ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 1, 2012

3

ಇಂದಿನ ರಾಜಕೀಯ ಮತ್ತು ಮಾಧ್ಯಮಗಳ ನಡುವೆ ಕಂಡುಬರುವಂತಹ ಸಾಮ್ಯತೆಗಳು

‍ನಿಲುಮೆ ಮೂಲಕ

-ರಾಜುವಿನಯ್ ದಾವಣಗೆರೆ

ಇತ್ತೀಚಿಗೆ ನಾವು ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ.ಇಂದಿನ ರಾಜಕೀಯ ವ್ಯವಸ್ಥೆಗೂ,  ಇಂದಿನ  ಮಾಧ್ಯಮ (ದೃಶ್ಯ)ಗಳಿಗೂ ವ್ಯತ್ಯಾಸಗಳೇ ಕಾಣುತ್ತಿಲ್ಲ.

ರಾಜಕೀಯದಲ್ಲಿ  ರಾಜಕಾರಣಿಗಳು ಪಕ್ಷದಿಂದ ಪಕ್ಷಗಳಿಗೆ ಹಾರುತ್ತಾ, ವಲಸೆ ಹೋಗುವುದು ಸಾಮಾನ್ಯವಾಗಿದೆ.
ದೃಶ್ಯ ಮಾಧ್ಯಮಗಳಲ್ಲೂ ಇದನ್ನು ಕಾಣುತ್ತಿದ್ದೇವೆ.

———–*ಪಕ್ಷಾಂತರ*———–

ಇಂದು   ಒಂದು  ಟಿವಿಯಲ್ಲಿ ಇದ್ದವರು ನಾಳೆ ಬೇರೆ ವಾಹಿನಿಯಲ್ಲಿರುತ್ತಾರೆ. ಸುವರ್ಣದಲ್ಲಿದ್ದವರು ಇನ್ಯಾವುದೋ ವಾಹಿನಿಗೆ ಜಿಗಿದಿರುತ್ತಾರೆ. ಇದು ನಿರಂತರವಾಗಿ ಆಗುತ್ತಿದೆ.
ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗೆ ತಮ್ಮ ರಾಜಕೀಯ ಭವಿಷ್ಯಕ್ಕೆ ಜಿಗಿದಾಟಗಳು ಪರದಾಟಗಳು ಮಾಡುತ್ತಿದ್ದರೆ, ಅವರುಗಳ ತಪ್ಪುಗಳನ್ನು ಜನರಿಗೆ ತೋರಿಸುತ್ತಿದ್ದೇವೆ ಎಂಬ ಭ್ರಾಂತಿಯಲ್ಲಿರುವ ನಮ್ಮ ಮಾಧ್ಯಮಗಳು ತಮ್ಮ ನೆಲೆಗಳಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ.  ರಾಜಕಾರಣಿಗಳ ಪಕ್ಷಾಂತರಗಳ ಬಗ್ಗೆ ಗಂಟೆಗಟ್ಟಲೇ ಟಿ.ವಿ ಸ್ಟುಡಿಯೋದಲ್ಲಿ ಮಾತಾನಾಡುವ ಬಹುತೇಕ ಪತ್ರಕರ್ತ ಮಿತ್ರರು ಅವರುಗಳು ತಮ್ಮ ಮೂಲ ವಾಹಿನಿಗಳಿಂದ ಜಿಗಿದು ಮತ್ತೊಂದು ವಾಹಿನಿಯಲ್ಲಿ ಕುಳಿತಿರುತ್ತಾರೆ.

——-*ಮೂಲ ವಲಸಿಗರ ತಾರತಮ್ಯ*———

ರಾಜಕಾರಣದಲ್ಲಿ ಮೂಲ – ವಲಸಿಗರು ಎಂಬ ಕಾರ್ಯಕರ್ತರುಗಳು ಎನ್ನುವ ರಾಜಕಾರಣಿಗಳ ಜಗಳಗಳನ್ನು ನಾವು ನೋಡುತ್ತಿರುತ್ತೇವೆ. ಹಾಗೆಯೇ, ನಮ್ಮ ಮಾಧ್ಯಮಗಳಲ್ಲಿ ಯಾವುದೋ ವಾಹಿನಿಯಲ್ಲಿದ್ದವರು ಏಕಾಏಕಿ ಮತ್ತೊಂದು ಮಾಧ್ಯಮಕ್ಕೆ ಬಂದು  ವಾಹಿನಿ  ಆರಂಭದಿಂದಲೂ  ಕಾರ್ಯ ನಿರ್ವಹಿಸುತ್ತಿರುವ  ಪತ್ರಕರ್ತರನ್ನು ಮೂಲೆ ಗುಂಪು ಮಾಡಿ, ಅವರ ಮೇಲೆ ಸವಾರಿ ಮಾಡುತ್ತಾ, ಅವರಿಗೆ ಉಸಿರು ಗಟ್ಟಿಸುವ ವಾತಾವರಣ ಸೃಷ್ಠಿ ಮಾಡಿ, ಮೂಲ ಪತ್ರಕರ್ತರು ವಾಹಿನಿಯಿಂದಲೇ ನಿರ್ಗಮಿಸುತ್ತಿರುವ ಘಟನೆಗಳು ಬಹಳಷ್ಟು ಇವೆ.ಬೇರೆಯವರ, ರಾಜಕಾರಣಿಗಳ ನೈತಿಕತೆಯನ್ನು ಪ್ರಶ್ನಿಸಲು ಹೊರಟಿರುವ ನಮ್ಮ ಮಾಧ್ಯಮ ಮಿತ್ರರಿಗೆ ನೈತಿಕ ಶಕ್ತಿ , ಮೌಲ್ಯಗಳ ಬಗ್ಗೆ ಮನವರಿಕೆ ಯಾಗಿದೆಯೇ?
ಕೆಲವು ವಲಸಿಗ ರಾಜಕಾರಣಿಗಳಿಂದ ಅವರು ಗುಂಪುಗಳನ್ನು ಕರೆತಂದು ಹೇಗೆ  ಮೂಲ ಪಕ್ಷದ ಕಾರ್ಯಕರ್ತರು ಮಾನಸಿಕ ವಾಗಿ ಹಿಂಸೆ ಅನುಭವಿಸಿ, ಇಕ್ಕಟ್ಟಿನ ಸ್ಥಿತಿಯಲ್ಲಿ ನಿರ್ಮಾಣ ಮಾಡಿರುತ್ತಾರೋ ಹಾಗೆಯೇ ಇಂದು ಮಾಧ್ಯಮ ಕ್ಷೇತ್ರದಲ್ಲೂ ಆಗುತ್ತಿದೆ.
ಎಲ್ಲೋ ಇದ್ದವರು ಒಂದು ಮಾಧ್ಯಮಕ್ಕೆ ಬಂದು ತಮ್ಮದೇ ಆದ ಗುಂಪನ್ನು ಕರೆತಂದು ಅವರನ್ನು ಪ್ರತಿಷ್ಟಾಪಿಸುವ  ಉದ್ದೇಶದಿಂದ ಮೂಲ ಪತ್ರಕರ್ತರಿಗೆ ಮಾನಸಿಕ ಕಿರಿಕಿರಿಯನ್ನುಂಟು ಮಾಡುತ್ತಾ, ಅವರುಗಳನ್ನು ಶಾಶ್ವತವಾಗಿ ಮೂಲೆ ಗುಂಪು ಮಾಡುವ ಪ್ರವೃತ್ತಿಗಳು ಹೆಚ್ಚಾಗುತ್ತಿವೆ.
——–*ಪ್ರಚಾರ ಕಾರ್ಯ ವೈಖರಿ ಮತ್ತು ಅಧಿಕಾರ ದಾಹ*——–
ರಾಜಕಾರಣಿಗಳ ಹಾಗೂ ಮಾಧ್ಯಮಗಳ ನಡುವೆ ಕಂಡು ಬರುವಂತಹ  ವ್ಯತ್ಯಾಸಗಳೆಂದರೆ :
ಸ್ವಾರ್ಥ, ಅಧಿಕಾರ ದಾಹ, ಸಂಪತ್ತು ಗಳಿಕೆ ಇವು ಇಷ್ಟೇ ಆಗಿ ಹೋಗಿವೆ.
ದೇಶದ ಬಗ್ಗೆ, ರಾಜ್ಯದ ಬಗ್ಗೆ ಕಾಳಜಿಯಂತೂ ಕಾಣುತ್ತಿಲ್ಲ.
ಚುನಾವಣೆ ಸಮಯದಲ್ಲಿ ನಮ್ಮ ರಾಜಕಾರಣಿಗಳು ಭರವಸೆಗಳ ಸುರಿಮಳೆಗಳನ್ನು ಸುರಿಸುತ್ತಾರೆ. ಆಶ್ವಾಸನೆಗಳನ್ನು ಕೊಡುತ್ತಾರೆ. ಜನರನ್ನು ತಮ್ಮತ್ತ ಸೆಳೆಯಲು ಏನೆಲ್ಲಾ ಸರ್ಕಸ್ಸುಗಳನ್ನು ಮಾಡಬೇಕೋ ಅವನ್ನೆಲ್ಲಾ ಮಾಡುತ್ತಾರೆ.

ಹಾಗೆಯೇ ನಮ್ಮ ಮಾಧ್ಯಮಗಳು ಸಹ, ತಮ್ಮ ವಾಹಿನಿಗೆ ಹೆಸರು ಬರಬೇಕು ಅನ್ನೋ ಉದ್ದೇಶದಿಂದ, ಪ್ರಚಾರಕ್ಕೆ ಏನೆಲ್ಲಾ ಬೇಕೋ ಅವನ್ನೆಲ್ಲಾ ಮಾಡುತ್ತಾರೆ. “ಭ್ರಷ್ಟಾಚಾರದ ವಿರುದ್ದ ಅಣ್ಣಾ ಹಜಾರೆಯವರು ಮೊದಲ ಬಾರಿಗೆ ಕರೆನೀಡಿದಾಗ  ನಮ್ಮ ಕನ್ನಡ ಮಾಧ್ಯಮಗಳು ಪೈಪೋಟಿಗೆ ಬಿದ್ದಂತೆ “ಭ್ರಷ್ಟಾಚಾರ ಅಭಿಯಾನಗಳು” ಮಾಡಿದವು. ಬೀದಿ ಬೀದಿಗಳಲ್ಲಿ ತಮ್ಮ ವಾಹನಗಳನ್ನು ಸಿಂಗರಿಸಿಕೊಂಡು ಸುತ್ತಿದ್ದೇ ಸುತ್ತಿದ್ದೆ. ” ದಿನ ಕಳೆದಂತೆ ಎಲ್ಲವೂ ಮಾಯ!!

—————*ಜ್ಯೋತಿಷ್ಯ *————
ರಾಜಕಾರಣಿಗಳು ಪ್ರತಿಯೊಂದಕ್ಕೂ ಜ್ಯೋತಿಷಿಗಳ ಮೊರೆ ಹೋಗುವುದು ಫ್ಯಾಷನ್ ಆಗಿಬಿಟ್ಟಿದೆ. ಅಧಿಕಾರ ಪಡೆಯಲು, ಕುರ್ಚಿಯಲ್ಲಿ ಕೂರಲೂ, ರಾಜೀನಾಮೆ ಕೊಡಲು, ಯಾಗಗಳನ್ನು ಮಾಡಲು ಸಹ, ಜೊತೆ ವಾಸ್ತುವಿನ ಮೊರೆ ಹೋಗಲು  ತರತರನಾದ ಜ್ಯೋತಿಷ್ಯಗಳನ್ನು  ಹುಡುಕಿಕೊಂಡು ಅಡ್ಡಾಡುತ್ತಿದ್ದಾರೆ.
ನಮ್ಮ ಮಾಧ್ಯಮಗಳು ಪ್ರತಿನಿತ್ಯ ಎಲ್ಲೆಲ್ಲೋ ಇದ್ದ ಜ್ಯೋತಿಷಿಗಳನ್ನು ಹುಡುಕಿ ಕರೆತಂದು ಒಂದೊಂದು ವಾಹಿನಿಗಳು ಒಬ್ಬೊಬ್ಬರಿಂದ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಿವೆ. (ಸಂಖ್ಯಾಶಾಸ್ಟ್ರ, ವಾಸ್ತು ಶಾಸ್ತ್ರ, ವಿವಿಧ ಶಾಸ್ತ್ರಗಳ ಪರಿಚಯದೊಂದಿಗೆ, ಅವರುಗಳ ಫೋನ್ ನಂಬರುಗಳ ಜೊತೆಗೆ ಅವರುಗಳ ವಿಳಾಸಗಳನ್ನು ಸಹ ಜನರಿಗೆ ಕೊಡುತ್ತಾ ಮೌಢ್ಯತೆಯನ್ನು ತೊಲಗಿಸಲು ಪ್ರಮುಖ ಪಾತ್ರ ವಹಿಸಿಬೇಕಾದವರೇ,  ಜ್ಯೋತಿಷ್ಯದ ಮೇಲೆ ನಂಬಿಕೆ ಹುಟ್ಟಿಸಿ, ಭೀತಿ ತರುವ ಪ್ರಯತ್ನ ಮಾಡುತ್ತಿದ್ದಾರೆ.
——-*ಪಕ್ಷ ನಿಷ್ಠೆ, ಮಾಧ್ಯಮ ನಿಷ್ಠೆ*———–
ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ತಮ್ಮ ಪಕ್ಷದವರು ಏನೇ ತಪ್ಪು ಮಾಡಿದರೂ ಅದನ್ನು ಸಮರ್ಥಿಸಿಕೊಳ್ಳುವ ಕೆಲಸಗಳನ್ನು  ರಾಜಕಾರಣಿಗಳು ಮಾಡುತ್ತಿರುತ್ತಾರೆ. ಅದರಂತೆ ನಮ್ಮ ಮಾಧ್ಯಮಗಳು ಒಂದೊಂದು ಮಾಧ್ಯಮವು ಒಂದೊಂದು ರಾಜಕೀಯ ಪಕ್ಷಗಳ ಪರವಾಗಿ ಅವುಗಳ ಮುಖವಾಣಿಗಳಂತೆ ಕೆಲಸ ಮಾಡುತ್ತಿರುವುದು, ನಂಬಿಕೆ, ಮೌಲ್ಯಾಧಾರಿತ ವಿಷಯಗಳನ್ನು ವಿಶ್ವಾಸಕ್ಕೆ ಅರ್ಹವಲ್ಲದ ಸುದ್ಧಿಗಳನ್ನು ನೀಡಲು ವಿಫಲವಾಗಿ ತಮ್ಮ ಕರ್ತವ್ಯವನ್ನು ಮರೆಯುತ್ತಿದ್ದಾರೆ.
ತಾವು ಏನು ಮಾಡುತ್ತಿದ್ದೇವೆ ಅನ್ನೋದರ ಬಗ್ಗೆ ಮರೆತೆ ಹೋಗಿರುತ್ತವೆ. ಅಚ್ಚಕನ್ನಡಿಗರೇ ತುಂಬಿಕೊಂಡಿರುವ (ಮಾಲೀಕ ಪರಭಾಷಿಕರೇ) ವಾಹಿನಿಯಲ್ಲಿ  ಕನ್ನಡ ಅಕ್ಷರಗಳ ಕಗ್ಗೊಲೆಯಾಗುತ್ತಿದ್ದರು. ಅದರ ಬಗ್ಗೆ ಹೇಳಿದರೂ ತಲೆ ಕೆಡಿಸಿಕೊಳ್ಳದ ವಾಹಿನಿಗಳು ಏನೇನೋ ಮಾಡಲು ಹೊರಟಿವೆ. ಬೆಳಗಿನ ಸಮಯದಲ್ಲಿ ಜ್ಞಾನಾರ್ಜನೆಗೆ ಕೇಳುವ 5 ಪ್ರಶ್ನೆಗಳನ್ನು ಕೇಳಿದ್ದೇ ಕೇಳಿ ಕೊಂಡು ಬೇರೆ ಪ್ರಶ್ನೆಗಳಿಗೆ ಬರ ಬಂದಿದೆ ಎಂಬಂತೆ ಮಾಡುತ್ತಿದ್ದಾರೆ.
ಜನಸಾಮಾನ್ಯರು ಒಮದು ತಪ್ಪು ಮಾಡಿದರೆ. ಬೆಳಗಿನಿಂದ ಸಂಜೆ ವರೆವಿಗೂ ಆ ವಿಚಾರಗಳನ್ನು ತೋರಿಸಿ, ನೇರ ಪ್ರಸಾರದಲ್ಲಿ ಅದಕ್ಕೆ ಸಂಬಂಧಪಟ್ಟವರನ್ನು ಹಿಡಿದುತಂದು ಅವರನ್ನು ಹಣ್ಣುಗಾಯಿ ನೀರು ಗಾಯಿ ಮಾಡುವ ನಮ್ಮ ಮಾಧ್ಯಮಗಳು ಮಾಜಿ ಮುಖ್ಯಮಂತ್ರಿಯವರ ಮದುವೆಯ ವಿಚಾರ ಕೋರ್ಟ್ನ ತನಕ ಬಂದಿದ್ದರೂ ಸಹ  ಇದುವರೆವಿಗೂ ಸಂಬಂಧಪಟ್ಟವರನ್ನು ಕರೆತಂದು ಅದರ ಬಗ್ಗೆ ಜನರಿಗೆ ತೋರಿಸುವ ಕೆಲಸ ಮಾಡಿದ್ದಾರಾ?

ಇಲ್ಲ ಯಾಕೆ ಹೀಗೆ ? ಜನಸಾಮಾನ್ಯರಿಗೊಂದು ನ್ಯಾಯ, ಬೇರೆಯವರಿಗೆ ಒಂದು ನ್ಯಾಯವಾ?

ಮತ್ತೊಂದು ವಾಹಿನಿ ಯಂತೂ ಬೆಳಗಿನ ಸಮಯದಲ್ಲಿ “ಬಿಡದಿಯ ನಿತ್ಯಾನಂದಸ್ವಾಮಿಯ ಪ್ರವಚನಗಳನ್ನು” ಪ್ರದರ್ಶಿಸುತ್ತಿದ್ದಾರೆ. ಎಲ್ಲಿಗೆ ಬಂದು ನಿಂತಿದೆ. ನಮ್ಮ ಮಾಧ್ಯಮಗಳು. 

ರಾಜಕಾರಣಿಗಳಿಗೆ ನಮ್ಮ ಕರ್ನಾಟಕದಲ್ಲಿ ಕನ್ನಡಿಗರಿಗೆ ಇರಲು ನೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣ  ಉಂಟಾಗುತ್ತಿದ್ದರೂ ಸಹ ಪರಭಾಷಿಕರ ವಲಸೆಯನ್ನು ತಪ್ಪಿಸುತ್ತಿಲ್ಲ. ಕಾರಣ  “ಓಟ್ ಬ್ಯಾಂಕ್ ” ಯಾವನೇ ಭಾಷೆಯವನಾದರೂ ತನ್ನ ಮನೆ ಮುರುಕಲು ಮನೆಯಾಗಿದ್ದರೂ ಪರಭಾಷಿಕರಿಗೆ ಐಶಾರಾಮಿ ಜೀವನ ನಡೆಸಲು ಅವಕಾಶಗಳು ಮಾಡಿಕೊಡುತ್ತಿವೆ.

ಹಾಗೆಯೇ ನಮ್ಮ ವಾಹಿನಿಗಳು ಅಷ್ಟೇ. ಬೇರೆ ಭಾಷೆಯ ಚಲನ ಚಿತ್ರಗಳನ್ನು ನೇರವಾಗಿ ಗಂಟೆಗಟ್ಟಲೇ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತವೆ. (ನಮ್ಮ ಪುಣ್ಯಕ್ಕೆ ಅವರವರ ಭಾಷೆಗಳಲ್ಲೇ ವಿವರಣೆ ನೀಡುತ್ತಿಲ್ಲ) ಬೇರೆ ಯಾವುದೇ ರಾಜ್ಯಗಳಲ್ಲಿ ಒಂದೇ ಒಂದು ಕನ್ನಡದ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆಯಾ ? ಉದಾಹರಣೆಗಳಿಲ್ಲದಿರುವಾಗ ನಮ್ಮವರಿಗ್ಯಾಕೆ ಪರಭಾಷಿಕರ ಬಗ್ಗೆ ವ್ಯಾಮೋಹ?

ಇಲ್ಲಿಗೆ ಬಂದು ನಿಂತಿದೆ ನಮ್ಮ ವ್ಯವಸ್ಥೆ.. ನಮ್ಮ ಈ ವ್ಯವಸ್ಥೆಯನ್ನು  ಬದಲಿಸಲು ಸಾಧ್ಯವೇ? 
ಖಂಡಿತಾ ಸಾಧ್ಯವಿಲ್ಲ. ಬೇಲಿಯೇ ಎದ್ದು ಹೊಲ ಮೇಯುತ್ತಿದ್ದರೆ???????????

* * * * * * * *

ಚಿತ್ರಕೃಪೆ : ರಾಜು ವಿನಯ್ ದಾವಣಗೆರೆ

3 ಟಿಪ್ಪಣಿಗಳು Post a comment
  1. Ananda Prasad's avatar
    Ananda Prasad
    ಫೆಬ್ರ 1 2012

    ಸ್ವಾಮಿ ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ಹೀಗೆ ಹೇಳಿದ್ದಾರೆ – “ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರ ಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಗಳು ತೀಕ್ಷ್ಣ ದೃಷ್ಟಿಯಿಂದ ನೋಡಿದರೇನಂತೆ? ತಾರೆಯೊಂದು ನನ್ನ ಜೀವನದ ಮೇಲೆ ಪ್ರಭಾವವನ್ನು ಬೀರಿ ನನ್ನ ಜೀವನದಲ್ಲಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲ ನೆಚ್ಚುವುದು ದೌರ್ಬಲ್ಯದ ಚಿನ್ಹೆ.” (ಮೈಸೂರಿನ ರಾಮಕೃಷ್ಣ ಆಶ್ರಮ ಪ್ರಕಟಿಸಿರುವ ಸ್ವಾಮಿ ವಿವೇಕಾನಂದ ಕೃತಿ ಶ್ರೇಣಿಯ ಸಂಪುಟದಿಂದ ಅಧರಿಸಿದುದು). ಸ್ವಾಮಿ ವಿವೇಕಾನಂದರ ಮಾತಿಗೆ ನಮ್ಮ ಟಿವಿ ವಾಹಿನಿಗಳು ಎಷ್ಟು ಗೌರವ ಕೊಡುತ್ತವೆ ಎಂಬುದು ದಿನಾ ಬೆಳಿಗ್ಗೆ ಟಿವಿ ವಾಹಿನಿಗಳಲ್ಲಿ ಬರುವ ಜ್ಯೋತಿಷ್ಯ ಕಾರ್ಯಕ್ರಮ ನೋಡಿದರೆ ಗೊತ್ತಾಗುತ್ತದೆ. ಮೂಢ ನಂಬಿಕೆಗಳನ್ನು ಬಿತ್ತಿ ಬೆಳೆಸುವುದು ಟಿವಿ ವಾಹಿನಿಗಳ ಪ್ರಧಾನ ಕಾರ್ಯಕ್ರಮವಾಗಿದೆ. ಇಂಥ ಟಿವಿ ವಾಹಿನಿಗಳು ಇರುವವರೆಗೆ ಭಾರತಕ್ಕೆ ಮೂಢ ನಂಬಿಕೆಗಳಿಂದ ಮುಕ್ತಿ ಇರುವಂತೆ ಕಾಣುವುದಿಲ್ಲ.

    ಉತ್ತರ
  2. sourav daada's avatar
    sourav daada
    ಫೆಬ್ರ 1 2012

    ಮತ್ತೊಂದು ವಾಹಿನಿ ಯಂತೂ ಬೆಳಗಿನ ಸಮಯದಲ್ಲಿ “ಬಿಡದಿಯ ನಿತ್ಯಾನಂದಸ್ವಾಮಿಯ ಪ್ರವಚನಗಳನ್ನು” ಪ್ರದರ್ಶಿಸುತ್ತಿದ್ದಾರೆ. ಎಲ್ಲಿಗೆ ಬಂದು ನಿಂತಿದೆ. ನಮ್ಮ ಮಾಧ್ಯಮಗಳು.

    funniest part of this article, sad t hear such acts by media

    ಉತ್ತರ
  3. Masood Doddebagilu's avatar
    Masood Doddebagilu
    ಫೆಬ್ರ 1 2012

    ರಾಜು ವಿನಯ್ ದಾವಣಗೆರೆಯವ್ರೇ, ನಿಮ್ಮ ಲೆಖನದ ಸಬ್ಜೆಕ್ಟ್ ಒಳ್ಳೇದೇಯಾದ್ರೂ ಪ್ರೆಸೆಂಟೇಶನ್ ಮಾತ್ರ ಬೈಯಾಸ್ಡ್ ಆಗಿದೆ. ಇಡೀ ಲೆಖನದುದ್ದಕ್ಕೂ ಸುವರ್ಣ ವಾಹಿನಿ ಬಗ್ಗೆಯೇ ಜಾಸ್ತಿ ಬರೆದು ನಿಮ್ಮ ಸಿಟ್ಟನ್ನು ಕಾರಿಕೊಂಡಿದ್ದೀರಿ. ಅದೊಂದೇ ವಾಹಿನಿ ಮೇಲೆ ನಿಮಗಿಂಥ ಸಿಟ್ಟು ಯಾಕೆಂದು ನಾನು ಕೇಳೊಲ್ಲ. ನಾನೊಬ್ಬ ಪ್ರಾಮಾಣಿಕ ಪತ್ರಕರ್ತ ಅಂತ ಎದೆ ಮುಟ್ಟಿ ಯಾವ ಪತ್ರಕರ್ತನೂ ಹೇಳಿಕೊಳ್ಳಲಾರದಂತೆ ನಾವೇ ರೂಪಿಸಿದ ವ್ಯವಸ್ಥೆ ಮಾಡಿಟ್ಟಿದೆ. ಪತ್ರಕರ್ತನೇ ಯಾಕೆ, ಇವತ್ತು ಯಾವೊಬ್ಬ ನಾಗರಿಕನೂ ತಾನು ಪ್ರಾಮಾಣಿಕ ಅಂತ ಹೇಳಿಕೊಳ್ಳಲಾರ. ಯಾಕೆಂದ್ರೆ ಭ್ರಷ್ಟಾಚಾರ ಪರೋಕ್ಷವಾಗಿಯೋ ಅಪರೋಕ್ಷವಾಗಿಯೋ ಎಲ್ಲರಲ್ಲೂ ನೈತಿಕತೆ ಮರೆಸಿಬಿಟ್ಟಿದೆ. ಈ ವಿಚಾರ ಈಗ ಬೇಡ. ಇನ್ನು ನೀವು ಒಂದೊಂದು ಸಬ್ ಹೆಡ್ಲೈನ್ ನಡಿ ಹೇಳಿರೋ ವಿಚಾರಗಳನ್ನು ನೋಡೋಣ. ನೀವು ಮಾಧ್ಯಮ ಅಂತ ಹೇಳಿ ನಿಮ್ಮ ವಿಚಾರಗಳನ್ನು ಟಿವಿ ಮಾಧ್ಯಮಗಳಿಗಷ್ಟೇ ಮೀಸಲಾಗಿರಿಸಿ ಹೇಳಿರೋದು ನಿಮ್ಮ ಮೊದಲ ಮೂರ್ಖತನ. ಮಾಧ್ಯಮ ಪ್ರತಿನಿಧಿಗಳ ಜಿಗಿತ ಕೇವಲ ಸುವರ್ಣದಲ್ಲಿರುವವರಿಗಷ್ಟೇ ಅನ್ವಯಿಸುವುದಿಲ್ಲ ಅಲ್ವೇ..? ನಿಮ್ಮಂಥವರಿಗೂ ಅನ್ವಯಿಸುತ್ತದೆ. ನೀವು ಯಾವ ಮಾಧ್ಯಮದಿಂದ ಪತ್ರಕರ್ತ ಹುದ್ದೆ ಶುರುಮಾಡಿದ್ರೋ ನನಗೆ ಗೊತ್ತಿಲ್ಲ. ಆದ್ರೆ ಈಗ್ಲೂ ಅದೇ ಮಾಧ್ಯಮದಲ್ಲಿದ್ದೀರಿ ಅಂತ ಈಗ ಖಂಡಿತ ನಂಬಿಲ್ಲ ನಾನು. ಹಾಗಿದ್ರೆ ಈಗಿನ ಮಾಧ್ಯಮ ಪ್ರವೇಶಕ್ಕೆ ಏನು ಹೆಸರು?

    ಒಂದು ಮಾಧ್ಯಮಕ್ಕೆ ಯಾರೋ ಒಬ್ಬ ಮುಖ್ಯಸ್ಥ ವಲಸಿಗರನ್ನು ಎಳೆತಂದಾಗ ಮೂಲ ಸಿಬ್ಬಂದಿಗೆ ಆಗುವ ತಾರತಮ್ಯದ ಬಗ್ಗೆ ನಿಮ್ಮ ಕಾಳಜಿ ಮೆಚ್ಚುವಂಥದ್ದೇ. ಈ ವಿಚಾರದಲ್ಲಿ ನನ್ನ ಸಹಮತವಿದೆ. ಆದ್ರೆ ಇದು ನೀವು ಸಮಯ ಟಿವಿಯನ್ನು ಉದಾಹರಿಸಿ ಹೇಳುತ್ತಿದ್ದೀರಿ ಅಲ್ವೇ? ಸಮಯವೊಂದೇ ಅಲ್ಲ, ಎಲ್ಲ ಪತ್ರಿಕೆಗಳ, ಎಲ್ಲ ಟಿವಿ ವಾಹಿನಿಗಳ ಮೂಲ ಸಿಬ್ಬಂದಿಯೂ ಇಂಥ ದುರ್ದೃಷ್ಟಕರ ಸಮಯ ಎದುರಿಸಲೇಬೇಕು.

    ತಮ್ಮ ತಮ್ಮ ವಾಹಿನಿಗಳಿಗೆ ಹೆಸರು ಬರಲು, ಬೀದಿಬೀದಿಗಳಲ್ಲಿ ಸಿಂಗರಿಸಿದ ವಾಹನಗಳನ್ನು ನಿಲ್ಲಿಸಿಕೊಂಡು ಅಣ್ಣಾ ಹಜಾರೆ ಅಭಿಯಾನದಲ್ಲಿ ತಾವು ಪ್ರಚಾರ ಪಡ್ಕೊಂಡ್ವು ಅನ್ನೋದು ನಿಮ್ಮ ಮೂರನೇ ಕಾಳಜಿ ಮುಖವಾಡ ಧರಿಸಿದ ಆರೋಪ. ಕೊನೆಗೆ ದಿನಗಳೆದಂತೆ ಎಲ್ಲವೂ ಮಾಯ ಅಂತ್ಲೂ ಸೇರಿಸಿದ್ದೀರಿ. ಜನರನ್ನು ಅಷ್ಟು ಸುಲಭವಾಗಿ ಯಾವ ಮಾಧ್ಯಮವೂ ಏಮಾರಿಸೋದಿಕ್ಕಾಗಲ್ಲ. ಒಂದು ವೇಳೆ ಯಾವುದಾದರೂ ವಾಹಿನಿ ಢೋಂಗಿ ಅಭಿಯಾನ ಮಾಡಿದ್ದೇ ಆದ್ರೆ ಜನ ಪಾಠ ಕಲಿಸ್ತಾರೆ. ಯಾಕೆಂದ್ರೆ ದಿನಕಳೆದಂತೆ ಎಲ್ಲವೂ ಮಾಯ ಆಗ್ದೇ ಇರಲ್ಲ.

    ಜ್ಯೋತಿಷ್ಯ ಎಲ್ಲಿಲ್ಲ ಹೇಳಿ ವಿನಯ್? ನೀವು ಕೆಲಸ ಮಾಡಿದ ಪತ್ರಿಕೆಯಲ್ಲಿ ಜ್ಯೋತಿಷ್ಯ ಕಾಲಂ ಕೊಡುತ್ತಿರಲಿಲ್ವೇ? ಆಗ ಯಾಕೆ ಅದು ನಿಮಗೆ ಸರಿಯಲ್ಲ ಅಂತ ಅನಿಸಲಿಲ್ಲ? ಎಲ್ಲೆಲ್ಲೋ ಇದ್ದ ಜ್ಯೋತಿಷಿಗಳನ್ನು ಹುಡುಕಿ ತಂದು ವಾಹಿನಿಗಳು ನಿರಂತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡ್ತಿವೆ ಎಂದಿದ್ದೀರಿ. ವಾಹಿನಿಗಳು ಅದೆಲ್ಲೋ ಇದ್ದ ಜ್ಯೋತಿಷಿಗಳನ್ನು ಸ್ಟುಡಿಯೋದಲ್ಲಿ ಲೈವ್ ಕೂರಿಸಿ ಆ ಜ್ಯೋತಿಷಿಗಳ ಬಾಯಿಂದಾನೇ ಜನಕ್ಕೆ ಅವರವರ ಜ್ಯೋತಿಷ್ಯ ತಿಳಿಸ್ತಾರೆ. ಆದ್ರೆ ಕೆಲವು ಪತ್ರಿಕೆಗಳಲ್ಲಿ ಎಲ್ಲ ಸಮಯದಲ್ಲೂ ಜ್ಯೋತಿಷಿಗಳೇ ಕಾಲಂ ಬರೆಯುವುದಿಲ್ಲವಲ್ಲ. ಒಳಗಿನವರೇ ಜ್ಯೋತಿಷಿಗಳ ಕಾಲಂ ಎಷ್ಟು ಸಲ ಬರೆದಿಲ್ಲ ಹೇಳಿ? ಅದು ವಾಹಿನಿಗಳು ಮಾಡೊ ಮೋಸಕ್ಕಿಂತಲೂ ದೊಡ್ಡ ಮೋಸವಲ್ಲ್ವೇ? ವಾಹಿನಿಗಳ ಕಾರ್ಯಕ್ರಮ ನೋಡೋ ಜನಕ್ಕೆ ಜ್ಯೋತಿಷ್ಯದ ನಂಬಿಕೆ ಬರದಿದ್ದರೂ ವಾಹಿನಿಗಳ ಮೇಲೆ ನಂಬಿಕೆ ಹಾಳಾಗೊಲ್ಲ. ಅಷ್ಟಕ್ಕೂ ಜ್ಯೋತಿಷ್ಯ ಒಂದು ಅಂಧ ನಂಬಿಕೆ ಅಂತ್ಲೇ ಇಟ್ಕೊಳ್ಳೋಣ. ಹಾಗಂತ ಮಾಧ್ಯಮವೊಂದೇ ಜ್ಯೋತಿಷ್ಯದ ಬುಡವನ್ನು ಗಟ್ಟಿ ಮಾಡಿಲ್ಲವಲ್ಲ? ಇವತ್ತಿನ ಮಾಧ್ಯಮ ಸ್ಪರ್ಧೆಯಲ್ಲಿ ಅಸ್ತಿತ್ವಕ್ಕಾಗಿಯಾದ್ರೂ ಜ್ಯೋತಿಷ್ಯ ಕಾರ್ಯಕ್ರಮ ಕೊಡ್ಲೇಬೇಕು. ನೀವೊಬ್ಬ ಜೋತಿಷ್ಯ ಕಾರ್ಯಕ್ರಮ ನೋಡ್ದೇ ಇರ್ಬಹುದು. ಆದ್ರೆ ನಿಮ್ಮ ಕುಟುಂಬ ಸದಸ್ಯರು ನೋಡೋದನ್ನು ನೀವು ತಡೆಯಲಾರಿರಿ.

    ಪಕ್ಷ ನಿಷ್ಠೆ, ಮಾಧ್ಯಮ ನಿಷ್ಠೆ ಬಗ್ಗೆ ಸರಿಯಾಗಿಯೇ ಆರಂಭಿಸಿರುವ ನೀವು ಹೋಗ್ತಾ ಹೋಗ್ತಾ ಮತ್ತೆ ಒಂದೇ ವಾಹಿನಿ ಮೇಲೆ ವಿಷ ಕಕ್ಕಿದ್ದೀರಿ. ಇಷ್ಟರಲ್ಲೇ ತಿಳಿಯುತ್ತೆ ನಿಮ್ಮ ಈ ಬರವಣಿಗೆ ನಿಷ್ಠೆ ಏನು ಅನ್ನೋದು? ಬೆಳಗ್ಗೆ ಹೊತ್ತು ಕೇಳುವ ೫ ಪ್ರಶ್ನೆಗಳಿಗೂ ನೀವು ಹೇಳಬೇಕಾದ ’ಪಕ್ಷ ನಿಷ್ಠೆ, ಮಾಧ್ಯಮ ನಿಷ್ಠೆ’ ವಿಚಾರಕ್ಕೂ ಏನು ಸಂಬಂಧ ಸ್ವಾಮಿ? ಮಾಜಿ ಮುಖ್ಯಮಂತ್ರಿಯೊಬ್ಬರ ಮದುವೆ ವಿಚಾರವನ್ನು ನೇರ ಪ್ರಸಾರದಲ್ಲಿ ತೋರಿಸಿದರಷ್ಟೇ ಸಮಾನ ನ್ಯಾಯ ಪಾಲಿಸಿದಂತಾಗೊಲ್ಲ. ನೀವು ಯಾವ ಯಾವ ವಾಹಿನಿಗಳಲ್ಲಿ ಆ ಮದುವೆ ಸುದ್ದಿ ಬಂದಿಲ್ಲ ಅಂದುಕೊಂಡಿದ್ದೀರೋ ಅವೇ ವಾಹಿನಿಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಅದೇ ಮದುವೆ ವಿಚಾರ ಸುದ್ದಿಯಾಗಿದೆ. ನೀವು ನೋಡಿಲ್ಲವೆಂದರೆ, ಯಾರು ನೋಡಿಲ್ಲವೆಂದರ್ಥವೇ?

    ನೋಡಿ ವಿನಯ್, ಇತಿಹಾಸ ಎಲ್ಲ ಕಾಲಘಟ್ಟಗಳನ್ನೂ ದಾಖಲಿಸಿಕೊಳ್ಳುತ್ತದೆ. ಒಳ್ಳೇದು ಕೆಟ್ಟದ್ದು ಎಲ್ಲವನ್ನೂ ತನ್ನ ಗರ್ಭದೊಳಕ್ಕೆ ಸೇರಿಸ್ಕೊಂಡು ಇತಿಹಾಸ ಚಕ್ರ ಮುಂದೆ ಹೋಗ್ಲೇಬೇಕು. ಕಾಲ ಸರಿದಂತೆ ಜನ ಸತ್ಯ ಅರಿಯುತ್ತಾರೆ. ನಿಮ್ಮ ವಿಚಾರಗಳಿಗೆ ನನ್ನ ಆಕ್ಷೇಪವಿಲ್ಲ. ಆದ್ರೆ ಹೇಳುವುದನ್ನು ಪಾರದರ್ಶಕವಾಗಿ ಹೇಳಿ. ಒಂದೆರಡು ವಾಹಿನಿಗಳನ್ನೇ ಗುರಿಯಾಗಿಟ್ಕೊಂಡು, ಅವುಗಳ ಕಾರ್ಯಕ್ರಮಗಳನ್ನು ಮೂದಲಿಸಿಕೊಂಡು ಬರೆದು ಎಲ್ಲ ತಪ್ಪುಗಳನ್ನೂ ಅವುಗಳ ಹೆಗಲ ಮೇಲೆ ಹೊರಿಸ್ಬೇಡಿ. ಇಂಥ ಬರವಣಿಗೆ ನಿಮಗೆ ಶೋಭೆಯಲ್ಲ.

    ನಮ್ಮ ವ್ಯವಸ್ಥೆ ಎಲ್ಲಿಗೂ ಹೋಗಿ ನಿಂತಿಲ್ಲ. ಪತ್ರಕರ್ತರು, ರಾಜಕಾರಣಿಗಳು ಮಾತ್ರವೇ ವ್ಯವಸ್ಥೆಯ ದುರವಸ್ತೆಗೆ ಕಾರಣವಲ್ಲ. ಆದ್ರೆ ಪತ್ರಕರ್ತರಿಗೆ ಹದಗೆಟ್ಟ ವ್ಯವಸ್ಥೆಯನ್ನು ದುರಸ್ತಿ ಮಾಡಲು ಬೇರೆಲ್ಲರಿಗಿಂತ ಹೆಚ್ಚಿನ ಅವಕಾಶ ಮತ್ತು ಹೊಣೆಗಾರಿಕೆ ಇದೆ. ಈ ದುರಸ್ತಿ ಕೆಲಸವನ್ನು ನಾವೆಲ್ಲರೂ ನಮ್ಮ ನಮ್ಮ ಮಿತಿಯಲ್ಲೇ ಪ್ರಾಮಾಣಿಕವಾಗಿ ಮಾಡೋಣ.
    ——————————————————————————-
    ನಾನು ಕೂಡ ಒಬ್ಬ ಪತ್ರಕರ್ತ, ಹೆಸರು ಮಸೂದ್ ದೊಡ್ಡೇಬಾಗಿಲು.

    ಉತ್ತರ

Leave a reply to sourav daada ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments