ವಿಷಯದ ವಿವರಗಳಿಗೆ ದಾಟಿರಿ

ಮೇ 21, 2015

11

ಬಹುಸಂಖ್ಯಾತರಿಗೆ ರಿಲಿಜನ್ ಇಲ್ಲವಾದರೆ ಅಲ್ಪಸಂಖ್ಯಾತರು ಯಾರು?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ರಿಲಿಜನ್ಅದು ರಾಮಕೃಷ್ಣ ಮಿಷನ್ ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರದ ನಡುವೆ ನಡೆದ ಕುತೂಹಲಕಾರಿ ಕಾನೂನು ಕದನ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ರಾಮಕೃಷ್ಣ ಮಿಷನ್ ಸಂಸ್ಥೆಗೆ ಸೇರಿದ ಶಿಕ್ಷಣ ಸಂಸ್ಥೆಯೊಂದರಲ್ಲಿ ಶುರುವಾಗಿದ್ದ ಕಾಲೇಜಿನ ನಿರ್ವಹಣೆಗೆ ಸಂಬಂಧಿಸಿದಂತೆ,ಸರ್ಕಾರದ ಹಸ್ತಕ್ಷೇಪವನ್ನು ಪ್ರಶ್ನಿಸಿ ರಾಮಕೃಷ್ಣ ಮಿಷನ್ ನ್ಯಾಯಾಲಯದ ಮೆಟ್ಟಿಲೇರಿತ್ತು.ತಮ್ಮ ಸಂಘಟನೆಯೂ ರಾಮಕೃಷ್ಣರ ಬೋಧನೆಗಳ ಮೇಲೆ ಆಧಾರಿತವಾಗಿರುವುದರಿಂದ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಸಂವಿಧಾನದ Article 30(1) ಮತ್ತು Article 26(a) ಕಾಯ್ದೆಯಡಿಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಇರಬೇಕಾದ ರಕ್ಷಣೆಯಿದೆ ಎಂದು ವಾದಿಸಿತ್ತು.ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ರಾಮಕೃಷ್ಣಯಿಸಂ ಎಂಬ ಪ್ರತ್ಯೇಕವಾದ ರಿಲಿಜನ್ ಇಲ್ಲ ಮತ್ತದು ಹಿಂದೂ ಸಂಪ್ರದಾಯಗಳ ವ್ಯಾಪ್ತಿಯಲ್ಲೇ ಇದೆ ಎಂದಿತ್ತು ಹಾಗೂ ಹಿಂದೂ ಎಂಬುದು ರಿಲಿಜನ್ ಅಲ್ಲ ಅದೊಂದು ಜೀವನ ಪದ್ಧತಿ ಎಂದು ತೀರ್ಪು ನೀಡಿತ್ತು.ಈ ದೇಶದ ಸರ್ವೋಚ್ಚ ನ್ಯಾಯಾಲಯವೇ ಹಿಂದೂ ಎಂಬುದು ರಿಲಿಜನ್ ಅಲ್ಲ ಎಂದ ಮೇಲೆ ನಮ್ಮ ಸರ್ಕಾರಗಳು ಅದನ್ನು ಪರಿಗಣಿಸಬೇಕಿತ್ತಲ್ಲವೇ?

ಒಂದು ವೇಳೆ ಪರಿಗಣಿಸಿದ್ದರೆ ಈಗಲೂ ಸರ್ಕಾರಿ,ಖಾಸಗಿ ಕಚೇರಿ,ಶಿಕ್ಷಣ ಸಂಸ್ಥೆ ಇತ್ಯಾದಿಗಳ ಅರ್ಜಿಗಳಲ್ಲಿ “ಹಿಂದೂ” ಎಂಬುದನ್ನು “ರಿಲಿಜನ್” ಕಾಲಂನಲ್ಲಿ ಭರ್ತಿ ಮಾಡಿಕೊಳ್ಳುತ್ತಿರಲಿಲ್ಲ. ಉದಾಹರಣೆಗೆ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಸರ್ಕಾರ ಮಾಡಿದ ಜಾತಿಗಣತಿಯ ವೇಳೆ ನನಗಾದ ಅನುಭವದ ಬಗ್ಗೆ ಹೇಳಬೇಕು.

ಜಾತಿ ಗಣತಿಗೆ ಬಂದವರು, ಜಾತಿ ಯಾವುದು? ಅಂತ ಕೇಳಿದರು ಹೇಳಿದೆ.

ಉಪಜಾತಿ ಯಾವುದು? –  ಉಪಜಾತಿ ಅಂತೆಲ್ಲ ಇಲ್ಲ.

ರಿಲಿಜನ್, ಹಿಂದೂ ಅಲ್ವಾ ಸರ್? (ಅವರಾಗಿಯೇ ಡಿಸೈಡ್ ಮಾಡಿದಂತೆ!)

ನಾನು : ಅಲ್ಲ ಮೇಡಂ.
ಅವರು : ಮತ್ತೆ ಕ್ರಿಶ್ಚಿಯನ್ನಾ?
ನಾನು : ನಮಗೆ ಯಾವ ರಿಲಿಜನ್ನೂ ಇಲ್ಲ.
ಅವರು : ಮತ್ತೆ ಶಾಲೆಯಲ್ಲಿ ಏನಂತ ಕೊಟ್ಟಿದ್ರಿ?
ನಾನು : ಆಗ ಗೊತ್ತಿರ್ಲಿಲ್ಲ.ಈ ತಲೆ ಕೆಟ್ಟ ಸರ್ಕಾದೋರು “ಹಿಂದೂ ರಿಲಿಜನ್” ಅಂತ ಬರೆಸೋರು,ನಾವು ಬರಿತಿದ್ವಿ.ಈಗ ಗೊತ್ತಾಗಿದೆ ನಮಗೆ ರಿಲಿಜನ್ನಿಲ್ಲ ಅಂತ.
ಅವರು : ಹಾಗಿದ್ರೆ ನೀವೇನು?
ನಾನು : “ಭಾರತೀಯ ಸಂಪ್ರದಾಯಸ್ಥ”
ಅವರು : ಹಾಗಿದ್ದರೆ “ಹಿಂದೂ”?
ನಾನು : “ಹಿಂದೂ” ಎನ್ನುವುದು ಒಂದು ಜನಾಂಗ ಸೂಚಕ ಪದ. ನನಗಷ್ಟೇ ಅಲ್ಲ.ನಿಮಗೂ ಸಹ ಇಲ್ಲ ಹಾಗೆಯೇ ನಿಮ್ಮಲ್ಲಿ ಇದುವರೆಗೆ ಹಿಂದೂ ಅಂತ ಬರೆಸಿದವರಿಗೂ ರಿಲಿಜನ್ ಇಲ್ಲ.ನಾವು “ರಿಲಿಜನ್” ಇಲ್ಲದೇ ಬದುಕುತ್ತಿರುವ ಜನ.
ಅವರು : ಹಾಗಿದ್ದರೆ ’ಕ್ರಿಶ್ಚಿಯನ್ನರು,ಮುಸ್ಲಿಮರು”
ನಾನು : ಕ್ರಿಶ್ಚಿಯಾನಿಟಿ,ಇಸ್ಲಾಂ ಎಂಬ ರಿಲಿಜನ್ನುಗಳಿರುವುದು ನಿಜ.ಅವರು ರಿಲಿಜನ್ ಕಾಲಂ ನಲ್ಲಿ ಹಾಗೇ ಬರೆಸಿಕೊಳ್ಳಬಹುದು.ಆದರೆ ನಾವಲ್ಲ
ಅವರು : ಸರಿ ಸರ್.ರಿಲಿಜನ್ ಖಾಲಿ ಬಿಡ್ತೀನಿ

ಈ ಸಂಭಾಷಣೆಯನ್ನು ಓದಿ ಒಂದಿಷ್ಟು ಜನರು ನನಗೆಲ್ಲೋ ಸೆಕ್ಯುಲರಿಸಂ ಖಾಯಿಲೆ ಬಡಿದಿರಬೇಕು ಎಂದುಕೊಳ್ಳಬಹುದೇನೋ.ಮೊದಲೇ ಸ್ಪಷ್ಟ ಪಡಿಸುತ್ತೇನೆ ನಾನು ಸೆಕ್ಯುಲರ್ ಅಲ್ಲ.ಅಷ್ಟಕ್ಕೂ ಹಿಂದೂ ಎಂಬುದು ರಿಲಿಜನ್ ಅಲ್ಲ ಎಂಬುದು ನಾನು ಹೇಳಿದ್ದಲ್ಲ.ತೀರಾ ಇತ್ತೀಚೆಗೆ ಪ್ರಧಾನಿ ಮೋದಿಯೂ ಸಹ “ಹಿಂದೂ” ಎಂಬುದು ರಿಲಿಜನ್ ಅಲ್ಲವೆಂದಿದ್ದರು.ಖುದ್ದು ಸುಪ್ರೀಂ ಕೋರ್ಟು ೧೯೯೫ರಲ್ಲಿಯೇ “ಹಿಂದೂ ಎಂಬುದು ರಿಲಿಜನ್ ಅಲ್ಲ.ಅದೊಂದು ಜೀವನ ಪದ್ಧತಿ” ಎಂದು ಹೇಳಿದೆ.ಹೀಗಿದ್ದ ಮೇಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಈಗಲೂ ಸಹ “ರಿಲಿಜನ್” ಕಾಲಂನಲ್ಲಿ “ಹಿಂದೂ” ಎಂದು ಬರೆಸಿಕೊಳ್ಳುವುದು ತಪ್ಪಲ್ಲವೇ?

ತಪ್ಪೇಕೆ ಎಂಬ ಪ್ರಶ್ನೆ ನಿಮ್ಮಲ್ಲೇಳಬಹುದು.ಯಾಕೆಂದರೆ,ನಾವು ಹಾಗೇ ನೀಡಿದ ಮಾಹಿತಿಯಿಂದಲೇ ಈ ದೇಶದ ಜನರನ್ನು “ಧಾರ್ಮಿಕ ಬಹುಸಂಖ್ಯಾತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು” ಎಂದು ಸರ್ಕಾರಗಳು ಗುರುತಿಸುವುದು.ಧಾರ್ಮಿಕ ಅಲ್ಪಸಂಖ್ಯಾತರಿಗೆ ನಮ್ಮ ಸಂವಿಧಾನವೇ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಅವರು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ,ಧಾರ್ಮಿಕ ಕ್ಷೇತ್ರ-ಸಂಸ್ಥೆ ಇತ್ಯಾದಿಗಳಲ್ಲಿ,ಬಹುಸಂಖ್ಯಾತರ ಸಂಸ್ಥೆಗಳಲ್ಲಿ ಮಾಡಿದಂತೆ ಸರ್ಕಾರ ಮೂಗು ತೂರಿಸುವಂತಿಲ್ಲ. ಉದಾಹರಣೆಗೆ; ಹಿಂದೂ ಸಂಪ್ರದಾಯಕ್ಕೆ ಸೇರಿದ ಹಲವು ಧಾರ್ಮಿಕ ಕ್ಷೇತ್ರಗಳು ಮುಜರಾಯಿ ಇಲಾಖೆಯಡಿಗೆ ಬರುತ್ತವೆ.ಆದರೆ ಮಸೀದಿ,ಚರ್ಚುಗಳಿಗೆ ಅಲ್ಪಸಂಖ್ಯಾತ ರಿಲಿಜನ್ ರಕ್ಷಣೆಯಿರುವುದರಿಂದ ಸರ್ಕಾರ ಅವುಗಳ ಸುದ್ದಿಗೇ ಹೋಗುವಂತಿಲ್ಲ ಮತ್ತು ಇಂತ ಸಂಸ್ಥೆಗಳಿಂದ ಬಂದ ಆದಾಯವನ್ನು ಸರ್ಕಾರ ಎಲ್ಲೆಲ್ಲೋ ಬಳಸಿಕೊಳ್ಳುತ್ತಿದೆ ಎಂಬ ಕೂಗು ಸಹ ಆಗಾಗ ಕೇಳಿ ಬರುತ್ತಿರುತ್ತದೆ.ಬಹುಷಃ ಈ ಸೌಲಭ್ಯಗಳ ಕಾರಣದಿಂದಲೋ ಏನೋ ಇತ್ತೀಚೆಗೆ ನಮ್ಮದು ಸ್ವತಂತ್ರ ರಿಲಿಜನ್ ಎನ್ನುವ ಕೂಗುಗಳು ಕೇಳಿ ಬರುತ್ತಿರುವುದು.

ಪ್ರಸ್ತುತವಿರುವ ರಿಲಿಜನ್ ಆಧಾರಿತ ಜನಸಂಖ್ಯಾ ಮಾಹಿತಿಯನ್ನು ನೋಡಿದರೆ “ಹಿಂದೂ” ಎಂದು ಗುರುತಿಸಲ್ಪಡುವ ರಿಲಿಜನ್ ಬಹುಸಂಖ್ಯಾತವೆಂದು ಪರಿಗಣಿಸಲ್ಪಡುತ್ತದೆ.ಆದರೆ ಆ ಬಹುಸಂಖ್ಯಾತರು “ರಿಲಿಜನ್” ಇಲ್ಲದವರು ಎಂದಾದರೆ,ಆಗ “ಧಾರ್ಮಿಕ ಅಲ್ಪಸಂಖ್ಯಾತ”ರಾಗುವವರು ಯಾರು? ಸಹಜವಾಗಿಯೇ ರಿಲಿಜನ್ ಆಧಾರಿತ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಸ್ಲಿಮರು.ಆಗ ಸರ್ಕಾರ ಇವರಿಗೆ ಅಲ್ಪಸಂಖ್ಯಾತ ರಿಲಿಜನ್ ಅಡಿಯಲ್ಲಿ ಸಂವಿಧಾನ ಬದ್ಧವಾಗಿ ನೀಡಲಾಗಿರುವ ಸವಲತ್ತುಗಳನ್ನು ವಾಪಸ್ ಪಡೆಯಬೇಕಾಗುತ್ತದೆ ಅಥವಾ ಈ ರಿಲಿಜನ್ ಆಧಾರಿತ ಸೌಲಭ್ಯಗಳಿಗೆ ತಿಲಾಂಜಲಿಯಿಟ್ಟು ಒಂದು ದೇಶದ ಜನರಿಗೆಲ್ಲಾ ಏಕರೂಪದ ಸೌಲಭ್ಯಗಳನ್ನು ಕೊಡಬೇಕಾಗುತ್ತದೆ.

ಬಹುಷಃ ಈ ಲೇಖನಕ್ಕೆ ವಿರೋಧ ವ್ಯಕ್ತಪಡಿಸುವವರಲ್ಲಿ ಹೆಚ್ಚಿನವರು ತಮ್ಮನ್ನು “ಹೆಮ್ಮೆಯ ಹಿಂದೂ”ಗಳೆಂದು ಕರೆದುಕೊಳ್ಳುವವರೇ ಆಗಿರುತ್ತಾರೆ ಎಂದು ನನಗನ್ನಿಸುತ್ತದೆ.ಹಿಂದೂ ಎಂಬುದು ನಮ್ಮ ಅಸ್ಮಿತೆ.ನಮ್ಮ ಪೂರ್ವಜರಿಂದ ನಡೆದುಕೊಂಡು ಬಂದಿರುವ ನಮ್ಮ ಸಂಪ್ರದಾಯ,ಆಚರಣೆಗಳನ್ನು ಇಲ್ಲವೆಂದೇಕೆ ಹೇಳಬೇಕು ಇತ್ಯಾದಿ ಪ್ರಶ್ನೆಗಳೇಳಬಹುದು.ಅವರಿಗೆ ಹೇಳಲಿಚ್ಚಿಸುವುದೇನಂದರೆ,ಹಿಂದೂ ಎಂಬ ರಿಲಿಜನ್ ಇಲ್ಲವೆಂದರೆ ಅದರರ್ಥ,ನಮ್ಮ ಸಂಪ್ರದಾಯಗಳು,ಆಚರಣೆಗಳು ಅವೆಲ್ಲ ಇಲ್ಲವೆಂದು ಅರ್ಥವಲ್ಲ ಅಥವಾ ನೀವೊಬ್ಬ ಹೆಮ್ಮೆಯ ಹಿಂದೂ ಅಲ್ಲ ಅಂತಲೂ ಅರ್ಥವಲ್ಲ.ಇದನ್ನು ಅರ್ಥಮಾಡಿಕೊಳ್ಳಲು ನಾವು “ರಿಲಿಜನ್” ಎಂದರೇನು ಎಂಬುದನ್ನು ಅರಿಯಬೇಕು. ಪ್ರೊ.ಬಾಲಗಂಗಾಧರರ ಸಮಾಜ ವಿಜ್ಞಾನ ಸಂಶೋಧನೆಗಳು,ರಿಲಿಜನ್ ಎಂದು ಯಾವುದನ್ನು ಕರೆಯುತ್ತೆವೆಯೋ ಅವುಗಳ ಮೂಲ ಲಕ್ಷಣವೇನು ಎಂಬುದನ್ನು ವಿವರಿಸಿವೆ ಮತ್ತು ಭಾರತೀಯರಿಗೆ “ರಿಲಿಜನ್” ಎಂಬುದು ಇಲ್ಲವೆಂದು ಸಾಬೀತುಪಡಿಸಿವೆ.

ನನ್ನ ಹಿಂದಿನ ಲೇಖನದಲ್ಲಿ ವಿವರಿಸಿದ್ದಂತೆ ; “ಹಿಂದೂ” ಎಂಬುದು ಉಪಖಂಡದ ಜನರನ್ನು ಜನಾಂಗೀಯವಾಗಿ ಗುರುತಿಸಲು ಬಳಸಲ್ಪಡುತಿದ್ದ ಪದ.ಯುರೋಪಿಯನ್ನರ ಪಾಲಿಗೆ ರಿಲಿಜನ್ ಎಂಬುದು ಜಗತ್ತಿನೆಲ್ಲೆಡೆಯೆಲ್ಲಾ ಬೇರೆ ಬೇರೆ ಸ್ವರೂಪದಲ್ಲಿ ಅಸ್ತಿತ್ವದಲ್ಲಿದೆ ಎಂಬ ನಂಬಿಕೆಯೊಂದಿತ್ತು.ಅವರು ಭಾರತಕ್ಕೆ ಬಂದ ನಂತರ ಆ ನಂಬಿಕೆಯ ಮೇಲೆಯೇ ಸೆಮೆಟಿಕ್ ರಿಲಿಜನ್ ಗಳಾದ ’ಇಸ್ಲಾಂ,ಕ್ರಿಶ್ಚಿಯಾನಿಟಿ’ ಗಳಂತೆಯೇ ಇಲ್ಲಿನ “ಹಿಂದೂ” ಎಂದು ಗುರುತಿಸಲ್ಪಡುತಿದ್ದ ಜನರಿಗೂ ಒಂದು ರಿಲಿಜನ್ ಇರಬೇಕೆಂದು ಊಹಿಸಿ ಅದಕ್ಕೆ “ಹಿಂದೂ ರಿಲಿಜನ್” ಎಂದು ನಾಮಕರಣ ಮಾಡಿದರು.

ಅವರು ರಿಲಿಜನ್ ಎಂಬ ಪದವನ್ನು ಸೃಷ್ಟಿಸುವ ಮೊದಲು ನಮ್ಮ ಸಂಪ್ರದಾಯಗಳು ಇರಲಿಲ್ಲವೇ? ಈಗ ನಮಗ್ಯಾವ ರಿಲಿಜನ್ ಇಲ್ಲ ಎಂಬ ಸತ್ಯವನ್ನು ನಾವು ಹೇಳಿಕೊಂಡರೇ ನಮ್ಮ ಸಂಪ್ರದಾಯ,ಆಚರಣೆಗಳೇನು ನಾಶವಾಗುತ್ತವೆಯೇ? ಅಥವಾ ನಮ್ಮ ಜನರು ಅವುಗಳಿಂದ ವಿಮುಖರಾಗಿ ಬಿಡುತ್ತಾರೆಯೇ? ಇವೆಲ್ಲ ಅರ್ಥವಿಲ್ಲದ ಆತಂಕಗಳಷ್ಟೇ.

ಇಲ್ಲಿರುವುದು ಭಿನ್ನ ಭಿನ್ನ ಸಾಂಪ್ರದಾಯಿಕ ಸಮುದಾಯಗಳು.ಆಯಾ ಸಮುದಾಯಗಳಿಗೆ ಅವುಗಳದ್ದೇ ಆದ ಆಚರಣೆಗಳಿವೆ.ಕೆಲವೊಂದು ಸಂದರ್ಭಗಳಲ್ಲಿ ಆಯಾ ಆಚರಣೆಗಳು ಸಮುದಾಯವೊಂದಕ್ಕೆ ಸೀಮಿತವಾಗಿದ್ದರೆ ಮತ್ತೆ ಕೆಲವೊಮ್ಮೆ ಸಾಮಾಜಿಕವಾಗಿ ಈ ಸಮುದಾಯಗಳು ಒಂದುಗೂಡಿ ಆಚರಣೆಯನ್ನು ಮಾಡಿಕೊಳ್ಳುತ್ತವೆ.ಹಾಗಾಗಿ ಭಾರತದಲ್ಲಿ,ಹಿಂದೂ ಎಂಬ ರಿಲಿಜನ್ ಇಲ್ಲ ಎಂದ ತಕ್ಷಣ ಆತಂಕ ಪಡುವಂತದ್ದೇನೂ ಇಲ್ಲ.ಅಷ್ಟಕ್ಕೂ ಈ “ರಿಲಿಜನ್” ಕಾಲಂ ಶುರುವಾಗಿದ್ದು ಬ್ರಿಟಿಷರ ಕಾಲದಲ್ಲಿ ಆಡಳಿತಾತ್ಮಕ ವ್ಯವಸ್ಥೆಗಾಗಿ.ಅದಕ್ಕೂ ಮೊದಲೂ ಯಾವುದೇ ರಿಲಿಜನ್ ಇಲ್ಲದೆ ಈ ದೇಶದ ಜನ ತಮ್ಮ ಪಾಡಿಗೆ ತಾವು ಬದುಕಿಲ್ಲವೇ? ಹೀಗಿರುವಾಗ “ರಿಲಿಜನ್” ಕಾಲಂ ಅನ್ನು ಖಾಲಿ ಬಿಟ್ಟರೆ ನಾನು ಹಿಂದೂ ಅಲ್ಲ ಅಂತಾಗುವುದಿಲ್ಲ.ಸಾಂಸ್ಕೃತಿಕವಾಗಿ ನಾವು ಹಿಂದೂಗಳೇ.ಈಗ ರಿಲಿಜನ್ ಎಂಬುದು ಇಲ್ಲ ಎಂದು ಹೇಳಿಕೊಂಡರೆಯೂ ಜನ ಸಾಮಾನ್ಯರ ಬದುಕು ಹಾಗೆಯೇ ಸಾಗುತ್ತದೆ.ತಲೆಕೆಡಿಸಿಕೊಳ್ಳಬೇಕಾದವರು ಸರ್ಕಾರಗಳು,ಕಾನೂನು ತಜ್ಞರು ಹಾಗೂ ರಾಜಕೀಯ ಪಕ್ಷಗಳು.

ಈ ದೇಶದ ಬಹುಸಂಖ್ಯಾತರಿಗೆ ರಿಲಿಜನ್ ಇಲ್ಲವಾದಾಗ ಅಲ್ಪಸಂಖ್ಯಾತ ರಿಲಿಜನ್ ಎಂಬುದಕ್ಕೂ ಅರ್ಥವಿರುವುದಿಲ್ಲ, ಪರಿಸ್ಥಿತಿ ಹೀಗಾದರೇ ಅಲ್ಪಸಂಖ್ಯಾತ ವೋಟ್ ಬ್ಯಾಂಕ್ ಅಸ್ತ್ರಪ್ರಯೋಗಿಸುವ ರಾಜಕೀಯ ಪಕ್ಷಗಳು ಬೇರೆ ಕತೆ ಹುಡುಕಿಕೊಳ್ಳಬೇಕಾಗುತ್ತದೆ.ಇವೆಲ್ಲಕ್ಕಿಂತ ಮುಖ್ಯವಾಗಿ ಸಂವಿಧಾನಕ್ಕೂ ತಿದ್ದುಪಡಿ ಬೇಕಾಗುತ್ತದೆಯಲ್ಲವೇ?

ಈ ಬಗ್ಗೆ ಮುಕ್ತ ಚರ್ಚೆ ಮಾಡುವ ಸಮಯ ಈಗ ಬಂದಿದೆ. ಪ್ರತಿಕ್ರಿಯೆಗಳಿಗೆ ಸ್ವಾಗತ

11 ಟಿಪ್ಪಣಿಗಳು Post a comment
  1. Naveen Bhat's avatar
    Naveen Bhat
    ಮೇ 21 2015

    ರಿಲಿಜನ್ ಅನ್ನುವುದು ಎಂಥಾ ಜೈಲು ಎಂದು ಅರ್ಥವಾಗುವವರೆಗೂ ಹಿಂದೂ ಕೂಡ ತಕ್ಷಣಕ್ಕೆ ತನ್ನದು ರಿಲಿಜನ್ ಅಲ್ಲ ಎಂದು ಒಪ್ಪಲಾರ ಅನ್ನಿಸುತ್ತದೆ. ಭಾರತೀಯ ಜೀವನ ಪದ್ಧತಿಯ ಇತಿಹಾಸವನ್ನು ಅಭ್ಯಸಿಸಿದರೆ ಭಾರತೀಯತೆಯನ್ನು ಪಶ್ಚಿಮದ ರಿಲಿಜನ್ ಕನ್ನಡಕದಲ್ಲಿ ನೋಡುವುದು ಮತ್ತು ತುಲನೆ ಮಾಡುವುದು ಎಂಥಾ ಹಾಸ್ಯಾಸ್ಪದ ಎನ್ನುವುದು ಅರ್ಥವಾಗುತ್ತದೆ. ರಿಲಿಜನ್ನಿನ ಮತ್ತು ಹಿಂದೂವಿಗೆ ಇತಿಹಾಸದ ಯಾವುದೋ ಭಾಗದಲ್ಲಿ ಏರಿದ್ದೇ ಖರೆ. ಅದಿಲ್ಲದಿದ್ದರೆ ಭಗವದ್ಗೀತೆಯನ್ನು ’ಧರ್ಮಗ್ರಂಥ’ ಎಂದು ಸ್ವೀಕರಿಸುವ ಮೂರ್ಖತನವನ್ನು ಹಿಂದೂ ಮಾಡುತ್ತಿರಲಿಲ್ಲ.

    ಉತ್ತರ
  2. ಮಲ್ಲಪ್ಪ's avatar
    ಮಲ್ಲಪ್ಪ
    ಮೇ 21 2015

    ರಾಯರೇ
    ಸರ್ಕಾರ ನಡೆಸುತ್ತಿರುವ ಜಾತಿಆಧಾರಿತ ಜನಗಣತಿಯ ಮುಂಚೆಯೇ ಜನ ಸಾಮಾನ್ಯರಿಗೆ ನೀವು ಈಗ ಹೇಳುತ್ತಿರುವ ವಿಷಯ ಗೊತ್ತಾಗಬೇಕಿತ್ತು. ಈ ಜನಗಣತಿಯು ಏಕೆ? ಅದರಲ್ಲಿ ನಾವು ಏನು ಮಾಹಿತಿಗಳು ಕೊಡಬೇಕು ? ಏನು ಕೊಟ್ಟರೆ ಏನು ಪರಿಣಾಮ ಆಗುತ್ತದೆ? ಇದಾವುದೂ ತಿಳುವಳಿಕೆ ಇಲ್ಲದೆ ನಾವು “ಹೆಮ್ಮೆಯ ಹಿಂದು” ಎಂದು ಬರೆಸಿದೆವು. ಆಗ ನಾವು ನಮ್ಮ strength ತೋರಿಸಬೇಕು ಎಂದು ತಿಳಿದಿದ್ದೇವೆ. ಗೊತ್ತಿತ್ತು ನಮಗೆ ರಿಲಿಜನ್ ಇಲ್ಲ ಅಂತ. ಆದರೂ ಪರಿಣಾಮದ ತಿಳುವಳಿಕೆ ಇಲ್ಲದೇ ಹಾಗೆ ಬರೆಯಿಸಿದೆವು. ಹೇಳಿ ಈಗ ಏನು ಮಾಡಬಹುದು? ಸರ್ಕಾರ ಬುದ್ದಿ ಇಲ್ಲದೇ ಇದೆಲ್ಲ ಮಾಡುತ್ತಿದೆ ಎಂದುಕೊಂಡೆವು. ಹಾಗಲ್ಲ. ಈಗ ಇರುವ ಅಲ್ಪಸಂಖ್ಯಾತರು ಅವರು ಅಲ್ಪಸಂಖ್ಯಾತರು ಆಗಿ ಮುಂದುವರಿಯಬೇಕಿದ್ದರೆ ಈಗಿನ ಹಿಂದು ಬಹುಸಂಖ್ಯಾತ ರಾಗಬೇಕು. ಸರ್ಕಾರದ ಜೊತೆಯಲ್ಲಿ ಸೇರಿ, ಅಥವಾ ರಾಜಕಾರಣಿಗಳು ತಮ್ಮ “ಒಟಬ್ಯಾಂಕ ” ಗಾಗಿ ಹೀಗೆ ಮಾಡಿಸಿರಬೇಕು.ಈ ರಾಜಕೀಯದ ಹೊಲಸು ಜನ ಸಾಮಾನ್ಯರಿಗೆ ಗೊತ್ತಾಗಬೇಕಿತ್ತು.ನೀವು ಹಿಂದುಧರ್ಮ ಗುರುಗಳ ಮೂಲಕ ಎಲ್ಲರಿಗೆ ತಲಪುವ ಹಾಗೆ ಮಾಡಬೇಕಿತ್ತು. ಒಂದು ಒಳ್ಳೆಯ ಕೆಲಸಕ್ಕೆ ಗುರುಗಳನ್ನು ಉಪಯೋಗಿಸಬೇಕಿತ್ತು. ಈಗಲೂ ಸರಿಪಡಿಸುವ ಬಗ್ಯೋಗೆಚಿಸಿ

    ಉತ್ತರ
    • sudarshanarao's avatar
      ಮೇ 21 2015

      ನಿಜ

      ಉತ್ತರ
    • ಮಲ್ಲಪ್ಪ ಹಾಗೂ ವಲವಿಯವರೇ,
      ಇದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಬದಲಾವಣೆ.ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಶುರುವಾದರೆ ಅದು ಸರ್ಕಾರಗಳ ಕಿವಿಗೂ ಕೇಳಬಹುದು.

      ಉತ್ತರ
      • valavi's avatar
        valavi
        ಮೇ 25 2015

        ರಾಕೆಶ್ ಅವರೆ ನಾವೂ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು. ಕೇಂದ್ರವೇ ಇರಲಿ ರಾಜ್ಯವೇ ಇರಲಿ ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟೇ ಕೊಡುತ್ತದೆ. ಚಕ್ರವರ್ತಿ ಯಂಥವರು ಭಾರತೀಯರ ಅಸ್ಮಿತೆಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿರುವಂತೆಯೇ ಈ ಕೆಲಸವನ್ನು ಸಹ ಕೆಲ ಯುವ ಸಂಘಟನೆಗಳು ವಹಿಸಿಕೊಳ್ಳಲೇ ಬೇಕಾಗಿದೆ. ಮತ್ತು ಹಿರಿಯ ತಲೆಗಳಿಗೆ ತಿಳಿಸಿ ಹೇಳಲೇ ಬೇಕಾಗಿದೆ. ಕೆಲವು ಇಂಗ್ಲೀಷ ಸೈಟುಗಳಲ್ಲೂ ತಮ್ಮ ವಿಚಾರಗಳನ್ನು ತಾವು ವ್ಯಕ್ತಪಡಿಸಿ. ಆಗ ಭಾರತದ ಅನೇಕರಿಗೆ ಈ ವಿಷಯ ತಲುಪುತ್ತದೆ. ಏನಂತೀರಿ??

        ಉತ್ತರ
        • ಖಂಡಿತ ವಲವಿಯವರೇ.ಈ ರೀತಿಯ ಜಾಗೃತಿಗಾಗಿಯೇ ನಿಲುಮೆ ಫೌಂಡೇಶನ್ ಮತ್ತು ಪ್ರಕಾಶನ ಶುರು ಮಾಡಿದ್ದೇವೆ.

          ಉತ್ತರ
  3. UNIVERSAL's avatar
    hemapathy
    ಮೇ 21 2015

    ಜಾತಿ, ಧರ್ಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದರ ಬದಲಾಗಿ ನಾವು ವಿಶ್ವಮಾನವತಾವಾದಿಗಳಾಗಿರುವುದೇ ಸರಿ.

    ಉತ್ತರ
  4. ಈಶ್ವರ ಭಟ್ ಕೆ's avatar
    ಈಶ್ವರ ಭಟ್ ಕೆ
    ಮೇ 21 2015

    ಬಹಳ ಒಳ್ಳೆಯ ಬರಹ.

    ಉತ್ತರ
  5. valavi's avatar
    valavi
    ಮೇ 22 2015

    ಮಲ್ಲಪ್ಪ ಅವರ ಕಮೆಂಟಿಗೆ ನನ್ನ ಸಹಮತವೂ ಇದೆ. ಎಲ್ಲರೂ ತಾವು ಹಿಂದು ಧರ್ಮಿಗಳೆಂಬುದನ್ನು ತಿರಸ್ಕರಿಸಿದರೆ ಯುರೋಪಿಗಳ ಈ ಪೊಳ್ಲು ಹೇಳಿಕೆಗಳು, ಮೇಲು ಕೀಳು ಭಾವಗಳೂ ಮತ್ತು ಅಲ್ಪಸಂಖ್ಯಾತ ಓಲೈಕೆ ರಾಜಕಾರಣ ಇವೆಲ್ಲ ನಿಲ್ಲಬಹುದು. ಈ ನಿಟ್ತಿನಲ್ಲಿ ಎಲ್ಲಾ ಯುವಕರು ಕೆಲಸ ಮಾಡಬೇಕಿದೆ. ಮಠಾಧಿಪತಿಗಳೂ ತಮ್ಮ ಶಿಷ್ಯೋತ್ತಮರಿಗೆ ಹಿಂದೂ ಧರ್ಮದ ಪೊಳ್ಳುವಾದವನ್ನು ನಿಲ್ಲಿಸುವಂತೆ ಹೇಳಬೇಕಾಗಿದೆ. ಆಗಲಾದರು ಭಾರತದಲ್ಲಿ ಐಕ್ಯತೆ ಬರುವದೇನೋ ಕಾದು ನೋಡಬೇಕಿದೆ. ಹಾಗೇನೇ ಬ್ರಾಹ್ಮಣ ಶೋಷಣಾವಾದವೂ ಕೊನೆಯಾಗುತ್ತದೆ.

    ಉತ್ತರ
  6. manju's avatar
    manju
    ಆಕ್ಟೋ 28 2015

    ಒಳ್ಳೆಯ ಬರಹ . ನಮ್ಮ ದೇಶದ ಜಾತಿ ರಾಜಕೀಯ ಇರುವವರೆಗೆ ಅಸಾಧ್ಯದ ಮಾತು.

    ಉತ್ತರ
  7. Guruprasad Shastri's avatar
    Guruprasad Shastri
    ಆಕ್ಟೋ 8 2016

    ಬಹಳ ಉತ್ತಮವಾದ ವಿಷಯ.. ಆದರೆ ವಿಷಯವನ್ನು ನಾವು ವಾಸ್ತವದ ಜನರೆದುರು ಹೇಗೆ ಮುಂದಿಡುತ್ತೇವೆಂಬುದು ಮುಖ್ಯ ವಿಷಯ ಅನ್ನಿಸುತ್ತದೆ.

    ಉತ್ತರ

Leave a reply to ರಾಕೇಶ್ ಶೆಟ್ಟಿ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments