿತ, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತಿಯ ನಂತರ ನ್ಯಾಷನಲ್ ಕಾಲೇಜಿಗೆ ಮರಳಿ ಬಂದ ಅವರ ನಿಷ್ಠೆ, ದೊಡ್ಡ ಹುದ್ಧೆಯಲ್ಲಿದ್ದೂ ವಿದ್ಯಾರ್ಥಿಗಳ ವಸತಿ ಗೃಹದ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದ ಅವರ ಸರಳತೆ, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿದ್ದು, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಸೇವೆಗಳು, ಪವಾಡಗಳ ದುರುಪಯೋಗವನ್ನು ವಿರೋಧಿಸಿದ ಅವರ ವೈಚಾರಿಕ ಕ್ರಾಂತಿ, ತಮ್ಮ ಅಂತ್ಯಕ್ರಿಯೆಯನ್ನು ಅತ್ಯಂತ ಸರಳವಾಗಿ ಮಾಡಬೇಕೆಂದು ಅವರು ಬರೆದಿಟ್ಟ ಉಯಿಲು ಹೀಗೆ ಅನೇಕ ಸಂಗತಿಗಳ ಮೂಲಕ ಎಚ್ಚೆನ್ ಅವರ ಅಗಾಧ ವ್ಯಕ್ತಿತ್ವದ ಪರಿಚಯ ಓದುಗನಿಗಾಗುತ್ತದೆ. ತಮ್ಮ ಬದುಕಿನಲ್ಲಿನ ಕೆಲವು ಅಪ್ರಿಯ ವಿಷಯಗಳನ್ನು ಮತ್ತು ತಮಗಾದ ಮಾನಸಿಕ ವೇದನೆಯನ್ನು ಬರೆಯಲೋ ಬೇಡವೋ ಎಂದು ಯೋಚಿಸಿ ಸಂಕ್ಷಿಪ್ತವಾಗಿ ಹೇಳಿರುವುದು ನರಸಿಂಹಯ್ಯನವರ ತಾಳ್ಮೆ ಮತ್ತು ಸಂಯಮದ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ. ಜಿ.ಎಸ್.ಶಿವರುದ್ರಪ್ಪನವರ ಮಾತಿನಂತೆ `ಈ ಆತ್ಮಕಥನ ನಿರಂತರ ಕ್ರಿಯಾಶೀಲವಾದ, ಅದಮ್ಯವಾದ ಜೀವನ ಪ್ರೀತಿಯ, ವಿಧಿ-ಕರ್ಮ-ದೈವಗಳ ಹಂಗಿಲ್ಲದ ಪುರುಷಕಾರದಲ್ಲಿ ನಂಬಿಕೆಯುಳ್ಳ ಮತ್ತು ತೆರೆದ ಮನವುಳ್ಳ ವ್ಯಕ್ತಿತ್ವವೊಂದರ ಸಾಧನೆಗಳ ಚರಿತ್ರೆಯಾಗಿದೆ’.

ಎಚ್ಚೆನ್ ನಮಗೇಕೆ ಇಷ್ಟ

ಮಹಾತ್ಮ ಗಾಂಧೀಜಿಯವರ ಜೊತೆಗೆ ಬಾಲಕ ಎಚ್.ನರಸಿಂಹಯ್ಯಎಚ್ಚೆನ್ ವ್ಯಕ್ತಿತ್ವ ಅದ್ಭುತ ಗುಣಗಳ ಒಂದು ಗಣಿ. ಕುಗ್ರಾಮವೊಂದರ ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿ ಬಂದ ಹಳ್ಳಿಯ ಹುಡುಗನೊಬ್ಬ ನಿರಂತರವಾದ ಶ್ರಮದಿಂದ, ಅಚಲವಾದ ವಿಶ್ವಾಸದಿಂದ, ತನ್ನ ವೈಚಾರಿಕ ಮನೋಭಾವದಿಂದ ಅತ್ಯಂತ ಪ್ರತಿಭಾವಂತನಾಗಿ ಬೆಳೆದು ನಿಂತು ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ನಮ್ಮಲ್ಲಿ ಬೆರಗು ಹುಟ್ಟಿಸುತ್ತದೆ. ಜೊತೆಗೆ ಅವರ ಬದುಕು ಅನೇಕರಿಗೆ ಸ್ಪೂರ್ತಿಯ ಸೆಲೆಯಾಗುತ್ತದೆ. ಮನುಷ್ಯ ಹೇಗೆ ಬದುಕಬೇಕೆನ್ನುವುದಕ್ಕೆ ಎಚ್ಚೆನ್ ಸದಾಕಾಲ ಉದಾಹರಣೆಯಾಗಿ ನಿಲ್ಲುತ್ತಾರೆ. ಎಚ್ಚೆನ್ ನಮಗೆಲ್ಲ ಇಷ್ಟವಾಗಲು ಅನೇಕ ಸಂಗತಿಗಳು ಕಾರಣವಾಗುತ್ತವೆ. ಅವರ ಸರಳ ಜೀವನ ಶೈಲಿ, ಅನನ್ಯ ರಾಷ್ಟ್ರ ಪ್ರೇಮ, ಬದುಕು ರೂಪಿಸಿದ ಶಿಕ್ಷಣ ಸಂಸ್ಥೆಯ ಮೇಲಿನ ನಿಷ್ಠೆ, ಕಡು ಬಡತನದ ಬದುಕಿನೊಂದಿಗಿನ ಹೋರಾಟ, ಅವರಲ್ಲಿನ ಅಚಲವಾದ ಆತ್ಮವಿಶ್ವಾಸ, ವೈಚಾರಿಕ ಮನೋಭಾವ, ಬದುಕಿನ ಒಂದು ಭಾಗ ಎನ್ನುವಂತೆ ಬೆಳೆಸಿಕೊಂಡು ಬಂದ ನಿಷ್ಟೂರತೆ ಹೀಗೆ ಅನೇಕ ಕಾರಣಗಳಿಂದ ನರಸಿಂಹಯ್ಯನವರ ವ್ಯಕ್ತಿತ್ವ ನಮಗೆ ಆಪ್ತವಾಗುತ್ತದೆ.

ಅತ್ಯಂತ ಪ್ರಜ್ಞಾಪೂರ್ವಕವಾಗಿ ಅವರು ರೂಢಿಸಿಕೊಂಡಿದ್ದ ಸರಳ ಬದುಕು ಎಚ್ಚೆನ್ ಇಷ್ಟವಾಗಲು ಮುಖ್ಯಕಾರಣವಾಗುತ್ತದೆ. ಸರಳತೆಗೆ ಇನ್ನೊಂದು ಹೆಸರೇ ಎಚ್.ನರಸಿಂಹಯ್ಯನವರು ಎನ್ನುವಂತೆ ಅವರು ಬದುಕಿ ಬಾಳಿದರು. ಧರಿಸುವ ಬಟ್ಟೆ, ಸೇವಿಸುವ ಆಹಾರ, ವಾಸಿಸುವ ಕೋಣೆ ಹೀಗೆ ಪ್ರತಿಯೊಂದು ಅವರ ಸರಳ ಬದುಕಿಗೆ ಸಾಕ್ಷಿಯಾಗಿದ್ದವು. ಸರಳತೆಗೂ ಮತ್ತು ಅವರ ಬದುಕಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯನ್ನು ಅಲಂಕರಿಸಿದಾಗಲೂ ಅವರು ತಮ್ಮ ವೇಶ ಭೂಷಣಗಳಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ. ಒಂದು ಹಂತದಲ್ಲಿ ಅಂಥದ್ದೊಂದು ಒತ್ತಡ ಬಂದಾಗ ಹುದ್ದೆಯನ್ನು ತ್ಯಜಿಸಲು ಮುಂದಾದರೆ ವಿನಹ ಸರಳತೆಯನ್ನು ಬಿಟ್ಟುಕೊಡಲು ಸ್ವಲ್ಪವೂ ಯೋಚಿಸಲಿಲ್ಲ. ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯೋರ್ವ ತನ್ನ ಬದುಕಿನುದ್ದಕ್ಕೂ ವಿದ್ಯಾರ್ಥಿಗಳ ವಸತಿ ನಿಲಯದ ಸಣ್ಣ ಕೋಣೆಯಲ್ಲಿ ವಾಸವಾಗಿದ್ದರೆನ್ನುವುದು ಕಲ್ಪನೆಗೂ ನಿಲುಕದ ಸಂಗತಿ. ಆ ಕೋಣೆಯಲ್ಲಾದರೂ ಏನಿತ್ತು ಮಲಗಲು ಒಂದೆರಡು ಹಾಸಿಗೆಗಳು, ಬರೆಯಲು ಸಣ್ಣ ಮೇಜು, ಅತಿಥಿಗಳಿಗಾಗಿ ಕೂಡಲು ಎರಡು ಕುರ್ಚಿಗಳು. ವಿಲಾಸಿ ಜೀವನವನ್ನು ನಡೆಸುತ್ತ ಸರಳತೆಯನ್ನು ಕೇವಲ ಉಪದೇಶವಾಗಿಟ್ಟುಕೊಂಡವರಿಗೆ ಎಚ್ಚೆನ್ ಅವರ ಸರಳ ಬದುಕು ಒಂದು ನೀತಿ ಪಾಠವಾಗುತ್ತದೆ.

ಬದುಕು ರೂಪಿಸಿದ ಶಿಕ್ಷಣ ಸಂಸ್ಥೆಯಡೆಗಿನ ಅವರ ನಿಷ್ಠೆ ನಮಗೆಲ್ಲ ಮೆಚ್ಚುಗೆಯಾಗುವ ಅವರಲ್ಲಿನ ಇನ್ನೊಂದು ಬಹು ಮುಖ್ಯ ಗುಣ. ನ್ಯಾಷನಲ್ ಹೈಸ್ಕೂಲಿನಲ್ಲಿ ಅವರಿಗೆ ಪ್ರವೇಶ ದೊರೆತದ್ದು ನರಸಿಂಹಯ್ಯನವರ ಬದುಕಿನ ಬಹು ಮುಖ್ಯ ತಿರುವು. ಪುಸ್ತಕದಲ್ಲಿ ಅವರೇ ಹೇಳಿಕೊಂಡಂತೆ `ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರವೇಶ ದೊರೆತದ್ದೆ ನಾನು ಈ ಹಂತಕ್ಕೆ ಬೆಳೆದು ನಿಲ್ಲಲು ಕಾರಣವಾಯಿತು. ಶ್ರೀ ಎಂ.ಎಸ್.ನಾರಾಯಣರಾಯರು ನನ್ನನ್ನು ನ್ಯಾಷನಲ್ ಹೈಸ್ಕೂಲಿಗೆ ಸೇರಿಸಿದ್ದು ನನ್ನ ಜೀವನದಲ್ಲಿ ಒಂದು ಮುಖ್ಯವಾದ ಘಟನೆ. ಮೊದಲೇ ತಿಳಿಸಿದ ಹಾಗೆ ಶ್ರೀ ಎಂ.ಎಸ್.ನಾರಾಯಣರಾಯರನ್ನು ನನ್ನೂರಿನ ಪ್ರಾಥಮಿಕ ಶಾಲೆಯಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಅವರ ಪ್ರಾಥಮಿಕ ಶಾಲೆಯ ಆವರಣದಲ್ಲೆ ಹೈಸ್ಕೂಲ್ ಸಹ ಇದ್ದಿತ್ತು. ಒಂದು ವೇಳೆ ಅವರು ತಮ್ಮ ಶಾಲೆಯ ಪಕ್ಕದ ಹೈಸ್ಕೂಲಿಗೆ ನನ್ನನ್ನು ಸೇರಿಸಿದ್ದರೆ ನಾನು ಬಹುಶ: ಇಂತಹ ನನ್ನ ಜೀವನ ಚರಿತ್ರೆಯನ್ನು ಬರೆಯಲು ಬೇಕಾದ ಸ್ಥಾನಮಾನವನ್ನು ಸಮಾಜದಲ್ಲಿ ಗಳಿಸುತ್ತಿದ್ದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ’. ಇಂಥದ್ದೊಂದು ಕೃತಜ್ಞತಾ ಭಾವವೇ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಮೇಲಿನ ಅವರ ಅಭಿಮಾನ ಮತ್ತು ನಿಷ್ಠೆಯನ್ನು ಇಮ್ಮಡಿಗೊಳಿಸಿತು. ಅದನ್ನು ಅವರು ತಮ್ಮ ಬದುಕಿನುದ್ದಕ್ಕೂ ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬಂದರು. ಮೂರು ವರ್ಷಗಳ ಕಾಲ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾದಲ್ಲಿ ನೆಲೆ ನಿಂತಾಗಲೂ ಅವರ ಮನಸ್ಸು ನ್ಯಾಷನಲ್ ಕಾಲೇಜಿನ ಕುರಿತೆ ಯೋಚಿಸುತ್ತಿತ್ತು. ತಮ್ಮ ವ್ಯಾಸಂಗ ಮುಗಿಯುತ್ತಿದ್ದಂತೆ ಭಾರತಕ್ಕೆ ಹೊರಟು ನಿಂತರು. ಕೆಲವು ವರ್ಷ

ಅಮೇರಿಕಾ ದೇಶದಲ್ಲೆ ಉಪನ್ಯಾಸಕರಾಗಿ ಕೆಲಸ ಮಾಡುವಂತೆ ಏನೆಲ್ಲ ಪ್ರಲೋಭನೆಗಳನ್ನೊಡ್ಡಿದರೂ ಅವರು ಒಪ್ಪಲಿಲ್ಲ. ವಿದ್ಯೆ ಕೊಟ್ಟು ಅನ್ನ ನೀಡಿದ ಸಂಸ್ಥೆಯ ಋಣ ಅವರನ್ನು ಸೂಜಿಗಲ್ಲಿನಂತೆ ಸೆಳೆದುಕೊಂಡು ಭಾರತಕ್ಕೆ ಕರೆತಂದಿತ್ತು. ಇಂಥದ್ದೆ ಇನ್ನೊಂದು ಪ್ರಸಂಗ ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕವಾದಾಗ ಎದುರಾಯಿತು. ಬಹಳ ವರ್ಷಗಳಿಂದ ಪಾಠ ಮಾಡುತ್ತಿದ್ದ ನ್ಯಾಷನಲ್ ಕಾಲೇಜನ್ನು ಬಿಟ್ಟು ಹೋಗಲು ಅವರಿಗೆ ಮನಸ್ಸಿರಲಿಲ್ಲ. ಉಪಕುಲಪತಿ ಹುದ್ದೆಯ ಅವಧಿಯ ನಂತರ ತಮ್ಮನ್ನು ನ್ಯಾಷನಲ್ ಕಾಲೇಜಿಗೆ ಪುನ: ಮರಳಿ ಬರಲು ಅವಕಾಶ ನೀಡಲಾಗುವುದೆಂದು ಆಡಳಿತ ಮಂಡಳಿ ಭರವಸೆ ನೀಡಿದ ನಂತರವೇ ಅವರು ಆ ಉನ್ನತ ಹುದ್ದೆಯನ್ನು ಒಪ್ಪಿಕೊಂಡಿದ್ದು. ಒಂದು ವೇಳೆ ವಿಶ್ವವಿದ್ಯಾಲಯ ಇಲ್ಲವೆ ನ್ಯಾಷನಲ್ ಕಾಲೇಜ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪ್ರಶ್ನೆ ಎದುರಾಗಿದ್ದರೆ ನಿಸ್ಸಂಶಯವಾಗಿ ಅವರ ಆಯ್ಕೆ ನ್ಯಾಷನಲ್ ಕಾಲೇಜಾಗುತ್ತಿತ್ತು. ಏಕೆಂದರೆ ಬದುಕು ರೂಪಿಸಿದ ಸಂಸ್ಥೆಗಾಗಿ ತಮ್ಮ ಇಡೀ ಬದುಕನ್ನೆ ಮುಡುಪಾಗಿಡುವ ಅಚಲ ನಿಷ್ಠೆ ಅವರದಾಗಿತ್ತು.

ಅವರ ಬದುಕೊಂದು ಪವಾಡ

ಮೂಲತ: ಪವಾಡ ಪುರುಷರನ್ನೂ, ಪವಾಡಗಳ ದುರುಪಯೋಗವನ್ನೂ ವಿರೋಧಿಸುತ್ತಿದ್ದ ಎಚ್.ನರಸಿಂಹಯ್ಯನವರು `ನಾನು ನಡೆದು ಬಂದ ದಾರಿಯನ್ನು ಸಿಂಹಾವಲೋಕನ ಮಾಡಿದಾಗ ನನ್ನ ಜೀವನ ಒಂದು ಪವಾಡ ಅಂತ ಅನ್ನಿಸುತ್ತದೆ’ ಎಂದು ತಮ್ಮ ಆತ್ಮಕಥೆಯ ಮುಕ್ತಾಯದಲ್ಲಿ ಹೇಳಿಕೊಂಡಿದ್ದಾರೆ. `ಕಡು ಬಡತನದಲ್ಲಿ ಹುಟ್ಟಿ, ಬಸ್ ಚಾರ್ಜಿಗೆ ದುಡ್ಡಿಲ್ಲದೆ ಬೆಂಗಳೂರಿಗೆ ನಡೆದುಕೊಂಡು ಬಂದು ನ್ಯಾಷನಲ್ ಹೈಸ್ಕೂಲು ಸೇರಿದೆ. ಅಂತಹವನು ಯಾವ ಜಾತಿ, ರಾಜಕೀಯ ಮತ್ತು ಹಣದ ಬೆಂಬಲವೂ ಇಲ್ಲದೆ ಇಂತಹ ಒಂದು ಪುಸ್ತಕವನ್ನು ಬರೆಯುವ ಹಂತಕ್ಕೆ ಮುಟ್ಟಿರುವುದೇ ಒಂದು ಪರಮಾಶ್ಚರ್ಯ’ ಎಂದು ತಮ್ಮ ಬದುಕಿನ ಬೆಳವಣಿಗೆ ಕುರಿತು ಅಚ್ಚರಿ ವ್ಯಕ್ತಪಡಿಸುತ್ತಾರೆ.

ಹಳ್ಳಿಯಿಂದ ಬಂದ ಅನಾಥ ಬಾಲಕ ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರವೇಶ ಪಡೆದು ತನ್ನ ಸ್ವಂತ ಪರಿಶ್ರಮದಿಂದ ಆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆರಿದ್ದು ಅವರ ಬದುಕಿನ ಮಹತ್ವದ ಸಾಧನೆಗಳಲ್ಲೊಂದು. ವಿಶ್ವವಿದ್ಯಾಲಯದ ಉಪಕುಲಪತಿ, ಮೇಲ್ಮನೆಯ ಶಾಸಕ ಸ್ಥಾನ, ಕನ್ನಡ ಪ್ರಾಧಿಕಾರದ ಅಧ್ಯಕ್ಷತೆ, ಪದ್ಮಭೂಷಣ ಪ್ರಶಸ್ತಿ, ಗೌರವ ಡಾಕ್ಟರೇಟ್ ಈ ಎಲ್ಲವು ಎಚ್ಚೆನ್ ಅವರ ಪ್ರತಿಭೆಗೆ ಸಂದ ಗೌರವಗಳು. ಯಾವುದನ್ನೂ ಅವರು ಅಪೇಕ್ಷಿಸಿದವರಲ್ಲ. ಯಾವ ಪ್ರಶಸ್ತಿ, ಗೌರವಗಳ ಹಿಂದೆ ಬಿದ್ದವರಲ್ಲ. ಒಂದು ಪ್ರಶಸ್ತಿ, ಉನ್ನತ ಹುದ್ದೆ ದೊರೆತಾಗಲೂ ಅವರದು ನಿರ್ವಿಕಾರ ಭಾವ. ತನ್ನದು ಎನ್ನುವ ಒಂದು ಕೌಟಂಬಿಕ ಚೌಕಟ್ಟನ್ನೂ ಕಟ್ಟಿ ಕೊಳ್ಳದ ವ್ಯಕ್ತಿಗೆ ಅನೇಕ ಸ್ಥಾನ ಮಾನಗಳು ಹುಡುಕಿಕೊಂಡು ಬಂದವು. ಪ್ರತಿಭೆ, ನಿರಂತರ ಪರಿಶ್ರಮ, ಪ್ರಾಮಾಣಿಕತೆ ಈ ಗುಣಗಳಿಂದ ಮನುಷ್ಯನೋರ್ವನ ಜೀವನದಲ್ಲಿ ಏನೆಲ್ಲ ಪವಾಡಗಳಾಗಬಹುದೆನ್ನುವುದಕ್ಕೆ ಎಚ್.ನರಸಿಂಹಯ್ಯನವರ ಬದುಕು ಸಾಕ್ಷಿಯಾಗಿ ನಿಲ್ಲುತ್ತದೆ.
ಕೊನೆಯ ಮಾತು

ಬಡತನಕ್ಕೂ ಮತ್ತು ಪ್ರತಿಭೆಗೂ ಒಂದು ರೀತಿ ಬಿಡಿಸಲಾಗದ ನಂಟು. ಕಡು ಬಡತನದ ನಡುವೆಯೂ ಬದುಕನ್ನು ತಮ್ಮ ಇಷ್ಟದಂತೆ ಕಟ್ಟಿಕೊಂಡು ಬೆಳೆದು ನಿಂತವರ ಉದಾಹರಣೆ ಇತಿಹಾಸದಲ್ಲಿದೆ. ಅಂಥದ್ದೊಂದು ಅಪರೂಪದ ಬದುಕನ್ನು ಬದುಕಿದವರು ಡಾ.ಎಚ್.ನರಸಿಂಹಯ್ಯನವರು. ದಟ್ಟ ದಾರಿದ್ರ್ಯದ ಮಧ್ಯೆಯೂ ತನ್ನಲ್ಲಿ ಅಂತರ್ಗತವಾಗಿದ್ದ ಪ್ರತಿಭೆಯ ಮೂಲಕ ವ್ಯಕ್ತಿಯೋರ್ವ ಎಂಥ ಎತ್ತರಕ್ಕೆ ಬೆಳೆದು ನಿಲ್ಲಬಹುದೆನ್ನುವುದನ್ನು ತೋರಿಸಿಕೊಟ್ಟ ಸಾಧಕರಿವರು. ಹೇಗಾದರೂ ಬದುಕಬೇಕೆನ್ನುವುದಕ್ಕಿಂತ ಹೀಗೇ ಬದುಕ ಬೇಕೆನ್ನುವುದು ಅವರು ರೂಢಿಸಿಕೊಂಡ ನಿಯಮವಾಗಿತ್ತು. ಸರಳತೆ, ಪ್ರಾಮಾಣಿಕತೆ, ಪರಿಶುದ್ಧತೆಯನ್ನು ತಮ್ಮ ಬಾಳಿನುದ್ದಕ್ಕೂ ಒಂದು ವ್ರತದಂತೆ ಕಾಯ್ದುಕೊಂಡು ಬಂದ ಎಚ್ಚೆನ್‍ರ ಬದುಕು ಅವರ ನಂತರದ ಪೀಳಿಗೆಗೆ ಸದಾಕಾಲ ಪ್ರೇರಣೆಯಾಯಿತು.

ಚಿತ್ರಕೃಪೆ : ದಿ ಹಿಂದೂ

6 ಟಿಪ್ಪಣಿಗಳು Post a comment
 1. ಮೇ 12 2015

  ಹೃದಯ ಸ್ಪರ್ಶವಾದ ಲೇಖನ. ಈ ಪುಸ್ತಕ ಈಗ ಸಿಗುತ್ತದೆಯೇ?

  ಉತ್ತರ
  • Nagshetty Shetkar
   ಮೇ 12 2015

   “ಹೃದಯ ಸ್ಪರ್ಶವಾದ ಲೇಖನ”

   ಅಂದರೆ ಏನು? ಹೃದಯಸ್ಪರ್ಶಿ ಲೇಖನ ಅಂದರೆ ಏನು ಬಲ್ಲೆ.

   ಉತ್ತರ
  • Rajkumar V Kulkarni
   ಮೇ 13 2015

   ಮಾನ್ಯರೆ ತಮ್ಮ ಪ್ರಶಂಸೆಗೆ ಧನ್ಯವಾದಗಳು. ಈ ಪುಸ್ತಕ ಓದುಗ ಮಿತ್ರರೊಬ್ಬರು ನನಗೆ ಓದಲು ಕೊಟ್ಟಿದ್ದರು. ಮಾರುಕಟ್ಟೆಯಲ್ಲಿ ಈಗ ದೊರೆಯದೆ ಇರಬಹುದು.

   ಉತ್ತರ
   • ಮೇ 13 2015

    ಈ ಪುಸ್ತಕವನ್ನು ಡಿಜಿಟೀಕರಿಸುವುದಾದರೆ ಅದರ ಖರ್ಚುಗಳನ್ನು ನಾನು ವಹಿಸಿಕೊಳ್ಳುತ್ತೇನೆ. ವಿಚಾರಿಸಿ ನೋಡಿ. ನಾನು ಹೊರದೇಶದಲ್ಲಿ ಇರುವ ನಿಮ್ಮನ್ನು ಕೇಳುತ್ತದ್ದೇನೆ. ತಪ್ಪು ತಿಳಿಯಬೇಡಿ

    ಉತ್ತರ
 2. Nagshetty Shetkar
  ಮೇ 13 2015

  HN was a Kaayaka Yogi.

  ಉತ್ತರ
 3. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
  jayakumarcsj@gmail.com

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments